ವಸಂತರಾಜ ಎನ್.ಕೆ
ಅಮೆರಿಕದ ‘ಅಮೆಜಾನ್’ ಎಂಬ ದೈತ್ಯ ಕಂಪನಿಯು ‘ಯೂನಿಯನ್-ಮುರುಕತನ’ ದಲ್ಲಿ ತೊಡಗಿದೆ ಎಂಬ ದೂರನ್ನು, RWDSU ಯೂನಿಯನ್ ಲೇಬರ್ ರಿಲೇಶನ್ಸ್ ಬೋರ್ಡ್ ಗೆ ನೀಡಿದೆ. ಯು.ಎಸ್ ನ ಎರಡನೇ ಅತಿ ದೊಡ್ಡ ಸಂಖ್ಯೆಯ (8 ಲಕ್ಷ) ಕಾರ್ಮಿಕರನ್ನು ಹೊಂದಿರುವ ಮತ್ತು ಜಗತ್ತಿನ ಅತಿ ದೊಡ್ಡ ಇ-ವ್ಯಾಪಾರ ಕಂಪನಿ ಆಗಿರುವ ‘ಅಮೆಜಾನ್’ ತನ್ನ ಯಾವುದೇ ಘಟಕದಲ್ಲಿ ಯೂನಿಯನ್ ಸಂಘಟಿಸುವುದರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುತ್ತಾ ಬಂದಿದೆ .ಕಾರ್ಮಿಕರ ಮೇಲೆ ಒತ್ತಡ ಮತ್ತು ದಮನಕಾರಿ ಕ್ರಮಗಳ ಮೂಲಕ,ಬೆಸ್ಸೆಮರ್ ನಲ್ಲಿರುವ ಅಮೆಜಾನ್ ನ ಗೋದಾಮಿ ನ ಕಾರ್ಮಿಕರು ಯೂನಿಯನ್ ಗೆ ಸೇರುವುದಿಲ್ಲವೆಂಬ ಅಭಿಮತಕ್ಕೆ ಬಹುಮತ ಬರುವಂತೆ ಆ ಪ್ರಕ್ರಿಯೆಯನ್ನು ತಿರುಚಿದೆ ಎಂದು ದೂರು ತಿಳಿಸಿದೆ. ಗೋದಾಮಿನಲ್ಲಿ ಕೆಲಸದ ಪರಿಸ್ಥಿತಿ ಹೇಗಿತ್ತು ?ಅಮೆಜಾನ್ ನ ಯೂನಿಯನ್-ಮುರುಕ ಕ್ರಮಗಳೇನು?RWDSU ಸೋತಿದೆಯೇ? ಸೋತಿದ್ದರೆ ಯಾಕೆ ಸೋತಿತು? ಮುಂದಿನ ಹೋರಾಟದ ರೂಪುರೇಷೆಗಳು ಏನು? ಈ ಕುರಿತು ವಿವರಿಸುವ ಲೇಖನ
ಅಮೆರಿಕದ ‘ಅಮೆಜಾನ್’ ಎಂಬ ದೈತ್ಯ ಕಂಪನಿಯು (ಜನಭಾಷೆಯಲ್ಲಿ ‘ಯೂನಿಯನ್-ಮುರುಕತನ’ ಅಥವಾ ಯೂನಿಯನ್-ಬಸ್ಟಿಂಗ್ ಎಂದು ಕರೆಯಲಾಗುವ) ‘ಅನ್ಯಾಯಯುತ ಕಾರ್ಮಿಕ ಆಚರಣೆ’ಗಳಲ್ಲಿ ತೊಡಗಿದೆ ಎಂಬ ದೂರನ್ನು, RWDSU (ರಿಟೈಲ್, ವೇರ್ ಹೌಸ್, ಡಿಪಾರ್ಟ್ ಮೆಂಟಲ್ ಸ್ಟೋರ್ ಯೂನಿಯನ್) ಅಲ್ಲಿನ NLRB (ನೇಶನಲ್ ಲೇಬರ್ ರಿಲೇಶನ್ಸ್ ಬೋರ್ಡ್) ಗೆ ನೀಡಿದೆ. ಯು.ಎಸ್ ನ ಎರಡನೇ ಅತಿ ದೊಡ್ಡ ಸಂಖ್ಯೆಯ (8 ಲಕ್ಷ) ಕಾರ್ಮಿಕರನ್ನು ಹೊಂದಿರುವ ಮತ್ತು ಜಗತ್ತಿನ ಅತಿ ದೊಡ್ಡ ಇ-ವ್ಯಾಪಾರ ಕಂಪನಿ ಆಗಿರುವ‘ಅಮೆಜಾನ್’ ತನ್ನ ಯಾವುದೇ ಘಟಕದಲ್ಲಿ ಯೂನಿಯನ್ ಸಂಘಟಿಸುವುದರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುತ್ತಾ ಬಂದಿದೆ. ಅಲಬಾಮಾ ರಾಜ್ಯದ ಬೆಸ್ಸೆಮರ್ ನಲ್ಲಿರುವ ಅಮೆಜಾನ್ ನ ಅತಿ ದೊಡ್ಡ ಗೋದಾಮಿ (ವೇರ್ ಹೌಸ್) ನಲ್ಲಿ ಯೂನಿಯನ್ ಮಾಡುವುದರ ಕುರಿತು ನಡೆದ ಕಾರ್ಮಿಕರ ಅಭಿಪ್ರಾಯ ಸಂಗ್ರಹದಲ್ಲಿ ಆ ಕಂಪನಿ ಕಾರ್ಮಿಕರ ಮೇಲೆ ಒತ್ತಡ ಮತ್ತು ದಮನಕಾರಿ ಕ್ರಮಗಳ ಮೂಲಕ ಯೂನಿಯನ್ ಗೆ ಸೇರುವುದಿಲ್ಲವೆಂಬ ಅಭಿಮತಕ್ಕೆ ಬಹುಮತ ಬರುವಂತೆ ಆ ಪ್ರಕ್ರಿಯೆಯನ್ನು ತಿರುಚಿದೆ ಎಂದು ದೂರು ತಿಳಿಸಿದೆ. ಆದ್ದರಿಂದ ಈ ಅಭಿಪ್ರಾಯ ಸಂಗ್ರಹವನ್ನು ರದ್ದು ಮಾಡಿ ಪುನಃ ನಡೆಸಬೇಕು ಎಂದು RWDSU ಒತ್ತಾಯಿಸಿದೆ.
ಗೋದಾಮಿನಲ್ಲಿ ಅಸಹನೀಯ ಕೆಲಸದ ಪರಿಸ್ಥಿತಿ
ಅಮೆರಿಕದ ಕಾರ್ಮಿಕ ಕಾನೂನುಗಳ ಪ್ರಕಾರ ಒಂದು ಕಂಪನಿ ಅಥವಾ ಘಟಕದಲ್ಲಿ ಯೂನಿಯನ್ ಮಾಡಬೇಕಾದರೆ ಕಾರ್ಮಿಕರಲ್ಲಿ ಅವರು ‘ಯೂನಿಯನ್ ಸೇರಲು ಬಯಸುತ್ತಾರಾ?’ ಎಂಬುದರ ಕುರಿತು ಗುಪ್ತ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹ ಮಾಡಬೇಕು. ಅದರಲ್ಲಿ “ಯೂನಿಯನ್ ಸೇರಲು ಬಯಸುವ” ಕುರಿತು ಬಹುಮತ ಬಂದರೆ ಯೂನಿಯನ್ ರಚಿಸಬಹುದು ಮತ್ತು ಅದನ್ನು NLRB ರಿಜಿಸ್ಟರ್ ಮಾಡುತ್ತದೆ ಆಗ ಮಾತ್ರ ಕಂಪನಿಯ ಜೊತೆಗೆ ಸಾಮೂಹಿಕ ಚೌಕಾಶಿ ಮಾಡುವ ಅವಕಾಶವಿರುತ್ತದೆ. ಬೆಸ್ಸೆಮರ್ ಕಾರ್ಮಿಕರ ನಡುವೆ RWDSU ಯೂನಿಯನ್ ಸೇರಲು ಅಭಿಮತ ಸಂಗ್ರಹದ ಗುಪ್ತ ಮತದಾನ ನಡೆಸಲು ತೀರ್ಮಾನಿಸಿ ಆ ಕುರಿತು ತೀವ್ರ ಪ್ರಚಾರ ನಡೆಸಿತ್ತು. ಅಮೆಜಾನ್ ಕಂಪನಿ ಸಹ ತೀವ್ರ ಪ್ರತಿ-ಪ್ರಚಾರ ಮಾಡಿತ್ತು. ಇದು ಯು.ಎಸ್ ನಲ್ಲಿ ಮತ್ತು ಅಂತರ್ರಾಷ್ಟ್ರೀಯವಾಗಿಯೂ ತೀವ್ರ ಗಮನ ಸೆಳೆದಿತ್ತು. ಆದರೆ ಎಪ್ರಿಲ್ 9ರಂದು ನಡೆದ ಮತದಾನದಲ್ಲಿ ಬೆಸ್ಸೆಮರ್ ಗೋದಾಮಿನ ಕಾರ್ಮಿಕರ ಶೇ.55 ಮತದಾನ ಮಾಡಿದ್ದು 738 ಮತಗಳು ಯೂನಿಯನ್ ಸೇರುವ ಪರವಾಗಿ ಮತ್ತು 1798 ವಿರುದ್ಧವಾಗಿ ಬಿದ್ದಿದ್ದವು. 76 ಮತಗಳು ಅಸಿಂಧುವಾಗಿದ್ದವು. 505 ಮತಗಳು ವಿವಾದಾಸ್ಪದವಾಗಿದ್ದವು. ಯೂನಿಯನ್ ಸೇರುವ ಪ್ರಸ್ತಾವ ಅಸ್ವೀಕೃತವಾಗಿತ್ತು. ಆದರೆ ಇದು ಅಮೆಜಾನ್ ಕಂಪನಿಯ ಒತ್ತಡ ಮತ್ತು ದಮನದ ಫಲವೆಂದು ಯೂನಿಯನ್ ಆಪಾದಿಸಿದೆ.
ಬೆಸ್ಸೆಮರ್ ಗೋದಾಮಿನ ಕಾರ್ಮಿಕರನ್ನು ಅಮೆಜಾನ್ ನಡೆಸಿಕೊಳ್ಳುವ ರೀತಿ ಬಹಳ ಕೆಟ್ಟದಾಗಿದ್ದು ಅತೃಪ್ತಿ ಮಡುಗಟ್ಟಲು ಆರಂಭವಾಗಿತ್ತು. ಕೊವಿದ್ ಲಾಕ್ ಡೌನ್ ನ ಮೊದಲ ತಿಂಗಳುಗಳಲ್ಲಿ ಆನ್ ಲೈನ್ ಅಥವಾ ಇ-ಕಾಮರ್ಸ್ ವ್ಯಾಪಾರ ವಿಪರೀತವಾಗಿ ಏರಿದ್ದು ಕೆಲಸದ ಅವಧಿ ಮತ್ತು ತೀವ್ರತೆ ಎರಡೂ ಅಸಹನೀಯವಾಗಿ ಹೆಚ್ಚಿತ್ತು. ಕೆಲಸದ ತೀವ್ರತೆಯನ್ನು ಅಥವಾ ‘ಉತ್ಪಾದಕತೆ’ಯನ್ನು ಏರಿಸುತ್ತಲೇ ಹೋಗಲಾಗುತ್ತಿತ್ತು. ಕೆಲಸದ ಸ್ಥಳದಿಂದ ಕೆಲವು ನಿಮಿಷಗಳು ಹೆಚ್ಚು ದೂರವಿದ್ದರೂ (ಅದನ್ನು ಕಂಪ್ಯೂಟರುಗಳ ಕಣ್ಗಾವಲಿನಿಂದ ಅಳೆಯಲಾಗುತ್ತಿತ್ತು) ಅಮಾನತು ಮತ್ತು ಕೆಲಸದಿಂದ ತೆಗೆದು ಹಾಕುವ ತೀವ್ರ ಶಿಕ್ಷೆಗೆ ಗುರಿಯಾಗಬೇಕಿತ್ತು. ಶೌಚಾಲಯಕ್ಕೆ ಹೋಗಿ ಬರುವ ಸಮಯದ ಮೇಲೂ ತೀವ್ರ ಪ್ರತಿಬಂಧಗಳಿದ್ದವು. ಸುಮಾರು 6 ಸಾವಿರ ಕಾರ್ಮಿಕರು ಕೆಲಸ ಮಾಡುವ ನಾಲ್ಕು ಮಾಳಿಗೆಯ ಗೋದಾಮಿನಲ್ಲಿ ಸರಕುಗಳಿಗೆ ಹಲವಾರು ಲಿಫ್ಟ್ ಗಳು ಇದ್ದರೆ, ಕಾರ್ಮಿಕರ ಉಪಯೋಗಕ್ಕೆ ಒಂದೇ ಲಿಫ್ಟ್ ಇತ್ತು. ಹೆಚ್ಚಿನ ಕಾರ್ಮಿಕರು ಗಂಟೆಗೆ 7.5 ಡಾಲರು ಗಳ ಅಮೆರಿಕದ ಕನಿಷ್ಟ ವೇತನವನ್ನಷ್ಟೇ ಪಡೆಯುತ್ತಿದ್ದರು. ಕೊವಿದ್ ತೀವ್ರವಾಗಿದ್ದಾಗ ಕೆಲವು ತಿಂಗಳುಗಳ ಕಾಲ ‘ಸಂಕಷ್ಟದ ಭತ್ಯೆ’ ಕೊಟ್ಟ ಕಂಪನಿ ಅದನ್ನು ಆ ಮೇಲೆ ಹಿಂತೆಗೆದುಕೊಂಡಿತು. ಸಾಲದೆಂಬಂತೆ ಅಮೆಜಾನ್ ನ ಮತ್ತು ಇಡೀ ದೇಶದ (ಯಾಕೆ ಜಗತ್ತಿನ) ಕಾರ್ಮಿಕರು ಕಂಗಾಲಾಗಿದ್ದಾಗ, ಯು.ಎಸ್ ನ ನಂಬರ್ 1 ಶ್ರೀಮಂತನಾದ ಅಮೆಜಾನ್ ನ ಸ್ಫಾಪಕ-ಮಾಲೀಕ ಜೆಫ್ ಬೆಝೋ ಮತ್ತು ಕಂಪನಿಯ ಆಸ್ತಿ ಮೌಲ್ಯ ಕೊವಿದ್ ಕಾಲದಲ್ಲಿ ಅತ್ಯಂತ ಹೆಚ್ಚು ಏರಿತ್ತು. ಇದು ಕಾರ್ಮಿಕರ ಗಾಯದ ಮೇಲೆ ಬರೆ ಎಳೆದಂತೆ ಆಗಿತ್ತು.
ಅಮೆಜಾನ್ ನ ಯೂನಿಯನ್-ಮುರುಕ ಕ್ರಮಗಳು
ಇಂತಹ ಪರಿಸ್ಥಿತಿಯನ್ನು ತಾಳಲಾರದೆ ಬೆಸ್ಸೆಮರ್ ನಲ್ಲಿನ ಅಮೆಜಾನ್ ಗೋದಾಮಿನ ಕೆಲವು ಕಾರ್ಮಿಕರು RWDSU ಯೂನಿಯನ್ ಸಂಪರ್ಕಿಸಿ ಅದನ್ನು ಸೇರುವ ಪ್ರಸ್ತಾವವನ್ನು ತಮ್ಮ ಸಹೋದ್ಯೋಗಿಗಳ ಮುಂದೆ ಇಟ್ಟಿದ್ದರು. ಆ ನಂತರ RWDSU ಯೂನಿಯನ್ ಮತ್ತು ಅಮೆರಿಕದ ಕೇಂದ್ರೀಯ ಯೂನಿಯನ್ AFL-CIO ಗಳು ತೀವ್ರ ಪ್ರಚಾರ ನಡೆಸಿದ್ದವು. ಆದರೆ ಕಾರ್ಮಿಕರ ಸಾಮೂಹಿಕ ಚೌಕಾಶಿಗೆ ಒಡ್ಡಿಕೊಳ್ಳುವ ಭಯದಿಂದ,ಅಮೆಜಾನ್ ಯೂನಿಯನ್ ಸೇರುವುದರ ವಿರುದ್ಧ ತೀವ್ರ ಪ್ರತಿಪ್ರಚಾರ ನಡೆಸಿತು. “ಯಾಕೆ ಯೂನಿಯನ್ ಸೇರಬಾರದು” ಎಂಬುದರ ಕುರಿತು ಕಾರ್ಮಿಕರಿಗೆ ಆಗಾಗ ಸತತವಾಗಿ ಕೆಲಸದ ಸ್ಥಳದಲ್ಲೇ ಕಡ್ಡಾಯ ಕ್ಲಾಸುಗಳನ್ನು ನಡೆಸಲಾಯಿತು. ಈ ಕ್ಲಾಸುಗಳಲ್ಲಿ ಸುಳ್ಳುಗಳು ಮತ್ತು ಅರೆಸತ್ಯಗಳನ್ನು ಹರಿಯಬಿಡಲಾಯಿತು. ಕಾರ್ಮಿಕರ ಮೇಲೆ ಪೋಸ್ಟರುಗಳು, ಮೊಬೈಲ್ ಸಂದೇಶಗಳು, ಸಾಮಾಜಿಕ ಮಾಧ್ಯ,ಮ ಸಂದೇಶಗಳ ಹೊಳೆಯನ್ನೇ ಹರಿಸಲಾಯಿತು. ಇಂತಹ ಯೂನಿಯನ್- ವಿರೋಧಿ ಪೋಸ್ಟರುಗಳನ್ನು ಕೆಲಸದ ಸ್ಥಳಗಳು, ಶೌಚಾಲಯಗಳಲ್ಲಿ ವ್ಯಾಪಕವಾಗಿ ಹಚ್ಚಲಾಯಿತು. ಆದರೆ ಯೂನಿಯನ್-ಪರ ಪ್ರಚಾರಕ್ಕೆ ಯಾವುದೇ ಅವಕಾಶವಿರಲಿಲ್ಲ. ಯೂನಿಯನ್-ವಿರೋಧಿ ಪ್ರಚಾರಕರನ್ನು ಕೆಲಸದ ಸ್ಥಳಕ್ಕೆ ಬಿಟ್ಟು ಅವರು ಪ್ರತಿ ಕಾರ್ಮಿಕರ ಬಳಿ ಅವರ ಅಭಿಮತ ವಿಚಾರಿಸಿ ಅವರು ಯೂನಿಯನ್-ಪರವಾಗಿದ್ದರೆ ಅವರಲ್ಲಿ ಸುಳ್ಳು, ಅರೆಸತ್ಯಗಳ ಮೂಲಕ ಗೊಂದಲ ಹುಟ್ಟಿಸಲಾಯಿತು. ಬೆದರಿಕೆ ಹಾಕಲಾಯಿತು. ಯೂನಿಯನ್ ರಚನೆ ಆದದ್ದೇ ಆದರೆ, ಕಾನೂನು ಏನೇ ಹೇಳಲಿ ಅದರ ಜತೆ ಸಹಕರಿಸುವುದಿಲ್ಲ. ಯಾವುದೇ ಹೊಸ ಸವಲತ್ತು ಕೊಡುವುದಿಲ್ಲ. ಇದ್ದ ಸವಲತ್ತುಗಳನ್ನು ಕಳೆದುಕೊಳ್ಳಬಹುದು ಎಂಬ ಬೆದರಿಕೆ ಹಾಕಲಾಯಿತು. ವೇತನ ಏರಿಕೆಗೆ ಒಪ್ಪಿಕೊಳ್ಳುವುದಿಲ್ಲ. ಈಗ ಸರಾಸರಿ ಕೂಲಿ ಗಂಟೆಗೆ 15 ಡಾಲರು ಇದೆ. ಕನಿಷ್ಟ ವೇತನ ಗಂಟೆಗೆ 7.5 ಡಾಲರುಗಳಿಗಿಂತ ಹೆಚ್ಚಿಗೆ ಕಾನೂನು ಪ್ರಕಾರ ಕೊಡಬೇಕಾಗಿಲ್ಲ ಎಂದು ಹೇಳಲಾಯಿತು. ಆದರೆ ಈಗಾಗಲೇ ಸುಮಾರು ಶೇ.75ಕ್ಕಿಂತಲೂ ಹೆಚ್ಚು ಕಾರ್ಮಿಕರು ಕನಿಷ್ಟ ವೇತನ ಗಂಟೆಗೆ 7.5 ಡಾಲರುಗಳನ್ನಷ್ಟೇ ಪಡೆಯುತ್ತಿರುವುದು ಎಂಬ ಸತ್ಯವನ್ನು ಮರೆಮಾಚಲಾಯಿತು.
ಕ್ಲಾಸುಗಳಲ್ಲಿ ಮತ್ತು ಸಂದೇಶಗಳಲ್ಲಿ ಕಾರ್ಮಿಕರಲ್ಲಿ “ಗೊಂದಲ ಉಂಟು ಮಾಡುವ, ಜುಲುಮೆ, ಪ್ರತೀಕಾರದ ಬೆದರಿಕೆಗಳನ್ನು ಹಾಕುವ ಮೂಲಕ ಕಾರ್ಮಿಕರ ಆಯ್ಕೆಯ ಸ್ವಾತಂತ್ರ್ಯವನ್ನು ಬುಡಮೇಲು ಮಾಡಲಾಯಿತು” ಎಂದು RWDSU ಯು ಲೇಬರ್ ಬೋರ್ಡಿಗೆ ಕೊಟ್ಟ ದೂರಿನಲ್ಲಿ ತಿಳಿಸಿದೆ. ಕಾನೂನುಬಾಹಿರವಾದ ಇಂತಹ ಅಮೆಜಾನ್ ನ ಕ್ರಮಗಳ ಹಲವು ಪುರಾವೆಗಳನ್ನೂ ಬೋರ್ಡಿಗೆ ನೀಡಿದೆ. ಯು.ಎಸ್ ಪೋಸ್ಟ್ ಜತೆ ಸೇರಿ ಕಾರ್ಮಿಕರು ಮತ ಹಾಕಲು ಗೋದಾಮಿನ ಆವರಣದಲ್ಲೇ ವಿಶೇಷ ಬಾಕ್ಸುಗಳ ವ್ಯವಸ್ಥೆ ಮಾಡಿದ್ದು ಇವುಗಳಲ್ಲಿ ಒಂದು. ಇದರ ಮುಂದೆ ಕ್ಯಾಮೆರಾಗಳನ್ನು ಅಳವಡಿಸಿ ಯೂನಿಯನ್ ಪರ ಮತ ಹಾಕಬಹುದಾದವರನ್ನು ಬೆದರಿಸುವ ಪ್ರಯತ್ನ ಮಾಡಲಾಯಿತು. ಗೋದಾಮಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಟ್ರಾಫಿಕ್ ಸಿಗ್ನಲ್ ಗಳ ನಿಲುಗಡೆ ಅವಧಿಯನ್ನು ತೀರಾ ಕಡಿಮೆ ಮಾಡಲಾಯಿತು. ಕೆಲಸಕ್ಕೆ ಬರುವ ಕಾರ್ಮಿಕರು ಕಾರಿನಲ್ಲಿ ಟ್ರಾಫಿಕ್ ಸಿಗ್ನಲಿನಲ್ಲಿ ನಿಂತಾಗ ಯೂನಿಯನ್-ಪರ ಪ್ರಚಾರಕರು ಅವರ ಜತೆ ಮಾತನಾಡುತ್ತಿದ್ದರು. ಇದನ್ನು ಕಡಿಮೆ ಅಥವಾ ಅಸಾಧ್ಯವಾಗಿಸಲು ಸ್ಥಳೀಯ ಆಡಳಿತದ ಮೇಲೆ ಒತ್ತಡ ಹಾಕಿ ಹೀಗೆ ಮಾಡಲಾಯಿತು. ಇಂತಹ ನೀಚ ಮಟ್ಟಕ್ಕೂ ಅಮೆಜಾನ್ ಇಳಿಯಿತು ಎಂದು RWDSU ಲೇಬರ್ ಬೋರ್ಡಿಗೆ ಕೊಟ್ಟ ದೂರಿನಲ್ಲಿ ಆಪಾದಿಸಿದೆ.
RWDSU ಸೋತಿದೆಯೇ?
ಅಮೆಜಾನ್ ನ ಯೂನಿಯನ್-ಮುರುಕತನದ ತೀವ್ರ ಮತ್ತು ದೃಢ ಕ್ರಮಗಳು ಕಾರ್ಮಿಕರ ಅಭಿಮತದ ಮೇಲೆ ಪರಿಣಾಮ ಉಂಟು ಮಾಡಿದವು ಎಂಬುದು ಸ್ಪಷ್ಟ ಆದರೆ 2:1 (ಎರಡಕ್ಕೆ ಒಂದು) ಪ್ರಮಾಣದಲ್ಲಿ ಕಾರ್ಮಿಕರು ಯೂನಿಯನ್ ಸೇರುವುದರ ವಿರುದ್ಧ ಮತನೀಡಿದ್ದನ್ನು ಇದು ಪೂರ್ಣವಾಗಿ ವಿವರಿಸುತ್ತದೆಯೆ ಎಂಬ ಪ್ರಶ್ನೆಗೆ RWDSU ಮತ್ತು AFL-CIO ವಕ್ತಾರರು, ಇಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಈ ಎರಡೂ ಸಂಘಟನೆಗಳು ಸ್ಥಳೀಯವಾಗಿಯೂ ದೇಶವ್ಯಾಪಿಯಾಗಿಯೂ ಪ್ರಚಾರದಲ್ಲಿ ಯಾವುದೇ ಕೊರತೆ ಮಾಡಲಿಲ್ಲ. ಬೆಸ್ಸೆಮರ್ ಅಮೆಜಾನ್ ಗೋದಾಮಿನ ಉದ್ಯೋಗಿಗಳಲ್ಲಿ ಸುಮಾರು ಶೇ. 80ರಷ್ಟು ಕರಿಯರಾಗಿದ್ದು ಇದಕ್ಕೆ ನಾಗರಿಕ ಹಕ್ಕುಗಳ ಹೋರಾಟಗಾರರು, ಬ್ಲಾಕ್-ಲೈವ್ಸ್-ಮ್ಯಾಟರ್ ಚಳುವಳಿಯ ಕಾರ್ಯಕರ್ತರು, ಡೆಮೊಕ್ರಾಟಿಕ್ ಪಕ್ಷದ ತಳಮಟ್ಟದ ಕಾರ್ಯಕರ್ತರು, ಹಲವು ಸಂಸತ್ ಸದಸ್ಯರು, ಕಲಾವಿದರು ಬುದ್ಧಿಜೀವಿಗಳು ಯೂನಿಯನ್ ನ್ನು ಬೆಂಬಲಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಮಾಣದ ಸೋಲನ್ನು ಖಂಡಿತ ನಿರೀಕ್ಷಿಸಿರಲಿಲ್ಲ. ಅಮೆಜಾನ್ ನ “ಗೊಂದಲ ಉಂಟು ಮಾಡುವ, ಜುಲುಮೆ, ಪ್ರತೀಕಾರದ ಬೆದರಿಕೆಗಳ” ಇಂತಹ ತೀವ್ರ ಕ್ರಮಗಳ ಅನಿರೀಕ್ಷಿತ ಪರಿಣಾಮಕಾರಿತನವು ಇಂದಿನ ಅದರಲ್ಲೂ ಕರಿಯರ ದಿನೇ ಹದಗೆಡುತ್ತಿರುವ ಅಭದ್ರ ಜೀವನೋಪಾಯದ ಪರಿಸ್ಥಿತಿಯ ಫಲ. ಅಲ್ಲದೆ ಅಲಬಾಮಾ ದಂತಹ ದಕ್ಷಿಣ ಪ್ರಾಂತ್ಯಗಳಲ್ಲಿ ಕಾರ್ಮಿಕರಲ್ಲಿ ವ್ಯಾಪಕವಾಗಿರುವ ಸಾಮಾನ್ಯ ಯೂನಿಯನ್-ವಿರೋಧಿ ಮತ್ತು ವರ್ಣಬೇಧದ ದಾಳಿಗಳಿಂದ ಜರ್ಝರಿತವಾದ ಕರಿಯರ ಆತಂಕದ ಧೋರಣೆಯೂ ಕಾರಣವಾಗಿರಬಹುದು. ಇದೇ ಪರಿಸ್ಥಿತಿಯಲ್ಲಿ ಉತ್ತರ ಪ್ರಾಂತ್ಯಗಳಲ್ಲಿ ಇದರ ಫಲಿತಾಂಶ ಬೇರೆನೇ ಆಗಿರುತ್ತಿತ್ತು ಎನ್ನುತ್ತಾರೆ ಈ ನಾಯಕರು.
ಸಂಘಟಿಸುವ ಹಕ್ಕು ರಕ್ಷಿಸುವ ಕಾನೂನಿಗಾಗಿ (PRO Act) ಹೋರಾಟ
ಇನ್ನು ಮುಂದಿನ ಹೋರಾಟದಲ್ಲಿ ಏನನ್ನು ನಿರೀಕ್ಷಿಸಬಹುದು ?RWDSU ಯು ಲೇಬರ್ ಬೋರ್ಡಿಗೆ ಕೊಟ್ಟ ದೂರಿನ ವಿಚಾರಣೆಯಲ್ಲಿ ಗರಿಷ್ಟ ನಿರೀಕ್ಷಿಸಬಹುದಾದ್ದು ಈಗಿನ ಅಭಿಮತ ಸಂಗ್ರಹ ರದ್ದು ಮಾಡಿ ಅದನ್ನು ಪುನಃ ನಡೆಸಲು ಬೋರ್ಡ್ ಆಜ್ಞೆಯನ್ನು. ಅಂತಹ ಸಾಧ್ಯತೆ ಕಡಿಮೆ ಮತ್ತು ಈ ಪ್ರಕ್ರಿಯೆ ಹಲವು ವರುಷಗಳ ಕಾಲ ತೆಗೆದುಕೊಳ್ಳಬಹುದು. ಒಂದು ಕಂಪನಿ ‘ಅನ್ಯಾಯಯುತ ಕಾರ್ಮಿಕ ಆಚರಣೆ’ಗಳಲ್ಲಿ ತೊಡಗಿದೆಎಂದು ರುಜುವಾತು ಆದರೆ, ಹೆಚ್ಚಾಗಿ ಲೇಬರ್ ಬೋರ್ಡ್ ಕೊಡುವ ‘ಶಿಕ್ಷೆ’ ಕೆಲವು ಸಾವಿರ ಡಾಲರುಗಳ ದಂಡ ಮತ್ತು ಕಂಪನಿಯ ನೋಟೀಸು ಬೋರ್ಡುಗಳಲ್ಲಿ ‘ತಪ್ಪೊಪ್ಪಿಗೆ’ !!
ಹಾಗಾದರೆ ಈ ಹೋರಾಟವನ್ನು ಹೇಗೆ ಏಕೆ ಮುಂದುವರೆಸಬೇಕು ಎಂಬ ಪ್ರಶ್ನೆಗೆ ಕಾರ್ಮಿಕ ನಾಯಕರಲ್ಲಿ ಸ್ಪಷ್ಟ ಉತ್ತರವಿದೆ. ಈ ಹೋರಾಟ ಬರಿಯ ಬೆಸ್ಸೆಮರ್ ಅಮೆಜಾನ್ ಗೋದಾಮಿನ 6 ಸಾವಿರ ಕಾರ್ಮಿಕರ ಹಕ್ಕುಗಳ ಕುರಿತು ಮಾತ್ರವಲ್ಲ, ಅಮೆಜಾನಿನ 8 ಲಕ್ಷ ಕಾರ್ಮಿಕರ ಹಕ್ಕುಗಳ ಕುರಿತು ಸಹ ಆಗಿದೆ. ಅಮೆಜಾನಿನ ಇತರ ಘಟಕಗಳ ಕಾರ್ಮಿಕರೂ ಇದನ್ನು ಆಸಕ್ತಿಯಿಂದ ಗಮನಿಸುತ್ತಿದ್ದರು. ಹಲವಾರು ಅಮೆಜಾನ್ ಘಟಕಗಳಿಂದ ಯೂನಿಯನ್ ಸೇರುವುದಕ್ಕೆ ಆಸಕ್ತಿ ತೋರಿಸಿ ಸಂದೇಶಗಳು ಬರುತ್ತಿವೆ. ಅವರೆಲ್ಲರು ಈ ಸೋಲಿನಿಂದ ಹತಾಶರಾಗಿಲ್ಲ. ಕೆಲವರು ಹೆಚ್ಚಿನ ಆಕ್ರೋಶದಿಂದ ಮುನ್ನಡೆಯಬೇಕೆಂದಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಅದರಲ್ಲೂ ಕೊವಿದ್ ಪರಿಹಾರದ ದೊಡ್ಡ ಪಾಲು ಬಾಚಿಕೊಂಡು ಕಾರ್ಮಿಕರನ್ನು ಇನ್ನಷ್ಟು ದುರ್ಭರ ಸ್ಥಿತಿಗೆ ತಳ್ಳುತ್ತಿರುವ ಇತರ ಕಂಪನಿಗಳ ಕಾರ್ಮಿಕರೂ ಯೂನಿಯನ್ ಗಳನ್ನು ಸೇರುವುದಕ್ಕೆ ಆಸಕ್ತರಾಗುತ್ತಿದ್ದಾರೆ. ಲೇಬರ್ ಬೋರ್ಡಿನಲ್ಲಿ ದೂರು ವಿಚಾರಣೆಗೆ ಒತ್ತಾಯಿಸುವ ಮೂಲಕ ಅಮೆಜಾನ್ ವಿರುದ್ಧ ಕ್ರಮ ಒತ್ತಾಯಿಸುವ ಮೂಲಕ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ದೈತ್ಯ ಕಂಪನಿಗಳನ್ನು ಮಣಿಸಬಹುದು ಎಂಬ ಸಂದೇಶ ರವಾನೆ ಮಾಡಬಯಸುತ್ತೇವೆ. ಜೊತೆಗೆ ಇಂದಿನ ಕಾರ್ಮಿಕ ಕಾನೂನುಗಳ ಕಾರ್ಮಿಕ-ವಿರೋಧಿ ಮಾಲೀಕ-ಪರ ವಾಲುವಿಕೆ ಹಾಗೂ ಸೀಮಿತತೆಗಳನ್ನು ಬಯಲಿಗೆಳೆಯುತ್ತೇವೆ. ಕಾರ್ಮಿಕರು ಯೂನಿಯನ್ ಸೇರುವುದಕ್ಕೆನೇ ಬಹುಮತದ ಒಪ್ಪಿಗೆ ಇರಬೇಕಾದ ಇಂದಿನ ಷರತ್ತುಗಳನ್ನು ರದ್ದು ಮಾಡುವ ಹೊಸ ಕಾರ್ಮಿಕ ಕಾನೂನುಗಳಿಗಾಗಿ ಹೋರಾಟದ ಕುರಿತು ಕಾರ್ಮಿಕರಲ್ಲಿ ವ್ಯಾಪಕ ಪ್ರಚಾರ ಮಾಡಲು ಇದು ಅವಕಾಶ ಮಾಡಿಕೊಡುತ್ತದೆ. ಕಾರ್ಮಿಕರಲ್ಲಿ ಯೂನಿಯನ್ ಗಳಲ್ಲಿ ಸಂಘಟಿತರಾದವರ ಪ್ರಮಾಣ ಕೇವಲ ಶೇ. 10ಕ್ಕೆ ಕುಸಿದಿದ್ದು ಹಲವಾರು ಪ್ರಜಾಪ್ರಭುತ್ವವಾದಿಗಳಲ್ಲಿ ವ್ಯಾಪಕ ಆತಂಕ ಉಂಟುಮಾಡಿದೆ. ಇಂತಹ ಕಾನೂನು PRO (Protecting Right to Organise – ಸಂಘಟಿಸುವ ಹಕ್ಕು ರಕ್ಷಿಸುವ ಕಾನೂನು) Act ಈಗಾಗಲೇ ಸಂಸತ್ತಿನ ಕೆಳಮನೆ (ಪ್ರತಿನಿಧಿ ಸಭೆ)ಯಲ್ಲಿ ಪಾಸಾಗಿದ್ದು ಸೆನೆಟ್ ಮುಂದಿದೆ. ಆದರೆ ಅಲ್ಲಿ ರಿಪಬ್ಲಿಕನ್ ಬಹುಮತದಿಂದಾಗಿ ಸವಾಲು ಎದುರಿಸಬಹುದು. ಇದಕ್ಕಾಗಿ ಕೆಲವು ರಿಪಬ್ಲಿಕನ್ ಸೆನೆಟರುಗಳ ಮೇಲೆ ಈ ಮಸೂದೆಗೆ ಬೆಂಬಲಿಸಲು ಒತ್ತಡ ಹಾಕಬೇಕಾಗಬಹುದು. ಇದು RWDSU ಮತ್ತು AFL-CIO ನಾಯಕರು ಕೊಟ್ಟ ಮುಂದಿನ ಹೋರಾಟದ ರೂಪುರೇಷೆಗಳು.