ವಸಂತರಾಜ ಎನ್.ಕೆ.
ಬಿಜೆಪಿ ಸರಕಾರ ಉತ್ತಮ ಆಡಳಿತ ನೀಡಿದೆ, ಎಲ್ಲ ಆಶ್ವಾಸನೆಗಳನ್ನು ಪೂರೈಸಿದೆ. ಇನ್ನೂ ಸಮಸ್ಯೆಗಳಿದ್ದರೆ ಹಿಂದಿನ ವಿರೋಧ ಪಕ್ಷಗಳ ದುರಾಡಳಿತದ ಫಲ. ಅವನ್ನು ಮುಂದೆ ಸರಿಪಡಿಸಲಾಗುವುದು ಎಂದು ಜನತೆಯನ್ನು ನಂಬಿಸುವುದು ಯೋಗಿ-ಮೋದಿ-ಶಾ ತ್ರಿವಳಿಗಳಿಗೆ ಕಷ್ಟವಾಗುತ್ತಿದೆ. ಅದರ ಸಾಮಾಜಿಕ ಇಂಜಿನೀಯರಿಂಗ್ ತಿರುಗುಬಾಣ ಆಗುತ್ತಿದೆ. ಬಿಜೆಪಿಯ ದುರಾಡಳಿತದ ವೈಫಲ್ಯ ಮತ್ತು ಸಾಮಾಜಿಕ ಇಂಜಿನೀಯರಿಂಗ್ ಬಯಲು ಮಾಡುವುದರಲ್ಲೂ, ತನ್ನದೇ ಸಾಮಾಜಿಕ ಇಂಜಿನೀಯರಿಂಗ್ ಆಧಾರಿತ ರಾಜಕೀಯ ಮೈತ್ರಿಕೂಟ ಕಟ್ಟುವುದರಲ್ಲೂ ಎಸ್.ಪಿ. ಅದಕ್ಕೆ ಪ್ರಬಲ ಸವಾಲೆಸೆದು ನೇರ ಮತ್ತು ಪ್ರಮುಖ ಸ್ಪರ್ಧಿಯಾಗಿದೆ. ಎಸ್.ಪಿ. ಗೆ ಭಾರೀ ಬಹುಮತ ಬಾರದಿದ್ದರೆ ಬಿಜೆಪಿಯನ್ನು ಸರಕಾರದಿಂದ ಉರುಳಿಸುವುದು ಸುಲಭವಾಗಲಿಕ್ಕಿಲ್ಲ. ಆದರೆ ‘ಐಡೆಂಟಿಟಿ ರಾಜಕೀಯ’ದ ಸೀಮಿತತೆ ಬಯಲಾಗುವುದು ಅಥವಾ ಅದು ದುರ್ಬಲವಂತೂ ಆಗುವುದು ಮತ್ತು ಸಾಮಾಜಿಕ ಆರ್ಥಿಕ ವಿಳಯಗಳು ಮುನ್ನೆಲೆಗೆ ಬರುವ ಸೂಚನೆಯನ್ನು ಯುಪಿ ಚುನಾವಣೆ ಕೊಟ್ಟರೆ, ಅದೂ ರಾಷ್ಟ್ರೀಯ ರಾಜಕಾರಣವನ್ನು ಸಕಾರಾತ್ಮಕ ದಿಕ್ಕಿನಲ್ಲಿ ಬದಲಾಯಿಸುವ ಸಾಧ್ಯತೆಯಂತೂ ಇದೆ.
ಸುಮಾರು ಒಂದು ತಿಂಗಳ ಕಾಲ (ಫೆ.10-ಮಾ.7) 403 ಸ್ಥಾನಗಳಿಗೆ ನಡೆಯಲಿರುವ ಏಳು ಸುತ್ತಿನ ವಿಧಾನಸಭೆ ಚುನಾವಣೆಗಳಲ್ಲಿ ಮೊದಲ ಸುತ್ತು ಇನ್ನೇನು (ಫೆ.10) ಆರಂಭವಾಗಲಿದೆ. ಪಶ್ಚಿಮ ಭಾಗದಿಂದ ಆರಂಭವಾಗಿ ಪ್ರತಿ ಸುತ್ತಿನಲ್ಲಿ 55-60 ಸೀಟುಗಳಿಗೆ ಚುನಾವಣೆ ನಡೆಯಲಿದೆ. ದೇಶದ ಅತಿ ದೊಡ್ಡ ರಾಜ್ಯವಾಗಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗಳು ಯಾವತ್ತೂ ರಾಷ್ಟ್ರೀಯ ಪ್ರಾಮುಖ್ಯತೆ ಪಡೆದಿದ್ದವು. ಉತ್ತರ ಪ್ರದೇಶದ ರಾಜಕಾರಣದಲ್ಲಿ ಬರುವ ಬದಲಾವಣೆಗಳು ರಾಷ್ಟ್ರೀಯ ರಾಜಕಾರಣದಲ್ಲಿ ಬದಲಾವಣೆಗಳಿಗೆ ಹೆಚ್ಚಾಗಿ ಪೂರ್ವಸೂಚಿಯಾಗಿರುತ್ತವೆ. 2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ನಿಚ್ಚಳ ಮತ್ತು ಅಗಾಧ ಬಹುಮತದೊಂದಿಗೆ ವಿಜಯ 2019ರ ಲೋಕಸಭಾ ಚುನಾವಣೆಯಲ್ಲಿ ಅದರ ಅಗಾಧ ವಿಜಯದ ಪೂರ್ವಸೂಚಿಯಾಗಿತ್ತು. ಈಗಲೂ 2024ರ ಲೋಕಸಭಾ ಚುನಾವಣೆಯ ಪೂರ್ವಸೂಚಿಯಾಗಿಯೇ ಇಡೀ ದೇಶದಲ್ಲಿ ಕುತೂಹಲ ಮೂಡಿಸಿದೆ.
ಹಿಂದುತ್ವ ವರ್ಸಸ್ ಸಾಮಾಜಿಕ ನ್ಯಾಯ?
1980 ರ ದಶಕದ ಕೊನೆಯ ವರ್ಷಗಳ ನಂತರ ‘ಮಂಡಲ’ ಮತ್ತು ‘ಕಮಂಡಲ’ ರಾಜಕಾರಣದ ನಡುವೆ ಉತ್ತರ ಪ್ರದೇಶ ಓಲಾಡುತ್ತಿದೆ. ಸಾಮಾಜಿಕ ನ್ಯಾಯ ಮತ್ತು ಕೋಮುವಾದಿ ರಾಜಕಾರಣಗಳ ನಡುವೆ ಹಣಾಹಣಿ ನಡೆಯುತ್ತಿದೆ. ಎಸ್.ಪಿ., ಬಿ.ಎಸ್.ಪಿ. ಮತ್ತಿತರ ಹಲವು ಸಣ್ಣ ಪಕ್ಷಗಳು ಸಾಮಾಜಿಕ ನ್ಯಾಯಕ್ಕಾಗಿ ಹಿಂದುಳಿದ/ದಲಿತ ಜಾತಿಗಳ ಆಕ್ರೋಶವನ್ನು ಪ್ರತಿನಿಧಿಸುತ್ತವೆ. ಎಸ್.ಪಿ., ಎಲ್ಲ ಒಬಿಸಿ (ಹಿಂದುಳಿದ) ಜಾತಿಗಳ ಪಕ್ಷವಾಗಿ ಹೊಮ್ಮಲು ಪ್ರಯತ್ನಿಸಿತ್ತು. ಕೆಲ ಕಾಲ ಆಗಿತ್ತು ಕೂಡಾ. ಅದೇ ರೀತಿ ಬಿ.ಎಸ್.ಪಿ. ಎಲ್ಲ ಪರಿಶಿಷ್ಟ (ದಲಿತ) ಜಾತಿಗಳ ಪಕ್ಷವಾಗಿ ಹೊಮ್ಮಲು ಪ್ರಯತ್ನಿಸಿತ್ತು. ಕೆಲ ಕಾಲ ಆಗಿತ್ತು ಕೂಡಾ. ಬಿಜೆಪಿ ಕೋಮುವಾದಿ ಆಧಾರದ ಮೇಲೆ ಇಡೀ ‘ಹಿಂದೂ ಸಮಾಜ’ವನ್ನು ಪ್ರತಿನಿಧಿಸಲು ಪ್ರಯತ್ನಿಸುತ್ತಿತ್ತು. ಇನ್ನೂ ಪ್ರಯತ್ನಿಸುತ್ತಿದೆ, ಕಾಂಗ್ರೆಸ್ ಬಹು-ಜಾತಿ ಬಹು-ಧರ್ಮೀಯ ರಾಷ್ಟ್ರೀಯ ಪಕ್ಷವಾಗಿ ತನ್ನನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿತ್ತು. ಇನ್ನೂ ಪ್ರಯತ್ನಿಸುತ್ತಿದೆ ಎಂದು ರಾಜಕೀಯ ವೀಕ್ಷಕರು ಸಾಮಾನ್ಯವಾಗಿ ಹೇಳುತ್ತಾರೆ.
ಇವು ಈ ಪಕ್ಷಗಳ ಆಶಯ-ತೋರಿಕೆಗಳಷ್ಟೇ. ಈ ಪಕ್ಷಗಳ ನಿಜವಾದ ನೆಲೆ, ಪ್ರಾತಿನಿಧ್ಯ ಕೆಲವು ಜಾತಿ-ವರ್ಗಗಳಿಗೆ ಸೀಮಿತವಾಗಿದೆ. ಕಾಂಗ್ರೆಸ್ ಅದರ ಅಜೇಯ ಏಕಸ್ವಾಮ್ಯದ ಅವಧಿಯಲ್ಲೂ ಸಹ ಉಚ್ಛ ಜಾತಿಗಳ ಅದರಲ್ಲೂ ಬ್ರಾಹ್ಮಣರ ಪ್ರಾಬಲ್ಯವನ್ನು ಪ್ರತಿನಿಧಿಸುತ್ತಿತ್ತು. ಬಿಜೆಪಿ ಮತ್ತು ಅದರ ಹಿಂದಿನ ಅವತಾರ ಜನಸಂಘ ಸಹ ಬ್ರಾಹ್ಮಣ-ಬನಿಯಾ ಮತ್ತಿತರ ಉಚ್ಛ ಜಾತಿಗಳ ಜಾತಿಗಳ ಪ್ರಾಬಲ್ಯವನ್ನೇ ಪ್ರತಿನಿಧಿಸುತ್ತಿತ್ತು. ಕಾಂಗ್ರೆಸ್ ನ ರಾಜಕೀಯ ಏಕಸ್ವಾಮ್ಯಕ್ಕೆ ವಿರೋಧ ಪಕ್ಷಗಳ ಕೂಟ 60ರ ದಶಕದ ಕೊನೆಯಲ್ಲಿ ಸವಾಲು ಹಾಕಿದ್ದವು. 1970ರ ದಶಕದ ಕೊನೆಯಲ್ಲಿ ಇವೆಲ್ಲ ಒಂದುಗೂಡಿ ರಚಿಸಿದ ಬಹು-ಜಾತಿ ಬಹು-ಧರ್ಮೀಯ ರಾಷ್ಟ್ರೀಯ ‘ಜನತಾ ಪಕ್ಷ’ದ ಪ್ರಯೋಗದ ವೈಫಲ್ಯದೊಂದಿಗೆ ಹಲವು ಸಣ್ಣ ಪಕ್ಷಗಳು ಮತ್ತೆ ತಲೆಎತ್ತಿದ್ದವು. ಬರಬರುತ್ತಾ ಹೆಚ್ಚಿನ ಈ ಪಕ್ಷಗಳು ಒಂದೆರಡು ಜಾತಿಯ ಪಕ್ಷಗಳಾಗಿ ಬಿಟ್ಟವು.
ಜಾತಿ ಸಮೀಕರಣ ಮಾತ್ರವೇ?
ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ಸಮಾಜವಾದಿ ಪಾರ್ಟಿ ಯಾದವರ ಪಕ್ಷ, ಬಿಜೆಪಿ ಬ್ರಾಹ್ಮಣ-ಬನಿಯಾಗಳ ಪಕ್ಷ ಮತ್ತು ಬಿ.ಎಸ್.ಪಿ. ಪ್ರಮುಖವಾಗಿ ಜಾತವ ದಲಿತ ಜಾತಿಯ ಪಕ್ಷ. ಇನ್ನೂ ಹಲವು ಸಣ್ಣ ಪಕ್ಷಗಳು ತಲಾ ಒಂದು ಜಾತಿಯ (ಉದಾ: ಆರ್.ಎಲ್.ಡಿ. ಜಾಟರದ್ದು, ನಿಶಾದ ಪಾರ್ಟಿ ನಿಶಾದ ಮುಂತಾದ ನದಿ ತಟದ ಮೀನುಗಾರ ಅಂಬಿಗ ಜಾತಿಗಳದ್ದು, ಅಪ್ನಾ ದಲ್ ಕೂರ್ಮಿ ಜಾತಿಯದ್ದು) ಪಕ್ಷಗಳಾಗಿವೆ. ಈ ಪಕ್ಷಗಳು ಚುನಾವಣಾ ಸಮೀಕರಣವನ್ನು ಪ್ರಭಾವಿಸುವ ಸಂಖ್ಯೆಯಲ್ಲಿ ಕೆಲವು ಪ್ರದೇಶಗಳಲ್ಲಿ ಮಾತ್ರ ಪ್ರಬಲವಾಗಿರುವ ಪ್ರಾದೇಶಿಕ ಪಕ್ಷಗಳೂ ಹೌದು. ಈ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಮುಸ್ಲಿಮರಿಗೆ ಮಾತ್ರ ತಮ್ಮದೇ ಪಕ್ಷವಿಲ್ಲ. ಓವೈಸಿ ಯ ಎಂ.ಐ.ಎಂ ಪಕ್ಷ ಪ್ರಯತ್ನಿಸುತ್ತಿದ್ದರೂ ಈ ವರೆಗೆ ಸಫಲವಾಗಿಲ್ಲ. ಮುಸ್ಲಿಮರು ಹೆಚ್ಚಾಗಿ ದೊಡ್ಡ ಅಥವಾ ಗೆಲ್ಲುವ ಸಾಧ್ಯತೆಯಿರುವ (ಅಥವಾ ಬಿಜೆಪಿಯನ್ನು ಸೋಲಿಸುವ ಹೆಚ್ಚಿನ ಸಾಧ್ಯತೆಯುಳ್ಳ) ‘ಸೆಕ್ಯುಲರ್’ ಪಕ್ಷಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅವರು ಒಂದು ಪಕ್ಷವನ್ನು ಸಾರಾ ಸಗಟಾಗಿ ಬೆಂಬಲಿಸುತ್ತಾರೆಂಬುದು ಸಹ ಮಿಥ್ಯೆ. ಮುಸ್ಲಿಮರೊಳಗೂ ಜಾತಿ-ವರ್ಗಗಳಿವೆ. ಪ್ರಾದೇಶಿಕವಾಗಿ, ಕ್ಷೇತ್ರವಾರಾಗಿ ಸಹ ಭಿನ್ನತೆಗಳನ್ನು ಆಧರಿಸಿ ಅವರ ರಾಜಕೀಯ ಆಯ್ಕೆ ಭಿನ್ನವಾಗಿರುತ್ತದೆ. ಇದು ಎಲ್ಲಾ ಜಾತಿಗಳ ಕುರಿತೂ ನಿಜ. ಆದರೂ ಈ ಪಕ್ಷಗಳು ರಾಜಕೀಯ ಅಧಿಕಾರದ ಲೆಕ್ಕಾಚಾರದ ಭಾಗವಾಗಿ ಇತರ ಜಾತಿ-ಪಕ್ಷಗಳೊಡನೆ ಮೈತ್ರಿಕೂಟ ರಚಿಸಿಕೊಳ್ಳುತ್ತವೆ ಅಥವಾ ಆ ಜಾತಿಗಳ ಬೆಂಬಲ ಗಳಿಸಿಕೊಳ್ಳಲು ಪ್ರಯತ್ನಿಸುತ್ತವೆ.
ಒಟ್ಟಾರೆಯಾಗಿ ಹೇಳುವುದಾದರೆ ಈಗ ಉತ್ತರ ಪ್ರದೇಶದ ರಾಜಕಾರಣ ಜಾತಿವಾರು ಸಮೀಕರಣದ ಲೆಕ್ಕಾಚಾರವಾಗಿದೆ ಎಂದು ಕೆಲವು ರಾಜಕೀಯ ವೀಕ್ಷಕರ ಅಂಬೋಣ. ಕಳೆದ 2-3 ದಶಕಗಳ ಚುನಾವಣಾ ರಾಜಕೀಯ ನೋಡಿದರೆ ಇದು ಭಾಗಶಃ ನಿಜ. 2017ರ ಚುನಾವಣೆಯಲ್ಲಿ ಬಿ.ಎಸ್.ಪಿ.-ಎಸ್.ಪಿ. ಗಳ ಮೈತ್ರಿಕೂಟದ ಪ್ರಬಲ ಸವಾಲು ಇದ್ದರೂ, ಬಿಜೆಪಿ ಅಗಾಧ ಬಹುಮತದಿಂದ ಗೆದ್ದಿದ್ದು, ಈ ಪಕ್ಷಗಳ ಜಾತಿ ಲೆಕ್ಕಾಚಾರಗಳನ್ನು ಮೈಕ್ರೋ ಸಾಮಾಜಿಕ ಇಂಜಿನೀಯರಿಂಗ್ ನಿಂದ ಎದುರಿಸಿದ್ದು ಕಾರಣವೆಂದು ಹೇಳಲಾಗುತ್ತದೆ.
ಹಿಂದೆ ಬಿ.ಎಸ್.ಪಿ ಮತ್ತು ಎಸ್.ಪಿ. ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದ ಬಹುಮತ ತಪ್ಪಿತ್ತು. ದಲಿತ (20%) – ಒಬಿಸಿ (44%) ಜಾತಿಗಳ ಬಹು ದೊಡ್ಡ ಭಾಗದೊಂದಿಗೆ ಮುಸ್ಲಿಮರ (20%) ದೊಡ್ಡ ಪಾಲು ತನಗೆ ಸಿಗುತ್ತದೆ ಎಂಬುದು ಬಿ.ಎಸ್.ಪಿ.-ಎಸ್.ಪಿ. ಮೈತ್ರಿಕೂಟದ ಲೆಕ್ಕಾಚಾರವಾಗಿತ್ತು. ಆದರೆ ಬಿಜೆಪಿಯು ಯಾದವೇತರ ಸಣ್ಣ ಒಬಿಸಿ (ಮೌರ್ಯ-5%, ಕೂರ್ಮಿ-5%, ನಿಶಾದ್ -5%, ಜಾಟ್/ಲೋಧಿ-2% ಇತ್ಯಾದಿ) ಮತ್ತು ಜಾತವೇತರ (ಪಾಸಿ-4%, ಇತರೆ-6%) ದಲಿತ ಜಾತಿಗಳ ನಾಯಕರ ಪಕ್ಷಗಳ ಕೂಟ ರಚಿಸಿ ಅವರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಯಿತು. ಉಚ್ಛ (ಬಾಹ್ಮಣ, ಥಾಕುರ್, ವೈಶ್ಯ ಇತ್ಯಾದಿ ಒಟ್ಟು ಶೇ.15) ಜಾತಿಗಳ ಬಹುಭಾಗ ಅದರ ಜೋಳಿಗೆಯಲ್ಲಿ ಹೇಗೂ ಇತ್ತು. ಮುಸ್ಲಿಮರ ಮತ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ನಡುವೆ ಹಂಚಿಹೋಗಿತ್ತು. ಎಸ್.ಪಿ. ಯಾದವ ಮತಗಳಿಗೆ ಮತ್ತು ಬಿ.ಎಸ್.ಪಿ. ಜಾತವ್ ಮತಗಳಿಗೆ ಬಹುಪಾಲು ಸೀಮಿತವಾಗಿತ್ತು. ಸಾಲದ್ದಕ್ಕೆ ಎಸ್.ಪಿ. ಅಭ್ಯರ್ಥಿಗಳಿಗೆ ಬಿ.ಎಸ್.ಪಿ. ಯ ದಲಿತ ಬೆಂಬಲಿಗರ ಮತ ಸಿಕ್ಕಿದರೂ, ಬಿ.ಎಸ್.ಪಿ. ಅಭ್ಯರ್ಥಿಗಳಿಗೆ ಎಸ್.ಪಿ. ಯ ಒಬಿಸಿ ಬೆಂಬಲಿಗರ ಮತಗಳು ಸಿಗಲಿಲ್ಲ.
ಸಾಮಾಜಿಕ ಇಂಜಿನೀಯರಿಂಗ್ ತಿರುಗುಬಾಣ?
ಇದು ನಿಜವೆಂದಿಟ್ಟುಕೊಂಡರೂ ಇದೇ ಅಂಶ ಈ ಬಾರಿ ಬಿಜೆಪಿಗೆ ಮುಳುವಾಗಲಿದೆ. ಬಿಜೆಪಿ ಪಡೆದ ಯಾದವೇತರ ಸಣ್ಣ ಒಬಿಸಿ ಮತ್ತು ಜಾತವೇತರ ಸಣ್ಣ ದಲಿತ ಜಾತಿಗಳ ಬೆಂಬಲವನ್ನು ಕಳೆದುಕೊಳ್ಳಲಿದೆ. ಈ ಜಾತಿಗಳಿಗೆ ರಾಜಕೀಯ ಆಡಳಿತದ ಸ್ಥಾನಗಳಲ್ಲಿ ಪ್ರಾತಿನಿಧ್ಯದಲ್ಲಿ ಮೋಸ ಮಾಡಲಾಯಿತು. ಉಚ್ಛ ಜಾತಿಯ ಠಾಕುರ್ ಬ್ರಾಹ್ಮಣ ಬನಿಯಾಗಳನ್ನು ಎಲ್ಲೆಡೆ ಅಧಿಕಾರದ ಸ್ಥಾನಗಳಲ್ಲಿ ಕೂರಿಸಲಾಯಿತು. ಚುನಾವಣೆಯ ಮೊದಲು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದ ಕೆ.ಪಿ.ಮೌರ್ಯ ಬದಲು ಉಚ್ಛ ಜಾತಿಯಾದ ಠಾಕುರ್ ಜಾತಿಯ ಆದಿತ್ಯನಾಥ ಯೋಗಿ ಯನ್ನು ಮುಖ್ಯಮಂತ್ರಿ ಮಾಡಲಾಯಿತು. ಸಣ್ಣ ಒಬಿಸಿ ಮತ್ತು ದಲಿತ ಜಾತಿಗಳ ಅತೃಪ್ತಿ ಚುನಾವಣಾ ಸಮಯದ್ದು ಮಾತ್ರವಲ್ಲ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 2 ವರ್ಷಗಳಲ್ಲೇ 100ಕ್ಕೂ ಹೆಚ್ಚು ಒಬಿಸಿ ದಲಿತ ಶಾಸಕರು ಈ ಅತೃಪ್ತಿಯನ್ನು ವಿಧಾನಸಭೆಯಲ್ಲೇ ವ್ಯಕ್ತಪಡಿಸಿದ್ದರು. ಇದು ಬರಿಯ ಭಾವನೆಯಲ್ಲ. ರಾಜ್ಯದ ವಿಧಾನಸಭೆಯ ಉಚ್ಛ ಜಾತಿಗಳ ಶಾಸಕರ ಪ್ರಮಾಣ 1980ರ ನಂತರ ಈ ವಿಧಾನಸಭೆಯಲ್ಲಿ ಅತಿ ಹೆಚ್ಚು ಅಂದರೆ ಶೇ. 44.3 ಮಟ್ಟ ಮುಟ್ಟಿತ್ತು. ಆಡಳಿತದಲ್ಲಿ, ಪೊಲೀಸ್ ವ್ಯವಸ್ಥೆಯಲ್ಲಿ ಥಾಕುರ್ ಪಾರಮ್ಯವು ತಾಂಡವವಾಡಿತ್ತು.
ಅಲ್ಲದೆ 2011ರ ಜಾತಿ (ಸಾಮಾಜಿಕ-ಆರ್ಥಿಕ) ಸಮೀಕ್ಷೆಯ ವರದಿಯನ್ನು ಪ್ರಕಟಿಸುವುದನ್ನು ಬಿಜೆಪಿ ಸರಕಾರ ಮುಂದೂಡುತ್ತಾ ಬಂದಿದೆ. ಮೀಸಲಾತಿ ಸಣ್ಣ ಜಾತಿಗಳಿಗೆ ಸಮಾನವಾಗಿ ಹಂಚಲು ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಒಂದು ಕಮಿಶನ್ ನೇಮಿಸಲಾಗಿತ್ತು. 2018ರಲ್ಲಿ ಅದು ವರದಿ ಕೊಡಬೇಕಾಗಿತ್ತು. ವರದಿ ಕೊಡುವ ದಿನಾಂಕವನ್ನು 12ನೆಯ ಬಾರಿ ವಿಸ್ತರಿಸಲಾಗಿದೆ. ಇವೆಲ್ಲದರಿಂದಾಗಿ ಬಿಜೆಪಿ ವಿರುದ್ಧ ಈ ಆಕ್ರೋಶ ಒಬಿಸಿ ಮತ್ತು ದಲಿತ (ವಿಶೇಷವಾಗಿ ಸಣ್ಣ ಜಾತಿಗಳ) ಜನತೆಯಲ್ಲಿ ವ್ಯಾಪಕವಾಗಿ ಹಬ್ಬಿದ್ದು, ಇದನ್ನು ಗ್ರಹಿಸಿದ ಹಲವು ಪ್ರಮುಖ ಬಿಜೆಪಿ ಒಬಿಸಿ-ದಲಿತ ಮಂತ್ರಿಗಳು, ಶಾಸಕರು, ನಾಯಕರು ಬಿಜೆಪಿ ಬಿಟ್ಟು ಎಸ್.ಪಿ. ಸೇರಲು ಕಾರಣವೆಂದು ಹೇಳಲಾಗಿದೆ. ಎಸ್.ಪಿ. ಇದನ್ನು ಗ್ರಹಿಸಿ ಎಲ್ಲ ಸಣ್ಣ ಒಬಿಸಿ ದಲಿತ ಜಾತಿಗಳ ನಾಯಕರು, ಪಕ್ಷಗಳು, ಕಾರ್ಯಕರ್ತರು ಮತ್ತು ಜನತೆಯ ಬೆಂಬಲ ಗಳಿಸಿ ತನ್ನ ಮೈತ್ರಿಕೂಟದಲ್ಲಿ ಸೇರಿಸಲು ಪ್ರಯತ್ನಿಸಿದೆ. ಬಿ.ಎಸ್.ಪಿ. ಈ ಚುನಾವಣೆಯಲ್ಲಿ ಇನ್ನೂ ಅಷ್ಟೇನೂ ಸಕ್ರಿಯವಾಗಿಲ್ಲದಿರುವುದು ಸಹ ಎಸ್.ಪಿ. ಗೆ ನೆರವಾಗಲಿದೆ. ರಾಜ್ಯದ ಪಶ್ಚಿಮ ಭಾಗದಲ್ಲಿ ಮುಜಫ್ಫರ್‌ನಗರ ಕೋಮುದಂಗೆಗಳ ಮೂಲಕ ಬಿಜೆಪಿ ಕಳೆದ ಬಾರಿ ಜಾಟ್ ಮತ್ತು ಮುಸ್ಲಿಂ ಐಕ್ಯತೆಯನ್ನು ಮುರಿದದ್ದು ಸಹ ಈ ಬಾರಿ ಕೆಲಸ ಮಾಡುವುದಿಲ್ಲ. ದೇಶವ್ಯಾಪಿ ರೈತ ಚಳುವಳಿಯ ಫಲವಾಗಿ ಈ ಎರಡು ಸಮುದಾಯಗಳು ಬಿಜೆಪಿಯ ವಿರುದ್ಧ ಆಕ್ರೋಶಗೊಂಡಿದ್ದು, ಅವುಗಳಿಗೆ ತಮ್ಮ ತಪ್ಪಿನ ಅರಿವಾಗಿದೆ ಎಂದೂ ಹಲವು ವರದಿಗಳು ಹೇಳುತ್ತಿವೆ.
ಹುಸಿ ಯೋಜನೆಗಳು ಬಯಲಾಗುತ್ತಿವೆ
ಸಾಮಾಜಿಕ ಇಂಜಿನೀಯರಿಂಗ್, ಜಾತಿ ಸಮೀಕರಣ, ರಾಜಕೀಯ ಪ್ರಾತಿನಿಧ್ಯ ಮಾತ್ರ ಚುನಾವಣೆಯಲ್ಲಿ ಪಾತ್ರ ವಹಿಸುತ್ತದೆ ಎಂಬುದು ಯಾವತ್ತೂ ನಿಜವಲ್ಲ. ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಸರಕಾರ ನಿರ್ವಹಿಸಿದ ರೀತಿ, ಸರಕಾರದ ಸಾಮಾನ್ಯ ಆಡಳಿತ ನಿರ್ವಹಣೆ, ಜನಪರ ಕಾರ್ಯಕ್ರಮಗಳ ಸಾಧನೆ ಇವೆಲ್ಲ ಸಹ ಯಾವಾಗಲೂ ಇದ್ದೇ ಇರುತ್ತವೆ. ಭಾವನಾತ್ಮಕ ಮತ್ತಿತರ ವಿಷಯಗಳು ಮುನ್ನೆಲೆಗೆ ಬಂದಾಗಲೂ ಇವು ಒಳಸುಳಿಯಾಗಿ ಇದ್ದೇ ಇರುತ್ತವೆ. ಬಿಜೆಪಿ ಹಲವು ಜಾತಿ-ವರ್ಗಗಳ ಬೆಂಬಲವನ್ನು ಗಳಿಸಿದ್ದು, ಮೋದಿಯ ‘ಸಮರ್ಥ ನಾಯಕತ್ವ’ ಮತ್ತು ‘ಡಬ್ಬಲ್ ಇಂಜಿನ್’ ಸವಲತ್ತಿನಿಂದ ಸಾಮಾಜಿಕ ಆರ್ಥಿಕ ಸಮಸ್ಯೆಗಳ ಪರಿಹಾರ, ಅಪರಾಧ-ಮುಕ್ತ ಭ್ರಷ್ಟಾಚಾರ-ಮುಕ್ತ ಉತ್ತಮ ಆಡಳಿತ, ಕಲ್ಯಾಣ ಯೋಜನೆಗಳ ಜಾರಿ ಮಾಡುವ ನಿರೀಕ್ಷೆಯಿಂದಾಗಿ ಸಹ. ಇವೆಲ್ಲದರಲ್ಲಿ ಯೋಗಿ ಸರಕಾರ ದಯನೀಯವಾಗಿ ವಿಫಲವಾಗಿದೆ. ಯೋಗಿ ಯು.ಪಿ. ಯ ಹಿಂದಿನ (ಬಿಜೆಪಿ ಸರಕಾರ ಸೇರಿದಂತೆ) ಯಾವುದೇ ಸರಕಾರಕ್ಕಿಂತ ಕೆಟ್ಟ ಆಡಳಿತ ನೀಡಿದ್ದಾರೆ ಎಂಬುದು ಎಲ್ಲರಿಗೂ ಅರಿವಾಗಿದೆ.
ಬಿಜೆಪಿ ಸರಕಾರ ಉತ್ತಮ ಆಡಳಿತ ನೀಡಿದೆ, ಎಲ್ಲ ಆಶ್ವಾಸನೆಗಳನ್ನು ಪೂರೈಸಿದೆ. ಇನ್ನೂ ಸಮಸ್ಯೆಗಳಿದ್ದರೆ ಹಿಂದಿನ ವಿರೋಧ ಪಕ್ಷಗಳ ದುರಾಡಳಿತದ ಫಲ. ಅದನ್ನು ಮುಂದೆ ಸರಿಪಡಿಸಲಿದೆ ಎಂದು ಜನತೆಯನ್ನು ನಂಬಿಸುವುದು ಯೋಗಿ-ಮೋದಿ-ಶಾ ತ್ರಿವಳಿಗಳಿಗೆ ಕಷ್ಟವಾಗುತ್ತಿದೆ. ಉದಾಹರಣೆಗೆ ಮೋದಿ ಒಂದು ಬಟನ್ ಒತ್ತಿ 1 ಲಕ್ಷ ಹೆಣ್ಣುಮಕ್ಕಳಿಗೆ ತಲಾ ರೂ.2000 ಅಕೌಂಟಿಗೆ ಕಳಿಸುವ ನಾಟಕವಾಡಿದರು. ಇದು 2019ರಲ್ಲಿ ಹೆಣ್ಣುಮಕ್ಕಳ ಹುಟ್ಟಿನಿಂದ ಡಿಪ್ಲೊಮಾ ಓದಿನ ವರೆಗೆ 6 ಕಂತುಗಳಲ್ಲಿ ರೂ 15 ಸಾವಿರ ಕೊಡುವ ‘ಮುಖ್ಯಮಂತ್ರಿ ಕನ್ಯಾ ಸುಮಂಗಲ ಯೋಜನಾ’ ದ ಜಾರಿ! 2019ರಲ್ಲಿ ಘೋಷಿಸಲ್ಪಟ್ಟ ಈ ಯೋಜನೆಯ ನಿಯಮಗಳ ಪ್ರಕಾರವೇ ಫಲಾನುಭವಿಗಳ ಸಂಖ್ಯೆ ಕನಿಷ್ಟ 5 ಕೋಟಿ ಆಗುತ್ತದೆ. ಆದರೆ ಈ ವರೆಗೆ ಕೇವಲ 5.85 ಲಕ್ಷ ಹೆಣ್ಣುಮಕ್ಕಳಿಗೆ ಈ ಸವಲತ್ತು ಸಿಕ್ಕಿದೆ. ಈ ಯೋಜನೆಯ ಫಲಾನುಭವಿಗಳ ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿರಬಾರದು ಎಂಬ ನಿಯಮಾವಳಿಯ ಮೂಲಕ ಹೆಚ್ಚಿನ ದಲಿತ, ಮುಸ್ಲಿಂ, ಬಡ ಕುಟುಂಬಗಳನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ. ಮೋದಿ ಎರಡನೆಯ ಬಟನ್ ಒತ್ತಿ 5.6 ಲಕ್ಷ ಸ್ವಸಹಾಯ ಗುಂಪುಗಳಿಗೆ 1 ಸಾವಿರ ಕೋಟಿ ರೂ.(ಅಂದರೆ ಸರಾಸರಿ ಒಂದು ಗುಂಪಿಗೆ ರೂ. 17 ಸಾವಿರ) ಕಳಿಸುವ ಇನ್ನೊಂದು ನಾಟಕವಾಡಿದರು. ರೂ. 17 ಸಾವಿರದಿಂದ ಯಾವ ಆರ್ಥಿಕ ಚಟುವಟಿಕೆ ನಡೆಸಲು ಸಾಧ್ಯ? ಜಿ.ಎಸ್.ಟಿ, ಕೊವಿದ್ ಲಾಕ್ ಡೌನ್ ಮತ್ತು ಆರ್ಥಿಕ ಸ್ಥಗಿತತೆ, ಬೇಡಿಕೆಯ ಅಭಾವಗಳಿಂದ ಜೀವನೋಪಾಯ ಇಲ್ಲದೆ ಸಾಲದ ಹೊರೆಯಿಂದ ನರಳುತ್ತಿರುವ ಮಹಿಳೆಯರಿಗೆ ಸ್ವಸಹಾಯ ಗುಂಪುಗಳ ಮೂಲಕ ಆರ್ಥಿಕ ನೆರವು ಖಂಡಿತ ಬೇಕು. ಆದರೆ ಈ ಕ್ರೂರ ನಾಟಕ ಮಹಿಳೆಯರಿಗೆ ಅರ್ಥವಾಗದೆ?
ಬಹುಚರ್ಚಿತ ‘ಉಜ್ವಲ’ ಯೋಜನೆ ಬಗ್ಗೆ ಮೋದಿ ಇನ್ನೂ ಬೊಗಳೆ ಬಿಡುತ್ತಲೇ ಇದ್ದಾರೆ. ಯೋಜನೆ ಭಾಗಶಃ ಜಾರಿಯಾದದ್ದು ಸಹ ಪೂರ್ಣವಾಗಿ ಅರ್ಥಹೀನವಾಗಿದೆ. ಉಚಿತ ಮೊದಲ ಸಿಲಿಂಡರ್ ನಂತರ ದುಬಾರಿ ಬೆಲೆ ಇರುವ ಸಿಲಿಂಡರನ್ನು ಖರೀದಿಸಲು ಆಗದೆ ‘ಉಜ್ವಲ’ ನಂದಿಹೋಗಿದೆ ಅಂತ ಅವರ ಮಡಿಲ ಮಾಧ್ಯಮಗಳೂ ಒಪ್ಪಿಕೊಳ್ಳಬೇಕಾಗಿ ಬಂದಿದೆ. ‘ಬೇಟಿ ಬಚಾವೊ’ ಸಾಧಿತವಾಗಿದೆ ಎಂದು ಹೇಳುತ್ತಾರೆ. ಆದರೆ ಹಿಂದೆ ಮಹಿಳೆಯರ ಪ್ರಮಾಣ ಸಾವಿರಕ್ಕೆ 899 ಇದ್ದಿದ್ದು, 902ಕ್ಕೆ ಬಂದಿದೆಯಷ್ಟೇ. 21 ಜಿಲ್ಲೆಗಳಲ್ಲಿ ಅದು ಕೇವಲ 850. ಮಾತೃ ಮರಣ ಸಂಖ್ಯೆ 197 (ಕೇರಳದ್ದು 43) ಮತ್ತು ಮಕ್ಕಳ ಮರಣ ಸಂಖ್ಯೆ ಹತ್ತು ಸಾವಿರಕ್ಕೆ 47 (ಕೇರಳದ್ದು 7) ದೇಶದಲ್ಲೇ ಅತಿ ಹೆಚ್ಚು. ಆಸ್ಪತ್ರೆಗಳಲ್ಲಿ ಮಕ್ಕಳ ಜನನ ಪ್ರಮಾಣ ಶೇ. 67 (ಕೇರಳದ್ದು ಶೇ. 99). ದಲಿತ ಮಹಿಳೆಯರ ಮೇಲೆ ಅತ್ಯಾಚಾರಗಳ ಸಂಖ್ಯೆ 2013ರಿಂದ 2020ರಲ್ಲಿ ಶೇ. 40ರಷ್ಟು ಏರಿದೆ. ಇತ್ತೀಚೆಗೆ ಹಥರಸ್ ನಲ್ಲಿ ಅತ್ಯಾಚಾರಕ್ಕೊಳಗಾದ ದಲಿತ ಯುವತಿಗೆ ನ್ಯಾಯ ನಿರಾಕರಿಸುವಲ್ಲಿ ಸರಕಾರದ ಶಾಮೀಲು ಸ್ಪಷ್ಟವಿದೆ. ಕೊವಿದ್ ಲಾಕ್‌ಡೌನಿನಲ್ಲಿ ವಲಸೆ ಕಾರ್ಮಿಕರ ಪರಿಸ್ಥಿತಿಯ ನಿರ್ವಹಣೆ ಮತ್ತು ಎರಡನೆಯ ಅಲೆಯಲ್ಲಿ ಎಲ್ಲ ವೈದ್ಯಕೀಯ ಉಪಕರಣಗಳ ಅಭಾವ ಅವ್ಯವಸ್ಥೆ ಮತ್ತು ಅದರ ಪರಿಣಾಮವಾಗಿ ಗಂಗೆಯಲ್ಲಿ ಹೆಣಗಳ ಮೆರವಣಿಗೆ ಅಂತರ್ರಾಷ್ಟ್ರೀಯ ಸುದ್ದಿಯಾಗಿದ್ದು ಜನರಿಗೆ ತಿಳಿಯುವುದಿಲ್ಲವೇ? ಜಿ.ಎಸ್.ಟಿ. ಮತ್ತು ಕೊವಿದ್ ರಾಜ್ಯದ ಆರ್ಥಿಕತೆಯ ಬೆನ್ನೆಲುಬಾದ ಅನೌಪಚಾರಿಕ ಕ್ಷೇತ್ರಕ್ಕೆ ಮಾರಣಾಂತಿಕ ಏಟು ಕೊಟ್ಟಿದೆ. ಇನ್ನು ಹೆಚ್ಚು ಕಡಿಮೆ ಪ್ರಮುಖ ಮಾನವ, ರಾಜ್ಯದ ಅಭಿವೃದ್ಧಿ ಸೂಚಕಗಳಲ್ಲಿ ಯು.ಪಿ. ಯದ್ದು ಕೊನೆಯ ಸ್ಥಾನವಿದೆ. ‘ಕೆಲವು ಉದಾಹರಣೆಗಳು : ಮಾನವ ಅಭಿವೃದ್ಧಿ ಸೂಚಕ 35/36 (35ನೆಯ ಸ್ಥಾನ 36 ರಾಜ್ಯಗಳಲ್ಲಿ), ಹುಟ್ಟಿನಲ್ಲಿ ಆಯುಷ್ಯದ ನಿರೀಕ್ಷೆ -21/22, ಪ್ರತಿ ವೈದ್ಯರು ನೋಡಬೇಕಾದ ಜನಸಂಖ್ಯೆ (32/35), ತಲಾ ರಾಜ್ಯ ಉತ್ಪನ್ನ (31/32), ಮಾತೃ ಮರಣ ದರ (18/19), ಮಕ್ಕಳ ಮರಣ ದರ (35/35).
ಸಾಮಾಜಿಕ ಆರ್ಥಿಕ ಪ್ರಶ್ನೆಗಳು ಮುನ್ನೆಲೆಗೆ
ಇನ್ನು ದೆಹಲಿ ಗಡಿಗಲ್ಲಿ ಮೂರು ಕರಾಳ ಕಾನೂನುಗಳ ವಿರುದ್ಧ ಒಂದು ವರ್ಷದಿಂದ ರೈತ ಹೋರಾಟ, ಅದಕ್ಕೆ ವಿಶೇಷವಾಗಿ ಪಶ್ಚಿಮ ಯು.ಪಿ. ಯಲ್ಲಿ ಮಹಾಪಂಚಾಯತ್ ಗಳಲ್ಲಿ ವ್ಯಕ್ತವಾದ ವ್ಯಾಪಕ ಬೆಂಬಲ, ಕೇಂದ್ರ ಸಚಿವನ ಪುತ್ರ ಲಖೀಮ್ ಪುರ ಖೇರಿ ಯಲ್ಲಿ ವಾಹನ ಹರಿಯಬಿಟ್ಟು ರೈತರ ಕೊಲೆಯಾದರೂ ಸಚಿವ ರಾಜೀನಾಮೆ ಕೊಡದಿರುವುದು, ಹೋರಾಟ ಹಿಂತೆಗೆಯುವಾಗ ಕನಿಷ್ಟ ಬೆಂಬಲ ಬೆಲೆ ಯ ಕುರಿತು ರೈತ ಸಂಘಟನೆಗಳಿಗೆ ಕೊಟ್ಟ ಆಶ್ವಾಸನೆ ಈಡೇರಿಸದಿರುವುದು, ಮೋದಿ-ಯೋಗಿ ಎದುರಿಸುತ್ತಿರುವ ಅತಿ ದೊಡ್ಡ ಸವಾಲು. ಮೋದಿ ಸರಕಾರ ರೈತ-ವಿರೋಧಿ ಬಡವರ-ವಿರೋಧಿ ಎಂದು ಜಾತಿ-ಧರ್ಮ ಬೇಧವಿಲ್ಲದೆ ಎಲ್ಲರಿಗೂ ಸ್ಪಷ್ಟ ಸಂದೇಶವನ್ನು ನೀಡಿದೆ. ದಲಿತರು, ಮುಸ್ಲಿಮರ ಮೇಲೆ ಗುಂಪು ದಾಳಿ ಕೊಲೆಗಳಲ್ಲಿ ಯೋಗಿ ಸರಕಾರ ಸಾಧಿಸಿದ ವಿಕ್ರಮವಂತೂ ಜಗಜ್ಜಾಹೀರಾಗಿದೆ. ಸರಣಿ ಎನ್ ಕೌಂಟರ್ ಸಾವುಗಳು ಸರಕಾರಿ ನೀತಿಯಾಗಿ ಹೆಚ್ಚು ಕಡಿಮೆ ಪೋಲಿಸ್ ರಾಜ್ಯವಾಗಿರುವಾಗ ಯೋಗಿ ‘ಶಾಂತಿ-ಸುವ್ಯವಸ್ಥೆ’ ರಾಜ್ಯಕ್ಕೆ ಮರಳಿದೆ. ಎಸ್.ಪಿ. ಸರಕಾರ ‘ಗೂಂಡಾ ರಾಜ್ಯದ ಕುರಿತು ಎಚ್ಚರಿಸುವುದು ಜೋಕಾಗಿಬಿಟ್ಟಿದೆ. ಈ ವಿಷಯಗಳ ಬಗ್ಗೆ ಮೋದಿ-ಶಾ-ಯೋಗಿ ತ್ರಿವಳಿಯ ಬಳಿ ಉತ್ತರಗಳಿಲ್ಲ. ಆದ್ದರಿಂದಲೇ ಅಯೋಧ್ಯೆ ಮಂದಿರ ಕಟ್ಟಲು ಆರಂಭಿಸಿದ್ದು, ಕಾಶಿ ವಿಶ್ವನಾಥ ಕಾರಿಡಾರ್, ಮಥುರಾ ಮಂದಿರದ ಸಾಧ್ಯತೆಯಂತಹ ಸಾಧನೆಗಳನ್ನು ಮಾತ್ರ ತೋರಿಸಬೇಕಾಗಿದೆ. ಯಥಾ ಪ್ರಕಾರ ಕೋಮು ಧ್ರುವೀಕರಣದ ಪ್ರಯತ್ನಗಳನ್ನು ಮಾಡಬೇಕಾಗಿದೆ.
ಇವೆಲ್ಲ ಚುನಾವಣಾ ಸಂಕಥನದ ಮೇಲೆ ಪರಿಣಾಮ ಬೀರುತ್ತಿವೆ. ಒಂದೆಡೆ ಬಡತನ, ನಿರುದ್ಯೋಗ, ಉದ್ಯೋಗಾವಕಾಶಗಳ ಸೃಷ್ಟಿಯ ಅಭಾವ, ಶಿಕ್ಷಣ-ಆರೋಗ್ಯ ಮತ್ತಿತರ ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿ, ದಲಿತ-ಮುಸ್ಲಿಮ-ಮಹಿಳೆಯರ ಸುರಕ್ಷಿತತೆ -ಇತ್ಯಾದಿ ಸಾಮಾಜಿಕ ಆರ್ಥಿಕ ಪ್ರಶ್ನೆಗಳು ಮುನ್ನೆಲೆಗೆ ಬರುತ್ತಿವೆ. ದ್ವೇಷಪ್ರಚಾರದ ಕೋಮುವಾದಿ ಪ್ರಚಾರದ ಪರಿಣಾಕಾರಿತನ ಕಡಿಮೆಯಾಗುತ್ತಿದೆ. ಇವು ಸಾಂಪ್ರದಾಯಿಕ ಜಾತಿ ಲೆಕ್ಕಾಚಾರವನ್ನು ತಲೆ ಕೆಳಗು ಮಾಡುವ ವಿಷಯಗಳಾಗಿ ಹೊಮ್ಮುತ್ತಿವೆ. ರಾಜಕೀಯ ಮತ್ತಿತರ ಪ್ರಾತಿನಿಧ್ಯಕ್ಕಿಂತಲೂ ಸಾಮಾಜಿಕ ಆರ್ಥಿಕ ವಿಷಯಗಳ ಕುರಿತು ಆತಂಕ ಹೆಚ್ಚಾಗುತ್ತಿದೆ. ಈ ವರೆಗೆ ಎಲ್ಲ ಪಕ್ಷಗಳು ನಡೆಸಿಕೊಂಡು ಬರುತ್ತಿದ್ದ ‘ಗುರುತಿನ ರಾಜಕೀಯ’ (ಅಥವಾ ಐಡೆಂಟಿಟಿ ರಾಜಕೀಯ), ಸಾಮಾಜಿಕ ಇಂಜಿನೀಯರಿಂಗ್ ಬಹುಶಃ ಅದರ ತಾರ್ಕಿಕ ಅಂತ್ಯದ ಹತ್ತಿರ ಬರುತ್ತಿದೆ ಅಥವಾ ಅದರ ಮಿತಿ ಬಯಲಾಗುತ್ತಿದೆ. ಅಥವಾ ಕನಿಷ್ಟ ಅದು ದುರ್ಬಲವಾಗುತ್ತಿದೆ. ಬಿಜೆಪಿಗೆ ಇದು ಎಚ್ಚರಿಕೆಯ ಗಂಟೆಯಾದರೆ, ವಿರೋಧ ಪಕ್ಷಗಳೂ ಇದನ್ನು ಪೂರ್ಣವಾಗಿ ಗ್ರಹಿಸುತ್ತಿಲ್ಲ. ಇಂದಿನ ಯು.ಪಿ. ಯ ದುಸ್ಥಿತಿ ಗೆ ಕಳೆದ ಮೂರು ದಶಕಗಳಲ್ಲಿ ಹೆಚ್ಚು ಕಾಲ ಸರಕಾರ ನಡೆಸಿದ, ಸಾಮಾಜಿಕ ಆರ್ಥಿಕ ವಿಷಯಗಳನ್ನು ಬದಿಗೊತ್ತಿ ಐಡೆಂಟಿಟಿ ರಾಜಕೀಯ ನಡೆಸಿದ ಇಂದಿನ ವಿರೋಧ ಪಕ್ಷಗಳ ಜವಾಬ್ದಾರಿ ಕಡಿಮೆಯೇನಲ್ಲ. ಈಗಲೂ ಇವು ಜನತೆ ಉತ್ಸಾಹದಿಂದ ಬೆಂಬಲಿಸಬಹುದಾದ ಪ್ರಾಮಾಣಿಕವಾದ ಸಾಮಾಜಿಕ-ಆರ್ಥಿಕ ಬದಲಿ ಕಾರ್ಯಕ್ರಮ ಕೊಟ್ಟಿಲ್ಲ. ಬಿಜೆಪಿಯ ದುರಾಡಳಿತದ ವೈಫಲ್ಯಗಳ ಮತ್ತು ತಮ್ಮದೇ ಸಾಮಾಜಿಕ ಇಂಜಿನೀಯರಿಂಗ್ ಗಳ ಮೇಲೆ ಅವಲಂಬಿಸಿವೆ. ಅಲ್ಲದೆ ಪಕ್ಷಗಳ ನಡುವೆ ಯಾವುದೇ ಸಿದ್ಧಾಂತ, ಕಾರ್ಯಕ್ರಮ, ನೀತಿಗಳ ಆಧಾರವಿಲ್ಲದ ಶಾಸಕರ ನಾಯಕರ ‘ಆಯಾ ರಾಂ, ಗಯಾ ರಾಂ’ ಓಡಾಟ ಜನರಲ್ಲಿ ವಿಶ್ವಾಸ ತುಂಬಬಲ್ಲದೆ?
ಮುಂದೇನು?
ಬಿಜೆಪಿಯ ದುರಾಡಳಿತದ ವೈಫಲ್ಯ ಮತ್ತು ಸಾಮಾಜಿಕ ಇಂಜಿನೀಯರಿಂಗ್ ಬಯಲು ಮಾಡುವುದರಲ್ಲೂ, ತನ್ನದೇ ಸಾಮಾಜಿಕ ಇಂಜಿನೀಯರಿಂಗ್ ಆಧಾರಿತ ರಾಜಕೀಯ ಮೈತ್ರಿಕೂಟ ಕಟ್ಟುವುದರಲ್ಲೂ ಎಸ್.ಪಿ. ಅದಕ್ಕೆ ಪ್ರಬಲ ಸವಾಲೆಸೆದು ನೇರ ಮತ್ತು ಪ್ರಮುಖ ಸ್ಪರ್ಧಿಯಾಗಿದೆ. ಮುಖ್ಯ ಪ್ರತಿಸ್ಪರ್ಧಿಯಾಗಿ ಇತರ ರಾಜಕೀಯ ಶಕ್ತಿಗಳನ್ನು ಆಕರ್ಷಿಸುತ್ತಿದೆ. ಆದರೆ ಇವೆಲ್ಲ ಎಷ್ಟ್ಟರ ಮಟ್ಟಿಗೆ ಮತಗಳಾಗಿ ಬದಲಾಗುವುದು ಎಂದು ಹೇಳುವುದು ಕಷ್ಟ ಈಗ ಓಟದಲ್ಲಿ ಸಕ್ರಿಯವಾಗಿ ಇರದಂತೆ ಕಾಣುವ ಬಿ.ಎಸ್.ಪಿ. ಮತ್ತು ಕಾಂಗ್ರೆಸ್ ಎಷ್ಟರ ಮಟ್ಟಿಗೆ ಅವುಗಳ ಸಾಂಪ್ರದಾಯಿಕ ಮತನೆಲೆಗಳನ್ನು ಉಳಿಸಿಕೊಳುತ್ತವೆ, ಪ್ರದೇಶವಾರು, ಕ್ಷೇತ್ರವಾರು ಅದರ ಮತಪ್ರಮಾಣ ಎಷ್ಟಿರುತ್ತದೆ ಎಂಬುದರ ಮೇಲೆ ಸಹ ಎಸ್.ಪಿ. ಗೆ ಅದು ಎಷ್ಟು ಸಹಾಯಕಾರಿ ಅಥವಾ ಅಪಾಯಕಾರಿಯಾಗಬಹುದು ಎಂಬುದು ಅವಲಂಬಿಸಿರುತ್ತದೆ. ಮಹಿಳೆಯರಿಗೆ ಶೇ.40 ಸೀಟುಗಳನ್ನು ಕೊಡುವ ಮೂಲಕ ಮತ್ತು ಮಹಿಳಾ ವಿಷಯಗಳ ಮೇಲೆ ಒತ್ತು ಕೊಟ್ಟ ಪ್ರಣಾಳಿಕೆ ಬಿಡುಗಡೆ ಮಾಡಿರುವುದು, ಪ್ರಿಯಾಂಕಾ ಅವರ ರಭಸದ ಪ್ರಚಾರ ಕಾಂಗ್ರೆಸ್ ಮತಗಳಿಕೆಯ ಮೇಲೆ ಪ್ರಭಾವ ಬೀರದಿರಲಾರದು. ಎಸ್.ಪಿ. ಗೆ ಭಾರೀ ಬಹುಮತ ಬಾರದಿದ್ದರೆ ಬಿಜೆಪಿಯನ್ನು ಸರಕಾರದಿಂದ ಉರುಳಿಸುವುದು ಸುಲಭವಾಗಲಿಕ್ಕಿಲ್ಲ. ಬಿಜೆಪಿ ತೀರಾ ಕಡಿಮೆ ಬಹಮತದೊಂದಿಗೆ ಮತ್ತೆ ಆಯ್ಕೆಯಾಗುವ ಸಾಧ್ಯತೆಯಿದ್ದೇ ಇದೆ. ಎಸ್.ಪಿ. ಗೆ ಅಲ್ಪ ಬಹುಮತ ಬಂದರೂ ಅಥವಾ ಅತಂತ್ರ ಸ್ಥಿತಿ ಬಂದರೆ ಬಿ.ಎಸ್.ಪಿ. ಮತ್ತು ಇತರ ಸಣ್ಣ ಪಕ್ಷಗಳ ಬೆಂಬಲವನ್ನು ಪಡೆಯುವುದು ಹಾಗೂ ‘ಆಪರೇಶನ್ ಕಮಲ’, ಇತರ ಅಕ್ರಮಗಳ ಮೂಲಕ ಬಿಜೆಪಿ ಅಧಿಕಾರಕ್ಕೆ ಮತ್ತೆ ಬರುವುದು ಅಸಂಭವವೇನಲ್ಲ. ಆದರೆ ಇದು ಬಿಜೆಪಿಗೆ ಮುಳುವಾಗಬಹುದು. ಆದರೆ ‘ಐಡೆಂಟಿಟಿ ರಾಜಕೀಯ’ದ ಸೀಮಿತತೆ ಬಯಲಾಗುವುದು ಅಥವಾ ಅದು ಕನಿಷ್ಟ ದುರ್ಬಲವಾಗುವುದು ಮತ್ತು ಸಾಮಾಜಿಕ ಆರ್ಥಿಕ ವಿಷಯಗಳು ಮುನ್ನೆಲೆಗೆ ಬರುವ ಸೂಚನೆಯನ್ನು ಯುಪಿ ಚುನಾವಣೆ ಕೊಟ್ಟರೆ ಅದೂ ರಾಷ್ಟ್ರೀಯ ರಾಜಕಾರಣವನ್ನು ಸಕಾರಾತ್ಮಕ ದಿಕ್ಕಿನಲ್ಲಿ ಬದಲಾಯಿಸುವ ಸಾಧ್ಯತೆಯಂತೂ ಇದೆ.