ಉತ್ತರ ಪ್ರದೇಶ ಚುನಾವಣಾ ಫಲಿತಾಂಶಗಳು ಏನನ್ನು ಸೂಚಿಸುತ್ತಿವೆ?

ಚಿತ್ರಕೃಪೆ: ಎನ್‍ಡಿಟಿವಿ.ಕಾಂ

ಉತ್ತರಪ್ರದೇಶದಲ್ಲಿ ಬಿಜೆಪಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಮೊದಲ ಪಕ್ಷ ಎಂಬ ಸಾಧನೆ ದಾಖಲಿಸಿದೆ. ಎರಡನೇ ಮೂರು ಬಹುಮತ ಪಡೆದಿದೆ. ಅಂದರೆ, ಉತ್ತರಪ್ರದೇಶದ ಮತದಾರರು, ಆಮೂಲಕ ಬಹುಶಃ ಇಡೀ ದೇಶದ ಜನತೆ,  ನಿಜವಾಗಿಯೂ ಬಿಜೆಪಿ ಸರಕಾರದ ನೀತಿಗಳಿಗೆ ಪೂರ್ಣ ಅನುಮೋದನೆ ನೀಡಿದ್ದಾರೆ ಎಂದು ಭಾವಿಸಬಹುದೇ? ಅಂಕಿ-ಅಂಶಗಳು ಏನನ್ನು ಹೇಳುತ್ತವೆ?

ಉತ್ತರಪ್ರದೇಶ ಚುನಾವಣೆಗಳ ಫಲಿತಾಂಶಗಳು ಅಧಿಕಾರಸ್ಥ ವಿಭಾಗಗಳಿಗೆ ಹರ್ಷ ತಂದಿದ್ದರೆ, ದೇಶದ ಪ್ರಜಾಪ್ರಭುತ್ವ ಶಕ್ತಿಗಳ ಹಲವು ವಿಭಾಗಗಳಲ್ಲಿ, ರೈತರ ಹೋರಾಟದ ವಿಜಯದಿಂದ ಉಂಟಾಗಿದ್ದ ಉತ್ಸಾಹವನ್ನು ಕುಂದಿಸಿರುವಂತೆ ಕಾಣುತ್ತದೆ. ಉತ್ತರಪ್ರದೇಶದ ಮತದಾರರು, ಆಮೂಲಕ ಬಹುಶಃ ಇಡೀ ದೇಶದ ಜನತೆ, ನಿಜವಾಗಿಯೂ ಬಿಜೆಪಿ ಸರಕಾರದ ನೀತಿಗಳಿಗೆ ಪೂರ್ಣ ಅನುಮೋದನೆ ನೀಡಿದ್ದಾರೆ ಎಂದು ಭಾವಿಸಬಹುದೇ? ಅಂಕಿ-ಅಂಶಗಳು ಏನನ್ನು ಹೇಳುತ್ತವೆ?

ಬಿಜೆಪಿ ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಮೊದಲ ಪಕ್ಷ ಎಂಬ ಸಾಧನೆ ದಾಖಲಿಸಿದೆ. ಆದರೆ ಅದರ ನೇತೃತ್ವದ ಮೈತ್ರಿಕೂಟ ಕಳೆದ ಬಾರಿ (2017ರ ವಿಧಾನಸಭಾ ಚುನಾವಣೆಗಳಲ್ಲಿ) ನಾಲ್ಕನೇ ಮೂರು ಬಹುಮತ ಗಳಿಸಿತ್ತು. ಈ ಬಾರಿ ಅದರ ಬಹುಮತ ಮೂರನೇ ಎರಡಕ್ಕೆ ಇಳಿದಿದೆ.ಮೈತ್ರಿಕೂಟ  50 ಸೀಟುಗಳನ್ನು(ಬಿಜೆಪಿ 57 ಸೀಟುಗಳನ್ನು) ಕಳಕೊಂಡಿದೆ. ಸಮಾಜವಾದಿ ಪಾರ್ಟಿ(ಎಸ್‌ಪಿ)ಯ ಮೈತ್ರಿಕೂಟ 74 (ಎಸ್‍ಪಿ 64) ಹೆಚ್ಚು ಸೀಟುಗಳನ್ನು ಗಳಿಸಿದೆ. ನಿಜ, ಬಿಜೆಪಿ ಮೈತ್ರಿಕೂಟದ ಮತಗಳಿಕೆ 41.3% ದಿಂದ 44% ಕ್ಕೆ ಏರಿದೆ. ಆದರೆ ಎಸ್.ಪಿ.ಮೈತ್ರಿಕೂಟದ ಮತಗಳಿಕೆ 12.1%ದಿಂದ 24.3%ಕ್ಕೆ ಏರಿದೆ, ಅಂದರೆ ದ್ವಿಗುಣಗೊಂಡಿದೆ, ಸೀಟುಗಳ ಸಂಖ್ಯೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ.

ವಾಸ್ತವವಾಗಿ ಬಿಜೆಪಿ ಮೈತ್ರಿಕೂಟ ಕಳೆದ ಬಾರಿ ಗೆದ್ದ 322ರಲ್ಲಿ 71 ಸೀಟುಗಳಲ್ಲಿ ಸೋತಿದೆ, ಆದರೆ ಎಸ್‌ಪಿ ಮೈತ್ರಿಕೂಟದಿಂದ 13 ಸೀಟುಗಳನ್ನು ಕಸಿದುಕೊಂಡಿದೆ. ಇತ್ತ ಎಸ್‌ಪಿ ಮೈತ್ರಿಕೂಟ ಬಿಜೆಪಿ ಮೈತ್ರಿಕೂಟದಿಂದ 70 ಸೀಟುಗಳನ್ನು ಕಸಿದುಕೊಂಡಿದೆ.

ಬಿಜೆಪಿ ಗೆದ್ದ 272 ಸೀಟುಗಳಲ್ಲಿ 129ರಲ್ಲಿ, ಅಂದರೆ 47% ಸೀಟುಗಳಲ್ಲಿ ಅದರ ಗೆಲುವಿನ ಅಂತರ 10%ಕ್ಕಿಂತ ಕಡಿಮೆಯಿದೆ; ಕಳೆದ ಬಾರಿ ಇದು 33% ಇತ್ತು.

ಕೃಷಿ ಕಾಯ್ದೆಗಳಿಂದ,ನಿರುದ್ಯೋಗದಿಂದ, ಬೀಡಾಡಿ ಜಾನುವಾರುಗಳಿಂದ ಬೇಸರವಾಗಿದೆಯೇ? ಇವಕ್ಕೆಲ್ಲ ಒಂದೇ ಔಷಧಿ: ಹಿಂದುತ್ವ + ನೇರ ನಗದು ವರ್ಗಾವಣೆ ವ್ಯಂಗ್ಯಚಿತ್ರ: ಸಾತ್ವಿಕ್ ಗಡೆ, ದಿ ಹಿಂದು

ಕೋಮು ಧ್ರುವೀಕರಣ + ಫಲಾನುಭವಿ ತಂತ್ರ ಭಾರೀ ಫಲ ನೀಡಿದೆಯೇ?

ಯೋಗಿ-ಮೋದಿ-ಷಾರವರ 80-20 ಪ್ರಚಾರ ಪರಿಣಾಮ ಬೀರಿದಂತೆ ಕಾಣುತ್ತಿದೆ ಎಂದು ‘ದಿ ಹಿಂದು’ ದೈನಿಕದಲ್ಲಿ ಪ್ರಕಟವಾಗಿರುವ (ಮಾ.12) ಸಿಎಸ್‌ಡಿಎಸ್-ಲೋಕನೀತಿ ಮತದಾನೋತ್ತರ ಸರ್ವೆ ಸೂಚಿಸುತ್ತದೆ. ಇದರ ಪ್ರಕಾರ ಈ ಬಾರಿ ಎರಡು ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ಇದ್ದುದರಿಂದ ಎರಡೂ ಮೈತ್ರಿಕೂಟಗಳ ಎರಡೂ( ಹಿಂದೂ ಮತ್ತು ಮುಸ್ಲಿಂ) ಸಮುದಾಯಗಳಿಂದ ಮತಗಳಿಕೆಯ ಪ್ರಮಾಣ ಹೆಚ್ಚಿದೆ.

ಹಿಂದೂಗಳಲ್ಲಿ ಕಳೆದ ಬಾರಿ 47% ಬಿಜೆಪಿ ಮೈತ್ರಿಕೂಟಕ್ಕೆ ಮತ ನೀಡಿದ್ದರೆ, ಈ ಬಾರಿ ಅದು 54%ಕ್ಕೆ ಏರಿದೆ. ಎಸ್‌ಪಿ ಮೈತ್ರಿಕೂಟದ ಮತಗಳಿಕೆ 2017ರಲ್ಲಿ ಕೇವಲ 19% ಇತ್ತು, ಈ ಬಾರಿ ಅದು 7%ದಷ್ಟು ಹೆಚ್ಚಿದರೂ 26% ವಷ್ಟೇ ಆಗಿದೆ, ಅಂದರೆ ಬಿಜೆಪಿ ಮೈತ್ರಿಕೂಟ ಪಡೆದುದರ ಅರ್ಧದಷ್ಟು.

ರಾಜ್ಯದ ಜನಸಂಖ್ಯೆಯಲ್ಲಿ 19.3%ದಷ್ಟಿರುವ ಮುಸ್ಲಿಂ ಸಮುದಾಯದ ನಡುವೆ ಬಿಜೆಪಿ ಮೈತ್ರಿಕೂಟಕ್ಕೆ ಕಳೆದ ಬಾರಿ 5% ಮತಗಳಷ್ಟೇ ಸಿಕ್ಕಿದ್ದವು, ಈ ಬಾರಿ ಅದರಲ್ಲಿ ಹೆಚ್ಚಳವಾದರೂ ಈಗಲೂ ಅದು 8% ಮಾತ್ರ. ಅತ್ತ ಎಸ್‌ಪಿ ಮೈತ್ರಿಕೂಟ ಕಳೆದ ಬಾರಿ 46% ಪಡೆದರೆ, ಈ ಬಾರಿ ಅದು 79%ಕ್ಕೆ ಏರಿದೆ.

ಇನ್ನೊಂದೆಡೆಯಲ್ಲಿ , ವಿವಿಧ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಮತಗಳು ಕೂಡ ಬಿಜೆಪಿಯ ನೆರವಿಗೆ ಬಂದಿದೆ ಎಂದು ಈ ಸರ್ವೆ ಸೂಚಿಸುತ್ತದೆ. ವಿವಿಧ ಸ್ಕೀಮುಗಳ ಫಲಾನುಭವಿಗಳಲ್ಲ್ಲಿ ಸುಮಾರು ಅರ್ಧಕ್ಕಿಂತ ಹೆಚ್ಚು ಬಿಜೆಪಿಗೆ ಮತ ನೀಡಿದಂತೆ ಕಾಣುತ್ತಿದೆ.

ಮತ ನೀಡಿದ್ದು ಡೆಲಿವರಿ ವ್ಯಾನ್ ಮತ್ತು ಸೈಕಲಿಗೆ…. ಬುಲ್‍ ಡೋಝರ್ ಗೆ ಅಲ್ಲ –  ವ್ಯಂಗ್ಯಚಿತ್ರ: ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್‌ಪ್ರೆಸ್

ಕಾಂಗ್ರೆಸ್

ಕಾಂಗ್ರೆಸ್ ಇನ್ನಷ್ಟು ಹೀನಾಯ ಸ್ಥಿತಿಗೆ ಇಳಿದಿರುವಂತೆ ಕಾಣುತ್ತದೆ. ಅದರ 7 ಸೀಟುಗಳಲ್ಲಿ ಈ ಬಾರಿ 4 ಎಸ್‌ಪಿ ಮೈತ್ರಿಕೂಟದ ಪಾಲಾದರೆ, 2 ಬಿಜೆಪಿ ಮೈತ್ರಿಕೂಟದ ಪಾಲಾಗಿದೆ. ಒಂದನ್ನು ಮಾತ್ರ ಬಿಜೆಪಿಯಿಂದ ಪಡೆಯುವುದು ಅದಕ್ಕೆ ಸಾಧ್ಯವಾಗಿದೆ.

ಅದರ ಮತಗಳಿಕೆ 6.3%ದಿಂದ 2.4%ಕ್ಕೆ ಕುಸಿದಿದೆ. ಮುಸ್ಲಿಮ್ ಮತದಾರರ ಸಂಖ್ಯೆ ಗಮನಾರ್ಹವಾಗಿರುವ ಕ್ಷೇತ್ರಗಳಲ್ಲಿ ಅದರ ಮತಗಳಿಕೆ 9.1%ದಷ್ಟು, ಮೀಸಲು ಕ್ಷೇತ್ರಗಳಲ್ಲಿ 4.9% ಮತ್ತು ಬಡಜಿಲ್ಲೆಗಳಲ್ಲಿ 2.1%ದಷ್ಟು ಇಳಿಕೆಯಾಗಿದೆ.

ಸಿಎಸ್‍ಡಿಎಸ್‍-ಲೋಕನೀತಿ ಸರ್ವೆ ಮುಸ್ಲಿಂ ಮತದಾರರಲ್ಲಿ ಕಾಂಗ್ರೆಸ್‍ ಪಡೆದ ಮತಗಳ ಪ್ರಮಾಣ 19%ದಿಂದ 3%ಕ್ಕೆ ಕುಸಿದಿದೆ.

ಬಿಎಸ್‌ಪಿ-ಅತ್ಯಂತ ಕಳಪೆ ಪ್ರದರ್ಶನ

ಈ ಚುನಾವಣೆಯಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿರುವುದು ಬಿಎಸ್‌ಪಿ. ಒಂದೊಮ್ಮೆ ಆಳುವ ಪಕ್ಷವಾಗಿದ್ದ ಅದು ಈ ಬಾರಿ ಕೇವಲ ಒಂದು ಸೀಟು ಗಳಿಸಿದೆ, 18 ಸೀಟುಗಳನ್ನು ಕಳಕೊಂಡಿದೆ. ಇದರಲ್ಲಿ 13 ಎಸ್‌ಪಿ ಮೈತ್ರಿಕೂಟದ ಪಾಲಾದರೆ, 5 ಬಿಜೆಪಿ ಪಾಲಾಗಿದೆ. ಅದರ ಮತಗಳಿಕೆ 22.2%ದಿಂದ 12.8%ಕ್ಕೆ ಇಳಿದಿದೆ.

ಅದು ಸ್ಪರ್ಧಿಸಿದ 338 ಕ್ಷೇತ್ರಗಳಲ್ಲಿ, ಅಂದರೆ 84% ಸೀಟುಗಳಲ್ಲಿ ಅದರ ಮತಗಳಿಕೆ 20%ಕ್ಕಿಂತಲೂ ಕಡಿಮೆ. ಗೆದ್ದ ಒಂದು ಸೀಟು ಬಿಟ್ಟು, ಉಳಿದ 64ರಲ್ಲೂ ಅದರ ಮತಗಳಿಕೆ 20ರಿಂದ 35% ನಡುವೆಯಷ್ಟೇ ಇದೆ. ಕಳೆದ ಬಾರಿ ಅದು ಸ್ಪರ್ಧಿಸಿದ್ದ ಅರ್ಧಕ್ಕಿಂತ ಹೆಚ್ಚು ಸೀಟುಗಳಲ್ಲಿ ಅದು ಇಷ್ಟು ಮತಗಳಿಕೆ ದಾಖಲಿಸಿತ್ತು. 20%ಕ್ಕಿಂತ ಕಡಿಮೆ ಮತಗಳಿಸಿದ ಕ್ಷೇತ್ರಗಳ ಪ್ರಮಾಣ 36% ಇತ್ತು.

ಮೀಸಲು ಕ್ಷೇತ್ರಗಳಲ್ಲಿಯೂ ಅದರ ಮತಗಳಿಕೆಯಲ್ಲಿ 12.1% ಇಳಿಕೆಯಾಗಿದೆ. ಇದಕ್ಕೆ ಪ್ರತಿಯಾಗಿ ಎಸ್.ಪಿ.ಮೈತ್ರಿಕೂಟದ ಮತಗಳಿಕೆಯಲ್ಲಿ 15% ಏರಿಕೆಯಾಗಿದೆ, ಬಿಜೆಪಿ ಮೈತ್ರಿಕೂಟದ ಮತಗಳಿಕೆಯಲ್ಲೂ 3.6% ಏರಿಕೆಯಾಗಿದೆ.

ಮುಸ್ಲಿಮರು ಗಮನಾರ್ಹ ಸಂಖ್ಯೆಯಲ್ಲಿ ಇರುವ ಕ್ಷೇತ್ರಗಳಲ್ಲೂ ಅದರ ಮತಗಳಿಕೆ 9.1%ದಷ್ಟು ಇಳಿಕೆ ಕಂಡಿದೆ. ಬಡಜಿಲ್ಲೆಗಳಲ್ಲಿಯೂ 11% ಇಳಿಕೆಯಾಗಿದೆ.

ಮೇಲೆ ಹೇಳಿದ ಸಿಎಸ್‌ಡಿಎಸ್-ಲೋಕನೀತಿ ಸರ್ವೆಯ ಪ್ರಕಾರವೂ, ಮುಸ್ಲಿಂ ಸಮುದಾಯದಿಂದ ಎರಡೂ ಮೈತ್ರಿಕೂಟಗಳ ಮತಗಳಿಕೆ ಹೆಚ್ಚಿದರೂ, ಬಿಎಸ್‌ಪಿಯ ಮತಗಳಿಕೆಯ ಪ್ರಮಾಣ 19% ದಿಂದ 6%ಕ್ಕೆ ಕುಸಿದಿದೆ.

ಇದನ್ನೂ ಓದಿ : ಹಿಂದುತ್ವ ರಾಜಕಾರಣಕ್ಕೆ ಅಭಿವೃದ್ಧಿಯ ಹೊದಿಕೆ

ಇದು ಬಿಎಸ್‌ಪಿಯ ಇದುವರೆಗಿನ ಅತ್ಯಂತ ಕಳಪೆ ಪ್ರದರ್ಶನ ಎಂದು ಹೇಳಲಾಗುತ್ತಿದೆ. ಪರೋಕ್ಷವಾಗಿ ಇದು ಬಿಜೆಪಿ ಮೈತಿಕೂಟಕ್ಕೆ ನೆರವಾಗಲಿಕ್ಕಾಗಿ ಎಂಬ ಮಾತೂ ಚುನಾವಣಾ ಪ್ರಚಾರದ ವೇಳೆಯಲ್ಲಿ ಕೇಳಬರುತ್ತಿದ್ದವು. ಪ್ರಚಾರದ ವೇಳೆಯ ಸಂದರ್ಶನವೊಂದರಲ್ಲಿ ಅಮಿತ್ ಷಾ ಅವರು ಮಾಯಾವತಿಯವರು ಮತ್ತು  ಬಿಎಸ್‌ಪಿ ಈಗಲೂ ಪ್ರಸ್ತುತವಾಗಿದ್ದಾರೆ, ಜಾಟವ್ ಮತಗಳು ಅವರ ಜತೆಗೇ ಉಳಿದಿವೆ, ಮುಸ್ಲಿಮರೂ ಅವರಿಗೆ ಮತ ನೀಡುತ್ತಾರೆ ಎಂದು ಹೇಳಿದ್ದು ಹಲವರ ಹುಬ್ಬೇರಿಸಿತ್ತು. ಬಿಜೆಪಿ ಮುಖಂಡರು ಸತ್ಯವನ್ನು ಒಪ್ಪಿಕೊಂಡದ್ದು ಅವರ ಮಹಾನತೆ ಎಂದು ಮಾಯಾವತಿಯವರು ಅದಕ್ಕೆ ಸ್ಪಂದಿಸುತ್ತ ಹೇಳಿದ್ದರು ಎಂಬುದು ಈ ಅತಿ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ನೆನಪಾಗದಿರದು.

ರೈತರ ಹೋರಾಟ ಪರಿಣಾಮ ಬೀರಲಿಲ್ಲವೇ?

ಬಿಜೆಪಿಯ ಮುಖಂಡರು ಮತ್ತು ಅವರ ಬೆಂಬಲಿಗರು ದಿಲ್ಲಿ ಗಡಿಗಳಲ್ಲಿ ರೈತರ ಹೋರಾಟ ಮತ್ತು ಅಂತಿಮವಾಗಿ ಅದಕ್ಕೆ ಮೋದಿ ಸರಕಾರ ತಲೆಬಾಗಿದ್ದು ಈ ಚುನಾವಣೆಗಳ ಮೇಲೆ ಪ್ರಭಾವ ಬೀರುತ್ತದೆ ಎಂಬ ಪ್ರತಿಪಕ್ಷಗಳವರ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ ೆಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.  ದಿಲ್ಲಿ ಹೋರಾಟವನ್ನು ಸ್ಥಗಿತಗೊಳಿಸಿದ ನಂತರ ಮತ್ತೆ ಅದಕ್ಕೆ ಹೊಸರೂಪಕೊಡಲು ಕಾರಣವಾದ ಲಖಿಂಪುರ್ ಖೇರಿಯ ಎಲ್ಲ ಸೀಟುಗಳಲ್ಲೂ ಬಿಜೆಪಿ ಗೆದ್ದಿರುವುದನ್ನು ಅವರು ಉದಾಹರಣೆಯಾಗಿ ಕೊಡುತ್ತಾರೆ. ಇನ್ನು ಕೆಲವರಂತೂ ಸರಕಾರ ಮತ್ತೆ ಆ ಮೂರು ಕೃಷಿ ಕಾಯ್ದೆಗಳನ್ನು ತರುತ್ತದೆ, ಅದಕ್ಕೆ ಅದೀಗ ನೈತಿಕ ಬೆಂಬಲ ಪಡೆದಿದೆ ಎಂದೂ ಹೇಳುತ್ತಿದ್ದಾರೆ.

ಆದರೆ ಈ ಕಥನವನ್ನು ಆಳವಾಗಿ ಪರೀಕ್ಷಿಸಬೇಕಾಗುತ್ತದೆ ಎನ್ನುತ್ತಾರೆ ಮುಝಪ್ಫರ್ ನಗರ ಕೋಮುಗಲಭೆಗಳ ಮೇಲೆ ಮತ್ತು ‘ಮರ್ಯಾದಾ ಹತ್ಯೆ’ಗಳ ಮೇಲೆ ಬಹುಚರ್ಚಿತ ಚಿತ್ರಗಳ ( ಮುಝಫ್ಫರ್‌ನಗರ್ ಬಾಕೀ ಹೈ ಮತ್ತು ಇಝ್ಝತ್‌ನಗರೀಕೀ ಅಸಭ್ಯ ಬೇಟಿಯಾಂ) ನಿರ್ದೇಶಕ ನಕುಲ್ ಸಿಂಗ್ ಸಾಹ್ನೆ (ದಿ ವೈರ್, ಮಾರ್ಚ್11).

ರೈತರ ಚಳುವಳಿ ಪ್ರಭಾವ ಬೀರಿದ್ದು ಬಹುಪಾಲು ಉತ್ತರಪ್ರದೇಶದ ಪಶ್ಚಿಮ ಭಾಗದ ಜಾಟ್ ರೈತರ ಪ್ರಾಬಲ್ಯದ ನಾಲ್ಕು ಜಿಲ್ಲೆಗಳಲ್ಲಿ-ಮುಝಪ್ಫರ್‌ನಗರ, ಶಾಮ್ಲಿ, ಬಾಗ್‌ಪತ್ ಮತ್ತು ಸ್ವಲ್ಪ ಮಟ್ಟಿಗೆ ಮೇರಠ್ ಜಿಲ್ಲೆಗಳಲ್ಲಿ. ಇಲ್ಲಿಯ 19 ಸೀಟುಗಳಲ್ಲಿ ಬಿಜೆಪಿ ಗೆದ್ದಿರುವುದು 6 ಮಾತ್ರ. ಈ ಆರರಲ್ಲೂ ಮೂರು ಬಹುಪಾಲು ನಗರ ಕ್ಷೇತ್ರಗಳು. ಒಂದರಲ್ಲಿ ಬಿಜೆಪಿ ಕೇವಲ 200 ಮತಗಳಿಂದ ಆರ್‌ಎಲ್‌ಡಿ ಅಭ್ಯರ್ಥಿಯನ್ನು ಸೋಲಿಸಿದೆ.

ಮುಝಪ್ಪರ್‌ನಗರದ 2013ರ ಕೋಮುಗಲಭೆಗಳ ಮೂಲಕ ಎಷೊಂದು ಕೋಮುಧ್ರುವೀಕರಣ ನಡೆದಿತ್ತೆಂದರೆ, 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ 90% ಜಾಟರು ಬಿಜೆಪಿಗೆ ಮತನೀಡಿದ್ದರು ಎಂದು ಒಂದು ಅಧ್ಯಯನ ಹೇಳಿತ್ತು. ಆದರೆ ಈ ಬಾರಿ ಮುಝಪ್ಫರ್‌ನಗರದ 6 ಸೀಟುಗಳಲ್ಲಿ ಒಂದು ನಗರಪ್ರದೇಶದ ಸೀಟಿನಲ್ಲಿ ಮಾತ್ರ ಗೆಲುವು ಪಡೆದಿದೆ. ಶಾಮ್ಲಿಯಲ್ಲಿ ಎಲ್ಲ 3 ಸೀಟುಗಳನ್ನು ಕಳಕೊಂಡಿದೆ, ಮೇರಠ್‌ನಲ್ಲೂ 7ರಲ್ಲಿ 3ನ್ನು ಮಾತ್ರ ಗೆದ್ದಿದೆ. 2013ರ ಕೋಮುಗಲಭೆಗಳ ಆರೋಪಿಗಳಲ್ಲಿ ಮೂವರು ಈ ಭಾಗದಲ್ಲಿ ಸ್ಪರ್ಧಿಸಿದ್ದು ಮೂವರೂ ಸೋತಿದ್ದಾರೆ, ಅದೂ 10ಸಾವಿರಕ್ಕೂ ಹೆಚ್ಚು ಮತಗಳಿಂದ.

ವಾಸ್ತವವಾಗಿ ರೈತ ಸಂಘಟನೆಗಳ ಪ್ರಚಾರ ಆರಂಭದಲ್ಲಿ ಪಶ್ಚಿಮ ಭಾಗಕ್ಕೇ ಸೀಮಿತವಾಗಿತ್ತು. ಲಖಿಂಪರ್ ಖೇರಿ ಘಟನೆಯ ನಂತರವೇ ಅದು ಪೂರ್ವ ಭಾಗಕ್ಕೆ ಕಾಲಿಟ್ಟದ್ದು. ಈ ಭಾಗದಲ್ಲಿ ರೈತರ ಹೋರಾಟದ ಛಾಯೆ ಹರಡಲಾರಂಭಿಸಿದಾಗಲೇ ಸರಕಾರ ಕೃಷಿ ಕಾಯ್ದೆಗಳನ್ನು ರದ್ದುಮಾಡಿತು. ಅದರಿಂದಾಗಿ ಆಂದೋಲನ ನಿಂತು ಹೋಯಿತು,

ಅಲ್ಲದೆ ಈ ರಾಜ್ಯದಲ್ಲಿ ಪ್ರತಿಪಕ್ಷ ಎಂಬುದೇ ಇರಲಿಲ್ಲ. ಈಗೇನಾದರೂ ಅದು ಕಾಣಬರುತ್ತಿದೆಯೆಂದರೆ ಅದು ಈ ರೈತರ ಹೋರಾಟದಿಂದಾಗಿ. ಏಕೆಂದರೆ ಎಸ್‌ಪಿ ಯ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಎಸ್‌ಪಿ ಮುಖಂಡರು ರೈತರ ಹೋರಾಟದ ಸಮಯದಲ್ಲಾಗಲೀ, ಕೊವಿಡ್ ಅಲೆಯಲ್ಲಿ ಜನ ಒದ್ದಾಡುತ್ತಿದ್ದಾಗ, ಗಂಗೆಯಲ್ಲಿ ಹೆಣಗಳು ತೇಲುತ್ತಿದ್ದಾಗಲಾಗಲೀ ಜನರ ನಡುವೆ ಇರಲಿಲ್ಲ ಎನ್ನುತ್ತಾರೆ ನಕುಲ್ ಸಿಂಗ್.

ಆದರೂ ಈ ಚುನಾವಣೆಯಲ್ಲಿ ಪಶ್ಚಿಮ ಭಾಗದ 44ರಲ್ಲಿ ಕೇವಲ 4 ಸೀಟುಗಳನ್ನು ಪಡೆದಿದ್ದ ಎಸ್‌ಪಿ ಮೈತ್ರಿಕೂಟದ ಸೀಟುಗಳ ಸಂಖ್ಯೆ 14ಕ್ಕೇರಿತು. ಮತಗಳಿಕೆಯಲ್ಲಿ 15.5% ಏರಿಕೆಯಾಗಿದೆ; ಬಿಜೆಪಿ ಮತಗಳಿಕೆಯಲ್ಲೂ ಏರಿಕೆಯಾಗಿದೆ, ಆದರೆ ಕೇವಲ 3.8%, ಸೀಟುಗಳ ಸಂಖ್ಯೆ 37ರಿಂದ 30 ಕ್ಕೆ ಇಳಿದಿದೆ. ಇದ್ದ 1 ಸ್ಥಾನವನ್ನು ಕಳಕೊಂಡ ಬಿಎಸ್‌ಪಿ ಯದ್ದು 10.4%ದಷ್ಟು ಮತ್ತು ಇದ್ದ ಎರಡೂ ಸ್ಥಾನಗಳನ್ನು ಕಳಕೊಂಡ ಕಾಂಗ್ರೆಸ್‌ನದ್ದು 9%ದಷ್ಟು ಇಳಿದಿದೆ. ಕಬ್ಬು ಬೆಳೆಯುವ ಪ್ರದೇಶದಲ್ಲಂತೂ ಮತಗಳಿಕೆಯಲ್ಲಿ ಬಿಜೆಪಿಗಿಂತ ಬಹಳ ಹಿಂದೆ ಇದ್ದ ಎಸ್‌ಪಿ ಮೈತ್ರಿಕೂಟ ಈಗ ಅದರ ಮಟ್ಟಕ್ಕೆ ಬಂದಿದೆ, ಬಿಜೆಪಿ ಮೈತ್ರಿಕೂಟದ ಮತಗಳಿಕೆ 43.3%ವಾದರೆ, ಎಸ್‌ಪಿ ಮೈತ್ರಿಕೂಟದ್ದು 41.8%.

ಈ ಫಲಿತಾಂಶಗಳಿಂದ ಒಂದು ತೀರ್ಮಾನಕ್ಕೆ ಬರಬಹುದು-ಅದೆಂದರೆ, ಜನಗಳ ಸಮಸ್ಯೆಗಳ ಮೇಲೆ ನೈಜ ಜನತಾ ಚಳುವಳಿಗಳು ಮಾತ್ರವೇ ಧ್ರುವೀಕರಣದ ಪ್ರವೃತ್ತಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಅದೇ ಅಂತಿಮವಾಗಿ ಬಿಜೆಪಿಯನ್ನು ಅಥವ ಒಟ್ಟಾರೆಯಾಗಿ ಆಳುವ ವರ್ಗಗಳನ್ನು ಸೋಲಿಸಬಲ್ಲದು ಎನ್ನುತ್ತಾರೆ ನಕುಲ್ ಸಿಂಗ್.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರು ಕೂಡ ಕೋಮು ಧ್ರುವೀಕರಣವನ್ನು ತೀವ್ರಗೊಳಿಸಿ, ಮಾಧ್ಯಮದ ದೊಡ್ಡ ವಿಭಾಗಗಳ ಮೇಲಿನ ನಿಯಂತ್ರಣ ಮತ್ತು ಅಪಾರ ಹಣಬಲದಿಂದ ಬಿಜೆಪಿ ಕಡಿಮೆ ಬಹುಮತದೊಂದಿಗೆ ಸರ್ಕಾರವನ್ನು ಉಳಿಸಿಕೊಂಡಿದೆ, ಜನರು ಎದುರಿಸುತ್ತಿರುವ ಅಪಾರ ಆರ್ಥಿಕ ಸಂಕಷ್ಟಗಳ ಹೊರತಾಗಿಯೂ, ಉಚಿತ ಆಹಾರಧಾನ್ಯಗಳನ್ನು ಒದಗಿಸುವಂತಹ ಪರಿಹಾರ ಕ್ರಮಗಳು ಪ್ರಭಾವ ಬೀರಿವೆ ಎಂದು ಟಿಪ್ಪಣಿ ಮಾಡಿದ್ದಾರೆ.

“ನನಗನಿಸುತ್ತದೆ ಆತ ನಮಗೆ ವೋಟು ಕೊಟ್ಟಿದ್ದಾನೆ!”                 “ಇಲ್ಲ ಭಾಯಿ, ಮತದಾರರೊಂದಿಗೆ ಭಾವುಕ ಮಮತೆ ಬೇಡ! –  ವ್ಯಂಗ್ಯಚಿತ್ರ: ಸತೀಶ ಆಚಾರ್ಯ

ಚುನಾವಣಾ ಫಲಿತಾಂಶಗಳು ಬಂದಿವೆ, ಯೋಗಿ-ಮೋದಿ-ಷಾರವರ 80-20 ಪ್ರಚಾರಕ್ಕೆ ಜಯ ಲಭಿಸಿದೆ. ಆದರೂ ಎಂದಿನಂತೆ ಚುನಾವಣಾ ಪ್ರಕ್ರಿಯೆ ಆರಂಭದೊಂದಿಗೆ ಸ್ಥಗಿತಗೊಂಡ ಪೆಟ್ರೋಲ್-ಡೀಸೆಲ್ ಬೆಲೆಯೇರಿಕೆ ಕೊನೆಯ ಹಂತದ ಮತದಾನ ಮುಗಿದ ಕೂಡಲೇ ಮತ್ತೆ ಆರಂಭವಾಗಬಹುದು ಎಂದು ಬಹುಮಂದಿ ಭಯಪಟ್ಟಂತೆ ಇನ್ನೂ ಆರಂಭವಾಗಿಲ್ಲ. ಇದು ಏನನ್ನು ಸೂಚಿಸುತ್ತದೆ- ಕಾದು ನೋಡಬೇಕು.

 

 

 

 

 

 

 

 

 

Donate Janashakthi Media

Leave a Reply

Your email address will not be published. Required fields are marked *