ಬೆಂಗಳೂರು : ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಮತ್ತು ಆಕೆಯ ಅವಳಿ ಮಕ್ಕಳು ಬಲಿಯಾದ ಪ್ರಕರಣದ ಬೆನ್ನಲ್ಲೇ, ನಗರದ ಇಂದಿರಾಗಾಂಧಿ ಆಸ್ಪತ್ರೆಯಲ್ಲೂ ವೈದ್ಯರ ನಿರ್ಲಕ್ಷ್ಯಕ್ಕೆ ನಾಲ್ಕು ವರ್ಷದ ಮಗು ಬಲಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಜಾಲಹಳ್ಳಿಯ ಡೇವಿಡ್ ಎಂಬುವರ ನಾಲ್ಕು ವರ್ಷದ ಮಗು ಡಾರ್ವಿನ್ ಪ್ರಾಣ ಕಳೆದುಕೊಳ್ಳಲು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಪೋಷಕರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಪೋಷಕರು ಹಾಗೂ ಅವರ ಕಡೆಯ ಸಂಬಂಕರು ಪ್ರತಿಭಟನೆ ನಡೆಸಿದ ಪರಿಣಾಮ ವೈದ್ಯರು ಗೇಟ್ ಲಾಕ್ ಮಾಡಿಕೊಂಡು ಆಸ್ಪತ್ರೆಯಲ್ಲಿ ಕಾಲ ಕಳೆಯುವಂತಾಗಿತ್ತು.
ಜಾಲಹಳ್ಳಿಯ ಡೇವಿಡ್ ಎಂಬುವರು ಅನಾರೋಗ್ಯಕ್ಕೆ ಈಡಾಗಿದ್ದ ಡಾರ್ವಿನ್‍ನನ್ನು ಇಂದಿರಾಗಾಂ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆ ಮಗುವಿಗೆ ಟ್ರೈನಿ ಡಾಕ್ಟರ್‍ಗಳು ಚಿಕಿತ್ಸೆ ನೀಡಿದ್ದ ಪರಿಣಾಮ ನನ್ನ ಮಗ ಸಾವನ್ನಪ್ಪಲು ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಬೆನ್ನುಮೂಳೆಯಲ್ಲಿ ನೀರು ತೆಗೆಯಲು, ಪೋಷಕರ ಅನುಮತಿ ಪಡೆಯದೇ ಚಿಕಿತ್ಸೆ ನೀಡಿದ್ದಾರೆ ನಂತರ ಡೆತ್ ಆಗಿರೋ ಮಗುವನ್ನ ಆಂಬ್ಯುಲೆನ್ಸ್ ಗೆ ಶಿಫ್ಟ್ ಮಾಡಿ, ಮತ್ತೆ ಆಸ್ಪತ್ರೆಗೆ ಕರೆ ತಂದು ಜೀವ ಹೋಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ಹೊರ ಹಾಕಿದ್ದಾರೆ.