ಉತ್ತರಾಖಂಡ | ಮಸೀದಿ & ಮದ್ರಸಾ ಧ್ವಂಸದ ನಂತರ ಭುಗಿಲೆದ್ದ ಹಿಂಸಾಚಾರ; 5 ಸಾವು

ಡೆಹ್ರಾಡೋನ್: ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮಸೀದಿ, ಮದರಸಾ ಸೇರಿದಂತೆ ಹಲವು ಸಂಸ್ಥೆಗಳನ್ನು ನೆಲಸಮಗೊಳಿಸಿದ ನಂತರ ಉತ್ತರಾಖಂಡದ ಹಲ್ದ್ವಾನಿ ನಗರದ ಬನ್‌ಭೂಲ್‌ಪುರ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದು, ಮೂವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಹಿಂಸಾಚಾದಲ್ಲಿ 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ ಹೇಳಿದ್ದಾರೆ. ಪೊಲೀಸ್ ಠಾಣೆಯೊಳಗೆ ಸಿಕ್ಕಿಬಿದ್ದ ಪೊಲೀಸ್ ಸಿಬ್ಬಂದಿಯನ್ನು ಜೀವಂತವಾಗಿ ಸುಡಲು ಉದ್ರಿಕ್ತ ಜನರ ಗುಂಪು ಪ್ರಯತ್ನ ನಡೆಸಿದೆ ಎಂದು ಅವರು ಹೇಳಿದ್ದಾರೆ. ಬನ್‌ಭೂಲ್‌ಪುರ ಪ್ರದೇಶದಲ್ಲಿನ ಮಸೀದಿ ಮತ್ತು ಮದರಸವನ್ನು ಧ್ವಂಸಗೊಳಿಸುವ ಕಾರ್ಯಾಚರಣೆಯನ್ನು ಸರ್ಕಾರ ನಡೆಸಿದ ನಂತರ ಗುರುವಾರ ಹಿಂಸಾಚಾರ ಭುಗಿಲೆದ್ದಿದೆ.

ಇದನ್ನೂ ಓದಿ: ಪ್ರತಿಭಟನೆಗೆ ಬೆದರಿ ದೆಹಲಿ-ನೋಯ್ಡಾ ಗಡಿ ಬಂದ್ | ರೈತರ ಭೇಟಿಗೆ ಒಪ್ಪಿದ ಕೇಂದ್ರ ಸರ್ಕಾರ

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು “ಕಂಡಲ್ಲಿ ಗುಂಡು” ಆದೇಶ ಹೊರಡಿಸಿದ್ದು, ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಭೇಟಿಯಾಗಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಅತಿಕ್ರಮಣ ವಿರೋಧಿ ಅಭಿಯಾನ ನಡೆಯುತ್ತಿದ್ದು, ಸರ್ಕಾರ ಜನರಿಗೆ ಮೊದಲೇ ಸೂಚನೆ ನೀಡಿತ್ತು ಎಂದು ಅವರು ಧ್ವಂಸ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ.

“ಸರ್ಕಾರಿ ಅಧಿಕಾರಿಗಳ ಮೇಲೆ ಪೆಟ್ರೋಲ್ ಬಾಂಬ್‌ಗಳು, ಕಲ್ಲುಗಳಿಂದ ದಾಳಿ ಮಾಡಲಾಗಿದ್ದು, ಬೆಂಕಿ ಹಚ್ಚಲಾಗಿದೆ. ಕೆಲವರು ಉತ್ತರಾಖಂಡದಲ್ಲಿ ಉದ್ವಿಗ್ನತೆ ಸೃಷ್ಟಿಸಲು ಯತ್ನಿಸಿದ್ದಾರೆ. ಇದರ ವಿರುದ್ಧ ಸರ್ಕಾರ ಕಾನೂನು ಕಠಿಣ ಕ್ರಮ ಕೈಗೊಳ್ಳಲಿದೆ. ಇಡೀ ಘಟನೆಯ ವೀಡಿಯೋ ತುಣುಕನ್ನು ಪಡೆಯಲಾಗುತ್ತಿದ್ದು, ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿದವರೆ ಅದನ್ನು ಪಾವತಿಸುವಂತೆ ಮಾಡಲಾಗುವುದು… ಗಾಯಗೊಂಡ ಜನರೊಂದಿಗೆ ನಾವಿದ್ದೇವೆ …” ಎಂದು ಅವರು ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಸಾವಿನ ಸಂಖ್ಯೆ ಐದಕ್ಕೆ ಏರಿದೆ ಎಂದು ಶುಕ್ರವಾರ ಮಧ್ಯಾಹ್ನ ಉತ್ತರಾಖಂಡದ ಡಿಜಿಪಿ ಅಭಿನವ್ ಕುಮಾರ್ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. “ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ. ಜಿಲ್ಲೆಯಲ್ಲಿ ಕರ್ಫ್ಯೂ ಮುಂದುವರಿದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸದ ವೇಳೆ ಪ್ರಧಾನಿಯಾಗಿದ್ದ ಕಾಂಗ್ರೆಸ್‌ನ ಪಿ. ವಿ. ನರಸಿಂಹ ರಾವ್‌ಗೆ ಭಾರತ ರತ್ನ ಘೋಷಣೆ

ಮಸೀದಿ ಮದರಸಾ ಇದ್ದ ಜಮೀನನ್ನು ಮುನ್ಸಿಪಲ್ ಕಾರ್ಪೋರೇಷನ್‌ನ ನಜೂಲ್ ಭೂಮಿ ಎಂದು ನೋಂದಾಯಿಸಲಾಗಿತ್ತು. ಈ ಸರ್ಕಾರಿ ಭೂಮಿಯನ್ನು ಅಧಿಕೃತವಾಗಿ ಕಂದಾಯ ದಾಖಲೆಗಳಲ್ಲಿ ನಮೂದಿಸಲಾಗಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. “ಜನವರಿ 30 ರಂದು ನೀಡಲಾದ ನೋಟೀಸ್‌ನಲ್ಲಿ ಮೂರು ದಿನಗಳಲ್ಲಿ ಅತಿಕ್ರಮಣವನ್ನು ತೆಗೆದುಹಾಕಬೇಕು ಅಥವಾ ಮಾಲೀಕತ್ವದ ದಾಖಲೆಗಳನ್ನು ಒದಗಿಸಬೇಕು ಎಂದು ಕೇಳಲಾಗಿತ್ತು. ಫೆಬ್ರವರಿ 3 ರಂದು ನಮ್ಮ ತಂಡದೊಂದಿಗೆ ಚರ್ಚಿಸಲು ಹಲವಾರು ಸ್ಥಳೀಯರು ಮುನ್ಸಿಪಲ್‌ಗೆ ಭೇಟಿ ನೀಡಿದ್ದರು” ಎಂದು ಹೇಳಿದ್ದಾರೆ.

“ಈ ವೇಳೆ ಅವರು ಅರ್ಜಿಯನ್ನು ಸಲ್ಲಿಸಿದ್ದು, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಮಯ ಕೋರಿದ್ದರು ಹಾಗೂ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಲು ಒಪ್ಪಿಕೊಂಡಿದ್ದರು” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ಈಗಾಗಲೇ ಸಾಕಷ್ಟು ಸಮಯ ಒದಗಿಸಿದ್ದರಿಂದ ಹೆಚ್ಚಿನ ಸಮಯವನ್ನು ಅವರಿಗೆ ನೀಡಲಿಲ್ಲ ಎಂದು ಒತ್ತಿ ಹೇಳಿದ್ದಾರೆ.

“ಆ ರಾತ್ರಿ ನಮ್ಮ ಪಡೆಗಳು ಮರುದಿನ ನಡೆಯುವ ಧ್ವಂಸ ಪ್ರಕ್ರಿಯೆಯ ತಯಾರಿಗಾಗಿ ಧ್ವಜ ಮೆರವಣಿಗೆಯನ್ನು ನಡೆಸಿತು. ಆದರೆ ಸ್ಥಳೀಯರು ಅರ್ಜಿಯೊಂದರ ವಿಲೇವಾರಿಗೆ ಸಂಬಂಧಿಸಿದಂತೆ ನೈನಿತಾಲ್‌ನ ಅಂದಿನ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ 2007ರಲ್ಲಿ ನೀಡಿದ್ದ ಹೈಕೋರ್ಟ್ ಆದೇಶವನ್ನು ಸಲ್ಲಿಸಿದ್ದಾರೆ. ವಿಲೇವಾರಿಯ ಕಾನೂನುಬದ್ಧತೆಯನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ, ಸರಿಯಾದ ಕಾನೂನು ಕಾರ್ಯವಿಧಾನಗಳಿಗೆ ಬದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಉರುಳಿಸುವಿಕೆಯನ್ನು ಮುಂದೂಡಿದ್ದೆವು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮುಂಬೈ | ಕ್ಯಾಮೆರಾ ಮುಂದೆಯೆ ಶಿವಸೇನೆ (ಉದ್ಧವ್ ಬಣ) ನಾಯಕನ ಗುಂಡಿಕ್ಕಿ ಹತ್ಯೆ

“ಈ ವೇಳೆ ಮದರಸಾ ಎಂದು ಕರೆಯಲ್ಪಡುವ ಕಟ್ಟಡವನ್ನು ಅಲ್ಲಿ ಯಾರೂ ಇಲ್ಲ ಎಂದು ಖಚಿತಪಡಿಸಿ ನಾವು ಒಮ್ಮತದಿಂದ ಮುಚ್ಚಿದ್ದೇವೆ” ಎಂದು ಅವರು ಹೇಳಿದ್ದಾರೆ. ಎಲ್ಲಾ ಕಾನೂನು ಔಪಚಾರಿಕತೆಗಳನ್ನು ಕೆಡವುವ ಮೊದಲು ಪೂರ್ಣಗೊಳಿಸಲಾಗಿತ್ತು ಎಂದು ಅವರು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.

“ಮರುದಿನ 2007 ರ ಆದೇಶವನ್ನು ನಮ್ಮ ಕಚೇರಿಯಲ್ಲಿ ಪರಿಶೀಲಿಸಿದ ನಂತರ, ಸಂಬಂಧಪಟ್ಟ ಪಕ್ಷವು ಹೈಕೋರ್ಟ್‌ನಿಂದ ನೋಟಿಸ್‌ಗೆ ತಡೆಯಾಜ್ಞೆ ನೀಡಿತು. ಎರಡು ದಿನಗಳ ವಿಚಾರಣೆ ಬಳಿಕ ಹೈಕೋರ್ಟ್ ಅವರ ಪರವಾಗಿ ತೀರ್ಪು ನೀಡಲು ನಿರಾಕರಿಸಿತು. ಕೆಡವಲು ನಮ್ಮ ಸಿದ್ಧತೆಗಳನ್ನು ಈಗಾಗಲೇ ಅಂತಿಮಗೊಳಿಸಿರುವುದರಿಂದ, ನಾವು ಅದನ್ನು ಮುಂದುವರೆದಿದ್ದೇವೆ” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

ವಿಡಿಯೊ ನೋಡಿ: ಕೇರಳಕ್ಕೆ ಅನ್ಯಾಯ :ಕೇಂದ್ರ ಸರ್ಕಾರದ ವಿರುದ್ಧ ಕೇರಳ ಸರ್ಕಾರದ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *