ಮೈಸೂರು: ಮೈಸೂರಿನಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನ ನಿಯಂತ್ರಣ ಮಾಡೋದಕ್ಕೆ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಆದ್ರೆ ಜಿಲ್ಲಾಡಳಿತದ ಈ ಜವಾಬ್ದಾರಿಗೆ ಮೈಸೂರು ಆರೋಗ್ಯ ಇಲಾಖೆ ಸಿಬ್ಬಂದಿ ಕೈಜೋಡಿಸಿಲ್ಲವೇನೋ ಎಂಬ ಅನುಮಾನ ಮೂಡುತ್ತಿದೆ. ಪ್ರತಿದಿನ ಒಂದಿಲ್ಲೊಂದು ಎಡವಟ್ಟು ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಜನರಲ್ಲಿ ಆತಂಕದ ಜೊತೆ ಭಯ ಉಂಟಾಗುವಂತೆ ಮಾಡುತ್ತಿದ್ದಾರೆ. ಅದಕ್ಕೆ ಉದಾಹರಣೆಯಾಗಿ ನಂಜನಗೂಡಿನಲ್ಲಿ ಒಂದು ಘಟನೆ ಬೆಳಕಿಗೆ ಬಂದಿದೆ. ಕೊರೋನಾ ಸ್ಯಾಂಪಲ್ ಟೆಸ್ಟ್ ವರದಿಯಲ್ಲಿ ನೆಗೆಟಿವ್ ಬಂದರೂ ಮೊಬೈಲ್ನಲ್ಲಿ ಪಾಸಿಟಿವ್ ಅಂತ ಮೆಸೇಜ್ ಬರುತ್ತಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದ ಸಿದ್ದಪ್ಪ ಎಂಬುವರಿಗೆ ಈ ರೀತಿಯ ಕಹಿ ಅನುಭವ ಆಗಿದೆ. ಎರಡು ಬಾರಿ ಕೊರೋನಾ ಆಂಟಿಜನ್ ಟೆಸ್ಟ್ ಮಾಡಿಕೊಂಡಿರುವ ಸಿದ್ದಪ್ಪಗೆ ಟೆಸ್ಟ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೂ ಜಿಲ್ಲಾಧಿಕಾರಿ ಕಚೇರಿ ಹಾಗೂ ಆರೋಗ್ಯ ಇಲಾಖೆಯಿಂದ ಬರುತ್ತಿರುವ ಮೊಬೈಲ್ ಮೇಸೆಜ್ ಮಾತ್ರ ಪಾಸಿಟಿವ್ ಅಂತ ಬಿತ್ತರವಾಗುತ್ತಿದೆ. ಎರಡು ಬಾರಿಯೂ ಪಾಸಿಟಿವ್ ಮೆಸೇಜ್ನಿಂದ ಹತಾಶೆಯಾದ ಸಿದ್ದಪ್ಪ ತೀವ್ರ ಬೇಸರವಾಗಿದ್ದಾರೆ.
ವಾರದ ಹಿಂದೆ ಕೊರೊನಾ ಟೆಸ್ಟ್ ಮಾಡಿಸಿದ್ದ ಸಿದ್ದಪ್ಪಗೆ ಸ್ಥಳದಲ್ಲೇ ರಿಸಲ್ಟ್ ಬಂದು ನಿಮಗೆ ನೆಗೆಟಿವ್ ಇದೆ ಎಂದು ಹೇಳಿದ್ದರು. ಆದರೆ, ಎರಡು ದಿನದ ನಂತರ ಮೊಬೈಲ್ಗೆ ಬಂದ ಮೇಸೆಜ್ನಲ್ಲಿ ಪಾಸಿಟಿವ್ ಎಂದು ಬಂದಿದೆ. ಕೊನೆಗೆ ಏನೋ ಸಮಸ್ಯೆ ಆಗಿರಬಹುದು ಎಂದು ಎರಡು ದಿನ ಹಿಂದೆ ಮತ್ತೆ ಆಂಟಿಜನ್ ಟೆಸ್ಟ್ ಮಾಡಿಸಿದ ಸಿದ್ದಪ್ಪಗೆ ಮತ್ತೆ ನೆಗೆಟಿವ್ ರಿಸಲ್ಟ್ ಬಂದಿದೆ. ಆದ್ರೆ ಮತ್ತೆ ಮೊಬೈಲ್ಗೆ ಬಂದ ಮೆಸೆಜ್ನಲ್ಲಿ ಪಾಸಿಟಿವ್ ಎಂದು ಉಲ್ಲೇಖವಾಗಿದೆ. ಇದರಿಂದ ಬೇಸತ್ತಿರುವ ಸಿದ್ದಪ್ಪ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಸುಳ್ಳು ವರದಿಗಳನ್ನ ನೀಡಿ ಜನರಿಗೆ ಮೋಸ ಮಾಡ್ತಿದ್ದಾರೆಂದು ಆರೋಪಿಸಿದ್ದಾರೆ.
ಇವರ ವರದಿಗಳನ್ನ ನೋಡಿ ಹೊಳೆಗೆ ಹಾರಿ ಆತ್ಮಹತ್ಯೆಗೆ ಚಿಂತಿಸಿದ್ದೆ. ಯಾರಾದರೂ ಮೃದುಸ್ವಭಾವದ ಜನರ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಜನರು ಸರ್ಕಾರದ ವಿರುದ್ದ ಸಿಡಿದು ಬೀಳಬೇಕು. ಆಗಷ್ಟೇ ಇವರು ಕರೆಟ್ಟಾಗಿ ಕೆಲಸ ಮಾಡೋದು ಎಂದು ಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವೇಲ್ಲದರ ನಡುವೆ ಮೈಸೂರಿನಲ್ಲಿ ದಿನ ಕಳೆದಂತೆ ಏರುಗತಿಯಲ್ಲೇ ಸಾಗಿರುವ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಭೀತಿ ಹುಟ್ಟಿಸುವಂತಿದೆ. ಕೊರೊನಾ ಸೋಂಕಿತರ ಜಿಲ್ಲೆಗಳ ಪಟ್ಟಿಯಲ್ಲಿ ಮೈಸೂರು ಎರಡನೇ ಸ್ಥಾನಕ್ಕೆ ಜಿಗಿದಿದೆ. ಮೈಸೂರು ಜಿಲ್ಲೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯ ವಿಚಾರದಲ್ಲೂ ಬೆಂಗಳೂರಿನ ನಂತರ ಎರಡನೇ ಸ್ಥಾನದಲ್ಲಿದೆ. ಇಷ್ಟೇಲ್ಲ ಆದರೂ ಮೈಸೂರು ಜಿಲ್ಲೆಯ ಜನರು ಎಚ್ಚೆತ್ತುಕೊಳುತ್ತಲೇ ಇಲ್ಲ. ಇದು ಹೀಗೆ ಮುಂದುವರೆದರೆ ಮುಂಬರುವ ದಿನಗಳಲ್ಲಿ ಕೊರೋನಾ ಸೋಂಕಿನ ಹಾವಳಿ ಮತ್ತಷ್ಟು ಹೆಚ್ಚಳವಾಗುವ ಆತಂಕ ಕಟ್ಟಿಟ್ಟ ಬುತ್ತಿಯಂತಾಗಿದೆ.