ರೈತರ ನ್ಯಾಯಬದ್ಧ ಬೇಡಿಕೆಗಳಿಗೆ ಕುರುಡಾದ ಬಜೆಟ್ – ರೈತ ಸಂಘಟನೆ ಆರೋಪ

ಬೆಂಗಳೂರು : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಈ ಬಜೆಟ್ ರೈತ ಹೋರಾಟಕ್ಕೆ ಪ್ರತಿಯಾಗಿ ಸೇಡು ಮನೋಭಾವದ ಅಭಿವ್ಯಕ್ತಿ ಬಡವರ ವಿರೋಧಿ, ರೈತ ವಿರೋಧಿ ಬಜೆಟ್; ರೈತರ ಉತ್ಪನ್ನಗಳ ಖರೀದಿ, ಆಹಾರ, ರಸಗೊಬ್ಬರ ಹಾಗೂ ನರೇಗಾ ಕ್ಕೆ ಅನುದಾನ ಕಡಿತ ಮಾಡಿರುವ ರೈತರ ನ್ಯಾಯಬದ್ಧ ಬೇಡಿಕೆಗಳಿಗೆ ಕುರುಡಾದ ಬಜೆಟ್ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಆರೋಪಿಸಿದೆ.

ಬಿಜೆಪಿ ಸರ್ಕಾರ ಮಂಡಿಸಿರುವ 2022-23 ರ ಈ ಒಕ್ಕೂಟ ಬಜೆಟ್ ರೈತರ ನ್ಯಾಯಬದ್ದವಾದ ಬೇಡಿಕೆಗಳನ್ನು ಸಂಪೂರ್ಣ ನಿರ್ಲಕ್ಷಿಸಿರುವ ಯಶಸ್ವಿ ಸಂಯುಕ್ತ ರೈತ ಚಳುವಳಿ ಮೇಲೆ ಸೇಡು ಕಾರಿಕೊಂಡಿರುವ ಬಜೆಟ್ ಆಗಿದೆ. ರೈತರಿಗೆ ಹಾಗೂ ಕೃಷಿ ಕೂಲಿಕಾರರಿಗೆ ಯಾವುದೇ ಪರಿಹಾರವನ್ನು ಈ ಬಜೆಟ್ ಹೊಂದಿಲ್ಲ. ಲಾಭದಾಯಕ ಖಾತರಿ ಖರೀದಿ ಹಾಗೂ ಸಾಲ ಮನ್ನಾ ದಂತಹ ರೈತರ ಬೇಡಿಕೆಗಳನ್ನು ಅವಹೇಳನ ಮಾಡಿದೆ ಎಂದು ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಆರೋಪಿಸಿದ್ದಾರೆ.

2021-22 ರಲ್ಲಿ ಇದ್ದ 474750.47 ಕೋಟಿ ರೂಗಳ (ಪರಿಷ್ಕೃತ ಅಂದಾಜು) ಅನುದಾನವು 370303 ಕೋಟಿ ರೂಗಳಿಗೆ ಇಳಿಕೆ ಯಾಗಿದ್ದು ಒಂದು ಲಕ್ಷ ಕೋಟಿ ರೂ ಗೂ ಹೆಚ್ಚಿನ ಕಡಿತ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಪಾಲು ಬಜೆಟ್ ನ ಶೇಕಡಾ 5.59 ರಿಂದ ಶೇಕಡಾ 5.23 ಕ್ಕೆ ಇಳಿದಿದೆ. ರೈತರ ಉತ್ಪನ್ನಗಳ ಖರೀದಿ, ನರೇಗಾ, ಬೆಳೆ ವಿಮೆ, ಆಹಾರ ಹಾಗೂ ರಸಗೊಬ್ಬರ ಸಬ್ಸಿಡಿಗಳ ಅನುದಾನವನ್ನು ಕಡಿತ ಮಾಡಿರುವ ರೈತ ವಿರೋಧಿ ಬಜೆಟ್ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಅತ್ಯಂತ ಕಟುವಾಗಿ ಟೀಕಿಸುತ್ತದೆ ಎಂದಿದ್ದಾರೆ.

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ರವರು 2022-23 ರ ಸಾಲಿಗೆ ಭತ್ತ ಹಾಗೂ ಗೋಧಿ ಖರೀದಿಗೆ 2.37 ಲಕ್ಷ ಕೋಟಿ ರೂಗಳನ್ನು ತೆಗೆದಿರಿಸಿದ್ದೇನೆ ಎಂದು ಉತ್ಪ್ರೇಕ್ಷೆಯಿಂದ ಹೇಳಿಕೊಳ್ಳುತ್ತಿದ್ದಾರೆ, ಆದರೆ ವಾಸ್ತವದಲ್ಲಿ ಕಳೆದ ವರ್ಷ ಮೀಸಲಿಟ್ಟಿದ್ದ 2.48 ಲಕ್ಷ ಕೋಟಿ ರೂ ಗಿಂತ ಇದು ಕಡಿಮೆ ಹಾಗೂ ಈ ಖರೀದಿ ಯ ಫಲಾನುಭವಿಗಳ ಸಂಖ್ಯೆ ಯನ್ನು ಕೂಡ 1.63 ಕೋಟಿಗಳಿಗೆ ಇಳಿಸಲಾಗಿದ್ದು ಈ ಸಂಖ್ಯೆ ಕಳೆದ ವರ್ಷ 1.97 ಕೋಟಿಯಷ್ಟಿತ್ತು. ಎಲ್ಲಾ ಬೆಳೆಗಳಿಗೆ ಖರೀದಿ ವಿಸ್ತರಿಸಬೇಕು ಎಂದು ನಾವು ಒತ್ತಾಯಿಸುತ್ತಿರುವಾಗ ಖರೀದಿ ವ್ಯಾಪ್ತಿಯಲ್ಲಿ ಇದ್ದ 34 ಲಕ್ಷ ರೈತರನ್ನು ಹೊರಗಿಟ್ಟಿರುವುದು ಈ ಅಂತರವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದ್ದಾರೆ.

ಭಾರತ ಆಹಾರ ನಿಗಮ (FCI) ಕ್ಕೆ ಹಾಗೂ ವಿಕೇಂದ್ರೀಕೃತ ಖರೀದಿ ಯೋಜನೆಗೆ ಒದಗಿಸಿರುವ ಅನುದಾನದ ಪ್ರಮಾಣದಲ್ಲಿ ಶೇಕಡಾ 28 ರಷ್ಟು ಅಗಾಧ ಮಟ್ಟದಲ್ಲಿ ಕಡಿತ ಮಾಡಲಾಗಿದೆ. ಒಂದು ಕಡೆ ಅನುದಾನದ ಕಡಿತ ಇನ್ನೊಂದು ಕಡೆ ಹಣದುಬ್ಬರ ಎರಡೂ ಸೇರಿ 2022-23 ರ ಖರೀದಿ ಯನ್ನು ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಮಾಡಲಿದೆ. ರಸಗೊಬ್ಬರ ಸಬ್ಸಿಡಿ ಗೆ ನೀಡುವ ಅನುದಾನದಲ್ಲಿ ಶೇಕಡಾ 25 ರಷ್ಟು ಕಡಿತ ಆಗಿದೆ. ಈಗಾಗಲೇ ರಸಗೊಬ್ಬರದ ದರಗಳು ವಿಪರೀತವಾಗಿ ಹೆಚ್ಚಳವಾಗಿರುವ ಸಂದರ್ಭದಲ್ಲಿ ಈ ಕಡಿತವು ಕೃಷಿ ಉತ್ಪಾಕತೆಯ ಮೇಲೆ ಕರಾಳ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ 16000 ಕೋಟಿ ರೂ ನಷ್ಟು ಇದ್ದ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ ಅನುದಾನವನ್ನು 15500 ಕೋಟಿ ರೂಗಳಿಗೆ ಇಳಿಸಲಾಗಿದೆ. 2019 ರಲ್ಲಿ ಪಿಎಂ ಕಿಸಾನ್ ಯೋಜನೆ ಘೋಷಿಸಿದ್ದಾಗ ಒದಗಿಸಿದ್ದ ಅನುದಾನಕ್ಕಿಂತ ಶೇಕಡಾ 9 ರಷ್ಟು ಕಡಿಮೆ ನೀಡಲಾಗಿದೆ. ಈ ಮೊದಲು 14 ಕೋಟಿ ರೈತ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳು ಎಂದು ಹೇಳಿಕೊಳ್ಳಲಾಗುತ್ತಿದ್ದದ್ದನ್ನು ಈಗ 12.5 ಕೋಟಿ ಎಂದು ತನ್ನ ಗುರಿಯನ್ನೇ ಕಡಿಮೆ ಮಾಡಿಕೊಂಡಿದೆ. ಹಾಗಿದ್ದರೂ ಪ್ರತಿ ಕುಟುಂಬಕ್ಕೆ ತಲಾ 6000 ರೂ ಎಂದರೂ 75000 ಕೋಟಿ ರೂ. ಬೇಕಾಗುತ್ತದೆ. ಆದರೆ ಒದಗಿಸಿರುವುದು ಮಾತ್ರ 68000 ಕೋಟಿ ರೂ ಮಾತ್ರ. ಜಾನುವಾರು ವಿಮೆಗೆ 28000 ಕೋಟಿ ರೂಗಳಷ್ಟು (18%) ಕಡಿತ ಮಾಡಲಾಗಿದೆ.

ಆಹಾರ ದಾಸ್ತಾನು ಮತ್ತು ಗೊಡೌನ್ ಗಳಿಗೆ 84000 ಕೋಟಿ ರೂಗಳಷ್ಟು (28%) ಕಡಿತ ಮಾಡಲಾಗಿದೆ. ಆರ್ಥಿಕ ಸಮೀಕ್ಷೆ ಯು ಕೃಷಿ ಕುಟುಂಬದ ಸರಾಸರಿ ಮಾಸಿಕ ಆದಾಯ 10218 ರೂ ಮಾತ್ರ ಎಂದು ಬೊಟ್ಟು ಮಾಡಿ ಹೇಳಿದ್ದಾಗ್ಯೂ ಕೃಷಿಯಿಂದ ರೈತ ವ್ಯಕ್ತಿ ಒಂದು ದಿನಕ್ಕೆ ಅತಿ ಕನಿಷ್ಟ 27 ರೂ ಮಾತ್ರ ಗಳಿಸುತ್ತಿದ್ದಾನೆ. ಏಳು ವರ್ಷಗಳ ನರೇಂದ್ರ ಮೋದಿ ಬಿಜೆಪಿ ಸರ್ಕಾರವು ರೈತರ ಆದಾಯವನ್ನು ದ್ವಿಗುಣ ಗೊಳಿಸುವ ಬದಲಾಗಿ ಮತ್ತಷ್ಟು ಕುಗ್ಗಿಸಿದೆ ಎಂಬುದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಅಭಿಪ್ರಾಯವಾಗಿದೆ.

ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲಿ ಉದ್ಯೋಗದ ಅವಕಾಶಗಳು ತೀವ್ರವಾಗಿ ಕ್ಷೀಣಿಸಿರುವಾಗ ನರೇಗಾ ಯೋಜನೆಯ ಅನುದಾನವನ್ನು ಕಡಿತ ಮಾಡಲಾಗಿದೆ. 2021-22 ರ ಪರಿಷ್ಕೃತ ಅಂದಾಜು 98000 ಕೋಟಿ ರೂ ಆಗಿದ್ದರೂ ಈ ಬಜೆಟ್ ಕೇವಲ 73000 ಕೋಟಿ ರೂ ಮಾತ್ರ ತೆಗೆದಿರಿಸಿದೆ. ಇತ್ತೀಚಿನ ಒಂದು ಅಧ್ಯಯನ ದ ಪ್ರಕಾರ ಕುಟುಂಬಕ್ಕೆ ನೂರು ದಿನ ಉದ್ಯೋಗ ಒದಗಿಸಲು ಹಾಗೂ ಹಿಂದಿನ ಬಾಕಿ ಸುಮಾರು 21000 ಕೋಟಿ ರೂ. ಗಳನ್ನು ಪಾವತಿಸಲು 2.64 ಲಕ್ಷ ಕೋಟಿ ರೂ ಬೇಕಾಗುತ್ತದೆ. ಸ್ಪಷ್ಟವಾಗಿ ಬಡತನದ ಕೃಷಿ ಕೂಲಿಕಾರರು ಬಿಜೆಪಿ ಸರ್ಕಾರದ ಅಧ್ಯತೆಯಲ್ಲಿ ಇಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಟೀಕಿಸಿದೆ.

ಈ ಒಕ್ಕೂಟ ಬಜೆಟ್ ಅಸಮಾನತೆಯ ಅಂತರವನ್ನು ಮಾತ್ರ ಹೆಚ್ಚಿಸಲಿದ್ದು, ಬಡತನ, ನಿರುದ್ಯೋಗ ಹಾಗೂ ಹಸಿವನ್ನು ತೀವ್ರಗೊಳಿಸಲಿದೆ. ಅದ್ದರಿಂದ ರೈತರು, ಕೃಷಿ ಕೂಲಿಕಾರರು ಸೇರಿದಂತೆ ಎಲ್ಲಾ ನಾಗರಿಕರು ಈ ಜನ ವಿರೋಧಿ ಬಜೆಟ್ ಅನ್ನು ವಿರೋಧಿಸಬೇಕು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಈ ರೈತ ವಿರೋಧಿ ನಿರ್ಲಕ್ಷ್ಯದ ವಿರುದ್ದ ಸಾಧ್ಯವಿರುವ ಎಲ್ಲಾ ಜನ ವಿಭಾಗಗಳನ್ನು ಒಳಗೊಂಡು ವಿಶಾಲ ಪ್ರತಿರೋಧ ವನ್ನು ಒಡ್ಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *