ಇದು ವ್ಯಾಕ್ಸೀನ್ ರಾಷ್ಟ್ರವಾದವಲ್ಲ, ವ್ಯಾಕ್ಸೀನ್ ವರ್ಣಬೇಧ !!

ಜಗತ್ತಿನ ಶೇ. 16 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಶ್ರೀಮಂತ ದೇಶ/ಪ್ರದೇಶಗಳು (ಯು.ಎಸ್, ಕೆನಡಾ, ಯುಕೆ, ಯುರೋಕೂಟ) ಜಾಗತಿಕ ವ್ಯಾಕ್ಸೀನ್ ಪೂರೈಕೆಯ ಅರ್ಧದಷ್ಟನ್ನು ಬಾಚಿಕೊಂಡಿವೆ. ಯು.ಎಸ್‌ ಒಂದೇ ಪಡೆದ ವ್ಯಾಕ್ಸೀನ್, ಅದರ ನಾಲ್ಕರಷ್ಟು ಜನ ಸಂಖ್ಯೆ ಹೊಂದಿರುವ ಇಡೀ ಆಫ್ರಿಕಾಖಂಡದ 14 ಪಟ್ಟು!ಎಲ್ಲ ವ್ಯಾಕ್ಸೀನ್‌ಉತ್ಪಾದನೆಯನ್ನು ಬಾಚಿಕೊಳ್ಳುತ್ತಿರುವ ಈ ಶ್ರೀಮಂತ ದೇಶ/ಪ್ರದೇಶಗಳು ಉತ್ಪಾದಿತ ವ್ಯಾಕ್ಸೀನಿನ ರಫ್ತು ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಿವೆ. ಮಾತ್ರವಲ್ಲಇತರೆಡೆ ವ್ಯಾಕ್ಸೀನ್‌ಉತ್ಪಾದನೆಗೆ ಬೇಕಾದ ಮಧ್ಯಂತರ ಉತ್ಪನ್ನಗಳ ಮತ್ತು ಕಚ್ಚಾ ವಸ್ತುಗಳ ರಫ್ತಿನ ಮೇಲೂ ನಿಷೇಧ ಹೇರಿವೆ. ಇದನ್ನು ತೆರವು ಮಾಡದಿದ್ದರೆ, ವ್ಯಾಕ್ಸೀನ್ ನ ಜಾಗತಿಕ ಉತ್ಪಾದನಾ ಸರಣಿಯ ಕುರಿತು ಶ್ರೀಮಂತ ದೇಶಗಳು ತಮ್ಮ ಸ್ವಾರ್ಥಿದೃಷ್ಟಿಕೋಣ ಬಿಟ್ಟು ಸಮಗ್ರ ದೃಷ್ಟಿಕೋಣ ಹೊಂದದಿದ್ದರೆ, ಕೊವಿಡ್ ನ್ನು ಸೋಲಿಸುವುದು ಆಗದ ಮಾತು. ಜಗತ್ತಿನಎಲ್ಲ ದೇಶಗಳಲ್ಲಿ ವ್ಯಾಕ್ಸೀನ್ ಲಭ್ಯತೆ ಮೂಲಕ ಕೊವಿಡ್ ಮೂಲೋತ್ಪಾಟನೆ ಆಗದಿದ್ದರೆ (ಶ್ರೀಮಂತ ದೇಶಗಳ ಜನರಿಗೆ ಸೇರಿದಂತೆ) ಇಡೀ ಮನುಕುಲಕ್ಕೇ ಅಪಾಯ ಎನ್ನುವ ಪ್ರಾಥಮಿಕ ಪ್ರಜ್ಞೆ ಸಹ ಇವುಗಳಿಗೆ ಇದ್ದಂತಿಲ್ಲ. ಈ ಶ್ರೀಮಂತ ದೇಶಗಳ ಸರಕಾರಗಳು ಮತ್ತು ಆಳುವವರಿಗೆ ಕೆಲವು ದೈತ್ಯ ಔಷಧಿ ಕಂಪನಿಗಳ ಶತಕೋಟ್ಯಾಂತರ ಡಾಲರುಗಳ ಲಾಭವೇ ಆದ್ಯತೆ. ನೂರಾರೂ ಕೋಟಿ ಜನರ ಜೀವರಕ್ಷಣೆಯಲ್ಲ. ಇದು‘ವ್ಯಾಕ್ಸೀನ್‌ ರಾಷ್ಟ್ರವಾದ’ ವಲ್ಲ, ‘ವ್ಯಾಕ್ಸೀನ್ ವರ್ಣಬೇಧ’!! 

ಇತ್ತೀಚೆಗೆ ಕೋವಿಡ್-19 ವ್ಯಾಕ್ಸೀನ್ ಅಭಿವೃದ್ಧಿಪಡಿಸಿ ಉತ್ಪಾದಿಸಬಲ್ಲ ದೈತ್ಯಔಷಧಿ ಕಂಪನಿಗಳು ಮತ್ತು ಅವುಗಳ ಬೆನ್ನಿಗೆ ನಿಂತಿರುವ ಆಯಾ ಅಭಿವೃದ್ಧ ದೇಶಗಳ ಸರಕಾರಗಳ ನಡುವೆ ನಡೆದ ಘರ್ಷಣೆಗಳನ್ನು ‘ವ್ಯಾಕ್ಸೀನ್‌ ರಾಷ್ಟ್ರವಾದ’ ಎಂದು ಕರೆಯಲಾಗುತ್ತಿತ್ತು. ಆದರೆ ಈಗಿನ ವಿವಿಧ ದೇಶಗಳ ಅಗತ್ಯಗಳು ಮತ್ತು ಜಾಗತಿಕ ವ್ಯಾಕ್ಸೀನ್ ಹಂಚಿಕೆಯ ಪ್ರಮಾಣಗಳ ಅಂಕೆ ಸಂಖ್ಯೆಗಳನ್ನು ನೋಡಿದರೆ, ಅದನ್ನು ಬೇರೆ ರೀತಿಯಲ್ಲಿ ವರ್ಣಿಸುವ ಅಗತ್ಯಕಂಡು ಬರುತ್ತಿದೆ. ಕೋಷ್ಟಕ 1 ರಲ್ಲಿ ಕಳೆದ ತಿಂಗಳ (ಮಾರ್ಚ್) ಕೊನೆವರೆಗಿನ ಜಾಗತಿಕ ಕೊವಿಡ್-19 ವ್ಯಾಕ್ಸೀನ್ ಹಂಚಿಕೆಯ ಅಂಕೆಸಂಖ್ಯೆಗಳಿವೆ. ಅದರ ಪ್ರಕಾರ ಜಗತ್ತಿನ ಶೇ. 16 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಶ್ರೀಮಂತ ದೇಶ/ಪ್ರದೇಶಗಳು (ಯು.ಎಸ್, ಕೆನಡಾ, ಯುಕೆ, ಯುರೋಕೂಟ) ಜಾಗತಿಕ ವ್ಯಾಕ್ಸೀನ್ ಪೂರೈಕೆಯ ಅರ್ಧದಷ್ಟನ್ನು ಬಾಚಿಕೊಂಡಿವೆ. ಯು.ಎಸ್‌ಒಂದೇ ಪಡೆದ ವ್ಯಾಕ್ಸೀನ್, ಅದರ ನಾಲ್ಕರಷ್ಟುಜನ ಸಂಖ್ಯೆ ಹೊಂದಿರುವ ಇಡೀ ಆಫ್ರಿಕಾಖಂಡದ 14 ಪಟ್ಟು! ಆಫ್ರಿಕಾದ ಮುಖ್ಯ ಅಥವಾ ಪ್ರಾತಿನಿಧಿಕ ಭಾಗವಲ್ಲದ ಮೊರೊಕ್ಕೊವನ್ನು ಬಿಟ್ಟರೆ, ಯು.ಎಸ್‌ಆಫ್ರಿಕಾದ 60 ಪಟ್ಟಷ್ಟು ವ್ಯಾಕ್ಸೀನನ್ನು ಬಾಚಿಕೊಂಡಿದೆ. ಜಗತ್ತಿನ ಕೇವಲ ಶೇ. 4ರಷ್ಟು ಜನಸಂಖ್ಯೆಯನ್ನು ಹೊಂದಿರುವ ಯು.ಎಸ್, ಜಾಗತಿಕ ವ್ಯಾಕ್ಸೀನಿನ ಶೇ. 30ನ್ನು ಕಬಳಿಸಿದೆ. ಇಂತಹ ಹಂಚಿಕೆಯನ್ನೇ ಡಬ್ಲ್ಯೂ.ಎಚ್.ಒ ಡೈರೆಕ್ಟರ್‌ ಜನರಲ್‌ಗೆ ಬ್ರೆಯೆಸಸ್‘ವಿಕೃತ’ಎಂದು ಕರೆದದ್ದು. ಅಭಾವ ಇರುವ ಅಗತ್ಯ ಔಷಧಿ ಪೂರೈಕೆಯ ಬಹುಭಾಗವನ್ನು ಮಾಜಿ ವಸಾಹತು ಮತ್ತು ಹಾಲಿ ಶ್ರೀಮಂತ ದೇಶಗಳು ಕಾದಿರಿಸಿಕೊಳ್ಳುವುದನ್ನು ‘ವ್ಯಾಕ್ಸೀನ್‌ ರಾಷ್ಟ್ರವಾದ’ ವಲ್ಲ, ‘ವ್ಯಾಕ್ಸೀನ್ ವರ್ಣಬೇಧ’ ಎಂದು ಕರೆಯಬೇಕು!

ಕೋಷ್ಟಕ -1 ಕೊಡಲಾದ ವ್ಯಾಕ್ಸೀನು ಡೋಸುಗಳು

ದೇಶ/ಪ್ರದೇಶ

ಜನಸಂಖ್ಯೆ (ದಶಲಕ್ಷ) ವ್ಯಾಕ್ಸೀನ್ ಡೋಸುಗಳು  (ದಶಲಕ್ಷ) ವ್ಯಾಕ್ಸೀನಾದ ಜನಸಂಖ್ಯೆಯ ಪ್ರಮಾಣ(ಶೇಕಡಾ)
ಯು.ಎಸ್/ಕೆನಡಾ 368.7 153.1

41.5

ಯು.ಕೆ

68 34.5

50.8

ಯುರೋಪ್‌ಕೂಟ

445 72.2

16.2

ಇತರಯುರೋಪ್

237 16.6

7.0

ಲ್ಯಾಟಿನ್‌ಅಮೆರಿಕ

654.1 45.7

7.0

ಚೀನಾ

1440 115

8.0

ಭಾರತ

1380 63.1

4.6

ಇತರಏಶ್ಯಾ(ಚೀನಾ, ಭಾರತ ಬಿಟ್ಟು)

1820 66.8

3.7

ಆಫ್ರಿಕಾ

1340 10.3

0.8

ಒಟ್ಟು

4592.8 500.2

10.9

(ಮೂಲ: OurWorldinDatahttps://ourworldindata.org/covid-vaccinations ಮಾರ್ಚ್ 30, 2021 ವರೆಗೆ)

ಇನ್ನುಕೋಷ್ಟಕ 2 ರಲ್ಲಿ ಕಳೆದ ತಿಂಗಳ (ಮಾರ್ಚ್) ಕೊನೆವರೆಗೆ ಈ ಶ್ರೀಮಂತ ದೇಶಗಳ ಯಾವ ದೈತ್ಯ ಔಷಧಿ ಕಂಪಂನಿ ಎಷ್ಟು ಕೋವಿಡ್-19 ವ್ಯಾಕ್ಸೀನ್‌ ಉತ್ಪಾದಿಸಿದೆ ಎಂದು ನೋಡಬಹುದು. ಕೋಷ್ಟಕ 1 ಮತ್ತು 2ನ್ನು ಒಟ್ಟಾಗಿ ನೋಡಿದರೆ ಇವುಗಳಲ್ಲಿ ಶೇ.90 ಪೂರೈಕೆ ಇವೇ ಶ್ರೀಮಂತ ದೇಶಗಳಿಗೆ ಹೋಗಿದೆ. ಈ ಶ್ರೀಮಂತ ದೇಶಗಳೊಳಗೆ ಈ ಪೂರೈಕೆ  ಹಂಚಿಕೊಳ್ಳುವುದು ಹೇಗೆ (ಉದಾ: ಆಸ್ಟ್ರಾಜೆನೆಕಾ ಹಂಚಿಕೆ ಬಗ್ಗೆ ಯುಕೆ ಮತ್ತುಯುರೋ ಕೂಟದ ನಡುವೆ ವಿವಾದ) ಎಂಬುದರ ಕುರಿತು ಕೋಳಿಜಗಳ ಆಗಿದೆ. ಹಾಗಾದರೆ ಉಳಿದ ಬಹುಸಂಖ್ಯಾತ ಜನರಿರುವ ಮತ್ತು ಸ್ವಂತ ಉತ್ಪಾದನಾ ಸಾಮರ್ಥ್ಯ ಇಲ್ಲದ ಲ್ಯಾಟೀನ್‌ ಅಮೆರಿಕ, ಆಫ್ರಿಕಾ, ಪೂ.ಯುರೋಪ್, ಏಶ್ಯಾದ ದೇಶಗಳಿಗೆ ವ್ಯಾಕ್ಸೀನ್ ಪೂರೈಕೆ ಮಾಡುವುದು ಯಾರು ಎಂಬ ಪ್ರಶ್ನೆ ಎದುರಾಗಿದೆ. ಸದ್ಯಕ್ಕೆ ಚೀನಾ, ಭಾರತ ಮತ್ತು ಸ್ವಲ್ಪ ಮಟ್ಟಿಗೆ ರಶ್ಯಾ ತಮ್ಮ ಅಗತ್ಯಗಳ ಜೊತೆಗೆ ಬಡ ದೇಶಗಳಿಗೂ ಪೂರೈಕೆ ಮಾಡುತ್ತಿವೆ. ಚೀನಾ ತನ್ನ ಸಿನೊವಾಕ್ ಮತ್ತು ಸಿನೊಫಾರ್ಮ್ ಉತ್ಪಾದನೆಯ ಶೇ.50ನ್ನು (23 ಕೋಟಿ ಡೋಸುಗಳಲ್ಲಿ 11.5 ಕೋಟಿ), ಭಾರತ ತನ್ನ ಉತ್ಪಾದನೆಯ ಸುಮಾರು ಶೇ. 43 ರಷ್ಟನ್ನು (15 ಕೋಟಿ ಡೋಸುಗಳಲ್ಲಿ 6.5 ಕೋಟಿ) ಈ ದೇಶಗಳಿಗೆ ಪೂರೈಕೆ ಮಾಡುತ್ತಿವೆ. ಆದರೆ ಇದು ಏನೇನೂ ಸಾಲದು ಎಂಬುದು ಸ್ಪಷ್ಟ.

ಕೋಷ್ಟಕ-2 ಉತ್ಪಾದನೆಯಾದ ವ್ಯಾಕ್ಸೀನ್ ಡೋಸುಗಳ ಸಂಖ್ಯೆ

ಕಂಪನಿ

ಡೋಸುಗಳು (ದಶಲಕ್ಷಗಳಲ್ಲಿ)  ಜಾಗತಿಕಉತ್ಪಾದನೆಯ ಪ್ರಮಾಣ (ಶೇಕಡಾ)
ಫೈಝರ್ 192.3

26.8%

ಆಸ್ಟ್ರಾಜೆನೆಕಾ 187.3                                            26.1%
ಸಿನೊವ್ಯಾಕ್ 57.1                                             21.9%
ಮೋಡರ್ನಾ 85.0                                             11.8%
ಸಿನೊಫಾರ್ಮ್ 71.4                                             10.0%
ಸ್ಪುಟ್ನಿಕ್ 14.7                                               2.0%
ಭಾರತ್ ಬಯೋಟೆಕ್        5.6                                                0.8%
ಜಾನ್ಸನ್‌ಅಂಡ್‌ಜಾನ್ಸನ್ 2.0                                                 0.3%

ಕ್ಯಾನ್ಸಿನೊ

2.0                                                 0.3%

ಒಟ್ಟು 

717.4                                       

100.0%

 (ಮೂಲ : https://www.airfinity.com/data-studio ಮಾರ್ಚ್ 29, 2021 ವರೆಗೆ)

ರಶ್ಯಾದ ಸ್ಪುಟ್ನಿಕ್ ವಿ ಪರೀಕ್ಷಣೆಯ ಹಂತದಾಟುತ್ತಿದ್ದು ಸಾಮೂಹಿಕ ಉತ್ಪಾದನೆಗೆ ತಯಾರಾಗುತ್ತಿದೆ. ಭಾರತ ಮತ್ತು ದ. ಕೊರಿಯಾದ ಹಲವು ಕಂಪನಿಗಳ ಜೊತೆ ಸಹಯೋಗದಲ್ಲಿ 85 ಕೋಟಿ ಡೋಸುಗಳ ಉತ್ಪಾದನೆಗೆ ಯೋಜಿಸುತ್ತಿದೆ. ಭಾರತ ರಫ್ತನ್ನುಇನ್ನೂ ನಿಲ್ಲಿಸಿಲ್ಲವಾದರೂ ಎರಡನೆಯ ಅಲೆಯ ಗಂಭೀರ ಸವಾಲಿನಿಂದಾಗಿ ದೇಶೀಯವಾಗಿ ವ್ಯಾಕ್ಸೀನು ಪೂರೈಕೆ ಹೆಚ್ಚಿಸಲು ಆದ್ಯತೆ ಕೊಡುವ ಸಾಧ್ಯತೆಯಿದೆ. ಆದ್ದರಿಂದ ಭಾರತದ ರಫ್ತುಮಂದಗತಿಯಲ್ಲಿ ಮುಂದುವರೆಯಬಹುದು. ಜಗತ್ತಿನ ಅತಿದೊಡ್ಡ ವ್ಯಾಕ್ಸೀನ್‌ಉತ್ಪಾದಕ ಸ್ಥಾವರ ಹೊಂದಿರುವ ಭಾರತದ ಸೇರಂ ಇನ್ಸ್ಟಿಟ್ಯೂಟ್ ತಿಂಗಳಿಗೆ 10 ಕೋಟಿ ಡೋಸುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಈ ಸಾಮರ್ಥ್ಯವನ್ನುಅದು 20 ಕೋಟಿ ಡೋಸಿಗೆ ದುಪ್ಪಟ್ಟು ಮಾಡಬಲ್ಲದು. ಅದು ಯಾಕೆ ಅದನ್ನು ಮಾಡಲಾಗುತ್ತಿಲ್ಲ? ಅದೇ ರೀತಿ ಜಾನ್ಸನ್‌ ಅಂಡ್‌ಜಾನ್ಸನ್‌ ಜೊತೆಗೆ 60 ಕೋಟಿ ಡೋಸುಗಳ ಉತ್ಪಾದನಾ ಸಹಯೋಗ ಒಪ್ಪಂದ ಮಾಡಿಕೊಂಡಿರುವ ಮತ್ತುಅದಕ್ಕೆ ಬೇಕಾದ ಅನುಮತಿ ಪಡೆದಿರುವ ಭಾರತದ ‘ಬಯೋಲಾಜಿಕ್ ಇ’ಇನ್ನೂ ಯಾಕೆ ಉತ್ಪಾದನೆ ಆರಂಭಿಸಿಲ್ಲ?

ಇದಕ್ಕೆ ಕಾರಣವೇನು ಎಂದು ಜಗತ್ತಿನ ಜನರಿಗೆ ಗೊತ್ತಾಗದಂತೆ ಶ್ರೀಮಂತ ದೇಶದ ಸರಕಾರಗಳು ಮಾತ್ರವಲ್ಲ, ಪಾಶ್ಚಿಮಾತ್ಯ   ದೈತ್ಯ ಮಾಧ್ಯಮಗಳ ಅಧಿಪತ್ಯದಲ್ಲಿರುವ (ಭಾರತದ ಮಾಧ್ಯಮಗಳು ಸೇರಿದಂತೆ) ಜಾಗತಿಕ ಮಾಧ್ಯಮಗಳು ಸಹ ಮುಚ್ಚಿಡುತ್ತಿವೆ. ಎಲ್ಲ ವ್ಯಾಕ್ಸೀನ್‌ ಉತ್ಪಾದನೆಯನ್ನು ಬಾಚಿಕೊಳ್ಳುತ್ತಿರುವ ಮೇಲೆ ಹೇಳಿದ ಶ್ರೀಮಂತ ದೇಶ/ಪ್ರದೇಶಗಳು (ಯು.ಎಸ್, ಕೆನಡಾ, ಯುಕೆ, ಯುರೋಕೂಟ) ಉತ್ಪಾದಿತ ವ್ಯಾಕ್ಸೀನಿನ ರಫ್ತು ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಿವೆ. ಮಾತ್ರವಲ್ಲಇತರೆಡೆ ವ್ಯಾಕ್ಸೀನ್‌ ಉತ್ಪಾದನೆಗೆ ಬೇಕಾದ ಮಧ್ಯಂತರ ಉತ್ಪನ್ನಗಳ ಮತ್ತು ಕಚ್ಚಾ ವಸ್ತುಗಳ ರಫ್ತಿನ ಮೇಲೂ ನಿಷೇಧ ಹೇರಿವೆ.

ಅಮೆರಿಕ ಈ ನಿಷೇಧವನ್ನು1950ರ ಕೊರಿಯಾ ಯುದ್ಧದ ಕಾಲದಲ್ಲಿ ತರಲಾದ ರಕ್ಷಣಾ ಉತ್ಪಾದನಾ ಕಾಯಿದೆಯನ್ನು ಬಳಸಿ ಕೊವಿಡ್ ವ್ಯಾಕ್ಸೀನು, ಅದರ ಉತ್ಪಾದನೆಗೆ ಬೇಕಾದ ಮಧ್ಯಂತರ ಉತ್ಪನ್ನಗಳು, ಕಚ್ಚಾ ವಸ್ತುಗಳು ಮತ್ತುಇತರ ಲಾಗುವಾಡುಗಳ ರಫ್ತನ್ನು ನಿಷೇಧಿಸಿದೆ! ವ್ಹಾ ವ್ಹಾ !ಜಗತ್ತಿನ ಜನರಿಗಾಗಿ ವ್ಯಾಕ್ಸೀನ್‌ ಉತ್ಪಾದನೆ ಯುಯು.ಎಸ್‌ ರಕ್ಷಣೆಗೆ ಮಾರಕವಾಗಿದೆ!! ಪುಣೆಯ ಸೇರಂ ಇನ್ಸ್ಟಿಟ್ಯೂಟ್ ತಿಂಗಳಿಗೆ 10-20 ಕೋಟಿ ಡೋಸುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು  ಈಗ ಬರಿಯ 6 ಕೋಟಿ ಡೋಸಿಗೆ ಯಾಕೆ ಸೀಮಿತವಾಗಿದೆ. ಈ ಸಂಸ್ಥೆಯ ಪ್ರಕಾಶಕುಮಾರ್ ಸಿಂಗ್ ಮತ್ತು ಮುಖ್ಯಸ್ಥಅದರ್ ಪೂನಾವಾಲಾ, ಅಮೆರಿಕದ ಈ ನಿಷೇಧ ಕೊವಿಡ್-ಶೀಲ್ಡ್ ಉತಾದನೆ ಹೆಚ್ಚಿಸಲು ಮಾತ್ರವಲ್ಲ, ಅದು ಉತ್ಪಾದಿಸಬೇಕೆಂದಿರುವ 100 ಕೋಟಿ ನೊವಿವ್ಯಾಕ್ಸ್ಡೋಸುಗಳ ಉತ್ಪಾದನೆಗೆ ತೀವ್ರ ತೊಡಕುಗಳನ್ನು ಉಂಟು ಮಾಡುತ್ತದೆ, ಎಂದು ಭಾರತ ಸರಕಾರಕ್ಕೆ ಈ ಮಾರ್ಚ್ನಲ್ಲಿ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳದೆ ‘ಎಲ್ಲರಿಗೂ ಮುಕ್ತವಾದ ಜಾಗತಿಕ ವ್ಯಾಕ್ಸೀನ್’ ಬಗ್ಗೆ ಮಾತು ಅರ್ಥಹೀನವಾಗುತ್ತದೆ ಎಂದಿದ್ದಾರೆ.

ಅದೇ ರೀತಿ ಜಾನ್ಸನ್‌ ಅಂಡ್‌ಜಾನ್ಸನ್ ನ ಸಹಯೋಗದಲ್ಲಿ 60 ಕೋಟಿ ಡೋಸುಗಳ ಒಂದೇ ಡೋಸಿನ ವ್ಯಾಕ್ಸೀನ್‌ ಉತ್ಪಾದನೆಯ ಯೋಜನೆ ಹಾಕಿಕೊಂಡಿರುವ ‘ಬಯೊಲಾಜಿಕಲ್‌ಇ’ಯ ಮಹಿಮಾದಾತ್ಲಾ ಸಹ ಅಮೆರಿಕದ ಈ ನಿಷೇಧ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೊವಿಡ್ ವ್ಯಾಕ್ಸೀನಿನ ಉತ್ಪಾದನೆಗೆ ಬೇಕಾದ ಹಲವು ಉತ್ಪನ್ನಗಳು, ವಸ್ತುಗಳ ಉತ್ಪಾದನೆ ಮಾಡಬಲ್ಲ ಕಂಪನಿಗಳು ಬೆರಳೆಣಿಕೆಯಲ್ಲಿದ್ದು ಇವೆಲ್ಲಅಮೆರಿಕದ ಈ ನಿಷೇಧಕ್ಕೆ ಒಳಗಾಗಿವೆ. ಇದನ್ನುತೆರವು ಮಾಡದಿದ್ದರೆ, ವ್ಯಾಕ್ಸೀನ್ ನ ಜಾಗತಿಕ ಉತ್ಪಾದನಾ ಸರಣಿಯ ಕುರಿತು ಶ್ರೀಮಂತ ದೇಶಗಳು ತಮ್ಮ ಸ್ವಾರ್ಥಿದೃಷ್ಟಿಕೋನ ಬಿಟ್ಟು ಸಮಗ್ರ ದೃಷ್ಟಿಕೋನ ಹೊಂದದಿದ್ದರೆ, ಕೊವಿಡ್ ನ್ನು ಭಾರತದಲ್ಲಿ ಅಥವಾ ಜಗತ್ತಿನಲ್ಲಿ ಸೋಲಿಸುವುದು ಆಗದ ಮಾತು ಎಂದು ದಾತ್ಲಾ ಫೈನಾನ್ಶಿಯಲ್‌ ಟೈಮ್ಸ್ ಗೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತ ಸರಕಾರ ಇತ್ತೀಚಿನ ‘ಕ್ವಾಡ್’ (ಯು.ಎಸ್, ಜಪಾನ್, ಆಸ್ರ್ಟೆಲಿಯಾ, ಭಾರತ 4 ದೇಶಗಳ) ಕೂಟದ ಶೃಂಗಸಭೆಯಲ್ಲಿ ತಾನು ಈ ಕೂಟದ ಕೊವಿಡ್ ವ್ಯಾಕ್ಸೀನ್ ಪೂರೈಕೆದಾರ ಆಗುವ ಕುರಿತು ಹೆಮ್ಮೆಯಲ್ಲಿ ‘ಸ್ಪಿರಿಟ್ ಆಫ್‌ಕ್ವಾಡ್’ ದಸ್ತಾವೇಜಿನಲ್ಲಿ ಹೇಳಿಕೊಂಡಿತ್ತು. ಆದರೆ ಅದಕ್ಕೆ ತೊಡಕಾಗಬಹುದಾದ ಯು.ಎಸ್ ನೀತಿಯ ಕುರಿತು ಚಕಾರವೆತ್ತದೆ ಸುಮ್ಮನಿದೆ. ಹಾಗಾದರೆ ಕೊವಿಡ್ ವ್ಯಾಕ್ಸೀನ್ ಪೂರೈಕೆದಾರ ಎಂಬ ಹೇಳಿಕೆ ಸಾಂದರ್ಭಿಕದ ಸ್ತಾವೇಜಿಗೆ ಸೀಮಿತವಾದದ್ದೇ. ಅದರ ನಂತರ ಭಾರತದ ವ್ಯಾಕ್ಸೀನ್‌ ರಫ್ತು ಹೆಚ್ಚುವ ಬದಲುಯು.ಎಸ್ ನ ತೊಡಕಿನಿಂದಾಗಿ ಇನ್ನಷ್ಟು ಮಂದಗತಿಗೆ ಹೋಗುವ ಸಾಧ್ಯತೆಯಿದೆ.

ಇದು ಸಾಲದೆಂಬಂತೆ ಒಂದುಕಡೆ ಶ್ರೀಮಂತ ದೇಶಗಳ ಸರಕಾರಗಳು, ಕಂಪನಿಗಳು ಮತ್ತು ಮಾಧ್ಯಮಗಳು, (ತಮ್ಮ ದೇಶಗಳಿಗಾಗಿ ಹೊರತಾಗಿ) ಇತರ ದೇಶಗಳಿಗೆ (ಭಾರತದಲ್ಲಿ ಸೇರಿದಂತೆ) ಜಾಗತಿಕ ವ್ಯಾಕ್ಸೀನ್‌ಉತ್ಪಾದನೆಗೆ ತೊಡಕು ಮಾಡುತ್ತಿವೆ. ಇನ್ನೊಂದು ಕಡೆ ಈ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುತ್ತಿರುವವರ – ಪ್ರಧಾನವಾಗಿ ಚೀನಾ ಮತ್ತು ರಶ್ಯಾಗಳ –  ವ್ಯಾಕ್ಸೀನ್ ವಿರುದ್ಧಅಪಪ್ರಚಾರ ಹರಿಯಬಿಟ್ಟಿವೆ. ಆ ಮೂಲಕ ಇಡೀಜಗತ್ತಿಗೆ ವ್ಯಾಕ್ಸೀನ್ ಸಿಗದಂತೆ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿವೆ. ಕೊವಿಡ್ ವಿರುದ್ಧ ಜಾಗತಿಕ ಹೋರಾಟ ನಡೆಸಿ ಅದರ ಮೂಲೋತ್ಪಾಟನೆ ಮಾಡುವ ಪ್ರಯತ್ನಕ್ಕೆ ಅಡ್ಡಿಯಾಗುತ್ತಿವೆ.  ಜಗತ್ತಿನ ಎಲ್ಲ ದೇಶಗಳಲ್ಲಿ ವ್ಯಾಕ್ಸೀನ್ ಲಭ್ಯತೆ ಮೂಲಕ ಕೊವಿಡ್ ಮೂಲೋತ್ಪಾಟನೆ ಆಗದಿದ್ದರೆ (ಶ್ರೀಮಂತ ದೇಶಗಳ ಜನರಿಗೆ ಸೇರಿದಂತೆ) ಇಡೀ ಮನುಕುಲಕ್ಕೇ ಅಪಾಯ ಎನ್ನುವ ಪ್ರಾಥಮಿಕ ಪ್ರಜ್ಞೆ ಸಹ ಇವುಗಳಿಗೆ ಇದ್ದಂತಿಲ್ಲ.

ಜಗತ್ತಿನ ಬಡದೇಶಗಳಿಗೆ ಕೊವಿಡ್ ವ್ಯಾಕ್ಸೀನ್ ಪೂರೈಕೆಯ ಉದ್ದೇಶವಿರುವ ಡಬ್ಲ್ಯೂ.ಎಚ್.ಒ ದ ಕೊವ್ಯಾಕ್ಸ್ ವೇದಿಕೆ ಈಗ ಕೊವಿಶೀಲ್ಡ್, ನೊವಾವ್ಯಾಕ್ಸ್ ಮತ್ತು ಜಾನ್ಸನ್‌ ಅಂಡ್‌ಜಾನ್ಸನ್ ವ್ಯಾಕ್ಸೀನ್ ಮೇಲೆ ಅವಲಂಬಿಸಿದೆ. ಇವು ಈಗ ಬಡಜಗತ್ತಿನ ಆಶಾಕಿರಣಗಳಾಗಿವೆ. ಈ ವೇದಿಕೆಯನ್ನು ಜಿ.ಎ.ವಿ.ಐ ಮತ್ತು ಸಿ.ಇ.ಪಿ.ಐ ನಿರ್ವಹಿಸುತ್ತಿವೆ. ಇವು ಇನ್ನೂ ಚೀನಾ ಮತ್ತುರಶ್ಯಾದ ವ್ಯಾಕ್ಸೀನುಗಳಿಗೆ ಅನುಮತಿ ನೀಡಿಲ್ಲ. ಕೊವಿಡ್ ಕಾರ್ಯಕ್ರಮ ನಿರ್ವಹಿಸುತ್ತಿರುವ ಡಬ್ಲ್ಯೂ.ಎಚ್.ಒ, ಜಿ.ಎ.ವಿ.ಐ ಮತ್ತು ಸಿ.ಇ.ಪಿ.ಐ ಚೀನಾದ ಪ್ರಭಾವದಲ್ಲಿ ಕೆಲಸ ಮಾಡುತ್ತಿವೆ ಎಂದು ಮಾಜಿಯು.ಎಸ್‌ಅಧ್ಯಕ್ಷ ಟ್ರಂಪ್‌ ಆಪಾದಿಸಿದ್ದರು. ಆದರೆ ಅವು ನಿಜವಾಗಿಯೂ ಬಿಲ್ ಮತ್ತು ಮೆಲಿಂದಾಗೇಟ್ಸ್ ಫೌಂಡೇಶನ್ ನ ಪ್ರಭಾವದಲ್ಲಿವೆ. ಯುರೋ ಕೂಟ ಸಹ ರಶ್ಯಾ, ಚೀನಾದ ವ್ಯಾಕ್ಸೀನುಗಳಿಗೆ ಇನ್ನೂಅನುಮತಿ ನೀಡುವ ಮನಸ್ಸು ಮಾಡಿಲ್ಲ. ರಶ್ಯಾ  ಮತ್ತು ಚೀನಾದ ವ್ಯಾಕ್ಸೀನುಗಳಿಗೆ ಅನುಮತಿ ನೀಡದಿದ್ದರೆ ಬಡ ದೇಶಗಳಿಗೆ ಕೊವಿಡ್ ವ್ಯಾಕ್ಸೀನ್ ಆಕಾಶ ಕುಸುಮ ಆಗಬಹುದು.

ಈ ನಡುವೆ ಡಬ್ಲ್ಯೂ.ಟಿ.ಒ ಒಪ್ಪಂದದ (ಪೇಟೆಂಟ್‌ಇತ್ಯಾದಿ) ಬೌದ್ಧಿಕ ಹಕ್ಕುಗಳನ್ನು ಕೊವಿಡ್ ವ್ಯಾಕ್ಸೀನಿಗೆ ಅಮಾನತಿನಲ್ಲಿಡುವ ಡಬ್ಲ್ಯೂ.ಎಚ್.ಒ ದ ಪ್ರಸ್ತಾವಕ್ಕೆ ಇವೇ ಶ್ರೀಮಂತ ದೇಶಗಳ ಸರಕಾರಗಳು ಪ್ರತಿರೋಧ ಒಡ್ಡಿದ್ದವು. ಈ ಶ್ರೀಮಂತ ದೇಶಗಳ ಸರಕಾರಗಳು ಮತ್ತು ಆಳುವವರಿಗೆ ಕೆಲವು ದೈತ್ಯಔಷಧಿ ಕಂಪನಿಗಳ ಶತಕೋಟ್ಯಾಂತರ ಡಾಲರುಗಳ ಲಾಭವೇ ಆದ್ಯತೆ. ನೂರಾರೂ ಕೋಟಿ ಜನರ ಜೀವ ರಕ್ಷಣೆಯಲ್ಲ. ಇದು ಹಿಂದೆ ಏಡ್ಸ್ ವ್ಯಾಕ್ಸೀನ್ ನಲ್ಲೂ ಕಂಡುಬಂದಿತ್ತು. ಇಂತಹ ಮಹಾಸೋಂಕಿನ ಸಂದರ್ಭದಂಲ್ಲೂ ಯಾವುದೇ ಬದಲಾವಣೆಯಾದ ಲಕ್ಷಣವಿಲ್ಲ.

Donate Janashakthi Media

Leave a Reply

Your email address will not be published. Required fields are marked *