ಟಿ ಯಶವಂತ
2022ರ ಆಗಸ್ಟ್ ತಿಂಗಳಲ್ಲಿ ನಡೆದ ಮದುವೆಯಾಗುವ ಪ್ರಯತ್ನದಲ್ಲಿ ಇದ್ದರೂ ಹುಡುಗಿ ಸೆಟ್ ಆಗದಿರುವ 30 ವರ್ಷ ದಾಟಿದ ಭಾರತಿನಗರ ಏರಿಯಾದ ಅವಿವಾಹಿತರ ಮಲೆ ಮಹದೇಶ್ವರ ಬೆಟ್ಟ ಬೃಹತ್ ಪಾದಯಾತ್ರೆ ಸಾರ್ವಜನಿಕ ಚರ್ಚೆಯಿಂದ ಮರೆಯಾಗುವ ಮುಂಚೆ ಆದಿ ಚುಂಚನಗಿರಿಯ ವಧು-ವರರ ಸಮಾವೇಶ ಈ ಚರ್ಚೆಯ ರಂಗನ್ನು ಮತ್ತಷ್ಟು ಹೆಚ್ಚಿಸಿದೆ.
ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವರರು ಜಾತ್ರೆ ರೀತಿಯಲ್ಲಿ ಸಮಾವೇಶಗೊಂಡಿದ್ದು, ನಗಣ್ಯ ಸಂಖ್ಯೆಯಲ್ಲಿ ಬಂದಿದ್ದ ವಧುಗಳು ಈ ಪ್ರಮಾಣದ ವರರ ಸಮೂಹ ಕಂಡು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸು ಹೋಗಿರುವುದು ಆಲೋಚಿಸಬೇಕಾದ ಸಂಗತಿಯೇ.
ಚುನಾವಣಾ ಪೂರ್ವ ತಯಾರಿಗಾಗಿ ಜಾಥಾ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರವರನ್ನು ಕೋಲಾರ ಜಿಲ್ಲೆ ಶ್ರೀನಿವಾಸಪುರದ ಗ್ರಾಮ ಒಂದರ ಯುವಕ ಅಂತರ್ ಜಿಲ್ಲಾ ಮದುವೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾನೆ. ರಾಜ್ಯದ ಕೆಲವು ಕಡೆ ಮದುವೆ ಮಾಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಯುವಕರು ಒತ್ತಾಯಿಸಿದ್ದಾರೆ.
ಈ ಬೆಳವಣಿಗೆಗಳನ್ನು ಚರ್ಚಿಸುತ್ತಿರುವ ಬಹುತೇಕರು ಹೆಣ್ಣು ಭ್ರೂಣ ಹತ್ಯೆ ಕುರಿತು ಬೊಟ್ಟು ಮಾಡುತ್ತಿದ್ದಾರೆ. ಆದರೆ ಕೃಷಿ ಬಿಕ್ಕಟ್ಟಿನ ಸಾಮಾಜಿಕ ಪರಿಣಾಮವಾಗಿ ಮದುವೆ ಬಿಕ್ಕಟ್ಟು ಸೃಷ್ಟಿಯಾಗಿರುವುದನ್ನು ಮರೆಯುತ್ತಿದ್ದಾರೆ.
ಗಂಡು ಮತ್ತು ಹೆಣ್ಣಿನ ನಡುವಿನ ಲಿಂಗಾನುಪಾತದಲ್ಲಿ ವ್ಯತ್ಯಾಸ ಇರುವುದು ನಿಜ. ಆದರೆ ಇದೊಂದೇ ಕಾರಣವಲ್ಲ. ಇದು ಕಾರಣವಾಗಿದ್ದರೆ ಒಂದು ಸಾವಿರ ಯುವಕರಲ್ಲಿ 200 ಯುವಕರು ಮಾತ್ರವೇ ಅವಿವಾಹಿತರಾಗಿರಬೇಕಿತ್ತು. ವಾಸ್ತವ ಪರಿಸ್ಥಿತಿ ಈ ಪ್ರಮಾಣಕ್ಕಿಂತ ದುಪ್ಪಟ್ಟು ಸಂಖ್ಯೆಯಲ್ಲಿ ಅವಿವಾಹಿತರಾಗಿ ಯುವಕರು ಉಳಿದುಬಿಡುತ್ತಿದ್ದಾರೆ.
ಏರುತ್ತಿರುವ ಜೀವನ ವೆಚ್ಚ ಮತ್ತು ಕಡಿಮೆಯಾಗುತ್ತಿರುವ ದುಡಿಮೆ ಆದಾಯದ ನಡುವೆ ಒದ್ದಾಡುತ್ತಿರುವ ಯುವಕರು ಒಂದು ಕಡೆ, ಮದುವೆ ನಂತರದ ಜೀವನದ ಪರಿಸ್ಥಿತಿ ಉತ್ತಮವಾಗಿರಬೇಕು ಎಂಬ ಯುವತಿಯರ ಮನೋಭಾವ ಇನ್ನೊಂದು ಕಡೆ ಆಗಿರುವಂತಹ ಆರ್ಥಿಕ ಪರಿಸ್ಥಿತಿಯನ್ನು ಹಿನ್ನಲೆಯಾಗಿಟ್ಟುಕೊಂಡು ನೋಡಿದಾಗ ಮಾತ್ರ ಈ ಸಾಮಾಜಿಕ ಸಮಸ್ಯೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಗಂಡಿಗೆ ಮದುವೆಯ ಕನಿಷ್ಠ ವಯಸ್ಸು 21 ಆಗಿದ್ದರೂ 30 ದಾಟುವ ತನಕ ಮದುವೆ ಯೋಚನೆಯನ್ನು ಮಾಡಲು ಸಾಧ್ಯವಾಗದ ಪರಿಸ್ಥಿತಿ ಬಹುತೇಕ ಯುವಕರದ್ದು. ಮೂವತ್ತರ ನಂತರವೇ ಹೆಣ್ಣಿನ ಹುಡುಕಾಟ. ಎರಡೂ ಕಡೆಯವರು ಒಪ್ಪಿ ಮಾತುಕತೆ ಹಂತಕ್ಕೆ ಬರುವ ಸಮಯಕ್ಕೆ ಹುಡುಗನಿಗೆ 35-40 ಆಗುತ್ತಿದೆ. ಆದರೆ ಅದೇ ಸಂದರ್ಭದಲ್ಲಿ ಅದೇ ವಯಸ್ಸಿನ ಹುಡುಗಿಯರನ್ನು ಮದುವೆ ಮಾಡಿಕೊಳ್ಳಲು ಬಹುತೇಕ ಯುವಕರು ಹಿಂಜರಿಯುತ್ತಾರೆ. ಹೀಗೆ ವರರ ಸಂಖ್ಯೆ ಹಿಗ್ಗುತ್ತಾ ಹೋದಂತೆ ವಧುಗಳ ಸಂಖ್ಯೆ ಕುಗ್ಗುತ್ತಿದೆ.
ಒಂದು ಕಡೆ ನಷ್ಟದಲ್ಲಿ ನಡೆಯುತ್ತಿರುವ ಕೃಷಿ ಬದುಕು ಇನ್ನೊಂದು ಕಡೆ ಕನಿಷ್ಠ ಆದಾಯಗಳಿಸಲು ದಿನಕ್ಕೆ 12 ಗಂಟೆಗಳ ಕಾಲವೂ ದುಡಿಯಬೇಕಾದ ದುಡಿಮೆ ಪರಿಸ್ಥಿತಿ, ದೊಡ್ಡ ಸಂಖ್ಯೆಯ ಯುವಕರನ್ನು ಸುಲಭವಾಗಿ ದುಶ್ಚಟಗಳಿಗೆ ದಾಸರಾಗುವಂತೆ, ಬೇಜವಾಬ್ದಾರಿ ನಡವಳಿಕೆಗಳ ವ್ಯಕ್ತಿತ್ವವನ್ನು ಹೊಂದುವಂತೆ ತಳ್ಳುತ್ತಿದೆ. ಹೀಗೆ ಬಹುತೇಕ ಹೆಣ್ಣು ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಸಂಪೂರ್ಣ ಒಪ್ಪಿ ಸಂಬಂಧ ಬೆಳೆಸುವಂತಹ ಆಯ್ಕೆಯೇ ಇಲ್ಲದಂತಾಗಿದೆ.
ಕಳೆದ ಮೂವತ್ತು ವರ್ಷಗಳಿಂದ ಅಭಾದಿತವಾಗಿ ನಿರಂತರವಾಗಿ ಜಾರಿಗೊಂಡ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಎಂಬ ಆರ್ಥಿಕ ಧೋರಣೆಗಳು ಇಡೀ ರೈತ ಸಮುದಾಯವನ್ನು ದಿವಾಳಿಯಾಗಿಸುತ್ತಾ ,ದೊಡ್ಡ ಪ್ರಮಾಣದಲ್ಲಿ ವಲಸೆ ಮತ್ತು ನಿರುದ್ಯೋಗವನ್ನು ಬೆಳೆಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಆದ ದಿಡೀರ್ ಲಾಕ್ ಡೌನ್ ನಿಂದ ಹೇಗೆ ಕೋಟ್ಯಾಂತರ ಸಂಖ್ಯೆಯ ವಲಸೆ ಕಾರ್ಮಿಕರು ಸಾವಿರಾರು ಕಿ.ಮೀ ದೂರದ ತಮ್ಮ ಮನೆಗಳನ್ನು ಕಾಲು ನಡಿಗೆಯಲ್ಲಿ ಕ್ರಮಿಸುತ್ತಾ ಸಾವಿರಾರು ಜನರು ಹಾದಿಯಲ್ಲೇ ಜೀವ ಕಳೆದುಕೊಂಡರು.ಹಸಿವು ಹಾಗೂ ನಿರುದ್ಯೋಗದಲ್ಲಿ ಹೇಗೆ ನರಳಿದರು ಎಂಬುದು ನಮ್ಮ ಕಣ್ಣ ಮುಂದೆಯೇ ಇದೆ. ಇವರೆಲ್ಲರೂ ಕೃಷಿಯಿಂದ ನಷ್ಟಕ್ಕೆ ಒಳಗಾಗಿ ವಲಸೆ ಹೋದವರೇ ಆಗಿದ್ದಾರೆ.
ಹೀಗೆ ಕೃಷಿ ಬಿಕ್ಕಟ್ಟು ಅತ್ಯಂತ ಕಡಿಮೆ ಆದಾಯಕ್ಕೆ ಹೆಚ್ಚಿನ ದುಡಿಮೆಯ ಕೆಲಸ ಮಾಡಬೇಕಾದ ಒತ್ತಡದ ಅಸಂಘಟಿತ ಕಾರ್ಮಿಕ ಸಮೂಹವನ್ನೇ ಸೃಷ್ಟಿಸಿದೆ. ಈ ದುಸ್ಥಿತಿಯಲ್ಲೇ ಮದುವೆ ಬಿಕ್ಕಟ್ಟಿನ ಹೂರಣ ಅಡಗಿದೆ.
ಇದರ ಜೊತೆಗೆ ವರದಕ್ಷಿಣೆ, ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆ ,ಗಂಡು ಮಗುವಾದರೆ ಒಂದೇ ಮಗು ಸಾಕು ಎನ್ನುವವರು ಹೆಣ್ಣು ಮಗು ಒಂದೇ ಸಾಕು ಎನ್ನುವವರಿಗಿಂತ ಹೆಚ್ಚು ಇರುವಂತಹದ್ದು ಈ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ.
ಪುರುಷ ಪ್ರಧಾನ ಮೌಲ್ಯ Vs ಯುವತಿಯರಲ್ಲಿ ಬೆಳೆಯುತ್ತಿರುವ ಪ್ರಜಾಪ್ರಭುತ್ವ ಪ್ರಜ್ಞೆ
ನಮ್ಮ ಸಮಾಜದಲ್ಲಿ ಮದುವೆಯಾದ ಮೇಲೆ ಹೆಣ್ಣು, ಗಂಡನ ಮನೆಗೆ ಹೋಗಬೇಕಾದದ್ದು ಒಂದು ಗೌರವಾನ್ವಿತ ಸಾಮಾಜಿಕ ಮೌಲ್ಯವಾಗಿದೆ.ಅದೇ ಸಂದರ್ಭದಲ್ಲಿ ಹೆಂಡತಿ ಮನೆಯಲ್ಲಿ ಗಂಡ ವಾಸವಾಗಿರುವುದಕ್ಕೆ ಸಾಮಾಜಿಕ ಮನ್ನಣೆ ಇಲ್ಲ. ಗಂಡನ ಅಧೀನಳಾಗಿ ಹೆಂಡತಿ ವರ್ತಿಸಬೇಕು,ಗಂಡನ ತಂದೆ -ತಾಯಿಯನ್ನು ನೋಡಿಕೊಳ್ಳಬೇಕಾದ ಕಡ್ಡಾಯ ಕರ್ತವ್ಯ ವನ್ನು ಹೆಂಡತಿ ಯಾದವಳು ಮಾಡಲೇಬೇಕು. ಸ್ವತಂತ್ರವಾಗಿ ಮನೆಯಿಂದ ಹೊರಗೆ ಹೋಗಿ ಬರುವ ಹೆಣ್ಣುಮಕ್ಕಳನ್ನು ಹೀಯಾಳಿಸುವುದು ಹೀಗೆ ವಿವಿಧ ರೀತಿಯ ಪುರುಷ ಪ್ರಧಾನ ಮೌಲ್ಯಗಳು, ಕೃಷಿ ಬಿಕ್ಕಟ್ಟಿನ ಇಂತಹ ದಾರುಣ ಗ್ರಾಮೀಣ ಪರಿಸ್ಥಿತಿಯಲ್ಲೂ ಕುಟುಂಬಗಳ ಮತ್ತು ಗ್ರಾಮಗಳ ದಿನನಿತ್ಯದ ಜೀವನದ ಮೇಲೆ ಗಾಢವಾದ ಪ್ರಭಾವವನ್ನು ಮತ್ತು ಹಿಡಿತವನ್ನು ಉಳಿಸಿಕೊಂಡಿವೆ.
ಈ ಪುರುಷ ಪ್ರಧಾನ ಮೌಲ್ಯವು ಎಷ್ಟೋ ಹೆಣ್ಣು ಮಕ್ಕಳು ಒಂಟಿಯಾಗಿ ಜೀವನ ಕಳೆದರೂ ಪರವಾಗಿಲ್ಲ: ಮದುವೆ ಮಾತ್ರ ಆಗಬಾರದು ಎಂಬ ತೀರ್ಮಾನಕ್ಕೆ ಬಂದಿರುವುದನ್ನು ನಾವು ಕಾಣಬಹುದಾಗಿದೆ. ಯಾವ ಗಂಡು ತೋರಿದರೂ ಒಪ್ಪದೇ ಇರುವ ಮತ್ತು ಮದಯವೆಯೇ ಬೇಡ ಎಂದು ದೃಢವಾಗಿ ಹೇಳುವ ಹೆಣ್ಣು ಮಕ್ಕಳು ಕೂಡ ಹೆಚ್ಚಾಗಿದ್ದಾರೆ ಎಂಬುದೂ ಕೂಡ ಗಮನಾರ್ಹವಾದ ವಿಷಯವಾಗಿದೆ.
ಅವಿವಾಹಿತ ಹುಡುಗರ ಸಂಖ್ಯೆ ಬಗ್ಗೆ ಎಲ್ಲರೂ ಚರ್ಚಿಸುತ್ತಿದ್ದೇವೆ ,ಅದೇ ರೀತಿ ಒಂಟಿ ಮಹಿಳೆಯರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಿರುವುದನ್ನು ಕೂಡ ಗಮನಿಸಬೇಕು. ಅನಾರೋಗ್ಯ-ಆತ್ಮಹತ್ಯೆ-ಅಪಘಾತಗಳಿಂದ ಗಂಡನನ್ನು ಕಳೆದುಕೊಂಡವರು, ಗಂಡನಿಂದ ತೊರೆಯಲ್ಪಟ್ಟವರು, ವಿಚ್ಛೇದಿತರಾದವರು, ಮದುವೆಯಾಗದೇ ಉಳಿದವರು ಹೀಗೆ ಒಂಟಿ ಮಹಿಳೆಯರ ಸಂಖ್ಯೆ ಕೂಡ ತೀವ್ರವಾಗಿ ಬೆಳೆಯುತ್ತಿದೆ.
ಹಾಗಾಗಿ ಮದುವೆ ಬಿಕ್ಕಟ್ಟು ಕೇವಲ ವ್ಯಕ್ತಿಗತವಾದ ಸಮಸ್ಯೆಯಲ್ಲ. ಇದು ಒಂದು ಬಹಳ ದೊಡ್ಡ ಸಾಮಾಜಿಕ-ಆರ್ಥಿಕ ಸಮಸ್ಯೆಯಾಗಿದ್ದು ಜಾಗತೀಕರಣ ಕಾಲಘಟ್ಟದಲ್ಲಿ ನಿರಂತರವಾಗಿ ಜಾರಿಗೊಂಡು ಈಗಲೂ ಯಾವುದೇ ತೊಂದರೆಯಿಲ್ಲದಂತೆ ಮುಂದುವರೆಯುತ್ತಿರುವ ದಿವಾಳಿಕೋರ ಆರ್ಥಿಕ ಧೋರಣೆಗಳ ಸಾಮಾಜಿಕ ಪರಿಣಾಮವಾಗಿದೆ. ಈ ಆರ್ಥಿಕ ಧೋರಣೆಗಳನ್ನು ಹಿಮ್ಮೆಟ್ಟಿಸದೇ ಕೃಷಿ ಬಿಕ್ಕಟ್ಟು ನಿವಾರಣೆಯಾಗದೇ ಮದುವೆ ಬಿಕ್ಕಟ್ಟಿಗೆ ಪರಿಹಾರ ಇಲ್ಲ.