ಗೌರಿ (ಹಸು), ಜಡೇಜಾ (ಹುಂಜ) ಕೋಪಿಷ್ಟ ತಂದೆ, ಹೃದಯ ತುಂಬಿದ ತಾಯಿ ಒಂದು ರಾತ್ರಿ ಕಳೆಯುವುದರೊಳಗೆ ಕುಂಡೇಸಿ ಕಾಣುವ ಜೀವನಾನುಭವದ ಹೋರಾಟ, ಅಲ್ಲಿ ನಡೆಯುವ ತುಂಟಾಟ, ಭಯ ಹೀಗೆ.. ಬಾಲ್ಯವನ್ನು ನೆನಪಿಸುವ ಪಯಣವನ್ನು ವಲವಾರ ಸಿನಿಮಾ ಮಾಡಿದೆ.
ಗುರುರಾಜ ದೇಸಾಯಿ
‘ವಲವಾರ’ ಸಿನಿಮಾ ನೋಡುತ್ತಾ ಹೋದಂತೆ ನಮ್ಮದೇ ಬಾಲ್ಯದ ದಿನಗಳು ಕಣ್ಣೆದುರು ಜೀವಂತವಾಗುತ್ತವೆ. ಗದ್ದೆ ಬದಿಯಲ್ಲಿ ಓಡಾಡುವುದು, ಮರ ಏರುವುದು, ಮಣ್ಣಿನ ವಾಸನೆ, ಗೆಳೆಯರ ಜೊತೆಗಿನ ಆಟ–ಉಡಾಳಗಿರಿ ಇವೆಲ್ಲವೂ ಸಿನಿಮಾದಲ್ಲಿ ತುಂಬ ಸಹಜವಾಗಿ ಮೂಡಿಬಂದಿವೆ. ಈ ದೃಶ್ಯಗಳನ್ನು ನೋಡಿದಾಗ ಇದು ಸಿನಿಮಾ ಅನ್ನಿಸುವುದಕ್ಕಿಂತ, ನಮ್ಮದೇ ಬದುಕಿನ ಬಾಲ್ಯವನ್ನು ನೆನಪಿಸುವ ಅನುಭವ ತರುತ್ತದೆ. ಬಾಲ್ಯವೆಂದರೆ ಮುಕ್ತತೆ, ಖುಷಿ, ಅದರ ಜೊತೆಗೆ ನಿಧಾನವಾಗಿ ಹೊಣೆಗಾರಿಕೆಗಳು ಹೇಗೆ ಸೇರುತ್ತವೆ ಎಂಬುದನ್ನು ಚಿತ್ರ ಎಳೆ ಎಳೆಯಾಗಿ ವಿವರಿಸುತ್ತಾ ಹೋಗುತ್ತದೆ.
ಈ ಸಿನಿಮಾದಲ್ಲಿ ಗ್ರಾಮೀಣ ಬದುಕಿನ ಸೊಗಡನ್ನು ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಹಳ್ಳಿ ಇಲ್ಲಿ ಕೇವಲ ಹಿನ್ನೆಲೆ ಅಲ್ಲ, ಕಥೆಯ ಜೀವವೇ ಆಗಿದೆ. ಹೊಲ, ಮನೆ ಅಂಗಳ, ರಸ್ತೆಗಳು ಎಲ್ಲವೂ ನೈಜವಾಗಿವೆ. ಇಂದಿನ ದಿನಗಳಲ್ಲಿ ನಗರೀಕರಣ ಹೆಚ್ಚುತ್ತಿರುವಾಗ, ಅಲ್ಲಿ ಮಕ್ಕಳು ತಮ್ಮ ಬಾಲ್ಯವನ್ನು ಯಾವರೀತಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಚಿತ್ರ ಗಟ್ಟಿಯಾಗಿ ಹೇಳುತ್ತದೆ. ಈ ಕಾರಣಕ್ಕೇ ‘ವಲವಾರ’ ಕೇವಲ ಮಕ್ಕಳ ಸಿನಿಮಾ ಆಗದೆ, ಬಾಲ್ಯವನ್ನು ಕಳೆದುಕೊಂಡ ಎಲ್ಲರಿಗೂ ಸಂಬಂಧಿಸಿರುವ ಸಿನಿಮಾ ಆಗುತ್ತದೆ.
ಆಟದ ನಡುವೆ ಮಕ್ಕಳ ಬದುಕಿನ ಕಷ್ಟಗಳೂ ತೆರೆದುಕೊಳ್ಳುತ್ತವೆ. ಮನೆಯ ಆರ್ಥಿಕ ಸ್ಥಿತಿ, ಪೋಷಕರ ಒತ್ತಡ, ಮಕ್ಕಳ ಮೇಲೆ ಬೀರುವ ಜವಾಬ್ದಾರಿಗಳು ಇವೆಲ್ಲವನ್ನು ನಿರ್ದೇಶಕ ಸುತಾನ್ ಗೌಡ ಸರಳವಾಗಿ, ಅರ್ಥವಾಗುವ ರೀತಿಯಲ್ಲಿ ತೋರಿಸಿದ್ದಾರೆ. ಎಲ್ಲಿಯೂ ಹೇರಿಕೆ ಮಾಡಿದಂತೆ ಎಚ್ಚರಿಕೆ ವಹಿಸಿದ್ದಾರೆ. ಮಕ್ಕಳ ಕಣ್ಣಿಂದಲೇ ಕಥೆ ಸಾಗುತ್ತದೆ. ಇದರಿಂದ ಸಿನಿಮಾ ಇನ್ನಷ್ಟು ಗಟ್ಟಿಯಅಗುತ್ತದೆ ಮತ್ತು ಮನಸ್ಸಿಗೆ ತಟ್ಟುತ್ತದೆ.

ಇದನ್ನೂ ಓದಿ : ‘ಶಸ್ತ್ರಮೇವ ಜಯತೆ’: ಧರ್ಮದ ಹೆಸರಿನಲ್ಲಿ ಹಿಂಸೆಗೆ ಕರೆ – ಸರ್ಕಾರಗಳ ಮೌನ!?
ಪಶ್ಚಿಮ ಘಟ್ಟಗಳ ಅದ್ಬುತ ಪರಿಸರದಲ್ಲಿ ವಲವಾರ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ. ಒಂದು ಕುಟುಂಬದಲ್ಲಿ ಒಂದೇ ದಿನದಲ್ಲಿ ನಡೆಯುವ ಕಥೆ ಇದಾಗಿದ್ದು ಗೌರ ಎನ್ನುವ ಹಸು ಕೂಡ ಇಲ್ಲಿ ಮುಖ್ಯ ಪಾತ್ರಧಾರಿ. “ಮಾರ್ಫ್ ಪ್ರೊಡಕ್ಷನ್ಸ್’ ಅಡಿಯಲ್ಲಿ ತಯಾರಾಗಿರುವ ಚಿತ್ರ ಇದು. ಕುಂಡೇಸಿ ಮನೆಯಲ್ಲಿರುವ ಗೌರ ಎಂಬ ಹಸುವಿನ ಸುತ್ತವೇ ಇಡೀ ಕಥೆ ಸಾಗುತ್ತದೆ. ಇನ್ನೇನು ಕರು ಹಾಕುವ ಸ್ಥಿತಿಯಲ್ಲಿರುವ ಗೌರ ಕಾಣೆಯಾದಾಗ, ಕುಂಡೇಸಿ ಎಷ್ಟೆಲ್ಲಾ ಪರಿಪಾಟಲು ಪಡುತ್ತಾನೆ? ಅದನ್ನು ಪುನಃ ಹೇಗೆ ಮನೆಗೆ ಕರೆತರುತ್ತಾನೆ. ಒಂದು ರಾತ್ರಿ ಕಳೆಯುವುದರೊಳಗೆ ಕುಂಡೇಸಿ ಕಾಣುವ ಜೀವನಾನುಭವನ್ನು ಸರಳವಾಗಿ ತೆರೆಮೇಲೆ ತೋರಿಸಿದ್ದಾರೆ.
‘ವಲವಾರ’ ಚಿತ್ರದ ದೊಡ್ಡ ಶಕ್ತಿ ಅದರ ಸರಳತೆ. ಅತಿಯಾದ ಸಂಗೀತ, ದೊಡ್ಡ ಡೈಲಾಗ್‌ಗಳು ಇಲ್ಲ. ಕಥೆ ನಿಧಾನವಾಗಿ ಸಾಗಿದರೂ ಬೇಸರ ತರದು. ಏಕೆಂದರೆ ಪ್ರತಿಯೊಂದು ದೃಶ್ಯವೂ ಬದುಕಿಗೆ ಹತ್ತಿರವಾಗಿದೆ. ಇಲ್ಲಿ ಕಥೆ ಸ್ವತಃ ಮಾತನಾಡುತ್ತದೆ. ಇದೇ ಚಿತ್ರದ ಶಕ್ತಿ .ಇನ್ನೊಂದು ಪ್ರಮುಖ ಅಂಶ ಎಂದರೆ ಕಲಾವಿದರ ಅಭಿನಯ. ಮಕ್ಕಳಾಗಲಿ, ದೊಡ್ಡವರಾಗಲಿ—ಎಲ್ಲರೂ ನಟನೆ ಮಾಡುತ್ತಿರುವಂತೆ ಕಾಣುವುದಿಲ್ಲ, ಬದುಕುತ್ತಿರುವಂತೆ ಕಾಣುತ್ತಾರೆ. ಮಾಸ್ಟರ್ ವೇದಿಕ್ (ಕುಂಡೇಸಿ) ಮತ್ತು ಮಾಸ್ಟರ್ ಶಯನ್ (ಕೊಸುಡಿ) ತಮ್ಮ ಪಾತ್ರಗಳಲ್ಲಿ ತುಂಬ ಸಹಜವಾಗಿ ಮೂಡಿಬಂದಿದ್ದಾರೆ. ತಂದೆ ಪಾತ್ರದಲ್ಲಿ ಮಾಲತೇಶ್, ತಾಯಿ ಪಾತ್ರದಲ್ಲಿ ಹರ್ಷಿತ ಗೌಡ ಅವರ ಅಭಿನಯ ಮನಸ್ಸಿಗೆ ತಟ್ಟುತ್ತದೆ. ಅಭಯ್ ಮತ್ತು ಕೀರ್ತಿ ರಮೇಶ್ ಪ್ರೇಮಿಗಳ ಪಾತ್ರಕ್ಕೆ ಚೆನ್ನಾಗಿ ಜೀವ ತುಂಬಿದ್ದಾರೆ. ಪೋಷಕ ಪಾತ್ರದಲ್ಲಿ ಕಾಮಾಕ್ಷಿಯವರೂ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ನೀಡಿದ್ದಾರೆ.
ಚಿತ್ರದ ಕ್ಲೈಮ್ಯಾಕ್ಸ್ ತುಂಬ ಅರ್ಥಪೂರ್ಣವಾಗಿದೆ. “ಜೀವಿಸಬೇಕು, ಜೀವಿಸಿ ತೋರಿಸಬೇಕು” ಎಂಬ ಸಂದೇಶ ಕೇವಲ ಮಾತಲ್ಲ, ಇಡೀ ಸಿನಿಮಾದ ಸಾರವಾಗಿದೆ. ಸಿನಿಮಾ ಮುಗಿದ ಮೇಲೂ ಅದರ ದೃಶ್ಯಗಳು, ಪಾತ್ರಗಳು ಮತ್ತು ನಮ್ಮದೇ ಬಾಲ್ಯದ ನೆನಪುಗಳು ಮನಸ್ಸಿನಲ್ಲಿ ಉಳಿಯುತ್ತವೆ.
ಒಟ್ಟಿನಲ್ಲಿ, ‘ವಲವಾರ್’ ಸರಳ ಕಥೆಯ ಮೂಲಕ ದೊಡ್ಡ ಭಾವನೆಗಳನ್ನು ಹೇಳುವ ಸಿನಿಮಾ. ಮಕ್ಕಳ ಕಥೆ ಹೇಳುತ್ತಾ, ನಮ್ಮ ಸಮಾಜದ ವಾಸ್ತವವನ್ನೂ ತೋರಿಸುತ್ತದೆ. ನನ್ನ ಅಭಿಪ್ರಾಯದಲ್ಲಿ ಈ ಸಿನಿಮಾಕ್ಕೆ 10ಕ್ಕೆ 8.5 ಅಂಕ ನೀಡಬಹುದು. ಇಂತಹ ನೈಜ ಮತ್ತು ಸಂವೇದನಾಶೀಲ ಸಿನಿಮಾಗಳು ಇನ್ನಷ್ಟು ಬರಬೇಕು.
ಇದನ್ನೂ ನೋಡಿ : ಗೋಡ್ಸೆಯ 8 ಪುಟದ ಹೇಳಿಕೆ 200 ಪುಟ ಮೀರಿದ್ದು ಹೇಗೆ? ನವ ಹಿಂದುತ್ವದ ಅಂಗಡಿ ಬಂದ್ ಮಾಡುವುದು ಹೇಗೆ?
