ಮುಂಬೈ, ಫೆಬ್ರವರಿ 22: ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಜೈಲಿನಲ್ಲಿರುವ 82 ವರ್ಷದ ಕವಿ ಡಾ. ವರವರ ರಾವ್ ಅವರಿಗೆ ವೈದ್ಯಕೀಯ ನೆಲೆಗಟ್ಟಿನಲ್ಲಿ ಬಾಂಬೆ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಅನಾರೋಗ್ಯಕ್ಕೆ ಒಳಗಾಗಿರುವ ವರವರ ರಾವ್ ಅವರಿಗೆ ಆರು ತಿಂಗಳ ಮಧ್ಯಂತರ ಜಾಮೀನು ನೀಡಲಾಗಿದೆ.
ವರವರ ರಾವ್ ಹಾಗೂ ಅವರ ಪತ್ನಿ ಪೆಂಡ್ಯಾಲ ಹೇಮಲತಾ ಅವರು ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌ಎಸ್ ಶಿಂಧೆ ಮತ್ತು ಮನೀಶ್ ಪಿಟಾಲೆ ಈ ಆದೇಶ ನೀಡಿದ್ದಾರೆ. ವರವರ ರಾವ್ ಅವರ ಆರೋಗ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಹೀಗಾಗಿ ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕು ಎಂದು ಅರ್ಜಿಗಳಲ್ಲಿ ಕೋರಲಾಗಿತ್ತು.
ವಿಚಾರಣಾಧೀನ ಸ್ಥಿತಿಯನ್ನು ನೋಡಿದಾಗ ಅವರನ್ನು ಜೈಲಿಗೆ ಮರಳಿ ಕಳುಹಿಸುವುದು ಸರಿಯಲ್ಲ. ಈ ಪ್ರಕರಣವು ಅವರಿಗೆ ಜಾಮೀನು ನೀಡಲು ಸೂಕ್ತವಾಗಿದೆ. ಇದನ್ನು ಸಂವಿಧಾನದಲ್ಲಿನ ಮಾನವಹಕ್ಕುಗಳ ಅಡಿಯಲ್ಲಿ ಪರಿಗಣಿಸಲಾಗುತ್ತದೆ’ ಎಂದು ಪೀಠ ಹೇಳಿತು.
ವಿಶೇಷ ಎನ್‌ಐಎ ನ್ಯಾಯಾಲಯದ ವ್ಯಾಪ್ತಿಯೊಳಗೇ ಇರುವಂತೆ ಷರತ್ತು ವಿಧಿಸಿ ರಾವ್ ಅವರಿಗೆ ಜಾಮೀನು ನೀಡಲಾಗಿದೆ. ಹಾಗೆಯೇ ಎಫ್‌ಐಆರ್ ದಾಖಲಿಗೆ ಎಡೆಮಾಡಿಕೊಡುವಂತಹ ಯಾವುದೇ ಚಟುವಟಿಕೆಗಳು ಅಥವಾ ಅದಕ್ಕೆ ಹೋಲುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂದು ಸೂಚಿಸಲಾಗಿದೆ.
ನ್ಯಾಯಾಲಯ ಆದೇಶ ನೀಡುತ್ತಿದ್ದರಂತೆಯೇ ಇದಕ್ಕೆ ಮೂರು ವಾರ ತಡೆ ಕೊಡುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಮನವಿ ಮಾಡಿದರು. ಅದನ್ನು ನ್ಯಾಯಾಲಯ ತಿರಸ್ಕರಿಸಿತು. ಅಗತ್ಯ ಬಿದ್ದ ಸಂದರ್ಭದಲ್ಲೆಲ್ಲ ರಾವ್ ಅವರು ವಿಚಾರಣೆಗೆ ಹಾಜರಾಗಬೇಕು. ಆದರೆ ಖುದ್ದು ಹಾಜರಿಯಿಂದ ವಿನಾಯಿತಿ ಕೋರಬಹುದು ಎಂದು ಸೂಚಿಸಿತು.
ರಾವ್ ಅವರ ಪತ್ನಿ ಈ ಹಿಂದೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಜಾಮೀನು ನೀಡಲು ನಿರಾಕರಿಸಿದ್ದ ನ್ಯಾಯಾಲಯ, ಹೈಕೋರ್ಟ್‌ನಲ್ಲಿಯೇ ಅರ್ಜಿ ಸಲ್ಲಿಸುವಂತೆ ನಿರ್ದೇಶಿಸಿತ್ತು.