ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಅನ್ವಯ ಮೈಸೂರು ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿ, ಪದವಿ ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕದಲ್ಲಿ ಪ್ರಕೃತಿ ಚಿಕಿತ್ಸೆ ಹೆಸರಿನಲ್ಲಿ ಅಳವಡಿಸಿರುವ ವಿಷಯಗಳು ಮೌಢ್ಯಾಚಾರಣೆ ಒಳಪಡಿಸುವ ಅಂಶಗಳಾಗಿವೆ. ಇದು ಪೋಷಕರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳನ್ನು ತಪ್ಪು ದಾರಿಗೆಳೆಯುವುದಿಲ್ಲವೇ ಎಂದು ಜಾಗೃತ ನಾಗರಿಕರು ಕರ್ನಾಟಕ ಎಂದು ಪ್ರಶ್ನಿಸಿದೆ.
ಜಾಗೃತ ನಾಗರಿಕರು ಕರ್ನಾಟಕ ಬಹಿರಂಗ ಪತ್ರವನ್ನು ಬಿಡುಗಡೆ ಮಾಡಿದ್ದು, ಕೆಲವು ಅಂಶಗಳ ಬಗ್ಗೆ ಟಿಪ್ಪಣಿಯನ್ನು ಮಾಡಿದೆ.
ನಿವೃತ್ತ ಪ್ರಾಂಶುಪಾಲ ಕೆ. ಬೈರಪ್ಪನವರ ‘ವೈದ್ಯಕೀಯ ಸಮಾಜಶಾಸ್ತ್ರ’ ಪುಸ್ತಕದ ಮುಖಪುಟದಲ್ಲಿ “ಬಿ. ಎ. ಆರ್ಟ್ಸ್ ಕೋರ್ಸ್ 5ನೇ ಸೆಮಿಸ್ಟರ್ ಪಠ್ಯಪುಸ್ತಕದ ಒಳ ಪುಟಗಳಲ್ಲಿ ‘ಪ್ರಕೃತಿ ಚಿಕಿತ್ಸೆ ಹೆಸರಿನಲ್ಲಿ ಮೂತ್ರ ಚಿಕಿತ್ಸೆ, ಗೋಮೂತ್ರ ಚಿಕಿತ್ಸೆ, ಶಂಕು ಚಿಕಿತ್ಸೆ, ಚುಟ್ಕಿ ಚಿಕಿತ್ಸೆ, ತೈಲ ಚಿಕಿತ್ಸೆ, ಸಿದ್ಧ ವೈದ್ಯ ಪದ್ಧತಿ, ಜ್ಯೂಸ್ ಚಿಕಿತ್ಸೆ’ ಇತ್ಯಾದಿ ವಿಧಾನಗಳ ಮೌಢ್ಯಾಚರಣೆಯ, ಪುರಾವೆಗಳಿಲ್ಲದ ಅಧ್ಯಾಯಗಳಿವೆ.
ಹತ್ತು ಅಧಿಕೃತವಲ್ಲದ, ಪರಿಶೀಲನೆ ಮಾಡದ ಅವೈಜ್ಞಾನಿಕ, ಮೌಢ್ಯಾಚರಣೆಯ ಪುಸ್ತಕವನ್ನು ಸಮಾಜಶಾಸ್ತ್ರ ಪಠ್ಯಪುಸ್ತಕ ರಚನಾ ಮಂಡಳಿ ಅಧ್ಯಕ್ಷ ರಾಮೇಗೌಡ ಮತ್ತು ಸದಸ್ಯರ ಸಮಿತಿ ಪರಿಶೀಲಿಸದೆ, ಪರಿಷ್ಕರಿಸದೆ ರೆಫರೆನ್ಸ್ ಪುಸ್ತಕ ಎಂದು ಪರಿವಿಡಿಯಲ್ಲಿ ಉಲ್ಲೇಖಿಸಿದೆ. ಯಾವುದನ್ನೂ ಕೂಲಂಕುಶವಾಗಿ ಪರಿಶೀಲಿಸದೆ ಅಧಿಕೃತವಾಗಿ ರೆಫರೆನ್ಸ್ ಎಂದು ಹಾಕುವುದು ತಪ್ಪು ನಡೆಯಾಗುತ್ತದೆಯಲ್ಲವೇ? ನಿಮ್ಮ ಸಮಿತಿಯ ಉತ್ತರದಾಯಿತ್ವವೇನು? ಎಂದು ಜಾಗೃತ ನಾಗರಿಕರು ಕರ್ನಾಟಕ ಪ್ರಶ್ನಿಸಿದೆ.
ಪಠ್ಯಕ್ರಮ ರಚನಾ ಮಂಡಳಿ ಅಧ್ಯಕ್ಷ ಪ್ರೊ.ಎ.ರಾಮೇಗೌಡ, “ಎನ್.ಇ.ಪಿ. ಪಠ್ಯಕ್ರಮದಂತೆ ಆರೋಗ್ಯ ಸಮಾಜಶಾಸ್ತ್ರ ಪರಿಚಯಿಸಲಾಗಿದೆ. ಆದರೆ ಪೂರ್ಣ ಪಠ್ಯಕ್ರಮ ಅಂತಿಮವಾಗಿಲ್ಲ. ಲೇಖಕರು ಏಕೆ ಹಾಗೆ ಬರೆದಿದ್ದಾರೆ ಎನ್ನುವ ಮಾಹಿತಿ ಇಲ್ಲ” ಎಂದು ಹೇಳಿರುವುದು ವರದಿಯಾಗಿದೆ. ಅಂದರೆ ಮುಖ್ಯ ಪಠ್ಯಪುಸ್ತಕವೇ ಅಂತಿಮವಾಗಿಲ್ಲ, ಆದರೆ ಅದರ ರೆಫರೆನ್ಸ್ ಪುಸ್ತಕ ಪ್ರಕಟಗೊಂಡು ವಿದ್ಯಾರ್ಥಿಗಳು ಓದುತ್ತಿದ್ದಾರೆ ಎನ್ನುವ ಸಂಗತಿಯೇ ಆತಂಕಕಾರಿಯಾಗಿದೆ.
ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್. ಶಿವಪ್ಪನವರು ‘ಪರಾಮರ್ಶನ ಪುಸ್ತಕಕ್ಕೂ ಮತ್ತು ವಿ.ವಿ. ಗೂ ಸಂಬಂಧವಿಲ್ಲ ಎಂದು ಹೇಳಿರುವುದು ವರದಿಯಾಗಿದೆ.
ಈ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಪರಾಮರ್ಶನ ಪುಸ್ತಕದ ವಿಚಾರಗಳಿಗೂ ನಮಗೂ ಸಂಬಂಧವಿಲ್ಲ ಎನ್ನುವುದು ಪಕ್ಕಾ ಹೊಣೆಗೇಡಿತನ. ಮೊದಲನೆಯದಾಗಿ ಆಯ್ಕೆ ಮಾಡಿದ್ದು ಯಾರು? ಯಾಕೆ ಆಯ್ಕೆ ಮಾಡಲಾಗಿದೆ? ಪರಾಮರ್ಶನ ಪುಸ್ತಕಗಳ ಉದ್ದೇಶವೇನು? ವೈಜ್ಞಾನಿಕ ಜ್ಞಾನಾರ್ಜನೆ, ವ್ಯಕ್ತಿತ್ವ ವಿಕಸನ ಮುಖ್ಯ ಉದ್ದೇಶವಾಗಿರುವ ಶಿಕ್ಷಣದಲ್ಲಿ ಪರಾಮರ್ಶನ ಪುಸ್ತಕಗಳು ಸಹ ಮೌಲ್ಯಯುತವಾಗಿರಬೇಕು. ಆದರೆ ಮೈಸೂರು ವಿವಿಯ ಈ ಹೇಳಿಕೆ ಇದನ್ನು ಉಲ್ಲಂಘಿಸುವಂತಿದೆ ಎಂದು ಜಾತೃತ ನಾಗರಿಕರು ಕರ್ನಾಟಕ ಆರೋಪಿಸಿದೆ.
ಲೇಖಕರು 5ನೇ ಸೆಮಿಸ್ಟರ್, ಎನ್.ಇ.ಪಿ. ಪಠ್ಯವೆಂದು ಅನಧಿಕೃತವಾಗಿ, ಕಾನೂನುಬಾಹಿರವಾಗಿ ಹೇಗೆ ಹಾಕಿಕೊಂಡರು? ಇದಕ್ಕೆ ಅನುಮತಿ ಕೊಟ್ಟವರಾರು? ಎನ್.ಇ.ಪಿ. ಅಡಿಯಲ್ಲಿ ಕೇವಲ ಎರಡು ಸೆಮಿಸ್ಟರ್ ಆಗಿದೆ. ಹೀಗಾಗಿ ಐದನೇ ಸೆಮಿಸ್ಟರ್ ಪುಸ್ತಕವನ್ನು ಎನ್.ಇ.ಪಿ. ಎಂದು ಪ್ರಚಾರ ಮಾಡುವುದು ಕಾನೂನು ವಿರೋಧವಲ್ಲವೇ? ಎಂದು ಪ್ರಶ್ನಿಸಲಾಗಿದೆ.
ಪ್ರೊ. ಕೆ. ಬೈರಪ್ಪನವರು ಬರೆದ ಮೌಢ್ಯಾಚರಣೆಯ ವಿಚಾರಗಳಿಗೂ ಆರೆಸ್ಸಸ್ ಬಿಜೆಪಿ ಮುಖಂಡರ ಹೇಳಿಕೆಗಳಿಗೂ ಸಾಮ್ಯತೆಯಿದೆ. ಪರಾಮರ್ಶನ ಪುಸ್ತಕದ ನೆಪದಲ್ಲಿ ಶಿಕ್ಷಣದಲ್ಲಿಯೂ ಇದು ಸೇರಿಕೊಳ್ಳುವ ಅಪಾಯವಿದೆ. ಇದು ಸಹ ಕಳವಳಕಾರಿಯಾಗಿದೆ. ಏಕೆಂದರೆ ಇತ್ತೀಚಿನ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಇದಕ್ಕೊಂದು ಉದಾಹರಣೆ. ಮುಖ್ಯವಾಗಿ ವಿದ್ಯಾರ್ಥಿಗಳು ಈ ಪುಸ್ತಕವನ್ನು ಓದುತ್ತಿದ್ದಾರೆ. ಅನೇಕ ಕಡೆ ಶಿಕ್ಷಕರು ಇದನ್ನು ಶಿಫಾರಸು ಮಾಡುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಾಗೃತ ನಾಗರಿಕರು ಕರ್ನಾಟಕ ತಿಳಿಸಿದೆ.
ಈ ವಿವಾದದ ಕುರಿತು ಸ್ಪಷ್ಟೀಕರಣ ನೀಡಬೇಕೆಂದು ಮತ್ತು ಈ ಕೂಡಲೇ ಪುಸ್ತಕದ ಬೋಧನೆಯನ್ನು ತಡೆ ಹಿಡಿಯಬೇಕೆಂದು ಜಾಗೃತ ನಾಗರಿಕರು ಕರ್ನಾಟಕ ಪರವಾಗಿ, ಪ್ರೊ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ವಿಜಯಾ, ಪ್ರೊ.ರಾಜೇಂದ್ರ ಚೆನ್ನಿ, ವಿಮಲಾ.ಕೆ.ಎಸ್., ಡಾ.ಬಂಜಗೆರೆ ಜಯಪ್ರಕಾಶ್, ಶ್ರೀಪಾದ ಭಟ್, ಟಿ.ಸುರೇಂದ್ರ ರಾವ್, ಡಾ.ಮೀನಾಕ್ಷಿ ಬಾಳಿ, ಕೆ.ನೀಲಾ, ಡಾ.ವಸುಂಧರಾ ಭೂಪತಿ, ಡಾ.ವಿ.ಪಿ.ನಿರಂಜನಾರಾಧ್ಯ, ವಾಸುದೇವ ಉಚ್ಚಿಲ್, ಡಾ.ಲೀಲಾ ಸಂಪಿಗೆ, ಡಾ.ಎನ್.ಗಾಯತ್ರಿ, ಯೋಗಾನಂದ, ಅಮರೇಶ ಕಡಗದ ವಿನಂತಿಸಿಕೊಂಡಿದ್ದಾರೆ.