ಬೆಂಗಳೂರು: ಆರ್ಥಿಕ ಸಂಕಷ್ಟ ಹಾಗೂ ಸಂಬಳ ಹೆಚ್ಚಳ ಮಾಡದ ಎಂವಿ ಸೋಲಾರ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಂತಕುಮಾರ್ ಕಂಪನಿಯಲ್ಲಿ ಡೆತ್ ನೋಟ್ ಬರೆದು ಯಾರು ಇಲ್ಲದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾರ್ಚ್ 09ರ ರಾತ್ರಿ 9.30ರ ಸುಮಾರಿಗೆ ನಡೆದಿದೆ. ಘಟನಾ ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಕುಮಾರ್ ಅವರ ಸಹದ್ಯೋಗಿಗಳ ಮಾಹಿತಿ ಸಂಗ್ರಹಿಸಿದ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲತಃ ದಾವಣಗೆರೆ ಜಿಲ್ಲೆಯ ಹಿರಿಯೂರಿನವರಾದ ಶಾಂತಕುಮಾರ್ ಐಟಿಐ ವಿದ್ಯಾಭ್ಯಾಸದ ನಂತರ ಬೆಂಗಳೂರು ಯಲಹಂಕ ಸಮೀಪದ ಚಿಕ್ಕಜಾಲ ಬಳಿ ಇರುವ ಎಂವಿ ಸೋಲಾರ್ ಕಂಪನಿ ಉದ್ಯೋಗಿಯಾಗಿದ್ದರು.
ತೀವ್ರತರವಾದ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದರು. ಮನೆಯ ಪರಿಸ್ಥಿತಿ ತುಂಬ ಕಷ್ಟಕರವಾಗಿದೆ ಎಂದು ಡೆತ್‌ನೋಟ್ ನಲ್ಲಿ ಬರೆದಿದ್ದಾರೆ. ಅಲ್ಲದೆ, ತಾನು ಕೆಲಸ ಮಾಡುವ ಕಂಪನಿಯೂ ಕಳೆದ ನಾಲ್ಕು ವರ್ಷದಿಂದ ವೇತನ ಹೆಚ್ಚಳ ಮಾಡಿರಲಿಲ್ಲ.
ಕಂಪನಿಯಲ್ಲಿ ಸುಮಾರು 130 ಉದ್ಯೋಗಿಗಳಿದ್ದಾರೆ. ಕಳೆದ ಐದು ವರ್ಷದಿಂದ ಕಂಪನಿಗೆ ವೇತನ ಹೆಚ್ಚಳ ಮಾಡಿಲ್ಲವೆಂದು ಕಾರ್ಮಿಕರು ಆರೋಪಿಸಿದರು. ಶಾಂತಕುಮಾರ್ ಅವರ ಪ್ರಕರಣದ ನಂತರ ಪ್ರತಿಭಟನೆ ನಡೆಸಿದ ಕಾರ್ಮಿಕರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ವೇತನ ಹೆಚ್ಚಳ ಆಗದಿರುವ ಬಗ್ಗೆ ಕಾರ್ಮಿಕರು ಹಲವು ಬಾರಿ ಮನವಿ ಸಲ್ಲಿಸಿದರೂ ಕಂಪನಿ ಕಾರ್ಮಿಕರ ವೇತನ ಹೆಚ್ಚಳದ ಬಗ್ಗೆ ಸೂಕ್ತಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕಾರ್ಮಿಕ ನ್ಯಾಯಾಲಯದಲ್ಲಿಯೂ ಪ್ರಕರಣ ದಾಖಲಾಗಿದೆ ಎಂದು ಕಾರ್ಮಿಕರು ಆರೋಪಿಸಿದರು.