ನಕಲಿ 500 ರೂ. ನೋಟುಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ

ವದೆಹಲಿ:  ಚಲಾವಣೆಗೆ ಬಂದಿರುವ ಹೊಸ ರೀತಿಯ ನಕಲಿ 500 ರೂಪಾಯಿ ನೋಟುಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ‘ಅತೀ ಮಹತ್ವದ’ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದೂ, ಡಿಆರ್‌ಐ, ಎಫ್‌ಐಯು, ಸಿಬಿಐ, ಎನ್‌ಐಎ, ಸೆಬಿ ಮುಂತಾದ ಪ್ರಮುಖ ಆರ್ಥಿಕ ಮತ್ತು ನಿಯಂತ್ರಣ ಸಂಸ್ಥೆಗಳೊಂದಿಗೆ ಈ ಎಚ್ಚರಿಕೆಯನ್ನು ಹಂಚಿಕೊಳ್ಳಲಾಗಿದೆ. ಬಗ್ಗೆ

ನಕಲಿ ನೋಟುಗಳು ಗುಣಮಟ್ಟ ಮತ್ತು ಮುದ್ರಣದಲ್ಲಿ ಅಸಲಿ ನೋಟುಗಳನ್ನು ಹೋಲುತ್ತವೆ, ಇದರಿಂದ ಅವುಗಳನ್ನು ಗುರುತಿಸುವುದು ಕಷ್ಟಕರವಾಗಿದೆ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.

ವರದಿಯ ಪ್ರಕಾರ, ನಕಲಿ 500 ರೂ. ನೋಟುಗಳು ಅಸಲಿಗಳಿಗೆ ಬಹುತೇಕ ಸಮಾನವಾಗಿವೆ. ಆದರೆ, “RESERVE BANK OF INDIA” ಎಂಬ ಬರವಣಿಗೆಯಲ್ಲಿ ಒಂದು ಸಣ್ಣ ಆದರೆ ಮಹತ್ವದ ತಪ್ಪು ಕಂಡುಬಂದಿದೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ವಿಚಿತ್ರ ಬೇಡಿಕೆ ಇಟ್ಟ ವಿದ್ಯಾರ್ಥಿಗಳು

“RESERVE” ಎಂಬ ಪದದಲ್ಲಿ “E” ಅಕ್ಷರದ ಬದಲಿಗೆ “A” ಅಕ್ಷರವನ್ನು ತಪ್ಪಾಗಿ ಮುದ್ರಿಸಲಾಗಿದೆ. ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು, “ಈ ತಪ್ಪನ್ನು ಸೂಕ್ಷ್ಮವಾಗಿ ಪರಿಶೀಲಿಸದಿದ್ದರೆ ಗಮನಕ್ಕೆ ಬರುವುದಿಲ್ಲ. ಇದರಿಂದ ಈ ನಕಲಿ ನೋಟುಗಳು ಅಪಾಯಕಾರಿಯಾಗಿವೆ,” ಎಂದು ಎಂಎಚ್‌ಎ ಪತ್ರವನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ಈಗಾಗಲೇ ದೊಡ್ಡ ಪ್ರಮಾಣದ ನಕಲಿ ನೋಟುಗಳು ಮಾರುಕಟ್ಟೆಗೆ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ಆರ್ಥಿಕ ಸಂಸ್ಥೆಗಳು, ಬ್ಯಾಂಕ್‌ಗಳು ಮತ್ತು ಸಂಬಂಧಿತ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಶಂಕಿತ ನಕಲಿ ನೋಟಿನ ಫೋಟೋವನ್ನು ಗುರುತಿಸಲು ಸಹಾಯವಾಗುವಂತೆ ಸಂಸ್ಥೆಗಳಿಗೆ ಹಂಚಿಕೊಳ್ಳಲಾಗಿದೆ. ನಾಗರಿಕರು ಮತ್ತು ಸಂಸ್ಥೆಗಳು ಶಂಕಾಸ್ಪದ ನೋಟುಗಳನ್ನು ಗಮನಿಸಿದರೆ ತಕ್ಷಣ ವರದಿ ಮಾಡುವಂತೆ ಪ್ರಾಧಿಕಾರಿಗಳು ಮನವಿ ಮಾಡಿದ್ದಾರೆ.

ಭಯೋತ್ಪಾದಕ ಧನಸಹಾಯ ತನಿಖೆಯಲ್ಲಿ ತೊಡಗಿರುವ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, “ಚಲಾವಣೆಯಲ್ಲಿರುವ ನಕಲಿ ನೋಟುಗಳ ನಿಖರ ಸಂಖ್ಯೆ ಎಷ್ಟು ಎಂದು ಯಾವುದೇ ಸಂಸ್ಥೆಗೆ ತಿಳಿದುಕೊಳ್ಳಲು ಸಾಧ್ಯವಿಲ್ಲ. ಸಾರ್ವಜನಿಕರು ಬ್ಯಾಂಕ್‌ಗಳಿಗೆ ಒಪ್ಪಿಸಿದ ನಕಲಿ ನೋಟುಗಳ ಮಾಹಿತಿ ಮಾತ್ರ ಸರ್ಕಾರದ ಬಳಿ ಇದೆ. ಆದರೆ, ವಾಸ್ತವದಲ್ಲಿ ಚಲಾವಣೆಯಲ್ಲಿರುವ ನಕಲಿ ನೋಟುಗಳ ಸಂಖ್ಯೆ ಇದಕ್ಕಿಂತ ಹೆಚ್ಚಿರಬಹುದು” ಎಂದಿದ್ದಾರೆ.

ಇತ್ತೀಚಿನ ಸಂಸತ್ ಅಧಿವೇಶನದಲ್ಲಿ, ನಕಲಿ ನೋಟುಗಳನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ಬಗ್ಗೆ ಸರ್ಕಾರ ಮಾಹಿತಿ ನೀಡಿತ್ತು. “ಭಾರತೀಯ ನ್ಯಾಯ ಸಂಹಿತೆ, 2023 (ಬಿಎನ್‌ಎಸ್), ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ, 1967, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಎಫ್‌ಐಸಿಎನ್ ಸಮನ್ವಯ ಗುಂಪು (ಎಫ್‌ಕಾರ್ಡ್), ಮತ್ತು ಭಯೋತ್ಪಾದಕ ಧನಸಹಾಯ ಮತ್ತು ನಕಲಿ ಕರೆನ್ಸಿ (ಟಿಎಫ್‌ಎಫ್‌ಸಿ) ಘಟಕದ ಸ್ಥಾಪನೆ ಸೇರಿದಂತೆ ವಿವಿಧ ಕ್ರಮಗಳನ್ನು ಜಾರಿಗೊಳಿಸಲಾಗಿದೆ” ಎಂದು ಸರ್ಕಾರ ತಿಳಿಸಿತ್ತು.

ನಕಲಿ ನೋಟುಗಳನ್ನು ಗುರುತಿಸಲು, ಎಲ್ಲಾ ಬ್ಯಾಂಕ್ ಶಾಖೆಗಳು, ಗುರುತಿಸಲಾದ ಬ್ಯಾಕ್ ಆಫೀಸ್‌ಗಳು ಮತ್ತು ಕರೆನ್ಸಿ ಚೆಸ್ಟ್ ಶಾಖೆಗಳಲ್ಲಿ ಸೂಕ್ತ ಬ್ಯಾಂಕ್‌ನೋಟ್ ವಿಂಗಡಣೆ, ಪರಿಶೀಲನೆ, ಗುರುತಿಸುವ ಯಂತ್ರಗಳನ್ನು ಅಳವಡಿಸಲಾಗಿದೆ. ನಾಗರಿಕರು ಎಚ್ಚರಿಕೆಯಿಂದ ಹಣದ ವ್ಯವಹಾರ ನಡೆಸಿ, ಶಂಕಾಸ್ಪದ ನೋಟುಗಳು ಕಂಡುಬಂದರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆ ಅಥವಾ ಬ್ಯಾಂಕ್‌ಗೆ ಮಾಹಿತಿ ನೀಡುವಂತೆ ಕೇಳಿಕೊಳ್ಳಲಾಗಿದೆ.

ಇದನ್ನೂ ನೋಡಿ: ಅಲಹಾಬಾದ ಹೈಕೋರ್ಟ್- ಸ್ತ್ರೀ ದ್ವೇಷದ ಹೇಳಿಕೆಗಳು, ಸುಪ್ರೀಂ ಗರಂ Janashakthi Media

Donate Janashakthi Media

Leave a Reply

Your email address will not be published. Required fields are marked *