ಲಕ್ನೋ: 2021 ರ ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ ಮೂಲಕ ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾಗಲು ಹೊರಟಿರುವ ಬಿಜೆಪಿ ಸರಕಾರದ ನೀತಿಗೆ ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ಇತರ ಕೇಸರಿ ಸಂಘಟನೆಗಳು ಆಕ್ಷೇಪಣೆ ವ್ಯಕ್ತಡಿಸಿವೆ.
ಇದರಿಂದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರವು ಹೊಸ ಜನಸಂಖ್ಯಾ ಮಸೂದೆಯ ಕರಡಿನಲ್ಲಿ ಬದಲಾವಣೆಗಳನ್ನು ತರಲು ಮುಂದಾಗಿದೆ. ಹೊಸ ಮಸೂದೆಯಲ್ಲಿ ಸೂಚಿಸಿರುವಂತೆ ಒಂದು ಮಗುವನ್ನು ಹೊಂದಿರುವ ದಂಪತಿಗಳಿಗೆ ನೀಡುವ ಪ್ರೋತ್ಸಾಹ ಧನಗಳನ್ನು ರದ್ದುಗೊಳಿಸಲು ಸರಕಾರ ಯೋಜಿಸಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಕರ್ನಾಟಕದಲ್ಲೂ ಜನಸಂಖ್ಯಾ ನೀತಿ ಜಾರಿಗೆ ಚಿಂತನೆ: ಸಚಿವ ಬಸವರಾಜ ಬೊಮ್ಮಾಯಿ
ಜನಸಂಖ್ಯಾ ನಿಯಂತ್ರಣ ಮಸೂದೆಯ ಹಲವು ನಿಬಂಧನೆಗಳ ಬಗ್ಗೆ ಕೇಸರಿ ಸಂಸ್ಥೆಗಳು ಮತ್ತು ಆರ್ಎಸ್ಎಸ್ ವಿರೋಧ ವ್ಯಕ್ತಪಡಿಸಿದೆ ಮತ್ತು ಹಲವು ಅಂಶಗಳ ಬದಲಾವಣೆಗೆ ಯೋಗಿ ಆದಿತ್ಯನಾಥ್ ಸರಕಾರವನ್ನು ಒತ್ತಾಯಿಸಿದೆ.
ಉತ್ತರ ಪ್ರದೇಶದಲ್ಲಿ ಈ ಮಸೂದೆ ಪ್ರಕಾರ ಇಬ್ಬರು ಮಕ್ಕಳನ್ನು ಹೊಂದಿರುವವರಿಗೆ ಎರಡು ಹೆಚ್ಚುವರಿ ಸಂಬಳ ಏರಿಕೆ ಹಾಗೂ ಮನೆ ಖರೀದಿಸಲು ಸಹಾಯಧನ ಮತ್ತು ಯುಟಿಲಿಟಿ ಬಿಲ್ಗಳಲ್ಲಿ ರಿಯಾಯಿತಿ ಸಿಗಲಿದೆ. ಒಂದು ಮಗು ಹೊಂದಿರುವ ದಂಪತಿಗಳಿಗೆ ನಾಲ್ಕು ಹೆಚ್ಚುವರಿ ಸಂಬಳ ಏರಿಕೆ, ಮಗುವಿಗೆ ಪದವಿವರೆಗೂ ಉಚಿತ ಶಿಕ್ಷಣ ಮತ್ತು ಶಾಲೆಗಳಲ್ಲಿ ಪ್ರವೇಶಕ್ಕೆ ಆದ್ಯತೆ ಒಳಗೊಂಡ ವಿವಿಧ ಪ್ರಯೋಜನಗಳು ಸಿಗಲಿವೆ.
ರಾಜ್ಯದ ಹಿರಿಯ ಅಧಿಕಾರಿಯೊಬ್ಬರು ʻʻಸಾರ್ವಜನಿಕರಿಂದ ಮತ್ತು ಕಾನೂನು ತಜ್ಞರಿಂದ ಹಲವಾರು ಸಲಹೆಗಳನ್ನು ಸ್ವೀಕರಿಸಿದ್ದೇವೆ. ಪ್ರಸ್ತುತ ಅವುಗಳನ್ನು ಪರಿಶೀಲಿಸಲಾಗುವುದು. ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ ಸೂಕ್ತ ಬದಲಾವಣೆ ಮಾಡಿ ಮಸೂದೆಯನ್ನು ಜಾರಿಗೆ ತರಲಾಗುವುದುʼʼ ಎಂದು ಹೇಳಿದರು.
ಇದನ್ನು ಓದಿ: ಉತ್ತರ ಪ್ರದೇಶ ಚುನಾವಣಾ ಪ್ರಚಾರ ಕರ್ನಾಟಕದಲ್ಲಿ ಯಾಕೆ? ಎಂದು ಪ್ರಶ್ನಿಸಿದ ನ್ಯಾಯವಾದಿಗೆ ಬೆದರಿಕೆ ಹಾಕಿದ ಯುಪಿ ಪೊಲೀಸರು!
ಆರ್ಎಸ್ಎಸ್ ಹೊಸ ಜನಸಂಖ್ಯಾ ನೀತಿಯ ಬಗ್ಗೆ ಎಚ್ಚರಿಕೆ ನೀಡಿದೆ ಮತ್ತು ಕೆಲವು ತಿದ್ದುಪಡಿಗಳನ್ನು ಸೂಚಿಸಿದೆ. ವಿಎಚ್ಪಿ ಈ ಹಿಂದೆ ಯುಪಿ ಸರ್ಕಾರವನ್ನು ಹೊಸ ನೀತಿಯನ್ನು ರದ್ದುಗೊಳಿಸುವಂತೆ ಅಥವಾ ಹೊಸದನ್ನು ತಿದ್ದುಪಡಿಗಳೊಂದಿಗೆ ಪರಿಚಯಿಸುವಂತೆ ಕೇಳಿಕೊಂಡಿದೆ. ಹಾಗೆಯೇ ಈ ನೀತಿ ‘ಹಿಂದೂಗಳಿಗೆ’ ವಿರುದ್ಧವಾಗಿದೆ ಎಂದು ಹೇಳಿದೆ.
ನೂತನ ಮಸೂದೆ ಪ್ರಕಾರ ಅದನ್ನು ಜಾರಿಗೊಳಿಸಿದರೆ, ರಾಜ್ಯ ಬಿಜೆಪಿಗೆ ಅಪಾಯ ಎದುರಾಗಲಿದೆ. ಮಸೂದೆಯ ನಿಬಂಧನೆಯ ಪ್ರಕಾರ ಆಡಳಿತಾರೂಢ ಬಿಜೆಪಿಯ ಅರ್ಧದಷ್ಟು ಶಾಸಕರು ಮುಂದಿನ ರಾಜ್ಯದ ವಿಧಾನಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಅನರ್ಹರಾಗಲಿದ್ದಾರೆ.
ಉತ್ತರಪ್ರದೇಶ ರಾಜ್ಯ ವಿಧಾನಸಭೆಯ 397 ಶಾಸಕರ ಪೈಕಿ 304 ಆಡಳಿತ ಪಕ್ಷದ ಶಾಸಕರು ಇದ್ದಾರೆ. ಸುಮಾರು 152 ಮಂದಿ ಅಂದರೆ ಅರ್ಧದಷ್ಟು ಶಾಸಕರು ಮೂರು ಅಥವಾ ಅದಕ್ಕಿಂತ ಅಧಿಕ ಮಕ್ಕಳನ್ನು ಹೊಂದಿದ್ದಾರೆ.