‘ವಿಚಾರವಂತರು ಯೋಚಿಸಬೇಕಾದ್ದು’..

 

ಪುರುಷರಿಗೆ ಹೋಲಿಸಿದರೆ, ನೈಸರ್ಗಿಕವಾಗಿ ಮಹಿಳೆಯರು ದುರ್ಬಲರಾದ್ದರಿಂದ ಅವರು ಮಾಡುವ ಶ್ರಮವೂ ಸಹ ಸಾಪೇಕ್ಷವಾಗಿ ಕಡಿಮೆಯಾದ್ದರಿಂದ ಅವರಿಗೆ ಕೊಡುವ ಕೂಲಿ/ವೇತನವೂ ಕಡಿಮೆ ಆಗುವುದು ಸ್ವಾಭಾವಿಕವೆಂದೂ, ಪುರುಷರಿಗೆ ಸಮಾನವಾಗಿ ಕೊಟ್ಟರೆ ಮಾಲೀಕರು ‘ಪಾಪರ್’ ಆಗುತ್ತಾರೆಂದೂ, ಈ ಬಗ್ಗೆ ‘ವಿಚಾರವಂತರು’ ಯೋಚಿಸಬೇಕೆಂದೂ ಕನ್ನಡದ ಪ್ರಖ್ಯಾತ ಪತ್ರಿಕೆಯೊಂದರಲ್ಲಿಓದುಗರೊಬ್ಬರು ಕರೆ ಕೊಟ್ಟಿದ್ದರು…..

ಸಮಾಜದಲ್ಲಿ, ಗುತ್ತಿಗೆದಾರ-ಕೆಲಸಗಾರ ಸಂಬಂಧಗಳಿಲ್ಲದೆ, ಕುಟುಂಬದ ಸದಸ್ಯರಾಗಿ ಪರಸ್ಪರರ ನಡುವೆ ಸಾಧ್ಯವಿರುವ ಮಾನವೀಯ ಸಂಬಂಧಗಳು ಸಮಾಜದ ವಿವಿಧ ಶಕ್ತಿ-ಸಾಮರ್ಥ್ಯದ, ಕನಿಷ್ಠ ಅಗತ್ಯಗಳ ಬೇಡಿಕೆ-ಪೂರೈಕೆಗಳಿಗೆ ತಕ್ಕಂತೆ ಹಂಚಿಕೆಯಾಗುವಂಥ ಸಾಮಾಜಿಕ ಸಂಬಂಧಗಳಾಗಿರಲು ಸಾಧ್ಯವಿಲ್ಲವೆ? ಅದಕ್ಕೆ ಬೇಕಾದ ನ್ಯಾಯ ಯಾವುದು? ಹಾಗಾಗದಿರಲು ಇರುವ ತೊಡಕುಗಳು ಯಾವುವು? ಇವನ್ನೂ ವಿಚಾರವಂತರು ಯೋಚಿಸಬೇಕಲ್ಲವೆ? ಎಂದು ಪ್ರೊ. ವಿ.ಎನ್.ಲಕ್ಷ್ಮೀನಾರಾಯಣ ಅವರ ಅಭಿಪ್ರಾಯ.

ಇತ್ತೀಚೆಗೆ ಕನ್ನಡದ ಪ್ರಖ್ಯಾತ ಪತ್ರಿಕೆಯೊಂದರಲ್ಲಿಓದುಗರೊಬ್ಬರು ದೈಹಿಕ ಶ್ರಮವನ್ನು ಬೇಡುವ ಕೆಲಸಗಳಲ್ಲಿ ಪುರುಷರಿಗೆ ಹೆಚ್ಚು ಕೂಲಿ/ವೇತನವನ್ನೂ, ಮಹಿಳೆಯರಿಗೆ ಕಡಿಮೆ ಕೂಲಿ/ವೇತನಗಳನ್ನೂ ಕೊಡುವುದು ಸರಿಯೇ ಎಂದು ಪ್ರಶ್ನೆ ಹಾಕಿಕೊಂಡು, ಅವರ ಸಂಶೋಧನೆ ಮತ್ತುಅನುಭವವನ್ನು ಆಧರಿಸಿ, ದೈಹಿಕ ಶ್ರಮವನ್ನು ಬೇಡುವ ಕೆಲಸಗಳಲ್ಲಿ ಪುರುಷರಿಗೆ ಹೆಚ್ಚು ಕೂಲಿ/ವೇತನವನ್ನೂ, ಮಹಿಳೆಯರಿಗೆ ಕಡಿಮೆ ಕೂಲಿ/ವೇತನಗಳನ್ನೂ ಕೊಡುವುದು ಸರಿಯಾಗಿದೆ ಎಂಬ ತೀರ್ಮಾನವನ್ನು ಪ್ರಕಟಿಸಿದರು. ಅವರ ಪ್ರಕಾರ, ಪುರುಷರಿಗೆ ಹೋಲಿಸಿದರೆ, ನೈಸರ್ಗಿಕವಾಗಿ ಮಹಿಳೆಯರು ದುರ್ಬಲರಾದ್ದರಿಂದ ಅವರು ಮಾಡುವ ಶ್ರಮವೂ ಸಹ ಸಾಪೇಕ್ಷವಾಗಿ ಕಡಿಮೆಯಾದ್ದರಿಂದ ಅವರಿಗೆ ಕೊಡುವ ಕೂಲಿ/ವೇತನವೂ ಕಡಿಮೆ ಆಗುವುದು ಸ್ವಾಭಾವಿಕವೆಂದೂ, ಪುರುಷರಿಗೆ ಸಮಾನವಾಗಿ ಕೊಟ್ಟರೆ ಮಾಲೀಕರು ‘ಪಾಪರ್’ ಆಗುತ್ತಾರೆಂದೂ, ಈ ಬಗ್ಗೆ ‘ವಿಚಾರವಂತರು’ ಯೋಚಿಸಬೇಕೆಂದೂ ಅವರು ಕರೆಕೊಟ್ಟಿದ್ದರು.

ಇದನ್ನು ಓದಿ: ಜಟಾಪಟಿಯಲ್ಲೆ ಮುಗಿದ ಸಭೆ : ಟಫ್ ರೂಲ್ಸ್ ಕುರಿತು ನಾಳೆ ನಿರ್ಧಾರ

ಈ ಬಗ್ಗೆ 200 ವರ್ಷಗಳಷ್ಟು ಹಿಂದೆಯೇ ಯೋಚಿಸಿದ ವಿಚಾರವಂತರು ಇದ್ದರೆಂಬ ಸಂಗತಿ ಅವರಿಗೆ ಗೊತ್ತಿಲ್ಲ. ಮತ್ತು ಮಹಿಳಾ ಕಾರ್ಮಿಕರು ಮಾತ್ರವಲ್ಲ, ಬಾಲಕಾರ್ಮಿಕರು ಮತ್ತು ದುರ್ಬಲ ಪುರುಷ ಕಾರ್ಮಿಕರೂ ಸಹ ಕಡಿಮೆ ಕೂಲಿ/ವೇತನಗಳನ್ನು ಪಡೆದು ಮಾಲೀಕರನ್ನು ಪಾಪರ್‌ ಆಗದಂತೆ ರಕ್ಷಿಸುತ್ತಾ ಬಂದಿದ್ದಾರೆಂಬ ಸಂಗತಿಯೂ ಈ ಓದುಗರಿಗೆ ಗೊತ್ತಿಲ್ಲ. ಹಾಗಾಗಿ ಈ ಬಗ್ಗೆ ಯೋಚಿಸಲು ಇಂದಿನ ‘ವಿಚಾರವಂತ’ರಿಗೆ ಕರೆ ಕೊಟ್ಟಿದ್ದಾರೆನ್ನುವುದು ಸುಸ್ಪಷ್ಟ. ಈ ಲಿಂಗಾಧಾರಿತ ವರ್ಗೀಕರಣದ ಕಾರ್ಮಿಕರು ಅನುಭವಿಸುತ್ತಿರುವ ಕೂಲಿ/ವೇತನದ ತಾರಮ್ಯದ ಜೊತೆಗೆ ದೈಹಿಕ ಶ್ರಮ, ಬೌದ್ಧಿಕ ಶ್ರಮ ಮತ್ತು ವಿಶೇಷ ಶ್ರಮಗಳೂ ಸೇರಿದಂತೆ ಅವನ್ನು ಮಾಡುವ ಶ್ರಮಿಕರ, ವಿಶೇಷ ಚೇತನದ ಶ್ರಮಿಕರ ಮತ್ತು ಲೈಂಗಿಕ ಅಲ್ಪಸಂಖ್ಯಾತ ಶ್ರಮಿಕರ ಕೂಲಿ/ವೇತನದಲ್ಲಿ, ಅವರ ಶಕ್ತಿ-ಸಾಮರ್ಥ್ಯಗಳ ಆಧಾರದ ಮೇಲೆ ಮಾಡುವ ತಾರತಮ್ಯವನ್ನು ತೆಗೆದುಹಾಕಿದರೆ ಅವರನ್ನು ನೇಮಿಸಿಕೊಳ್ಳುವ ಮಾಲೀಕರು ಪಾಪರ್‌ ಆಗುತ್ತಾರೆಯೇ, ಆಗಿದ್ದಾರೆಯೇ ಅಥವಾ ಆಗಿಬಿಟ್ಟರೆ ಅವರಗತಿ ಏನು ಎಂಬ ಬಗ್ಗೆಯೂ ‘ವಿಚಾರವಂತ’ರು ಯೋಚಿಸಬೇಕಾಗಿದೆ.

ಕನ್ನಡದ ಪ್ರಖ್ಯಾತ ಪತ್ರಿಕೆಯ ಮಾನ್ಯ ‘ವಿಚಾರವಂತ’ ಓದುಗರು, ತಮ್ಮ ಸಂಶೋಧನೆ ಮತ್ತು ತೀರ್ಮಾನಕ್ಕಾಗಿ ತತ್ವಜ್ಞಾನಿಗಳಂತೆ ಯಾವುದೇ ಊಹಾ ಸತ್ಯವನ್ನು ಆಧರಿಸದೆ ‘ವಸ್ತುಸ್ಥಿತಿ’ಯನ್ನೇ ಆಧರಿಸಿದ್ದಾರೆ ಎಂಬುದನ್ನು ವಿಶೇಷವಾಗಿ ಗಮನಿಸಬೇಕು. ಈ ಓದುಗರೇ ಸ್ವತಹ ಕಂಡಂತೆ ಕಟ್ಟಡ ಕೆಲಸ ಮಾಡುವ ಒಬ್ಬ ಪುರುಷ ಕೆಲಸಗಾರನು ನೆಲಮಟ್ಟದಿಂದ ಮೇಲಿನ ಅಂತಸ್ತಿಗೆ ‘ಎರಡು ಸನಿಕೆ’ ಗಾರೆ ತುಂಬಿದ ಬಾಣಲೆಯನ್ನು ತಲೆಯ ಮೇಲೆ ಹೊತ್ತು ಸಾಗಿಸುತ್ತಾನೆ. ಅದೇ ಕಟ್ಟಡದ ಮಹಿಳಾ ಕೆಲಸಗಾರ್ತಿಯು ಕೇವಲ ‘ಒಂದುವರೆ ಸನಿಕೆ’ ಗಾರೆಯ ಬಾಣಲೆಯನ್ನು ತಲೆಯ ಮೇಲೆ ಹೊತ್ತು ನೆಲದಿಂದ ಮೇಲಂತಸ್ತಿಗೆ ಸಾಗಿಸುತ್ತಾಳೆ. ಲೆಕ್ಕದ ಸೌಲಭ್ಯಕ್ಕಾಗಿ ಇಬ್ಬರೂ ದಿನವೊಂದಕ್ಕೆ 8 ಗಂಟೆಗಳ ಕಾಲ 100 ಬಾಣಲೆ ಲೆಕ್ಕದಲ್ಲಿ ಗಾರೆಯನ್ನು ಸಾಗಿಸುತ್ತಾರೆ ಎಂದು ಭಾವಿಸಿದರೆ, ಪುರುಷ ಕೆಲಸಗಾರನಿಂದ 200 ಸನಿಕೆ ಗಾರೆಯೂ, ಮಹಿಳಾ ಕೆಲಸಗಾರಳಿಂದ 150 ಸನಿಕೆ ಗಾರೆಯೂ ಕೆಳಗಿನಿಂದ ಮೇಲಕ್ಕೆ ಸಾಗಣೆಯಾಗುತ್ತದೆ. ಈ ಕೆಲಸಕ್ಕಾಗಿ ಪುರುಷ ಕೆಲಸಗಾರನಿಗೆ ಗುತ್ತಿಗೆದಾರನು 600 ರೂ. ಪಾವತಿಸಿದರೆ ಮಹಿಳಾ ಕೆಲಸಗಾರ್ತಿಗೆ 450 ರೂ. ಕೊಡುವುದು ನ್ಯಾಯವಾಗಿಯೇ ಇದೆ. ಇದು ಪ್ರಖ್ಯಾತ ಕನ್ನಡ ಪತ್ರಿಕೆಯ ವಿಚಾರವಂತ ಓದುಗ ಮಾಡುವ ತೀರ್ಮಾನ. ಈ ಕೆಲಸಕ್ಕಾಗಿ ಯಂತ್ರ ಬಳಸಿದರೆ ಹೇಗೆ? ಮತ್ತು ಲಿಂಗಾಧಾರಿತ ತಾರತಮ್ಯ ಕಾನೂನು ಬಾಹಿರವೆ? ಎಂಬ ಪ್ರಶ್ನೆಗಳು ಸದ್ಯಕ್ಕೆ ಪ್ರಸ್ತುತವಲ್ಲ.

ಇದನ್ನು ಓದಿ: ಪರ್ವ ಕಾಲದಲ್ಲಿ ಅಂಬೇಡ್ಕರ್ ಮತ್ತು ಮಾರ್ಕ್ಸ್

ಓದುಗರು ಬಳಸುವ ತರ್ಕವನ್ನೇ ಬಳಸಿ ನೋಡಿದರೆ ಪುರುಷ ಕೆಲಸಗಾರ ಮತ್ತು ಮಹಿಳಾ ಕೆಲಸಗಾರರಿಬ್ಬರನ್ನೂ ನೇಮಿಸಿಕೊಂಡು ಕಟ್ಟಡದ ಕೆಲಸ ಮಾಡಿಸುವ, ಗುತ್ತಿಗೆದಾರನು ಕಟ್ಟಡದ ಕೆಲಸದ ಸಮಯದಲ್ಲಿ ಅರ್ಧ ಸನಿಕೆ ಗಾರೆಯನ್ನೂ ಸಾಗಿಸುವುದಿಲ್ಲ. ಆದ್ದರಿಂದ ಅವನ ಆದಾಯವನ್ನು ಯಾವುದರ ಆಧಾರದಿಂದ ನಿರ್ಧರಿಸಬೇಕು ಎಂಬುದನ್ನೂ ‘ವಿಚಾರವಂತ’ ಓದುಗ ಅಥವಾ ವಿಚಾರವಂತರು ಯೋಚಿಸಬೇಕಲ್ಲವೆ? ಗುತ್ತಿಗೆದಾರನು ತಾನೇ ಗಾರೆ ಹೊರದೆ, ಕೆಲಸಗಾರರಿಂದ ಗಾರೆ ಹೊರಿಸಿದ್ದರಿಂದಲೇ ಅವನು ಕೆಲಸಗಾರನಾಗದೆ, ಗುತ್ತಿಗೆದಾರನಾಗಿದ್ದಾನೆ ಎಂಬುದು ಬೆಳಕಿನಷ್ಟೇ ನಿಚ್ಚಳವಾದ ಸತ್ಯ.

ಕನ್ನಡದ ಪ್ರಖ್ಯಾತ ಪತ್ರಿಕೆಯ ವಿಚಾರವಂತ ಓದುಗ, ಕಟ್ಟಡ ಕೆಲಸದ ಗುತ್ತಿಗೆದಾರ, ಪತ್ರಿಕೆಯ ಮಾಲೀಕ, ಸಂಪಾದಕ, ಯಾರೇ ಆದರೂ ಅವರವರ ಮನೆಗಳಲ್ಲಿ ಇದೇ ತರ್ಕವನ್ನು ಬಳಸಿದರೆ, ಆಗ ಆ ಕುಟುಂಬಗಳ ಅಜ್ಜ-ಅಜ್ಜಿಯರಿಗೆ, ದುರ್ಬಲರು-ಹೆಂಗಸರು-ಮಕ್ಕಳಿಗೆ ಅವರವರು ಮಾಡುವ ಕೆಲಸದ ಅಂದಾಜು ಬೆಲೆ/ಮೌಲ್ಯ/ಆದಾಯವನ್ನು ಆಧರಿಸಿ ತುಂಡು ಬಟ್ಟೆ, ಮೂಲೆ ನೆಲ, ಮುರುಕು ಕುರ್ಚಿ, ಕಾಲು ಹಾಸಿಗೆ, ಅರ್ಧ ತಟ್ಟೆ ಅನ್ನ-ರೊಟ್ಟಿ, ಬೇಳೆ-ತರಕಾರಿಗಳಿಲ್ಲದ ಕಡಿಮೆ ವೆಚ್ಚದ/ ಪೌಷ್ಟಿಕಾಂಶದ ಸಾರು ಇತ್ಯಾದಿ ಜೀವನಾವಶ್ಯಕ ವಸ್ತುಗಳನ್ನು ಮತ್ತು ಸೌಲಭ್ಯವನ್ನು ಒದಗಿಸಿದರೆ ಅನ್ಯಾಯವೆನಿಸುತ್ತದೆಯೋ? ಅಥವಾ ಒಂದು ವೇಳೆ ಕುಟುಂಬದ ಎಲ್ಲರಿಗೂ ಅವರವರು ನಿರ್ವಹಿಸುವ ಕೆಲಸ-ಕರ್ತವ್ಯ-ಕ್ರಿಯೆ-ಚಟುವಟಿಕೆಗಳನ್ನು ಸಮಾನ ಮೌಲ್ಯದ್ದಾಗಿರಬೇಕೆಂದು ಬಯಸದೆ/ಆಗ್ರಹಿಸದೆ ಅವರವರ ಅಗತ್ಯಕ್ಕೆ ತಕ್ಕಂತೆ ಮನೆಯಲ್ಲಿ ಲಭ್ಯವಿರುವ ಜೀವನಾವಶ್ಯಕ ವಸ್ತುಗಳನ್ನು ಮತ್ತು ಸೌಲಭ್ಯಗಳನ್ನು ಹಂಚಿಕೊಂಡು ಬದುಕಬಹುದಾದರೆ ಕುಟುಂಬದ ಎಲ್ಲಾ ಸದಸ್ಯರೂ ನೆಮ್ಮದಿಯಾಗಿ ಇರಬಹುದೋ ಇಲ್ಲವೋ?

ಇದನ್ನು ಓದಿ: ಜೀತಕ್ಕಷ್ಟೇ ವಿಮುಕ್ತಿ, ಸೆರೆಯಲ್ಲೇ ಉಳಿದ ಬದುಕು

ಕುಟುಂಬವು ಯಾವುದೇ ಸಮಾಜದ ಕನಿಷ್ಠರೂಪ. ಸಮಾಜದಲ್ಲಿ, ಗುತ್ತಿಗೆದಾರ-ಕೆಲಸಗಾರ ಸಂಬಂಧಗಳಿಲ್ಲದೆ, ಕುಟುಂಬದ ಸದಸ್ಯರಾಗಿ ಪರಸ್ಪರರ ನಡುವೆ ಸಾಧ್ಯವಿರುವ ಮಾನವೀಯ ಸಂಬಂಧಗಳು ಸಮಾಜದ ವಿವಿಧ ಶಕ್ತಿ-ಸಾಮರ್ಥ್ಯದ, ಕನಿಷ್ಠ ಅಗತ್ಯಗಳ ಬೇಡಿಕೆ-ಪೂರೈಕೆಗಳಿಗೆ ತಕ್ಕಂತೆ ಹಂಚಿಕೆಯಾಗುವಂಥಾ ಸಾಮಾಜಿಕ ಸಂಬಂಧಗಳಾಗಿರಲು ಸಾಧ್ಯವಿಲ್ಲವೆ? ಅದಕ್ಕೆ ಬೇಕಾದ ನ್ಯಾಯ ಯಾವುದು? ಹಾಗಾಗದಿರಲು ಇರುವ ತೊಡಕುಗಳು ಯಾವುವು? ವಿಚಾರವಂತರು ಯೋಚಿಸಬೇಕಲ್ಲವೆ?

“ವಸು ಧೈವಕ ಕುಟುಂಬಕಂ”, “ಸರ್ವೇ ಜನಾಃ ಸುಖಿನೋ ಭವಂತು” ಎಂದು ಬಯಸುವ ದೇಶ ಭಾರತ, ಆಧ್ಯಾತ್ಮಿಕವಾಗಿ ವಿಶ್ವಕ್ಕೇ ಗುರು ಸ್ಥಾನದಲ್ಲಿರುವ ದೇಶ ಭಾರತ ಎಂದು ಎಲ್ಲಾ ರಾಜಕಾರಣಿಗಳೂ ಅವಕಾಶ ಸಿಕ್ಕಿದಾಗಲೆಲ್ಲಾ ಹೇಳುತ್ತಾರೆ. ಎಲ್ಲರೂ ಒಡಹುಟ್ಟಿದವರಂತೆ, ಒಟ್ಟಿಗೆ ಶಾಂತಿ-ಸೌಹಾರ್ದತೆ-ನೆಮ್ಮದಿಗಳಿಂದ ಬದುಕಬೇಕೆಂದು ನಿತ್ಯವೂ ಪ್ರಾರ್ಥಿಸುವ ಜನರಿರುವ ದೇಶ ಭಾರತವೆಂಬ ಈ ಪುಣ್ಯಭೂಮಿಯೆಂದು ಮಧ್ಯಮ ವರ್ಗದ ಧಾರ್ಮಿಕ ಮನಸ್ಸಿನ ಸಜ್ಜನರು ಹೆಮ್ಮೆ ಪಡುತ್ತಾರೆ. ಬಸ್ಸು-ರೈಲುಗಳಲ್ಲಿ ಇಬ್ಬರಿಗೆ ಅವಕಾಶ ಮಾಡಿಕೊಡುವ ಸೀಟಿನಲ್ಲಿ ಮೂವರು ಕುಳಿತು, ‘ಅಡ್ಜೆಸ್ಟ್ ಮಾಡಿಕೊಳ್ಳಬೇಕು, ಲೈಫೇ ಒಂದು ಅಡ್ಜೆಸ್ಟ್‌ಮೆಂಟ್‌’ ಎಂದು ಹೇಳುವ ಜನಸಾಮಾನ್ಯರ ಸಜ್ಜನಿಕೆ-ತಿಳುವಳಿಕೆ-ತೀರ್ಮಾನಗಳು ಹಣದ ವಿಷಯ, ಖಾಸಗಿ ಆಸ್ತಿಯ ವಿಷಯ ಬಂದಾಗ ಕೆಲಸಕ್ಕೆ ಬರುವುದಿಲ್ಲ. ಹೀಗಾಗಲು ಕಾರಣವಾಗುವ ತೊಡಕು ಯಾವುದು? ವಿಚಾರವಂತರು ಯೋಚಿಸಬೇಕಲ್ಲವೆ?

ಇದನ್ನು ಓದಿ: ಕೊರೊನಾ ಹೆಚ್ಚಳಕ್ಕೆ ಮೋದಿ ಕಾರಣ: ರಾಜೀನಾಮೆ ನೀಡಿ

‘ಈ ಪುಣ್ಯಭೂಮಿ’ಯಲ್ಲಿ, ಕಟ್ಟಿಕೊಂಡ ಮಲದ ಗುಂಡಿಯಲ್ಲಿಳಿದು ಸ್ವಚ್ಛ ಮಾಡುವವರು‘ ಎಲ್ಲರಿಗೂ ತಂದೆಯಾದ’ ದೇವರ ಗುಡಿಯೊಳಗೆ ಕುಳಿತು ಪ್ರಾರ್ಥನೆ ಮಾಡುವಂತಿಲ್ಲ. ಗರ್ಭಗುಡಿಗೆ ಹೋಗುವುದಂತೂ ಸಾಧ್ಯವೇ ಇಲ್ಲ. ದೇವಸ್ಥಾನದ ಅರ್ಚಕರಾಗಿ ಜೀವನ ಮಾಡುವವರು‘ ಪ್ರಾಣ ಹೋದರೂ ಸರಿ’ ಗಾರೆ ಹೊರಲು ಹೋಗುವುದಿಲ್ಲ. ‘ಜನರು ಚುನಾಯಿಸುವ ಸರ್ಕಾರ’ದಿಂದ ಪ್ರಶಸ್ತಿ-ಪದವಿ-ಬಹುಮಾನಗಳ ಮನ್ನಣೆಗೆ ಪಾತ್ರರಾದ ಸಾಹಿತಿಗಳು ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುವ ನಾಗರಿಕರ ಪಕ್ಕ ಕುಳಿತುಕೊಳ್ಳಲು ಬಯಸುವುದಿಲ್ಲ. ‘ಜನರ ಸೇವೆಯೇ ಜನಾರ್ದನನ ಸೇವೆ’ಯೆಂದು ನಂಬುವ ಧರ್ಮಾಧಿಕಾರಿಗಳು, ಜಗದ್ಗುರುಗಳು, ಮಠಾಧಿಪತಿಗಳು ‘ಜನತಾ ಜನಾರ್ದನನ’ ಪಕ್ಕದಲ್ಲಿ ನೆಲದ ಮೇಲೆ ಕುಳಿತು ನಿತ್ಯವೂ ಅವರುಣ್ಣುವ ‘ಪ್ರಸಾದ’ವನ್ನೇ ತಾವೂ ತಿಂದು ಜೀವಿಸುವುದಿಲ್ಲ. ಬಸ್‌ ನಿಲ್ದಾಣ, ರೈಲು ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆಂದೇ ಹಾಕಿಸಿದ ‘ಶುದ್ಧ ಕುಡಿಯುವ ನೀರನ್ನು’ ಯಾವ ವೈದ್ಯ, ವಿಜ್ಞಾನಿ, ಬುದ್ಧಿಜೀವಿ, ಜನನಾಯಕ/ ನಾಯಕಿಯೂ ಕುಡಿಯುವುದಿಲ್ಲ. ಇದಕ್ಕಿರುವ ಅಡ್ಡಿ ಯಾವುದು? ವಿಚಾರವಂತರು ಯೋಚಿಸಬೇಕಲ್ಲವೆ?

ಇದನ್ನು ಓದಿ: ರಾಜ್ಯ ರಸ್ತೆ ಸಾರಿಗೆ ನೌಕರರ ಚರಿತ್ರಾರ್ಹ ಮುಷ್ಕರಕ್ಕೆ ಜನಬೆಂಬಲ ಹರಿದು ಬರಲಿ

ಭಾರತದಲ್ಲಿ, ವೈದ್ಯ ಪದವಿ ಪಡೆದವರು ವೈದ್ಯರಾಗದೆ ಜಿಲ್ಲಾಧಿಕಾರಿಯಾಗಬಹುದು. ಕೆಲಸ ಮಾಡಲು ಮೈ ಬಗ್ಗದ, ಹಣವಂತ, ಭ್ರಷ್ಟ, ಚಾಲೂಕಿ ಮನುಷ್ಯರು/ ಸಿನೆಮಾ ನಟ ನಟಿಯರು ರಾಜಕಾರಣಿಗಳಾಗುವ, ಮಂತ್ರಿಗಳಾಗುವ ಅವಕಾಶವಿದೆ. ಕೈಗಾರಿಕೋದ್ಯಮಿಗಳು ಶಿಕ್ಷಣವೇತ್ತರಾಗುವುದು ಸಾಧ್ಯ. ಬಿ.ಇ ಪದವೀಧರರು ಪೊಲೀಸ್ ಪೇದೆಗಳಾಗಲು ಮುಂದೆ (ಅಥವಾ ಹಿಂದೆ) ಬರಬಹುದು. ಸೈನ್ಯ ಸೇರಿ ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಬಹುದು. ಒಟ್ಟಿನಲ್ಲಿ ಏನು ಬೇಕಾದರೂ ಸಾಧ್ಯ. ಹೇಗೆಂದು ಗೊತ್ತಿದ್ದರೆ, ಅಧಿಕಾರಸ್ಥರೊಂದಿಗೆ ಕೈಜೋಡಿಸಿ, ನ್ಯಾಯಾಧೀಶರೂ ಆಗಬಹುದು. ಇದ್ಯಾವುದೂ ಆಗದಿದ್ದರೆ ನಿರುದ್ಯೋಗಿಯಾದರೂ ಆಗಿ ಹೇಗೋ (ಅಂದರೆ, ಕಳ್ಳತನ, ಭಿಕ್ಷಾಟನೆ, ವೇಶ್ಯಾವೃತ್ತಿ,… ಅಥವಾ ಗೊತ್ತಿಲ್ಲದ ಇನ್ನೂ ಎಷ್ಟೋ ರೀತಿಯಲ್ಲಿ) ಬದುಕಬಹುದು. ಹೇಗೋ ಬದುಕುವುದು ಸಾಯುವುದಕ್ಕಿಂತಾ ಯಾವಾಗಲೂ ಮೇಲು. ನಾಡಿನ ಉದ್ದಾಮ ಅರ್ಥಶಾಸ್ತ್ರಜ್ಞರು ಹೇಳುವಂತೆ ‘ಉದ್ಯೋಗಿಗೆ ಅವಕಾಶಗಳು ಸ್ಥಗಿತಗೊಂಡಿರುತ್ತವೆ. ಆದರೆ ನಿರುದ್ಯೋಗಿಗೆ ಅನೇಕ ಅವಕಾಶಗಳು ಸದಾ ತೆರೆದುಕೊಂಡಿರುತ್ತವೆ. ’ಇದಕ್ಕಿರುವ ಅಡ್ಡಿ ಯಾವುದು? ಭಾರತ ಪ್ರಜಾಪ್ರಭುತ್ವವಾದಿ ದೇಶವಾಗಿದೆ ಎಂಬ ಕಾರಣಕ್ಕಾಗಿಯಾದರೂ ವಿಚಾರವಂತರು ಯೋಚಿಸಬೇಕಲ್ಲವೆ?

ಈಗಿನ ಕೋವಿಡ್‌ ಕಾಲದಲ್ಲಿ ಒಂದು ಕಡೆ, ಕೂಲಿ/ವೇತನಕ್ಕಾಗಿ ಕೆಲಸ ಮಾಡುತ್ತಿದ್ದವರೂ ನಿರುದ್ಯೋಗಿಗಳಾಗಿದ್ದಾರೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವಿಸುತ್ತಿದ್ದವರು ಗಿರಾಕಿಗಳಿಲ್ಲದೆ ಇದ್ದ ವ್ಯಾಪಾರವನ್ನೂ ಕಳೆದುಕೊಂಡು ನಿರ್ಗತಿಕರಾಗಿ ಒದ್ದಾಡುತ್ತಿದ್ದಾರೆ. ಸರ್ಕಾರಗಳು ವರ್ಷ ವರ್ಷವೂ ಜಾಗತಿಕ ಬ್ಯಾಂಕುಗಳಲ್ಲಿ ಸಾಲಮಾಡಿ ಜನರ ತಲೆಯ ಮೇಲಿನ ಸಾಲದ ಹೊರೆಯನ್ನು ಹೆಚ್ಚಿಸುತ್ತಲೇ ಇವೆ. ಜನರಿಗಾಗಿ ಎಂದು ಜನರ ದುಡ್ಡಿನಲ್ಲಿ ಸ್ಥಾಪಿಸಲಾದ, ಲಾಭದಲ್ಲೇ ನಡೆಯುತ್ತಿದ್ದರೂ ನಷ್ಟದ ನೆಪವೊಡ್ಡಿ, ಬ್ಯಾಂಕು, ವಿಮೆ, ಟೆಲಿಫೋನ್, ರೈಲು, ವಿಮಾನ ಸಂಸ್ಥೆಗಳನ್ನು, ಖಾಸಗಿ ವ್ಯಾಪಾರಿಗಳಿಗೆ ಮಾರಲಾಗುತ್ತಿದೆ. ಅವುಗಳಿಂದ ಬಂದ ಹಣವು ಎಲ್ಲೆಲ್ಲೋ ಇಂಗಿ ಹೋಗುತ್ತಿದೆ. ಮತ್ತೊಂದು ಕಡೆ, ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಗೆಲ್ಲಲು ಹಣದ ಹೊಳೆಯನ್ನೇ ಹರಿಸುತ್ತಿವೆ. ಟಿವಿ-ಪತ್ರಿಕೆಗಳ ಮುಖಗಳನ್ನು ಚಿನ್ನದ ವ್ಯಾಪಾರ, ಕಾರುಗಳ ವ್ಯಾಪಾರಗಳಿಗೆ ಗಿರಾಕಿಗಳನ್ನು ಕರೆಯುವ ಜಾಹೀರಾತುಗಳು ಮುಚ್ಚಿ ಸುದ್ದಿಗಳನ್ನೇ ಮರೆ ಮಾಡುತ್ತಿವೆ. ಇವೆಲ್ಲದರಲ್ಲಿರುವ ಹಣದ ಹೊಳೆ ಎಲ್ಲಿಂದ ಹರಿದು ಬರುತ್ತಿದೆ? ಜನರ ಬೆವರು ಹಣವಾಗುತ್ತಿದೆಯೋ? ಅಥವಾ ಹಣವೇ ಮತ್ತಷ್ಟು ಹಣವಾಗುತ್ತಾ ಹಣರೂಪದ ಗುಳ್ಳೆಗಳಾಗಿ ಹಾರುತ್ತಿವೆಯೋ? ಈ ಹಣದ ಗುಳ್ಳೆಗಳು ಒಡೆದಾಗ ಏನಾಗುತ್ತದೆ? ಅವು ಯಾವ ರೂಪಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತವೆ? ಭಾರತದ ಕೋಟ್ಯಾಧೀಶರ ಸಂಖ್ಯೆ ಈ ಕೋವಿಡ್‌ ಕಾಲದಲ್ಲೂ ಏರುತ್ತಲೇ ಇದೆ. ಇವೆಲ್ಲಕ್ಕಿಲ್ಲದ ಅಡ್ಡಿ ಯಾವುದು? ವಿಚಾರವಂತರು ಯೋಚಿಸಬೇಕಲ್ಲವೆ?

Donate Janashakthi Media

Leave a Reply

Your email address will not be published. Required fields are marked *