ದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದರು.
ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಆಗಿದೆ. 2022-23ನೇ ಸಾಲಿನ ಬಜೆಟ್‍ನಲ್ಲಿ ಹಲವು ಖಾಸಗೀಕರಣ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಬಜೆಟ್ ನ ಮುಖ್ಯಾಂಶಗಳನ್ನು ಈ ರೀತಿಯಾಗಿ ನೋಡಬಹುದಾಗಿದೆ.
ಪಿಎಂ ಆವಾಸ್ ಯೋಜನೆಗೆ ರೂ.48,000 ಕೋಟಿ ಅನುದಾನ ಮೀಸಲಿಟ್ಟಿದೆ. 2022-23ರಲ್ಲಿ 80 ಲಕ್ಷ ಮನೆಗಳನ್ನು ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 60,000 ಮನೆಗಳನ್ನು ಹಂಚಲು ಜನರನ್ನು ಗುರುತಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.
ಡಿಜಿಟಲ್ ಕರೆನ್ಸಿಯ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಗೊಂದಲಗಳಿಗೆ ಬಜೆಟ್ ನಲ್ಲಿ ಸ್ಪಷ್ಟತೆ ಸಿಕ್ಕಿದೆ. ಡಿಜಿಟಲ್ ಕರೆನ್ಸಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. 2022 ರಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) “ಡಿಜಿಟಲ್ ರುಪೀ” ಪರಿಚಯಿಸಲಿದೆ ಎಂದು ತಿಳಿಸಿದ್ದಾರೆ.
ಇ-ಪಾಸ್ ಪೋರ್ಟ್ ನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಹೊರಡಿಸಲಾಗುವುದು. ಈ ಮೂಲಕ ನಾಗರಿಕರಿಗೆ ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ವೇಳೆ ಪ್ರಕಟಿಸಿದ್ದಾರೆ.
2022-23 ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ. ತೆರಿಗೆ ಇಳಿಕೆ ಮಾಡಿರುವುದರ ಪರಿಣಾಮ ಒಂದಷ್ಟು ಉತ್ಪನ್ನ, ಪದಾರ್ಥಗಳ ಬೆಲೆಯೂ ಇಳಿಕೆಯಾಗಿದೆ.
ಸರ್ಚಾರ್ಜ್ ಇಳಿಕೆ: ಸಹಕಾರ ಸಂಘಗಳ ಮೇಲಿನ ಸರ್ಚಾರ್ಜ್ ಇಳಿಕೆ. ಶೇ.12ರಿಂದ ಶೇ.7ಕ್ಕೆ ಇಳಿಕೆ ಮಾಡಲು ನಿರ್ಧಾರ. 10 ಕೋಟಿಯೊಳಗಿನ ಆದಾಯದ ಸಹಕಾರ ಸಂಘಗಳಿಗೆ ಇದು ಅನ್ವಯ.
ಬಂಡವಾಳ ಹೂಡಲು ರಾಜ್ಯಗಳಿಗೆ ಅನುದಾನ:50 ವರ್ಷ ಕಾಲ ರಾಜ್ಯ ಸರ್ಕಾರಗಳಿಗೆ ಬಡ್ಡಿ ರಹಿತ ಸಾಲ ನೀಡಲು ಸರ್ಕಾರ ನಿರ್ಧರಿಸಿದೆ. ಡಿಜಿಟಲೈಸೇಷನ್ ಹಾಗೂ ನಗರ ಯೋಜನೆಗಳಿಗಾಗಿ 50 ವರ್ಷಗಳ ಕಾಲ ಸಾಲ ನೀಡಲು ನಿರ್ಧರಿಸಲಾಗಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆ (NPS) : ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ನಡುವೆ ಸಮಾನತೆ ಬೇಕು. ರಾಜ್ಯ ಸರ್ಕಾರಿ ನೌಕರರಿಗೆ ಇಪಿಎಫ್ ಮೇಲಿನ ತೆರಿಗೆ ಕಡಿತಕ್ಕೆ ಯೋಚಿಸಲಾಗಿದೆ.
ವಿಶೇಷ ಚೇತನರ ವಿಮೆ: ಅಂಗ ವೈಕಲ್ಯ ಇರುವವರಿಗೆ ಹೆಚ್ಚುವರಿಯಾದ ತೆರಿಗೆ ಡಿಡಕ್ಷನ್. ಅಂಥವರ ಪೋಷಕರು, ಪಾಲಕರಿಗೆ ದೊರೆಯಲಿದೆ. 60 ವರ್ಷ ಮೇಲ್ಪಟ್ಟ ವಿಶೇಷ ಚೇತನರಿಗೆ ಅವಕಾಶ.
ಸ್ಟಾರ್ಟಪ್‌ಗಳಿಗೆ ತೆರಿಗೆ ವಿನಾಯಿತಿ: ಕೊರೊನಾ ಸಂಕಷ್ಟ ಹಿನ್ನೆಲೆ ಸ್ಟಾರ್ಟಪ್‌ಗಳಿಗೆ ಇನ್ನೂ ಒಂದು ವರ್ಷ ತೆರಿಗೆ ವಿನಾಯಿತಿ ನೀಡಲಾಗಿದೆ.
ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಒತ್ತು:
ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಸರ್ಕಾರ ಒತ್ತು ನೀಡಲಿದೆ. ಡಿಆರ್ಡಿಒ ಸಹಯೋಗದಲ್ಲಿ ಸಂಶೋಧನೆಗಳನ್ನು ನಡೆಸಲು ಆಸಕ್ತರಿಗೆ ಅವಕಾಶ ನೀಡಲಾಗುವುದು. ಭದ್ರತೆಗೆ ಅಗತ್ಯವಿರುವ ಯುದ್ಧೋಪಕರಣಗಳೂ ಸೇರಿದಂತೆ ಎಲ್ಲ ಬಗೆಯ ಆಯುಧಗಳ ದೇಶೀ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುವುದು.
ಬಂಡವಾಳ ವೆಚ್ಚವು 2022-23ರಲ್ಲಿ ರೂ 10.68 ಲಕ್ಷ ಕೋಟಿ. ಬಂಡವಾಳ ವೆಚ್ಚವು ಒಟ್ಟು ಜಿಡಿಪಿಯ ಶೇಕಡಾ 4.1ರಷ್ಟಿದೆ.
ಶಿಕ್ಷಣ ಕ್ಷೇತ್ರ : ಈ ವರ್ಷದ ಬಜೆಟ್ ಶಿಕ್ಷಣ ಕ್ಷೇತ್ರಕ್ಕೂ ಕೆಲವು ಪ್ರಮುಖ ಘೋಷಣೆಗಳನ್ನು ಹೊಂದಿದೆ. ಡಿಜಿಟಲ್ ವಿಶ್ವವಿದ್ಯಾಲಯವನ್ನು ( Digital University ) ಪ್ರಾರಂಭಿಸುವುದು ಮತ್ತು ಪೂರಕ ಶಿಕ್ಷಣಕ್ಕಾಗಿ ‘ಒಂದು ವರ್ಗ ಒಂದು ಟಿವಿ ಚಾನೆಲ್’ (‘One class One TV channel) ಕಾರ್ಯಕ್ರಮ ಘೋಷಣೆ ಮಾಡಲಾಗಿದೆ.
ಕೃಷಿ ಕ್ಷೇತ್ರ : ಕೃಷಿ ವಲಯಕ್ಕೆ ಡ್ರೋನ್ಗಳ ಬಳಕೆಗೆ ಅನುಮತಿ. ಬೆಳೆ ದಾಖಲು, ಭೂ ದಾಖಲೆಗಳು, ಕೀಟನಾಶಕಗಳ ಸಿಂಪಡಣೆಗೆ ಕಿಸಾನ್ ಡ್ರೋನ್. ಗೋಧಿ ಮತ್ತು ಖಾರೀಫ್ ಉತ್ಪನ್ನ ಹೆಚ್ಚಳಕ್ಕೆ ಆದ್ಯತೆ. ರೈತರಿಗೆ ಎಣ್ಣೆಕಾಳು ಬೆಳೆಯಲು ಪ್ರೋತ್ಸಾಹ. ಸಿರಿಧಾನ್ಯ ಬೆಳೆಗಳಿಗೆ ರಾಷ್ಟ್ರೀಯ-ಅಂತರಾಷ್ಟ್ರೀಯ ಮಾರುಕಟ್ಟೆ. ಆರ್ಗ್ಯಾನಿಕ್ ಉತ್ಪನ್ನಗಳ ಹೆಚ್ಚಳಕ್ಕೆ ಆದ್ಯತೆ. ಗಂಗಾನದಿ ಬಳಿ ಸಾವಯ ಕೃಷಿಗೆ ಆದ್ಯತೆ
ಬೆಲೆ ಅಗ್ಗವಾಗಿರುವ ವಸ್ತು/ ಪದಾರ್ಥಗಳ ವಿವರ ಹೀಗಿದೆ.
- ಮೊಬೈಲ್
- ಚಾರ್ಜರ್
- ಚಿನ್ನ, ವಜ್ರಾಭರಣ
- ಎಲೆಕ್ಟ್ರಾನಿಕ್ಸ್ ಉಪಕರಣಗಳು
- ಬಟ್ಟೆ. ಚಪ್ಪಲಿ ಚರ್ಮದ ಉತ್ಪನ್ನಗಳು
- ವಿದೇಶಿ ಉತ್ಪನ್ನಗಳ ಬೆಲೆ ಇಳಿಕೆ
ಉಳಿದಂತೆ ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಈ ಹಿಂದೆ ಇದ್ದ ತೆರಿಗೆ ಪದ್ಧತಿಯನ್ನೇ ಮುಂದುವರೆಸಲಾಗಿದೆ.