ಬಿ. ಶ್ರೀಪಾದ ಭಟ್
ಜಿಎಸ್ ಟಿ ಸಂಗ್ರಹ ಗರಿಷ್ಠ ಮಟ್ಟ ತಲುಪಿದೆ, ಎಪ್ರಿಲ್ ತಿಂಗಳಲ್ಲಿ 1.67 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಮಾದ್ಯಮಗಳಲ್ಲಿ ವರದಿಯಾಗಿದೆ ಮತ್ತು ಈ ಟ್ರೆಂಡ್ ಮುಂದುವರೆಯುತ್ತದೆ ಸಹ.
ಆದರೆ ಇಲ್ಲಿನ ಮರೆಮೋಸ ಮತ್ತು ನೇರ ವಂಚನೆಯೆಂದರೆ ಉತ್ಪಾದನಾ ಪ್ರಮಾಣದಲ್ಲಿ (manufacturing volume) ಹೆಚ್ಚಳವಾಗಿಲ್ಲ. ಅದು ಜಿಡಿಪಿಯ ಶೇ. 17ರಷ್ಟಿದೆ. ಹಿಂದಿನ ಯುಪಿಎ ಸರಕಾರವು 2022ರ ಒಳಗೆ ಈ ಪ್ರಮಾಣವನ್ನು ಶೇ. 25ಕ್ಕೇರಿಸಲು ‘ರಾಷ್ಟ್ರೀಯ ಉತ್ಪಾದನಾ ನೀತಿ’ ಘೋಷಣೆ ಮಾಡಿತು. ಆದರೆ ಅದು ಕಾಗದದಲ್ಲಿ ಉಳಿದಿದೆ. ಈಗ ಪ್ರಮಾಣವು ಮತ್ತಷ್ಟು ಕಡಿಮೆಯಾಗಿದೆ.
ಭಾರತದ ಜಿಡಿಪಿಗೆ ಶೇ. 15.4ರಷ್ಟು ಕೃಷಿ, ಶೇ 25ರಷ್ಟು ಕೈಗಾರಿಕೆ, ಶೇ.53ರಷ್ಟು ಸೇವಾ ಕ್ಷೇತ್ರದ ಕೊಡುಗೆಯಿದೆ. ನಿರುದ್ಯೋಗದ ಪ್ರಮಾಣ ಶೇ. 8 ಪ್ರಮಾಣದಲ್ಲಿದೆ. ಕಳೆದ ಮೂರು ವರ್ಷಗಳಲ್ಲಿ ಸರಾಸರಿ 1 ಕೋಟಿಗೂ ಮೇಲ್ಪಟ್ಟು ಉದ್ಯೋಗ ನಷ್ಟವಾಗಿದೆ ಮತ್ತು ಶೇ. 92 ಪ್ರಮಾಣ ಅಸಂಘಟಿತ ವಲಯವಿದೆ.
ಅಟೋಮೊಬೈಲ್, ಸಿಮೆಂಟ್, ರಾಸಾಯನಿಕ, ಗಾರ್ಮೆಂಟ್ಸ್, ರಬ್ಬರ್, ಫಾರ್ಮಸೆಟಿಕಲ್ಸ್ ಇತ್ಯಾದಿ ವಲಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಸಂಘಟಿತ ಕಾರ್ಮಿಕರಿದ್ದಾರೆ. ಇವರಿಗೆ ಉದ್ಯೋಗ ಭದ್ರತೆಯಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನವಿಲ್ಲ, ಇತರೇ ಸೌಲಭ್ಯಗಳಿಲ್ಲ.
ಮುಖ್ಯವಾಗಿ ಒಂದು ವೇಳೆ ಉದ್ಯೋಗದಲ್ಲಿ ಹೆಚ್ಚಳವಾದರೂ ಸಹ ಉತ್ಪಾದಕತೆಯಲ್ಲಿ (productivity) ಹಿಂದುಳಿದಿದ್ದೇವೆ. ಇದರಿಂದಾಗಿ ಗುಣಮಟ್ಟದ ಉತ್ಪಾದನೆಯೂ ಇಲ್ಲ, ಗುಣಮಟ್ಟದ ಉದ್ಯೋಗವೂ ಇಲ್ಲ, ಗುಣಮಟ್ಟದ ವೇತನವೂ ಇಲ್ಲ.
ಇದರರ್ಥ ಜಿಎಸ್ ಟಿ ತೆರಿಗೆ ಸಂಗ್ರಹಕ್ಕೂ ಅಭಿವೃದ್ಧಿ ಸೂಚ್ಯಂಕಕ್ಕೂ ಯಾವುದೇ ಸಂಭಂದವಿಲ್ಲ. ಭಾರತದಲ್ಲಿ ಅದು ವಿಲೋಮ ಅನುಪಾತದಲ್ಲಿದೆ(inversly propotional). ತೆರಿಗೆ ಸಂಗ್ರಹ ಹೆಚ್ಚಿದೆ, ಅಭಿವೃದ್ಧಿ ಕುಂಠಿತವಾಗಿದೆ. ಅಂದರೆ ಶೇ. 80 ಪ್ರಮಾಣದ ಜನಸಂಖ್ಯೆ ಕನಿಷ್ಠ ವೇತನಕ್ಕಿಂತಲೂ ಕಡಿಮೆ ವೇತನ ಪಡೆಯುತ್ತಿದ್ದಾರೆ.
ಅದರೆ ಕನಿಷ್ಠ ವೇತನ ಪಡೆಯುವ, ಕಡಿಮೆ ಗುಣಮಟ್ಟದ ಉದ್ಯೋಗದಲ್ಲಿರುವ ಈ ಅಸಂಘಟಿತ ವಲಯ ಮತ್ತು ಕೆಳ ಮದ್ಯಮ ವರ್ಗ ತಾವು ಖರೀದಿಸುವ, ಉಣ್ಣುವ ಪ್ರತಿಯೊಂದಕ್ಕೂ ಪರೋಕ್ಷ ತೆರಿಗೆ ಕಟ್ಟುವುದರ ಮೂಲಕ ಜಿಎಸ್‌ಟಿ ಸಂಗ್ರಹದ ಹೆಚ್ಚಳಕ್ಕೆ ಕಾರಣರಾಗಿದ್ದಾರೆ.
ಮತ್ತೊಂದು ಮುಖ್ಯವಾದ ಸಂಗತಿಯೆಂದರೆ ಉತ್ಪಾದನೆಯೇ ಕಡಿಮೆ ಇರುವುದರಿಂದ ಮಾರಾಟದ ಪ್ರಮಾಣವೂ (sales volume) ಹೆಚ್ಚಾಗಿಲ್ಲ. ಆದರೆ ಉತ್ಪನ್ನದ ಬೆಲೆ (product value) ಸಿಕ್ಕಾಪಟ್ಟೆ ಹೆಚ್ಚಾಗಿದೆ. ಅಂದರೆ, ಉದ್ಯಮಿಗಳು ತಮ್ಮ ಉತ್ಪನ್ನ ಕಡಿಮೆಗೊಳಿಸಿ, ಆದರೆ ಅದರ ಬೆಲೆ ಹೆಚ್ಚಿಸಿ ವಾರ್ಷಿಕ ವಹಿವಾಟಿನಲ್ಲಿ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಉದಾಹರಣೆಗೆ ಪ್ರತಿ ಕೆಜಿ ಸ್ಟೀಲ್ ನ ಬೆಲೆ ಸರಾಸರಿ 82ರೂ. (ಪ್ರತಿ ಟನ್ ಗೆ 82,000) ರಷ್ಟಿದೆ. ಹತ್ತು ವರ್ಷಗಳ ಹಿಂದೆ 40ರೂ.ರಷ್ಟಿತ್ತು. (ಪ್ರತಿ ಟನ್ ಗೆ 40,000). ಪ್ರತಿ ಕೆಜಿ ಸಿಮೆಂಟಿನ ಬೆಲೆ ಸರಾಸರಿ 450ರೂ. (ಪ್ರತಿ ಟನ್ ಗೆ 4,50,000) ರಷ್ಟಿದೆ. ಹತ್ತು ವರ್ಷಗಳ ಹಿಂದೆ 280ರೂ.ರಷ್ಟಿತ್ತು. (ಪ್ರತಿ ಟನ್ ಗೆ 2,80,000). ಅಂದರೆ ಕಳೆದ ಹತ್ತು ವರ್ಷಗಳಲ್ಲಿ ಉತ್ಪನ್ನಗಳ ಪ್ರಮಾಣ ಕಡಿಮೆಯಾಗಿದೆ. ಆದರೆ ಬೆಲೆ ದುಪ್ಪಟ್ಟಾಗಿದೆ. ಅದಕ್ಕೆ ಪೂರಕವಾಗಿ ತೆರಿಗೆ ಸಂಗ್ರಹವೂ ಹೆಚ್ಚಾಗಿದೆ.
ಇದೇ ರೀತಿ ಇತರೆ ಉತ್ಪನ್ನಗಳ ಬೆಲೆ ಶೇ. 30-80ರಷ್ಟು ಹೆಚ್ಚಾಗಿದೆ. ಸಹಜವಾಗಿ ತೆರಿಗೆ ಸಂಗ್ರಹವೂ ಹೆಚ್ಚಾಗಿದೆ. ಆದರೆ ನಿರುದ್ಯೋಗವೂ ಹೆಚ್ಚಾಗಿದೆ. ಹಣದುಬ್ಬರವೂ ಹೆಚ್ಚಾಗಿದೆ, ಆದರೆ ರೈತರಿಗೆ ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತಿಲ್ಲ.
ಒಟ್ಟು ಸಾರಾಂಶವೆಂದರೆ ಉತ್ಪನ್ನ ಕಡಿಮೆಯಾಗಿದೆ, ಉತ್ಪನ್ನಗಳ ಬೆಲೆ ಹೆಚ್ಚಾಗಿದೆ ಮತ್ತು ತೆರಿಗೆ ಸಂಗ್ರಹವೂ ಹೆಚ್ಚಾಗಿದೆ. ಬೇಡಿಕೆ ಕಡಿಮೆಯಾಗಿದ್ದರೂ ಸಹ, ಕೊಳ್ಳುವವರು ಪ್ರಮಾಣ ಕಡಿಮೆಯಾಗಿದ್ದರೂ ಸಹ ತೆರಿಗೆ ಸಂಗ್ರಹ ಹೆಚ್ಚಾಗಿರುವ ದೇಶ ಭಾರತವೊಂದೇ ಇರಬೇಕು.
ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ, ದೇಶದ ಅಭಿವೃದ್ಧಿಯ ಮೌಲ್ಯಮಾಪನವನ್ನು ಉತ್ಪಾದನಾ ಪ್ರಮಾಣವನ್ನು ಆಧರಿಸಿ ಮಾಡಬೇಕು, ಉತ್ಪನ್ನಗಳ ಬೆಲೆಯನ್ನು ಆಧರಿಸಿ ಮಾಡಬಾರದು. ಏಕೆಂದರೆ ಉತ್ಪಾದನೆ ಹೆಚ್ಚಾದರೆ ಉದ್ಯೋಗ ಸೃಷ್ಟಿ ಹೆಚ್ಚಾಗುತ್ತದೆ ಮತ್ತು ಗುಣಮಟ್ಟವನ್ನು ಉತ್ತಮಗೊಳಿಸಲು ಸಾಧ್ಯತೆಯಿರುತ್ತದೆ.
ಆದರೆ, ಉತ್ಪಾದನೆ ಕಡಿಮೆಯಾಗಿ ಬೆಲೆ ದುಪ್ಪಟ್ಟಾದರೆ ನಿರುದ್ಯೋಗ ಹೆಚ್ಚಾಗುತ್ತದೆ, ಗುಣಮಟ್ಟದ ಉದ್ಯೋಗವಿರುವುದಿಲ್ಲ ಮತ್ತು ಶೇ. 1 ಪ್ರಮಾಣದ ಅತಿ ಶ್ರೀಮಂತರ ಬಳಿ ಮಾತ್ರ ಸಂಪತ್ತಿನ ಸಂಗ್ರಹವೂ ಹೆಚ್ಚಾಗುತ್ತದೆ, ಅತಿ ಸಣ್ಣ, ಸಣ್ಣ, ಮಧ್ಯಮ ಗಾತ್ರದ ಕೈಗಾರಿಕೆಗಳು ಮುಚ್ಚಿಕೊಳ್ಳುತ್ತವೆ ಮತ್ತು ಹಣದುಬ್ಬರ ಕಡಿಮೆಯಾಗುತ್ತದೆ.
ಆದರೆ, ಮೋದಿ ಸರಕಾರ ಮಾಡುತ್ತಿರುವುದು ತಿರುಗಾಮುರುಗ. ಈಗ ಹೇಳಿ ಅತಿ ಹೆಚ್ಚು ತೆರಿಗೆ ಸಂಗ್ರಹ ಅಭಿವೃದ್ಧಿ ಸೂಚ್ಯಂಕವೇ?