5 ಹುಲಿಗಳ ಅಸಹಜ ಸಾವಿನ ಪ್ರಕರಣ: ಡಿಸಿಎಫ್ ಚಕ್ರಪಾಣಿ ಅಮಾನತು

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ ಡಿಸಿಎಫ್ ಚಕ್ರಪಾಣಿ ಅವರನ್ನು ಅಮಾನತುಪಡಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಉನ್ನತ ಮಟ್ಟದ ವಿಚಾರಣಾ ಸಮಿತಿಯ ಪ್ರಾಥಮಿಕ ವರದಿ ಪ್ರಕಾರ, ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಮೇಲ್ನೋಟಕ್ಕೆ ಡಿಸಿಎಫ್ ಚಕ್ರಪಾಣಿ ಅವರ ಕರ್ತವ್ಯಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ವಿ. ಪ್ರಸನ್ನಕುಮಾರ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಏಪ್ರಿಲ್ ತಿಂಗಳಾಂತ್ಯಕ್ಕೇ ಹಣ ಬಿಡುಗಡೆಯಾಗಿದ್ದರೂ, ಜೂನ್ ತಿಂಗಳವರೆಗೆ ವೇತನ ಪಾವತಿಸದಿರುವುದು ಡಿಸಿಎಫ್ ಚಕ್ರಪಾಣಿ ಅವರ ಮೂಲಭೂತ ಕರ್ತವ್ಯ ಲೋಪವಾಗಿದ್ದು, ಇದು ಗಸ್ತು ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ.

ಇದನ್ನೂ ಓದಿ: ಚನ್ನರಾಯಪಟ್ಟಣ| ಬಲವಂತದ ಭೂಸ್ವಾಧೀನವನ್ನು ರದ್ದುಪಡಿಸಲು ಸಿಪಿಐ(ಎಂ) ಆಗ್ರಹ

ಹೊರಗುತ್ತಿಗೆ ಸಿಬ್ಬಂದಿ ಮಾರ್ಚ್ ನಿಂದ 3 ತಿಂಗಳ ವೇತನ ಪಾವತಿ ಆಗಿಲ್ಲ ಎಂದು ಜೂನ್ 23ರಂದು ಪ್ರತಿಭಟನೆ ನಡೆಸಿದ್ದರು. ಸಕಾಲದಲ್ಲಿ ವೇತನ ಸಿಗದೆ ಮುಂಚೂಣಿಯ ಸಿಬ್ಬಂದಿ ಕರ್ತವ್ಯ ವಿಮುಖರಾಗಲು ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ತಾಯಿ ಹುಲಿ ಮತ್ತು 4 ಮರಿ ಹುಲಿಗಳ ಸಾವಿಗೆ ಅತ್ಯಂತ ವಿಷಕಾರಿ ರಾಸಾಯನಿಕ ಕ್ರಿಮಿನಾಶಕ ಕಾರಣ ಎಂಬುದು ಹುಲಿಗಳ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಗಸ್ತು ಸಿಬ್ಬಂದಿಗೆ ಗುತ್ತಿಗೆದಾರನ ಮೂಲಕ ಮೂರು ತಿಂಗಳ ವೇತನ ಪಾವತಿ ಮಾಡಿಸುವಲ್ಲಿ ಡಿಸಿಎಫ್ ಚಕ್ರಪಾಣಿ ವಿಫಲರಾಗಿದ್ದಾರೆ.

ಉನ್ನತ ಮಟ್ಟದ ತನಿಖಾ ಸಮಿತಿಯು ಅರಣ್ಯ, ಪರಿಸರ ಇಲಾಖೆಗೆ ಕಳುಹಿಸುರುವ ವರದಿಯಲ್ಲೂ ಡಿಸಿಎಫ್ ಕರ್ತವ್ಯ ನಿರ್ಲಕ್ಷ್ಯ ಕಾರಣ ಎಂದು ತಿಳಿಸಿದೆ. ಈ ಎಲ್ಲ ಅಂಶಗಳನ್ನೂ ಆಧರಿಸಿ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ. ಚಕ್ರಪಾಣಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ನೋಡಿ: ಎದೆಗೆ ನಾಟುವ ಸಿನಿಮಾ – ಹೆಬ್ಬುಲಿ ಕಟ್ – ಚಂದ್ರಪ್ರಭ ಕಠಾರಿ Janashakthi Media

Donate Janashakthi Media

Leave a Reply

Your email address will not be published. Required fields are marked *