ಉನ್ನಾವೊ ಸಂತ್ರಸ್ತೆಯ ಶೆಡ್‌ಗೆ ಬೆಂಕಿ :ಜೈಲಿನಿಂದ ಹೊರಬಂದ ಆರೋಪಿಗಳಿಂದ ಕೃತ್ಯ

ಲಕ್ನೋ : ಉನ್ನಾವೊ ಅತ್ಯಾಚಾರ ಸಂತ್ರಸ್ತೆ ವಾಸವಿದ್ದ ಶೆಡ್‌ನತ್ತ ಬಂದ ಅತ್ಯಾಚಾರ ಆರೋಪಿಗಳು, ಶೆಡ್‌ಗೆ ಬೆಂಕಿ ಹಚ್ಚಿದ್ದಲ್ಲದೆ, ಇಬ್ಬರು ಹಸುಗೂಸುಗಳನ್ನು ಬೆಂಕಿಯೊಳಗೆ ಎಸೆದ ಹೃದಯ ವಿದ್ರಾವಕ ಘಟನೆ ಮಂಗಳವಾರ ನಡೆದಿದೆ.

‘ಪ್ರಕರಣ ಹಿಂಪಡೆಯಲು ನಿರಾಕರಿಸಿದ್ದಕ್ಕೆ ಪ್ರತೀಕಾರವಾಗಿ ಈ ಅಮಾನವೀಯ ಕೃತ್ಯ ನಡೆದಿದ್ದು, ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಸಂತ್ರಸ್ತೆಯ ಆರು ತಿಂಗಳ ಗಂಡು ಮಗು ಹಾಗೂ ಆಕೆಯ ಎರಡು ತಿಂಗಳ ತಂಗಿ ಕ್ರಮವಾಗಿ ಶೇ 35 ಹಾಗೂ ಶೇ 45ರಷ್ಟು ಪ್ರಮಾಣದ ಸುಟ್ಟ ಗಾಯಗಳಿಂದ ಬಳಲಿದ್ದಾರೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರದ ಆಸ್ಪತ್ರೆಗೆ ರವಾನಿಸಲಾಗಿದೆ’ ಎಂದು ಮುಖ್ಯ ವೈದ್ಯಾಧಿಕಾರಿ ಸುಶೀಲ್‌ ಶ್ರೀವಾಸ್ತವ್‌ ತಿಳಿಸಿದ್ದಾರೆ.

‘ಅತ್ಯಾಚಾರ ಆರೋಪಿಗಳ ಪೈಕಿ ಇಬ್ಬರು ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು. ಇತರ ಐದು ಮಂದಿಯ ಜೊತೆಗೆ ಸೋಮವಾರ ಸಂಜೆ ಸಂತ್ರಸ್ತೆಯ ಕುಟುಂಬದವರು ವಾಸವಿದ್ದ ಶೆಡ್‌ಗೆ ತೆರಳಿದ್ದ ಇವರು ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದ್ದರು. ನಾವು ವಿರೋಧಿಸಿದೆವು. ಇದಕ್ಕೆ ಅವರು ಹಾಗೂ ಅವರೊಂದಿಗೆ ಇದ್ದ ಇತರರು ನಮಗೆ ದೊಣ್ಣೆಯಿಂದ ಥಳಿಸಿದರು. ಅನಂತರ ಗುಡಿಸಲಿಗೆ ಬೆಂಕಿ ಹಚ್ಚಿದರು. ಇಬ್ಬರು ಮಕ್ಕಳನ್ನು ಜೀವಂತ ದಹಿಸಲು ಪ್ರಯತ್ನಿಸಿದರು ಎಂದು ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ತಾಯಿ ಆರೋಪಿಸಿದ್ದಾರೆ.

‘ಸಂತ್ರಸ್ತೆಯ ಚಿಕ್ಕಪ್ಪ ಹಾಗೂ ಅಜ್ಜ ಕೂಡ ಆರೋಪಿಗಳ ಜೊತೆಗಿದ್ದರು. ಇವರು ಕೊಡಲಿಯಿಂದ ಆಕೆಯ ತಂದೆಯ ಮೇಲೆ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೂರ್ವ ವಿಭಾಗದ ಸರ್ಕಲ್‌ ಇನ್‌ಸ್ಪೆಕ್ಟರ್‌ ಸಂತೋಷ್‌ ಸಿಂಗ್‌ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2022 ಫೆಬ್ರವರಿ 13ರಂದು ಉನ್ನಾವೊ ಗ್ರಾಮದಲ್ಲಿ ಐವರು ಯುವಕರು ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅದೇ ವರ್ಷ ಸೆಪ್ಟಂಬರ್‌ನಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಪ್ರಕರಣದಲ್ಲಿ ಅಮನ್, ಅರುಣ್ ಹಾಗೂ ಸತೀಶ್‌ಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು.

Donate Janashakthi Media

Leave a Reply

Your email address will not be published. Required fields are marked *