-ಸಿ.ಸಿದ್ದಯ್ಯ
ಸೋಮನಾಥನ್ ಸಮಿತಿ ಶಿಫಾರಸು ಮಾಡಿದ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಮೇಲ್ನೋಟಕ್ಕೆ ಉತ್ತಮವೆಂದು ಕಂಡರೂ ಈ ಯೋಜನೆ ನಿವೃತ್ತಿ ಹೊಂದಿದವರಿಗೆ ಕಂಟಕವಾಗಿದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 30 ವರ್ಷಗಳ ಸೇವೆ ಸಲ್ಲಿಸಿ, ನಿವೃತ್ತಿಯಾದ ನಂತರ ಅವರ ಜೀವನ ಮತ್ತು ಕುಟುಂಬಕ್ಕೆ ಪಿಂಚಣಿ ಖಾತರಿಯಾಗಿದೆ. ಈ ಪಿಂಚಣಿ ಪಡೆಯುವುದು ಅವರ ಹಕ್ಕು ಹೊರತು ಭಿಕ್ಷೆಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈಗ ಒಕ್ಕೂಟ ಸರ್ಕಾರ ಪಿಂಚಣಿ ಕೊಡುತ್ತೇವೆ ಎನ್ನುತ್ತ ಅದಕ್ಕಾಗಿ ನೌಕರನ ಬಳಿ ಪಾಲು ಕೇಳುತ್ತಿದೆ. ಆದ್ದರಿಂದಲೇ ಕಾರ್ಮಿಕ ಸಂಘಟನೆಗಳು ಈ ಏಕೀಕೃತ ಪಿಂಚಣಿ ಯೋಜನೆಯನ್ನು ವಿರೋಧಿಸುತ್ತಿವೆ. ಈ ನೀತಿಯ ಹಲವು ಅಂಶಗಳಲ್ಲಿ ನಿಜವಾದ ಸ್ಪಷ್ಟತೆ ಇಲ್ಲ. ಈ ಯೋಜನೆಯು ಭವಿಷ್ಯದಲ್ಲಿ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುವುದು ಖಚಿತ.
ಆಗಸ್ಟ್ 24, 2024 ರಂದು ಕೇಂದ್ರ ಸಚಿವ ಸಂಪುಟ ಮಂಜೂರು ಮಾಡಿರುವ ಯುಪಿಎಸ್ (ಏಕೀಕೃತ ಪಿಂಚಣಿ ಯೋಜನೆ)ಯು ಒಪಿಎಸ್ ಎಂದು ಕರೆಯಲ್ಪಡುವ ಹಳೆಯ ಪಿಂಚಣಿ ಯೋಜನೆ ಪಡೆಯುವ ಸರ್ಕಾರಿ ನೌಕರರ ಸಂಪೂರ್ಣ ಹಕ್ಕನ್ನು ವಂಚಿಸುವ ಮತ್ತೊಂದು ನಂಬಲರ್ಹವಲ್ಲದ ಹತಾಶ ಪ್ರಯತ್ನವಾಗಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿ ಎಸ್ ) ವಿರೋಧಿಸಿ ಮತ್ತು ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರುಸ್ಥಾಪನೆಗಾಗಿ ಸರ್ಕಾರಿ ನೌಕರರ ದೊಡ್ಡ ಪ್ರಮಾಣದಲ್ಲಿ ನಡೆದ ಹೋರಾಟಗಳು ಮತ್ತು ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಒಕ್ಕೂಟಗಳ ಜಂಟಿ ವೇದಿಕೆಯು ಅಂತಹ ಹೋರಾಟಗಳಿಗೆ ನೀಡಿದ ಸಂಪೂರ್ಣ ಬೆಂಬಲ ಇವು ಬಿಜೆಪಿ ಆಳ್ವಿಕೆ ಎನ್ ಪಿ ಎಸ್ ಗೆ ಅಂಟಿಕೊಳ್ಳುವ ತನ್ನ ನಿಲುವನ್ನು ಬದಲಾಯಿಸುವಂತೆ ಮಾಡಿವೆ. ಆದರೆ, ‘ಯುಪಿಎಸ್’ ಎಂಬ ಹೆಸರಿನಲ್ಲಿ ಅದು ಮುಂದಿಟ್ಟಿರುವ ಪ್ಯಾಕೇಜ್ ಪಿಂಚಣಿಯಾಗಿ ಸರ್ಕಾರಿ ನೌಕರರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ್ದನ್ನು ವಂಚಿಸುವ ಅದೇ ಮೋಸದ ತಂತ್ರವನ್ನು ಪ್ರತಿಬಿಂಬಿಸುತ್ತದೆ.
ದೇಶಾದ್ಯಂತ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ದೊಡ್ಡ ಮಟ್ಟದಲ್ಲಿ ನಡೆಸಿದ ಪ್ರತಿಭಟನೆ, ಇದರಿಂದಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲೆ ಬೀರಿದ ಇದರ ಪರಿಣಾಮ, ಇವೆಲ್ಲದರಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ಈಗ ‘ಯುಪಿಎಸ್’ ತರುವ ಮೂಲಕ ಜನರಿಗೆ ಮತ್ತೊಮ್ಮೆ ಮಂಕುಬೂದಿ ಎರಚಲು ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಮುಂದಾಗಿದೆ.
ವಿಶ್ವಬ್ಯಾಂಕಿನ ಆದೇಶದ ಮೇರೆಗೆ
ಒಪಿಎಸ್(ಹಳೆಯ ಪಿಂಚಣಿ ಯೋಜನೆ)ನಲ್ಲಿ ನೌಕರರು ದೇಣಿಗೆ ನೀಡಬೇಕಾಗಿರಲಿಲ್ಲ. ಅದು ಖಚಿತ ಮೊತ್ತದ ಪಿಂಚಣಿಯಾಗಿತ್ತು. ನಿವೃತ್ತಿ ಹೊಂದಿದ ತನ್ನ ನೌಕರರಿಗೆ ನೀಡುವ ‘ಕೊಡುಗೆ ರಹಿತ ಪಿಂಚಣಿ’ ಯೋಜನೆಗಳ ಹೊರೆಯಿಂದ ತಪ್ಪಿಸಿಕೊಳ್ಳುವ ದೃಷ್ಟಿಯಿಂದ ಮತ್ತು ವಿಶ್ವಬ್ಯಾಂಕಿನ ಆದೇಶದ ಮೇರೆಗೆ ವಾಜಪೇಯಿ ನೇತೃತ್ವದ ಅಂದಿನ ಎನ್ ಡಿ ಎ ಸರ್ಕಾರ, 2004 ರಿಂದ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್.)ಯನ್ನು ಒಂದು ಕಾರ್ಯಾಂಗದ ಆದೇಶದ ಮೂಲಕ, 2014ರ ಜನವರಿ ಒಂದರ ನಂತರ ನೇಮಕಾತಿ ಹೊಂದಿದವರಿಗೆ ಅನ್ವಯವಾಗುವಂತೆ ಗುಟ್ಟಾಗಿ ಜಾರಿಗೆ ತಂದಿತು. ಈ ನೀತಿಯ ನಂತರ, ನೌಕರರು ತಾವು ಸೇವೆಯಲ್ಲಿರುವಾಗಲೇ ಪಿಂಚಣಿ ನಿಧಿಗಾಗಿ ಉದ್ಯೋಗಿಯಿಂದ ಶೇ.10 ಮತ್ತು ಉದ್ಯೋಗದಾತರಿಂದ ಶೇ.10 ರಷ್ಟನ್ನು ತೆಗೆದುಕೊಂಡು ಷೇರು ಮಾರುಕಟ್ಟೆಯಲ್ಲಿ ಹಾಕಲು ಪ್ರಾರಂಭಿಸಿದರು. ಮಾರುಕಟ್ಟೆಯ ಏರಿಳಿತಗಳ ಆಧಾರದ ಮೇಲೆ, ಉದ್ಯೋಗಿ ನಿವೃತ್ತರಾದಾಗ ಅಥವಾ ಮರಣಹೊಂದಿದಾಗ, ಅದರ ಶೇಕಡಾ 60 ಮೊತ್ತವು ಅವರ ಖಾತೆಯಲ್ಲಿ ಇರುತ್ತದೆ. ಉಳಿದವುಗಳನ್ನು ಮ್ಯೂಚುವಲ್ ಫಂಡ್ ಗಳಾಗಿ ಖರೀದಿಸಬೇಕು. ಆದರೆ, ಪಿಂಚಣಿ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ. ಅದು ಮಾರುಕಟ್ಟೆಗೆ ಅನುಗುಣವಾಗಿ ಬದಲಾಗುತ್ತದೆ. ಈ ನೀತಿಯು 2004 ರ ನಂತರ ಉದ್ಯೋಗಗಳಿಗೆ ಸೇರಿದ ಎಲ್ಲರಿಗೂ ಅನ್ವಯಿಸುತ್ತದೆ.
ಎಂಟು ಅಖಿಲ ಭಾರತ ಮುಷ್ಕರಗಳು
ಎನ್ ಪಿ ಎಸ್ ವಿರೋಧಿಸಿ ಆ ದಿನದಿಂದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಹೋರಾಟ ನಡೆಸುತ್ತಲೇ ಬಂದಿವೆ. ಆದರೂ, ಫೆಬ್ರವರಿ 2014ರಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ ಡಿಎ) ಕಾಯಿದೆ 2013ರ ಅಡಿಯಲ್ಲಿ ಈ ಬಗ್ಗೆ ಅಧಿಸೂಚನೆ ಹೊರಡಿಸಿ ಎನ್ ಪಿ ಎಸ್ ಅನ್ನು ಶಾಸನಬದ್ಧಗೊಳಿಸಲಾಯಿತು. ಹಳೆಯ ಪಿಂಚಣಿಯನ್ನು ಪುನಃಸ್ಥಾಪಿಸಲು ಮತ್ತು CPS ರದ್ದುಗೊಳಿಸಲು, 2004 ರಿಂದ ದೇಶಾದ್ಯಂತ ಎಂಟು ಅಖಿಲ ಭಾರತ ಮುಷ್ಕರಗಳು ನಡೆದಿವೆ. ಇದರಲ್ಲಿ ಲಕ್ಷಾಂತರ ಕಾರ್ಮಿಕರು, ನೌಕರರು, ಶಿಕ್ಷಕರು ಭಾಗವಹಿಸಿದ್ದರು. ಕರ್ನಾಟದಲ್ಲಿಯೂ ಶಿಕ್ಷಕರು, ನೌಕರರು ಹಳೆ ಪಿಂಚಣಿಗೆ ಆಗ್ರಹಿಸಿ ನಾನಾ ರೀತಿಯ ಹೋರಾಟಗಳನ್ನು ನಡೆಸಿದ್ದಾರೆ.
ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರವು ಸಟ್ಟಾಕೋರ ಬಂಟ ಬಂಡವಾಳಶಾಹಿಯ ಹಿತಾಸಕ್ತಿಗಳನ್ನು ಕಾಪಾಡುವ ತನ್ನ ನವ ಉದಾರವಾದಿ ಧೋರಣೆಗೆ ಅನುಗುಣವಾಗಿ ಪ್ರಯೋಜನಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಈ ಯುಪಿಎಸ್ ಅನ್ನು ಮುಂದಿಟ್ಟಿದೆ. ಇದಕ್ಕೆ ಸರ್ಕಾರದಿಂದ ಪ್ರಸ್ತಾವಿಸಿರುವ ಶೇ. 4.5 ಹೆಚ್ಚುವರಿ ದೇಣಿಗೆ ‘ನಿರ್ವಹಣೆಯ ಅಡಿಯಲ್ಲಿರುವ ಆಸ್ತಿಗಳು’ (ಅಸೆಟ್ಸ್ ಅಂಡರ್ ಮ್ಯಾನೇಜ್ ಮೆಂಟ್-ಎಯುಎಂ) ಎಂದು ಹೇಳಲ್ಪಡುವ ಷೇರು ಮಾರುಕಟ್ಟೆಯಲ್ಲಿನ ತನ್ನ ಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನವಷ್ಟೇ. ಈಗಾಗಲೇ 2024ರ ಜುಲೈ 31ರ ವೇಳೆಗೆ ಈ ಎಯುಎಂ ಅಡಿಯಲ್ಲಿ 99,77,165 ಉದ್ಯೋಗಿಗಳ ಒಟ್ಟು 10,53,850 ಕೋಟಿ ರೂ.ಗಳನ್ನು ಹೂಡಲಾಗಿದೆ.
ಹಳೆಯ ಪಿಂಚಣಿ ಖಾತರಿ ಯೋಜನೆ
ವಾಸ್ತವವಾಗಿ ಒಪಿಎಸ್ (ಹಳೆಯ ಪಿಂಚಣಿ ಯೋಜನೆ) 2004 ರವರೆಗೆ ಜಾರಿಯಲ್ಲಿತ್ತು. ಇದನ್ನು ಟ್ರಿಪಲ್ ಬೆನಿಫಿಟ್ಸ್ ಸಿಸ್ಟಮ್ (ಮೂರನೇ ಸೌಲಭ್ಯ ವ್ಯವಸ್ಥೆ) ಎಂದು ಕರೆಯಲಾಗುತ್ತದೆ. ಅಂದರೆ ನಿಖರವಾದ ಪಿಂಚಣಿ, ಪಿಎಫ್, ಗ್ರಾಚ್ಯುಟಿ. ಈ ಮೂರು ಪ್ರತಿ ನಿವೃತ್ತ ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ. ಈ ಸೌಲಭ್ಯಗಳಿಗಾಗಿ ಉದ್ಯೋಗಿ ಯಾವುದೇ ಕೊಡುಗೆಯನ್ನು ಪಾವತಿಸಬೇಕಾಗಿಲ್ಲ. ನಿವೃತ್ತಿಯ ಸಮಯದಲ್ಲಿ ಮೂಲ ವೇತನದ ಶೇ. 50 ರಷ್ಟು ಖಾತರಿ ಪಿಂಚಣಿ, ಕಮ್ಯುಟೇಶನ್, ಗ್ರಾಚ್ಯುಟಿ, ಪಿ.ಎಫ್., ಆರೋಗ್ಯ ಕಾರ್ಡ್‌ಗಳು, ಉದ್ಯೋಗಿಗೆ ಪಿಂಚಣಿ ಮತ್ತು ಮರಣ ಹೊಂದಿದಲ್ಲಿ ಕುಟುಂಬಕ್ಕೆ ಪಿಂಚಣಿ ನೀಡಲಾಗುತ್ತದೆ. 70 ವರ್ಷಗಳ ನಂತರ ಹೆಚ್ಚುವರಿ ಪಿಂಚಣಿ ನೀಡಲಾಗುತ್ತದೆ. ಪಿ.ಎಫ್.ನಲ್ಲಿ ಠೇವಣಿಯಾಗಿರುವ ಮೊತ್ತವು ರಾಜ್ಯದ ಖಜಾನೆಯಲ್ಲಿ ಇರುತ್ತದೆ.
ಕೆಲ ರಾಜ್ಯಗಳಲ್ಲಿ ಹಳೆ ಪಿಂಚಣಿ
ಹಳೆಯ ಪಿಂಚಣಿ ಯೋಜನೆ ಬೇಕು, ಹೊಸ ಪಿಂಚಣಿ ಯೋಜನೆ ರದ್ದು ಮಾಡಬೇಕು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ವರ್ಷಗಳ ಕಾಲ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಜಾಬ್, ಜಾರ್ಖಂಡ್, ಹಿಮಾಚಲ ಪ್ರದೇಶ, ಅಸ್ಸಾಂ ಮತ್ತು ಒರಿಸ್ಸಾ ರಾಜ್ಯಗಳು ಸಿಪಿಎಸ್ (ಕೊಡುಗೆ ಪಿಂಚಣಿ ಯೋಜನೆ) ರದ್ದತಿಗೆ ಮುಂದಾಗಿವೆ. ಮತ್ತೆ ಕೆಲವು ರಾಜ್ಯಗಳು ಸಿಪಿಎಸ್ ಅನ್ನು ರದ್ದುಗೊಳಿಸುವುದಾಗಿ ಹೇಳುತ್ತವೆ. ಕರ್ನಾಟಕವೂ ಇತ್ತೀಚೆಗೆ ಹಲವು ಷರತ್ತುಗಳೊಂದಿಗೆ ಕೆಲವರಿಗೆ ಮಾತ್ರ ಸಿಗುವಂತೆ ಹಳೆಯ ಪಿಂಚಣಿ ಸೌಲಭ್ಯ ಕೊಡಲು ಮುಂದಾಗಿದೆ. ಮತ್ತು ಪಿಎಫ್‍ಆರ್ ಡಿಎ ಗೆ ರಾಜ್ಯ ಸರ್ಕಾರಿ ನೌಕರರ ದೇಣಿಗೆಗಳ ತಮ್ಮ ಪಾಲನ್ನು ರಾಜ್ಯ ಸರ್ಕಾರಗಳಿಗೆ ಮರುಪಾವತಿಸಲು ಒತ್ತಾಯಿಸುತ್ತಿವೆ. ಆದರೆ ಮೋದಿ ಸರ್ಕಾರವು ರಾಜ್ಯ ಸರ್ಕಾರಗಳ ಎಲ್ಲಾ ವಿನಂತಿಗಳನ್ನು ತಿರಸ್ಕರಿಸಿದೆ.
ಇದನ್ನು ಓದಿ : ಫೆಮಾ ನಿಯಮ ಉಲ್ಲಂಘನೆ: ಡಿಎಂಕೆ ಸಂಸದನಿಗೆ 908 ಕೋಟಿ ರೂ. ದಂಡ!
ಷೇರು ಮಾರುಕಟ್ಟೆಗೆ ಹಣ
ಇದಲ್ಲದೆ, ಉದ್ಯೋಗಿ ಎಷ್ಟು ದಿನಗಳವರೆಗೆ ಸೇವೆಯಲ್ಲಿದ್ದಾನೆ, ಸಂಪೂರ್ಣ ಪಿಂಚಣಿ ನಿಧಿಯನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಅಂದರೆ ಷೇರು ಮಾರುಕಟ್ಟೆಗೆ ಹಣ ನೀಡುವುದು ಸರ್ಕಾರದ ಮುಖ್ಯ ಉದ್ದೇಶ. ಈ ಯೋಜನೆಯ ಭಾಗವಾಗಿ, ಸರ್ಕಾರವು ತನ್ನ ಪಾಲನ್ನು ಇನ್ನೂ ನಾಲ್ಕೂವರೆ ಪ್ರತಿಶತದಷ್ಟು ಹೆಚ್ಚಿಸಿದೆ. ಷೇರು ಮಾರುಕಟ್ಟೆಯಲ್ಲಿ ಜುಲೈ 31ಕ್ಕೆ ಎನ್‌ಪಿಎಸ್ ಅಡಿಯಲ್ಲಿ 99,77,165 ಉದ್ಯೋಗಿಗಳ ರೂ.10,53,850 ಕೋಟಿ ಪಿಂಚಣಿ ನಿಧಿಯನ್ನು ಹೂಡಿಕೆ ಮಾಡಲು ಬಿಜೆಪಿ ಈ ನಿರ್ಧಾರ ಕೈಗೊಂಡಿರುವುದು ಸ್ಪಷ್ಟವಾಗಿದೆ. ಸರ್ಕಾರಕ್ಕೆ ಉದ್ಯೋಗಿಗಳ ಹಿತಕ್ಕಿಂತ ಕಾರ್ಪೊರೇಟ್‌ಗಳ ಅಗತ್ಯವೇ ಮುಖ್ಯ ಎಂಬುದನ್ನು ಇದು ತೋರಿಸುತ್ತದೆ. ಈ ನೀತಿಯಲ್ಲಿ, ನಿವೃತ್ತಿಯ ಸಮಯದಲ್ಲಿ ಪಾವತಿಸಿದ ಮೊತ್ತ, ಹೆಚ್ಚುವರಿ ಪಿಂಚಣಿ, ಆರೋಗ್ಯ ಕಾರ್ಡ್‌ಗಳು, ಭವಿಷ್ಯದ ಪರಿಷ್ಕರಣೆಗಳು ಮತ್ತು ತೆರಿಗೆ ಪ್ರಯೋಜನಗಳಂತಹ ಅಂಶಗಳ ಬಗ್ಗೆ ನಿಜವಾದ ಸ್ಪಷ್ಟತೆ ಇಲ್ಲ.
ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣದಲ್ಲಿ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಅದರ ನಂತರ ನಿರ್ಣಾಯಕ ರಾಜ್ಯಗಳಾದ ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಸತತ ಚುನಾವಣೆಗಳು ನಡೆಯುತ್ತಿವೆ. ಕಾಂಗ್ರೆಸ್ ಚುನಾವಣೆಯಲ್ಲಿ ಹಳೆಯ ಪಿಂಚಣಿ ಮರುಸ್ಥಾಪನೆಯನ್ನು ಪ್ರಮುಖ ವಿಷಯವಾಗಿ ಆರಿಸಿಕೊಂಡಿದೆ. ಅದಕ್ಕಾಗಿಯೇ ಬಿಜೆಪಿ ಈ ಯೋಜನೆಯನ್ನು ತರಾತುರಿಯಲ್ಲಿ ಒಪ್ಪಿಕೊಂಡಿದೆ. ಈ ಯೋಜನೆಯನ್ನು ಬಿಎಂಎಸ್ (ಆರೆಸ್ಸೆಸ್ ನ ಕಾರ್ಮಿಕ ಅಂಗವಾದ ಭಾರತೀಯ ಮಜ್ದೂರ್ ಸಭಾ) ಹೊರತುಪಡಿಸಿ ಎಲ್ಲಾ ರಾಷ್ಟ್ರೀಯ ಕಾರ್ಮಿಕ ಸಂಘಗಳು ವಿರೋಧಿಸಿವೆ. ಯುಪಿಎಸ್ ಅನ್ನು ಮುಂದಿಟ್ಟುಕೊಂಡು ಕೇಂದ್ರವು ನೌಕರರನ್ನು ದಾರಿ ತಪ್ಪಿಸುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘಟನೆಯಾದ ನ್ಯಾಷನಲ್ ಮೂವ್ ಮೆಂಟ್ ಫಾರ್ ಓಲ್ಡ್ ಪೆನ್ಶನ್ ಸ್ಕೀಮ್ ಘೋಷಿಸಿದೆ.
ಹೋರಾಟವೇ ದಾರಿ
ಹಳೆಯ ಪಿಂಚಣಿ ಖಾತರಿ ಯೋಜನೆ ನೌಕರರಿಗೆ ಆಕಸ್ಮಿಕವಾಗಿ ನೀಡಿದ ಖಾತರಿಯಲ್ಲ. ಅದು ಕಾರ್ಮಿಕರ ಸಮರಧೀರ ಹೋರಾಟಗಳ ಮೂಲಕ ಪಡೆದದ್ದು. ಯುಪಿಎಸ್ ಮೂಲಕ ನೌಕರರು ಮತ್ತೊಮ್ಮೆ ವಂಚನೆಗೆ ಸಿದ್ಧರಿಲ್ಲ. ಅದಕ್ಕಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಹಳೆಯ ಪಿಂಚಣಿ ವ್ಯವಸ್ಥೆಗಾಗಿ ತಮ್ಮ ಚಳುವಳಿಯನ್ನು ಮುಂದುವರೆಸಲು ಸಿದ್ಧತೆ ನಡೆಸಿದ್ದಾರೆ. ನೌಕರರ ಇತಿಹಾಸದಲ್ಲಿ ಮತ್ತು ಯಾವುದೇ ಕ್ಷೇತ್ರದ ಚಳವಳಿಯ ಇತಿಹಾಸದಲ್ಲಿ, ಹೋರಾಟದ ಮೂಲಕ ಗಳಿಸಿದ ಹಕ್ಕುಗಳು ಹೆಚ್ಚು ಕಾಲ ಉಳಿಯುತ್ತವೆ. ಹಳೆಯ ಪಿಂಚಣಿ ವ್ಯವಸ್ಥೆಯನ್ನು ಸಾಧಿಸುವುದು ಸಮಾಜದ ಅಂತಿಮ ಗುರಿಯಾಗಬೇಕು. ಆಡಳಿತಗಾರರ ನೀತಿಗಳ ವಿರುದ್ಧ ಹೋರಾಟ ನಡೆಯಬೇಕು. ಸಮುದಾಯಗಳು ಪರಸ್ಪರ ಶತ್ರುಗಳೆಂಬ ಧೋರಣೆ ಕೈಬಿಡಬೇಕು. ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರೆ ಪ್ರಯೋಜನವಿಲ್ಲ. ಇತಿಹಾಸದಲ್ಲಿ ಯಾರೂ ತಮ್ಮ ಸಮಸ್ಯೆಗಳನ್ನು ತಾವೊಬ್ಬರೇ ಪರಿಹರಿಸಿಲ್ಲ. ಎಲ್ಲರೂ ಒಗ್ಗೂಡಿದಾಗ ಮಾತ್ರ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯ ಎಂಬ ಪ್ರಜ್ಞೆ ಮೂಡಬೇಕು. ವೃದ್ಧಾಪ್ಯ ವೇತನ ಪಡೆಯಲು ಐಕ್ಯ ಚಳುವಳಿಗಳು ರೂಪುಗೊಳ್ಳಬೇಕು.
ಏನಿದು ಯುಪಿಎಸ್
ಎನ್ ಪಿ ಎಸ್ ವಿರೋಧಿಸಿ ನೌಕರರರು ನಡೆಸಿದ ಹೋರಾಟದ ಪರಿಣಾಮವಾಗಿ ಕೇಂದ್ರದ ಬಿಜೆಪಿ ಸರ್ಕಾರವು ಮಾರ್ಚ್ 2023ರಲ್ಲಿ ಸೋಮನಾಥನ್ ಸಮಿತಿಯನ್ನು ನೇಮಿಸಿತು. ಒಂದು ವರ್ಷದ ನಂತರ, ಕೇಂದ್ರ ಸಚಿವ ಸಂಪುಟವು ತನ್ನ ಶಿಫಾರಸುಗಳ ಪ್ರಕಾರ ಆಗಸ್ಟ್ 24, 2024 ರಂದು ಏಕೀಕೃತ ಪಿಂಚಣಿ ಯೋಜನೆ(ಯುಪಿಎಸ್)ಯನ್ನು ಅನುಮೋದಿಸಿತು.
ಯುಪಿಎಸ್ ಹಳೆಯ ಪಿಂಚಣಿಯಂತೆ ತೋರುತ್ತದೆ, ಆದರೆ ನೌಕರರಿಂದ ಪಾಲು ಪಡೆಯುವಿಕೆ ಮುಂದುವರಿಯುತ್ತದೆ. ಯುಪಿಎಸ್ ನಲ್ಲಿ ನೌಕರರ ಶೇ. 10 ದೇಣಿಗೆ ಮುಂದುವರೆಯುತ್ತದೆ ಮತ್ತು ಸರ್ಕಾರದ ದೇಣಿಗೆಯನ್ನು ಪ್ರಸ್ತುತ ಶೇ. 14ರಿಂದ ಶೇ. 18.5ಕ್ಕೆ ಹೆಚ್ಚಿಸಲಾಗಿದೆ. ಎನ್ ಪಿ ಎಸ್ ನಲ್ಲಿ ಚಂದಾದಾರರು ಶೇ. 60ರಷ್ಟನ್ನು ಹಿಂದಕ್ಕೆ ತೆಗೆದುಕೊಳ್ಳಬಹುದು ಮತ್ತು ವರ್ಷಾಶನದಲ್ಲಿ ಶೇ. 40ರಷ್ಟನ್ನು ಹೂಡಿಕೆ ಮಾಡಿ ಪಿಂಚಣಿ ಪಡೆಯಬಹುದಾಗಿದ್ದರೆ, ಯುಪಿಎಸ್ ಅಡಿಯಲ್ಲಿ ಸಂಪೂರ್ಣ ಪಿಂಚಣಿ ಸಂಪತ್ತನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ, ಸರ್ಕಾರವು ಪ್ರತಿ ಪೂರ್ಣಗೊಂಡ ಆರು ತಿಂಗಳ ಸೇವೆಗೆ, ಒಟ್ಟು ವೇತನದ ಅಂದರೆ ನೌಕರರ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 10 ರಷ್ಟನ್ನು ನೀಡುತ್ತದೆ. ಅಂದರೆ, 25 ವರ್ಷಗಳ ಪೂರ್ಣಗೊಂಡ ಸೇವೆಗೆ ನೌಕರರು 5 ತಿಂಗಳ ವೇತನವನ್ನು ಮತ್ತು 10 ವರ್ಷಗಳ ಸೇವೆಗೆ 2 ತಿಂಗಳ ವೇತನವನ್ನು ನಿವೃತ್ತಿಯ ಮೇಲೆ ಗ್ರಾಚ್ಯುಟಿ ಜೊತೆಗೆ ಹೆಚ್ಚುವರಿ ಪ್ರಯೋಜನವಾಗಿ ಪಡೆಯುತ್ತಾರೆ.
ಯುಪಿಎಸ್ vs ಒಪಿಎಸ್
ಯುಪಿಎಸ್ ನಲ್ಲಿ, ನೌಕರರು 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ, ತನ್ನ 60ನೇ ವಯಸ್ಸಿನಲ್ಲಿ ಸಾಮಾನ್ಯ ನಿವೃತ್ತಿಯ ಮೇಲೆ 12 ತಿಂಗಳ ಸರಾಸರಿ ಮೂಲ ವೇತನದ ಶೇ. 50 ಅನ್ನು ಪಿಂಚಣಿಯಾಗಿ ಪಡೆಯುತ್ತಾರೆ. ಇದು 2025ರ ಏಪ್ರಿಲ್ ಒಂದರಿಂದ ಜಾರಿಗೆ ಬರುತ್ತದೆ, ಅಂದರೆ 2025ರ ಮಾರ್ಚ್ 31 ರಂದು ನಿವೃತ್ತಿಯಾಗುವವರಿಗೆ. ಆದರೆ ಅದಕ್ಕಿಂತ ಮೊದಲು ನಿವೃತ್ತರಾದವರಿಗೆ ಅನ್ವಯಿಸುವುದಿಲ್ಲ.ಒಪಿಎಸ್ (ಹಳೆಯ ಪಿಂಚಣಿ ಯೋಜನೆ)ನಲ್ಲಿ 10 ವರ್ಷಗಳ ಸೇವೆಗೆ ಕೊನೆಯ ತಿಂಗಳ ವೇತನದ ಶೇ. 50 ಪಿಂಚಣಿ ಮತ್ತು 20 ವರ್ಷಗಳ ಸೇವೆಯ ನಂತರ ಸ್ವಯಂ ನಿವೃತ್ತಿಗೆ ಪಿಂಚಣಿಯಾಗಿ ಶೇ. 50 ವೇತನ ಸಿಗುತ್ತಿದೆ.
25 ವರ್ಷಕ್ಕಿಂತ ಕಡಿಮೆ ಸೇವೆ ಹೊಂದಿರುವ ನೌಕರರು ಯುಪಿಎಸ್ ನಲ್ಲಿ ಸೇವೆಗೆ ಅನುಪಾತವಾಗಿ ಕಡಿಮೆ ಪಿಂಚಣಿ ಪಡೆಯುತ್ತಾರೆ. 20 ವರ್ಷಗಳ ಸೇವೆಯನ್ನು ಹೊಂದಿರುವ ನೌಕರರು 12 ತಿಂಗಳ ಸರಾಸರಿ ಮೂಲ ವೇತನದಲ್ಲಿ ಶೇ. 40 ಮಾತ್ರ ಪಿಂಚಣಿಯಾಗಿ ಪಡೆಯುತ್ತಾರೆ. 10 ವರ್ಷಗಳ ಸೇವೆಗೆ ನೌಕರರು ಸರಾಸರಿ ಮೂಲ ವೇತನದ ಶೇ. 20 ಮಾತ್ರ ಪಿಂಚಣಿಯಾಗಿ ಪಡೆಯುತ್ತಾರೆ. 25 ವರ್ಷಕ್ಕಿಂತ ಕಡಿಮೆ 10 ವರ್ಷಗಳವರೆಗೆ ಅನುಪಾತದ ಪಿಂಚಣಿ ಸಂದರ್ಭದಲ್ಲಿ ಸರ್ಕಾರವು ಕನಿಷ್ಠ 10,000 ರೂ ಪಿಂಚಣಿಯನ್ನು ಕೊಡುವುದಾಗಿ ಹೇಳಿದೆ.
ಒಪಿಎಸ್ ನಲ್ಲಿ ಕನಿಷ್ಟ ಪಿಂಚಣಿ 9000 ರೂ. ಜೊತೆಗೆ ತುಟ್ಟಿಭತ್ಯೆ (2025ರ ಏಪ್ರಿಲ್ ಒಂದರಂದು ಇದು ಶೇ. 57) ರೂ. 5130 ಆಗಿರುತ್ತದೆ. ಅಂದರೆ 2025ರ ಏಪ್ರಿಲ್ ಒಂದರಂದು ಕನಿಷ್ಠ ಪಿಂಚಣಿ ರೂ. 14,130 ಆಗುತ್ತಿತ್ತು. ಆದ್ದರಿಂದ ಪ್ರಸ್ತಾವಿತ ರೂ. 10000 ಪಿಂಚಣಿ ಒಪಿಎಸ್ ನ ಅರ್ಧದಷ್ಟಿದೆ. ನಿವೃತ್ತಿಯ ಸಮಯದಲ್ಲಿ 10 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದ ನೌಕರರು ಯಾವುದೇ ಪಿಂಚಣಿಗೆ ಅರ್ಹರಾಗಿರುವುದಿಲ್ಲ.
ಯುಪಿಎಸ್ ಅಡಿಯಲ್ಲಿ ಕುಟುಂಬ ಪಿಂಚಣಿಯು ಪಿಂಚಣಿಯ ಶೇ. 60 ಆಗಿದೆ, ಅಂದರೆ ಶೇ. 50 ರಲ್ಲಿ ಶೇ. 60. ಅಂದರೆ ನಿವೃತ್ತಿಯ ಸಮಯದಲ್ಲಿ 25 ವರ್ಷಗಳ ಸೇವೆಯ ಕೊನೆಯ ವೇತನದ ಶೇ. 30. 10,000 ರೂಪಾಯಿಗಳ ಕನಿಷ್ಠ ಪಿಂಚಣಿ ಹೊಂದಿರುವ ನೌಕರನಿಗೆ ಅದು ಶೇ. 60 ಆಗಿರುತ್ತದೆ, ಅಂದರೆ, ರೂ 6000. 10000 ರೂ.ಗಳ ರ ಕನಿಷ್ಠ ಪಿಂಚಣಿಯು ನಿವೃತ್ತಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಕುಟುಂಬ ಪಿಂಚಣಿಗೆ ಅಲ್ಲ. ಆದರೆ ನಿವೃತ್ತಿಯ ನಂತರ 7 ವರ್ಷಗಳ ಮೊದಲು ಅಥವಾ 67 ವರ್ಷ ವಯಸ್ಸಿಗಿಂತ ಮೊದಲು ಪಿಂಚಣಿದಾರನು ಮರಣಹೊಂದಿದರೆ ಒಪಿಎಸ್ ಕುಟುಂಬ ಪಿಂಚಣಿಯು ಕೊನೆಯ ವೇತನದ ಶೇ. 50 ಆಗಿರುತ್ತಿತ್ತು. ನಂತರ ಕುಟುಂಬ ಪಿಂಚಣಿಯು ಕೊನೆಯ ವೇತನದ ಶೇ. 30 ಆಗಿರುತ್ತದೆ. 2025ರ ಏಪ್ರಿಲ್ ಒಂದರಂದು ಕನಿಷ್ಠ ಪಿಂಚಣಿ ರೂ. 14,130 ಆಗಿರುತ್ತದೆ. ಆದರೆ ಈಗ ಸರಕಾರ ಮುಂದಿಟ್ಟಿರುವ ಯುಪಿಎಸ್ ನಲ್ಲಿ ಕನಿಷ್ಠ ಕುಟುಂಬ ಪಿಂಚಣಿ ಕೇವಲ 6000 ರೂ. ಮಾತ್ರ.
ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸಿಗುವಂತೆ, ಖಚಿತ ಪಿಂಚಣಿ ಅಥವಾ ಕನಿಷ್ಠ ಪಿಂಚಣಿ ಅಥವಾ ಕುಟುಂಬ ಪಿಂಚಣಿಗೆ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ತುಟ್ಟಿಭತ್ಯ/ತುಟ್ಟಿ ಪರಿಹಾರ ನೀಡಲಾಗುತ್ತದೆ. ಆದರೆ 1-4-2025 ರಿಂದ ಹೊಸ ಆಧಾರದ ಸೂಚ್ಯಂಕವನ್ನು ಪ್ರಾರಂಭಿಸುತ್ತಾರೆಯೇ ಅಥವಾ ಸೇವೆಯಲ್ಲಿರುವ ಮತ್ತು ಒಪಿಎಸ್ ಪಿಂಚಣಿದಾರರಿಗೆ ಸಿಗುವ ಶೇಕಡಾವಾರಿನಂತೆ ತುಟ್ಟಿಭತ್ಯ/ತುಟ್ಟಿ ಪರಿಹಾರ ನೀಡುತ್ತಾರೋ ಎಂಬುದನ್ನು ಇನ್ನೂ ವಿವರಿಸಲಾಗಿಲ್ಲ.
ಒಪಿಎಸ್ ನಲ್ಲಿ ಪಿಂಚಣಿದಾರರು ಅಥವಾ ಕುಟುಂಬ ಪಿಂಚಣಿದಾರರು 80 ವರ್ಷ ಪೂರ್ಣಗೊಳಿಸಿದರೆ ಹೆಚ್ಚುವರಿ ಪಿಂಚಣಿ ಶೇ. 20, 85 ವರ್ಷಗಳಿಗೆ ಶೇ. 30, 90 ವರ್ಷಗಳಿಗೆ ಶೇ. 40, 95 ವರ್ಷಗಳಿಗೆ ಶೇ. 50 ಮತ್ತು 100 ವರ್ಷ ದಾಟಿದರೆ ಶೇ. 100 ಹೆಚ್ಚುವರಿ ಪಿಂಚಣಿಯನ್ನು ಅದೇ ತುಟ್ಟಿಭತ್ಯೆಯೊಂದಿಗೆ ನೀಡಲಾಗುತ್ತದೆ. ಯುಪಿಎಸ್ ನಲ್ಲಿ ಈ ಹೆಚ್ಚುವರಿ ಪಿಂಚಣಿ ಲಭ್ಯವಿಲ್ಲ. ಒಪಿಎಸ್ ನಲ್ಲಿ ಪಿಂಚಣಿ/ಕುಟುಂಬ ಪಿಂಚಣಿ/ಕನಿಷ್ಠ ಪಿಂಚಣಿಯನ್ನು ವೇತನ ಆಯೋಗವನ್ನು ಜಾರಿಗೊಳಿಸಿದಾಗ ಪರಿಷ್ಕರಿಸಲಾಗುವುದು. ಆದರೆ ಯುಪಿಎಸ್ ಅಡಿಯಲ್ಲಿ ಅಂತಹ ಯಾವುದೇ ಭರವಸೆ ಇಲ್ಲ.
ಒಪಿಎಸ್ ನಲ್ಲಿ ಪಿಂಚಣಿಯ ಕಮ್ಯುಟೇಶನ್ ಅಂದರೆ, ಮುಂಗಡವಾಗಿ ಶೇ. 40 ಪಿಂಚಣಿಯನ್ನು ಪಡೆಯುವ ಅವಕಾಶ ಲಭ್ಯವಿದೆ, ಆದರೆ ಯುಪಿಎಸ್ ನಲ್ಲಿ ಇದು ಲಭ್ಯವಿಲ್ಲ. ಎನ್ ಪಿ ಎಸ್ ನಲ್ಲಿ ನಿಧನರಾಗುವ ಅಥವ ಎಲ್ಲಾ ವರ್ಗದ ಅಮಾನ್ಯರಾಗುವ ನೌಕರರು ಅನರ್ಹರಾಗುತ್ತಾರೆ, ಒಪಿಎಸ್ ಈಗಾಗಲೇ ಅವರಿಗೆ ಅನ್ವಯಿಸುತ್ತದೆ. ನೌಕರರು ಯುಪಿಎಸ್ ಅಥವಾ ಎನ್ ಪಿ ಎಸ್ ನಲ್ಲಿ ಒಂದನ್ನು ಆರಿಸಿಕೊಳ್ಳಬಹುದು, ಒಮ್ಮೆ ಆಯ್ಕೆ ಮಾಡಿಕೊಂಡರೆ ಅದು ಅಂತಿಮವಾಗಿರುತ್ತದೆ. ಸರಕಾರ ಈಗ ಮುಂದಿಟ್ಟಿರುವ ಯುಪಿಎಸ್ ನಲ್ಲಿ ಇನ್ನೂ ಹಲವು ನ್ಯೂನತೆಗಳಿರಬಹುದು, ಇದು ಯುಪಿಎಸ್ ನ ಪೂರ್ಣ ಪಠ್ಯವನ್ನು ಅಧಿಸೂಚಿಸಿದ ನಂತರ ತಿಳಿಯಬಹುದು.
ಇದನ್ನು ನೋಡಿ : ರೈತರ ಭೂಮಿ ಜಿಂದಾಲ್‌ಗೆ! ರೈತರ ಬೆನ್ನಿಗೆ ಚೂರಿ ಹಾಕಿದ ರಾಜ್ಯ ಸರ್ಕಾರ Janashakthi Media