ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಸದ್ಯ ಜಾರಿಯಲ್ಲಿರುವ ರಾತ್ರಿ ಸಂಚಾರ ನಿರ್ಬಂಧವನ್ನು ಹಂತ ಹಂತವಾಗಿ ಸಡಿಲಿಸುವ ಬಗ್ಗೆ ಹಾಗೂ ಇದೇ ವೇಳೆ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಪುರುಷರ ಪ್ರಯಾಣಕ್ಕೆ ನಿರ್ಬಂಧ ವಿಧಿಸುವ ಬಗ್ಗೆ ಪೊಲೀಸ್ ಇಲಾಖೆ ಮುಂದಾಗಿದೆ.
ಮಂಗಳೂರಿನ ಕಮಿಷನರ್ ಕಚೇರಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಪೊಲೀಸ್ ಹಾಗೂ ನಗರ ಕಮಿಷನರ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ಜೊತೆ ರಾಜ್ಯ ಪೊಲೀಸ್ ಉಪಮಹಾನಿರ್ದೇಶಕ ಅಲೋಕ್ ಕುಮಾರ್ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಹಿತಕರ ಘಟನೆ ನಿಯಂತ್ರಿಸುವ ಸಲುವಾಗಿ ಸಂಜೆ 6 ರಿಂದ ಬೆಳಗ್ಗೆ 6ರ ವರೆಗೆ ಹಾಕಿರುವ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಸಲಾಗುವುದು. ದ್ವಿಚಕ್ರವಾಹನಗಳಲ್ಲಿ ಸಂಚರಿಸುವ ಸಹಸವಾರರ ಮೇಲೆ ಹೆಚ್ಚಿನ ನಿಗಾ ಇರಿಸಲಾಗುವುದು ಎಂದರು.
ಜಾರಿಯಲ್ಲಿರುವ ನಿರ್ಬಂಧಗಳನ್ನು ಇನ್ನೂ ಕೆಲವು ದಿನ ಮುಂದುವರಿಯಲಿದೆ. ಕೆಲವು ನಿರ್ಬಂಧಗಳಿಗೆ ವಿನಾಯಿತಿ ನೀಡಲಾಗಿದೆ. ಕೆಲವೊಮ್ಮೆ ಹಿಂಬದಿ ಸವಾರರಿಂದಲೇ ಅಪಾಯವಾಗುವ ಸಾಧ್ಯತೆ ಇದೆ. ಈ ಹಿಂದೆ ಅನೇಕ ಕಡೆಗಳಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. 18 ವರ್ಷದ ಒಳಗಿನ ಮಕ್ಕಳು, ಹಿರಿಯ ನಾಗರಿಕರಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗುವುದು. ಇತರ ರಾಜ್ಯಗಳ ಮಾದರಿಯಲ್ಲಿ ಇಲ್ಲಿಯೂ ಅವರ ಮೇಲೆ ನಿಗಾ ಇರಿಸಲಾಗುತ್ತದೆ’ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ. ಕಳೆದ ಒಂದು ವಾರದಿಂದ ಜನರು ಶಾಂತಿಯುತವಾಗಿ ಓಡಾಡುತ್ತಿದ್ದಾರೆ. ಕಿಡಿಗೇಡಿಗಳ ಮೇಲೆಯೂ ನಾವು ಕಣ್ಗಾವಲು ಇಟ್ಟಿದ್ದೇವೆ. ಅದಕ್ಕಾಗಿಯೇ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಈ ಮೂಲಕ ಸಮಾಜಕ್ಕೂ ಧೈರ್ಯ ತುಂಬಲಾಗುತ್ತಿದೆ. ಕ್ರಿಮಿನಲ್‍ಗಳನ್ನು ಕ್ರಿಮಿನಲ್‍ಗಳನ್ನಾಗಿಯೇ ಉಪಚರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
2015ರ ನಂತರದ ಮತೀಯ ಗಲಭೆ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳು ಎಲ್ಲಿದ್ದಾರೆ, ಅವರ ಮೇಲೆ ಯಾವ ರೀತಿಯ ನಿರ್ಬಂಧಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. 2018ರ ದೀಪಕ್ ರಾವ್ ಪ್ರಕರಣ, ಶರತ್ ಮಡಿವಾಳ, ಪಿಂಕಿ ನವಾಝ್ ಪ್ರಕರಣ, ವಿಟ್ಲದ ಕೊಲೆ ಪ್ರಕರಣಗಳು ಯಾವ ಹಂತದಲ್ಲಿದೆ? ಯಾರಿಂದಲಾದರೂ ಒತ್ತಡ ಇದೆಯೇ? ಸಾಕ್ಷಿಗಳು ಏನು ಹೇಳುತ್ತಾರೆ ಎಂಬ ಬಗ್ಗೆ, ಇಂತಹ ಯಾವುದೇ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಗೊಂಡ ಬಳಿಕ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆಯೇ ಈ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಮಂಗಳೂರು ಜೈಲಿಗೂ ಭೇಟಿ ನೀಡಿದ್ದೇನೆ. ಸ್ಥಳೀಯ ಜೈಲುಗಳ ಮೇಲೆಯೂ ನಾವು ನಿಗಾ ವಹಿಸಬೇಕಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ವಹಿಸಬೇಕಾಗಿದೆ.
ಜಿಲ್ಲಾ ಪೊಲೀಸ್ ವತಿಯಿಂದ ಗಡಿಪ್ರದೇಶಗಳಲ್ಲಿ 12 ಕಡೆ ಹಾಗೂ ನಗರ ಪೊಲೀಸ್ ವ್ಯಾಪ್ತಿಯಲ್ಲಿ 6 ಕಡೆಗಳಲ್ಲಿ ಚೆಕ್‌ಪೋಸ್ಟ್ ಹಾಕಲಾಗಿದೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಹಾಗೂ ಅಹಿತಕರ ಘಟನೆಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಮುಂದಿನ ಒಂದು ವರ್ಷ ಕಾಲ ಚೆಕ್‌ಪೋಸ್ಟ್‌ಗಳು ಕಾರ್ಯವಹಿಸಲಿವೆ ಎಂದರು.
ಸಭೆಯಲ್ಲಿ ಐಜಿಪಿ ದೇವಜ್ಯೋತಿ ರೇ, ಕಮಿಷನರ್ ಶಶಿಕುಮಾರ್, ಉಡುಪಿ ಎಸ್ಪಿ ವಿಷ್ಣುವರ್ಧನ್, ದ.ಕ ಎಸ್ಪಿ ರಿಷಿಕೇಶ್ ಸೋನಾವಣೆ ಪಾಲ್ಗೊಂಡಿದ್ದರು.