ಕೇಂದ್ರ ಹಣಕಾಸು ಮಂತ್ರಿಗಳು ಜೂನ್ 28ರಂದು ಪ್ರಕಟಿಸಿರುವ ‘ಉತ್ತೇಜನಾ ಪ್ಯಾಕೇಜ್’ ಜನಗಳ ಕಣ್ಣಿಗೆ ಮಣ್ಣೆರಚುವ ಇನ್ನೊಂದು ತಿಣುಕಾಟವಲ್ಲದೆ ಬೇರೇನೂ ಅಲ್ಲ ಎಂದು ದೇಶದ ಒಂದು ಪ್ರಮುಖ ಕಾರ್ಮಿಕ ಸಂಘಟನೆ ಸಿಐಟಿಯು ಹೇಳಿದೆ. ಇದರಲ್ಲಿ ಪ್ರಟಿಸಿರುವ ಕ್ರಮಗಳು ಎರಡನೇ ಕೋವಿಡ್ ಅಲೆ ಮತ್ತು ಅದರ ಪರಿಣಾಮವಾಗಿ ವಿವಿಧ ರಾಜ್ಯಗಳಲ್ಲಿ ಹಾಕಿರುವ ಲಾಕ್ ಡೌನ್ ಮತ್ತು ಕರ್ಫ್ಯೂಗಳಿಂದಾಗಿ ತಮ್ಮ ಜೀವನಾಧಾರಗಳು ಧ್ವಂಸಗೊಂಡುದರಿಂದ ಕಂಗಾಲಾಗಿರುವ ಕೋಟ್ಯಂತರ ಜನಗಳಿಗೆ ಬಹು ಅಗತ್ಯವಾದ ಪರಿಹಾರಗಳನ್ನೂ ಕೊಡುತ್ತಿಲ್ಲ, ಅತ್ತ ಅರ್ಥವ್ಯವಸ್ಥೆಯ ಪುನರುಜ್ಜೀವನಕ್ಕೂ ಯಾವುದೇ ನೆರವನ್ನೂ ಕೊಡುತ್ತಿಲ್ಲ. ಕಳೆದ ವರ್ಷ ಮೊದಲ ಕೋವಿಡ್ ಅಲೆಯ ಸಂದರ್ಭದಲ್ಲಿ ಈ ಸರಕಾರ ಪ್ರಕಟಿಸಿದ ‘ಆತ್ಮನಿರ್ಭರ’ ಪ್ಯಾಕೇಜಿನಂತೆಯೇ, ಇದು ಕೂಡ ಒಂದು ವಂಚನೆಯ ಕಸರತ್ತು ಎಂದು ಅದು ವರ್ಣಿಸಿದೆ.
ಇದನ್ನು ಓದಿ: ಕೋವಿಡ್ ಬಾಧಿತ ವಲಯಕ್ಕೆ 1.1 ಲಕ್ಷ ಕೋಟಿ ನೆರವು: ಕೇಂದ್ರದಿಂದ ಮತ್ತೊಂದು ಪ್ಯಾಕೇಜ್ ಘೋಷಣೆ
ಈ ಪ್ಯಾಕೇಜ್ ಸಾಲಗಳಿಗೆ ಗ್ಯಾರಂಟಿ ಮತ್ತು ರಿಯಾಯ್ತಿ ಸಾಲಗಳ ಮೇಲೆಯೇ ಗಮನ ಕೇಂದ್ರೀಕರಿಸಿರುವಂತದ್ದು. ಈ ಮಹಾಸೋಂಕಿನ ಎರಡನೇ ಅಲೆಯ ಸಮಯದಲ್ಲಿ ಎಪ್ರಿಲ್-ಮೇ 2021ರಲ್ಲಿ ತಮ್ಮ ಕೆಲಸ ಮತ್ತು ಆದಾಯಗಳನ್ನು ಕಳಕೊಂಡಿರುವ 2.2 ಕೋಟಿ ಕಾರ್ಮಿಕರಿಗೆ ಇದರಲ್ಲಿ ಯಾವ ಕ್ರಮವೂ ಇಲ್ಲ. ಇದೇ ಅವದಿಯಲ್ಲಿ ಕನಿಷ್ಟ ಕೂಲಿ ಬಡತನದ ರೇಖೆಯ ಕೆಳಗೆ ತಳ್ಳಲ್ಪಟ್ಟಿರುವ 23 ಕೋಟಿ ಅಸಂಘಟಿತ ವಲಯದ ಕಾರ್ಮಿಕರಿಗೆ ಇದು ಏನ್ನೂ ಕೊಟ್ಟಿಲ್ಲ. ಮೊದಲ ಅಲೆಯಲ್ಲಿ ಕೆಲಸ ಕಳಕೊಂಡ ಕೋಟ್ಯಂತರ ಕಾರ್ಮಿಕರಲ್ಲಿ ಹಲವರಿಗೆ ಇನ್ನೂ ಕೆಲಸ ಸಿಕ್ಕಿಲ್ಲ. ಇದರಲ್ಲಿ ಮಹಿಳೆಯರ ಸಂಖ್ಯೆ ಬಹಳ ದೊಡ್ಡದು. ಅವರಿಗೂ ಇದರಲ್ಲಿ ಏನೂ ಕೊಟ್ಟಿಲ್ಲ.
ನಮ್ಮ ಅರ್ಥವ್ಯವಸ್ಥೆ ಈಗ ಎದುರಿಸುತ್ತಿರುವ ಸಮಸ್ಯೆಯೆಂದರೆ ಬೇಡಿಕೆಯ ಕೊರತೆ ಎಂದು ನೆನಪಿಸಿರುವ ಸಿಐಟಿಯು, ಇಂತಹ ಸನ್ನಿವೇಶದಲ್ಲಿ ಸಾಲ ಗ್ಯಾರಂಟಿಗಳು ಮತ್ತು ಅಗ್ಗದ ಸಾಲಗಳಿಂದ ಅರ್ಥವ್ಯವಸ್ಥೆಯ ಪುನರುಜ್ಜೀವನಕ್ಕೆ ನೆರವಾಗುತ್ತದೆ ಎಂದು ಯೋಚಿಸುವುದು ನಿರರ್ಥಕ ಎಂದು ಹೇಳಿದೆ. ಈಗ ಕೈಗೊಳ್ಳಬೇಕಾದ ಅಗತ್ಯ ಕ್ರಮ ಎಂದರೆ ಜನಗಳ ಜೇಬಿಗೆ ಹಣ ಬರುವಂತೆ ಮಾಡುವುದು, ಆಮೂಲಕ ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಉಂಟಾಗುವಂತೆ ಮಾಡುವುದು. ಕಳೆದ ಒಂದು ವರ್ಷದಿಂದ ಸಿಐಟಿಯು ಮತ್ತು ಇತರ ಕಾರ್ಮಿಕ ಸಂಘಟನೆಗಳು ಇದನ್ನು ಆಗ್ರಹಿಸುತ್ತಲೇ ಬರುತ್ತಿವೆ. ಕಾರ್ಮಿಕ ಸಂಘಗಳ ಜಂಟಿ ವೇದಿಕೆಗಳು, ಅರ್ಥಶಾಸ್ತ್ರಜ್ಞರು ಮತ್ತು ಎಡಪಕ್ಷಗಳು ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಕುಟುಂಬಗಳಿಗೆ ತಿಂಗಳಿಗೆ 7500ರೂ.ನಂತೆ ನಗದು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸುತ್ತ ಬಂದಿವೆ.
ಆದರೆ ವಿತ್ತೀಯ ಮೂಢನಂಬಿಕೆಗೆ ಅಂಟಿಕೊಂಡಿರುವ ಈ ಬಿಜೆಪಿ ಸರಕಾರ ಅದನ್ನು ಹಟಮಾರಿತನದಿಂದ ನಿರಾಕರಿಸುತ್ತಲೇ ಬಂದಿದೆ. ಎಂದಿರುವ ಸಿಐಟಿಯು ಮತ್ತೊಮ್ಮೆ, ಮುಂದಿನ ಆರು ತಿಂಗಳು ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಕುಟುಂಬಗಳಿಗೆ ತಿಂಗಳಿಗೆ 7500ರೂ.ನಂತೆ ನಗದು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದೆ, ಇದು ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಿ, ಪೂರೈಕೆಯನ್ನು ಸ್ಫುರಿಸಿ ಅರ್ಥವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಅದು ಹೇಳಿದೆ.