ವ್ಯಾಕ್ಸೀನ್ ಪೇಟೆಂಟ್ ರಾಜಿ: ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ

ವಸಂತರಾಜ ಎನ್.ಕೆ

ಪೇಟೆಂಟ್ ವ್ಯವಸ್ಥೆಯು, ವ್ಯಾಕ್ಸೀನಿನ ದುಬಾರಿ ಬೆಲೆಗಳಿಗೆ ಹಾಗೂ ಆ ಮೂಲಕ ಬಡ ದೇಶಗಳಿಗೆ ವ್ಯಾಕ್ಸೀನಿನ ಖರೀದಿಯನ್ನು ಮತ್ತು ಸ್ಥಳೀಯವಾಗಿ ಅದರ ಉತ್ಪಾದನೆಯ ಸಾಧ್ಯತೆಯನ್ನು ಪ್ರತಿಬಂಧಿಸಲು ಕಾರಣವಾಗಿದೆ. ಹಾಗಾಗಿ ಈ ಕೊವಿದ್ ವ್ಯಾಕ್ಸೀನ್ ಪೇಟೆಂಟನ್ನು 3 ವರ್ಷಗಳ ಅವಧಿಗೆ ಮನ್ನಾ ಮಾಡಬೇಕೆಂದು ಕೊವಿದ್ ಮಹಾಸೋಂಕಿನ ಆರಂಭ ಘಟ್ಟದಲ್ಲೇ ಭಾರತ, ದಕ್ಷಿಣ ಆಫ್ರಿಕಾ ಗಳ ನೇತೃತ್ವದಲ್ಲಿ ಸುಮಾರು 100 ಬಡ ದೇಶಗಳು ಒತ್ತಾಯಿಸಿದ್ದವು. ಈ ಪ್ರಸ್ತಾವದ 18 ತಿಂಗಳುಗಳ ಚೌಕಾಶಿಯ ನಂತರ, ಯುರೋ ಕೂಟ ಒಂದು ರಾಜಿ ಒಪ್ಪಂದವನ್ನು ಸೂಚಿಸಿದ್ದು, ಬಡದೇಶಗಳ ನಾಯಕರಾದ ಭಾರತ-ದಕ್ಷಿಣ ಆಫ್ರಿಕಾ ಗಳು ಇದನ್ನು ಒಪ್ಪಿಕೊಂಡಿವೆಯಂತೆ,  ರಾಜಿಯ ಒಪ್ಪಂದ ವ್ಯಾಕ್ಸೀನ್ ಉತ್ಪಾದನೆಗೆ ಇರುವ ತೊಡಕುಗಳನ್ನು ನಿವಾರಿಸುವುದಿಲ್ಲ. ಬದಲಿಗೆ ರಾಜಿಯ ವಿವರಗಳನ್ನು ಪರಿಶೀಲಿಸಿದರೆ, ಇನ್ನಷ್ಟು ಹೆಚ್ಚಿಸುತ್ತದೆ.  ವ್ಯಾಕ್ಸೀನ್ ಪೇಟೆಂಟ್ ರಾಜಿ ಒಪ್ಪಂದ, ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಇದೆ. ಅದೂ ದಿಡ್ಡಿ ಬಾಗಿಲನ್ನು ಅರ್ಧ ಹಾಕಿದಂತೆ ಆಗಿದೆ.  ದೀರ್ಘ ಚೌಕಾಶಿಯ ನಂತರದ ಈ ರಾಜಿ ಒಪ್ಪಂದವನ್ನು ಇನ್ನೂ ಮೃದು ಶಬ್ದಗಳಲ್ಲಿ ಹೇಳಲು ಸಾಧ‍್ಯವಿಲ್ಲ.

ಭೀಕರ ಜಾಗತಿಕ ಕೊವಿದ್ ವ್ಯಾಕ್ಸೀನ್ ಅಸಮಾನತೆಯಿಲ್ಲದಿದ್ದರೆ ಇಷ್ಟರೊಳಗೆ ಬಹುಶಃ ಕೊವಿದ್ ಮಹಾಸೋಂಕನ್ನು ಪೂರ್ಣ ನಿಯಂತ್ರಣಕ್ಕೆ ತರಬಹುದಾಗಿತ್ತು. ಲಕ್ಷಾಂತರ ಜಾಗತಿಕ ಸಾವು-ನೋವುಗಳನ್ನು ತಡೆಯಬಹುದಿತ್ತು ಎಂಬುದು ಹಲವು ಪರಿಣತರ ಅಭಿಪ್ರಾಯ. ಈ ಅಸಮಾನತೆ ಶ್ರೀಮಂತ-ಬಡ ದೇಶಗಳ, ದೇಶದೊಳಗೆ ಶ್ರೀಮಂತ-ಬಡವರ, ವಿವಿಧ ಜಾತಿ-ಮತಧರ್ಮ-ಬುಡಕಟ್ಟುಗಳ ಜನರ ನಡುವೆಯೂ ಇವೆ.  ಜನವರಿ ಮೊದಲ ವಾರದ ಈ ಅಂಕೆಸಂಖ್ಯೆಗಳನ್ನು ನೋಡಿದರೆ ಶ್ರೀಮಂತ-ಬಡ ದೇಶಗಳ ನಡುವಿನ ವ್ಯಾಕ್ಸೀನ್ ಅಸಮಾನತೆಯ ಭೀಕರತೆಯ ಅರಿವಾಗುತ್ತದೆ. ಶ್ರೀಮಂತ ದೇಶಗಳ ಜನಸಂಖ್ಯೆಯ ಸುಮಾರು ಶೇ.70 ಭಾಗ ವ್ಯಾಕ್ಸೀನ್ ಪಡೆದಿದ್ದಾರೆ. ಆದರೆ ಬಡ ದೇಶಗಳಲ್ಲಿ ಕೇವಲ ಶೇ. 2.5 ಭಾಗ ವ್ಯಾಕ್ಸೀನ್ ಪಡೆದಿದ್ದಾರೆ. ಶ್ರೀಮಂತ ದೇಶಗಳಲ್ಲಿ ಜನಸಂಖ್ಯೆಯ ಸುಮಾರು ಶೇ.150 ರಷ್ಟು ಡೋಸುಗಳನ್ನು ಕೊಡಲಾಯಿತು. ಆದರೆ ಬಡ ದೇಶಗಳಲ್ಲಿ ಕೇವಲ ಶೇ.7 ರಷ್ಟು ಡೋಸುಗಳನ್ನು ಮಾತ್ರ ಕೊಡಲಾಯಿತು. ಇಡೀ ಆಫ್ರಿಕಾ ಖಂಡದಲ್ಲಿ ಶೇ.10ಕ್ಕಿಂತಲೂ ಕಡಿಮೆ ವಯಸ್ಕರು ಪೂರ್ಣ ವ್ಯಾಕ್ಸೀನ್ ಪಡೆದಿದ್ದಾರೆ. ಈ ಸಮಯದಲ್ಲಿ ಬಡ ದೇಶಗಳಲ್ಲಿ ಕೊವಿದ್ ಗೆ ಬಲಿಯಾದವರ ಸಂಖ್ಯೆ ಶ್ರೀಮಂತ ದೇಶಗಳ ಸಂಖ್ಯೆಯ 4 ಪಟ್ಟು. ಇದೇ ಸಮಯದಲ್ಲಿ 2021ರ ಕೊನೆಯ ಹೊತ್ತಿಗೆ ವ್ಯಾಕ್ಸೀನ್ ಕಂಪನಿಗಳು (ಪ್ರಮುಖವಾಗಿ ಫೈಝರ್, ಮೊಡರ್ನಾ) ಪ್ರತಿ ಸೆಕೆಂಡಿಗೆ ಸಾವಿರ ಡಾಲರು ಲಾಭ ಗಳಿಸುತ್ತಿವೆ.

ಸುಲಭ ಲಭ್ಯತೆಗಾಗಿ ಕೊವಿದ್ ವ್ಯಾಕ್ಸೀನ್ ಹಾಗೂ ಅದರ ಗಳಿಗೆ ಬೌದ್ಧಿಕ ಆಸ್ತಿ ಪದ್ಧತಿಯನ್ನು ಮತ್ತು ಪೇಟೆಂಟ್ ಹಕ್ಕುಗಳನ್ನು ಮನ್ನಾ ಮಾಡಲು ಶ್ರೀಮಂತ ದೇಶಗಳು ನಿರಾಕರಿಸಿದ್ದು ಈ ವ್ಯಾಕ್ಸೀನ್ ಅಸಮಾನತೆಗೆ ಕಾರಣವಾಗಿರುವ ಒಂದು ಅಂಶ. ದೈತ್ಯ ಫಾರ್ಮಾ (ಅಥವಾ ಔಷಧಿ) ಕಂಪನಿಗಳ ಸೂಪರ್ ಲಾಭಗಳನ್ನು ರಕ್ಷಿಸುವ ಉದ್ದೇಶದ ಔಷಧಿಗಳ ಈ ಪೇಟೆಂಟ್ ವ್ಯವಸ್ಥೆಯು, ದುಬಾರಿ ಬೆಲೆಗಳಿಗೆ ಹಾಗೂ ಆ ಮೂಲಕ ಬಡ ದೇಶಗಳಿಗೆ ವ್ಯಾಕ್ಸೀನ್ ಖರೀದಿಯನ್ನು ಮತ್ತು ಸ್ಥಳೀಯವಾಗಿ ವ್ಯಾಕ್ಸೀನ್ ಉತ್ಪಾದನೆಯ ಸಾಧ್ಯತೆಯನ್ನು ಪ್ರತಿಬಂಧಿಸಲು ಕಾರಣವಾಗಿದೆ. ಈ ಪೇಟೆಂಟ್ ವ್ಯವಸ್ಥೆಯನ್ನು WTO ನ TRIPS ಒಪ್ಪಂದದ ಮೂಲಕ ಹೇರಲಾಗಿದೆ. ಹಾಗಾಗಿ ಈ ಕೊವಿದ್ ವ್ಯಾಕ್ಸೀನ್ ಪೇಟೆಂಟನ್ನು 3 ವರ್ಷಗಳ ಅವಧಿಗೆ ಮನ್ನಾ ಮಾಡಬೇಕೆಂದು ಕೊವಿದ್ ಮಹಾಸೋಂಕಿನ ಆರಂಭ ಘಟ್ಟದಲ್ಲೇ ಭಾರತ, ದಕ್ಷಿಣ ಆಫ್ರಿಕಾ ಗಳ ನೇತೃತ್ವದಲ್ಲಿ ಸುಮಾರು 100 ಬಡ ದೇಶಗಳು ಒತ್ತಾಯಿಸಿದ್ದವು. ಆದರೆ ದೈತ್ಯ ಔಷಧಿ ಕಂಪನಿಗಳ ಸೂಪರ್ ಲಾಭದ ಹಿತಾಸಕ್ತಿಯನ್ನು ಸಾರ್ವಜನಿಕ ಆರೋಗ್ಯಕ್ಕಿಂತ ಹೆಚ್ಚಿನ ಆದ್ಯತೆಯೆಂದು ಬಗೆಯುವ ಹೆಚ್ಚಿನ ಶ್ರೀಮಂತ ದೇಶಗಳು ಇದನ್ನು  ವಿರೋಧಿಸಿದ್ದವು. ಇದರಲ್ಲಿ ಯುರೋಪಿಯನ್ ಕೂಟದ ವಿರೋಧ ಅತ್ಯಂತ ದೃಢವಾಗಿತ್ತು. ಯು.ಎಸ್ ಮೊದಲಿಗೆ ತೀವ್ರವಾಗಿ ವಿರೋಧಿಸಿದ್ದರೂ ಬಿಡೆನ್ ಅಧ್ಯಕ್ಷತೆ ವಹಿಸಿಕೊಂಡ ಮೇಲೆ ತನ್ನ ವಿರೋಧವನ್ನು ಬಿಟ್ಟು ಕೊಟ್ಟಿತು. ಯುರೋ ಕೂಟ ಬಿಟ್ಟು ಇತರ ದೇಶಗಳು ಸಹ ಯು,,ಎಸ್ ನ್ನು ಅನುಸರಿಸಿದವು.

ಈ ಪ್ರಸ್ತಾವದ 18 ತಿಂಗಳುಗಳ ಚೌಕಾಶಿಯ ನಂತರ, ಯುರೋ ಕೂಟ ಒಂದು ರಾಜಿ ಒಪ್ಪಂದವನ್ನು ಸೂಚಿಸಿದ್ದು, ಬಡದೇಶಗಳ ನಾಯಕರಾದ ಭಾರತ-ದಕ್ಷಿಣ ಆಫ್ರಿಕಾ ಗಳು ಇದನ್ನು ಒಪ್ಪಿಕೊಂಡಿವೆಯಂತೆ,  ಇದು WTO ಮುಂದೆ ಅಂಗೀಕಾರಕ್ಕೆ ಬರಲಿದೆಯಂತೆ. ಈ ವ್ಯಾಕ್ಸೀನ್ ಪೇಟೆಂಟ್ ರಾಜಿ ಒಪ್ಪಂದ, ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಇದೆ. ಅದೂ ದಿಡ್ಡಿ ಬಾಗಿಲನ್ನು ಅರ್ಧ ಹಾಕಿದಂತೆ ಆಗಿದೆ.  ದೀರ್ಘ ಚೌಕಾಶಿಯ ನಂತರದ ಈ ರಾಜಿ ಒಪ್ಪಂದದ ವಿವರಗಳನ್ನು ಪರಿಶೀಲಿಸಿದರೆ ಇದನ್ನು ಇನ್ನೂ ಮೃದು ಶಬ್ದಗಳಲ್ಲಿ ಹೇಳಲು ಸಾಧ‍್ಯವಿಲ್ಲ.  ಮೊದಲು ಈ ಒಪ್ಪಂದದ ಸಕಾರಾತ್ಮಕ ಅಂಶಗಳನ್ನು ನೋಡಬಹುದು. ಮೊದಲ ಬಾರಿಗೆ ಯುರೋ ಕೂಟ ಮತ್ತು ಶ್ರೀಮಂತ ದೇಶಗಳು ಪೇಟೆಂಟ್ ವ್ಯವಸ್ಥೆ ಜಾಗತಿಕ ಸಾರ್ವಜನಿಕ ಆರೋಗ್ಯಕ್ಕೆ (ಅದರಲ್ಲೂ ಸೋಂಕುಗಳನ್ನು ಎದುರಿಸಲು) ಮಾರಕವೆಂದು ನೀತಿಶಃ ಒಪ್ಪಿಕೊಂಡಂತೆ ಆಗಿದೆ.  ಭಾಗಶಃವಾದರೂ ಪೇಟೆಂಟ್ ಮನ್ನಾ ಮಾಡಲು ಒಪ್ಪಿಕೊಂಡಿರುವುದೂ ಸಹ ಅಷ್ಟೇ.

ಈ ರಾಜಿ ಒಪ್ಪಂದ ವ್ಯಾಕ್ಸೀನ್ ಮೇಲೆ ಪೇಟೆಂಟನ್ನು ಮನ್ನಾ ಮಾಡುವುದಿಲ್ಲ. ಬದಲಿಗೆ ಹೆಚ್ಚಿನ ದೇಶಗಳ ಪೇಟೆಂಟ್ ಕಾನೂನುಗಳಲ್ಲಿ ಲಭ್ಯವಿರುವ ‘ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ’ಯಲ್ಲಿ ಉತ್ಪಾದನೆಯ “ಕಡ್ಡಾಯ ಲೈಸೆನ್ಸ್’ನ್ನು ಬಳಸಲು ಅನುವು ಮಾಡಿಕೊಡುತ್ತದೆಯಷ್ಟೇ. ಈಗ ಪೇಟೆಂಟ್ ಹೊಂದಿರುವ ಕಂಪನಿ ಉತ್ಪಾದಿಸಲು ನಿರಾಕರಿಸಿದರೆ ಮಾತ್ರ “ಕಡ್ಡಾಯ ಲೈಸೆನ್ಸ್’ನ್ನು ಬಳಸಬಹುದೆಂಬ ಷರತ್ತು ಇದೆ. ಈ ಷರತ್ತನ್ನು ಮಾತ್ರ ತೆಗೆದು ಹಾಕಲು ಯುರೋ ಕೂಟ ಒಪ್ಪಿಕೊಂಡಿದೆ. ಈ ಷರತ್ತು ಮನ್ನಾ ಕೊವಿದ್ ಚಿಕಿತ್ಸೆಗೆ ಬೇಕಾಗುವ ಔ಼ಷಧಿಗಳಿಗೆ ಮತ್ತು ವ್ಯಾಕ್ಸೀನ್ ಉತ್ಪಾದನೆಗೆ ಬೇಕಾದ ತಂತ್ರಜ್ಞಾನ, ಮಾಹಿತಿ, ಯಂತ್ರೋಪಕರಣಗಳು, ಸಾಮಗ್ರಿಗಳಿಗೆ ಅನ್ವಯವಾಗುವುದಿಲ್ಲ.

ರಾಜಿಯ ಒಪ್ಪಂದ ವ್ಯಾಕ್ಸೀನ್ ಉತ್ಪಾದನೆಗೆ ಇರುವ ತೊಡಕುಗಳನ್ನು ನಿವಾರಿಸುವುದಿಲ್ಲ. ಬದಲಿಗೆ ರಾಜಿಯ ವಿವರಗಳನ್ನು ಪರಿಶೀಲಿಸಿದರೆ, ಇನ್ನಷ್ಟು ಹೆಚ್ಚಿಸುತ್ತದೆ.  ಮೊದಲನೆಯದಾಗಿ ಇದು “ಜಾಗತಿಕ ವ್ಯಾಕ್ಸೀನ್ ರಫ್ತಿನ ಶೇ.10ಕ್ಕಿಂತ ಕಡಿಮೆ ರಫ್ತು ಮಾಡಿದ” “WTO ಸದಸ್ಯ ದೇಶ”ಗಳಿಗೆ ಮಾತ್ರ ಅನ್ವಯವಾಗುತ್ತದೆ. “ಕಡ್ಡಾಯ ಲೈಸೆನ್ಸ್’ನ್ನು ಬಳಸಲು ಸಂಬಂಧಿತ ವ್ಯಾಕ್ಸೀನಿಗೆ ಸಂಬಂಧಿಸಿದ ಎಲ್ಲ ಪೇಟೆಂಟುಗಳ ಪಟ್ಟಿಯನ್ನು ಪ್ರಕಟಿಸಬೇಕು. ಈ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಪೇಟೆಂಟ್ ಹೊಂದಿರುವ ಕಂಪನಿಗೆ ಮಾತ್ರ ಲಭ್ಯವಿರುತ್ತದೆ. ಮಾತ್ರವಲ್ಲ ಕಡ್ಡಾಯ ಲೈಸೆನ್ಸ್ ಪಡೆಯುವ ಕಂಪನಿಯ  ವಿವರಗಳು, ಉತ್ಪಾದನೆ, ರಫ್ತಿನ ಅಂಕೆಸಂಖ್ಯೆಗಳನ್ನು ಕೊಡಬೇಕೆಂಬ (ಇದು ಈಗಿನ TRIPS ನಲ್ಲಿಲ್ಲ) ಷರತ್ತು ಸೇರಿಸಲಾಗಿದೆ.

ಹಾಗಾಗಿ ಈ ರಾಜಿ ಒಪ್ಪಂದದ ನಂತರವೂ, ಜಗತ್ತಿನ 100ಕ್ಕೂ ಹೆಚ್ಚು ಬಡ ದೇಶಗಳ ಮತ್ತಿತರ ವ್ಯಾಕ್ಸೀನ್ ಉತ್ಪಾದಕರು ವ್ಯಾಕ್ಸೀನ್ ಉತ್ಪಾದನೆಯಲ್ಲಿ ತೊಡಗಿ ಲಭ್ಯತೆಯನ್ನು ವೇಗವಾಗಿ ಹೆಚ್ಚಿಸುವುದಕ್ಕಿರುವ ತೊಡಕುಗಳ ನಿವಾರಣೆಯಾಗುವುದಿಲ್ಲ.  ಮಾತ್ರವಲ್ಲ, ಇದೇ ಸೂಚನೆಯನ್ನು ಜೂನ್ 2021ರಲ್ಲಿ ಯುರೋ ಕೂಟ ಮಂಡಿಸಿದ್ದು, ಅದನ್ನು ಬಡದೇಶಗಳು ಒಪ್ಪಿಕೊಂಡಿರಲಿಲ್ಲ. ಈಗ ಭಾರತ, ದಕ್ಷಿಣ ಆಫ್ರಿಕಾಗಳು ಈ ರಾಜಿ ಗೆ  ಒಪ್ಪಿರುವುದು ಆಶ್ವರ್ಯದ ಸಂಗತಿ. ಮೇಲಿನ ವಿವರಗಳನ್ನು ಪರಿಶೀಲಿಸಿದರೆ, ಇದು ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಇದೆ. ಅದೂ ದಿಡ್ಡಿ ಬಾಗಿಲನ್ನು ಅರ್ಧ ಹಾಕಿದಂತೆ ಆಗಿದೆ. ಬೇರೆ ಯಾವ ರೀತಿಯಲ್ಲೂ ಇದನ್ನು ವಿವರಿಸುವುದು ಸಾಧ್ಯವಿಲ್ಲ. ಇದನ್ನು ಬಡದೇಶಗಳು ಒಪ್ಪಿಕೊಳ್ಳಬಾರದು.

ಏಕೆಂದರೆ ಮನುಕುಲದ ಅಳಿವು-ಉಳಿವಿನ ಪ್ರಶ್ನೆ ಬಂದಾಗಲೂ ಶ್ರೀಮಂತ ದೇಶಗಳು ಮತ್ತು ಅವುಗಳು ರಕ್ಷಿಸ ಬಯಸುವ ದೈತ್ಯ ಕಂಪನಿಗಳು ಅನ್ಯಾಯಯುತವಾಗಿ ಹೇರಿದ “ಅಂತರಾಷ್ಟ್ರೀಯ ಒಪ್ಪಂದ”ಗಳನ್ನು ಬದಲಾಯಿಸಲು ಸಿದ್ಧವಿಲ್ಲ ಅಥವಾ ತಮ್ಮ ನಿಗದಿತ ಜವಾಬ್ದಾರಿಯನ್ನು ಹೊರಲು ತಯಾರಿಲ್ಲ ಎಂದು ಮತ್ತೆ ಮತ್ತೆ ಸಿದ್ಧವಾಗಿದೆ. ಇದು ಹವಾಮಾನ ಬದಲಾವಣೆಯ ಒಪ್ಪಂದ ಮತ್ತು ಬಡದೇಶಗಳ ಗೋಣು ಮುರಿಯುವ ಸಾಲ ಮನ್ನಾ ಮಾಡುವ ಕ್ರಮಗಳ ಚರ್ಚೆಗಳಲ್ಲಿ ಈಗಾಗಲೇ ಸಿದ್ಧವಾಗಿದೆ.  ಇದನ್ನು ಒಪ್ಪಿಕೊಳ್ಳದೆ ಬಡದೇಶಗಳು ತಮ್ಮ ಹೋರಾಟವನ್ನು ಐಕ್ಯತೆಯಿಂದ ದೃಢತೆಯಿಂದ ಮುಂದುವರೆಸಬೇಕು. ಇದಕ್ಕೆ ಭಾರತ ನಾಯಕತ್ವ ಕೊಡಬೇಕು. ಆಗ ಮಾತ್ರ ಭಾರತ ‘ವಿಶ್ವಗುರು’ ಎನಿಸಿಕೊಳ್ಳಬಹುದು.

Donate Janashakthi Media

Leave a Reply

Your email address will not be published. Required fields are marked *