ನಗರೀಕರಣ- ಮಾರುಕಟ್ಟೆ- ಪ್ರಾಧಿಕಾರಗಳ ಸಾಮ್ರಾಜ್ಯ

– ನಾ ದಿವಾಕರ

1990ರಲ್ಲಿ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿದ ನವ ಉದಾರವಾದಿ ಬಂಡವಾಳಶಾಹಿಯು ಈಗ ತನ್ನ ಕಳೆದ ಮೂರೂವರೆ ದಶಕಗಳಲ್ಲಿ ತನ್ನ ಪರ್ಯಟನವನ್ನು ಪೂರೈಸಿ ವೃತ್ತದ ಆದಿ ಬಿಂಬವನ್ನು ತಲುಪಿದೆ. ನವ ಉದಾರವಾದಿ ಆರ್ಥಿಕ ಚಿಂತನೆಯನ್ನು ಪ್ರಧಾನವಾಗಿ ನಿರ್ದೇಶಿಸುವ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಸ್ಥಳೀಯ ಔದ್ಯಮಿಕ ಬಂಡವಾಳವು ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ನೆರವಾಗಿರುವುದೇ ಭಾರತದ ನಗರೀಕರಣದ ಮುಖ್ಯ ಲಕ್ಷಣವಾಗಿ ಕಾಣುತ್ತದೆ. ಈ ಪ್ರಕ್ರಿಯೆಯ ಎರಡು ಆಯಾಮಗಳನ್ನು ಗುರುತಿಸಬಹುದಾದರೆ, ಈಗಾಗಲೇ ಸ್ಥಾಪಿತವಾಗಿರುವ ನಗರಗಳ ಭೌಗೋಳಿಕ ವಿಸ್ತರಣೆ ಒಂದು ಮಾದರಿಯಾದರೆ, ಹೊಸ ನಗರಗಳನ್ನು ರೂಪಿಸುವುದು  ಮತ್ತೊಂದು ಮಾದರಿಯಾಗಿ ಕಾಣುತ್ತದೆ. ಎರಡೂ ಮಾದರಿಗಳಲ್ಲಿ ಮಾರುಕಟ್ಟೆಯ ದಾಳಿಗೆ ಸಿಲುಕುವುದು ಭೂಮಿ, ನಲುಗುವುದು ಭೂಮಿಯನ್ನೇ ನಂಬಿ ಬದುಕುವ ಬೃಹತ್‌ ಜನಸಂಖ್ಯೆ.

2008ರ ಜಾಗತಿಕ ಆರ್ಥಿಕ ಕುಸಿತದ ಬೆನ್ನಲ್ಲೇ ದಿಕ್ಕುಬದಲಿಸಿದ ಆರ್ಥಿಕತೆಯ ಮಾರ್ಗಗಳು ಅನುಸರಿಸಲಾರಂಭಿಸಿದ್ದು ಮೂಲ ಸೌಕರ್ಯಗಳನ್ನಾಧರಿಸಿದ ಅಭಿವೃದ್ಧಿಯ ಮಾದರಿಗಳನ್ನು. ನವಿರಾದ-ಅಗಲವಾದ ರಸ್ತೆಗಳು, ನಗರಗಳನ್ನು ಪರಸ್ಪರ ಸಂಪರ್ಕಿಸುವ ಚತುಷ್ಪತ-ಷಟ್ಪಥ-ಅಷ್ಟಪಥ-ದಶಪಥ ಹೆದ್ದಾರಿಗಳು, ಇವುಗಳನ್ನು ಸಂಪರ್ಕಿಸಲು ಬೇಕಾದ ಮೇಲ್ಸೇತುವೆಗಳು, ಹೆದ್ದಾರಿಗಳಿಂದ ವಿಭಜನೆಗೊಳಗಾದ ಹಳ್ಳಿಗಾಡುಗಳ ಇಬ್ಭಾಗಗಳನ್ನು ಸಂಪರ್ಕಿಸುವ ಭೂತಳ ದಾರಿಗಳು (Underpass)̧  ದೇಶದ ದೊಡ್ಡ ನಗರಗಳನ್ನು ಸಂಪರ್ಕಿಸಲು ಅಗತ್ಯವಾದ ಅತ್ಯಾಧುನಿಕ ಎಕ್ಸ್‌ಪ್ರೆಸ್‌ ಹೆದ್ದಾರಿಗಳು ಮತ್ತು ಊರ್ಧ್ವಮುಖಿಯಾಗಿ ಬೆಳೆಯುತ್ತಿರುವ ನಗರದ ಜನದಟ್ಟಣೆ ಮತ್ತು ಸಂಚಾರವನ್ನು ನಿರ್ವಹಿಸಲು ಬೇಕಾದ ಆಂತರಿಕ ಸಂಚಾರ ವ್ಯವಸ್ಥೆ, ಈ ಎಲ್ಲವೂ ಸಹ ನಗರೀಕರಣದ ಒಂದು ಭಾಗವಾಗಿಯೇ ಬೆಳೆದುಬಂದಿದ್ದು, ಕಾರ್ಪೋರೇಟ್‌ ಬಂಡವಾಳ ಹೂಡಿಕೆಗೆ ಪ್ರಶಸ್ತ ಭೂಮಿಕೆಗಳಾಗಿ ಪರಿಣಮಿಸಿದವು. ನಗರೀಕರಣ

ರಿಯಲ್‌ ಎಸ್ಟೇಟ್‌ ಮತ್ತು ಸ್ಮಾರ್ಟ್‌ ಸಿಟಿ

ಸ್ಮಾರ್ಟ್‌ ಸಿಟಿ ಎಂಬ ಸುಂದರ ಪದನಾಮದೊಂದಿಗೆ ಆರಂಭವಾದ ನರೇಂದ್ರ ಮೋದಿ ಸರ್ಕಾರದ ಯೋಜನೆ ನೆನೆಗುದಿಗೆ ಬಿದ್ದಿದ್ದರೂ ಇದರ ಆದಿಯನ್ನು ನಾವು 2008ರ ಮಾರುಕಟ್ಟೆ ಕುಸಿತದಲ್ಲಿ ಗುರುತಿಸಬಹುದು. ದೇಶದ ಅಭಿವೃದ್ಧಿಯ ಮಾನದಂಡಗಳನ್ನು ಕೆಳಸ್ತರದ ಜನಜೀವನದ ಅಂಗಳದಿಂದ ಹೊರತೆಗೆದು ಮೇಲ್ಪದರದ ಜನತೆಯ ಜೀವನಶೈಲಿ ಹಾಗೂ ಇದಕ್ಕೆ ಪೂರಕವಾದ ಮೂಲ ಸೌಕರ್ಯಗಳೊಡನೆ ಜೋಡಿಸಿದ ಪರಿಣಾಮವಾಗಿಯೇ 2008ರ ನಂತರ ರಿಯಲ್‌ ಎಸ್ಟೇಟ್‌ ಔದ್ಯಮಿಕ ಭಾರತದ ಮುಖವಾಣಿಯಾಗಿ ಪರಿವರ್ತಿತವಾಯಿತು. ನಗರಾಭಿವೃದ್ಧಿ ಎನ್ನುವ ಪರಿಕಲ್ಪನೆಗೇ ಹೊಸ ತಿರುವು ನೀಡಿದ ಮಾರುಕಟ್ಟೆ ಆರ್ಥಿಕತೆಯು ನಗರೀಕರಣ-ನಗರಾಭಿವೃದ್ಧಿ-ನಗರ ವಿಸ್ತರಣೆ ಮತ್ತು ನಗರ ಸೌಂದರ್ಯೀಕರಣದ ವಿವಿಧ ಮಜಲುಗಳಲ್ಲಿ ಅಭಿವೃದ್ಧಿಯ ಸೂಚ್ಯಂಕಗಳನ್ನು ಕಾಣಲಾರಂಭಿಸಿತ್ತು. ನಗರೀಕರಣ

ಇದನ್ನೂ ಓದಿ: 40 ಲಕ್ಷಕ್ಕೂ ಹೆಚ್ಚು ಬಿಪಿಎಲ್‌ ಕಾರ್ಡ್‌ ಅನರ್ಹರ ಪಾಲು

ಕರ್ನಾಟಕದಲ್ಲಿ ರಿಯಲ್‌ ಎಸ್ಟೇಟ್‌ ಒಂದು ಉದ್ಯಮವಾಗಿ ತದನಂತರ ಮಾಫಿಯಾ ಆಗಿ ಬೆಳೆಯಲಾರಂಭಿಸಿದ್ದು 2008ರ ನಂತರದಲ್ಲೇ ಎನ್ನುವುದು ಗಮನಾರ್ಹ ಅಂಶ. ಹಳ್ಳಿಗಳನ್ನು, ಗ್ರಾಮೀಣ ಕೃಷಿ ಭೂಮಿಯನ್ನು ಹಾಗೂ ಪ್ರಾಕೃತಿಕ ಬೆಟ್ಟಗುಡ್ಡಗಳನ್ನು ಕಬಳಿಸುತ್ತಲೇ ಬೆಳೆದ ಹೆದ್ದಾರಿಗಳ ಇಕ್ಕೆಲಗಳಲ್ಲಿ ನಿರ್ಮಾಣವಾಗಲಾರಂಭಿಸಿದ ವಸತಿ ಬಡಾವಣೆಗಳು ರಿಯಲ್‌ ಎಸ್ಟೇಟ್‌ ಮಾಫಿಯಾಗಳ ಕರ್ಮಭೂಮಿಯಾಗಿ ಪರಿಣಮಿಸಿದ್ದವು. ಈ ಸಂದರ್ಭದಲ್ಲೇ 2009ರಲ್ಲಿ ಹುಟ್ಟಿಕೊಂಡ ಪದ ಸ್ಮಾರ್ಟ್‌ಸಿಟಿ. ಯುಪಿಎ ಸರ್ಕಾರದ ಎರಡನೆ ಪಾಳಿಯಲ್ಲಿ ಇದನ್ನು ಜವಹರಲಾಲ್‌ ನೆಹರು ರಾಷ್ಟ್ರೀಯ ನಗರ ಪುನರುಜ್ಜೀವನ ಮಿಷನ್‌ (JNNURM) ಹೆಸರಿನಲ್ಲಿ ಆರಂಭಿಸಲಾಯಿತು. ನಗರಗಳ ಆಂತರಿಕ ಬೆಳವಣಿಗೆಯ ದೃಷ್ಟಿಯಿಂದ ರೂಪುಗೊಂಡ ಈ ಯೋಜನೆ  2015ರಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಾಗಿ ರೂಪಾಂತರವಾಯಿತು. ವಿಮಾನ ನಿಲ್ದಾಣಗಳ ನಿರ್ಮಾಣ-ಸಂಪರ್ಕ, ಹೆದ್ದಾರಿಗಳು, ಸಂವಹನ-ಸಂಚಾರ-ಸಂಪರ್ಕ ಸಾಧನಗಳು ಹಾಗೂ ಅತ್ಯಾಧುನಿಕ ಮಾಹಿತಿ ಸಂವಹನ ತಂತ್ರಜ್ಞಾನದ ಅಭಿವೃದ್ಧಿ ಈ ನಗರೀಕರಣದ ಮೂಲ ಅಡಿಪಾಯವಾಯಿತು. ನಗರೀಕರಣ

ಈ ಬೆಳವಣಿಗೆಯೇ ಕರ್ನಾಟಕದಾದ್ಯಂತ ನಗರಾಭಿವೃದ್ಧಿಯ ಹೊಸ ಅಧ್ಯಾಯವನ್ನೂ ಆರಂಭಿಸಿತ್ತು. ಗ್ರಾಮೀಣ ಪ್ರದೇಶಗಳಿಂದ ವಲಸೆ ಬಂದು ನಗರಗಳಲ್ಲಿ ನೆಲೆಸುವ ಕೆಳಸ್ತರದ ದುಡಿಯುವ ವರ್ಗಗಳಿಗೆ ಹಾಗೂ ಕೃಷಿ-ವ್ಯವಸಾಯವನ್ನು ತೊರೆದು ನೌಕರಿಗಳಿಗಾಗಿ ನಗರದತ್ತ ಮುಖ ಮಾಡುವ ಗ್ರಾಮೀಣ ಬಡಜನತೆಗೆ ಹಾಗೂ ಐಟಿ-ಬಿಟಿ ಕ್ಷೇತ್ರ, ಔದ್ಯೋಗಿಕ ವಲಯ ಮತ್ತು ಡಿಜಿಟಲ್‌ ಸೇವಾ ಕೇಂದ್ರಗಳನ್ನು ಅಲಂಕರಿಸುವ ಕೆಳಮಧ್ಯಮ ವರ್ಗಗಳಿಗೆ ವಸತಿ ಸೌಲಭ್ಯಗಳನ್ನು ಒದಗಿಸುವುದು ನಗರೀಕರಣದ ಒಂದು ಪ್ರಧಾನ ಕಾರ್ಯಸೂಚಿಯಾಗಿ ಪರಿಣಮಿಸಿತ್ತು. ಈ ಹಂತದಲ್ಲಿ ಸಮಾಜದ ಕೆಳಸ್ತರದ ಜನಸಾಮಾನ್ಯರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳು ಹೆಚ್ಚು ಆಸ್ಥೆ ತೋರಬೇಕಿತ್ತು. ಹೆಚ್ಚಿನ ಬಡಾವಣೆಗಳನ್ನು ಕೈಗೆಟುಕುವ ಬೆಲೆಗಳಲ್ಲಿ ಪೂರೈಸುವ ಕಾರ್ಯಯೋಜನೆಗೆ ಮುಂದಾಗಬೇಕಿತ್ತು.

ಆದರೆ ನಡೆದದ್ದೇ ಬೇರೆ. 2010ರ ನಂತರದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಕ್ರಿಯವಾಗಿದ್ದ ‘ಉಡ’ ಗಳು ( ಅಂದರೆ ಪ್ರಾಣಿ ಅಲ್ಲ,  ಆಯಾ ಜಿಲ್ಲೆಗಳೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರ ಎಂಬ ಪದಗಳ ಮೊದಲ ಅಕ್ಷರಗಳನ್ನು ಜೋಡಿಸುವ ತ್ರಾಸ ತಪ್ಪಿಸಲೆಂದು ನಾವು ಆಂಗ್ಲ ಭಾಷೆಯ UDA ಬಳಸುತ್ತಿರುವ ಮಾದರಿ- MUDA, HUDA ಇತ್ಯಾದಿ.) ತಮ್ಮ ಮೂಲ ಉದ್ದೇಶಗಳನ್ನೇ ಮರೆತು, ಹೊಸ ಬಡಾವಣೆಗಳ ನಿರ್ಮಾಣವನ್ನೇ ಕೈಬಿಡಲಾರಂಭಿಸಿದವು. ಇದಕ್ಕೆ ಬದಲಾಗಿ ಖಾಸಗಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ನಗರಗಳ-ಪಟ್ಟಣಗಳ ಸುತ್ತಲೂ ಬಡಾವಣೆಗಳನ್ನು ನಿರ್ಮಿಸಲಾರಂಭಿಸಿದರು. ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿಯಮಾವಳಿಗಳನ್ನು ಸಡಿಲಗೊಳಿಸುತ್ತಲೇ ಸರ್ಕಾರಗಳು ಸುತ್ತಲಿನ ಹಳ್ಳಿಗಾಡುಗಳ ಹಸಿರು ವಲಯಗಳನ್ನು ಖಾಲಿ ನಿವೇಶನಗಳ ಬೆಂಗಾಡುಗಳನ್ನಾಗಿ ಮಾಡುವುದರಲ್ಲಿ ನಿರತವಾದವು. ಸರ್ಕಾರಿ ವಲಯದಲ್ಲೂ ಕೆಳಸ್ತರದಲ್ಲಿರುವ ನೌಕರರಿಗೆ, ಪ್ರಾಥಮಿಕ-ಹೈಸ್ಕೂಲ್‌ವರೆಗಿನ ಶಾಲಾ ಶಿಕ್ಷಕರಿಗೂ ಸಹ ಈ ಬಡಾವಣೆಗಳ ನಿವೇಶನಗಳು ಗಗನಕುಸುಮವೇ ಆಗಿದ್ದು ವಾಸ್ತವ.

ಎಲ್ಲರಿಗೂ ಸೂರು ಎಂಬ ಕನಸು         

ಪ್ರತಿಯೊಬ್ಬರಿಗೂ ಸೂರು ಒದಗಿಸುವ ಸ್ವತಂತ್ರ ಭಾರತದ ಕನಸಿಗೆ 1975ರ ತುರ್ತುಪರಿಸ್ಥಿತಿಯ ಕಾಲದಿಂದಲೂ ರೆಕ್ಕೆಪುಕ್ಕಗಳನ್ನು ಜೋಡಿಸುತ್ತಾ ಬರಲಾಗಿದೆ. ಆದರೆ ಇಂದಿಗೂ ಸಹ ʼಸೂರುʼ ಎನ್ನುವುದು ಸಾಮಾನ್ಯ ಜನತೆಯ ಪಾಲಿಗೆ ಕನಸಾಗಿಯೇ ಉಳಿದಿದೆ. ಇದಕ್ಕೆ ಕಾರಣ ನವ ಉದಾರವಾದದ ಮಾರುಕಟ್ಟೆ ಆರ್ಥಿಕತೆಯು ರಿಯಲ್‌ ಎಸ್ಟೇಟ್‌ ಉದ್ದಿಮೆಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದು ಮತ್ತು ಈ ಔದ್ಯಮಿಕ ವಲಯವನ್ನು ಅಭಿವೃದ್ಧಿಪಡಿಸಲೆಂದೇ ಹಲವು ಕಾನೂನು ತಿದ್ದುಪಡಿಗಳನ್ನು ಜಾರಿಗೊಳಿಸಿದ್ದು. 2008-10ರ ಅವಧಿಯಲ್ಲಿ ಕರ್ನಾಟಕದ ರಿಯಲ್‌ ಎಸ್ಟೇಟ್‌ ಔದ್ಯಮಿಕ ಜಗತ್ತನ್ನು ಆಕ್ರಮಿಸಿದ ಅನೇಕರು ಇಂದು ಆಳ್ವಿಕೆಯ ಕೇಂದ್ರಗಳಲ್ಲಿ, ಜನಪ್ರತಿನಿಧಿಗಳಾಗಿ ಕಂಡುಬರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಾಗಿದೆ. ರಾಜಕಾರಣಿಗಳಿಗೆ, ಚುನಾಯಿತ-ಪರಾಜಿತ ಜನಪ್ರತಿನಿಧಿಗಳಿಗೆ, ಮಠೋದ್ಯಮಿಗಳಿಗೆ, ಸಾರ್ವಜನಿಕ ಸೇವೆಯ ಹೆಸರಿನಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುವ ಬಂಡವಾಳಿಗರಿಗೆ ಈ ಬಡಾವಣೆಗಳೇ ಸಾಮ್ರಾಜ್ಯ ವಿಸ್ತರಣೆಯ ಕೇಂದ್ರಗಳಾದವು.

ಇತ್ತ ಈ ‘ಉಡಗಳು’ ವಿತರಣೆ ಮಾಡಿದ ನಿವೇಶನಗಳಿಗೆ ಅರ್ಜಿ ಹಾಕಿದ ಕೆಳಮಧ್ಯಮ ವರ್ಗದ ಜನತೆ ವರ್ಷಾನುಗಟ್ಟಲೆ ಕಾದು, ನಿರಾಶರಾಗಿ ಕೊನೆಗೆ ಊರ ಹೊರವಲಯದ ಖಾಸಗಿ ಬಡಾವಣೆಗಳತ್ತ ಸಾಗುವುದು ಅನಿವಾರ್ಯವಾಯಿತು. ಈ Mad Rush ಖಾಸಗಿ ನಿವೇಶನಗಳ ಬೆಲೆಗಳನ್ನು ಗಗನಕ್ಕೇರಿಸಲು ಮೂಲ ಕಾರಣವಾಯಿತು. ಜನತೆಗೆ ʼ ಸುಲಭ ʼವಾಗಿ ವಸತಿ ಸೌಕರ್ಯ ಒದಗಿಸುವ ಸಲುವಾಗಿ ಬ್ಯಾಂಕುಗಳು ʼದುಬಾರಿʼ ಸಾಲಗಳನ್ನು ಉದಾರವಾಗಿ ನೀಡಲಾರಂಭಿಸಿದವು. ನಗರಗಳ ಒಳಗೆ ಮತ್ತು ಹೊರಗೆ ಸ್ವಂತ ಮನೆ ಹೊಂದಿರುವವರ ಬ್ಯಾಂಕ್‌ ಸಾಲಗಳ ಮೊತ್ತವನ್ನು ಗಮನಿಸಿದಾಗ ನಮ್ಮ ದೇಶದ ದುಡಿಮೆಯ ಆದಾಯದ ಎಷ್ಟು ಪ್ರಮಾಣ ಬಡ್ಡಿ ತೀರಿಸಲು ಸರಿಹೋಗುತ್ತದೆ ಎಂದೂ ಅರಿವಾಗುತ್ತದೆ. ಆದರೂ ಸ್ವಂತ ಸೂರು ಬಯಸುವ ಕೆಳಮಧ್ಯಮವರ್ಗಗಳಿಗೆ ಇದು ಅನಿವಾರ್ಯ. ಈ ಅನಿವಾರ್ಯತೆಯ ಫಲವೇ ಹೌಸ್‌ ಬಿಲ್ಡಿಂಗ್‌ ಸೊಸೈಟಿಗಳ ಮಹಾಪೂರ ಮತ್ತು ಅವುಗಳ ಸುತ್ತ ಹುತ್ತದಂತೆ ಬೆಳೆದ ರಾಜಕಾರಣಿಗಳ-ಉದ್ಯಮಿಗಳ ಸಾಮ್ರಾಜ್ಯ.

MUDA ಹಗರಣದ ಮತ್ತೊಂದು ಮುಖ

ಇಂದು ಮೈಸೂರಿನಲ್ಲಿ ಬಹಳ ಸದ್ದು ಮಾಡುತ್ತಿರುವ MUDA ಹಗರಣವನ್ನು ಈ ಹಿನ್ನೆಲೆಯಲ್ಲಿ ನೋಡುವಾಗ ನಾವು ಗಮನಿಸಬೇಕಿರುವುದು ಈ ಔದ್ಯಮಿಕ ಸಾಮ್ರಾಜ್ಯದ ಬೆಳವಣಿಗೆ ಮತ್ತು ವಿಸ್ತರಣೆಯನ್ನು. ಕಳೆದ ಹದಿನೈದು ವರ್ಷಗಳಲ್ಲಿ ಮೈಸೂರಿನ ಅಥವಾ ಯಾವುದೇ ನಗರದ, ಯಾವ ರಾಜಕೀಯ ನಾಯಕರೂ ಸಹ ಹೊಸದಾಗಿ MUDA ಬಡಾವಣೆಗಳನ್ನು ಆರಂಭಿಸಲು ಆಗ್ರಹಿಸಿಲ್ಲ. ಅಥವಾ ಅರ್ಜಿ ಗುಜರಾಯಿಸಿ ಎರಡು ದಶಕಗಳೇ ಕಳೆದರೂ ನಿವೇಶನ ಸಿಗದ ಸಾಮಾನ್ಯ ಜನರ ಅಹವಾಲನ್ನು ಗಂಭೀರವಾಗಿ ಪರಿಗಣಿಸಿಲ್ಲ. ಏಕೆಂದರೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ರೀಯಲ್‌ ಎಸ್ಟೇಟ್‌ ಉದ್ಯಮವು ಅಧಿಕಾರ ರಾಜಕಾರಣದ ಬಂಡವಾಳ ಕ್ರೋಢೀಕರಣಕ್ಕೆ ಪ್ರಸ್ತಭೂಮಿಯಂತಿದೆ. ಖಾಸಗಿ ಬಂಡವಾಳ ಮತ್ತು ಬಡಾವಣೆ ಹಾಗೂ ತತ್ಸಂಬಂಧಿ ಮೂಲ ಸೌಕರ್ಯ ಕಾಮಗಾರಿಗಳ ಒಂದು ನಂಟು ರಾಜ್ಯದ ರಾಜಕೀಯ ನಕ್ಷೆಯನ್ನೇ ಬದಲಿಸಿದ್ದು, ರಾಜ್ಯ ರಾಜಕಾರಣ ಮೌಲ್ಯಾಧಾರಿತ ವೇದಿಕೆಯಿಂದ ಕುಸಿದು, ಭ್ರಷ್ಟಾಧಾರಿತ ಕೂಪಕ್ಕೆ ಬಿದ್ದಿರುವುದು ವರ್ತಮಾನದ ಸುಡು ವಾಸ್ತವ .

ಇದರ ಒಂದು ಆಯಾಮವನ್ನು MUDA ವಿವಾದದಲ್ಲಿ ನೋಡುತ್ತಿದ್ದೇವೆ. ಯಾವುದೇ ʼಉಡʼ ಗಳನ್ನು ಗಮನಿಸಿದರೂ ನಮಗೆ ಗೋಚರಿಸುವುದು ಅಪಾರ ಸಂಖ್ಯೆಯ ಖಾಲಿ ನಿವೇಶನಗಳು, ನಿಯಮಬಾಹಿರವಾಗಿ ಕಟ್ಟಿರುವ ಬಹುಮಹಡಿ ವಸತಿ ಗೃಹಗಳು ಮತ್ತು ವರ್ಷಗಳು ಕಳೆದರೂ ಮನೆ ನಿರ್ಮಾಣವಾಗದ ಅನಾಥ ಗೃಹ ನಿವೇಶನಗಳು. ಇದಕ್ಕೆ ಕಾರಣಗಳು ಹಲವು. ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್‌, ಕೊಡಗು ಮತ್ತಿತರ ಬಂಡವಾಳ ಕೇಂದ್ರಿತ ಪ್ರದೇಶಗಳಲ್ಲಿ ಈಗಾಗಲೇ ಬದುಕು ಕಟ್ಟಿಕೊಂಡಿರುವ ಸಿರಿವಂತರ ಒಂದು ವರ್ಗ ಮತ್ತು ಸ್ಥಳೀಯ ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು ಬಹುಪಾಲು ನಿವೇಶನಗಳ ಮಾಲಿಕತ್ವವನ್ನು ಹೊಂದಿರುವ ಸಾಧ್ಯತೆಗಳೇ ಹೆಚ್ಚು. ಬಡ-ಕೆಳಮಧ್ಯಮ ವರ್ಗಗಳಿಗೆ ಒಂದು ನಿವೇಶನ ಸೂರಿಗೆ ಆಧಾರವಾದರೆ ಈ ಉದ್ಯಮಿಗಳಿಗೆ ಪ್ರತಿಯೊಂದು ನಿವೇಶನವೂ ಮಾರುಕಟ್ಟೆ ಲಾಭದ ಒಂದು ಕಚ್ಚಾ ವಸ್ತು. ಬಂಡವಾಳಶಾಹಿಯು ಭೂಮಿಯನ್ನು Commodify (ಸರಕೀಕರಣ) ಮಾಡುವ ಒಂದು ವಿಧಾನ ಇದು. ಇದಕ್ಕೆ ಬಲಿಯಾಗುವುದು ಬಂಡವಾಳವಿಲ್ಲದ ಶ್ರೀಸಾಮಾನ್ಯರು.

ನಗರೀಕರಣದ ಮಾರುಕಟ್ಟೆ ಮುಖವಾಡ

ನಗರ ಜೀವನದ ಆಂತರಿಕ ಸಮಸ್ಯೆಗಳಿಂದಾಚೆಗೆ ನೋಡುವುದಾದರೆ, ಭಾರತದಲ್ಲಿ ಈ ಪ್ರಕ್ರಿಯೆಯು ಸುತ್ತಲಿನ ಸಮಾಜ, ಸಂಸ್ಕೃತಿ ಮತ್ತು ಜನಜೀವನವನ್ನು ನುಂಗಿ ಬೆಳೆಯುವ ಒಂದು ಮಾರುಕಟ್ಟೆ ಪ್ರಕ್ರಿಯೆಯಾಗಿ ರೂಪುಗೊಂಡಿರುವುದನ್ನು ಗಮನಿಸಬಹುದು. ಎಲ್ಲ ಪ್ರಮುಖ ನಗರಗಳೂ ಸಹ ವಿಸ್ತರಣೆಯ ನೆಪದಲ್ಲಿ ಬೃಹತ್‌ ಪಾಲಿಕೆಗಳಾಗಿ ಪರಿವರ್ತನೆಗೊಂಡು ಸುತ್ತಲಿನ ಹಳ್ಳಿಗಳನ್ನೂ ಕಬಳಿಸುತ್ತಾ ಅಲ್ಲಿನ ಸಾಂಸ್ಕೃತಿಕ ನೆಲೆಗಳನ್ನೂ ಆಧುನಿಕೀಕರಣಗೊಳಿಸುತ್ತಿವೆ. ಕೃಷಿ ಭೂಮಿಯನ್ನು ಕಳೆದುಕೊಳ್ಳುವ ರೈತ ಕುಟುಂಬಗಳು ಈ ʼ ಉಡ ʼಗಳ ಮೂಲಕ ,ಗೃಹ ನಿರ್ಮಾಣ ಸೊಸೈಟಿ-ಸಂಘಗಳ ಮೂಲಕ ಪಡೆಯುವ ನಗದು ಪರಿಹಾರ ಕ್ರಮೇಣ ಕರಗಿ ಕೃಷಿಕರೆಲ್ಲರೂ ನಗರ ಕೆಂದ್ರಗಳ ಕಾರ್ಮಿಕರಾಗಿ ಪರಿವರ್ತನೆ ಹೊಂದುತ್ತಾರೆ. ಮತ್ತೊಂದೆಡೆ 50;50 ಅನುಪಾತದ ನಿವೇಶನಗಳು ಕ್ರಮೇಣ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಪಾಲಾಗಿ ಅಲ್ಲಿಯೂ ಸಹ ರೈತ ಮಕ್ಕಳು ನಗರಜೀವನದ ಮರ್ಜಿಗೊಳಗಾಗುವಂತಾಗುತ್ತದೆ. ಅಧಿಕಾರ ರಾಜಕಾರಣದಲ್ಲಿರುವ ಮಣ್ಣಿನ ಮಕ್ಕಳಿಗೆ ಈ ವಾಸ್ತವದ ಅರಿವು ಇರಲಾರದೇ ?

ರಾಮನಗರ ಜಿಲ್ಲೆಯನ್ನು “ಬೆಂಗಳೂರು ದಕ್ಷಿಣ” ಎಂದು ಮರುನಾಮಕರಣ ಮಾಡುವ ಆಗ್ರಹದ ಹಿಂದಿರುವುದು ಇದೇ ನಗರೀಕರಣ-ರಿಯಲ್‌ ಎಸ್ಟೇಟ್‌ ಉದ್ಯಮದ ಮೈತ್ರಿಕೂಟದ ಹಿತಾಸಕ್ತಿ. ಜೆಡಿಎಸ್‌ ಮತ್ತು ಬಿಜೆಪಿ ನಾಯಕರಿಗೆ ʼ ರಾಮನಗರ ʼ ದಲ್ಲಿ ರಾಮಾಯಣದ ರಾಮನೇ ಪ್ರಧಾನವಾಗಿ ಕಾಣುವುದರಿಂದ, ಕಾಂಗ್ರೆಸ್‌ ಸರ್ಕಾರದ ʼರಾಮವಿರೋಧಿʼ ಧೋರಣೆಯನ್ನು ದೂಷಿಸುತ್ತಿದ್ದಾರೆ. ಆದರೆ ನಮ್ಮ ಜನಪ್ರತಿನಿಧಿಗಳಿಗೆ/ರಾಜಕಾರಣಿಗಳಿಗೆ ಕಾಣಬೇಕಿರುವುದೇನು ? ದಶಪಥದ ನಿರ್ಮಾಣದಿಂದ ಬೀದಿಪಾಲಾಗಿರುವ ʼರಾಮʼನಗರದ ಸಾವಿರಾರು ಸಣ್ಣಪುಟ್ಟ ವ್ಯಾಪಾರಿ ಕುಟುಂಬಗಳಲ್ಲವೇ ? ʼರಾಮʼನಗರದ ಪಾರಂಪರಿಕ ರೇಷ್ಮೆ ಕೃಷಿ/ಉದ್ದಿಮೆಯಲ್ಲಿ ಬೆಂದು ಬಸವಳಿದು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಶ್ರಮಿಕ ಕುಟುಂಬಗಳಲ್ಲವೇ ? ಹೆದ್ದಾರಿಗಳಿಂದ ವಿಭಜಿತವಾಗಿರುವ ಸುತ್ತಲಿನ ಹಳ್ಳಿಗಾಡಿನ ಜನರ ಆತಂಕಗಳಲ್ಲವೇ ? ಇಂದಲ್ಲಾ ನಾಳೆ ದಶಪಥದ ಇಕ್ಕೆಲಗಳನ್ನು ಆಕ್ರಮಿಸುವ ರಿಯಲ್‌ ಎಸ್ಟೇಟ್‌ ಉದ್ಯಮದ ಭೀತಿಗೊಳಗಾಗಿರುವ ಸಣ್ಣ-ಅತಿಸಣ್ಣ ರೈತರಲ್ಲವೇ ? ಇತ್ತೀಚಿನ ಚುನಾವಣೆಗಳಲ್ಲೂ ಈ ಜನಸಮೂಹಗಳ ಧ್ವನಿಗೆ ಧ್ವನಿಗೂಡಿಸುವವರೇ ಇರಲಿಲ್ಲವಲ್ಲಾ !!!!

ಇದಾವುದೂ ಕಾಣುವುದೂ ಇಲ್ಲ. ಏಕೆಂದರೆ ನವ ಉದಾರವಾದದ ಬಂಡವಾಳ ಮತ್ತು ಕಾರ್ಪೋರೇಟ್‌ ಮಾರುಕಟ್ಟೆಗೆ ರಾಮನಗರದ ಬಂಡೆಗಳು, ಗ್ರಾನೈಟ್‌ ಉದ್ಯಮ, ನಗರೀಕರಣದ ಲಾಭ ಪಡೆಯುವ ಮೂಲ ಸೌಕರ್ಯ ನಿರ್ಮಾಣ ಕಂಪನಿಗಳು ಮತ್ತು ಈ ಔದ್ಯಮಿಕ ಜಗತ್ತಿನಲ್ಲಿ ಬೆವರು ಸುರಿಸಿ ದುಡಿಯಲು ಅಗ್ಗದ ದರದಲ್ಲಿ ಲಭ್ಯವಾಗುವ ಸ್ಥಳೀಯ ಶ್ರಮಜೀವಿಗಳ ಬೃಹತ್‌ ಸಂಖ್ಯೆ , ಈ ಅಂಶಗಳೇ ಪ್ರಧಾನವಾಗಿ ಕಾಣುತ್ತವೆ. ಈ ಕಾರಣಕ್ಕಾಗಿಯೇ “ಬೆಂಗಳೂರು ದಕ್ಷಿಣ” ಎಂಬ ಹೆಸರು ಔದ್ಯಮಿಕ ಬಂಡವಾಳ ಮಾರುಕಟ್ಟೆಗೆ ಅಪ್ಯಾಯಮಾನವಾಗಿ ಕಾಣುತ್ತದೆ. ಅವಳಿ ನಗರ ಮತ್ತು ಉಪನಗರಗಳನ್ನು ತನ್ನೊಳಗೆ ಆವಾಹಿಸಿಕೊಂಡು ಬೃಹತ್ತಾಗಿ ಬೆಳೆಯುವ ನಗರಗಳು ಬಂಡವಾಳ ಹೂಡಿಕೆ ಮತ್ತು ಮಾರುಕಟ್ಟೆಗೆ ಪ್ರಶಸ್ತವಾಗಿ ಕಾಣುತ್ತವೆ. ಹಾಗಾಗಿ ನಗರ ವಿಸ್ತರಣೆ ಮತ್ತು ನಗರೀಕರಣದ ಜಂಟಿ ಕಾರ್ಯಯೋಜನೆಗಳು ಈ ಮಾರುಕಟ್ಟೆಯ ನಿರ್ದೇಶನದಲ್ಲೇ ಕಾರ್ಯಗತವಾಗುತ್ತವೆ.

ನಿವೇಶನಾಕಾಂಕ್ಷಿಗಳ ಹಗಲುಗನಸು

ಈಗ MUDA ಹಗರಣದ ಸುತ್ತ  ನಡೆಯುತ್ತಿರುವ ಚರ್ಚೆಗಳಲ್ಲಿ ನಿವೇಶನಗಳಿಗಾಗಿ ಬಕಪಕ್ಷಿಗಳಂತೆ ಕಾಯುತ್ತಾ ಕುಳಿತಿರುವ ಸಾಮಾನ್ಯ ಜನತೆಯ ಹಿತಾಸಕ್ತಿಗಳಾಗಲೀ, ಮಹದಾಕಾಂಕ್ಷೆಯಾಗಲೀ ಒಂದು ವಿಷಯವೇ ಆಗುವುದಿಲ್ಲ. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಆಳ್ವಿಕೆಯ ಯಂತ್ರಗಳನ್ನು ಬಳಸಿಕೊಂಡು ತಮ್ಮ ಕುಟುಂಬದ ಸದಸ್ಯರಿಗಾಗಿ ನಿವೇಶನಗಳನ್ನು ಕಬಳಿಸಿರುವ ಚುನಾಯಿತ/ಪರಾಜಿತ/ಹಾಲಿ/ಮಾಜಿ ಶಾಸಕ-ಸಂಸದರ ಹಿತಾಸಕ್ತಿಗಳಷ್ಟೇ ಪ್ರಧಾನವಾಗುತ್ತವೆ. ಇವರಲ್ಲಿ ಎಷ್ಟು ಮಂದಿ ಪ್ರಾಮಾಣಿಕವಾಗಿ ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿರುವ MUDA ನಿವೇಶನಗಳ ವಿವರವನ್ನಾಗಲೀ, ಕುಟುಂಬ ಸದಸ್ಯರ ಹೆಸರಿನಲ್ಲಿ ತಾವೇ ನಿರ್ಮಿಸಿರುವ ಬಡಾವಣೆಗಳ ವಿವರಗಳನ್ನಾಗಲೀ, ಜನರ ಮುಂದಿಡುತ್ತಾರೆ ? MUDA ಅಧ್ಯಕ್ಷ ಪದವಿಯೂ ಸಚಿವ ಹುದ್ದೆಯಷ್ಟೇ ಆಕರ್ಷಣೀಯವಾಗಿ ಕಾಣುತ್ತಿರುವ ವರ್ತಮಾನ ರಾಜಕಾರಣದಲ್ಲಿ , ರಾಜಕಾರಣಿಗಳು ಅವರ ಹಿಂಬಾಲಕರು, ಅನುಯಾಯಿಗಳು, ಅಭಿಮಾನಿಗಳು ಎಷ್ಟು ನಿವೇಶನಗಳನ್ನು ಸಂಪಾದಿಸಿದ್ದಾರೆ ಎಂಬ ವಿವರ ದೊರೆಯಲು ಸಾಧ್ಯವೇ ?

ಇಲ್ಲಿ ನಡೆಯುವ ತುಷ್ಟೀಕರಣ ರಾಜಕಾರಣದ ಬಗ್ಗೆ ನಮ್ಮ ರಾಜಕೀಯ ಸಂಕಥನಗಳು ನಡೆಯುವುದೇ ಇಲ್ಲ. ಸರ್ಕಾರಗಳು ವ್ಯಕ್ತಿಗತ/ಸಾಂಘಿಕ ಪ್ರತಿರೋಧದ ದನಿಗಳನ್ನು ತೆಪ್ಪಗಾಗಿಸುವ ಸಲುವಾಗಿಯೂ  ಇಂತಹ ಸಾಂಸ್ಥಿಕ ಮಾರ್ಗಗಳನ್ನು ಅನುಸರಿಸುವ ದೀರ್ಘ ಪರಂಪರೆಯೇ ನಮ್ಮದಾಗಿದೆ. ಇದಕ್ಕೆ ಯಾವ ಸರ್ಕಾರವೂ ಹೊರತಲ್ಲ ಎನ್ನುವುದು ವಿಪರ್ಯಾಸ ಎನಿಸಿದರೂ ವಾಸ್ತವ. ಆದರೆ ಇಲ್ಲಿ ಕಳೆದುಕೊಳ್ಳುವವರು, ಅವಕಾಶವಂಚಿತರು, ನಿರ್ಭಾಗ್ಯರು ಯಾರು ? ಮತ್ತದೇ ಶಾಶ್ವತ ನಿವೇಶನಾಕಾಂಕ್ಷಿಗಳು, ಶ್ರೀಸಾಮಾನ್ಯ ಪ್ರಜೆ, ಬಂಡವಾಳವೂ ಇಲ್ಲದ ಬಂಡವಾಳದ ಆಸರೆಯೂ ಇಲ್ಲದ ದುಡಿಯುವ ವರ್ಗಗಳು. ಭಾರತ ಅನುಸರಿಸುತ್ತಿರುವ ನಗರೀಕರಣದ ಮಾದರಿ ಮತ್ತು ಇದಕ್ಕೆ ಪೂರಕವಾಗಿ ವಿಸ್ತರಿಸುತ್ತಿರುವ ನೂತನ ಮೂಲ ಸೌಕರ್ಯ ಸಾಧನಗಳು ಹೆಚ್ಚು ಹೆಚ್ಚು ಜನರನ್ನು ಅಂಚಿಗೆ ತಳ್ಳುವ ಒಂದು ಮಾದರಿಯಾಗಿದೆ. ಇದೇ ಮಾದರಿಯನ್ನು ಆಗ್ರಾದಿಂದ ಕೋಲಾರದವರೆಗೆ ಅನುಕರಿಸಲಾಗುತ್ತಿದೆ. ಮೈಸೂರಿನ ತಳಸ್ತರದ ಜನತೆಯ ಪಾಲಿಗೆ “ ಮುಡಾ ನಿನ್ನ ಸಹವಾಸ ಬೇಡ ” ಎಂದು ಜಪಿಸುವುದೊಂದೇ ದಾರಿ.

ಇದನ್ನೂ ನೋಡಿ: ರೈಲು ಚಾಲಕರಿಗೆ ವಿಶ್ರಾಂತಿ ಇಲ್ಲ! ನಿದ್ದೆ ಇಲ್ಲ!! ಹಾಗಾಗಿಯೇ ಅಪಘಾತಗಳು ಹೆಚ್ಚಾಗುತ್ತಿವೆ!!! Janashakthi Media

Donate Janashakthi Media

Leave a Reply

Your email address will not be published. Required fields are marked *