ಕಲಬುರಗಿ: ರಾಜ್ಯ ಮತ್ತು ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಅತಿ ಹೆಚ್ಚಿನ ಗಂಭೀರ ಪರಿಣಾಮ ಬೀರಿದೆ. ಕಳೆದ ಮೂರು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದುಡ್ಡು ಕೊಡದಿದ್ದರೆ ಈಗಿನ ಸರ್ಕಾರದಲ್ಲಿ ಯಾವುದೇ ಕೆಲಸ ಆಗುವುದಿಲ್ಲ. ನೌಕರಿ ಬೇಕೆಂದರೆ ಯುವತಿಯರು ಮಂಚ ಹತ್ತಬೇಕು, ಯುವಕರು ಲಂಚ ಕೊಡಬೇಕು. ಇದು ಲಂಚ-ಮಂಚದ ಸರ್ಕಾರವಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಖಾಲಿಯಾಗಿರುವ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡುತ್ತಿಲ್ಲ. ಪ್ರತಿ ಹುದ್ದೆಗಳ ನೇಮಕಾತಿಯಲ್ಲಿಯೂ ಅಕ್ರಮ ನಡೆಯುತ್ತಿದೆ. ಸಚಿವ ಪ್ರಭು ಚೌಹಾನ್ ಆಪ್ತ ಜ್ಞಾನದೇವ ಜಾಧವ್ ಅನೇಕ ಹುದ್ದೆಗಳನ್ನು ಕೊಡಿಸುವದಾಗಿ ಹೇಳಿ ವಂಚಿಸಿದ್ದಾರೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಪಿಟಿಸಿಎಲ್ನ 1,492 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಅರ್ಜಿ ಹಾಕಿದವರು ಮೂರು ಲಕ್ಷಕ್ಕೂ ಹೆಚ್ಚು ಜನ. ಈ ಪರೀಕ್ಷೆಯನ್ನು ಕೂಡ ಸರ್ಕಾರ ಪಿಎಸ್ಐ ಪರೀಕ್ಷೆ ಮಾದರಿಯಲ್ಲೇ ನಡೆಸಿದೆ ಎಂದು ಹೇಳಿದರು.
ಕೆಪಿಟಿಸಿಎಲ್ ಪರೀಕ್ಷೆಯಲ್ಲಿಯೂ ಅತ್ಯಧುನೀಕ ಸಾಧನ ಬಳಸುವ ಮೂಲಕ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಯನ್ನು ಬಂಧನವಾಗಿದೆ. ಇದನ್ನು ತನಿಖೆಗೆ ಒಳಪಡಿಸಿ, ಹಾಗಾದರೆ ಕೆಪಿಟಿಸಿಎಲ್ಗೆ ಮತ್ತೊಮ್ಮೆ ಪರೀಕ್ಷೆ ಮಾಡುತ್ತಾರಾ? ಒಂದೊಂದು ಜೆಇ ಹುದ್ದೆಗೆ ಮೂವತ್ತು ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಎಇ ಹುದ್ದೆಗಳನ್ನು ₹ 50 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಆರು ನೂರಕ್ಕೂ ಹೆಚ್ಚು ಹುದ್ದೆಗಳು ಮಾರಾಟವಾಗಿರುವ ಶಂಕೆಯಿದೆ ಎಂದು ತಿಳಿಸಿದರು.
ನೇಮಕಾತಿ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ನಮ್ಮದು ಪ್ರಾಮಾಣಿಕ ಸರ್ಕಾರ ಎಂದು ಹೇಳುವ ರಾಜ್ಯ ಬಿಜೆಪಿ ಸರ್ಕಾರವು ಧೈರ್ಯವಿದ್ದರೆ ತ್ವರಿತಗತಿಯ ನ್ಯಾಯಾಲಯಗಳನ್ನು ರಚಿಸಲಿ. ಇಲ್ಲದಿದ್ದರೆ ನಿರುದ್ಯೋಗಿ ಯುವಕರೇ ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕುವ ಕಾಲ ಬರುತ್ತದೆ. ಯುವಕರ ಭವಿಷ್ಯವನ್ನು ಮಾರಾಟ ಮಾಡಿ ಇವರು ಸರ್ಕಾರ ನಡೆಸುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರ ಪ್ರತಿ ಮನೆಯಲ್ಲಿ ತಿರಂಗಾ ಅಭಿಯಾನದಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಧ್ವಜವನ್ನು ಮಾರಾಟಕ್ಕಿಟ್ಟಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿಯವರ ಕೊಡುಗೆ ಏನೂ ಇಲ್ಲ. ಧ್ವಜ ಸಂಹಿತೆ ಬದಲಾಯಿಸಿ, ಪಾಲೀಸ್ಟರ್ ಧ್ವಜಕ್ಕೆ ಅವಕಾಶ ನೀಡುವ ಮೂಲಕ ಖಾದಿ ಉದ್ಯಮಕ್ಕೆ ಹೊಡೆತ ಕೊಟ್ಟಿದ್ದಾರೆ. ಪಾಲೀಸ್ಟರ್ ಧ್ವಜ ತಯಾರಿಸುತ್ತಿರುವುದು ರಿಲಯನ್ಸ್ ಗ್ರೂಪ್. ದೇಶಭಕ್ತಿಯನ್ನೂ ಇವರು ಅದಾನಿ ಮತ್ತು ಅಂಬಾನಿ ಕಂಪನಿಗೆ ಅಡ ಇಟ್ಟಿದ್ದಾರೆ. ಸರ್ಕಾರಿ ಅಧಿಕಾರಿಗಳನ್ನು ಮಾರಾಟ ಮದ್ಯವರ್ತಿಗಳನ್ನಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
‘ಕಾಶ್ಮೀರಿ ಫೈಲ್ಸ್’ ಸಿನಿಮಾಗೆ ತೆರಿಗೆ ರಿಯಾಯಿತಿ ಕೊಡುತ್ತಾರೆ. ಅನೇಕ ಶಾಸಕರು ಚಿತ್ರವನ್ನು ಉಚಿತವಾಗಿಯೂ ತೋರಿಸಿದರು. ಆದರೆ ಈಗ ರಾಷ್ಟ್ರಧ್ವಜವನ್ನು ಉಚಿತವಾಗಿ ನೀಡುತ್ತಿಲ್ಲ. ಸರ್ಕಾರವೇ ಧ್ವಜಗಳನ್ನು ಖರೀದಿಸಿ, ಮಾರಾಟ ಮಾಡಿ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ.
ಎಸಿಬಿ ರದ್ದು ಸಿದ್ದರಾಮಯ್ಯಗೆ ಹಿನ್ನಡೆ ಅಲ್ಲ
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದು ಮಾಡಿದ್ದು ಸಿದ್ದರಾಮಯ್ಯ ಅವರಿಗೆ ಆದ ಹಿನ್ನಡೆಯಲ್ಲ. ಕೋರ್ಟ್ ಆದೇಶ ಪಾಲಿಸುವುದಾಗಿ ಸಿದ್ದರಾಮಯ್ಯ ಹಿಂದೆಯೇ ಹೇಳಿದ್ದರು. 2018ರಲ್ಲಿಯೇ ಬಿಜೆಪಿ ತಾವು ಅಧಿಕಾರಕ್ಕೆ ಬಂದರೆ ಎಸಿಬಿ ರದ್ದು ಮಾಡುವ ಭರವಸೆ ಕೊಟ್ಟಿತ್ತು. ಮೂರನೇ ಮುಖ್ಯಮಂತ್ರಿ ಬಗ್ಗೆ ಮಾಹಿತಿ ಕೊಡುತ್ತಿರುವುದು ಬಿಜೆಪಿಯವರೇ. ಬೆಂಕಿ ಹಚ್ಚುವವರು ಅವರೇ, ನಂತರ ಆರಿಸುವವರೂ ಅವರೇ. ಬೆಂಕಿ ಹತ್ತಿದೆ ನೋಡಿ ಎಂದರೆ ಕಾಂಗ್ರೆಸ್ ಮೇಲೆಯೇ ಗೂಬೆ ಕೂರಿಸುತ್ತಾರೆ ಎಂದರು.