ನವದೆಹಲಿ : ಒಕ್ಕೂಟ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)ಯು ಹಿಂದಿನ ತಿಂಗಳು ಬಿಡುಗಡೆ ಮಾಡಿದ ತನ್ನ 2023-24 ರ ವಾರ್ಷಿಕ ವರದಿಯಲ್ಲಿ ಒಕ್ಕೂಟ ಸರ್ಕಾರದಲ್ಲಿನ ಉದ್ಯೋಗಗಳ ಮತ್ತು ಹುದ್ದೆಗಳ ಮೀಸಲಾತಿ ದತ್ತಾಂಶವನ್ನು ತೆಗೆದುಹಾಕಿದೆ ಎಂದು ಬೃಂದಾ ಕಾರಟ್ ಹೇಳಿದರು.
ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿರುವ ಎ.ಬಿ.ಸಿ ಮತ್ತು ಡಿ ವರ್ಗಗಳಲ್ಲಿರುವ ಎಲ್ಲಾ ಒಟ್ಟು ಹುದ್ದೆಗಳು ಹಾಗೂ ಪರಿಶಿಷ್ಟ ಜಾತಿ (ಎಸ್.ಸಿ) ಪರಿಶಿಷ್ಟ ಜನಾಂಗ (ಎಸ್.ಟಿ), ಹಾಗೂ ಇತರ ಹಿಂದುಳಿದ ವರ್ಗ (ಒಬಿಸಿ) ಗಳ ನೌಕರರ ಸಂಖ್ಯೆಯನ್ನು ಮೀಸಲಾತಿ ಕುರಿತ ಅಧ್ಯಾಯದ ಭಾಗವಾಗಿ ಪ್ರತಿವರ್ಷವೂ ಕೋಷ್ಟಕಗಳಲ್ಲಿ ಡಿಒಪಿಟಿಯು ಪ್ರಕಟಿಸುತ್ತಿತ್ತು.
ಈ ಬಾರಿ ಆ ಕೋಷ್ಟಕಗಳನ್ನು ಇಲಾಖೆಯು ಏಕೆ ಪ್ರಕಟಿಸಲಿಲ್ಲ ಎಂಬ ‘ದಿ ಹಿಂದು’ ಪತ್ರಿಕೆಯ ಪ್ರಶ್ನೆಗೆ ಡಿಒಪಿಟಿ ಇಲ್ಲಿಯವರೆಗೂ ಉತ್ತರಿಸಿಲ್ಲ. ಉದ್ಯೋಗ
ಭಾನುವಾರ ನಡೆದ ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್ (ಎ.ಎ.ಆರ್. ಎಂ.) ಎಂಬ ಎಡಪಂಥೀಯ ಹಕ್ಕುಗಳ ವೇದಿಕೆಯು “ಉದ್ಯೋಗಗಳಿಂದ ಆದಿವಾಸಿಗಳನ್ನು ಹೊರಗಿಡಲಾಗಿದೆ” ಎಂದು ಕಳವಳ ವ್ಯಕ್ತಪಡಿಸಿದೆ. ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ದತ್ತಾಂಶಗಳನ್ನು ಉದ್ದೇಶಪೂರ್ವಕವಾಗಿ ಒಕ್ಕೂಟ ಸರ್ಕಾರವು ಮುಚ್ಚಿಡುತ್ತಿದೆ ಎಂದು ಆರೋಪಿಸಿದೆ.
ಒಕ್ಕೂಟ ಸರ್ಕಾರದ ಹುದ್ದೆಗಳ ಮೀಸಲಾತಿಯ ಪೂರ್ಣ ದತ್ತಾಂಶವನ್ನು 2018 ರ ನಂತರದ ತನ್ನ ವರದಿಗಳಲ್ಲಿ ಡಿಒಪಿಟಿಯು ಒದಗಿಸುತ್ತಿಲ್ಲ ಎಂದು ಆದಿವಾಸಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಎಂಬ ಎ.ಎ.ಆರ್.ಎಂ. ನ ಒಂದು ಅಂಗಸಂಸ್ಥೆಯ ಸಹವರ್ತಿ ಜವಾಹರ್ ಲಾಲ್ ವಿಶ್ವವಿದ್ಯಾಲಯದ ಪ್ರೊ.ವಿಕಾಸ್ ರಾವಲ್ ಹೇಳುತ್ತಾರೆ. “ಹಣಕಾಸು ಸಚಿವಾಲಯದ ಸಂಬಳ ಸಂಶೋಧನಾ ಘಟಕದ ದಾಖಲೆಗಳನ್ನು ಪರಿಶೀಲಿಸಿದರೆ, ಕೇಂದ್ರ ಸರ್ಕಾರದಲ್ಲಿ 30 ಲಕ್ಷಕ್ಕೂ ಹೆಚ್ಚು ನೌಕರರಿದ್ದಾರೆ; ಆದರೆ ಡಿಒಪಿಟಿಯ 2018 ರ ನಂತರದ ವಾರ್ಷಿಕ ವರದಿಗಳಲ್ಲಿ 19 ಲಕ್ಷ ನೌಕರರಿಗೆ ಸಂಬಂಧಪಟ್ಟ ಮೀಸಲಾತಿ ದತ್ತಾಂಶಗಳನ್ನು ಮಾತ್ರ ಒದಗಿಸಲಾಗಿದೆ. ಉಳಿದ ನೌಕರರನ್ನು ಏಕೆ ಕೈಬಿಡಲಾಗಿದೆ ಎಂಬ ಪ್ರಶ್ನೆಗೆ ಯಾವುದೇ ವಿವರಣೆ ಸಿಗುತ್ತಿಲ್ಲ.” ಎಂದು ಪ್ರೊ.ರಾವಲ್ ಹೇಳುತ್ತಾರೆ
“ಅಂಚಿನಲ್ಲಿರುವ ಸಮುದಾಯಗಳು ತಮ್ಮ ಹಕ್ಕುಗಳನ್ನು ಸಾಧಿಸದಂತೆ ಉದ್ದೇಶಪೂರ್ವಕವಾಗಿ ಆ ಮಾಹಿತಿಗಳನ್ನು ಮತ್ತು ದತ್ತಾಂಶಗಳನ್ನು ಮರೆಮಾಚಲಾಗುತ್ತಿದೆ” ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ನಾಯಕಿ ಬೃಂದಾ ಕಾರಟ್ ಹೇಳಿದ್ದಾರೆ. ಆದಿವಾಸಿಗಳು ನ್ಯಾಯಾಲಯಕ್ಕೂ ಹೋಗಲಾಗದಂತೆ ಮಾಡಲಾಗಿದೆ, ಏಕೆಂದರೆ ಒಟ್ಟು ಹುದ್ಸೆಗಳೆಷ್ಟು, ಮೀಸಲಾತಿಯ ಪ್ರಕಾರ ಎಷ್ಟು ಹುದ್ದೆಗಳಿವೆ ಮತ್ತು ಎಷ್ಟು ಹುದ್ದೆಗಳಿಗೆ ನೇಮಕಾತಿ ಆಗಿದೆ ಎಂಬ ಪೂರ್ಣ ಹಾಗೂ ಕ್ರೋಢೀಕೃತ ದತ್ತಾಂಶ ಲಭ್ಯವಿಲ್ಲ.” ಎಂದು ಬೃಂದಾ ಅವರು ಆರೋಪಿಸಿದ್ದಾರೆ.
ಆದಿವಾಸಿಗಳ ಸಮಾವೇಶವು ತಮ್ಮ ಎಂಟು ಹಕ್ಕೊತ್ತಾಯಗಳೊಂದಿಗೆ ಪ್ರಮುಖ ಮೂರು ನಿರ್ಣಯಗಳ ಸಾರಾಂಶ ಹೀಗಿವೆ: ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕುಗಳು, ಶೈಕ್ಷಣಿಕ ಹಾಗೂ ಹಣಕಾಸು ಸಂಸ್ಥೆಗಳು, ಸರ್ಕಾರಿ ಆರೋಗ್ಯ ಕ್ಷೇತ್ರ ಮತ್ತು ಯೋಜನಾ ಕೆಲಸಗಾರರು (ಸ್ಕೀಂ ವರ್ಕರ್ಸ್) ಮುಂತಾದ ಸರ್ಕಾರಿ ಹುದ್ದೆಗಳ ಸಂಪೂರ್ಣ ಹಾಗೂ ಕ್ರೋಢೀಕೃತ ಮೀಸಲಾತಿ ದತ್ತಾಂಶಗಳನ್ನು ಒದಗಿಸಬೇಕು. ಗುತ್ತಿಗೆ ಹುದ್ದೆಗಳು, ನಿಯೋಜಿತ ( ಡೆಪ್ಯುಟೇಷನ್) ಹುದ್ದೆಗಳು ಮತ್ತು ಬಡ್ತಿ ಹುದ್ದೆಗಳನ್ನೂ ಒಳಗೊಂಡಂತೆ ಎಲ್ಲಾ ಸರ್ಕಾರಿ ಹುದ್ದೆಗಳ ನೇಮಕಾತಿಗಳಲ್ಲೂ ಅಲ್ಲದೆ ಖಾಸಗೀ ವಲಯದಲ್ಲಿ ಕೂಡ ಮೀಸಲಾತಿಯನ್ನು ಜಾರಿಮಾಡಬೇಕು ಎಂದು ಸಮಾವೇಶ ಒತ್ತಾಯಿಸಿದೆ ಎಂದು ಬೃಂದಾ ಕಾರಟ್ ಹೇಳಿದರು.
ಇದನ್ನೂ ನೋಡಿ : Every crisis brings an opportunity and makes you brave – Shailaja teacher Janashakthi Media