ಊರ ಜಾತ್ರೆಗೆ ದಲಿತರಿಗೆ ನಿರ್ಬಂಧ: ಹಾಸನದಲ್ಲಿ ಬೆಳಕಿಗೆ ಬಂದ ಅಸ್ಪಶ್ಯತೆ ಆಚರಣೆ!

ಹಾಸನ: ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಗಂಗೂರ ಗ್ರಾಮಸ್ಥರು ‘ಅಡ್ಡೆ ಉತ್ಸವ’ ಎಂಬ ಆಚರಣೆಗೆ ಮುಂದಾಗಿದ್ದು, ಆಚರಣೆಯ ಸಮಯದಲ್ಲಿ, ಆದಿಬೈಲು ಬಿಂದಿಗೆಯಮ್ಮ ರಂಗನಾಥಸ್ವಾಮಿ ದೇವಸ್ಥಾನದಿಂದ ದೇವರನ್ನು 28 ದಿನಗಳ ನಂತರ ಧಾರ್ಮಿಕ ಜಾತ್ರೆಯಲ್ಲಿ ಸಮಾಪ್ತಿಗೊಳಿಸುವ ಮೊದಲು 28 ಹಳ್ಳಿಗಳಿಗೆ ಕರೆದೊಯ್ಯಲಾಗುತ್ತದೆ. ಆದರೆ, ದೇವಸ್ಥಾನ ಸರ್ಕಾರದ ಅಧೀನದಲ್ಲಿ ಇದ್ದರೂ ಗ್ರಾಮದ ಮೇಲ್ಜಾತಿಯವರು ಏಕಪಕ್ಷೀಯವಾಗಿ ಪಂಚಾಯ್ತಿ ನಡೆಸಿ ದೇವರನ್ನು ಗ್ರಾಮಕ್ಕೆ ಕರೆತರುವ ಸಂದರ್ಭದಲ್ಲಿ ದಲಿತರು ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಾರದು ಎಂದು ತೀರ್ಮಾನಿಸಿದ್ದಾರೆ.

ನ್ಯಾಷನಲ್‌ ಹೆರಾಲ್ಡ್‌ ಇಂಡಿಯಾ ವರದಿ ಪ್ರಕಾರ, “ಹಾಸನ ಜಿಲ್ಲೆಯ ಗಂಗೂರ ಗ್ರಾಮದಲ್ಲಿ ಜಾತಿ ತಾರತಮ್ಯದ ಘಟನೆ ವರದಿಯಾಗಿದೆ, ಗ್ರಾಮದ ಸವರ್ಣೀಯರು ದಲಿತರನ್ನು ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸದಂತೆ ಆದೇಶಿಸಿದ್ದಾರೆ. ಮಾತ್ರವಲ್ಲದೆ, ಈ ಬಗ್ಗೆ ದಲಿತರಿಂದ ಬಲವಂತವಾಗಿ ಪ್ರತಿಜ್ಞೆಯನ್ನೂ ತೆಗೆದುಕೊಳ್ಳಲಾಗಿದೆʼʼ ಎಂದು ವರದಿ ಮಾಡಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿದ್ದರೂ, ದೇಶದಲ್ಲಿ ಇನ್ನೂ ಅಸ್ಪಶ್ಯತೆ, ಜಾತಿ ತಾರತಮ್ಯ ಜೀವಂತವಾಗಿಯೇ ಇದೆ. ಇದೀಗ ಕರ್ನಾಟಕ ರಾಜ್ಯದಿಂದ ಅಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ. ಊರ ಜಾತ್ರೆಯಲ್ಲಿ ಪಾಲ್ಗೊಳ್ಳದಂತೆ ದಲಿತ ಕುಟುಂಬಗಳಿಗೆ ಗ್ರಾಮಸ್ಥರು ನಿರ್ಬಂಧ ಹೇರಿರುವುದಾಗಿ ವರದಿಯಾಗಿದೆ.

ಹಳ್ಳಿಯ ದಲಿತ ಸಮುದಾಯಕ್ಕೆ ಸೇರಿದ ವಿದ್ಯಾವಂತ ಯುವಕರು ಮೇಲ್ಜಾತಿಯ ಅಮಾನವೀಯ ನಡೆಯ ಬಗ್ಗೆ ಆಕ್ರೋಶಗೊಂಡಿದ್ದಾರೆ. ಗ್ರಾಮದಲ್ಲಿ ಮೇಲ್ಜಾತಿಗೆ ಸೇರಿದ ಸುಮಾರು 300 ಮನೆಗಳಿದ್ದು, ದಲಿತ ಸಮುದಾಯಕ್ಕೆ ಸೇರಿದ 10 ಕುಟುಂಬಗಳು ವಾಸ ಮಾಡುತ್ತಿವೆ. ದಲಿತರು ಪ್ರತಿಭಟನೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿದ ಶೋಷಕ ಜಾತಿಯ ಜನರು ಈ ವಿಚಾರದಲ್ಲಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ದಲಿತ ಸಮುದಾಯದ ವಿದ್ಯಾವಂತರು ಕಿಡಿ ಕಾರಿದ್ದಾರೆ.

ಇದಲ್ಲದೇ, ‘ಅಡ್ಡೆ ಉತ್ಸವ’ಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಎದುರಾದರೆ ಗ್ರಾಮಸ್ಥರಲ್ಲೇ ಬಗೆಹರಿಸಿಕೊಳ್ಳುವುದಾಗಿ ಗ್ರಾಮದ ಸವರ್ಣೀಯರು ದಲಿತರಿಂದ ಮಾತು ಪಡೆದಿದ್ದಾರೆ. ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನದ ಕಾರ್ಯಕ್ರಮಕ್ಕೆ ಈ ರೀತಿ ಬಹಿಷ್ಕಾರ ಹಾಕಿರುವುದು ದಲಿತ ಸಮುದಾಯದ ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.

ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳಬಾರದು, ದೇವರ ಪೂಜೆ ಮಾಡಬಾರದು ಎಂದು ದಲಿತ ಕುಟುಂಬಗಳಿಗೆ ಎಚ್ಚರಿಸಿರುವ ಸವರ್ಣೀಯರು, ಈ ಬಗ್ಗೆ ಜಿಲ್ಲಾಧಿಕಾರಿ ಅಥವಾ ಇತರೆ ಯಾವುದೇ ಸರ್ಕಾರಿ ಅಧಿಕಾರಿಗಳಿಗೆ ಅನಾಮಧೇಯ ಮನವಿ ಪತ್ರ ಬರೆಯದಂತೆಯೂ ಬೆದರಿಕೆ ಒಡ್ಡಿದೆ.

“ನಾವು ಇಂದು ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಆದರೆ ನಮಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ದಮನಕಾರಿ ಜಾತಿ ವ್ಯವಸ್ಥೆ ನಮ್ಮನ್ನು ಇನ್ನೂ ಕಾಡುತ್ತಿದೆ. ಸಂವಿಧಾನಾತ್ಮಕವಾಗಿ ಎಲ್ಲಾ ಜಾತಿಗಳು ಸಮಾನವಾಗಿವೆ, ಹಾಗಾದರೆ ನಮ್ಮನ್ನು ಏಕೆ ಶೋಷಿಸಲಾಗುತ್ತಿದೆ?,” ಎಂದು ಗ್ರಾಮನಿವಾಸಿಯಾಗಿರುವ ಆಕಾಶ್ ಎಂಬವರು ಪ್ರಶ್ನಿಸಿದ್ದಾರೆ. ಅಲ್ಲದೆ, “ನಾವು ಆಚರಣೆಯಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಿದರೆ ನಮ್ಮ ಗ್ರಾಮಕ್ಕೆ ‘ಅಡ್ಡೆ ಉತ್ಸವ’ ಬರಲು ನಾವು ಬಯಸುವುದಿಲ್ಲ.” ಎಂದು ಅವರು ಹೇಳಿದ್ದಾರೆ.

“ಆದರೆ ಈ ಹಿಂದೆಯೆಲ್ಲಾ ಹೀಗೆ ಆಗುತ್ತಿರಲಿಲ್ಲ. ಬದಲಾಗಿ ಮೇಲ್ವರ್ಗದ ಜನರು ದಲಿತರನ್ನು ದೇವರ ಬಳಿ ಹೋಗಲು ಬಿಡುತ್ತಿರಲಿಲ್ಲ. ಅವರು ಈ ಬಾರಿ ನಮ್ಮ ಹಿರಿಯರಿಂದ ಮುಚ್ಚಳಿಕೆ ಬರೆಸುಕೊಳ್ಳುವ ಮಟ್ಟಕ್ಕೆ ಬಂದಿದ್ದಾರೆ, ಅವರು ಗುರಿಯಾಗುತ್ತಾರೆ ಅಥವಾ ಬಹಿಷ್ಕಾರಕ್ಕೆ ಒಳಗಾಗುತ್ತಾರೆ ಎಂದು ಭಯಪಡುತ್ತಾರೆʼʼ ಎಂದು ಅವರು ಹೇಳಿದ್ದಾರೆ.

“ಜಾತಿ ವ್ಯವಸ್ಥೆ ತುಂಬಾ ಜೀವಂತವಾಗಿದೆ… ಇದು ಪ್ರತಿ ಹಳ್ಳಿಯಲ್ಲೂ ಆಚರಣೆಯಲ್ಲಿದೆ, ವಿಪರ್ಯಾಸವೆಂದರೆ ಅಸ್ಪೃಶ್ಯತೆ ಹೇರುತ್ತಿರುವುದು ಬ್ರಾಹ್ಮಣರಲ್ಲ, ಆದರೆ ಬ್ರಾಹ್ಮಣರು ಕೀಳು ಎಂದು ಪರಿಗಣಿಸುವ ಇತರ ಜಾತಿ ಗುಂಪುಗಳು ಈ ವಿಷಯದಲ್ಲಿ ಆದೇಶಿಸುತ್ತಿವೆ. ದೇವಸ್ಥಾನ ಸರ್ಕಾರಕ್ಕೆ ಸೇರಿದ್ದು, ಇದು ಖಾಸಗಿ ಆಸ್ತಿಯಲ್ಲ, ನಮಗೆ ಪೂಜೆ ಮತ್ತು ಆಚರಣೆಗಳಲ್ಲಿ ಭಾಗವಹಿಸಲು ಅವಕಾಶ ನೀಡದಿದ್ದರೆ, ನಮ್ಮ ಗ್ರಾಮದಲ್ಲಿ ‘ಅಡ್ಡೆ ಉತ್ಸವ’ ನಮಗೆ ಬೇಡ,” ಎಂದು ಅವರು ಹೇಳಿದ್ದಾರೆ.

‘ಅಡ್ಡೆ ಉತ್ಸವ’ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, ಈ ಬಾರಿ ಗ್ರಾಮಸ್ಥರು ಅದನ್ನು ನಡೆಸಬೇಕೆಂದು ಹೊರಟಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಗ್ರಾಮ ನಿವಾಸಿಯೊಬ್ಬರು, 20 ವರ್ಷಗಳ ಹಿಂದೆ ದಲಿತರೊಬ್ಬರು ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದಕ್ಕೆ ದೊಡ್ಡ ಗಲಾಟೆ ನಡೆದು ‘ಅಡ್ಡೆ ಉತ್ಸವ’ವನ್ನು ನಿಲ್ಲಿಸಲಾಗಿತ್ತು. ಬಹಳ ಸಮಯದ ನಂತರ ಅದನ್ನು ದಲಿತರಿಲ್ಲದೆ ಪುನರಾರಂಭಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎನ್ನಲಾಗಿದೆ.

Donate Janashakthi Media

Leave a Reply

Your email address will not be published. Required fields are marked *