ವಿಕ್ಟೋರಿಯಾ ಗೌರಿಯವರ ನೇಮಕಾತಿ ಮತ್ತು ಕೊಲಿಜಿಯಂನ ಅಪಾರದರ್ಶಕತೆ : ದಾರಿ ಯಾವುದಯ್ಯ ನ್ಯಾಯಕೆ?

ಬಿ. ಶ್ರೀಪಾದ ಭಟ್

ಪೀಠಿಕೆ

ನ್ಯಾಯವಾದಿ ವಿಕ್ಟೋರಿಯಾ ಗೌರಿಯವರನ್ನು ಮದ್ರಾಸ್ ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕಾತಿ ಮಾಡಿರುವುದನ್ನು ಪ್ರಶ್ನಿಸಿದ ರಿಟ್ ಅರ್ಜಿಯನ್ನು 7, ಫೆಬ್ರವರಿ 2023ರಂದು ಸುಪ್ರೀಂಕೋರ್ಟ್‌ ತಿರಸ್ಕರಿಸಿತು. ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ಬಿ.ಆರ್. ಗವಾಯಿ ಒಳಗೊಂಡ ವಿಭಾಗೀಯ ಪೀಠವು ‘ಗೌರಿಯವರ ರಾಜಕೀಯ ಹಿನ್ನಲೆ, ವಿವಾದಾತ್ಮಕ ಹೇಳಿಕೆಗಳು ಕೊಲಿಜಿಯಂಗೆ ಗೊತ್ತಿಲ್ಲವೆಂದು ನಾವು ಊಹಿಸಲು ಸಾಧ್ಯವಿಲ್ಲ.. ಈ ಹಂತದಲ್ಲಿ ಅವರ ಸೂಕ್ತತೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ… ಈಗ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕವಾಗಿದ್ದಾರೆ.. ಮುಂದೆ ನ್ಯಾಯಮೂರ್ತಿಗಳಾಗಿ ಖಾಯಂಗೊಳಿಸುವ ಸಂದರ್ಭದಲ್ಲಿ ಅವರ ಸೂಕ್ತತೆಯನ್ನು ಪರಿಗಣಿಸಬಹುದು, ಈ ಹಿಂದೆ ಆ ರೀತಿ ಪರಿಗಣಿಸಿದ ನಂತರವೂ ಖಾಯಂಗೊಳಿಸದ ಉದಾಹರಣೆಗಳಿವೆ…’ ಎಂದು ವಿವರಿಸಿದ್ದಾರೆ. ಮದ್ರಾಸ್ ಹೈಕೋರ್ಟಿನ ಹಿರಿಯ ನ್ಯಾಯವಾದಿ ರಾಜು ಮೋಹನ್ ಅವರು ‘ಅರ್ಹತೆಯ ಆಧಾರದಲ್ಲಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವುದನ್ನು ತಡೆಹಿಡಿದಿರುವುದಕ್ಕೆ ಪೂರ್ವ ನಿದರ್ಶನಗಳಿವೆ… ಗೌರಿಯವರ ರಾಜಕೀಯ ಹಿನ್ನಲೆಯನ್ನು ಪ್ರಶ್ನಿಸಿ ಅಪೀಲು ಸಲ್ಲಿಸಲಿಲ್ಲ… ಬದಲಿಗೆ ಅವರು ತಮ್ಮ ಲೇಖನಗಳಲ್ಲಿ ದ್ವೇಷಪೂರಿತ ಮಾತುಗಳನ್ನು ಬರೆದಿರುವುದರ ಆಧಾರದಲ್ಲಿ ಪ್ರಶ್ನಿಸುತ್ತಿದ್ದೇವೆ…’ ಎಂದು ಹೇಳಿದ್ದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಖನ್ನಾ ‘ಗೌರಿಯವರ ನೇಮಕಾತಿಯು ‘ಆರ್ಹತೆ’ಗೆ ಸಂಬಂದಿಸಿಲ್ಲ. ಅದು ‘ಸೂಕ್ತತೆ’ಗೆ ಸಂಬಂದಿಸಿದೆ. ಅರ್ಹತೆಯನ್ನು ಪ್ರಶ್ನಿಸಬಹುದು. ಅದರೆ ಸೂಕ್ತತೆಯ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ… ಕೊಲಿಜಿಯಂಗೆ ನಿಮ್ಮ ನಿರ್ಧಾರ ಬದಲಿಸಿ ಎಂದು ಹೇಳಲು ಸಹ ಸಾಧ್ಯವಿಲ್ಲ… ಕೊಲಿಜಿಯಂ ಗೌರಿಯವರ ಮೇಲಿನ ಆರೋಪಗಳನ್ನು ಪರಿಗಣಿಸಿಲ್ಲ ಎಂದು ಭಾವಿಸುವುದು ಸೂಕ್ತವಲ್ಲ…’ ಎಂದು ಹೇಳಿದರು. ಇದೇ ಹೊತ್ತಿನಲ್ಲಿ ಅತ್ತ ಗೌರಿಯವರು ಮದ್ರಾಸ್ ಹೈಕೊರ್ಟಿನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರು. ಪ್ರಜಾಪ್ರಭುತ್ವ ವಿರೋಧಿ ಪ್ರಹಸನಕ್ಕೆ ನಾವೆಲ್ಲಾ ಸಾಕ್ಷಿಯಾಗಬೇಕಾಯಿತು.

ಇದನ್ನು ಓದಿ: ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ–ನ್ಯಾಯಧೀಶರಾಗಿ ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕಾರ

ವಿವಾದದ ಹಿನ್ನಲೆ

17, ಜನವರಿ 2023ರಂದು ಮುಖ್ಯ ನ್ಯಾಯಮೂರ್ತಿ ಮತ್ತು ಇಬ್ಬರು ಹಿರಿಯ ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂಕೋರ್ಟ್‌ ಕೊಲಿಜಿಯಂ ನ್ಯಾಯವಾದಿ ಗೌರಿಯವರನ್ನು ಮದ್ರಾಸ್ ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿ ಶಿಫಾರಸ್ಸು ಮಾಡಿದಾಗ ಈ ವಿವಾದ ಪ್ರಾರಂಭವಾಯಿತು. ನಂತರ ತಮಿಳುನಾಡಿನ ನ್ಯಾಯವಾದಿಗಳಾಗಿದ್ದ ವಿಕ್ಟೋರಿಯಾ ಗೌರಿಯವರ ಹಿಂದಿನ ಬಿಜೆಪಿ, ಆರ್‌ಎಸ್‌ಎಸ್ ಪರವಾದ ಮತ್ತು ಕ್ರಿಶ್ಚಿಯನ್, ಮುಸ್ಲಿಂರ ವಿರುದ್ಧದ ಹೇಳಿಕೆಗಳು, ಲೇಖನಗಳು, ಟ್ವಿಟ್ಟರ್ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾದವು. ಗೌರಿಯವರು ಈ ಹಿಂದೆ ಬಿಜೆಪಿ ಪಕ್ಷದ ಮಹಿಳಾ ವಿಭಾಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿತು. ಆಗ ಗೌರಿಯವರು ʻಕ್ರಿಶ್ಚಿಯನ್ನರ ದಾಳಿಗೆ ಕೊನೆಯಿಲ್ಲ. ಎಲ್ಲಿ ದೇವಸ್ಥಾನವಿರುತ್ತದೆಯೋ ಅಲ್ಲಿ ಅನೇಕ ಚರ್ಚ್‌ಗಳಿರುತ್ತವೆ. ಮತಾಂತರ, ಲವ್ ಜಿಹಾದ್ ಹಿನ್ನಲೆಯಲ್ಲಿ ಕ್ರಿಶ್ಚಿಯನ್ ಮತ್ತು ಇಸ್ಲಾಂ ಗುಂಪು ಎರಡೂ ದೇಶಕ್ಕೆ ಅಪಾಯಕಾರಿ… ಇಸ್ಲಾಂ ಹಸಿರು ಭಯೋತ್ಪಾದನೆಯಾದರೆ, ಕ್ರಿಶ್ಚಿಯನ್ ಬಿಳಿ ಭಯೋತ್ಪಾದನೆ’ ಎಂದು ಮಾತನಾಡಿರುವುದು ವರದಿಯಾಗಿದೆ. 30, ಜನವರಿ 2023ರಂದು ಅಂತರ್ಜಾಲ ಪತ್ರಿಕೆ ‘ಆರ್ಟಿಕಲ್ 14’ ಕ್ರಿಶ್ಚಿಯನ್ ಮತ್ತು ಮುಸ್ಲಿಂರ ವಿರುದ್ಧ ಗೌರಿಯವರ ಸಂದರ್ಶನಗಳು ಮತ್ತು ಬರಹಗಳನ್ನು ವಿವರವಾಗಿ ವರದಿ ಮಾಡಿದೆ. 1, ಫೆಬ್ರವರಿ 2023ರಂದು ಮದ್ರಾಸ್ ಹೈಕೋರ್ಟ್‌ ನ ಅನೇಕ ವಕೀಲರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ‘ಗೌರಿಯವರ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಹೇಳಿಕೆಗಳು ದ್ವೇಷಪೂರಿತವಾಗಿವೆ, ಇದು ನ್ಯಾಯಾಂಗದ ನಿಷ್ಪಕ್ಷಪಾತ ನೀತಿಗೆ ಧಕ್ಕೆಯಾಗುತ್ತದೆ, ಈ ಕಾರಣಕ್ಕಾಗಿ ಅವರ ನೇಮಕಾತಿಯನ್ನು ಅನುಮೋದಿಸಬೇಡಿ’ ಎಂದು ವಿನಂತಿಸಿಕೊಂಡು ಪತ್ರ ಬರೆದರು.  6, ಫೆಬ್ರವರಿ 2023ರಂದು ಗೌರಿಯವರ ನೇಮಕಾತಿ ಪ್ರಶ್ನಿಸಿ ಸುಪ್ರೀಂಕೊರ್ಟಿನಲ್ಲಿ ಬೆಳಿಗ್ಗೆ 10.34 ಮತ್ತು 11.54ಕ್ಕೆ ಎರಡು ರಿಟ್ ಅರ್ಜಿಗಳನ್ನು ಸಲ್ಲಿಸಲಾಯಿತು. ಇದರ ವಿಚಾರಣೆಯನ್ನು 10, ಫೆಬ್ರವರಿ 2023ಕ್ಕೆ ನಿಗದಿಪಡಿಸಲಾಯಿತು. ಸ್ಕ್ರಾಲ್.ಇನ್ ಅಂತರ್ಜಾಲ ಪತ್ರಿಕೆಯು ‘ಆದರೆ ಅದೇ ದಿನದಂದು ಮಧ್ಯಾಹ್ನ 12.12 ಗಂಟೆಗೆ ಕೇಂದ್ರ ಕಾನೂನು ಮಂತ್ರಿ ರಿಜಿಜು ಅವರು ‘ಗೌರಿ ಮತ್ತು ಇತರ 12 ಜನರನ್ನು ನೇಮಕಾತಿ ಮಾಡಲಾಗಿದೆ’ ಎಂದು ಟ್ವೀಟ್ ಮಾಡಿದರು. ಇದರಿಂದ ಆತಂಕಗೊಂಡ ಅರ್ಜಿದಾರರು ಕೂಡಲೇ ವಿಚಾರಣೆ ಪ್ರಾರಂಬಿಸಬೇಕೆಂದು ಒತ್ತಾಯಿಸಿದರು. ಈ ಕಾರಣಕ್ಕೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು 7, ಫೆಬ್ರವರಿ 2023ರಂದು ವಿಚಾರಣೆಯನ್ನು ನಿಗದಿಪಡಿಸಿದರು. ಆದರೆ 6, ಫೆಬ್ರವರಿ 2023ರ ಸಂಜೆಯಂದು ಮದ್ರಾಸ್ ಹೈಕೋರ್ಟ್‌ 7, ಫೆಬ್ರವರಿ 2023ರಂದು ಗೌರಿ ಮತ್ತು ಇತರ ನಾಲ್ವರ ಪ್ರಮಾಣವಚನ ಸ್ವೀಕಾರದ ಕಾರ್ಯಕ್ರಮವನ್ನು ಪ್ರಕಟಿಸಿತು. ಆಗ ಮತ್ತೆ ಅರ್ಜಿದಾರರು 10.30ಕ್ಕೆ ಬದಲು 9.15ಕ್ಕೆ ವಿಚಾರಣೆ ಪ್ರಾರಂಭಿಸಬೇಕೆಂದು ಕೋರಿಕೊಂಡರು. ಕಡೆಗೂ 10.30ಕ್ಕೆ ವಿಚಾರಣೆಯನ್ನು ನಿಗದಿಪಡಿಸಲಾಯಿತು’ ಎಂದು ವರದಿ ಮಾಡಿದೆ. ಅತ್ತ ಅದೇ ಹೊತ್ತಿಗೆ  ವಿಕ್ಟೋರಿಯಾ ಗೌರಿಯವರು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿದರು. ಕೆಲ ಹೊತ್ತಿನ ನಂತರ ಇತ್ತ ಸುಪ್ರೀಂಕೋರ್ಟ್‌ ಅವರ ನೇಮಕಾತಿಯನ್ನು ಪ್ರಶ್ನಿಸಿದ ಅರ್ಜಿಯನ್ನು ತಿರಸ್ಕರಿಸಿತು. ಇಲ್ಲಿ ಆಪರೇಷನ್ ಸಹ ಯಶಸ್ವಿಯಾಗಲಿಲ್ಲ, ರೋಗಿಯೂ ಉಳಿಯಲಿಲ್ಲ. ಕಡೆಗೆ ಪ್ರಜಾಪ್ರಭುತ್ವದ ಮೌಲ್ಯಗಳು ನಾಶಗೊಂಡವು.

ಇದನ್ನು ಓದಿ: ಸುಪ್ರೀಂ ಕೋರ್ಟ್‌: ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ಉನ್ನತ ಸಮಿತಿ ಸಭೆಯ ವಿವರಣೆ ಕೋರಿದ್ದ ಅರ್ಜಿ ವಜಾ

ಕೊಲಿಜಿಯಂ ಎನ್ನುವ ಅಪಾರದರ್ಶಕ ವ್ಯವಸ್ಥೆ ಮತ್ತು ಆಯ್ಕೆಯ ಮಿತಿಗಳು

ಮೇಲಿನ ವಿವರಗಳನ್ನು ಗಮನಿಸಿದಾಗ ಕೊಲಿಜಿಯಂ ದ್ವಂದಾತ್ಮಕ ಹೇಳಿಕೆಗಳನ್ನು ನೀಡಿರುವುದು ಕಂಡುಬರುತ್ತದೆ. ಇಲ್ಲಿಯವರೆಗೂ ಉತ್ತರ ದೊರಕದ ಪ್ರಶ್ನೆಗಳು

ಗೌರಿಯವರ ನೇಮಕಾತಿಗೂ ಮುಂಚೆ ಅವರ ವಿವಾದಾತ್ಮಕ ಬರಹಗಳು, ಹೇಳಿಕೆಗಳು ಕೊಲಿಜಿಯಂಗೆ ಗೊತ್ತಿರಲಿಲ್ಲವೇ? ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ‘ಗೌರಿಯವರ ನೇಮಕಾತಿಯ ನಂತರ ಅವರ ಕುರಿತಾದ ವಿವಾದಗಳು ನಮಗೆ ಗೊತ್ತಾಯಿತು’ ಎಂದು ಹೇಳಿದ್ದಾರೆ. ಆದರೆ 7, ಫೆಬ್ರವರಿ 2023ರಂದು ವಿಚಾರಣೆ ನಡೆಸಿದ ಇಬ್ಬರು ನ್ಯಾಯಮೂರ್ತಿಗಳ ವಿಭಾಗೀಯ ಪೀಠದ ಹೇಳಿಕೆಯ ಪ್ರಕಾರ ಕೊಲಿಜಿಯಂಗೆ ಈ ವಿವಾದವು ಮುಂಚೆಯೇ ಗೊತ್ತಿತ್ತು. ಹಾಗಿದ್ದರೆ ಯಾವುದು ನಿಜ? ಸ್ಕ್ರಾಲ್.ಇನ್ ಪತ್ರಿಕೆಯ ವರದಿಯ ಪ್ರಕಾರ ‘ಕೊಲಿಜಿಯಂ ಈ ಎಲ್ಲಾ ವಿಚಾರಗಳನ್ನು ಮುಂಚಿತವಾಗಿಯೇ ಪರಿಶೀಲಿಸಬೇಕಿತ್ತು, ಗೌರಿಯವರ ಹೆಸರನ್ನು ನೇಮಕ ಮಾಡುವಾಗ ಅಲ್ಲಿನ ಹೈಕೋರ್ಟ್‌ನಲ್ಲಿದ್ದ ಸುಪ್ರೀಂಕೊರ್ಟ್‌ ನ್ಯಾಯಮೂರ್ತಿಗಳನ್ನು ಕೊಲಿಜಿಯಂ ಸಮಾಲೋಚನೆ ಮಾಡಿರುತ್ತದೆ… ಒಮ್ಮೆ ಹೈಕೋರ್ಟ್‌ ಕೊಲಿಜಿಯಂ ಗೌರಿಯವರ ಹೆಸರನ್ನು ಶಿಫಾರಸ್ಸು ಮಾಡಿದ ನಂತರ ಅನೇಕರು ಅವರ ಪರ-ವಿರೋಧದ ಹೇಳಿಕೆಗಳನ್ನು ಕೊಡತೊಡಗಿದರು. ಇದರರ್ಥ ಕೊಲಿಜಿಯಂಗೆ ಮುಂಚಿತವಾಗಿ ಗೊತ್ತಿರುತ್ತದೆ’ ಎಂದು ವಿಭಾಗೀಯ ಪೀಠವು ಹೇಳಿದೆ. ಲೈವ್ ಲಾ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮನು ಸಬಾಸ್ಟಿನ್ ಅವರು ‘2018ರ ಅವರ ಭಾಷಣಗಳು ಕೊಲಿಜಿಯಂಗೆ ಗೊತ್ತಿರುತ್ತದೆ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ’ ಎಂದು ಬರೆಯುತ್ತಾರೆ.

ಮನು ಸೆಬಾಸ್ಟೆನ್ ‘ದ್ವೇಷಪೂರಿತ ಬರಹಗಳನ್ನು ಬರೆದ ಗೌರಿಯವರು ಹೈಕೋರ್ಟ್‌ ನ ನ್ಯಾಯಮೂರ್ತಿಗಳಾಗಿರುವುದು ನ್ಯಾಯಾಂಗ ಇತಿಹಾಸದಲ್ಲೊಂದು ಕಳಂಕ ಘಟನೆಯಾಗಿದೆ. ಇದು ವಿವಿಧ ಹಂತಗಳಲ್ಲಿ ಪರಿಶೀಲಿಸುತ್ತೇವೆ ಎಂದು ಹೇಳುವ ಕೊಲಿಜಿಯಂನ ಆಯ್ಕೆ ಪ್ರಕ್ರಿಯೆಯ ಕ್ಷಮತೆಯನ್ನ ಪ್ರಶ್ನಿಸುತ್ತದೆ… ಒಂದೆಡೆ ಸುಪ್ರೀಂಕೋರ್ಟ್‌ ದ್ವೇಷ ಭಾಷಣದ ವಿರುದ್ಧ ಎಚ್ಚರಿಸುತ್ತಿದೆ… ಮತ್ತೊಂದೆಡೆ ಅದರ ಕೊಲಿಜಿಯಂ ದ್ವೇಷ ಭಾಷಣದ ಇತಿಹಾಸವಿರುವ ವ್ಯಕ್ತಿಯನ್ನು ನ್ಯಾಯಮೂರ್ತಿಯಾಗಿ ನೇಮಕ ಮಾಡುತ್ತದೆ… ನೇಮಕಾತಿಯ ನಂತರ ನ್ಯಾಯಾಂಗದ ಮಧ್ಯಸ್ಥಿಕೆ ಕಷ್ಟ…’ ಎಂದು ಬರೆಯುತ್ತಾರೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ನಮಗೆ ಈ ವಿಚಾರಗಳು ತಡವಾಗಿ ಅರಿವಿಗೆ ಬಂದಿತು ಎಂದು ಹೇಳಿರುವುದು ಈಗಾಗಿರುವ ಹಾನಿಯನ್ನು ಕಡಿಮೆ ಮಾಡುವುದಿಲ್ಲ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಇದನ್ನು ಓದಿ: “ನ್ಯಾಯಾಂಗ ವ್ಯವಸ್ಥೆಯಲ್ಲಿ ಅಸಮತೋಲಿತ ಪ್ರಾತಿನಿಧ್ಯ” – ವೈರಲ್ ಆಗುತ್ತಿದೆ ಕೇರಳ ಸಂಸದನ ಭಾಷಣ

ಆದರೆ ಇಂತಹ ಮುಖ್ಯ ವಿಚಾರಣೆಯನ್ನು ನಿಭಾಯಿಸುವಲ್ಲಿ ಸುಪ್ರೀಂಕೋರ್ಟ್‌ ಎಡವಿರುವುದು ಅಚ್ಚರಿಯ ಸಂಗತಿ. ವಿಭಾಗೀಯ ಪೀಠ ರಚಿಸುವಾಗ ಮೊದಲು ಅದರ ಸದಸ್ಯರಾಗಿ ತಮಿಳುನಾಡಿನ ಮೂಲದ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅದರೆ ಗೌರಿ ಅವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸುಂದರೇಶ್ ಅವರೊಂದಿಗೆ ಸಮಾಲೋಚನೆ ನಡೆಸಿದ ಕೊಲಿಜಿಯಂ ಅವರನ್ನೇ ವಿಭಾಗೀಯ ಪೀಠಕ್ಕೆ ಆಯ್ಕೆ ಮಾಡಲು ಮುಂದಾಗಿದ್ದು, ನಂತರ ಸ್ವತಃ ಸುಂದರೇಶ್ ಹಿಂದೆ ಸರಿದದ್ದು ನ್ಯಾಯಾಂಗಕ್ಕೆ ಮುಜುಗರದ ಸಂಗತಿಯಾಗಿದೆ. ಅತ್ತ ಮದ್ರಾಸ್ ಹೈಕೊರ್ಟ್‌ ನಲ್ಲಿ ಗೌರಿಯವರು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ಇತ್ತ ಸುಪ್ರೀಂಕೋರ್ಟ್‌ ವಿಚಾರಣೆ ಪ್ರಾರಂಬಿಸಿದ್ದು ಒಟ್ಟಾರೆಯಾಗಿ ಇಡೀ ವಿಚಾರಣೆ ಎನ್ನುವುದೇ ವ್ಯರ್ಥ ಕಸರತ್ತು ಎನ್ನುವುದು ಸಾಬೀತಾಗಿದೆ. ತನ್ನ ಆಯ್ಕೆಯ ಪ್ರಕ್ರಿಯೆ ಮುಗಿದ ನಂತರ ಕೊಲಿಜಿಯಂಗೆ ಗೌರಿಯವರ ಕುರಿತಾದ ಈ ವಿವಾದಾತ್ಮಕ ಮಾಹಿತಿ ಗೊತ್ತಾಗಿದೆ ಎನ್ನುವ ಅಂಶವೇ ಕಳವಳಕಾರಿಯಾಗಿದೆ. ಸುಪ್ರೀಂಕೋರ್ಟ್‌ ಈ ರೀತಿಯಲ್ಲಿ ಮುಖಭಂಗವಾಗಕ್ಕೆ ಒಳಗಾಗಿರುವುದು ಆಪೇಕ್ಷಣೀಯವಲ್ಲ.

ನ್ಯಾಯಮೂರ್ತಿಗಳನ್ನು ನೇಮಕಾತಿ ಮಾಡುವ ಪ್ರಕ್ರಿಯೆಯಲ್ಲಿ ಅವರ ಸಾಮರ್ಥ್ಯದ ಕುರಿತು ಸ್ವತಃ ತನ್ನ ನ್ಯಾಯಾಂಗದ ವ್ಯವಸ್ಥೆಯ ಮೂಲಕ ನಿರ್ಧರಿಸುವ ಕೊಲಿಜಿಯಂ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ (ಐಬಿ) ಮಾಹಿತಿಯನ್ನು ಅವಲಂಬಿಸುತ್ತದೆ. ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯ ಪ್ರಕಾರ ಐಬಿ ಇಲಾಖೆಯು ಗೌರಿಯವರ ದ್ವೇಷದ ಭಾಷಣಗಳ ಕುರಿತ ಮಾಹಿತಿಯನ್ನು ಕೊಲಿಜಿಯಂಗೆ ತಿಳಿಸಲಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ. ಅದೇ ಮದ್ರಾಸ್ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿಗಳ ವಿಷಯದಲ್ಲಿ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ ಕುರಿತು ಮಾಹಿತಿ ಕೊಡುವ ಐಬಿ ಗೌರಿಯವರ ದ್ವೇಷದ ಬರಹಗಳನ್ನು ಕೊಡದಿರುವುದು ಕುತೂಹಲಕರ. ಇಂತಹ ಗುರುತರವಾದ ಲೋಪಕ್ಕೆ ಐಬಿಗೆ ಶಿಕ್ಷೆ ಇಲ್ಲವೇ? ಅಥವಾ ರಾಜಕೀಯ ಒತ್ತಡಗಳ ಕಾರಣಕ್ಕೆ ಈ ರೀತಿ ವರ್ತಿಸಿದೆಯೇ? ಒಟ್ಟಾರೆಯಾಗಿ ಇಡೀ ಪ್ರಕರಣವು ಸುಪ್ರೀಂಕೋರ್ಟ್‌ ಗೆ ಕಪ್ಪುಚುಕ್ಕೆಯಂತಾಗಿದ್ದು ನಿಜ.

ನ್ಯಾಯವಾದಿ ಗೌತಮ್‌ ಭಾಟಿಯಾ ಅವರು ‘ಕೊಲಿಜಿಯಂನ ಅಪಾರದರ್ಶಕ ವ್ಯವಸ್ಥೆಯೇ ಈಗಿನ ಬಿಕ್ಕಟ್ಟಿಗೆ ಮುಖ್ಯ ಕಾರಣ. ಯುಎಸ್‌ಎ, ದಕ್ಷಿಣ ಕೊರಿಯಾ ಮುಂತಾದ ದೇಶಗಳ ರೀತಿ ನ್ಯಾಯಮೂರ್ತಿಗಳ ಆಯ್ಕೆಯ ಪ್ರಕ್ರಿಯೆ ಸಾರ್ವಜನಿಕವಾಗಿದ್ದರೆ ಗೌರಿಯವರ ಕುರಿತು ಎಲ್ಲಾ ಬಗೆಯ ಮಾಹಿತಿಗಳು ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿಯೇ ಬೆಳಕಿಗೆ ಬರುತ್ತಿತ್ತು. ಆಗ ವಿಕ್ಟೊರಿಯಾ ಗೌರಿಯವರನ್ನು ಸ್ಪಷ್ಟೀಕರಣ ಕೊಡುವಂತೆ ಕೇಳಬಹುದಿತ್ತು… ಆದರೆ ಭಾರತದಲ್ಲಿ ಈ ಅಯ್ಕೆ ಪ್ರಕ್ರಿಯೆಯು ಮುಚ್ಚಿದ ಬಾಗಿಲುಗಳ ಹಿಂದೆ ನಡೆಯುತ್ತದೆ. ಎಲ್ಲವೂ ಅಪಾರದರ್ಶಕವಾಗಿರುತ್ತದೆ… ಸರಕಾರ ಮತ್ತು ಕೊಲಿಜಿಯಂ ನಡುವೆ ಗುಟ್ಟಿನಲ್ಲಿ ನಡೆಯುವ ಈ ಆಯ್ಕೆ ಪ್ರಕ್ರಿಯೆಯಲ್ಲಿ ಈ ಪ್ರಕರಣದಲ್ಲಿ ಸರಕಾರವು ತನಗೆ ದೊರೆತ ಮಾಹಿತಿಯನ್ನು ಅಥವಾ ತನ್ನ ಕಾರ್ಯಾಂಗ ಬಳಿಯಿರುವ ಮಾಹಿತಿಯನ್ನು ಕೊಲಿಜಿಯಂನಿಂದ ಮುಚ್ಚಿಟ್ಟಿದೆ…. ಎರಡನೆಯದಾಗಿ ಕೊಲಿಜಿಯಂನ ಆಯ್ಕೆಯು ಆಡಳಿತಾತ್ಮಕ ನಿರ್ಧಾರ. ಆಡಳಿತಾತ್ಮಕ ಭೂಮಿಕೆಯಲ್ಲಿ ನ್ಯಾಯಾಂಗ ನಿರ್ಧಾರ ತೆಗೆದುಕೊಳ್ಳುತ್ತದೆ.. ಗೌರಿಯವರ ಪ್ರಕರಣದಲ್ಲಿ ಮೂವರು ಹಿರಿಯ ನ್ಯಾಯಮೂರ್ತಿಗಳ ನಿರ್ಧಾರದ ವಿಚಾರಣೆಯು ಇಬ್ಬರು ಕಿರಿಯ ನ್ಯಾಯಮೂರ್ತಿಗಳ ಪೀಠದ ಮುಂದೆ ಬಂದಿರುವುದು ಒಂದು ವಿರೋದಭಾಸ. ಇಲ್ಲಿ ಕೊಲಿಜಿಯಂನ ಮುಖ್ಯಸ್ಥರಾಗಿರುವ ಮುಖ್ಯ ನ್ಯಾಯಮೂರ್ತಿಗಳು ರೋಸ್ಟರ್ ಪದ್ಧತಿಯನ್ನು ನಿರ್ಧರಿಸುವ ಅಧಿಕಾರ ಹೊಂದಿರುತ್ತಾರೆ. ಅಂದರೆ ಆಡಳಿತಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಂಗ ವ್ಯವಸ್ಥೆಯ ಪ್ರಕಾರ ವಿಭಾಗೀಯ ಪೀಠವನ್ನು ರಚಿಸುತ್ತಾರೆ. ಇಡೀ ಪ್ರಕ್ರಿಯೆಯು ಕೊಲಿಜಿಯಂ, ರೋಸ್ಟರ್‌ನ ಮಾಸ್ಟರ್ ಮತ್ತು ನ್ಯಾಯಮೂರ್ತಿಗಳ ಮೇಲೆ ಅವಲಂಬಿತವಾಗಿದೆ ಮತ್ತು ಈ ಮೂರು ವ್ಯವಸ್ಥೆಗಳು ಪರಸ್ಪರ ವಿರುದ್ಧವಾಗಿ ನಡೆದುಕೊಂಡಿವೆ’ ಎಂದು ಬರೆಯುತ್ತಾರೆ.

ಕೇಂದ್ರ ಸರಕಾರದ ದ್ವಂದ, ಅಪಾಯಕಾರಿ ನೀತಿಗಳು

ಕೊಲಿಜಿಯಂ ದೆಹಲಿ ಹೈಕೋರ್ಟ್‌ ಗೆ ಸೌರಭ್ ಕ್ರಿಪಾಲ್ ಅವರನ್ನು ನ್ಯಾಯಮೂರ್ತಿಗಳೆಂದು ಶಿಫಾರಸ್ಸು ಮಾಡಿದಾಗ ಮೋದಿ ನೇತೃತ್ವದ ಕೇಂದ್ರ ಸರಕಾರವು ಅವರು ಸಲಿಂಗಕಾಮಿ ಮತ್ತು ವಿದೇಶಿಯರನ್ನು ತಮ್ಮ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ ಎಂದು ಆಕ್ಷೇಪಿಸಿ ಅವರ ನೇಮಕಾತಿಯನ್ನು ತಡೆಹಿಡಿಯಿತು. ಮದ್ರಾಸ್ ಹೈಕೋರ್ಟ್‌ ಗೆ ಜಾನ್ ಸತ್ಯನ್ ಅವರನ್ನು ನ್ಯಾಯಮೂರ್ತಿಗಳಾಗಿ ಶಿಫಾರಸ್ಸು ಮಾಡಿದಾಗ ‘ನರೇಂದ್ರ ಮೋದಿಯವರನ್ನು ಟೀಕಿಸುವ ಬರಹವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ’ ಎಂದು ಆಕ್ಷೇಪಿಸಿ ಅವರ ನೇಮಕಾತಿಯನ್ನು ತಡೆಹಿಡಿಯಿತು. ಬಾಂಬೆ ಹೈಕೋರ್ಟ್‌ ಗೆ ಸುಂದರೇಶನ್ ಅವರನ್ನು ಶಿಫಾರಸ್ಸು ಮಾಡಿದಾಗ ‘ಅವರು ಪೂರ್ವಗ್ರಹಪೀಡಿತರಾಗಿದ್ದಾರೆ’ ಎಂದು ಆಕ್ಷೇಪಿಸಿ ಅವರ ನೇಮಕಾತಿಯನ್ನು ತಡೆಹಿಡಿಯಿತು. ಕೇಂದ್ರ ಸರಕಾರವು ಈ ಎಲ್ಲಾ ಮಾಹಿತಿಗಳನ್ನು ಐಬಿಯಿಂದ ಪಡೆದುಕೊಂಡಿದೆ. ಆದರೆ ಮಿಂಚಿನ ವೇಗದಲ್ಲಿ ಗೌರಿಯವರ ನೇಮಕಾತಿ ಮಾಡಿದ ಕೇಂದ್ರ ಸರಕಾರಕ್ಕೆ ಅವರ ಕುರಿತಾದ ಮಾಹಿತಿ ಯಾಕೆ ಪಡೆದುಕೊಳ್ಳಲಿಲ್ಲ? ಅಥವಾ ಮಾಹಿತಿಯನ್ನು ಕೊಲಿಜಿಯಂನಿಂದ ಮುಚ್ಚಿಟ್ಟಿದೆಯೇ? ಈ ಪ್ರಕರಣದ ಪಾಠವೆಂದರೆ ತನ್ನನ್ನು ವಿಮರ್ಶೆ ಮಾಡಿದವರ ನೇಮಕಾತಿಯನ್ನು ತಡೆಹಿಡಿಯುವುದು ಮತ್ತು ತನ್ನ ಸಿದ್ಧಾಂತಗಳನ್ನ ಹೊಗಳಿದವರ ನೇಮಕಾತಿಗೆ ಅಡ್ಡಬರುವ ಅಡೆತಡೆಗಳನ್ನು ಶಾರ್ಟ್‌ ಸರ್ಕ್ಯೂಟ್ ಮಾಡುವುದರ ಮೂಲಕ ಹಾದಿ ಸುಗಮಗೊಳಿಸಿಕೊಳ್ಳುವ ಮೂಲಕ ಮೋದಿ ಸರಕಾರ ಅತ್ಯಂತ ಕೆಟ್ಟ ಸಂಪ್ರದಾಯಕ್ಕೆ ಮೇಲ್ಪಂಕ್ತಿ ಹಾಕಿದೆ. ಈ ಹಿಂದೆ 6, ಎಪ್ರಿಲ್ 2020ರಂದು ಮಾಡಿದ ಟ್ವೀಟ್‌ನಲ್ಲಿ ಆಗಿನ ಅಡ್ವೊಕೇಟ್ ನೀಲಾ ಅವರು ‘ತಮ್ಮನ್ನು ಆರಿಸಿದ್ದಕ್ಕಾಗಿ ಮೋದಿ ಜನತೆಗೆ ಕೃತಜ್ಞರಾಗಿದ್ದಾರೆ. ನಿಮ್ಮ ಕರೆಗೆ ನಾವು ಉತ್ತರಿಸಿದ್ದೇವೆ’ ಎಂದು ಬರೆದಿದ್ದಾರೆ. 40 ಅಮಾಯಕರನ್ನು ಕೊಂದ 2006 ಬಾಂಬ್ ದಾಳಿಯ ಆರೋಪಿ ಲೆಫ್ಟಿನೆಂಟ್ ಪುರೋಹಿತ್ ಪರ ವಕಾಲತ್ತು ವಹಿಸಿದ್ದರು. ಇವರನ್ನು ಜನವರಿ 2023ರಲ್ಲಿ ಬಾಂಬೆ ಹೈಕೋರ್ಟ್‌ ನ ನ್ಯಾಯಮೂರ್ತಿಗಳ ನೇಮಕಾತಿಯ ಶಿಫಾರಸ್ಸಿಗೆ ಮೋದಿ ಸರಕಾರ ಕೂಡಲೆ ಒಪ್ಪಿಗೆ ಕೊಡುತ್ತದೆ.

ಒಂದೆಡೆ ಕೊಲಿಜಿಯಂ ವ್ಯವಸ್ಥೆ ಸಂಪೂರ್ಣವಾಗಿ ಪಾರದರ್ಶಕವಾಗಿರುವ ಮತ್ತು ಸಾಮಾಜಿಕ ನ್ಯಾಯವನ್ನು ಅಳವಡಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಕೇಂದ್ರ ಕಾನೂನು ಮಂತ್ರಿ ರಿಜಿಜು ಮತ್ತು ಉಪರಾಷ್ಟ್ರಪತಿಗಳು ನಿರ್ದಿಷ್ಟ ಗುರಿಯೊಂದಿಗೆ ಕೊಲಿಜಿಯಂ ಮೇಲೆ ಸರ್ಜಿಕಲ್ ಸ್ಟ್ರೋಕ್‌ ಮಾಡುತ್ತಿದ್ದಾರೆ. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸರಕಾರಕ್ಕೆ ಅಧಿಕಾರವಿರಬೇಕೆಂದು ಪ್ರತಿಪಾದಿಸುತ್ತಿದ್ದಾರೆ. ಆದರೆ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರವಿಲ್ಲದಿದ್ದರೂ ಸಹ ಕೇಂದ್ರ ಸರಕಾರ ತನ್ನ ಸಿದ್ಧಾಂತಗಳನ್ನು ಪ್ರತಿಪಾದಿಸುವವರನ್ನು ನೇಮಕಾತಿ ಮಾಡುತ್ತದೆ. ಇನ್ನು ಅವರಿಗೆ ಅಧಿಕಾರ ದೊರೆತರೆ ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಹೈಜಾಕ್ ಮಾಡುವುದರಲ್ಲಿ ಸಂಶಯವಿಲ್ಲ. ಈ ಕಾರಣಕ್ಕಾಗಿ ನ್ಯಾಯಾಂಗದ ಮುಖ್ಯಸ್ಥರು ಕೊಲಿಜಿಯಂ ವ್ಯವಸ್ಥೆಯನ್ನು ಸುಧಾರಿಸುವ, ಪಾರದರ್ಶಕಗೊಳಿಸುವ ಹಾಗೂ ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸುವತ್ತ ಗಮನ ಹರಿಸಬೇಕಾಗಿದೆ. ಇದು ತುರ್ತು ಅಗತ್ಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *