ಬೆಂಗಳೂರು: ಪ್ರತ್ಯೇಕ ರಾಜ್ಯದ ಬಗ್ಗೆ ಮತ್ತೆ ವಿವಾದವನ್ನು ಹುಟ್ಟುಹಾಕಿರುವ ಸಚಿವ ಉಮೇಶ್ ಕತ್ತಿಯನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ಸಚಿವ ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯ ಸ್ಥಾಪನೆಯ ಕೂಗು ಹಾಕುತ್ತಿರುವುದು ಇದೇ ಮೊದಲ ಸಲವೇನಲ್ಲ. ಅವರ ಪ್ರಚೋದನಕಾರಿ ಹೇಳಿಕೆಗೆ ರಾಜ್ಯ ಬಿಜೆಪಿ ಸರ್ಕಾರವೇ ಹೊಣೆ ಎಂದಿದ್ದಾರೆ.
ಸಾವಿರಾರು ಹಿರಿಯ ಕನ್ನಡಿಗರ ಅವಿರತ ಹೋರಾಟದ ಫಲವಾಗಿ ಸ್ಥಾಪನೆಗೊಂಡ ಕರ್ನಾಟಕವನ್ನು ಒಡೆಯುವ ಯೋಚನೆ ಮಾಡುವುದೇ ನಾಡು- ನುಡಿಗೆ ಬಗೆವ ದ್ರೋಹವಾಗುತ್ತದೆ. ಅದರಲ್ಲೂ ಭಾಷಾ ಸೂಕ್ಷ್ಮ ಪ್ರದೇಶವಾದ ಬೆಳಗಾವಿಯಲ್ಲಿ ಇಂತಹ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಸಚಿವ ಉಮೇಶ್ ಕತ್ತಿ ಪಕ್ಷ ಇಲ್ಲವೆ ಸರ್ಕಾರದ ಮಟ್ಟದಲ್ಲಿ ಅಂತಹ ಚರ್ಚೆ ನಡೆಯದೆ ರಾಜ್ಯ ಒಡೆಯುವ ಯೋಜನೆಯ ಬಗ್ಗೆ ಮಾತನಾಡಿರಲಾರರು. ಅವರು ಹೇಳಿರುವುದು ಸುಳ್ಳಾಗಿದ್ದರೆ ಇಂತಹ ಬೇಜವಾಬ್ದಾರಿ ಹೇಳಿಕೆಗಾಗಿ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ನೆನ್ನೆ(ಜೂನ್ 22) ಬೆಳಗಾವಿಯಲ್ಲಿ ವಕೀಲರ ಸಂಘಕ್ಕೆ ಭೇಟಿ ನೀಡಿದ್ದ ಆಹಾರ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ. 2024ರ ಲೋಕಸಭಾ ಚುನಾವಣೆ ನಂತರ ಕರ್ನಾಟಕ 2 ರಾಜ್ಯವಾಗಲಿದ್ದು, ದೇಶದಲ್ಲಿ 50 ರಾಜ್ಯಗಳು ಅಸ್ತಿತ್ವದಲ್ಲಿರಲಿದೆ ಎಂದಿದ್ದಾರೆ.
ಪ್ರತ್ಯೇಕ ರಾಜ್ಯದ ವಿಚಾರದೊಂದಿಗೆ, ಉಮೇಶ್ ಕತ್ತಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವವಿದೆ. ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಈ ಅಂಶಗಳೆಲ್ಲವೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲು ಕಾರಣ. ಧಾರವಾಡದಲ್ಲಿ ಹೈಕೋರ್ಟ್, ಬೆಳಗಾವಿಯಲ್ಲಿ ಸುವರ್ಣಸೌಧ ಇದೆ. ಉತ್ತರ ಕರ್ನಾಟಕ ರಾಜ್ಯವಾದಾಗ ಪ್ರತ್ಯೇಕ ರಾಜ್ಯಕ್ಕೆ ಬೇಕಾದ ಮೂಲಸೌಕರ್ಯ ನಮ್ಮಲ್ಲಿವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ ಈ ವಿಷಯದ ಬಗ್ಗೆ ಉಪಕ್ರಮ ತೆಗೆದುಕೊಳ್ಳುತ್ತಾರೆ. ಮಹಾರಾಷ್ಟ್ರದಿಂದ ಮೂರು ಹೊಸ ರಾಜ್ಯಗಳು, ಉತ್ತರಪ್ರದೇಶದಲ್ಲಿ ನಾಲ್ಕು ಮತ್ತು ಕರ್ನಾಟಕದಲ್ಲಿ ಎರಡು ಹೊಸ ರಾಜ್ಯಗಳನ್ನು ಕೆತ್ತಲಾಗಿದೆ ಎಂದು ಹೇಳಿದರು.
ಸಣ್ಣ ರಾಜ್ಯಗಳು ಆರ್ಥಿಕ ಅಭಿವೃದ್ಧಿಗೆ ಪೂರಕ: ಸತೀಶ್ ಜಾರಕಿಹೊಳಿ
ಸಚಿವ ಉಮೇಶ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ‘ಯಾವುದೇ ರಾಜ್ಯ 3 ಕೋಟಿಗಿಂತ ಅಧಿಕ ಜನಸಂಖ್ಯೆ ಹೊಂದಿದ್ದರೆ ಮತ್ತೊಂದು ರಾಜ್ಯ ರಚಿಸಲು ವಿಶೇಷ ಮಸೂದೆ ಹೊರತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದು ಜಾರಿಯಾದರೆ ಎರಡು ರಾಜ್ಯಗಳಾಗುವುದು ಸಹಜ’ ಎಂದರು.
ಪ್ರತ್ಯೇಕ ರಾಜ್ಯ ರಚನೆಗೆ ಬಿಜೆಪಿಯವರು ಮಸೂದೆ ಜಾರಿಗೊಳಿಸುತ್ತಿದ್ದಾರೆ. ಹಾಗಾಗಿ ಇಲ್ಲಿ ಪ್ರತ್ಯೇಕ ರಾಜ್ಯದ ಪ್ರಶ್ನೆಯೇ ಬರುವುದಿಲ್ಲ. ಆ ಮಸೂದೆ ಜಾರಿಗೆ ಬರುವಾಗ ಚರ್ಚಿಸೋಣ’ ಎಂದು ಸತೀಶ್ ಜಾರಕಿಹೊಳಿ ಉತ್ತರಿಸಿದರು.