ಬೆಂಗಳೂರು : “ಹೊಸ ಶಿಕ್ಷಣ ನೀತಿ ಅಂಗನವಾಡಿ ಕೇಂದ್ರಗಳ ಪಾಲಿನ ನೇಣುಗಂಬವಾಗಿದ್ದು, ಯಾವುದೇ ಕಾರಣಕ್ಕೂ ಅಂಗನವಾಡಿ ಶಿಕ್ಷಕಿಯರು ಇದಕ್ಕೆ ಬಲಿಪಶುಗಳಾಗಬಾರದು. ಈ ನೇಣುಗಂಬವನ್ನು ನಾಶಮಾಡಲು ಹೋರಾಟಕ್ಕೆ ಸಜ್ಜಾಗಬೇಕು’ ಎಂದು ಡಾ. ವಡ್ಡಗೆರೆ ನಾಗರಾಜಯ್ಯ ಕರೆ ನೀಡಿದರು.
ಅವರು, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆ, ಇಂದು ಬೆಂಗಳೂರು ನಗರದ ಸ್ಕೌಟ್ ಮತ್ತು ಗೈಡ್ಸ್ ಕಚೇರಿಯ ಸಭಾಂಗಣದಲ್ಲಿ ‘ಹೊಸ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳ ಮೇಲಾಗುವ ಪರಿಣಾಮಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಎನ್.ಇ.ಪಿ ಯನ್ನು ಜಾರಿ ಮಾಡುವ ಮೂಲಕ ಕರ್ನಾಟಕ ಮೊದಲ ಬಲಿಪಶುವಾದ ರಾಜ್ಯವಾಗಿದೆ. ಹೊಸ ಶಿಕ್ಷಣ ನೀತಿಯನ್ನು ಎಲ್ಲಿಯೂ ಚರ್ಚೆ ನಡೆಸಿಲ್ಲ. ಇದು ಶಿಕ್ಷಣದ ವ್ಯಾಪಾರೀಕರಣವನ್ನು ಪ್ರತಿಪಾದಿಸುತ್ತದೆ. ‘ಸನಾತನವಾದಿ ಶಿಕ್ಷಣ ವ್ಯವಸ್ಥೆಗೆ ನಾಂದಿ ಹಾಡುವುದನ್ನು ತಡೆಯಬೇಕಿದೆ. ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಾವಿತ್ರಿ ಬಾಯಿ ಫುಲೆ ಅವರ ಕನಸಿನ ಶಿಕ್ಷಣ ನಮಗೆ ಬೇಕಿದೆ’ ಆ ನಿಟ್ಟಿನಲ್ಲಿ ನಿಮ್ಮ ಆಂದೋಲನ ಬಲಗೊಳ್ಳಲಿ ಎಂದು ಕರೆ ನೀಡಿದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್ ವಿಮಲಾ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಾ, ಈ ನೀತಿಯ ಕುರಿತು ಎಲ್ಲಿಯೂ ಚರ್ಚೆ ನಡೆಸಿಲ್ಲ. ರಾಜ್ಯದಲ್ಲಿ ಈಗಾಗಲೇ ಜಾರಿ ಮಾಡಲಾಗಿದೆ. ಆದರೆ ಈ ನೀತಿಯ ಸಾಧಕ ಬಾಧಕಗಳನ್ನು ಕನಿಷ್ಟ ಸಚಿವ ಸಂಪುಟದಲ್ಲೂ ಚರ್ಚೆ ನಡೆಸದೆ ಜಾರಿ ಮಾಡಲಾಗಿದೆ. ರಾಜ್ಯದಲ್ಲಿ ಅಪೌಷ್ಠಿಕತೆ ಹೆಚ್ಚಿದೆ. ನಗರ ಪ್ರದೇಶದಲ್ಲಿ 32.5% ಹಾಗೂ ಗ್ರಾಮೀಣ ಪ್ರದೇಶದಲ್ಲಿ 37.5% ರಷ್ಟು ಅಪೌಷ್ಠಕತೆ ಇದೆ. ರಾಜ್ಯದಲ್ಲಿ ಪ್ರತಿ 5 ಮಗುವಿಗೆ ಒಂದು ಮಗು ಅಪೌಷ್ಠಿಕತೆಯಿಂದ ನರಳುತ್ತಿದೆ. ಹಾಗಾಗಿ ಅಂಗನವಾಡಿಗಳನ್ನು ಬಲ ಪಡಿಸಿದರೆ ಮಾತ್ರ ಈ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ. ‘ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ವಾಪಸು ಪಡೆಯಬೇಕು. ಐಸಿಡಿಎಸ್ ಯೋಜನೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು. ಹೊಸ ಶಿಕ್ಷಣ ನೀತಿಯ ಅಪಾಯಗಳನ್ನು ಪೋಷಕರ ಬಳಿಗೆ ಒಯ್ಯಬೇಕಿದೆ ಆ ನಿಟ್ಟಿನಲ್ಲಿ ಅಂದೋಲನ ರೂಪಗೊಳ್ಳಬೇಕು ಎಂದು ಕರೆ ನೀಡಿದರು.
ಶಿಕ್ಷಣ ತಜ್ಞ ಬಿ ಶ್ರೀಪಾದ್ ಭಟ್ ಮಾತನಾಡಿ ಹೊಸ ಶಿಕ್ಷಣ ನೀತಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಭಲಗೊಳಿಸುತ್ತದೆ. ಅಂಗನವಾಡಿ ವ್ಯವಸ್ಥೆಯನ್ನು ಹೊಸ ಶಿಕ್ಷಣ ನಾತಿ ನಾಶ ಪಡಿಸುತ್ತದೆ ಎಂದು ಆತಂಕವನ್ನು ವ್ಯಕ್ತ ಪಡಿಸಿದರು. 2030 ಕ್ಕೆ ಶಿಕ್ಷಣವನ್ನು ಬಲಪಡಿಸುವುದಾಗಿ ಈ ನೀತಿ ಹೇಳುತ್ತಿದೆ ಇದು ಶುದ್ಧ ಸುಳ್ಳು. ಸರಕಾರದ ವರದಿ ಪ್ರಕಾರ ದೇಶದಲ್ಲಿ 75% ಜನರಿಗೆ ಇಂಗ್ಲೀಷ ಬರುವುದಿಲ್ಲ ಎಂದು ಸರಕಾರವೇ ಹೇಳುತ್ತಿದೆ. ಆದರೆ ಈ ನೀತಿಯನ್ನು ಇಂಗ್ಲೀಷನಲ್ಲಿ ಪ್ರಕಟಿಸಿರುವುದರ ಅಪಾಯವನ್ನು ಅರಿಯಬೇಕು. ಎಲ್ಲರ ಒತ್ತಾಯದ ಮೇರೆಗೆ ರಾಜ್ಯಗಳ ಭಾಷೆಯಲ್ಲಿ ತರಲಾಯಿತು. ಅದು ಕೇವಲ ಮುಖ್ಯಾಂಶಗಳು ಮಾತ್ರ ಇವೆ. ಈ ನೀತಿಗೆ ಆಶಯ ಇದೆ, ಆದರೆ ಗುರಿ ಇಲ್ಲ. ಕೇವಲ ಆಶಯ ಇದ್ದರೆ ಸಾಲದು ಗುರಿ ಇಲ್ಲದ ಈ ಶಿಕ್ಷಣ ನೀತಿ ಉಳ್ಳವರ ಪರವಾದ ಶಿಕ್ಷಣವನ್ನು ರೂಪಿಸುತ್ತದೆ ಎಂದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ‘ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಹೇರುತ್ತಿರುವ ಉದ್ದೇಶಿತ ನೀತಿಯಲ್ಲಿನ ಬಾಲವಾಟಿಕಾದಲ್ಲಿ ಅಂಗನವಾಡಿ ಪಠ್ಯಕ್ರಮ ಏಕಿಲ್ಲ’ ಎಂದು ಪ್ರಶ್ನಿಸಿ, ‘ಇದು ವಿಶ್ವ ಹಿಂದೂ ಪರಿಷತ್ ಪ್ರತಿಪಾದಿಸುವ ಮನುವಾದಿ ಶಿಕ್ಷಣ ನೀತಿಯಾಗಿದೆ’ ಎಂದು ಕಿಡಿ ಕಾರಿದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್ ಸುನಂದಾ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಐಸಿಡಿಎಸ್ ಉಳಿಸುವ ಹೋರಾಟ ಬಲಗೊಳ್ಳಲಿದೆ, ಕೇಂದ್ರ ರಾಜ್ಯ ಸರಕಾರಕ್ಕೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು. ಸಂಘಟನೆಯ ಉಪಾಧ್ಯಕ್ಷರಾದ ಟಿ ಲೀಲಾವತಿ ಪ್ರತಿಜ್ಞಾವಿಧಿ ಬೋಧಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಅಂಗನವಾಡಿ ನೌಕರರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಎನ್ ಇ ಪಿ ವಿರೋಧಿಸಲು ಹಳ್ಳಿ ಹಳ್ಳಿಗೆ ಆಂದೋಲನವನ್ನು ರೂಪಿಸುವ ಮಹತ್ವದ ನಿರ್ಣಯಗಳನ್ನು ವಿಚಾರ ಸಂಕಿರಣದಲ್ಲಿ ಕೈಗೊಳ್ಳಲಾಯಿತು.