ಹಾಸನ: ತೆಂಗು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ, ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ 20,000ರೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಆಗ್ರಹಿಸಿ, ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಇಂದು ಜುಲೈ-05 ಮೈಸೂರಿನಲ್ಲಿ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ, ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್, ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಹಕ್ಕೊತ್ತಾಯ ಸಲ್ಲಿಸಲಾಯಿತು.
ಕೊಬ್ಬರಿ ಬೆಲೆ ತೀವ್ರವಾಗಿ ಕುಸಿದಿರುವ ಹಾಗೂ ತೆಂಗಿನ ಬೆಳೆಗಾರರು ಸಂಕಷ್ಟದಲ್ಲಿರುವ ಇಂದಿನ ಸಂದರ್ಭದಲ್ಲಿ ತೆಂಗು ಬೆಳೆಗಾರರ ಸಮಸ್ಯೆಯನ್ನು ಮತ್ತು ಹಕ್ಕೊತ್ತಾಯಗಳನ್ನು ತಮ್ಮ ಗಮನಕ್ಕೆ ತರಲು ಸಂಯುಕ್ತ ಹೋರಾಟ – ಕರ್ನಾಟಕ ಬಯಸುತ್ತದೆ ಎಂದು . ವಿಶ್ವದಾದ್ಯಂತ ಪ್ರಸಿದ್ಧವಾಗಿರುವ ಉಂಡೆ ಕೊಬ್ಬರಿಯ ಬೆಲೆ ರೂ.7000 ಕ್ಕೆ ಕುಸಿದಿದೆ. ಕರ್ನಾಟಕದಲ್ಲಿ 2.18 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ಕೊಬ್ಬರಿಯನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಅವರಿಗೆ ಬೆಲೆ ಕುಸಿತವು ತೀವ್ರ ಸಂಕಷ್ಟವನ್ನು ಉಂಟು ಮಾಡುತ್ತದೆ. ಏಕೆಂದರೆ, 2.18 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿಯಲ್ಲಿ 1.75 ಲಕ್ಷ ಮೆಟ್ರಿಕ್ ಟನ್ ಇನ್ನೂ ರೈತರ ಬಳಿಯೇ ಇದೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ನೆಫೆಡ್ ಮೂಲಕ ಖರೀದಿ ಕೇಂದ್ರದಲ್ಲಿ ಖರೀದಿಯನ್ನು ಆಗಸ್ಟ್ 25 ರವರೆಗೆ ವಿಸ್ತರಿಸುವುದು ಸ್ವಾಗತಾರ್ಹ. ಆದರೆ ಅಷ್ಟರೊಳಗೆ ಕೊಬ್ಬರಿ ತರಲು ರೈತರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಕನಿಷ್ಟ ಇನ್ನೂ ಮೂರು ತಿಂಗಳು ವಿಸ್ತರಿಸಬೇಕು. ಜೊತೆಗೆ ನೋಂದಣಿ ಮಾಡಲು ಸಾಧ್ಯವಾಗದ ರೈತರು ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಹೊಸ ನೋಂದಣಿಯನ್ನು ಮತ್ತೆ ಆರಂಭಿಸಬೇಕು. ರಾಜ್ಯ ಸರ್ಕಾರ ಚಳುವಳಿಯ ಒತ್ತಡದಿಂದ ರೂ.1.250 ಪ್ರೋತ್ಸಾಹ ಧನ ನೀಡುತ್ತಿರುವುದು ಸಂತೋಷದ ಸಂಗತಿ. ಆದರೆ ಅದು ಪೂರ್ವಾನ್ವಯವಾಗುವುದಿಲ್ಲ. ಹಾಗಾಗಿ ಕೊಬ್ಬರಿ ಖರೀದಿಯನ್ನು ಮುಂದುವರೆಸದಿದ್ದರೆ ರೈತರಿಗೆ ಯಾವ ಅನುಕೂಲವೂ ಆಗುವುದಿಲ್ಲ ಎಂದು ಪ್ರತಿಭಟನೆಕಾರರು ದೂರಿದರು.
ಕಳೆದ ಐದಾರು ವರ್ಷಗಳಿಂದ ಒಣಬರ ಮತ್ತು ಹಸಿಬರಗಳಿಗೆ ತೆಂಗಿನ ಮರಗಳೂ ಧರೆಗುರುಳಿವೆ. ತೆಂಗು ಬೆಳೆಗಾರರು ನಷ್ಟ ಅನುಭವಿಸಿದರು. ಇದರ ಜೊತೆಗೆ ಕಪ್ಪು/ಕೆಂಪು ಮೂತಿ ಕೀಟಗಳ ಬಾಧೆ. ಬೊಡ್ಡೆ ರಸ ಸೋರುವ ರೋಗ, ಕಪ್ಪು ಚುಕ್ಕೆ ರೋ, ಗರಿ ಉದುರುವ ರೋಗಗಳಿಗೆ ತೆಂಗಿನಮರಗಳು ಬಲಿಯಾಗುತ್ತಿವೆ. ಇದರಿಂದ ತೆಂಗು ಬೆಳೆಗಾರರು ಎಲ್ಲಾ ದಿಕ್ಕುಗಳಿಂದಲೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆಂದು ಹೇಳಿದ ಕೇಂದ್ರ ಸರ್ಕಾರ ಹೊರದೇಶಗಳಿಂದ ತೆಂಗು, ಕೊಬ್ಬರಿ, ತೆಂಗಿನೆಣ್ಣೆ, ಮುಂತಾದ ತೆಂಗಿನ ಉತ್ಪನ್ನಗಳನ್ನು ಮತ್ತು ತಾಳೆ ಎಣ್ಣೆ, ಸೋಯಾ ಎಣ್ಣೆಗಳಂತಹ ಖಾದ್ಯ ತೈಲಗಳನ್ನು ಆಮದು ಮಾಡಿಕೊಂಡು ತೆಂಗು ಬೆಳೆಯುವ ರೈತರನ್ನು ಬೀದಿಪಾಲಾಗುವಂತೆ ಮಾಡಿದೆ. ಶೂನ್ಯ ತೆರಿಗೆ ಆಮದ ವ್ಯಾಪಾರವನ್ನು 2024 ರ ಮಾರ್ಚ್ ತಿಂಗಳವರೆಗೆ ಮೂರು ಬಾರಿ ವಿಸ್ತರಿಸಿ ತೆಂಗು ಬೆಳೆಗಾರರಿಗೆ ಬರೆ ಎಳೆಯುತ್ತಿದೆ ಎಂದು ರೈತರು ಆರೋಪಿಸಿದರು.
ಡಾ.ಸ್ವಾಮಿನಾಥನ್ ವರದಿಯಂತೆ ಉತ್ಪಾದನಾ ವೆಚ್ದಕ್ಕೆ ಶೇ.50 ರಷ್ಟು ಸೇರಿಸಿ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯ ರೂ.16.730 ನಿಗದಿಪಡಿಸಬೇಕೆಂದು ಶಿಫಾರಸ್ಸು ಮಾಡಿರುವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಕೇವಲ ರೂ.11.750 ಕ್ಕೆ ಸೀಮಿತವಾಗಿದೆ. ಜೊತೆಗೆ ರೈತರು ಬೆಳೆದ ಎಲ್ಲಾ ಬೆಳೆಯನ್ನು ತೆಗೆದುಕೊಳ್ಳದೆ ಕೇವಲ ಶೇ.25 ರಷ್ಟು ಮಾತ್ರ ಖರೀದಿ ಮಾಡುವುದರಿಂದ ರೈತರು ದಲ್ಲಾಳಿಗಳ ಬಲೆಗೆ ಬೀಳಲೇ ಬೇಕಾಗಿದೆ. ದುರಂತವೆಂದರೆ, ಕೇಂದ್ರ ಸರ್ಕಾರ ಖರೀದಿಸುವಷ್ಟು ಪ್ರಮಾಣದ ಕೊಬ್ಬರಿಯನ್ನು ರೈತರಿಂದ ಕೊಳ್ಳಲು ಅಗತ್ಯವಿರುವಷ್ಟು ಖರೀದಿ ಕೇಂದ್ರಗಳಿಲ್ಲ. ಕೊಬ್ಬರಿ ದಾಸ್ತಾನು ಮಾಡಲು ವ್ಯವಸ್ಥೆಗಳಿಲ್ಲ. ಇದರಿಂದಾಗಿಯೂ ರೈತರು ಖರೀದಿ ಕೇಂದ್ರದಲ್ಲಿ ಮಾರಲು ಸಾಧ್ಯವಾಗುತ್ತಿಲ್ಲ.ಇದಕ್ಕೆ ಸೂಕ್ತ ನಫೆಡ್ ಮಾರ್ಗಸೂಚಿಗಳಿಲ್ಲ.
ತೆಂಗಿನ ಉತ್ಪನ್ನಗಳನ್ನು ಆಹಾರ ಪದಾರ್ಥಗಳನ್ನು ಮತ್ತು ಸೋಪು, ಡಿಟೆರ್ಜೆಂಟ್, ಶಾಂಪೂ, ಸಿಂಘೆಟಿಕ್ ರಬ್ಬರ್, ಗ್ಲಿಸರೀನ್ ತಯಾರಿಸಲು ಉಪಯೋಗಿಸುತ್ತಾರೆ. ಅಲ್ಲದೆ ಅಲಂಕಾರಿಕ ವಸ್ತುಗಳು, ವೈದ್ಯಕೀಯ ಹಾಗೂ ಇನ್ನಿತರ ಉದ್ದೇಶಗಳಿಗೆ ಉಪಯೋಗಿಸುತ್ತಾರೆ. ಆದರೆ ಸರ್ಕಾರ ಪರ್ಯಾಯವಾಗಿ ಬಳಸಬಹುದಾದ ಅಗ್ಗದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದರಿಂದ ತೆಂಗಿನ ಉತ್ಪನ್ನಗಳಿಗೆ ಇಳಿಮುಖವಾಗಿದೆ. ಉಪಉತ್ಪನ್ನಗಳಾದ ನಾರು, ಚಿಪ್ಪು, ತಿರುಳು, ಗರಿಗಳು ಉತ್ಪಾದಿಸುವ ಘಟಕಗಳು ಸರ್ಕಾರದ ಬೆಂಬಲವಿಲ್ಲದೆ, ಬದಲಿಗೆ ಅವುಗಳಿಗೆ ಹೊಡೆತ ನೀಡುವ ನೀತಿಗಳಿಂದಾಗಿ ಮುಚ್ಚುತ್ತಿವೆ. ಇದೂ ಸಹ ತೆಂಗಿನ ಉತ್ಪನ್ನಗಳಿಗೆ ಬೇಡಿಕೆ ಕುಸಿಯಲು ಕಾರಣವಾಗಿವೆ. ತೆಂಗಿನಮರಗಳನ್ನು ವಾಯುಗುಣ ವೈಪರೀತ್ಯಗಳಿಂದ ರಕ್ಷಿಸುವ ಯಾವ ಕ್ರಮವೂ ಸರ್ಕಾರದಲ್ಲಿಲ್ಲ. ಹಾಗಾಗಿ ತೆಂಗಿನ ಮೇಲೆ ಬೀರುವ ಅವುಗಳ ದುಷ್ಪರಿಣಾಮದಿಂದಾಗಿ ತೆಂಗು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಭೌಗೋಳಿಕವಾಗಿ ವಿಶೇಷ ಲಕ್ಷಣಗಳಿರುವ ಕೊಬ್ಬರಿ ಉತ್ಪನ್ನಗಳಿಗೆ ವಿಶೇಷ ಉತ್ತೇಜನದ ಅಗತ್ಯವಿದೆ ಎಂದರು
ಹೀಗೆ, ತೆಂಗು ಬೆಳೆಗಾರರು ತೀವ್ರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಕೆಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಸಕಾಲದಲ್ಲಿ ತೆಗೆದುಕೊಳ್ಳದಿದ್ದರೆ, ತೆಂಗು ಬೆಳೆಗಾರರು ನೆಲಕಚ್ಚುತ್ತಾರೆ. ಆದ್ದರಿಂದ ಅವರ ಸಮಸ್ಯೆಗಳಿಗೆ ಪರಿಹಾರವಾಗಿ ಕೆಳಗಿನ ಹಕ್ಕೊತ್ತಾಯಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕು. ಆ ಮೂಲಕ ತೆಂಗು ಬೆಳೆಗಾರರ ಹಿತವನ್ನು ರಕ್ಷಿಸಬೇಕೆಂದು ಸಂಯುಕ್ತ ಹೋರಾಟ – ಕರ್ನಾಟಕ ಈ ಮೂಲಕ ಆಗ್ರಹಿಸುತ್ತದೆ ಎಂದರು.
ಹಕ್ಕೊತ್ತಾಯಗಳು:
- ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ ರೂ.20,000 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು ಮತ್ತು ಅದನ್ನು ಕಾನೂನುಬದ್ಧಗೊಳಿಸಬೇಕು.
- ಎಳನೀರು ಮತ್ತು ತೆಂಗಿನಕಾಯಿಗೂ ಕನಿಷ್ಠ ಬೆಂಬಲ ಬೆಲೆ ನಿಗಿಪಡಿಸಬೇಕು.
- ಪ್ರಮಾಣ ಮಿತಿ ಹೇರದೇ ತೆಂಗಿನ ಉತ್ಪನ್ನವನ್ನು ಸಂಪೂರ್ಣವಾಗಿ ನೆಫೆಡ್ ಮೂಲಕವೇ ಖರೀದಿಸಬೇಕು ಮತ್ತು ಅದಕ್ಕೆ ಅವಶ್ಯಕತೆಯಿರುವಷ್ಟು ಹಣ ಬಿಡುಗಡೆ ಮಾಡಬೇಕು.
- ಮುಕ್ತ ಮಾರುಕಟ್ಟೆಯಡಿಯಲ್ಲಿ ತೆಂಗಿನ ಉತ್ಪನ್ನ ಮತ್ತು ಖಾದ್ಯ ತೈಲ ಆಮದನ್ನು ಕೂಡಲೇ ನಿಲ್ಲಿಸಬೇಕು.
- ಕೇಂದ್ರ ಸರ್ಕಾರದ ಎಣ್ಣೆ ಉಪಯೋಗಿಸುವ ಕಾರ್ಖಾನೆಗಳು ಹಾಗೂ ಸಂಸ್ಥೆಗಳು ತೆಂಗಿನೆಣ್ಣೆಯನ್ನು ಉಪಯೋಗಿಸಬೇಕು.
- ಪೂರ್ಣ ಪ್ರಮಾಣದ ಖರೀದಿಯನ್ನು ದಾಸ್ತಾನು ಮಾಡಲು ಬೃಹತ್ ಗೋಡೋನುಗಳನ್ನು ಮತ್ತು ಬಹಳ ಕಾಲ ಕಾಪಾಡಲು ಶೀತಲೀಕರಣ ವ್ಯವಸ್ಥೆಯನ್ನು ಮಾಡಬೇಕು.
- ಖರೀದಿ ಕೇಂದ್ರವನ್ನು ವರ್ಷವಿಡೀ ತೆರೆದು, ನಿರಂತರವಾಗಿ ಕೊಬ್ಬರಿ ಖರೀದಿಸಬೇಕು ಮತ್ತು ಅದಕ್ಕೆ ತಕ್ಕಂತೆ ನಫೆಡ್ ಮಾರ್ಗಸೂಚಿಗಳನ್ನು ರೂಪಿಸಬೇಕು.
- ಜೀವಪರಿಸರಾತ್ಮಕ, ವಾಯುಗುಣ ವೈಪರೀತ್ಯ ತಾಳಿಕೆ ಕೃಷಿ ಪದ್ಧತಿಯನ್ನು ರೂಪಿಸಿ ಜಾರಿಗೊಳಿಸಿ.
- ಮೌಲ್ಯವರ್ಧಿತ ತೆಂಗಿನ ಉತ್ಪನ್ನಗಳಾದ ನಾರು, ಚಿಪ್ಪು, ನೀರಾ, ಇದ್ದಿಲು, ಎಳನೀರು, ತಿರುಳು, ಮರ, ಗರಿಗಳನ್ನು ತಯಾರಿಸುವ ಕಾರ್ಖಾನೆಗಳಿಗೆ ಪ್ರೋತ್ಸಾಹ ಕೊಡಬೇಕು ಮತ್ತು ಅದನ್ನು ಮಾರುಕಟ್ಟೆ ಮಾಡಬೇಕು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಮಹೇಶ್ ಪ್ರಭು, ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್, ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚಿಕ್ಕಣ್ಣೇಗೌ,ಕಾರ್ಯದರ್ಶಿ ಜಗದೀಶ್ ಸೂರ‌್ಯ, ರೈತ ಸಂಘದ ಮರಂಕಯ್ಯ,ಮಹೇಶ್,ಮರಳಯ್ಯನ ಕೊಪ್ಪಲು ಚಂದ್ರಶೇಖರ್, ಮಹದೇವ, ಸಿದ್ದಯ್ಯ, ಮುಂತಾದವರು ಭಾಗವಹಿಸಿದ್ದರು.