ಕೇಂದ್ರ ಬಜೆಟ್ 2025-26: ಭಾರತೀಯ ಜನತೆಗೆ ಮಾಡಿರುವ ಕ್ರೂರ ವಿಶ್ವಾಸದ್ರೋಹ

ವಿಫಲ ಆರ್ಥಿಕ ನೀತಿಯ ಇತ್ತೀಚಿನ ಕಂತು -ಸಿಪಿಐ(ಎಂ) ಪೊಲಿಟ್‍ಬ್ಯುರೊ ಕಟು ಟೀಕೆ
ನವದೆಹಲಿ : 2025 – 26ರ ಕೇಂದ್ರ ಬಜೆಟ್ ಭಾರತದ ಜನರ ಅವಶ್ಯಕತೆಗಳಿಗೆ ಮಾಡಿದ ಕ್ರೂರ ವಿಶ್ವಾಸ ದ್ರೋಹವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ತೀವ್ರವಾಗಿ ಖಂಡಿಸಿದೆ. ಇದು ಶ್ರೀಮಂತರಿಂದ ಶ್ರೀಮಂತರಿಗಾಗಿ  ಬಜೆಟ್ ಆಗಿದೆ . ಒಕ್ಕೂಟ ತತ್ವವನ್ನು ದುರ್ಬಲಗೊಳಿಸುವ  ಮತ್ತು ರಾಜ್ಯಗಳ ಹಕ್ಕುಗಳ ಮೇಲೆ ದಾಳಿ ನಡೆಸುವ ನಿಲುವನ್ನು ಇದು ಬಿಂಬಿಸುತ್ತದೆ. ಮೋದಿ ಸರ್ಕಾರದ ದಿವಾಳಿತನವನ್ನು ಬಿಂಬಿಸುವ ಈ ಬಜೆಟ್ ದೇಶದ ಅರ್ಥವ್ಯವಸ್ಥೆಯನ್ನು ನಿಭಾಯಿಸುವಲ್ಲಿ ಅದು ಹೀನಾಯವಾಗಿ ವಿಫಲವಾಗಿರುವ  ಅದರ ನೀತಿಯ ಇತ್ತೀಚಿನ ಕಂತು ಎಂದು ಕಟುವಾಗಿ ಟೀಕಿಸಿದೆ.

ಅರ್ಥವ್ಯವಸ್ಥೆಯ  ಹಲವು ವಲಯಗಳು ಎದುರಿಸುತ್ತಿರುವ ಬೇಡಿಕೆಯ ಸಮಸ್ಯೆಯ ಮೂಲ ಕಾರಣವನ್ನು, ಸಾಮೂಹಿಕ ನಿರುದ್ಯೋಗ ಮತ್ತು ಕುಗ್ಗುತ್ತಿರುವ ಸಂಬಳಗಳಿಂದಾಗಿ  ದೊಡ್ಡಸಂಖ್ಯೆಯ ಜನವಿಭಾಗಗಳ ಕೈಯಲ್ಲಿ ಖರೀದಿ ಶಕ್ತಿಯ ಕೊರತೆಯಿರುವುದನ್ನು  ಪರಿಹರಿಸುವ ಬದಲು, ಮೋದಿ ಸರ್ಕಾರವು ಬಜೆಟ್ ಮೂಲಕ ಒಂದೆಡೆಯಲ್ಲಿ ವೆಚ್ಚಗಳನ್ನು ಕಡಿತಗೊಳಿಸುತ್ತಲೇ,  ಆರ್ಥಿಕತೆಯನ್ನು ಉತ್ತೇಜಿಸಲೆಂದು ಹೆಚ್ಚಿನ ಆದಾಯ ಹೊಂದಿರುವ ಒಂದು ಸಣ್ಣ ವಿಭಾಗಕ್ಕೆ ತೆರಿಗೆ ಕಡಿತಗಳನ್ನು ಕೊಡಮಾಡಲು ಪ್ರಯತ್ನಿಸಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ತೀವ್ರವಾಗಿ ಖಂಡಿಸಿದೆ.

ಶ್ರೀಮಂತರಿಂದ ಶ್ರೀಮಂತರಿಗಾಗಿ ಬಜೆಟ್

ಆರ್ಥಿಕ ಸಮೀಕ್ಷೆ  ಕಳೆದ ಐದು ವರ್ಷಗಳಲ್ಲಿ ಗಳಿಕೆಯಲ್ಲಿ ಇಳಿಕೆಯಾಗಿದೆ ಎಂದು  ಎತ್ತಿ ತೋರಿಸುವ ಮೂಲಕ ಭಾರತದ ಶ್ರಮಿಕರ  ಹತಾಶ ಸ್ಥಿತಿಯನ್ನು ತೋರಿಸುತ್ತಿರುವಾಗ,  ಈ ಬಜೆಟ್  ಶ್ರೀಮಂತರಿಗೆ ರಿಯಾಯಿತಿಗಳನ್ನು ನೀಡುತ್ತಲೇ  ಸರ್ಕಾರಿ ವೆಚ್ಚಗಳನ್ನು ಕಡಿತಗೊಳಿಸುವತ್ತ  ಒತ್ತು ನೀಡಿ  ಭಾರತದಲ್ಲಿನ ಬೃಹತ್ ಅಸಮಾನತೆಗಳನ್ನು ಮತ್ತಷ್ಟು ಉಲ್ಬಣಗೊಳಸುತ್ತದೆ. ಶ್ರೀಮಂತರು ಮತ್ತು ದೊಡ್ಡ ಕಾರ್ಪೊರೇಟ್ ಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಸಂಪನ್ಮೂಲಗಳನ್ನು ಸಂಗ್ರಹಿಸುವ ಬದಲು, ಮತ್ತು ಉದ್ಯೋಗ ಸೃಷ್ಟಿಸಲು ಮತ್ತು ನಮ್ಮ ಜನರಿಗೆ ಕನಿಷ್ಠ ವೇತನವನ್ನು ಖಚಿತಪಡಿಸಲು ಸಹಾಯ ಮಾಡುವ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವ ಬದಲು, ತದ್ವಿರುದ್ಧ ಕ್ರಮಗಳನ್ನೇ ಈ ಸರಕಾರ ಆರಿಸಿಕೊಂಡಿದೆ.  ಖಾಸಗಿ ಹೂಡಿಕೆಯನ್ನು ಉತ್ತೇಜಿಸುವ ಮೂಲಕ, ಸಾರ್ವಜನಿಕ ಆಸ್ತಿಗಳು ಮತ್ತು ಸಾರ್ವಜನಿಕ ವೆಚ್ಚವನ್ನು ಕೂಡ ಖಾಸಗಿಯವರ ಸೇವೆಗೆ ಸಲ್ಲಿಸುವ ಮೂಲಕ ಶ್ರೀಮಂತರು ಇನ್ನಷ್ಟು ಹೆಚ್ಚಿನ ಸಂಪತ್ತು ಸಂಗ್ರಹಣೆಯನ್ನು ಮಾಡಲು ಈ ಬಜೆಟ್‍ ಅನುವು ಮಾಡಿಕೊಡುತ್ತಿದೆ. ಈ ಬಜೆಟ್‌ನಲ್ಲಿ ಸರ್ಕಾರವು ವಿಮಾ ವಲಯದಲ್ಲಿ 100 ಶೇ. ಎಫ್‌ಡಿಐ ಗೆ ಅವಕಾಶ ಮತ್ತು ವಿದ್ಯುತ್ ವಲಯದ ಖಾಸಗೀಕರಣವನ್ನು ಪ್ರಸ್ತಾಪಿಸುತ್ತದೆ. ಆದ್ದರಿಂದ ಇದು ಶ್ರೀಮಂತರಿಂದ ಶ್ರೀಮಂತರಿಗಾಗಿ ಬಜೆಟ್ ಆಗಿದೆ ಎಂದು ಸಿಪಿಐ(ಎಂ) ಹೇಳಿದೆ.

2020-21 ರಿಂದ ಪ್ರತಿ ವರ್ಷವೂ ನಡೆಯುತ್ತಿರುವಂತೆ, ಸರಕಾರ ಮಾಡುವ ವೆಚ್ಚಗಳ ಪ್ರಮಾಣ ಜಿಡಿಪಿಯ ಶೇಕಡಾವಾರಾಗಿ ಈ ಬಾರಿಯೂ  ಕಡಿಮೆಯಾಗಲಿದೆ – 2024-25 ರಲ್ಲಿ 14.6%  ಇದ್ದದ್ದು 2025-26 ರಲ್ಲಿ 14.2% ಕ್ಕೆ ಇಳಿಯುತ್ತದೆ. ಸರಕಾರ ದೊಡ್ಡದಾಗಿ ಏನೇ ಹೇಳಿಕೊಂಡಿದ್ದರೂ, ಅದು ಕಳೆದ ವರ್ಷದಲ್ಲಿ ವಾಸ್ತವವಾಗಿ ಬಜೆಟ್ ಭರವಸೆ ನೀಡಿದ್ದಕ್ಕಿಂತ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು  ಕಡಿಮೆ ಖರ್ಚು ಮಾಡಿದೆ ಎಂದು ಬಜೆಟ್ ಕಾಗದಗಳು ಬಹಿರಂಗಪಡಿಸುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸರಕಾರದ  ಹಿಂದಿನ ದಾಖಲೆಯನ್ನು ನೋಡಿದರೆ, ಈ ಬಜೆಟಿನಲ್ಲಿ  ಮಾಡಿರುವ ಅಸಮರ್ಪಕ ಹಂಚಿಕೆಗಳನ್ನು ಕೂಡ ಗಂಭೀರವಾಗಿ ತೆಗೆದುಕೊಳ್ಳಲಾಗುವುದಿಲ್ಲ, ಏಕೆಂದರೆ ಸರ್ಕಾರವು ಬಜೆಟಿನಲ್ಲಿ ತಾನು ಭರವಸೆ ನೀಡಿದ ಮೊತ್ತವನ್ನು ಕೂಡ ಖರ್ಚು ಮಾಡುವುದಿಲ್ಲ ಎಂಬ ಸಂಗತಿಯತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ ಗಮನ ಸೆಳೆದಿದೆ.

ಜನಸಾಮಾನ್ಯರಿಗೆ, ರಾಜ್ಯಗಳಿಗೆ ಕಡಿತಗಳ ಬಜೆಟ್

ಕಳೆದ ವರ್ಷದಲ್ಲಿ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ವರ್ಗಾವಣೆಗಳಲ್ಲಿ  ಬಜೆಟ್‌ನಲ್ಲಿ ನಿಗದಿಪಡಿಸಿದ ಅಂಕಿಅಂಶಗಳಿಗೆ ಹೋಲಿಸಿದರೆ 1,12,000 ಕೋಟಿ ರೂ.  ಕಡಿತ ಮಾಡಿದೆ- ಕೇಂದ್ರ ಪ್ರಾಯೋಜಿತ ಸ್ಕೀಮುಗಳಿಗೆ  90,000 ಕೋಟಿ ರೂ.ಗಳಷ್ಟು ಮತ್ತು ಹಣಕಾಸು ಆಯೋಗ ಮತ್ತು ರಾಜ್ಯಗಳಿಗೆ ಇತರ ವರ್ಗಾವಣೆಗಳನ್ನು 22,000 ಕೋಟಿ ರೂ.ಗಳಷ್ಟು ಕಡಿಮೆ ಮಾಡಿದೆ. ಹೀಗಾಗಿ ಬಜೆಟ್ ಒಕ್ಕೂಟ ತತ್ವವನ್ನು ದುರ್ಬಲಗೊಳಿಸುವ  ಮತ್ತು ರಾಜ್ಯಗಳ ಹಕ್ಕುಗಳ ಮೇಲೆ ದಾಳಿ ನಡೆಸುವ ನಿಲುವನ್ನು ಬಿಂಬಿಸುತ್ತದೆ ಎಂದು ಪೊಲಿಟ್‍ಬ್ಯುರೊ ಖಂಡಿಸಿದೆ.

2024 -25 ರಲ್ಲಿನ ಕಡಿತಗಳು ಬಂಡವಾಳ ವೆಚ್ಚಗಳ ಮೇಲೂ ಪರಿಣಾಮ ಬೀರುತ್ತವೆ-ಬಜೆಟ್‌ನಲ್ಲಿ ನಿಗದಿಪಡಿಸಿದ್ದಕ್ಕಿಂತ ಸುಮಾರು 93,000 ಕೋಟಿ ರೂ.ಗಳಷ್ಟು ಕಡಿಮೆ. ಆಹಾರ ಸಬ್ಸಿಡಿಗಳು, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ನಗರಾಭಿವೃದ್ಧಿ – ಇವೆಲ್ಲವೂ ಈ ಕಡಿತವನ್ನು ಎದುರಿಸಿವೆ ಮತ್ತು 2025-26 ರ ಬಜೆಟ್ ಅಂಕಿಅಂಶಗಳು 2024-25 ರಂತೆಯೇ ಇವೆ. ಹಣದುಬ್ಬರವನ್ನು ಒಂದು ಅಂಶವಾಗಿ ಪರಿಗಣಿಸಿದರೆ ಮತ್ತು ಕಳೆದ ವರ್ಷಕ್ಕಿಂತ ಜಿಡಿಪಿ ಯ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂಬುದನ್ನು ಪರಿಗಣಿಸಿದರೆ,  ಹಂಚಿಕೆಗಳು ವಾಸ್ತವವಾಗಿ ನಿಶ್ಚಲವಾಗಿವೆ ಎಂದು ವಿಶ್ಲೇಷಿಸಿರುವ ಸಿಪಿಐ(ಎಂ) ಅದಕ್ಕೆ ಈ ಕೆಲವು ಉದಾಹರಣೆಗಳನ್ನು ಕೊಟ್ಟಿದೆ.

  •  ಕಳೆದ ಬಜೆಟ್‌ನಲ್ಲಿ ಆಹಾರಕ್ಕಾಗಿ ಹಂಚಿಕೆ ರೂ. 2.05 ಲಕ್ಷ ಕೋಟಿಗಳಷ್ಟಿತ್ತು ಆದರೆ ಕಳೆದ ವರ್ಷದ ವೆಚ್ಚದ ಪರಿಷ್ಕೃತ ಅಂದಾಜಿನಲ್ಲಿ 7830 ಕೋಟಿಗಳಷ್ಟು ಕಡಿಮೆಯಾಗಿದೆ, ಆದರೆ ಈ ಬಜೆಟ್‌ನಲ್ಲಿ ಪ್ರಸ್ತಾವಿತ ಅಂಕಿ ಅಂಶವು 2.03 ಲಕ್ಷ ಕೋಟಿಗಳಷ್ಟಿದೆ, ಅಂದರೆ  ಕಳೆದ ವರ್ಷದ ಬಜೆಟ್ ನಲ್ಲಿ ಒದಗಿಸಿದ್ದಕ್ಕಿಂತ ಕಡಿಮೆಯಾಗಿದೆ.
  •  ಅದೇ ರೀತಿ ಶಿಕ್ಷಣದ ವಿಷಯದಲ್ಲಿ ಕಳೆದ ವರ್ಷದ ಬಜೆಟ್ ಹಂಚಿಕೆ ರೂ. 1.26 ಲಕ್ಷ ಕೋಟಿಗಳಷ್ಟಿತ್ತು.  ಆದರೆ ಪರಿಷ್ಕೃತ ಅಂದಾಜು ರೂ.11584 ಕೋಟಿ ಕಡಿಮೆ ಖರ್ಚು ಮಾಡಲಾಗಿದೆ  ಎಂದು ತೋರಿಸುತ್ತದೆ. ಆದರೆ ಈ ಬಜೆಟ್‌ನಲ್ಲಿ ಹಂಚಿಕೆ ಕಳೆದ ವರ್ಷದ ಬಜೆಟ್ ಅಂದಾಜುಗಳಿಗಿಂತ ಕೇವಲ ರೂ.14596 ಕೋಟಿ ಹೆಚ್ಚಾಗಿದೆ. ಇದು ನಾಮಿನಲ್ ಪರಿಭಾಷೆಯಲ್ಲಿ ಕೇವಲ 2.3 ಶೇ. ಹೆಚ್ಚಳವಾಗಿದೆ, ಆದರೆ  ಹಣದುಬ್ಬರವನ್ನು ಪರಿಗಣಿಸಿದರೆ ನೈಜ ವಾಗಿ ಯಾವುದೇ ಹೆಚ್ಚಳವಿಲ್ಲ.
  • ಆರೋಗ್ಯ ಹಂಚಿಕೆಗೆ ಸಂಬಂಧಿಸಿದಂತೆಯೂ ಪರಿಷ್ಕೃತ ಅಂದಾಜು ಕಳೆದ ವರ್ಷದ ಬಜೆಟ್ ಅಂದಾಜಿಗಿಂತ ಕಡಿಮೆಯಾಗಿದೆ.
  •  ಕೃಷಿ ಮತ್ತು ಸಂಬಂಧಿತ ವಲಯದಲ್ಲಿ ಕಳೆದ ಬಜೆಟಿನ ಅಂದಾಜು ರೂ. 1.5 ಲಕ್ಷ ಕೋಟಿಗಳಷ್ಟಿತ್ತು ಮತ್ತು ಸರ್ಕಾರವು ಪರಿಷ್ಕೃತ ಅಂದಾಜಿನ ಪ್ರಕಾರ ರೂ.10992 ಕೋಟಿಗಳಷ್ಟು ಕಡಿಮೆ ಖರ್ಚು ಮಾಡಿದೆ.
  • ಎಲ್‌ಪಿಜಿ ಸಬ್ಸಿಡಿಯನ್ನು ಕಳೆದ ವರ್ಷದ ಪರಿಷ್ಕೃತ ಅಂದಾಜಿನ ಪ್ರಕಾರ ರೂ.14.7 ಸಾವಿರ ಕೋಟಿಗಳಿಂದ ಈ ವರ್ಷದ ಬಜೆಟ್‌ನಲ್ಲಿ 12 ಸಾವಿರ ಕೋಟಿಗಳಿಗೆ ಇಳಿಸಲಾಗಿದೆ.

ಸರ್ಕಾರದ ಬೂಟಾಟಿಕೆಯ ಸಂಕೇತವಾಗಿ, ಗ್ರಾಮೀಣ ಬಡವರಿಗೆ ಜೀವನಾಡಿಯಾಗಿರುವ ಮತ್ತು ಅವರ ಹಕ್ಕಾಗಿರುವ  ‘ಮನರೇಗ’ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ  ಉದ್ಯೋಗ ಖಾತರಿ) ಯೋಜನೆಗೆ ನಿಕೃಷ್ಟ  ಹಂಚಿಕೆ ಕೊಡಲಾಗಿದೆ. ಬೇಡಿಕೆ ಹೆಚ್ಚಿದ್ದರೂ  ಹಂಚಿಕೆ 86,000 ಕೋಟಿ ರೂಪಾಯಿಗಳಲ್ಲಿ ಸ್ಥಗಿತಗೊಂಡಿದೆ. ಇದು ಗ್ರಾಮೀಣ ಬಡವರ ಮೇಲೆ ಕ್ರೂರ ಹೊಡೆತ ಮಾತ್ರವಲ್ಲ, 100 ದಿನಗಳ ಕೆಲಸದ ಕಾನೂನುಬದ್ಧ ಹಕ್ಕಿನ ಮೇಲಿನ ನೇರ ದಾಳಿಯಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಕೃಷಿ ಸಂಕಷ್ಟ ಮತ್ತು ರೈತರ ಆತ್ಮಹತ್ಯೆಗಳನ್ನು ಪರಿಹರಿಸುವಲ್ಲಿ ಒಂದು ನಿರ್ಣಾಯಕ ಸಂಗತಿಯಾಗಿರುವ  ರೈತರ ಕನಿಷ್ಟ ಬೆಂಬಲ ಬೆಲೆ (ಎಂಎಸ್‍ಪಿ)ಬೇಡಿಕೆಯನ್ನು ಕೂಡ ಸರ್ಕಾರವು ಬದಿಗೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬಜೆಟ್‌ನಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಮಹಿಳೆಯರಿಗಾಗಿ ಖರ್ಚುಗಳ ಬಗ್ಗೆ  ಪ್ರತ್ಯೇಕ ಹೇಳಿಕೆಗಳಿವೆ. ಇವು ಮೇಲ್ನೋಟಕ್ಕೇ  ಬಜೆಟ್ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯವನ್ನು  ತೋರಿಸುತ್ತವೆ. 2024-25ರಲ್ಲಿ ಪರಿಶಿಷ್ಟ ಜಾತಿಗಳಿಗೆ ಹಂಚಿಕೆಯು 27,000 ಕೋಟಿ ರೂ.ಗಳ ಕಡಿತವನ್ನು ಎದುರಿಸಿದೆ, ಪರಿಶಿಷ್ಟ ಪಂಗಡಗಳಿಗೆ ಅದೇ ರೀತಿ 17,000 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ,. ಒಟ್ಟು ಖರ್ಚಿನಲ್ಲಿ ಅಂತಹ ವೆಚ್ಚಗಳ ಪಾಲು ಜನಸಂಖ್ಯೆಯಲ್ಲಿ ಈ ಸಾಮಾಜಿಕ ಗುಂಪುಗಳ ಪಾಲುಗಳಿಗೆ ಅನುಗುಣವಾಗಿ ಇರಬೇಕೆಂಬ ಮಾರ್ಗಸೂಚಿಗಳಿದ್ದರೂ  ಗಮನಾರ್ಹವಾಗಿ ಕಡಿತಗೊಂಡಿವೆ. 2025-26ರಲ್ಲಿ, ಹಂಚಿಕೆಗಳು ಎಸ್‍.ಸಿ. ಮತ್ತು ಎಸ್‍.ಟಿ. ಗಳಿಗೆ ಒಟ್ಟು ವೆಚ್ಚದಲ್ಲಿ ಕ್ರಮವಾಗಿ 3.4% ಮತ್ತು 2.6% ಮಾತ್ರ.

ಬಜೆಟ್ ಅಂಕಿಅಂಶಗಳಿಗೆ ಹೋಲಿಸಿದರೆ ಈಶಾನ್ಯ ಪ್ರದೇಶಗಳಿಗೆ ಹಂಚಿಕೆಗಳನ್ನು ಕೂಡ 13,000 ಕೋಟಿ ರೂ.ಗಳಷ್ಟು ಕಡಿಮೆ ಮಾಡಲಾಗಿದೆ,

ಮಕ್ಕಳ ಕಲ್ಯಾಣಕ್ಕಾಗಿಯೂ ಸಹ ಕಡಿತಗೊಳಿಸಲಾಗಿದೆ. 2024-25ರ ಲಿಂಗ ಬಜೆಟ್ ಸಹ 2023-24ಕ್ಕಿಂತ ಕಡಿಮೆಯಾಗಿದೆ. ಈ ಬಾಬ್ತುಗಳ ಅಡಿಯಲ್ಲಿ ಹಂಚಿಕೆಗಳು 2025-26 ರಲ್ಲೂ ಕೆಳಮಟ್ಟದಲ್ಲಿಯೇ ಇವೆ ಎಂದು ಪೊಲಿಟ್‍ಬ್ಯುರೊ ಗಮನಿಸಿದೆ.

ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ “ಮಧ್ಯಮ ವರ್ಗಗಳಿಗೆ ಸಹಾಯ ಮಾಡಲಾಗುತ್ತಿದೆ” ಎಂದು ಬಹಳವಾಗಿ ಹೇಳಿಕೊಳ್ಳಲಾಗುತ್ತಿದೆ. ವಾಸ್ತವವಾಗಿ, ವೈಯಕ್ತಿಕ ಆದಾಯ ತೆರಿಗೆಯಲ್ಲಿನ ಈ ಬದಲಾವಣೆಗಳಿಂದ ಮಧ್ಯಮ ವರ್ಗಕ್ಕೆ ಸಿಗುವ ಪ್ರಯೋಜನದ ಪ್ರಮಾಣವು ಶ್ರೀಮಂತ ವರ್ಗಕ್ಕೆ – ಭಾರತದ ಜನಸಂಖ್ಯೆಯ ಶೇಕಡಾ 1 ಕ್ಕಿಂತ ಕಡಿಮೆ ಇರುವ ಮಂದಿಗೆ – ಆಗುವ ಪ್ರಯೋಜನಗಳಿಗೆ ಹೋಲಿಸಿದರೆ ಚಿಕ್ಕದಾಗಿರುತ್ತದೆ. ಆದಾಯ ತೆರಿಗೆ ರಿಯಾಯಿತಿಗಳಿಂದಾಗಿ ಸರ್ಕಾರ ಅನುಭವಿಸುವ ರೂ. 1 ಲಕ್ಷ ಕೋಟಿ ನಷ್ಟದಿಂದ ಪ್ರಯೋಜನದ  ಸಿಂಹಪಾಲು ಪಡೆಯುವವರು ಈ ಒಂದು ಶೆಕಡಾ ಮಂದಿ. ಇನ್ನೂ ಮುಖ್ಯವಾಗಿ, ಉನ್ನತ ಆದಾಯದ ಸ್ಲ್ಯಾಬ್‌ಗಳಲ್ಲಿ ತೆರಿಗೆ ದರಗಳನ್ನು ಹೆಚ್ಚಿಸಿ, ಇದನ್ನು ಕೆಳ ಮಧ್ಯಮ ವರ್ಗದ ತೆರಿಗೆ ಹೊರೆಯಲ್ಲಿನ ಕಡಿತದೊಂದಿಗೆ ಸರಿಹೊಂದಿಸಬಹುದಾಗಿತ್ತು. ಆದರೆ ಹಾಗೆ ಮಾಡದಿರಲು ಈ ಸರಕಾರ ನಿರ್ಧರಿಸಿದೆ ಎಂಬ ಸಣಗತಿಯತ್ತವೂ ಸಿಪಿಐ(ಎಂ) ಗಮನ ಸೆಳೆದಿದೆ.

ಹೀನಾಯವಾಗಿ ವಿಫಲವಾಗಿರುವ  ನೀತಿಯ ಇತ್ತೀಚಿನ ಕಂತು

2025-26 ರ ಕೇಂದ್ರ ಬಜೆಟ್ ಮೋದಿ ಸರ್ಕಾರದ ದಿವಾಳಿತನವನ್ನು ಬಿಂಬಿಸುತ್ತದೆ ಎಂದಿರುವ ಪೊಲಿಟ್‍ಬ್ಯುರೊ ಶ್ರೀಮಂತರು ಮತ್ತು ಕಾರ್ಪೊರೇಟ್ ವಲಯದ ಹಿತಾಸಕ್ತಿಗಳನ್ನು ರಕ್ಷಿಸಲು ಅದು ಎಷ್ಟು ಕಟಿಬದ್ಧವಾಗಿದೆಯೆಂದರೆ ಅದು ಅರ್ಥವ್ಯವಸ್ಥೇಯ ಮಂದಗತಿಯನ್ನು ಪರಿಹರಿಸಲು ಯಾವುದೇ ನೈಜ ನೀತಿಯನ್ನು ರೂಪಿಸಲು ಸಹ ಅಸಮರ್ಥವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಕಟುವಾಗಿ ಟೀಕಿಸಿದೆ. ಬಿಕ್ಕಟ್ಟಿನ ಪ್ರಮಾಣವಾಗಲಿ, ಅದರ ಸ್ವರೂಪವಾಗಲಿ ಸರ್ಕಾರ ಮತ್ತು ಅದರ ಹಣಕಾಸು ಸಚಿವರಿಗೆ ಗೋಚರಿಸುವಂತೆ ಕಾಣುತ್ತಿಲ್ಲ – ಅವರು ಅರ್ಥವ್ಯವಸ್ಥೆಯ  ಉಸ್ತುವಾರಿಯನ್ನು  ತಾವು ಎಷ್ಟೊಂದು ಮಹಾನ್ ರೀತಿಯಲ್ಲಿ ನಡೆಸುತ್ತಿದ್ದೇವೆ ಎಂಬ ಭ್ರಮೆಯಲ್ಲೇ  ಮುಂದುವರಿಯುತ್ತಿದ್ದಾರೆ. ಅವರ ಉಸ್ತುವಾರಿ ಎಷ್ಟು ಮಹಾನ್‍ ಆಗಿದೆ ಎಂದರೆ, ಆರ್ಥಿಕ ಸಮೀಕ್ಷೆ ತೋರಿಸಿರುವಂತೆ,  ಭಾರತದಲ್ಲಿ ಕೂಲಿ-ಸಂಬಳಗಳು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಕೆಳಗೇ ಇವೆ, ಮತ್ತು ಬೇಡಿಕೆಯ ನಿರ್ಬಂಧಗಳಿಂದಾಗಿ ಬೆಳವಣಿಗೆಯೂ ನಿಧಾನವಾಗುತ್ತಿದೆ ಎಂದು ಗೇಲಿ ಮಾಡಿರುವ ಸಿಪಿಐ(ಎಂ) ಖರ್ಚುಗಳನ್ನು ಸಂಕುಚಿತಗೊಳಿಸುವುದು ಮತ್ತು ಶ್ರೀಮಂತರ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುವುದು ಮತ್ತು ಖಾಸಗಿ ಕಾರ್ಪೊರೇಟ್ ಮತ್ತು ವಿದೇಶಿ ಹೂಡಿಕೆದಾರರ ‘ಗೂಳಿ ಉತ್ಸಾಹವನ್ನು ಹರಿಯ’ಬಿಡಲೆಂಬ ಉದ್ದೇಶದ ಇತರ ಕ್ರಮಗಳು ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಹೂಡಿಕೆ ಮತ್ತು ಉದ್ಯೋಗ ಬೆಳವಣಿಗೆಯನ್ನು ಉತ್ಪಾದಿಸಲು ಕೆಲಸ ಮಾಡಿಲ್ಲ ಎಂಬುದಕ್ಕೆ ಈಗ ಸಾಕಷ್ಟು ಪುರಾವೆಗಳಿವೆ ಎನ್ನುತ್ತ 2025-26ರ ಕೇಂದ್ರ ಬಜೆಟ್ ಹೀನಾಯವಾಗಿ ವಿಫಲವಾಗಿರುವ  ನೀತಿಯ ಇತ್ತೀಚಿನ ಕಂತು ಮಾತ್ರ ಎಂದು ಕಟುವಾಗಿ ಟೀಕಿಸದೆ.

ಮೋದಿ ಸರ್ಕಾರದ ಈ ಜನವಿರೋಧಿ ಬಜೆಟ್ ವಿರುದ್ಧ ಜನರನ್ನು ಅಣಿನರೆಸಬೇಕು ಮತ್ತು ಪ್ರತಿಭಟನೆಗಳನ್ನು ಸಂಘಟಿಸಬೇಕು ಎಂದು  ಸಿಪಿಐ (ಎಂ) ಪೊಲಿಟ್ ಬ್ಯೂರೋ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *