ಗುರುರಾಜ ದೇಸಾಯಿ
ಇಡೀ ದೇಶವೇ ಕುತೂಹಲದಿಂದ ಕಾದಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ರಾಷ್ಟ್ರಮಟ್ಟದಲ್ಲಿ ಉತ್ತರ ಪ್ರದೇಶಕ್ಕೆ ಮೊದಲಿನಿಂದಲೂ ವಿಶೇಷ ಸ್ಥಾನವಿದೆ. ದೇಶಕ್ಕೆ ಅತಿ ಹೆಚ್ಚು ಪ್ರಧಾನಿಗಳನ್ನು ನೀಡಿರುವ ಈ ರಾಜ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರೇ ದೇಶವನ್ನು ಆಳುವುದು ಎಂಬುದು ಸತ್ಯ. ಅದೇ ಕಾರಣಕ್ಕೆ ಚುನಾವಣೆ ಘೋಷಣೆ ಆಗುವ ಆರು ತಿಂಗಳ ಮೊದಲೇ ಎಲ್ಲ ಪಕ್ಷ ಗಳು ತೋಳೇರಿಸಿ ನಿಂತಿವೆ.
ಈ ಬಾರಿ ಎಲ್ಲ ಪಕ್ಷಗಳೂ ಗೆಲುವಿಗಾಗಿ ಹಾತೊರೆಯುತ್ತಿವೆ. ಬಿಜೆಪಿ ಕಳೆದ ಬಾರಿಯಷ್ಟೇ ಸೀಟುಗಳನ್ನು ಗೆದ್ದು ಅಧಿಕಾರ ಉಳಿಸಿಕೊಳ್ಳುವ ಹವಣಿಕೆಯಲ್ಲಿದ್ದರೆ, ಈ ಬಾರಿ ಏನಾದರೂ ಮಾಡಿ ಅಧಿಕಾರಕ್ಕೇರಲೇಬೇಕು ಎಂದು ಎಸ್‌ಪಿ ಟೊಂಕ ಕಟ್ಟಿದೆ. ಬಿಜೆಪಿ-ಎಸ್‌ಪಿ ಅಬ್ಬರದ ನಡುವೆ ಬಿಎಸ್‌ಪಿ ಅಬ್ಬರ ಸಪ್ಪೆಯಾಗಿದೆ. ಅತ್ತ ಕಾಂಗ್ರೆಸ್ ನೇರವಾಗಿ ಪ್ರಿಯಾಂಕಾ ವಾದ್ರಾ ಅವರ ಮುಖವನ್ನೇ ಇರಿಸಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದೆ. ಈಗಾಗಲೇ ಮಹಿಳಾ ಕೇಂದ್ರಿತವಾಗಿ ಹಲವಾರು ಭರವಸೆಗಳನ್ನು ನೀಡಿದೆ
403 ಸ್ಥಾನಗಳಿಗೆ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ರಾಜಕೀಯ ಪಕ್ಷಗಳು ಜಾತಿವಾರು ಪಟ್ಟಿ ಹಿಡಿದು ಮತಗಳ ಲೆಕ್ಕಾಚಾರ ಹಾಕುತ್ತಿದೆ ಹಲವು ಸಮಸ್ಯೆಗಳ ನಡುವೆ ಉತ್ತರ ಪ್ರದೇಶ ದಕ್ಕುವುದು ಯಾರಿಗೆ ಎಂಬ ಪ್ರಶ್ನೆಯೂ ಮುಖ್ಯವಾಗಿದೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಯಾದವ್-ಮುಸ್ಲಿಂರ ಪಕ್ಷ, ಬಿಜೆಪಿ ಬ್ರಾಹ್ಮಣ-ಬನಿಯಾಗಳ ಪಕ್ಷ ಮತ್ತು ಬಿಎಸ್‌ಪಿ ದಲಿತರ ಪಕ್ಷ ಎಂಬುದು ರಾಜಕೀಯ ವಲಯದಲ್ಲಿನ ಸಾಮಾನ್ಯ ನಂಬಿಕೆ. ಕೆಲ ಅಪವಾದಗಳನ್ನು ಹೊರತುಪಡಿಸಿದರೆ, 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಘಟನೆಯ ನಂತರದಿಂದ ಇಲ್ಲಿಯವರೆಗೆ ಜಾತಿಲೆಕ್ಕಾಚಾರದ ಆಧಾರದ ಮೇಲೆ ಪಕ್ಷಗಳು ಚುನಾವಣೆಗಳನ್ನು ಗೆದ್ದಿವೆ ಮತ್ತು ಸೋತಿವೆ.
ಯಾದವ್, ದಲಿತ, ಮುಸ್ಲಿಮರ ಒಲವು ಯಾರಿಗಿದೆಯೋ ಅವರೇ ಗೆಲ್ಲೋದು :
ಜಾಟ್, ಯಾದವ್, ಜಾತ್ವಾಸ್, ಬ್ರಾಹ್ಮಣ, ಒಬಿಸಿ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಹಲವು ಜಾತಿ ಹಾಗೂ ಧರ್ಮಗಳ ಸಮ್ಮಿಲನವಾಗಿರುವ ಉತ್ತರ ಪ್ರದೇಶದಲ್ಲಿ ಚುನಾವಣೆ ಜಾತಿ ಲೆಕ್ಕಾಚಾರವೇ ಬೇರೆ. ಸಿಂಪಲ್ ಆಗಿ ಹೇಳಬೇಕು ಅಂದರೆ, ಉತ್ತರ ಪ್ರದೇಶದಲ್ಲಿ ಯಾದವ್, ದಲಿತ ಹಾಗೂ ಮುಸ್ಲಿಂ ಒಲವು ಯಾರ ಕಡೆಗಿದೆಯೋ ಆ ಪಕ್ಷದ ಗೆಲುವು ಸುಲಭವಾಗಲಿದೆ. 2017ರಲ್ಲಿ ಯಾದವ್, ಜಾಟ್, ದಲಿತ ಮತಗಳನ್ನು ಬಾಚಿಕೊಂಡ ಬಿಜೆಪಿ 312 ಸ್ಥಾನ ಗೆದ್ದು ಅಧಿಕಾರ ಹಿಡಿದಿದೆ. ಆದರೆ ಈ ಬಾರಿ ಉತ್ತರ ಪ್ರದೇಶದ ಫಲಿತಾಂಶ ನಿರ್ಧರಿಸುವ ಸಮುದಾಯಗಳ ಮತ ಯಾರಿಗೆ ಎಂಬ ಗುಟ್ಟು ಇನ್ನೂ ರಟ್ಟಾಗಿಲ್ಲ. ಒಂದು ಸಮೀಕ್ಷೆ ನಡೆಸಿದ ಪ್ರಕಾರ ಒಂದಿಷ್ಟು ಸಮುದಾಯಗಳು ಪಕ್ಷಗಳ ಜೊತೆ ಗಟ್ಟಿಯಾಗಿ ನಿಂತಿವೆ.
“ಸೈಕಲ್” ಏರಲಿದ್ದಾರೆ ಜಾಟ್ & ಯಾದವ ಸಮುದಾಯ : ಈ ಬಾರಿ ಚುನಾವಣೆಯಲ್ಲಿ ಜಾಟ್ ಸಮುದಾಯದ ಒಲವು ಶೇಕಡಾ 60 ರಷ್ಟು ಸಮಾಜವಾದಿ ಪಾರ್ಟಿ ಹಾಗೂ ಮೈತ್ರಿ ಪಕ್ಷದ ಕಡೆಗಿದೆ. ಬಿಜೆಪಿಯತ್ತ ಕೇವಲ 30 ಶೇಕಡಾ ಜಾಟ್ ಸಮುದಾಯದ ಮಂದಿ ಒಲವು ತೋರಿದ್ದಾರೆ. ಇನ್ನು ಉತ್ತರ ಪ್ರದೇಶದ ಪ್ರಬಲ ಸಮುದಾಯ ಯಾದವ ಸಹಜವಾಗಿ ಸಮಾಜವಾದಿ ಪಾರ್ಟಿ ಹಾಗೂ ಮೈತ್ರಿ ಪಕ್ಷದತ್ತ ವಾಲಿದೆ. ತಮ್ಮ ಸಮುದಾಯದ ನಾಯಕನಾಗಿರುವ ಅಖಿಲೇಶ್ ಯಾದವ್ ಪರ ಶೇಕಡಾ 90 ರಷ್ಟು ಯಾದವ್ ಸಮುದಾಯ ಬೆಂಬಲ ನೀಡಿದೆ. ಇನ್ನು ಬಿಜೆಪಿಗೆ ಕೇವಲ 10 ಶೇಕಡಾ ಯಾದವ್ ಸಮುದಾಯದ ಬೆಂಬಲ ಸಿಗಲಿದೆ. ಯಾದವ್ ಹೊರತು ಪಡಿಸಿ ಹಾಗೂ ಒಬಿಸಿ ಸಮುದಾಯ ಬಿಜೆಪಿಯತ್ತ ಒಲವು ತೋರಿದೆ. ಶೇಕಡಾ 70 ರಷ್ಟು ಮಂದಿ ಬಿಜೆಪಿ ಮೇಲೆ ವಿಶ್ವಾಸವಿಟ್ಟಿದ್ದಾರೆ. ಎಸ್‍ಪಿ ಮೈತ್ರಿಗೆ ಶೇಕಡಾ 10 ರಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ.
ಬ್ರಾಹ್ಮಣ ಸಮುದಾಯ: ಕಳೆದ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬೆಂಬಲ ನೀಡಿದ ಸಮುದಾಯದ ಬ್ರಾಹ್ಮಣ ಸಮುದಾಯ. ಈ ಬಾರಿಯ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ಶೇಕಡಾ 60 ರಷ್ಟು ಮಂದಿ ಬಿಜೆಪೆಗೆ ಒಲವು ತೋರಿದ್ದಾರೆ. ಎಸ್‌ಪಿ ಮೈತ್ರಿಗೆ ಶೇಕಡಾ 30, ಬಿಎಸ್‌ಪಿಗೆ 10% ಹಾಗೂ ಕಾಂಗ್ರೆಸ್‌ನತ್ತ 5% ರಷ್ಟು ಬ್ರಾಹ್ಮಣ ಸಮುದಾಯದ ಬೆಂಬಲ ಸಿಗಲಿದೆ ಎಂದು ಸಮೀಕ್ಷೆ ವರದಿಗಳು ಹೇಳುತ್ತಿದೆ.
ಜಾತವ್ ಪರಿಶಿಷ್ಠ ಜಾತಿ(ಜಾತ್ವ ಎಸ್‌ಸಿ) ನಾನ್ ಜಾತ್ವ ಎಸ್‌ಸಿ ಸಮುದಾಯದ ಬೆಂಬಲ ಈ ಬಾರಿಯೂ ಬಿಜೆಪಿ ಪಕ್ಷಕ್ಕೆ ಸಿಗಬಹುದು ಆದರೆ ಈ ಹಿಂದಿನ ಪ್ರಮಾಣದಲ್ಲಿಲ್ಲ. ಜಾತವ್ ಸಮುದಾಯದ ಬೆಂಬಲ ಶೇಕಡಾ 30 ರಷ್ಟು ಮಾತ್ರ ಬಿಜೆಪಿಗಿದೆ, ಇನ್ನು ಶೇಕಡಾ 25 ರಷ್ಟು ಮಂದಿ ಬೆಂಬಲ ಎಸ್‌ಪಿ ಮೈತ್ರಿ ಪಕ್ಷಕ್ಕಿದೆ.
ಮುಸ್ಲಿಂ ಸಮುದಾಯ: ಮೊದಲೇ ಹೇಳಿದಂತೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಬೆಂಬಲ ಅತೀ ಮುಖ್ಯ. ಉತ್ತರ ಪ್ರದೇಶ ಒಟ್ಟು ಜನಸಂಖ್ಯೆಯ 19.3% ರಷ್ಟು ಮುಸ್ಲಿಂ ಸಮುದಾಯ ಪ್ರಾಬಲ್ಯ ಹೊಂದಿದೆ. ಎಸ್‌ಪಿ ಮೈತ್ರಿ ಪಕ್ಷಕ್ಕೆ ಶೇಕಡಾ 80 ರಷ್ಟು ಮುಸ್ಲಿಂ ಸಮುದಾಯದ ಬೆಂಬಲವಿದೆ. ಬಿಜೆಪಿ ಕೇವಲ 3% ಮಾತ್ರ. ಬಿಎಸ್‌ಪಿ 10%,ಕಾಂಗ್ರೆಸ್ 7% ರಷ್ಟು ಮುಸಲ್ಮಾನರ ಬೆಂಬಲ ಸಿಗಲಿದೆ. ಮೇಲ್ನೋಟಕ್ಕೆ ಇಲ್ಲಿ ಸಮುದಾಯದ ಲೆಕ್ಕಾಚಾರ ಸರಳವಾಗಿದೆ. ಆಯಾ ಸಮುದಾಯಗಳು ತಮ್ಮ ನಾಯಕನಿಗೆ ಬೆಂಬಲ ಸೂಚಿಸುವುದು ಸಹಜ. ಆದರೆ ಇತರ ಸಣ್ಣ ಪಕ್ಷಗಳಿಂದ ಇಲ್ಲಿ ಮುಸ್ಲಿಂ ಸಮುದಾಯದ ಮತಗಳು ಹಂಚಿಕೆಯಾಗಲಿದೆ. ಇದರ ಪ್ರಮಾಣ ಎಷ್ಟಿದೆ ಅನ್ನೋದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.
ಉತ್ತರ ಪ್ರದೇಶದ ಶೇಕಡಾ 40 ರಷ್ಟು ಮಂದಿ ಸ್ಥಳೀಯ ಅಭ್ಯರ್ಥಿ ಹಾಗೂ ಸ್ಥಳೀಯವಾಗಿ ಪ್ರಾಬಲ್ಯ ಹೊಂದಿರುವ ಸಮುದಾಯದ ನಾಯಕನಿಗೆ ಬೆಂಬಲ ಸಿಗುವ ಸಾಧ್ಯತೆ ಇದೆ. ಆಡಳಿತರೂಢ ಬಿಜೆಪಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಅಖಿಲೇಶ್ ಯಾದವ್ ನಡುವೆ ತೀವ್ರ ಪೈಪೋಟಿಯಲ್ಲಿದೆ. ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಎಸ್‌ಪಿ ನಡುವೆ ನೇರ ಹಣಾಹಣಿಯಿದೆ.
ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಪರಿಸ್ಥಿತಿಯಲ್ಲಿರುವ ಬಿಎಸ್ಪಿ ನಾಯಕಿ ಮಾಯಾವತಿ ಹಾಗು ಬಹುಜನ ಪಾರ್ಟಿ ಮೇಲೆ ಮುಸ್ಲಿಂಮರು ಹಾಗೂ ಕೆಳವರ್ಗದ ಜನ ಒಲವು ತೋರಿದರೆ, ಯೋಗಿ ಆದಿತ್ಯನಾಥ್ ಹಾದಿ ಸುಗಮವಾಗಲಿದೆ. ಇಲ್ಲದಿದ್ದರೆ, ಆಡಳಿತ ವಿರೋಧಿ ಅಲೆ, ಅಖಿಲೇಶ್ ಪರ ಇರುವ ಯಾದವ್ ಸಮುದಾಯದ ಮುಂದೆ ಯೋಗಿ ನಿರೀಕ್ಷಿದಷ್ಟು ಮತಗಳಿಸುವಲ್ಲಿ ವಿಫಲರಾಗುವ ಸಾಧ್ಯತೆ ಇದೆ. ಇನ್ನೂ ಮಾಯವಾತಿ ಈ ಚುನಾವಣೆಯಲ್ಲಿ ಮೌನ ವಹಿಸಿರುವುದು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ.
ಇನ್ನೂ ಕಾಂಗ್ರೆಸ್‌ಗೆ ಮಾತ್ರ ಪಕ್ಕಾ ವೋಟ್ ಬ್ಯಾಂಕ್ ಕಾಣುತ್ತಿಲ್ಲ ಎಂಬುದು ಗಮನಿಸಬೇಕಾದ ಅಂಶ. ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷಕ್ಕೆ ಪ್ರಿಯಾಂಕಾ ಗಾಂಧಿ ಉಸಿರಾಗಿದ್ದಾರೆ. ಮೂರು ವರ್ಷದ ಹಿಂದೆ ಸೋನಭದ್ರ ಜಿಲ್ಲೆಯಲ್ಲಿ ಹಿಂಸಾಚಾರ ನಡೆದು ಬುಡಕಟ್ಟು ಸಮುದಾಯದ ಜನರ ಹತ್ಯೆಯಾದಾಗ ಭೇಟಿ ನೀಡಿದ್ದರು. ಬಳಿಕ 2019ರ ಡಿಸೆಂಬರ್ ನಲ್ಲಿ ಲಕ್ನೋದಲ್ಲಿ ಸಿಎಎ ವಿರೋಧಿ ಹೋರಾಟಗಾರರು ಬಂಧನಕ್ಕೊಳಗಾದ ಸಂದರ್ಭದಲ್ಲಿ ಅವರು ಕುಟುಂಬದವರನ್ನು ಹೋಗಿ ಭೇಟಿಯಾಗಿದ್ದರು. ಕಳೆದ ವರ್ಷದ ಆಕ್ಟೋಬರ್ ನಲ್ಲಿ ಹತ್ರಾಸ್ ಜಿಲ್ಲೆಯಲ್ಲಿ ಯುವತಿಯ ರೇಪ್ ಮತ್ತು ಹತ್ಯೆ ನಡೆದಾಗ ಹತ್ರಾಸ್ ಗೆ ಭೇಟಿ ನೀಡಿದ್ದರು. ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಿಸಾನ್ ಮಹಾ ಪಂಚಾಯತ್ ನಡೆದಾಗ ಅಲ್ಲಿಗೆ ಭೇಟಿ ನೀಡಿದ್ದು ಎಷ್ಟರ ಮಟ್ಟಿಗೆ ಮತ ತಂದು ಕೊಡುತ್ತದೆ ನೋಡಬೇಕಿದೆ.
ಯೋಗಿ ವಿರೋಧಿ ಅಲೆ : ರಾಜ್ಯದಲ್ಲಿ ಯೋಗಿ ವಿರೋಧಿ ಅಲೆ ಸಾಕಷ್ಟು ಸೃಷ್ಟಿಯಾಗಿದೆ. ಮೂರು ಜನ ಪ್ರಭಾವಿ ಸಚಿವರು ಹಾಗೂ 10 ಜನ ಶಾಸಕರು ರಾಜೀನಾಮೆ ನೀಡುರುವುದು ಬಿಸಿತುಪ್ಪವಾಗಿದೆ. ಬಂಡಾಯದ ಬಿಸಿ ಕೂಡಾ ಬಿಜೆಪಿಯನ್ನು ಸುಟ್ಟುಹಾಕಬಹುದು. ಹಿಂದೂ ಧರ್ಮದ ಹೆಸರಿನಲ್ಲಿ ಹಾಗೂ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಬಿಟ್ಟರೆ ಬೇರೆ ಕೆಲಾಗಳತ್ತ ಗಮನ ನೀಡಿಲ್ಲ ಎಂಬ ಆರೋಪವಿದೆ. ವಿಶೇಷವಾಗಿ ದಲಿತ ಮತ್ತು ಮುಸ್ಲೀಂ ಸಮುದಾಯದ ಮೇಲೆ ನಡೆದ ಹಲ್ಲೆಗಳು ಯೋಗಿಯ ಖುರ್ಚಿಯನ್ನು ಅಲುಗಾಡಿಸುತ್ತಿವೆ. ಹತ್ರಾಸ ಘಟನೆ ಹಾಗೂ ಕೃಷಿಕಾಯ್ದೆ ವಿರುದ್ಧ ರೈತರು ನಡೆಸಿದ ಹೋರಾಟ ಬಿಜೆಪಿಯ ಸ್ಥಾನಗಳಿಕೆಗೆ ತಡೆ ಒಡ್ಡಲಿವೆ. ಕೋವಿಡ್ ನಿರ್ವಹಣೆಯಲ್ಲಿ ಯೋಗಿ ಸಂಪೂರ್ಣವಾಗಿ ವಿಫಲವಾಗಿದ್ದು ರಾಜ್ಯಗಳ ಅಭಿವೃದ್ಧಿ ವಿಚಾರದಲ್ಲಿ ಉತ್ತರ ಪ್ರದೇಶ ಕೆಳಗಿನ ಪಟ್ಟಿಯಲ್ಲಿರುವುದು ರಾಜ್ಯದ ಜನರ ರಟ್ಟೆಯ ಸಿಟ್ಟು ಕೈಗೆ ಬರುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಯುಪಿ ರಾಜಕೀಯ ಭವಿಷ್ಯವನ್ನು ಈ ಪ್ರಬಲ ಸಮುದಾಯಗಳು ನಿರ್ಧರಿಸಲಿವೆ. ಹಿಂದುಳಿದ ಮತದಾರರು. ಕಳೆದ ಬಾರಿ ಬಿಜೆಪಿ ಕಡೆ ವಾಲಿದ್ದಅತೀ ಹಿಂದುಳಿದ ಮತದಾರರನ್ನು ಸೆಳೆಯಲು ಅಖಿಲೇಶ್ ಯಾದವ್ ಒಬ್ಬೊಬ್ಬರೇ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಉತ್ತರ ಪ್ರದೇಶ ದಕ್ಕುವುದು ಯಾರಿಗೆ? ಫಲಿತಾಂಶದ ವರೆಗೆ ಕಾಯ್ದು ನೋಡಬೇಕಿದೆ.