ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಆಚರಣೆಯ ಹಿನ್ನಲೆಯಲ್ಲಿ ಹೂವು ಹಣ್ಣುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ದರವೂ ಗಗನಕ್ಕೇರಿದೆ. ಕೆಆರ್ ಮಾರುಕಟ್ಟೆಯಲ್ಲಿ ಹೂವು ಹಣ್ಣು ಖರೀದಿ ಭರಾಟೆ ಜೋರಾಗಿದೆ. ಶುಕ್ರವಾರ ಹಬ್ಬದ ವೇಳೆಗೆ ದರ ಇನ್ನಷ್ಟು ಹೆಚ್ಚಾಗಬಹುದು ಎಂಬ ಕಾರಣಕ್ಕೆ ಅನೇಕರು ಬುಧವಾರವೇ ಖರೀದಿ ನಡೆಸಿದ್ದು ಗಮನಸೆಳೆಯಿತು.
ಕೆಆರ್ ಮಾರುಕಟ್ಟೆ, ಮಲ್ಲೇಶ್ವರಂ,ಗಾಂಧೀ ಬಜಾರ್, ಜಯನಗರ 4ನೇ ಬ್ಲಾಕ್ ಸೇರಿ ವಿವಿಧ ಪ್ರಮುಖ ಮಾರುಕಟ್ಟೆಗಳಲ್ಲಿ ಅನೇಕ ಗೃಹಿಣಿಯರು ವರಮಹಾಲಕ್ಷ್ಮಿ ಮೂರ್ತಿ ಮತ್ತು ಅಲಂಕಾರ ವಸ್ತುಗಳ ಖರೀದಿ ನಡೆಸುತ್ತಿದ್ದಾರೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮನೆಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಸಿದ್ಧತೆಗಳು ಜೋರಾಗಿವೆ.
ಹಬ್ಬಕ್ಕೆ ಎರಡು ದಿನ ಮುಂಚಿತವಾಗಿಯೇ ಮಧುರೈ ಮೀನಾಕ್ಷಿ, ಕಂಚಿ ಕಾಮಾಕ್ಷಿ, ದಾವಣಿ -ಲಂಗ ಧರಿಸಿದ ಕನ್ಯಾ ಕುಮಾರಿಯಂತೆ ಕಾಣುವ ವರಮಹಾಲಕ್ಷ್ಮಿ ಕಮಲದ ಹೂವಿನೊಳಗೆ ಕುಳಿತ ಲಕ್ಷ್ಮಿ, ಆದಿ ಶಕ್ತಿಯಂತೆ ಕಾಣಿಸುವ ನಿಂತ ವರಮಹಾ ಲಕ್ಷ್ಮಿ ಸೇರಿ ನಾನಾ ಬಗೆಯ ಅಲಂಕೃತಗೊಂಡ ವರ ಮಹಾಲಕ್ಷ್ಮಿ ಉತ್ಸವ ಮೂರ್ತಿಗಳು ಗಮನಸೆಳೆದಿವೆ. ಈ ಮೂರ್ತಿಗಳು ಕನಿಷ್ಠ 750 ರೂಪಾಯಿಯಿಂದ 8,000 ರೂಪಾಯಿ ಆಸುಪಾಸಿನ ದರದಲ್ಲಿ ಮಾರಾಟವಾಗುತ್ತಿವೆ.
ಇದನ್ನು ಓದಿ : ಸಿಎಂ ಸಿದ್ದರಾಮಯ್ಯ ಮಾಣೆಕ್ ಷಾ ಮೈದಾನದಲ್ಲಿ ಧ್ವಜಾರೋಹಣ
ವರಮಹಾಲಕ್ಷ್ಮೀ ಹಬ್ಬಕ್ಕಾಗಿ ತರಹೇವಾರಿ ಹೂವುಗಳನ್ನು ಅಲಂಕಾರಕ್ಕೆ ಬಳಸುತ್ತಾರೆ. ಹಣ್ಣುಗಳು ನೈವೇದ್ಯಕ್ಕೂ, ಪೂಜೆಗೂ, ಅಲಂಕಾರಕ್ಕೂ ಬಳಕೆಯಾಗುವ ಕಾರಣ ಬೇಡಿಕೆ ಹೆಚ್ಚಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದ ಕಾರಣ ಬೆಂಗಳೂರು ನಗರದ ವಿವಿಧ ಮಾರುಕಟ್ಟೆಗಳಲ್ಲಿ ಇವುಗಳ ದರ ಏರಿಕೆಯಾಗತೊಡಗಿದೆ.
ಮಲ್ಲಿಗೆ ಹೂವು ಕಿಲೋಗೆ 71,600 ರೂಪಾಯಿ, ಕನಕಾಂಬರ ಕಿಲೋಗೆ 34,000 ರೂಪಾಯಿ, ಸೇವಂತಿಗೆ 1300, ಗುಲಾಬಿ 350 ರೂಪಾಯಿ, ಸುಗಂಧ ರಾಜ 400 ರೂಪಾಯಿ, ಚೆಂಡು ಹೂವು 780 ರೂಪಾಯಿಗೆ ಬುಧವಾರ ಮಾರಾಟವಾಗಿದೆ ಎಂದು ಹೂವಿನ ವ್ಯಾಪಾರಿಗಳನ್ನು ಉಲ್ಲೇಖಿಸಿ ಪ್ರಜಾವಾಣಿ ವರದಿ ಮಾಡಿದೆ. ಇಂದು (ಆಗಸ್ಟ್ 15) ಇವುಗಳ ದರ ಇನ್ನೂ ಹೆಚ್ಚಾಗಿದೆ.
ಹಬ್ಬ ಹರಿದಿನಗಳ ಕಾರಣಕ್ಕೆ ತರಕಾರಿ ದರ ಗಗನಮುಖಿ ಎನ್ನುವಷ್ಟು ಏರಿಕೆ ಕಂಡಿಲ್ಲ. ಬಹುತೇಕ ಸ್ಥಿರವಾಗಿದ್ದು, ಮಾರುಕಟ್ಟೆಗೆ ಸೊಪ್ಪು ತರಕಾರಿಗಳ ಪೂರೈಕೆ ಸರಾಗವಾಗಿದೆ.
ಇದನ್ನು ನೋಡಿ : ಬೆಂಗಳೂರಲ್ಲಿ ಭಾರೀ ಮಳೆ : ರಸ್ತೆ ಜಲಾವೃತ, ಸಂಚಾರಕ್ಕೆ ಸಂಕಷ್ಟJanashakthi Media