ಆಮೇರಿಕಾ ಉಪಾಧ್ಯಕ್ಷ ವ್ಯಾನ್ಸ್ ಭಾರತ ಭೇಟಿ ವಿರೋಧಿಸಿ ಹೋರಾಟಕ್ಕೆ CPI(M) ಬೆಂಬಲ

ನವದೆಹಲಿ: ಆಮೇರಿಕಾ ದೇಶದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತ ಭೇಟಿಯನ್ನು ವಿರೋಧಿಸಿ, ಭಾರತವು ಮಾರಾಟಕ್ಕಿಲ್ಲ ಎಂಬ ಬಲವಾದ ಸಂದೇಶ ರವಾನಿಸಲು, ಏಪ್ರಿಲ್ 21, 2025 ರಂದು ಗ್ರಾಮಗಳಲ್ಲಿ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟಿಸಲು ಕರ್ನಾಟಕ ಪ್ರಾಂತ ರೈತ ಸಂಘ ಕರೆ ನೀಡಿದ್ದು, ಸಿಪಿಐ(ಎಂ) ರಾಜ್ಯ ಸಮಿತಿ ಬೆಂಬಲ ನೀಡಿದೆ.

ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಸಾರಿರುವ ಸುಂಕ ಸಮರದ ಬೆದರಿಕೆ ಮೂಲಕ ಭಾರತದ ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಮಾರುಕಟ್ಟೆ, ಕೈಗಾರಿಕಾ ಬಿಡಿ ಉತ್ಪನ್ನಗಳನ್ನು ಆಮೇರಿಕಾ ದೇಶದ ಉತ್ಪನ್ನಗಳಿಗೆ ಸುಂಕ ರಹಿತವಾಗಿ ಮುಕ್ತಗೊಳಿಸುವಂತೆ ಒತ್ತಡ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಆಮೇರಿಕಾ ಉಪಾಧ್ಯಕ್ಷ ಭೇಟಿ ಮತ್ತು ವಾಣಿಜ್ಯ ಮಾತುಕತೆ ಭಾರತದ ಕೋಟ್ಯಾಂತರ ರೈತಾಪಿ ಸಮುದಾಯಕ್ಕೆ ಮರಣ ಶಾಸನವಾಗಲಿದೆ ಅದ್ದರಿಂದ ಈ ಭೇಟಿ ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಟ್ರಂಪ್ -ವಾನ್ಸ್ ಪ್ರತಿಕೃತಿ ದಹಿಸಿ ತೀವ್ರ ಪ್ರತಿಭಟನೆ ಗೆ ಕರೆ ನೀಡಲಾಗಿದೆ.

ದೇಶದಲ್ಲೇ ಎರಡನೆ ಅತಿ ದೊಡ್ಡ ಹಾಲು ಉತ್ಪಾದಕ ರಾಜ್ಯ ವಾಗಿರುವ ಕರ್ನಾಟಕದ ಸುಮಾರು ಹತ್ತಕ್ಕೂ ಹೆಚ್ಚು ಜಿಲ್ಲೆಗಳ ರೈತ ಕುಟುಂಬಗಳು ತಮ್ಮ ಜೀವನಾಧಾರಕ್ಕಾಗಿ ಹೈನುಗಾರಿಕೆ ಯನ್ನು ಅವಲಂಬಿಸಿವೆ, ತೊಗರಿ ಸೋಯಾಬೀನ್, ಬಟಾಣಿ ಮುಂತಾದ ದ್ವಿದಳ ಧಾನ್ಯಗಳು ಹಾಗೂ ಮೆಕ್ಕೆಜೋಳ, ಎಥೆನಾಲ್ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಾಗಿವೆ. ಅದೇ ರೀತಿ ಕರಾವಳಿ ಕರ್ನಾಟಕದ ಪ್ರಮುಖ ಜೀವನೋಪಾಯ ಮೀನುಗಾರಿಕೆ ಕೃಷಿಯನ್ನು ಅವಲಂಬಿಸಿದೆ.

ಇದನ್ನೂ ಓದಿ: ​ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ತೆರವು

ಈ ಎಲ್ಲಾ ಕೃಷಿ ಉತ್ಪನ್ನಗಳು ಈಗಾಗಲೇ ಬೆಂಬಲ ಬೆಲೆ ಅಭಾವ ಮತ್ತು ಉತ್ಪಾದನಾ ವೆಚ್ಚದ ಹೆಚ್ಚಳದಿಂದ ಕಷ್ಟ ಹಾಗೂ ನಷ್ಟವನ್ನು ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಈ ವಲಯಗಳು ಸೇರಿದಂತೆ ವಿವಿಧ ರೀತಿಯ ತೋಟಾಗಾರಿಕೆ ಉತ್ಪನ್ನಗಳ ಸುಂಕ ರಹಿತ ಅಮದು ಈ ಎಲ್ಲಾ ರೈತರನ್ನು ಸಂಪೂರ್ಣವಾಗಿ ದಿವಾಳಿಯೆಬ್ಬಿಸಿ ರಾಜ್ಯದ ರೈತರನ್ನು ನಿರುದ್ಯೋಗ-ಸಾಲಭಾಧೆಗೆ ಸಿಲುಕಿಸಲಿದೆ.

ವಿಶೇಷವಾಗಿ ರಾಜ್ಯದ ಹೈನುಗಾರಿಕೆಗೆ ಮತ್ತು ಕರ್ನಾಟಕ ಹಾಲು ಒಕ್ಕೂಟ (KMF) ಕ್ಕೆ ಈ ಅಮದು ಸುಂಕ ನಿರ್ಧಾರ ಶವಪಟ್ಟಿಗೆಗೆ ಹೊಡೆಯುವ ಕೊನೆ ಮೊಳೆ ಆಗಲಿದೆ ಹಾಗಾಗಿ ಯಾವುದೇ ಒತ್ತಡಕ್ಕೂ ಮಣಿಯದೇ ಹೈನುಗಾರಿಕೆ, ಮೀನುಗಾರಿಕೆ, ತೋಟಗಾರಿಕೆ ಸೇರಿದಂತೆ ಒಟ್ಟಾರೆ ಕೃಷಿಯನ್ನು ವಾಣಿಜ್ಯ ಮಾತುಕತೆಗಳಿಂದ ಹೊರಗಿಡಬೇಕು ಎಂದು ನರೇಂದ್ರ ಮೋದಿ ಸರ್ಕಾರವನ್ನು ಸಿಪಿಐ(ಎಂ) ಆಗ್ರಹಿಸುತ್ತದೆ.

ಆಮೇರಿಕಾದಲ್ಲಿ ಶೇಕಡಾ 70 ರಷ್ಟು ಮಾರುಕಟ್ಟೆ ಹೊಂದಿದ್ದ ಚೀನಾ, ಕೆನಡಾ , ಮೆಕ್ಸಿಕೋ ಮುಂತಾದ ದೇಶಗಳು ಆಮೇರಿಕಾದ ಸುಂಕ ಸಮರದ ಬೆದರಿಕೆಗೆ ಯಾವುದೇ ರೀತಿಯಲ್ಲಿ ಮಣಿಯದೇ ತಿರುಗೇಟು ನೀಡಿದೆ. ಆದರೆ ಆಮೇರಿಕಾದ ಜೊತೆ ವ್ಯಾಪಾರದ ಕೊರತೆ ಇರುವ ಭಾರತ ಇಂತಹ ದಿಟ್ಟ ನಿಲುವು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಸ್ವತಃ ನರೇಂದ್ರ ಮೋದಿರವರ ಸಮ್ಮುಖದಲ್ಲೇ ಭಾರತವನ್ನು ಸುಂಕ ರಾಜ ಎಂದು ಡೋನಾಲ್ಡ್ ಟ್ರಂಪ್ ಅಣಕಿಸಿ ಸ್ವಾಭಿಮಾನಕ್ಕೆ ಧಕ್ಕೆ ತಂದಾಗಲೂ, ಭಾರತದ ವಲಸೆ ಕಾರ್ಮಿಕರನ್ನು ಕೋಳ ತೊಡಿಸಿ ಅಮಾನವೀಯವಾಗಿ ನಡೆಸಿಕೊಂಡಾಗಲೂ ಸೂಕ್ತ ಪ್ರತಿಭಟನೆ ವ್ಯಕ್ತಪಡಿಸಿಲ್ಲ. ಕೆಲವೇ ಕೆಲವು ದೊಡ್ಡ ಉದ್ಯಮಿಗಳ ರಪ್ತು ವ್ಯವಹಾರಕ್ಕಾಗಿ, ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಾಗಿ ಕೋಟ್ಯಾಂತರ ರೈತರ ಜೀವನೋಪಾಯ ಸರ್ವ ನಾಶ ಮಾಡುವ ಮಾತುಕತೆಗಳು ಆಹಾರ ಭದ್ರತೆ, ಆಹಾರ ಸ್ವಾವಲಂಬನೆ ಅಂತಿಮವಾಗಿ ದೇಶದ ಸಾರ್ವಭೌಮತ್ವ ವನ್ನು ಅಪಾಯಕಾರಿ ಪರಿಸ್ಥಿತಿಗೆ ಕೊಂಡೊಯ್ಯಲಿದೆ.

ವಾನ್ಸ್ ಭೇಟಿ ಹಿನ್ನೆಲೆಯಲ್ಲಿ ಆಮೇರಿಕಾ ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್ ರವರು ಕೃಷಿ ಮಾರುಕಟ್ಟೆ ಮುಕ್ತಗೊಳಿಸುವುದೇ ಭಾರತದ ಮಾತುಕತೆಯಲ್ಲಿ ಪ್ರಮುಖ ಅಧ್ಯತಾ ವಿಷಯ ವಾಗಿದ್ದು ಯಾವುದೇ ಸುಂಕ ಹಾಗೂ ಇತರೆ ತಡೆಗಳನ್ನು ನಿವಾರಿಸಬೇಕು ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಅದ್ದರಿಂದ ಆಮೇರಿಕಾ ಉಪಾಧ್ಯಕ್ಷ ರ ಜೊತೆ ವಾಣಿಜ್ಯ ಮಾತುಕತೆಗಳನ್ನು ರದ್ದುಪಡಿಸಬೇಕು. ಆಮೇರಿಕಾದ ಸುಂಕ ಸಮರದಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಕೂಡಲೇ ಸಂಸತ್ತು ಹಾಗೂ ಶಾಸನಸಭೆಗಳಲ್ಲಿ ಚರ್ಚಿಸಿ ಸೂಕ್ತ ಮಾರ್ಗೋಪಾಯಗಳನ್ನು ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸುತ್ತದೆ. ಮತ್ತು ಏಪ್ರಿಲ್ 21 ರಂದು ನಡೆಯಲಿರುವ ಪ್ರಾಂತ ರೈತ ಸಂಘದ ಪ್ರತಿಭಟನೆಗಳನ್ನು ಬೆಂಬಲಿಸಲು ತೀರ್ಮಾನಿಸಿದೆ.

ಇದನ್ನೂ ನೋಡಿ: Use of this & that | English grammar Janashakthi Media

Donate Janashakthi Media

Leave a Reply

Your email address will not be published. Required fields are marked *