US tariffs: ಭಾರತದ ಮೇಲೆ ಹೆಚ್ಚುವರಿ 25% ಸುಂಕ

ನವದೆಹಲಿ: ಆಗಸ್ಟ್ 27ರ ಮಧ್ಯರಾತ್ರಿ (ಭಾರತೀಯ ಕಾಲಮಾನ ಆಗಸ್ಟ್‌ 28ರ ಬೆಳಿಗ್ಗೆ 9.31) ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇ 25 ರಷ್ಟು ಹೆಚ್ಚುವರಿ ಸುಂಕ ಜಾರಿಗೆ ಬರುವಂತೆ ವಿಧಿಸಿ ಅಮೆರಿಕ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ, ಒಟ್ಟಾರೆ ಸುಂಕದ ಪ್ರಮಾಣ ಇದೀಗ ಶೇ 50ಕ್ಕೆ ಏರಿಕೆಯಾಗಿದೆ.

ಈ ಕ್ರಮದಿಂದಾಗಿ ಬಹುತೇಕ ‘ಮೇಡ್‌ ಇನ್‌ ಇಂಡಿಯಾ’ ಉತ್ಪನ್ನಗಳ ಬೆಲೆ ದುಬಾರಿಯಾಗುವುದರಿಂದ, ಅಮೆರಿಕದ ಮಾರುಕಟ್ಟೆಯಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ.

ಅಮೆರಿಕ ತಲುಪುವ ಭಾರತದ ಸರಕುಗಳಿಗೆ ಹೊಸ ಸುಂಕ ವ್ಯವಸ್ಥೆಯು ಆಗಸ್ಟ್ 27ರ ಮಧ್ಯರಾತ್ರಿಯಿಂದ ಅನ್ವಯವಾಗಲಿದೆ ಎಂದು ಅಮೆರಿಕದ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆಯು (ಕಸ್ಟಮ್ಸ್‌ ವಿಭಾಗ)  ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರು |ಒಳಮೀಸಲಾತಿ ಜಾರಿ ಅಲೆಮಾರಿಗಳಿಗೆ ಶೇ. 1ರಷ್ಟು ಜಾರಿಗಾಗಿ ರಾಹುಲ ಗಾಂಧಿ ಬೇಟಿಗೆ ಸಭೆಯಲ್ಲಿ ನಿರ್ಧಾರ

ಪ್ರತಿ ಸುಂಕವಾಗಿ ಶೇ 25 ರಷ್ಟು ಆಗಸ್ಟ್‌ 1ರಿಂದಲೇ ಜಾರಿಗೆಯಾಗಿದೆ. ಆದಾಗ್ಯೂ, ಹೆಚ್ಚುವರಿಯಾಗಿ ಶೇ 25 ರಷ್ಟು ಸುಂಕವನ್ನು ಮತ್ತೆ ಹೇರಲಾಗಿದೆ. ಪ್ರತಿಸ್ಪರ್ಧಿ ರಾಷ್ಟ್ರಗಳಾದ ವಿಯೆಟ್ನಾಂ, ಬಾಂಗ್ಲಾದೇಶ, ಇಂಡೊನೇಷ್ಯಾ, ಜಪಾನ್‌ ಮತ್ತು ಚೀನಾ ರಾಷ್ಟ್ರಗಳಿಗೆ ಅಮೆರಿಕ ಕಡಿಮೆ ಸುಂಕ ವಿಧಿಸುತ್ತಿರುವುದರಿಂದ, ಭಾರತದ ಸ್ಪರ್ಧೆಗೆ ತೊಡಕಾಗಲಿದೆ. ಅದಲ್ಲದೆ, ಈ ಕ್ರಮವು ಭಾರತ ಮತ್ತು ಅಮೆರಿಕದ ನಡುವಣ ಸಂಬಂಧವನ್ನು ಹದಗೆಡಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ರೈತರು, ಸಣ್ಣ ಉದ್ಯಮಿಗಳು ಮತ್ತು ಜಾನುವಾರು ಸಾಕಣೆದಾರರ ಹಿತಾಸಕ್ತಿಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಾದಿಸಿದ್ದ ಕೆಲವೇ ಗಂಟೆಗಳಲ್ಲಿ ಅಮೆರಿಕದ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆಯು ಹೆಚ್ಚುವರಿ ಸುಂಕಕ್ಕೆ ಸಂಬಂಧಿಸಿದ ಆದೇಶ ನೀಡಿದೆ.

ಭಾರತದ ಆರ್ಥಿಕತೆಯು ಹೆಚ್ಚಾಗಿ ದೇಶೀಯ ಮಾರುಕಟ್ಟೆಯನ್ನು ಆಧರಿಸಿದ್ದರೂ, ದೇಶದ ಜಿಡಿಪಿ ಮೇಲೆ ಶೇ 0.2ರಿಂದ ಶೇ 1ರಷ್ಟು ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಹಲವು ವಿಶ್ಲೇಷಣೆಗಳು ಹೇಳಿವೆ.

ಅಮೆರಿಕದ ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿ ‘Fitch’, ‘ಸುಂಕದ ಕುರಿತಾದ ಅನಿಶ್ಚಿತತೆಯು ವ್ಯವಹಾರ ಮತ್ತು ಹೂಡಿಕೆ ಮೇಲೆ ಪರಿಣಾಮ ಬೀರಲಿದೆ. ಇದರಿಂದಾಗಿ, ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ. ಮುಖ್ಯವಾಗಿ, ಜವಳಿ, ಚರ್ಮ, ಆಭರಣ ಉದ್ಯಮಗಳಿಗೆ ಪೆಟ್ಟು ಬೀಳಬಹುದು’ ಎಂದು ಅಂದಾಜಿಸಿದೆ.

‘ಪಿಂಗಾಣಿ, ರಾಸಾಯನಿಕಗಳು, ಕರಕುಶಲ ವಸ್ತುಗಳಿಗೆ ಸಂಬಂಧಿಸಿದ ಉದ್ಯಮಗಳು ಯುರೋಪ್‌, ಆಗ್ನೇಯ ಏಷ್ಯಾ ದೇಶಗಳು ಮತ್ತು ಮೆಕ್ಸಿಕೊದಂತಹ ಪ್ರತಿಸ್ಪರ್ಧಿ ರಾಷ್ಟ್ರಗಳ ಕೈಗಾರಿಕೆಗಳಿಂದ ತೀವ್ರ ಪೈಪೋಟಿ ಎದುರಿಸಬೇಕಾಗುತ್ತದೆ’ ಎನ್ನಲಾಗಿದೆ.

ಇದನ್ನೂ ನೋಡಿ: ಧರ್ಮಸ್ಥಳ | ದೂರುದಾರರಿಗೆ ರಕ್ಷಣೆ – ಸಾಕ್ಷಿ ರಕ್ಷಣಾ ಸ್ಕೀಮ್ ಏನು ಹೇಳುತ್ತದೆ?Janashakthi Media

Donate Janashakthi Media

Leave a Reply

Your email address will not be published. Required fields are marked *