ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ-ಅವಳಿ ಶಿಶು ಸಾವು; ವೈದ್ಯೆ, ಮೂವರು ದಾದಿಯರ ಅಮಾನತು

ತುಮಕೂರು: ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಹಾಗೂ ಅವಳಿ ಶಿಶುಗಳ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರು, ಜಿಲ್ಲಾಸ್ಪತ್ರೆಯ ವೈದ್ಯೆ ಉಷಾ ಹಾಗೂ ಮೂವರು ದಾದಿಯರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕಸ್ತೂರಿ ತಮಿಳುನಾಡು ಮೂಲದವರಾಗಿದ್ದು, ಕಳೆದ ಒಂದು ತಿಂಗಳಿನಿಂದ ಭಾರತಿ ನಗರದಲ್ಲಿ ವಾಸವಿದ್ದರು. ಅವರನ್ನು ಜಿಲ್ಲಾಸ್ಪತ್ರೆಯು ತಾಯಿ ಕಾರ್ಡ್, ಆಧಾರ್ ಕಾರ್ಡ್ ಕೊಡುವಂತೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರು. ತಾಯಿ ಕಾರ್ಡು ಇಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯಿಂದ ಹೊರ ಕಳುಹಿಸಲಾದ ಪರಿಣಾಮ ಬಾಣಂತಿ ಮಹಿಳೆ ಹಾಗೂ ಎರಡು ನವಜಾತ ಶಿಶು ಮರಣ ಹೊಂದಿದವು. ಅಲ್ಲದೆ, ತಮ್ಮ ಬಳಿ ಹಣ ಇಲ್ಲದ ಕಾರಣ ಮಹಿಳೆ ವೈದ್ಯೆಯ ಬಳಿ ಅಂಗಲಾಚಿ ಕೇಳಿದ್ರೂ ಚಿಕಿತ್ಸೆ ಕೊಡದೆ ವೈದ್ಯೆ ನಿರ್ಲಕ್ಷ್ಯ ಮಾಡಿದ್ದಾರೆ.

ಇದನ್ನೂ ಓದಿ : ಗೋಗರೆದ್ರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ : ನೋವಿಂದ ನರಳಿದ ಗರ್ಭಿಣಿ ಸಾವು! ಜನಿಸಿದ ಅವಳಿ ಮಕ್ಕಳೂ ಬದುಕಲಿಲ್ಲ

ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ

ಬಾಣಂತಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಕರಣದಿಂದ ಎಚ್ಚೆತ್ತ ಆರೋಗ್ಯ ಇಲಾಖೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಮಾರ್ಗಸೂಚಿಯಂತೆ ಇನ್ನು ಮುಂದೆ ತುರ್ತು ಆರೋಗ್ಯ ಸೇವೆಯನ್ನು ನೀಡುವ ಸಂದರ್ಭದಲ್ಲಿ ತಾಯಿ ಕಾರ್ಡ್ ಆಧಾರ್ ಕಾರ್ಡ್, ಪಡಿತರ ಕಾರ್ಡ್ ಇತ್ಯಾದಿ ಯಾವುದೇ ದಾಖಲೆಗಳು ಸಲ್ಲಿಸುವ ಅವಶ್ಯವಿರುವುದಿಲ್ಲ ಎಂದು ಪ್ರಕಟಿಸಿದೆ.

  1. ತುರ್ತು ಆರೋಗ್ಯ ಸೇವೆಯನ್ನು ನೀಡುವ ಸಂದರ್ಭದಲ್ಲಿ ಯಾವುದೇ ದಾಖಲೆಗಳು ಅವಶ್ಯವಿರುವುದಿಲ್ಲ.
  2. ತಾಯಿ ಕಾರ್ಡ್, ಆಧಾರ ಕಾರ್ಡ್, ಪಡಿತರ ಚೀಟಿ ಇತರೆ ದಾಖಲೆಗಳು ಇಲ್ಲದೇ ಇದ್ದರೂ ಚಿಕಿತ್ಸೆ ನೀಡಬೇಕು.
  3. ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆಯನ್ನು ನೀಡುವುದು ಆರೋಗ್ಯ ಕೇಂದ್ರಗಳ ಆದ್ಯ ಕರ್ತವ್ಯವಾಗಿರುತ್ತದೆ.
  4. ಆರೋಗ್ಯ ಸೇವೆಯನ್ನು ನೀಡುವಾಗ ರೋಗಿಯ ರಾಷ್ಟ್ರೀಯತೆ, ಜಾತಿ, ವರ್ಗ, ಆರ್ಥಿಕ ಸ್ಥಿತಿಯನ್ನು ಅವಲಂಭಿಸಬಾರದು.
  5. ತುರ್ತು ಪರಿಸ್ಥಿತಿಯಲ್ಲಿ ರೋಗಿಯ ನೋವು ಸಂಕಟವನ್ನು ನಿವಾರಿಸುವುದು ವೈದ್ಯರ, ಶುಶ್ರೂಷಕರ ಮತ್ತು ಇತರೆ ಸಿಬ್ಬಂದಿ ವರ್ಗದವರ ಆದ್ಯ ಕರ್ತವ್ಯ.
  6. ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ತುರ್ತು ಪರಿಸ್ಥಿತಿಯಲ್ಲಿ ರೋಗಿಯು ಯಾವುದೇ ರೀತಿಯ ದಾಖಲೆಗಳನ್ನು ಒದಗಿಸಲು ಒತ್ತಾಯಿಸಬಾರದು.
  7. ಇಂತಹ ಘಟನೆಯು ಮರುಕಳಿಸಿದರೆ ಅಂತಹ ಅಧಿಕಾರಿ, ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗುವುದು, ಅಲ್ಲದೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುತ್ತದೆ.

ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ

ಜಿಲ್ಲಾಸ್ಪತ್ರೆಗೆ ನೆನ್ನೆ(ನವೆಂಬರ್‌ 03) ರಾತ್ರಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಮಹಿಳೆ ಸಾವನ್ನಪ್ಪಿದ ಪ್ರಕರಣದ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.

ಆರೋಗ್ಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ, ಮೂವರು ವೈದ್ಯರನ್ನು ಒಳಗೊಂಡ ತಂಡ ರಚಿಸಲಾಗುವುದು. ಎರಡು ವಾರದಲ್ಲಿ ವರದಿ ನೀಡಲಿದ್ದು, ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಒಂದೇ ಲಿಂಕ್‌ನಲ್ಲಿ ಜನಶಕ್ತಿ ಮೀಡಿಯಾದ ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ನ್ನು ನೋಡಬಹುದು

Donate Janashakthi Media

Leave a Reply

Your email address will not be published. Required fields are marked *