ನವದೆಹಲಿ: 2021-22ರಲ್ಲಿ 12 ಕೇಂದ್ರೀಯ ನಿಧಿ ಪಡೆಯುವ ತಾಂತ್ರಿಕ ಸಂಸ್ಥೆಗಳು ಒಬ್ಬನೇ ಒಬ್ಬ ದಲಿತ ಸಂಶೋಧನಾ ವಿದ್ಯಾರ್ಥಿಗೆ ಪ್ರವೇಶ ನೀಡಿಲ್ಲ ಮತ್ತು 21 ಶಿಕ್ಷಣ ಸಂಸ್ಥೆಗಳು ಒಬ್ಬನಾದರೂ ಆದಿವಾಸಿ ಸಂಶೋಧನಾ ವಿದ್ಯಾರ್ಥಿಗೆ ಪ್ರವೇಶ ನೀಡಿಲ್ಲ.
ಕೇಂದ್ರೀಯ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಸಂಶೋಧಕರ ಸಂಖ್ಯೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಸಂಸದ ಡಾ. ವಿ ಶಿವದಾಸನ್ ಅವರ ಪ್ರಶ್ನೆಗೆ ಉತ್ತರಿಸುತ್ತ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಅವರಿಂದ ಈ ಆಘಾತಕಾರಿ ಮಾಹಿತಿ ಬಯಲಿಗೆ ಬಂದಿದೆ. ಈ ಅಂಕೆ-ಸಂಖ್ಯೆ ಉನ್ನತ ಶಿಕ್ಷಣದಲ್ಲಿನ ಸಾಮಾಜಿಕ ಆರ್ಥಿಕ ಎಷ್ಟೊಂದು ತಾರತಮ್ಯಗಳಿವೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತವೆ ಎಂದು ಶಿವದಾಸನ್ ಹೇಳುತ್ತಾರೆ.
ಈ ಎಲ್ಲಾ ಸಂಸ್ಥೆಗಳಲ್ಲಿ ಬಹಳಷ್ಟು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳಿಗೆ ಸೇರಿದ ಅರ್ಹ ಅರ್ಜಿದಾರರು ಇದ್ದರು ಎಂಬುದು ಸರ್ಕಾರದ ಉತ್ತರದಿಂದಲೇ ತಿಳಿಯುತ್ತದೆ. ಸಂಶೋಧನೆಯ ಪ್ರವೇಶಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿಯನ್ನು ಐಐಎಂಗಳು ಜಾರಿಗೆ ತಂದಿಲ್ಲ ಎಂಬುದು ಈ ಉತ್ತರದಲ್ಲಿ ಸ್ಪಷ್ಟವಾಗಿದೆ, ಅಲ್ಲದೆ ಇವು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ಯಾರನ್ನೂ ಸೇರಿಸಿಕೊಂಡಿಲ್ಲ ಎಂಬುದೂ ತಿಳಿದು ಬರುತ್ತದೆ.
ಭಾರತದ ಉನ್ನತ ಶಿಕ್ಷಣ ಕ್ಷೇತ್ರವು ಇನ್ನೂ ಬೃಹತ್ ಪ್ರಮಾಣದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯಿಂದ ಮುಕ್ತವಾಗಿಲ್ಲ. ಈ ಅಂಕಿಅಂಶಗಳು ಸಾಮಾಜಿಕ ನ್ಯಾಯದತ್ತ ತೀವ್ರವಾದ ಪ್ರಯತ್ನಗಳನ್ನು ನಡೆಸಬೇಕಾದ ಅಗತ್ಯವನ್ನು ತೋರಿಸುತ್ತವೆ ಎಂದು ಡಾ ವಿ ಶಿವದಾಸನ್ ಹೇಳುತ್ತಾರೆ.