ಯುಪಿಐ ವರ್ಗಾವಣೆಗೆ ಯಾವುದೇ ಶುಲ್ಕವಿಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ

ನವದೆಹಲಿ: ಕಳೆದ ವರ್ಷ ಡಿಜಿಟಲ್ ಪಾವತಿ ವ್ಯವಸ್ಥೆಗೆ ಸರ್ಕಾರ ಹಣಕಾಸಿನ ನೆರವನ್ನು ನೀಡಿದೆ. ಈ ಸಾಲಿನಲ್ಲೂ ಬಳಕೆದಾರ ಸ್ನೇಹಿ ಡಿಜಿಟಲ್ ಪಾವತಿ ಉತ್ತೇಜಿಸಲು ಮತ್ತಷ್ಟು ನೆರವನ್ನು ಘೋಷಣೆ ಮಾಡಲಾಗಿದೆ.  ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಯುಪಿಐ ಡಿಜಿಟಲ್‌ ಪಾವತಿ ಸೇವೆಗಳ ಮೇಲೆ ಶುಲ್ಕ ವಿಧಿಸುವ ಕುರಿತು ಗಂಭೀರ ಚಿಂತನೆಯಲ್ಲಿದೆ ಎಂಬ ಸುದ್ದಿಯೊಂದು ವರದಿಯಾಗಿತ್ತು.

ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರವು ಯುಪಿಐ ಪಾವತಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕೇಂದ್ರ ಹಣಕಾಸು ಇಲಾಖೆ ಟ್ವೀಟ್ ಮಾಡಿದ್ದು, ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆಯು ಸಾರ್ವಜನಿಕರಿಗೆ ಅಪಾರ ಅನುಕೂಲ ಹಾಗೂ ಉತ್ಪಾದಕತೆ ಲಾಭವನ್ನು ತಂದು ಕೊಡುತ್ತಿದೆ. ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ತಿಳಿಸಿದೆ.

ದೇಶದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಯುಪಿಐ ಪಾವತಿಗಳಿಗೆ ಕೆಲ ದಿನಗಳ ಹಿಂದೆ ಆರ್‌ಬಿಐ ಬಿಡುಗಡೆ ಮಾಡಿದ್ದ ಸಲಹಾ ಪತ್ರದಲ್ಲಿ ಯುಪಿಐ ಸೇರಿದಂತೆ ಆನ್‌ಲೈನ್‌ ವ್ಯವಸ್ಥೆಗಳ ಮೂಲಕ ನಡೆಸುವ ವಹಿವಾಟಿಗೆ ಶುಲ್ಕ ವಿಧಿಸುವ ಬಗ್ಗೆ ಸಾರ್ವಜನಿಕರಿಂದ ಸಲಹೆ ಕೋರಿತ್ತು.

ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಪ್ರಿಪೇಯ್ಡ್ ಪಾವತಿ ಉಪಕರಣಗಳು(ಪಿಪಿಐಗಳು) ಸೇರಿದಂತೆ ಪಾವತಿ ಸಾಧನಗಳು ಮೂಲಕ ಯುಪಿಐ, ಐಎಂಪಿಎಸ್‌(ತಕ್ಷಣದ ಪಾವತಿ ಸೇವೆ), ನೆಫ್ಟ್‌  (ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ಗಳ ವರ್ಗಾವಣೆ), ಆರ್‌ಟಿಜಿಎಸ್‌(ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್) ನಂತಹ ವಿಭಿನ್ನ ಪಾವತಿ ಸೇವೆಗಳು ಅಥವಾ ಚಟುವಟಿಕೆಗಳಿಗೆ ಶುಲ್ಕವನ್ನು ವಿಧಿಸಲು ಆರ್‌ಬಿಐ ಸಲಹೆ ಕೋರಿತ್ತು.

ಸಾರ್ವಜನಿಕ ಪ್ರತಿಕ್ರಿಯೆಗಾಗಿ ‘ಪಾವತಿ ವ್ಯವಸ್ಥೆಗಳಲ್ಲಿನ ಶುಲ್ಕಗಳು’ ಕುರಿತ ಸಲಹಾ ಪತ್ರದಲ್ಲಿ ಅಕ್ಟೋಬರ್ 3 ರೊಳಗೆ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಕೋರಿತ್ತು. ಸಬ್ಸಿಡಿ ವೆಚ್ಚಗಳು ಶೂನ್ಯ ಶುಲ್ಕಗಳಿಗೆ ಹೆಚ್ಚು ಪರಿಣಾಮಕಾರಿ ಪರ್ಯಾಯವಾಗಿದೆಯೇ, ಯುಪಿಐ ವಹಿವಾಟುಗಳನ್ನು ವಿಧಿಸಬೇಕಾದರೆ, ವ್ಯಾಪಾರಿ ರಿಯಾಯಿತಿ ದರ (ಎಂಡಿಆರ್) ವಹಿವಾಟು ಮೌಲ್ಯದ ಶೇಕಡಾವಾರು ಅಥವಾ ನಿಗದಿತ ಮೊತ್ತವಾಗಿರಬೇಕೇ ಮತ್ತು ಶುಲ್ಕಗಳನ್ನು ನಿರ್ವಹಿಸಬೇಕೇ ಅಥವಾ ಮಾರುಕಟ್ಟೆಯನ್ನು ನಿರ್ಧರಿಸಬೇಕೇ ಎಂದು ಆರ್‌ಬಿಐ ಕೇಳಿತು.

ಪ್ರತಿ ತಿಂಗಳು ಡಿಜಿಟಲ್‌ ಪಾವತಿ ಮೂಲಕ ನಡೆಯುವ ವ್ಯವಹಾರ ಹೆಚ್ಚಾಗುತ್ತಿದೆ. ಜೂನ್‌ ತಿಂಗಳಿನಲ್ಲಿ 5.86 ಶತಕೋಟಿ ವ್ಯವಹಾರ ನಡೆದರೆ ಜುಲೈನಲ್ಲಿ 6.28 ಶತಕೋಟಿ ವ್ಯವಹಾರ ನಡೆದಿತ್ತು.

Donate Janashakthi Media

Leave a Reply

Your email address will not be published. Required fields are marked *