ವಿದ್ಯಾರ್ಥಿ ನವೀನ್ ಸಾವಿಗೆ ಭಾರತದ ವೈಧ್ಯಕೀಯ ಶಿಕ್ಷಣ ವ್ಯವಸ್ಥೆಯೇ ಕಾರಣ: ಎಸ್ಎಫ್ಐ

ಬೆಂಗಳೂರು: ಉಕ್ರೇನಿನಲ್ಲಿ ರಷ್ಯಾ ಸೇನೆ ಪಡೆಗಳ ದಾಳಿಗೆ ಹಾವೇರಿಯ ವೈಧ್ಯಕೀಯ ವಿದ್ಯಾರ್ಥಿ ನವೀನ್ ಬಲಿಯಾಗಿರುವುದು‌ ಅತ್ಯಂತ ನೋವಿನ ಸಂಗತಿ ಮತ್ತು ಮೃತ ವಿದ್ಯಾರ್ಥಿ ನವೀನ್ ಕುಟುಂಬಕ್ಕೆ ನಾಡಿನ ವಿದ್ಯಾರ್ಥಿ ಸಮುದಾಯದ ಪರವಾಗಿ ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ರಾಜ್ಯ ಸಮಿತಿಯು ಸಾಂತ್ವಾನ ತಿಳಿಸಿದೆ.

ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಂಘಟನೆಯು ನವೀನ್ ಸಾವಿಗೆ ಯುದ್ದದಾಹಿ ರಷ್ಯಾ ಸೇನೆ ಎಷ್ಟು ಹೊಣೆಯೋ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಸಕಾಲದಲ್ಲಿ ನೆರವಾಗದೆ ನಿರ್ಲಕ್ಷಿಸಿದ್ದ ಕೇಂದ್ರ ಸರ್ಕಾರದ ಹೊಣೆಯೂ ಅಷ್ಟೇ ಪ್ರಮಾಣದ್ದು ಆರೋಪಿಸಿದೆ.

ರಷ್ಯಾ-ಉಕ್ರೇನ್‌ ಯುದ್ದಕ್ಕೆ ಅಮಾಯಕ ನಾಗರಿಕರು ಬಲಿಯಾಗುತ್ತಿದ್ದಾರೆ. ಎರಡೂ ರಾಷ್ಟ್ರಗಳು ಶಾಂತಿಯುತ ಮಾತುಕತೆಗೆ ಮಂದಾಗಿ ಯುದ್ದ ನಿಲ್ಲಿಸಬೇಕು. ಭಾರತದ ಪ್ರಧಾನಿ ಮತ್ತು ವಿದೇಶಾಂಗ ಇಲಾಖೆ ಅಂತರರಾಷ್ಟ್ರೀಯ ಸಂಬಂಧಗಳನ್ನು‌ ಬಳಸಿಕೊಂಡು ಯುದ್ಧದಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು, ನಾಗರೀಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಪ್ರಯತ್ನಿಸಬೇಕು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ನವೀನ್ ಸಾವಿಗೆ ಕಾರಣವಾಗಿರುವ ಭಾರತದ ವೈಧ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಪ್ರಯತ್ನಿಸಬೇಕೆಂದು ಎಸ್ಎಫ್ಐ ಸಂಘಟನೆಯು ಒತ್ತಾಯಿಸಿದೆ.

ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಅವರು, ನಮ್ಮ ದೇಶ ಬಿಟ್ಟು ವೈಧ್ಯಕೀಯ ಶಿಕ್ಷಣಕ್ಕಾಗಿ ಹತ್ತಾರು ಸಾವಿರ ವಿದ್ಯಾರ್ಥಿಗಳು ಉಕ್ರೇನ್‌ ಹೋಗಲು ನಿಜವಾದ ಕಾರಣವಾಗಿರುವ ಅಂಶಗಳನ್ನು ಭಾರತ ಸರ್ಕಾರ ಮನಗಾಣಬೇಕು. ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಅತಿಯಾದ ಖಾಸಗೀಕರಣ, ಕೇಂದ್ರೀಕರಣ ಹಾಗೂ ನೀಟ್ ಪ್ರವೇಶ ಪರೀಕ್ಷೆಯ ದುಷ್ಪರಿಣಾಮವಾಗಿ ‘ಭಾರತದಲ್ಲಿ ಪ್ರತಿವರ್ಷ ಸುಮಾರು 1.20 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯುತ್ತಿದ್ದು, ಅವರಲ್ಲಿ 8 ಸಾವಿರ ಮಂದಿಗೆ ಮಾತ್ರ ಸರ್ಕಾರಿ ಸೀಟುಗಳು ಸೇರಿದಂತೆ 60 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿವೆ.

ಅದರಲ್ಲೂ, ಬಡ, ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳಿಗೆ ಕೋಟ್ಯಂತರ ರೂಪಾಯಿ ದುಬಾರಿ ಶುಲ್ಕ ಪಾವತಿ ಕಷ್ಟ ಹಾಗೂ ನಿಗದಿತ ಸಂಖ್ಯೆಯಲ್ಲಿರುವ ಪ್ರವೇಶಾತಿಗಳಿಂದಾಗಿ ವೈಧ್ಯಕೀಯ ಪ್ರವೇಶ ವಂಚಿತರಾಗುತ್ತಿದ್ದಾರೆ. ಜೊತೆಗೆ ಭಾರತದಲ್ಲಿ ಕಲಿಯಲು ಶೈಕ್ಷಣಿಕ ಸಾಲ ವ್ಯವಸ್ಥೆ ಸಾಕಷ್ಟು ಅನಾನುಕೂಲತೆಯನ್ನು ಸೃಷ್ಠಿಸಿದೆ. ವಿದೇಶಗಳಲ್ಲಿ ಕಲಿಯುವುದಕ್ಕೆ ಆಯ್ಕೆ ಮಾಡಿಕೊಳ್ಳುವವರಿಗೆ ಶೈಕ್ಷಣಿಕ ಸಾಲ ಸಿಗುತ್ತದೆ. ಇಂತಹ ಹಲವು ತೊಂದರೆಗಳು ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕಾಡುತ್ತಿದೆ ಎಂದು ವಿವರಿಸಿದ್ದಾರೆ.

ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ.ಕೆ ಅವರು, ಭಾರತದಲ್ಲಿ ನೀಟ್ ಪ್ರವೇಶ ಪರೀಕ್ಷೆ ಕಡ್ಡಾಯವಾಗಿದ್ದು, ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದವರಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ದೊರೆಯುವುದಿಲ್ಲ. ನೀಟ್ ಪ್ರವೇಶಕ್ಕೆ ಮುಂಚಿತವಾಗಿ ಅರ್ಹತೆ ಗಿಟ್ಟಿಸಿಕೊಳ್ಳಲು ಖಾಸಗಿ ಕೋಚಿಂಗ್ ಕೇಂದ್ರಗಳಿಗೆ ಐದಾರು ಲಕ್ಷ ರೂಪಾಯಿ ಸುರಿದು ತರಬೇತಿ ಪಡೆದುಕೊಳ್ಳಬೇಕು. ಈ ಖಾಸಗಿ ಕೋಚಿಂಗ್ ಮಾಫಿಯಾ ಭಾರತದಲ್ಲಿ ಹತ್ತಾರು ಸಾವಿರ ಕೋಟಿ ರೂಪಾಯಿಗಳ ದೊಡ್ಡ ವ್ಯವಹಾರವಾಗಿದೆ. ಈ ನೀಟ್ ಪರೀಕ್ಷೆಯಲ್ಲಿ ಅಗತ್ಯ ಅಂಕ ಪಡೆಯದ ಕಾರಣದಿಂದಾಗಿ ತಮಿಳುನಾಡು ಸೇರಿದಂತೆ ದೇಶದೆಲ್ಲೆಡೆ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ ಎಂದು ತಮಿಳುನಾಡು ರಾಜ್ಯ ಸರ್ಕಾರ ನೇಮಿಸಿದ ಎ.ಕೆ. ರಾಜನ್ ಆಯೋಗದ ತಿಳಿಸಿದೆ. ಆದ್ದರಿಂದ ನೀಟ್ ಪರೀಕ್ಷೆ ರದ್ದುಗೊಳಿಸಿ ಏಕ ರೂಪದ ಕೇಂದ್ರೀಯ ಶಾಸನ ಜಾರಿಗೆ ತರಲು ಎಸ್ಎಫ್ಐ ಒತ್ತಾಯಿಸುತ್ತದೆಂದೆ ಎಂದಿದ್ದಾರೆ.

ದೇಶೀಯ ವೈದ್ಯಕೀಯ ಶಿಕ್ಷಣ ದುಬಾರಿ

ವಿಜ್ಞಾನ ವಿಭಾಗದ ಪಿಯುಸಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿದ್ಯಾಭ್ಯಾಸದ ಕನಸು ದೊಡ್ಡದಾಗಿರುತ್ತದೆ. ಅಂಥವರು ವೈದ್ಯಕೀಯ ಶಿಕ್ಷಣಕ್ಕೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದ ಉಕ್ರೇನ್‌ಗೆ ಹೋಗಲು ಇಚ್ಚಿಸುತ್ತಾರೆ. ಉಕ್ರೇನಿನಲ್ಲಿ ವಿವಿಧ ದೇಶಗಳ 75 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 20 ಸಾವಿರವಿದೆ.

ಭಾರತೀಯ ವಿದ್ಯಾರ್ಥಿಗಳಿಗೆ ಇದು ಏಕೆ ನೆಚ್ಚಿನ ದೇಶವಾಯಿತು ಎಂದರೆ, ಉಕ್ರೇನ್‌ನ ಖಾಸಗಿ ವೈದ್ಯಕೀಯ ಬೋಧನಾ ಶುಲ್ಕ ಭಾರತದ ಕಾಲೇಜುಗಳಿಗೆ ಹೋಲಿಸಿದರೆ ತುಂಬ ಅಗ್ಗ, ಉಕ್ರೇನಿಯನ್ ಕಾಲೇಜುಗಳು ವಿಶ್ವ ಆರೋಗ್ಯ ಮಂಡಳಿ ಮತ್ತು ಭಾರತೀಯ ವೈದ್ಯಕೀಯ ಮಂಡಳಿಗಳ ಮಾನ್ಯತೆ ಗಳಿಸಿವೆ. ಯೂರೋಪ್ ವೈದ್ಯಕೀಯ ಮಂಡಳಿ, ಬ್ರಿಟನ್ ಜನರಲ್ ವೈದ್ಯಕೀಯ ಮಂಡಳಿಗಳು ಕೂಡ ಮಾನ್ಯತೆ ನೀಡಿರುವುದರಿಂದ ಯುರೋಪ್ ಸೇರಿದಂತೆ ಇಡೀ ವಿಶ್ವದಲ್ಲಿ ಅತ್ಯಂತ ಕಡಿಮೆ ವೆಚ್ಚದ ವೈಧ್ಯಕೀಯ ಶಿಕ್ಷಣ ನೀಡುವ ದೇಶ ಎಂಬ ಹಿರಿಮೆ ಉಕ್ರೇನಿಗೆ ಇದೆ.

ಈ ಮೊದಲು ಯೂನಿಯನ್ ಆಫ್ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ಸ್ ಆಡಳಿತಕ್ಕೆ ಒಳಪಟ್ಟಿದ್ದ ಉಕ್ರೇನ್ ವೈದ್ಯಕೀಯ ಶಿಕ್ಷಣ ಭಾರೀ ಅಗ್ಗ ಎಂಬುದು ಜನಜನಿತ. ಇದೇ ಕಾರಣಕ್ಕಾಗಿ ಭಾರತದಿಂದ ಸಾಕಷ್ಟು ಮಂದಿ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುವ ದುಸ್ಥಿತಿ ಉಂಟಾಗಿದೆ.

ಪ್ರಧಾನಿ ಹೇಳಿಕೆ ಬೇಜವಾಬ್ದಾರಿ ತನದ್ದು

ಇವೆಲ್ಲಾ ಅಂಶಗಳನ್ನು ಮರೆಮಾಚಲು ” ಉಕ್ರೇನ್ ನಂತಹ ಸಣ್ಣ ರಾಷ್ಟ್ರದಲ್ಲಿ ಶಿಕ್ಷಣ ಪಡೆಯುವುದಕ್ಕಿಂತ ಭಾರತದಲ್ಲೇ ಶಿಕ್ಷಣ ಪಡೆಯಿರಿʼʼ ಎಂದು ಹೇಳಿರುವ ಪ್ರಧಾನಿ ಮೋದಿಯವರ ಬೇಜವಾಬ್ದಾರಿ ಹೇಳಿಕೆಯು ತೀರಾ ಹಾಸ್ಯಾಸ್ಪದವಾಗಿದೆ. ಇಂತಹ ಉಪದೇಶ ನೀಡುವ ಮೋದಿ ಸರ್ಕಾರ ಭಾರತ ದೇಶದಲ್ಲಿ ವೈಧ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು, ಕನಿಷ್ಠ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಬೇಕು. ಆದರೆ ಕೇಂದ್ರ ಸರ್ಕಾರ ಈ ಯಾವುದೇ ಕೆಲಸಗಳು ಮಾಡದೆ ಜನರ ತೆರಿಗೆಯ ಹಣದಲ್ಲಿ ಪ್ರಚಾರಕ್ಕೆ ಪ್ರತಿಮೆಗಳು, ಮಂದಿರ, ಸೆಂಟ್ರಲ್ ವಿಸ್ಟಾ ಮುಂತಾದವು ನಿರ್ಮಿಸುವ ಮೂಲಕ ದೇಶದ ಶಿಕ್ಷಣ, ಆರೋಗ್ಯವನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದೆ ಎಂದು ಎಸ್‌ಎಫ್‌ಐ ಸಂಘಟನೆಯು ಆರೋಪಿಸಿದೆ.

Donate Janashakthi Media

Leave a Reply

Your email address will not be published. Required fields are marked *