ಬಿಜೆಪಿಗೆ ಭಾರೀ ಹಿನ್ನಡೆ : ಕಮಲ ಬಿಟ್ಟು ‘ಸೈಕಲ್’ ಏರಿದ ಕಾರ್ಮಿಕ ಸಚಿವ

  • ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿಯ ಸ್ವಾಮಿ ಪ್ರಸಾದ್ ಮೌರ್ಯ
  • ಕೆಲವೇ ಗಂಟೆಗಳಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಸೇರ್ಪಡೆ
  • ವಿಧಾನಸಭೆ ಚುನಾವಣೆ ಸಮೀಪದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಆಘಾತ
  • ದಲಿತರು, ಒಬಿಸಿ ಶೋಷಣೆ ಕಾರಣದಿಂದ ಬಿಜೆಪಿಗೆ ರಾಜೀನಾಮೆ ಎಂದ ಸಚಿವ

ಲಕ್ನೋ: ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನವೇ ಉತ್ತರ ಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಬಿಜೆಪಿ ಪಕ್ಷ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

‘ವಿಭಿನ್ನ ಸಿದ್ಧಾಂತ ಹೊಂದಿದ್ದರೂ, ನಾನು ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ಆದರೆ ದಲಿತರು, ಒಬಿಸಿಗಳು, ರೈತರು, ನಿರುದ್ಯೋಗಿಗಳು ಮತ್ತು ಸಣ್ಣ ಉದ್ಯಮಿಗಳ ಅತೀವ ಶೋಷಣೆಯ ಕಾರಣದಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ’ ಎಂದು ರಾಜೀನಾಮೆ ಪತ್ರದಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದಾರೆ. ಪ್ರಬಲ ಒಬಿಸಿ (ಇತರ ಹಿಂದುಳಿದ ವರ್ಗ) ನಾಯಕ ಹಾಗೂ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮೌರ್ಯ ಅವರು ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತೊರೆದ ನಂತರ 2016 ರಲ್ಲಿ ಬಿಜೆಪಿ ಸೇರಿದ್ದರು.

ಇದನ್ನೂ ಓದಿ : ತನ್ನೂರಿನ ಹದಗೆಟ್ಟ ರಸ್ತೆ ಬಗ್ಗೆ ವಿವರಿಸಲು ವರದಿಗಾರ್ತಿಯಾದ ಬಾಲಕಿ

ಮೌರ್ಯ ಅವರು ಪೂರ್ವ ಉತ್ತರ ಪ್ರದೇಶದ ಪದ್ರೌನಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಪುತ್ರಿ ಸಂಘಮಿತ್ರಾ ಉತ್ತರಪ್ರದೇಶದ ಬಿಜೆಪಿ ಸಂಸದೆ ಯಾಗಿದ್ದಾರೆ.

ಮೌರ್ಯ ಅವರೊಂದಿಗೆ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಅಖಿಲೇಶ್ ಯಾದವ್, ಸಾಮಾಜಿಕ ನ್ಯಾಯ ಹಾಗೂ ಸಮಾನತೆಗಾಗಿ ಹೋರಾಡಿದ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಇತರೆ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಅವರೊಂದಿಗೆ ಸಮಾಜವಾದಿ ಪಕ್ಷಕ್ಕೆ ಸ್ವಾಗತಿಸುತ್ತಿರುವುದಾಗಿ ಹೇಳಿದ್ದಾರೆ. ಮೌರ್ಯ ಅವರು ಯಾವಾಗಲೂ ಸಮಾಜದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಾರೆ ಮತ್ತು ಜನಸಾಮಾನ್ಯರಲ್ಲಿ ಚಿರಪರಿಚಿತರಾಗಿದ್ದಾರೆ. ನಾನು ಅವರನ್ನು ಮತ್ತು ಇತರ ನಾಯಕರು, ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಸಮಾಜವಾದಿ ಪಕ್ಷಕ್ಕೆ ಸ್ವಾಗತ ಕೋರುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ 403 ವಿಧಾನಸಭೆ ಕ್ಷೇತ್ರಗಳಿದ್ದು, ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 10ರಿಂದ ಮಾರ್ಚ್ 7ರವರೆಗೂ ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

Donate Janashakthi Media

Leave a Reply

Your email address will not be published. Required fields are marked *