ಬಿಸಿಯೂಟ ಯೋಜನೆಯ ಹೆಸರಷ್ಟೇ ಬದಲು ಅದೀಗ ಪಿಎಂ ಪೋಷಣ್ ಯೋಜನೆ ಎಂದಾಗಿದೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು (ಸಿಸಿಇಎ) ಮುಂದಿನ ಐದು ವರ್ಷಗಳ ಅವಧಿಗೆ ಶಾಲೆಗಳಲ್ಲಿ ಪ್ರಧಾನ ಮಂತ್ರಿ ಪೋಷಣ್ ರಾಷ್ಟ್ರೀಯ ಯೋಜನೆ ಮುಂದುವರಿಸಲು ನಿರ್ಧರಿಸಿದೆ.

ಆದರೆ, ಕೇಂದ್ರ ಸರ್ಕಾರವು ಘೋಷಣೆ ಮಾಡಿರುವುದು ಹೊಸ ಯೋಜನೆ ಏನೂ ಇದಾಗಿರಲಿಲ್ಲ. ಬದಲಾಗಿ ಯೋಜನೆಯ ಹಿಂದಿನ ಹೆಸರು ‘ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟಕ್ಕಾಗಿ ರಾಷ್ಟ್ರೀಯ ಯೋಜನೆ’ ಎಂದಾಗಿತ್ತು. ಇದನ್ನು ಜನಪ್ರಿಯವಾಗಿ ಮಧ್ಯಾಹ್ನದ ಬಿಸಿಯೂಟದ ಯೋಜನೆ ಎಂದು ಕರೆಯಲಾಗುತ್ತಿತ್ತು.

ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಸರಕಾರಿ, ಅನುದಾನಿತ ಶಾಲೆಗಳ 1-8ನೇ ತರಗತಿಗಳಲ್ಲಿ ಓದುತ್ತಿರುವ ಎಲ್ಲಾ ಶಾಲಾ ಮಕ್ಕಳನ್ನು ಒಳಗೊಂಡಿದೆ. ಈಗಾಗಲೇ ಚಾಲ್ತಿಯಲ್ಲಿರುವ ಬಿಸಿಯೂಟ ಯೋಜನೆಯನ್ನು ಮುಂದಿನ ಐದು ವರ್ಷಗಳಿಗೆ ವಿಸ್ತರಿಸಲಾಗಿದ್ದು 2021-22 ರಿಂದ 2025-26 ರವರೆಗೆ ಐದು ವರ್ಷಗಳವರೆಗೆ ಈ ಯೋಜನೆ ಇದಾಗಿದೆ. ಹೆಸರಲ್ಲಷ್ಟೇ ಬದಲಾವಣೆ ತರಲಾಗಿದ್ದು ಯೋಜನೆಯಲ್ಲಿ ಅಂತಹ ದೊಡ್ಡ ಬದಲಾವಣೆ ಏನನ್ನೂ ತರಲಾಗಿಲ್ಲ.

ಈ ಯೋಜನೆಗೆ ಸದ್ಯ ಒಟ್ಟು 1.3 ಲಕ್ಷ ಕೋಟಿಗೂ ಹೆಚ್ಚಿನ ಬಜೆಟ್ ಅನುದಾನವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರವು 54,061.73 ಕೋಟಿ ರೂ., ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 31,733.17 ಕೋಟಿ ರೂ. ಆಹಾರ ಧಾನ್ಯಗಳ ಮೇಲೆ ಕೇಂದ್ರವು ಸುಮಾರು 45,000 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚವನ್ನು ಭರಿಸುತ್ತದೆ ಎನ್ನಲಾಗಿದೆ.

ಯೋಜನೆ ಪ್ರಕಾರ ಈ ಕೆಳಗಿನ ಅಂಶಗಳು ಒಳಗೊಂಡಿವೆ:

1) ಪ್ರಾಥಮಿಕ ತರಗತಿಗಳ ಓದುತ್ತಿರುವ ಎಲ್ಲಾ 11.80 ಕೋಟಿ ಮಕ್ಕಳು ಮಾತ್ರವಲ್ಲದೆ, ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿನ ಪೂರ್ವ ಪ್ರಾಥಮಿಕ ಅಥವಾ ಬಾಲವಾಡಿಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಈ ಯೋಜನೆಯನ್ನು ವಿಸ್ತರಿಸಲು ಪ್ರಸ್ತಾಪಿಸಲಾಗಿದೆ.

2) ʻಸಮುದಾಯ ಭೋಜನʼ ಪರಿಕಲ್ಪನೆಯನ್ನು ವ್ಯಾಪಕವಾಗಿ ಪ್ರೋತ್ಸಾಹಿಸಲಾಗುವುದು. ʻಸಮುದಾಯಭೋಜನʼ ಎಂಬುದು ಸಮುದಾಯ ಪಾಲ್ಗೊಳ್ಳುವಿಕೆ ಕಾರ್ಯಕ್ರಮವಾಗಿದ್ದು, ಇದರಲ್ಲಿ ಜನರು ವಿಶೇಷ ಸಂದರ್ಭಗಳಲ್ಲಿ/ ಹಬ್ಬಗಳಲ್ಲಿ ಮಕ್ಕಳಿಗೆ ವಿಶೇಷ ಆಹಾರವನ್ನು ಒದಗಿಸುತ್ತಾರೆ.

3) ಮಕ್ಕಳಿಗೆ ಪ್ರಕೃತಿ ಮತ್ತು ತೋಟಗಾರಿಕೆಯ ಬಗ್ಗೆ ಪ್ರಾಥಮಿಕ ಅನುಭವ ನೀಡಲು ಶಾಲೆಗಳಲ್ಲಿ ʻಶಾಲಾ ಪೌಷ್ಟಿಕಾಂಶ ಉದ್ಯಾನʼಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತಿದೆ. ಈ ಉದ್ಯಾನಗಳ ಫಸಲನ್ನು ಹೆಚ್ಚುವರಿ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುವ ಯೋಜನೆಯಲ್ಲಿ ಬಳಸಲಾಗುತ್ತದೆ. ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಶಾಲೆಗಳಲ್ಲಿ ʻಶಾಲಾ ಪೋಷಕಾಂಶ ಉದ್ಯಾನʼಗಳನ್ನು ಅಭಿವೃದ್ಧಿಪಡಿಸಲಾಗಿದೆ.

4) ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಕಡ್ಡಾಯಗೊಳಿಸಲಾಗಿದೆ.

5) ರಕ್ತಹೀನತೆಯ ಪ್ರಕರಣಗಳನ್ನು ಹೆಚ್ಚಾಗಿ ಹೊಂದಿರುವ ಜಿಲ್ಲೆಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮಕ್ಕಳಿಗೆ ಪೂರಕ ಪೌಷ್ಟಿಕಾಂಶದ ಪದಾರ್ಥಗಳನ್ನು ಒದಗಿಸಲು ವಿಶೇಷ ಅವಕಾಶವನ್ನು ಈ ಯೋಜನೆಯಡಿ ಕಲ್ಪಿಸಲಾಗಿದೆ.

6) ಸ್ಥಳೀಯವಾಗಿ ಲಭ್ಯವಿರುವ ಆಹಾರ ಪದಾರ್ಥಗಳು ಮತ್ತು ತರಕಾರಿಗಳನ್ನು ಆಧರಿಸಿ ಸಾಂಪ್ರದಾಯಿಕ ಪಾಕಪದ್ಧತಿ ಮತ್ತು ವಿನತೂನ ತಿನಿಸುಗಳ ತಯಾರಿಕೆಯನ್ನು ಉತ್ತೇಜಿಸಲು ಗ್ರಾಮ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಎಲ್ಲಾ ಹಂತಗಳಲ್ಲಿ ಅಡುಗೆ ಸ್ಪರ್ಧೆಗಳನ್ನು ಪ್ರೋತ್ಸಾಹಿಸಲಾಗುವುದು.

7) ʻಆತ್ಮನಿರ್ಭರ ಭಾರತ್‌ʼಗಾಗಿ ವೋಕಲ್‌ ಫಾರ್‌ ಲೋಕಲ್‌: ಯೋಜನೆಯ ಅನುಷ್ಠಾನದಲ್ಲಿ ರೈತರ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಮತ್ತು ಮಹಿಳಾ ಸ್ವಸಹಾಯ ಗುಂಪುಗಳ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲಾಗುವುದು. ಸ್ಥಳೀಯ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಸ್ಥಳೀಯವಾಗಿ ಬೆಳೆದ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಬಳಸುವುದನ್ನು ಪ್ರೋತ್ಸಾಹಿಸಲಾಗುವುದು.

8) ಪ್ರತಿಷ್ಠಿತ ವಿಶ್ವವಿದ್ಯಾಲಯಗಳು/ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಮತ್ತು ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು (ಆರ್‌ಐಇ) ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ (ಡಿಇಟಿ) ತರಬೇತಿ ಹಂತದ ಶಿಕ್ಷಕರಿಂದ ಪ್ರಗತಿ ಮೇಲ್ವಿಚಾರಣೆ ಮತ್ತು ತಪಾಸಣೆಗಾಗಿ ಕ್ಷೇತ್ರ ಭೇಟಿಗೆ ವ್ಯವಸ್ಥೆ ಮಾಡಲಾಗುವುದು.

Donate Janashakthi Media

Leave a Reply

Your email address will not be published. Required fields are marked *