ಉರಿಗೌಡ, ನಂಜೇಗೌಡ ಐತಿಹಾಸಿಕ ವ್ಯಕ್ತಿಗಳೋ, ಕಾಲ್ಪನಿಕವೊ?

ಸಿ. ಸಿದ್ದಯ್ಯ

ಇತ್ತೀಚೆಗೆ ಉರಿಗೌಡ ಮತ್ತು ನಂಜೇಗೌಡ ಸಹೋದರರ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಹೋದರರು ಟಿಪ್ಪೂ ಸುಲ್ತಾನನನ್ನು ಕೊಂದರು ಎಂಬ ಸಂಘಪರಿವಾದ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಬ್ರಿಟೀಷರ ವಿರುದ್ದ ನಡೆದ ಯುದ್ದದಲ್ಲಿ ಟಿಪ್ಪೂ ಹತ್ಯೆಗೀಡಾದ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಉರಿಗೌಡ ಮತ್ತು ನಂಜೇಗೌಡ ಹಿಂದುತ್ವವಾದಿಗಳ ಕಟ್ಟುಕತೆ, ಇದು ಮಂಡ್ಯ ಜಿಲ್ಲೆಯಲ್ಲಿ ಹಿಂದುತ್ವದ ಬೆಳೆ ಬೆಳೆಯಲು ಮತ್ತು ಒಕ್ಕಲಿಗರನ್ನು ತನ್ನಡೆ ಸೆಳೆಯಲು ಬಿಜೆಪಿ ಮಾಡುತ್ತಿರುವ ಪ್ರಯತ್ನ ಎಂದು ಹಲವರು ಆರೋಪಿಸುತ್ತಿದ್ದಾರೆ. ಬ್ರಿಟೀಷರ ವಿರುದ್ಧ ಹೋರಾಡಿದ ಟಿಪ್ಪುವನ್ನು ಒಕ್ಕಲಿಗ ವೀರರು ಕೊಂದರು ಎಂದು ಹೇಳುವ ಮೂಲಕ, ಒಕ್ಕಲಿಗ ಸಮುದಾಯ ಬ್ರಿಟೀಷರ ಆಳ್ವಿಕೆಯ ಪರವಾಗಿದ್ದರು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಒಕ್ಕಲಿಗರ ಬೆಂಬಲವಿರಲಿಲ್ಲ ಎಂದು ಬಿಂಬಿಸುವ ಹಿಂದುತ್ವವಾದಿಗಳ ಇಂತಹ ಕಟ್ಟುಕತೆ ಬಹಳಷ್ಟು ಒಕ್ಕಲಿಗ ಸಮುದಾಯದವರನ್ನು ಕೆರಳಿಸಿತ್ತು.

ಈ ವಿಷಯವನ್ನು ಸಂಘಪರಿವಾರದವರು ಮೊದಲಿಗೆ ಸಾಮಾಜಿಕ ಜಾಲತಾಣದಲ್ಲಿ ಅರಿಯಬಿಡುತ್ತಾರೆ. ಅಲ್ಲಿ ಇದು ಸಾಕಷ್ಟು ಪರ, ವಿರೋಧ ಚರ್ಚೆಗಳಾಗುತ್ತದೆ. ನಾವು ಹೇಳುವುದೇ ಸತ್ಯ ಎಂದು ನಂಬಿಸಲು ಹಿಂದುತ್ವವಾದಿಗಳು ಹೊಸ ಹೊಸ ಕತೆಗಳನ್ನು ಕಟ್ಟತೊಡಗುತ್ತಾರೆ. ಲಾವಣಿಯೊಂದನ್ನು ತೋರಿಸಿ ತಮ್ಮ ಹೇಳಿಕೆಗೆ ಇದೇ ಸಾಕ್ಷಿಎಂಬಂತೆ ವಾದಮಾಡುತ್ತಾರೆ.

ಕಮಾನಿನಲ್ಲಿ ಪೋಟೋಗಳು

ತಮ್ಮ ಪ್ರಚಾರದ ಮುಂದುವರಿದ ಭಾಗವಾಗಿ ಸಂಘಪರಿವಾರ ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆ ವೇಳೆ ಸ್ವಾಗತ ಕಮಾನೊಂದರಲ್ಲಿ ಉರಿಗೌಡ, ನಂಜೇಗೌಡರದು ಎನ್ನಲಾದ ಭಾವಚಿತ್ರಗಳನ್ನು ಹಾಕುತ್ತಾರೆ. ಜನರ ಸಾಕಷ್ಟು ವಿರೋಧದ ಕಾರಣದಿಂದ ಆ ಕಮಾನನ್ನು  ಅದೇ ದಿನ ತೆರೆಯಲಾಗುತ್ತದೆ.

ಇಷ್ಟಕ್ಕೇ ನಿಲ್ಲದ ಸಂಘಪರಿವಾರ, ಉರಿಗೌಡ, ನಂಜೇಗೌಡ ಸಹೋದರರು ಟಿಪ್ಪುವನ್ನು ಕೊಂದರು ಎಂಬ ಕತೆಯನ್ನು ಸಿನಿಮಾ ಮಾಡುವುದಾಗಿ ಹೇಳುತ್ತಾರೆ.  ಚಿತ್ರ ನಿರ್ಮಾಪಕರೂ ಆಗಿರುವ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಮುನಿರತ್ನ ಸಿನಿಮಾ ನಿರ್ಮಿಸುವುದಾಗಿ ಘೋಷಿಸುತ್ತಾರೆ. ಇದು ಒಕ್ಕಲಿಗ ಸಮುದಾಯವನ್ನು ಮತ್ತಷ್ಟು ಕೆರಳಿಸುತ್ತದೆ. ನಂತರ ನಿರ್ಮಲಾನಂದ ಸ್ವಾಮೀಜಿಯವರ ಸೂಚನೆ ಮೇರೆಗೆ ಮುನಿರತ್ನ ಅವರು ಸಿನಿಮಾ ನಿರ್ಮಾಣ ಮಾಡುವುದನ್ನು ಕೈಬಿಟ್ಟಿದ್ದಾರೆ.

ಇದಿಷ್ಟು ಕರ್ನಾಟಕದಲ್ಲಿ ಕೆಲವು ದಿನಗಳಿಂದೀಚೆಗೆ ನಡೆಯುತ್ತಿರುವ ವಿದ್ಯಮಾನಗಳು. ಸಂಘಪರಿವಾರದವರು ಹೇಳುವ ಈ ಕತೆ ಸತ್ಯವೇ? ಇದನ್ನು ವಿರೋಧಿಸುವವರು ಹೇಳುವಂತೆ ಉರಿಗೌಡ ಮತ್ತು ನಂಜೇಗೌಡ ಹಿಂದುತ್ವವಾದಿಗಳ ಕಾಲ್ಪನಿಕ ವ್ಯಕ್ತಿಗಳೇ? ಇದರ ಸುತ್ತಲೇ ಸುತ್ತುತ್ತಿದ್ದ ಚರ್ಚೆ, ಉರಿಗೌಡ ಮತ್ತು ನಂಜೇಗೌಡ ಎಂದು ಬಳಕೆಮಾಡಿದ ಚಿತ್ರಗಳಲ್ಲಿರುವ ವೀರರ ಮೂಲ ಬಹಿರಂಗವಾಗಿ ಚರ್ಚೆಯ ದಿಕ್ಕು ಬದಲಾಗುವಂತೆ ಮಾಡಿದೆ. ಇದೊಂದು ಕಟ್ಟುಕತೆ ಎಂದು ವಾದಿಸುವವರ ವಾದಕ್ಕೆ ಒಂದಷ್ಟು ಶಕ್ತಿ ಬಂದಂತಾಗಿದೆ. ಹಿಂದುತ್ವವಾದಿಗಳು ಮುಂದೆ ಯಾವ ಕತೆಕಟ್ಟುತ್ತಾರೋ ಏನೋ. ಆದರೆ, ಈ ಕತೆಯ ನಿಜಾಂಶ ಏನೆಂದು ಒಂದಷ್ಟು ಜನರಿಗೆ ಅರಿವಾಗಿದೆ ಎಂಬುದಷ್ಟೇ ಸಮಾಧಾನ.

 

ಮರುದು ಪಾಂಡಿಯಾರ್ ಚಿತ್ರಗಳವು:

ಹಿಂದುತ್ವವಾದಿಗಳು ಉರಿಗೌಡ, ನಂಜೇಗೌಡ ಎಂದು ಹೇಳುವ ಚಿತ್ರಗಳು ತಮಿಳುನಾಡಿನ ಮರುದು ಪಾಂಡಿಯಾರ್ ಸಹೋದರರ ಚಿತ್ರಗಳು. ಈ ಸಹೋದರರು 200 ವರ್ಷಗಳ ಹಿಂದೆ ಬ್ರಿಟೀಷರ ವಿರುದ್ದ ಹೋರಾಡಿ ಗಲ್ಲಿಗೇರಿಸಲ್ಪಟ್ಟ ವೀರರು. ಪೆರಿಯ ಮರುದು ಮತ್ತು ಚಿನ್ನ ಮರುದು ಸಹೋದರರು ‘ಮರುದು ಪಾಂಡಿಯಾರ್’ ಎಂದೇ ಕರೆಯಲ್ಪಡುತ್ತಾರೆ.

ಮರುದು ಸಹೋದರರು 24-10-1801 ರಂದು ತಿರುಪತ್ತೂರ್ ಕೋಟೆಯಲ್ಲಿ ಬ್ರಿಟೀಷರಿಂದ ಗಲ್ಲಿಗೇರಿಸಲ್ಪಟ್ಟು ವೀರ ಮರಣವನ್ನಪ್ಪಿದರು. ಮರುದರೊಂದಿಗೆ, ಅವರ ಎಲ್ಲಾ ಪುರುಷ ಉತ್ತರಾಧಿಕಾರಿಗಳನ್ನು (ಅಪ್ರಾಪ್ತ ಮರುದುವಿನ ಒಬ್ಬ ಮಗ “ದುರೈಚಾಮಿ” ಹೊರತುಪಡಿಸಿ) ಗಲ್ಲಿಗೇರಿಸಲಾಯಿತು. ಯಾವುದೇ ವಿಚಾರಣೆಯಿಲ್ಲದೆ  500 ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಲಾಯಿತು. ಮರುದು ಸಹೋದರರ ಅಪೇಕ್ಷೆಯಂತೆ ಅವರ ತಲೆಗಳನ್ನು ಕಲೈಯಾರ್ ದೇವಸ್ಥಾನದ ಮುಂದೆ ಹೂಳಲಾಯಿತು ಎಂದು ನಂಬಲಾಗಿದೆ. ಇಂದಿಗೂ ಶಿವಗಂಗೆ ಜಿಲ್ಲೆಯ ಕಲೈಯಾರ್ ದೇವಸ್ಥಾನದಲ್ಲಿ ಪೆರಿಯ ಮರುದು ಮತ್ತು ಚಿನ್ನ ಮರುದು ಅವರ ಸ್ಮಾರಕಗಳಿವೆ.

ಪೂಜಾ ಸ್ಥಳಗಳು ಮತ್ತು ಧಾರ್ಮಿಕ ಏಕತೆ

ಮರುದು ಸಹೋದರರ ಆಳ್ವಿಕೆಯು ಧಾರ್ಮಿಕ ಏಕತೆ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಅವರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಪೂಜಾ ಸ್ಥಳಗಳನ್ನು ನಿರ್ಮಿಸಿದರು. ಕಲೈಯಾರ್ ದೇವಸ್ಥಾನದ ಗೋಪುರವನ್ನು ನಿರ್ಮಿಸಿದರು, ಹಾಳಾಗಿದ್ದ ಕುನ್ರಕ್ಕುಡಿ ಮತ್ತು ತಿರುಮೊಗುರ್ ದೇವಸ್ಥಾನಗಳನ್ನು ದುರಸ್ತಿ ಮಾಡಿದರು. ಮನಮದುರೈ ಸೋಮೇಸರ್ ದೇವಾಲಯದ ಗೋಪುರವನ್ನು ನಿರ್ಮಿಸಿದರು. ಮರುದು ಪಾಂಡಿಯಾರ್ ಕೋರಿಕೆಯಂತೆ ಶಿವಗಂಗೆಯ ಕವಿ ವೇದಾಂತ ಸುಬ್ರಮಣ್ಯಂ ಈ ದೇವಾಲಯದ ಮಹಿಮೆಯ ಬಗ್ಗೆ ‘ವಾನರ ವೀರ ಮಧುರೈ’ ಪುರಾಣವನ್ನು ರಚಿಸಿದ್ದಾರೆ. ಪುಸ್ತಕದ ಅಂತಿಮ ಸ್ತೋತ್ರವು ಮರುದು ಸಹೋದರರನ್ನು “ಯಾತುಕುಲ ಮರುದು ಭೂಪನ್ ಮೈಂದಾರ್” ಎಂದು ಉಲ್ಲೇಖಿಸುತ್ತದೆ.

ಚಿನ್ನ ಮರುದು ರಾಜಕೀಯ ತಂತ್ರಗಾರ ಎಂದು ಸಾಬೀತಾಗಿದೆ. ಅವರು ತಂಜಾವೂರಿನಿಂದ ತಿರುನಲ್ವೇಲಿಯವರೆಗೆ ದೊಡ್ಡ ರಾಜಕೀಯ ಮೈತ್ರಿಯನ್ನು ಪ್ರಾರಂಭಿಸುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಟವನ್ನು ಬಲಿಷ್ಟಗೊಳಿಸಿದರು.

1857 ರ ಸಿಪಾಯಿ ದಂಗೆಗೆ ಅರ್ಧ ಶತಮಾನದ ಮೊದಲು ಬ್ರಿಟೀಷರ ವಿರುದ್ದ ನಡೆಸಿದ  ದಕ್ಷಿಣ ಭಾರತದ ಈ ಕ್ರಾಂತಿಯನ್ನು ಅನೇಕ ಇತಿಹಾಸಕಾರರು ಭಾರತದ ಮೊದಲ ಏಕೀಕೃತ ವಿಮೋಚನಾ ಹೋರಾಟವೆಂದು ಪರಿಗಣಿಸಿದ್ದಾರೆ.

ಇವರ ಸ್ಮರಣಾರ್ಥ ಅಂಚೆ ಚೀಟಿ:

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನೇತೃತ್ವದ ಸರ್ಕಾರ 2004ರ ಅಕ್ಟೋಬರ್ 24ರಂದು ಮರುದು ಪಾಂಡಿಯಾರ್ ಸಹೋದರರಾದ ಪೆರಿಯ ಮರುದು ಮತ್ತು ಚಿನ್ನ ಮರುದು ಅವರ ಸ್ಮರಣಾರ್ಥ ಅಂಚೆಚೀಟಿ  ಬಿಡುಗಡೆ ಮಾಡಿದೆ. ಇದಕ್ಕೂ ಮೊದಲು ತಿರುಪ್ಪತ್ತೂರಿನಲ್ಲಿ ಈ ಸಹೋದರರ ಸ್ಮಾರಕ ಸ್ತಂಭವನ್ನು ನಿರ್ಮಿಸಲಾಗಿದೆ.

ಮರುದು ಪಾಂಡಿಯಾರ್ ರ ಇತಿಹಾಸ:

ಜನನ: ತಮಿಳುನಾಡಿನ ಇಂದಿನ ವಿರುದುನಗರ ಜಿಲ್ಲೆಯ ನರಿಕುಡಿ ಸಮೀಪದ ಮುಕ್ಕುಳಂ ಎಂಬ ಹಳ್ಳಿಯ ಪಳನಿಯಪ್ಪನ್ ಸರ್ವೈ ಮತ್ತು ಅವರ ಪತ್ನಿ ಆನಂದಾಯಿ  ಅವರ ಮಕ್ಕಳಾದ ಪೆರಿಯ ಮರುದು ಪಾಂಡ್ಯರ್ ಅವರು ಡಿಸೆಂಬರ್ 15, 1748 ರಂದು ಜನಿಸಿದರು.  ಐದು ವರ್ಷಗಳ ನಂತರ, 20 ಏಪ್ರಿಲ್ 1753 ರಂದು, ಚಿನ್ನ ಮರುದು ಪಾಂಡ್ಯರ್ ಜನಿಸಿದರು. ಇಬ್ಬರೂ ಶಿವಗಂಗೆ ರಾಜ್ಯದ ರಾಜ ಮುತ್ತು ವಡುಗನಾಥರ್ ಸೈನ್ಯದಲ್ಲಿ ಸೈನಿಕರಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅವರ ಶೌರ್ಯವನ್ನು ಮೆಚ್ಚಿದ ರಾಜ ಮುತ್ತು ವಡುಗನಾಥರ್ ತನ್ನ ಸೈನ್ಯದ ಪ್ರಮುಖ ಸ್ಥಾನಗಳಿಗೆ ಮರುದು ಸಹೋದರರನ್ನು ನೇಮಿಸುತ್ತಾನೆ.

1772 ರಲ್ಲಿ ಬ್ರಿಟೀಷರು ರಾಮನಾಥಪುರವನ್ನು ವಶಪಡಿಸಿಕೊಂಡ ನಂತರ, ಬ್ರಿಟೀಷರ ಸೈನ್ಯಪಡೆ ಶಿವಗಂಗೆಯ ಮೇಲೆ ದಾಳಿ ಮಾಡುತ್ತದೆ. ಈ ಅನಿರೀಕ್ಷಿತ ದಾಳಿಯಿಂದ, ರಾಜ ಮುತ್ತು ವಡುಗನಾಥರ್ ಕಲೈಯಾರ್ ದೇವಾಲಯದ ಯುದ್ಧದಲ್ಲಿ ಕೊಲ್ಲಲ್ಪಡುತ್ತಾರೆ. ನಂತರ, ರಾಜನ ಮಗಳು ವೇಲುನಾಚಿಯಾರ್ ಮತ್ತು ವೆಲ್ಲಾಚಿ, ಮಂತ್ರಿ ತಾಂಡವರಾಯನ್ ಪಿಳ್ಳೈ ಮತ್ತು ಮರುದು ಸಹೋದರರು ದಿಂಡಿಗಲ್ ಸಮೀಪದ ಕಾಡಿಗೆ ಓಡಿಹೋಗಿ ಮರೆಯಾಗುತ್ತಾರೆ.

ಇದನ್ನು ಓದಿ: ವ್ಯಾಪಕ ವಿರೋಧಕ್ಕೆ ಮಣಿದ ಮುನಿರತ್ನ : ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣಕ್ಕೆ ಬ್ರೇಕ್‌

1772 ರಲ್ಲಿ ಕಾಡಿನಲ್ಲಿ ಭೂಗತರಾಗಿ ವಾಸಿಸುತ್ತಿದ್ದ ಮರುದು ಸಹೋದರರು 1779 ರಲ್ಲಿ ಬ್ರಿಟೀಷರ ವಿರುದ್ದ  ದಂಗೆಗೆ ಮುಂದಾಗುತ್ತಾರೆ. ಬ್ರಿಟೀಷರ ಸಾಮಂತ ರಾಜುರುಗಳಾದ ಆರ್ಕಾಟ್ ನವಾಬ್, ತೊಂಡೈಮಾನ್ ಮತ್ತು ಕುಂಬಿನಿಯಾರ್ ಅವರ ಪಡೆಗಳನ್ನು ಗೆರಿಲ್ಲಾ ಪಡೆ ಸೋಲಿಸುತ್ತದೆ. 1780 ರಲ್ಲಿ ಅವರು ಶಿವಗಂಗಾ ಪ್ರದೇಶವನ್ನು ವಶಪಡಿಸಿಕೊಂಡು ವೇಲು ನಾಚಿಯಾರ್ ಅವರನ್ನು ಸಿಂಹಾಸನದಲ್ಲಿ ಕೂರಿಸುತ್ತಾರೆ. ಈ ಯುದ್ಧವು ಚೋಳವಂದನ್‌ ನಿಂದ ಪ್ರಾರಂಭವಾಗಿ ಸಿಲ್ಲಮನ್, ಮಣಲೂರ್, ತಿರುಪ್ಪುವನಂ, ಮುತಾನೆಂದಲ್ ವರೆಗೆ ಸಾಗುತ್ತದೆ. ಅಂತಿಮವಾಗಿ ಮನಮದುರೈನಲ್ಲಿ ಯಾವುದೇ ಮಿಲಿಟರಿ ತರಬೇತಿಯಿಲ್ಲದ, ಸ್ವಾತಂತ್ರ್ಯ ಬಯಸುತ್ತಿದ್ದ ಜನರ ಸಹಾಯದಿಂದ ಯುದ್ಧವನ್ನು ಗೆಲ್ಲುತ್ತಾರೆ.. ಪಶ್ಚಿಮ ದಿಂಡಿಗಲ್ ನಿಂದ ಹೈದರ್ ಅಲಿ ಸಮಯೋಚಿತವಾಗಿ ಆಗಮಿಸಿದ್ದು ಕೂಡ ಮರುದು ಪಾಂಡಿಯಾರ್ ಅವರ ಪಡೆಯ ಗೆಲುವಿಗೆ ನೆರವಾಯಿತು.

ಮರುದು ಪಾಂಡಿಯಾರ್ ಸಹೋದರರು ಬ್ರಿಟಿಷರ ವಿರುದ್ಧ ತಮಿಳುನಾಡಿನಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದ ಮೊದಲಿಗರು ಎಂದು ಹೇಳಲಾಗುತ್ತಿದೆ. ಶಿವಗಂಗೆ ಜಿಲ್ಲೆಯ ಕಾಳಯರ್‌ ಕೋಯಿಲ್ ಅವರ ಸ್ಥಳವಾಗಿತ್ತು. ಇವರು 1785 ರಿಂದ 1801 ರ ಅಂತ್ಯದವರೆಗೆ ಬ್ರಿಟಿಷರನ್ನು ತಮಿಳು ನೆಲದಿಂದ ಓಡಿಸಲು ಶಸ್ತ್ರಾಸ್ತ್ರಗಳನ್ನು ಹಿಡಿದು ಹೋರಾಡಿದರು. ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಭಾರತದ ಇತರೆ ಗುಂಪುಗಳನ್ನು ಒಂದುಗೂಡಿಸಲು ಪ್ರಯತ್ನಿಸಿದರು. ಇದು ಬ್ರಿಟಿಷರ ಕೋಪಕ್ಕೆ ಕಾರಣವಾಯಿತು.

ಗೆರಿಲ್ಲಾ ಯುದ್ಧ:

ವೀರಪಾಂಡಿಯ ಕಟ್ಟಬೊಮ್ಮನ್ ಅವರ ಕಿರಿಯ ಸಹೋದರ ಊಮೈತುರೈಗೆ ಆಶ್ರಯ ನೀಡಿದರು ಎಂಬ ಕಾರಣ ನೀಡಿ ಈ ರಾಜ್ಯದ ಮೇಲೆ ಬ್ರಿಟಿಷರು ಮೇ 28, 1801 ರಂದು ಮತ್ತೆ ಯುದ್ಧ ಪ್ರಾರಂಭಿಸುತ್ತಾರೆ. 150 ದಿನಗಳ ಕಾಲ ಯುದ್ದ ನಡೆಯುತ್ತದೆ. ಕಳಯಾರ್ಕೊದ ಕಾಡುಗಳಲ್ಲಿ ಬ್ರಿಟೀಷ್ ಸೈನಿಕರ ವಿರುದ್ದ ಗೆರಿಲ್ಲಾ ಯುದ್ಧ ನಡೆಯುತ್ತದೆ. ಪುದುಕೊಟ್ಟೈನ ರಾಜ ತೊಂಡೈಮಾನ್ ಬ್ರಿಟಿಷರಿಗೆ ಸಹಾಯ ಮಾಡಲು ತನ್ನ ಸೈನ್ಯವನ್ನು ಕಳುಹಿಸುತ್ತಾನೆ.

ಮರುದು ಸಹೋದರರು ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಸೆರೆಹಿಡಿದವರಿಗೆ ಬಹುಮಾನ ಕೊಡಲಾಗುವುದು ಎಂದು ಬ್ರಿಟೀಷರು  ಘೋಷಿಸುತ್ತಾರೆ. ಕಲ್ಯಾರ್ಕೊದಲ್ಲಿ ಅರಣ್ಯವನ್ನು ನಾಶಪಡಿಸುವ ಯಾರಿಗಾದರೂ  ಆ ಸಂಪೂರ್ಣ ಅರಣ್ಯ ಭೂಮಿಯನ್ನು 20 ವರ್ಷಗಳವರೆಗೆ ಉಚಿತವಾಗಿ  ನೀಡಲಾಗುವುದು ಎಂದು ಬ್ರಿಟೀಷರು ಘೋಷಿಸುತ್ತಾರೆ.

ಮರುದು ಸಹೋದರರನ್ನು ಕಡೆಗೂ ಕಳಯಾರ್ ಕೋವಿಲ್‌ನಲ್ಲಿ ಬಂಧಿಸಲಾಗುತ್ತದೆ. ಅಲ್ಲಿಗೆ  ಶಿವಗಂಗೆಯ ಸ್ವತಂತ್ರ ಆಳ್ವಿಕೆ ಕೊನೆಗೊಳ್ಳುತ್ತದೆ. ಶಿವಗಂಗಾ ರಾಜ ವೆಂಗಂ ವೊಡೀನಾತೇವರ್ ಅವರನ್ನು ಬಂಧಿಸಿ ಗಡಿಪಾರು ಮಾಡಲಾಗುತ್ತದೆ. ಪಗನೇರಿ ರಾಜ ವಲುಕು ವೇಲಿ ಅಂಬಲಂ ಮರುದು ಸಹೋದರರನ್ನು ರಕ್ಷಿಸಲು ಮಾಡಿದ ಪ್ರಯತ್ನಗಳು ವಿಫಲವಾಗುತ್ತವೆ.

ಮರುದು ಸಹೋದರರನ್ನು ಬ್ರಿಟೀಷರು 24-10-1801 ರಂದು ತಿರುಪತ್ತೂರ್ ಕೋಟೆಯಲ್ಲಿ ಗಲ್ಲಿಗೇರಿಸುತ್ತಾರೆ. ಮರುದು ಸಹೋದರರ ಅಪೇಕ್ಷೆಯಂತೆ ಅವರ ತಲೆಗಳನ್ನು ಕಲೈಯಾರ್ ದೇವಸ್ಥಾನದ ಮುಂದೆ ಹೂಳಲಾಗಿದೆ ಎಂದು ನಂಬಲಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *