ಏಕಪಕ್ಷೀಯ ಆರ್ಥಿಕ ನಿರ್ಬಂಧಗಳು ಮತ್ತು ನಾಗರಿಕರು

-ಪ್ರೊ. ಪ್ರಭಾತ್ ಪಟ್ನಾಯಕ್
-ಅನು : ಕೆ.ಎಂ.ನಾಗರಾಜ್

ನಾಲ್ಕನೇ ಜಿನೀವಾ ಸಮಾವೇಶದ ಕಲಮು 33ರ ಪ್ರಕಾರ, ಜನರು ಮಾಡದ ತಪ್ಪುಗಳಿಗೆ ಅವರ ಮೇಲೆ ಹೇರುವ ಪ್ರತೀಕಾರದ ಸಾಮೂಹಿಕ ಶಿಕ್ಷೆಯ ಕ್ರಮವು, ಒಂದು ಯುದ್ಧಾಪರಾಧವಾಗುತ್ತದೆ. ಅಂದರೆ ಸಾಮ್ರಾಜ್ಯಶಾಹಿಯು ಒಂದು ದೇಶದ ಮೇಲೆ ಹೇರುವ ಏಕಪಕ್ಷೀಯ ನಿರ್ಬಂಧಗಳು ಯುದ್ಧಾಪರಾಧಕ್ಕಿಂತ ಕಡಿಮೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ. ವಾಸ್ತವವಾಗಿ ಅದು ನಾಗರಿಕರ ಮೇಲೆ ಬಾಂಬ್ ದಾಳಿಗಿಂತಲೂ ಹೆಚ್ಚು ಅಪಾಯಕಾರಿ. ಭಾರತ ಇಂತಹ ಯುದ್ಧಾಪರಾಧದಲ್ಲಿ ಭಾಗಿಯಾಗಬೇಕು ಎಂದು ಉಕ್ರೇನಿನ ಅಧ್ಯಕ್ಷ ಝೆಲೆನ್ಸ್ಕಿ ‘ಸಲಹೆ’ ನೀಡಿದ್ದಾರೆ! ಮೂರನೆಯ ಜಗತ್ತಿನ ಜನರ ವಿರುದ್ಧವಾಗಿ ಬಳಸುವ ಈ ನಿರ್ಬಂಧಗಳು, ಸಾಮ್ರಾಜ್ಯಶಾಹಿಯ ಕೈಯಲ್ಲಿರುವ ಒಂದು ಮಾರಕ ಅಸ್ತ್ರವಾಗಿವೆ. ಆದುದರಿಂದ ವಿಶ್ವಸಂಸ್ಥೆಯು ಈ ನಿರ್ಬಂಧಗಳನ್ನೇ ನಿಷೇಧಿಸಬೇಕು. ಏಕಪಕ್ಷೀಯ

ಪ್ರಧಾನ ಮಂತ್ರಿ ಮೋದಿಯವರು ಉಕ್ರೇನ್‌ಗೆ ಭೇಟಿ ನೀಡಿದ ಸಮಯದಲ್ಲಿ (ಇಂಥಹ ಒಂದು ಸಲ್ಲದ ಸಮಯದಲ್ಲಿ ಅವರು ಅಲ್ಲಿಗೆ ಏಕೆ ಹೋದರು ಎಂಬುದೇ ಒಂದು ನಿಗೂಢ ವಿಷಯ), ಆ ದೇಶದ ಅಧ್ಯಕ್ಷ ಝೆಲೆನ್ಸ್ಕಿ, ಪಾಶ್ಚ್ಯಾತ್ಯ ನಿರ್ಬಂಧಗಳನ್ನು ಉಲ್ಲಂಘಿಸಿ ರಷ್ಯಾದಿಂದ ತೈಲವನ್ನು ಖರೀದಿಸದಂತೆ ಅವರನ್ನು ಕೇಳಿಕೊಂಡರು. ಝೆಲೆನ್ಸ್ಕಿ ಕೋರಿಕೆಯ ಅರ್ಥವೆಂದರೆ, ಏಕಪಕ್ಷೀಯವಾಗಿ ಪಾಶ್ಚ್ಯಾತ್ಯರು ವಿಧಿಸಿದ ನಿರ್ಬಂಧಗಳನ್ನು ಭಾರತವು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂಬುದು. ಈ ಸಲಹೆಯನ್ನು ನೀಡಿದ ಈ ಮಹಾನುಭಾವ, ಎರಡನೆಯ ಮಹಾಯುದ್ಧದ ಸಮಯದಲ್ಲಿ ಕುಖ್ಯಾತ ನಾಜಿ ಸಹಯೋಗಿ ಸ್ಟೆಪನ್ ಬಂಡೇರಾ ಅವರ ಅನುಯಾಯಿಗಳ ಸಹಾಯದಿಂದ ಉಕ್ರೇನ್ ಆಡಳಿತ ನಡೆಸುತ್ತಿದ್ದಾರೆ ಎಂಬ ಅಂಶವನ್ನು ಒಂದು ಕ್ಷಣ ಮರೆತುಬಿಡೋಣ. ಏಕಪಕ್ಷೀಯ

ಅಲ್ಲಿ ಇಂದು ಉದ್ಭವಿಸಿರುವ ಸಂದರ್ಭವನ್ನೂ ಸಹ ಮರೆಯೋಣ: ಸೋವಿಯತ್ ಒಕ್ಕೂಟದ ವಿಘಟನೆಯ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್, ನ್ಯಾಟೋದ ಗಡಿಯನ್ನು ಆಗ ನ್ಯಾಟೋ ಹೊಂದಿದ್ದ ಸದಸ್ಯ ದೇಶಗಳ ಆಚೆಗೆ ವಿಸ್ತರಿಸುವುದಿಲ್ಲವೆಂದು ಗೋರ್ಬಚೇವ್‌ಗೆ ನೀಡಿದ ಭರವಸೆಯನ್ನು ಉಲ್ಲಂಘಿಸಿ, ಪೂರ್ವ ದಿಕ್ಕಿನಲ್ಲಿ ರಷ್ಯಾದ ಗಡಿಯವರೆಗೂ ನ್ಯಾಟೋದ ವ್ಯಾಪ್ತಿಯನ್ನು ವಿಸ್ತರಿಸುವ ಅಮೆರಿಕದ ಹಠದಿಂದಾಗಿ ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿದೆ. ಮೇಲಾಗಿ, ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವೆ ಮಾತುಕತೆಗಳ ಮೂಲಕ ತಲುಪಿದ ಮಿನ್ಸ್ಕ್ ಒಪ್ಪಂದಗಳನ್ನು ಆಂಗ್ಲೋ-ಯುಎಸ್ ಸಲಹೆಯ ಮೇರೆಗೆ ಉಕ್ರೇನ್ ಧಿಕ್ಕರಿಸದಿದ್ದಿದ್ದರೆ, ಈ ಯುದ್ಧವು ನಡೆಯುತ್ತಲೇ ಇರಲಿಲ್ಲ. ಭಾರತವು ತನ್ನಸ್ವ-ಹಿತಾಸಕ್ತಿಯ ಕಾರಣದಿಂದಾಗಿ ರಷ್ಯಾದ ತೈಲವನ್ನು ಖರೀದಿಸುವ ಮೂಲಕ ನಿರ್ಬಂಧಗಳನ್ನು ಮುರಿಯಿತು ಎಂಬುದನ್ನೂ ನಾವು ಮರೆತುಬಿಡೋಣ. ಏಕಪಕ್ಷೀಯನಿರ್ಬಂಧಗಳ ನೈತಿಕತೆಯ ಬಗ್ಗೆ ಮಾತ್ರ ಮಾತನಾಡೋಣ.

ಇದನ್ನೂ ಓದಿ: ಮಣಿಪುರದಲ್ಲಿ ತೀವ್ರಗೊಂಡ ವಿದ್ಯಾರ್ಥಿಗಳ ಪ್ರತಿಭಟನೆ; ಐದು ದಿನಗಳ ಕಾಲ ಇಂಟರ್‌ನೆಟ್‌ ಸೇವೆ ಸ್ಥಗಿತ

ಕೆಲವು ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿ ದೇಶಗಳು, ತಮ್ಮ ಆದೇಶವನ್ನು ಉಲ್ಲಂಘಿಸುವ ದೇಶಗಳ ವಿರುದ್ಧ, ಏಕಪಕ್ಷೀಯವಾಗಿ, ನಿರ್ಬಂಧಗಳನ್ನು ಹೇರುತ್ತವೆ. ಈ ಸಾಮ್ರಾಜ್ಯಶಾಹಿ ನಿರ್ಬಂಧಗಳನ್ನು, ವಿಶ್ವಸಂಸ್ಥೆಯ ಅನುಮೋದನೆಯೊಂದಿಗೆ ವಿಧಿಸುವ ನಿರ್ಬಂಧಗಳಿಂದ ಪ್ರತ್ಯೇಕಿಸಿ ನೋಡಬೇಕಾಗುತ್ತದೆ. ಅಂದರೆ, ವಿಶ್ವ ಸಂಸ್ಥೆಯ ಸದಸ್ಯ ದೇಶಗಳ ಅನುಮತಿಯೊಂದಿಗೆ ಸಾಮಾನ್ಯವಾಗಿ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಈ ನಿರ್ಬಂಧಗಳ ಸ್ಥಾನಮಾನವೇ ಬೇರೆ ಮತ್ತು ಸಾಮ್ರಾಜ್ಯಶಾಹಿ ದೇಶಗಳು ಹೇರುವ ನಿರ್ಬಂಧಗಳ ಸ್ಥಾನಮಾನವೇ ಬೇರೆ. ಸಾಮ್ರಾಜ್ಯಶಾಹಿಯು ಹೇಳಿದಂತೆ ಕೇಳದೆ ಸೆಟೆದು ನಿಂತ ಕಾರಣಕ್ಕಾಗಿ ಮತ್ತು ಅದರ ಅಪೇಕ್ಷೆಗಳನ್ನು ಈಡೇರಿಸದ ಕಾರಣಕ್ಕಾಗಿ ಅದರ ಕೆಂಗಣ್ಣಿಗೆ ಗುರಿಯಾದ ಕ್ಯೂಬಾ, ಇರಾನ್, ವೆನೆಜುವೆಲಾ, ಸಿರಿಯಾ, ಲಿಬಿಯಾ ಮುಂತಾದ ಹಲವಾರು ದೇಶಗಳು ಇಂತಹ ಏಕಪಕ್ಷೀಯ ನಿರ್ಬಂಧಗಳಿಗೆ ಬಲಿಯಾಗಿವೆ. ಈ ಸಾಲಿಗೆ ರಷ್ಯಾ ಇತ್ತೀಚೆಗೆ ಸೇರ್ಪಡೆಯಾಗಿದೆ. ಆದ್ದರಿಂದ ಸಾಮ್ರಾಜ್ಯಶಾಹಿ ನಿರ್ಬಂಧಗಳನ್ನು
ಒಪ್ಪಿಕೊಳ್ಳುವುದೆಂದರೆ, ಅದರ ಆಕ್ರಮಣಕಾರೀ ತಂತ್ರಗಳನ್ನು ಅನುಮೋದಿಸುವುದು ಎಂದಾಗುತ್ತದೆ. ಏಕಪಕ್ಷೀಯ

ಯುದ್ಧಾಪರಾಧವಾಗುತ್ತದೆ

ಸಾಮ್ರಾಜ್ಯಶಾಹಿಯು ಹೇರುವ ಈ ನಿರ್ಬಂಧಗಳ ಒಂದು ವಿಶಿಷ್ಟ ಲಕ್ಷಣವೆಂದರೆ ಅವು ಜನರನ್ನು ನೋಯಿಸುತ್ತವೆ ಎಂಬುದು. ಹಾಗೆ ನೋಡಿದರೆ, ಜನರನ್ನು ನೋಯಿಸುವುದೇ ಈ ನಿರ್ಬಂಧಗಳ ಉದ್ದೇಶ. ಈ ನಿರ್ಬಂಧಗಳು ಎಷ್ಟು ಯಶಸ್ವಿಯಾಗಿದ್ದವು, ಅಂದರೆ ಅವು ಎಷ್ಟು ಹೆಚ್ಚು ಜನರನ್ನು ಎಷ್ಟು ಹೆಚ್ಚು ನೋಯಿಸಿದವು ಎಂಬುದರ ಮೂಲಕ ಅವುಗಳ ಕಾರ್ಯಕ್ಷಮತೆಯನ್ನು ತೀರ್ಮಾನಿಸಲಾಗುತ್ತದೆ. ಆದ್ದರಿಂದ, ಪರಿಣಾಮದ ದೃಷ್ಟಿಯಲ್ಲಿ ಅವು ನಾಗರಿಕ ಬಾಂಬ್‌ದಾಳಿಗೆ ಸಮನಾಗುತ್ತವೆ. ನಾಗರಿಕರ ಮೇಲೆ ನಡೆಸುವ ಬಾಂಬ್ ದಾಳಿ ನಡೆಸುವ ಉದ್ದೇಶವೂ ಸಹ ಜನರಿಗೆ ನೋವು ಉಂಟುಮಾಡುವ ಮೂಲಕ ಅವರನ್ನು ಸಾಮೂಹಿಕವಾಗಿ ಶಿಕ್ಷಿಸುವುದೇ ಆಗಿರುತ್ತದೆ.

ಆದರೆ, ನಾಲ್ಕನೇ ಜಿನೀವಾ ಸಮಾವೇಶದ (Geneva Convention) ಕಲಮು 33ರ ಪ್ರಕಾರ, ಜನರು ಮಾಡದ ತಪ್ಪುಗಳಿಗೆ ಅವರ ಮೇಲೆ ಹೇರುವ ಪ್ರತೀಕಾರದ ಸಾಮೂಹಿಕ ಶಿಕ್ಷೆಯ ಕ್ರಮವು, ಒಂದು ಯುದ್ಧಾಪರಾಧವಾಗುತ್ತದೆ. ಆದ್ದರಿಂದ, ಸಾಮ್ರಾಜ್ಯಶಾಹಿಯು ಹೇರುವ ಏಕಪಕ್ಷೀಯ ನಿರ್ಬಂಧಗಳು ಯುದ್ಧಾಪರಾಧಕ್ಕಿಂತ ಕಡಿಮೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ ಮತ್ತು ಝೆಲೆನ್ಸ್ಕಿ, ಮೋದಿಯವರಿಗೆ ನೀಡಿರುವ ಸಲಹೆಯು ಭಾರತವನ್ನು ಯುದ್ಧಾಪರಾಧದಲ್ಲಿ ಭಾಗಿಯಾಗುವಂತೆ ಮಾಡುತ್ತದೆ. ನಿರ್ಬಂಧಗಳು ರಷ್ಯಾದ ಜನರನ್ನು ಹೆಚ್ಚು ನೋಯಿಸುವುದು ಸಾಧ್ಯವಾಗಿಲ್ಲ ಎಂಬುದು ಮುಖ್ಯವಾದ ಅಂಶವಲ್ಲ. ಮುಖ್ಯವಾದ ಅಂಶವೆಂದರೆ, ಈ ನಿರ್ಬಂಧಗಳ ಹಿಂದಿರುವ ಉದ್ದೇಶ. ಅವು ನಾಗರಿಕರ ಮೇಲೆ ನಡೆಯುವ ಬಾಂಬ್ ದಾಳಿಯನ್ನು ಹೋಲುತ್ತವೆ ಮತ್ತು ಯುದ್ಧಾಪರಾಧಕ್ಕೆ ಸಮಾನವಾಗುತ್ತವೆ.

ನಿರ್ಬಂಧಗಳನ್ನು ಹೇರುವ ಬಗ್ಗೆ ಸಾಮ್ರಾಜ್ಯಶಾಹಿಗಳು ಕೊಡುವ ಒಂದು ಸಮರ್ಥನೆ ಎಂದರೆ, ನಿರ್ಬಂಧಗಳಿಗೆ ಒಳಗಾದ ದೇಶದ ಸರ್ಕಾರವು ಏನೋ ಒಂದು ತಪ್ಪು ಮಾಡಿದೆ ಎಂಬುದು. ಆದರೆ, ನಿರ್ಬಂಧಗಳ ಹೇರಿಕೆಯ ಬಗ್ಗೆ ಸಾಮ್ರಾಜ್ಯಶಾಹಿಗಳು ಕೊಡುವ ಸಮರ್ಥನೆಗೆ ಆಧಾರವೇ ಇರುವುದಿಲ್ಲ ಎಂದು ನಿರ್ಬಂಧಗಳಿಗೆ ಒಳಗಾದ ದೇಶದ ಸರ್ಕಾರವು ಮಾಡಿದೆ ಎಂದು ಹೇಳಲಾದ ತಪ್ಪುಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಕಂಡುಬರುವ ಸಂಗತಿ. ನಿರ್ಬಂಧಗಳಿಗೆ ಒಳಗಾದ ದೇಶದ ಸರ್ಕಾರವು ಕೈಗೊಂಡ ಕ್ರಮಗಳು (ಸಾಮ್ರಾಜ್ಯಶಾಹಿಗಳ ಪ್ರಕಾರ ಇವು ತಪ್ಪು ಕ್ರಮಗಳು), ಒಂದು ವೇಳೆ ಆ ದೇಶದ ಜನರ ಬೆಂಬಲವನ್ನು ಹೊಂದಿದ್ದರೆ, ಆಗ, ನಿರ್ಬಂಧಗಳ ಹೇರಿಕೆಯು ಜನರು ಹೊಂದಿರುವ ಸಾರ್ವಭೌಮತೆಯ ಉಲ್ಲಂಘನೆಯಾಗುತ್ತದೆ.

ಒಂದು ದೇಶದ ಸರ್ಕಾರವು ಕೈಗೊಂಡ ಕ್ರಮಗಳ ಸಂಬಂಧವಾಗಿ ಆ ದೇಶದ ಜನರು ಸಾಮೂಹಿಕವಾಗಿ ಹೊಂದಿದ ನಿಲುವು ಒಂದು ವೇಳೆ ತಪ್ಪಾಗಿದ್ದರೆ, ಆಗ, ಆ ದೇಶದ ವಿರುದ್ಧವಾಗಿ ಹೇರುವ ನಿರ್ಬಂಧಗಳು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಬೆಂಬಲವನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಆದ್ದರಿಂದ, ನಿರ್ಬಂಧಗಳು ಏಕಪಕ್ಷೀಯವಾಗಿರಬೇಕಾಗಿಲ್ಲ. ಮತ್ತೊಂದೆಡೆಯಲ್ಲಿ, ನಿರ್ಬಂಧಗಳಿಗೆ ಒಳಗಾದ ದೇಶದ ಸರ್ಕಾರವು ಕೈಗೊಂಡ ಕ್ರಮಗಳಿಗೆ ಒಂದು ವೇಳೆ ಆ ದೇಶದ ಜನರ ಬೆಂಬಲ ಇಲ್ಲದಿದ್ದರೆ, ಆಗ, ಜನರಿಗೆ ನೋವುಂಟುಮಾಡುವ ನಿರ್ಬಂಧಗಳ ಹೇರಿಕೆಯು ನಾಗರಿಕ ಬಾಂಬ್ ದಾಳಿಗೆ ಸಮಾನವಾದ ಸಾಮೂಹಿಕ ಶಿಕ್ಷೆಯ ರೂಪವನ್ನು ಪಡೆಯುತ್ತದೆ ಮತ್ತು ಅದು ಒಂದು ಯುದ್ಧ-ಅಪರಾಧವಾಗುತ್ತದೆ.

ಬಾಂಬ್ ದಾಳಿಗಿಂತಲೂ ಕೆಟ್ಟದು

ಒಂದು ವಾಸ್ತವಾಂಶವೆಂದರೆ, ನಿರ್ಬಂಧಗಳು ಬೀರುವ ಪರಿಣಾಮಗಳು ನಾಗರಿಕರ ಮೇಲೆ ನಡೆಸುವ ಬಾಂಬ್ ದಾಳಿಗಿಂತಲೂ ಕೆಟ್ಟದಾಗಿರುತ್ತವೆ. ಇದಕ್ಕೆ ಕನಿಷ್ಠ ನಾಲ್ಕು ಕಾರಣಗಳನ್ನು ಕೊಡಬಹುದು. ಮೊದಲನೆಯದು, ಬಾಂಬ್ ದಾಳಿಗಳು, ಮಿಲಿಟರಿ ದೃಷ್ಟಿಯಲ್ಲಿ ಯಾವ ಪ್ರಾಮುಖ್ಯತೆಯನ್ನೂ ಹೊಂದಿರದ ನಾಗರಿಕರ ಮೇಲೆ ನಿರ್ದೇಶಿತವಾಗಿದ್ದಾಗಲೂ ಸಹ, ಅವುಗಳ ಪರಿಣಾಮಗಳು ಕೊನೆಯ ಪಕ್ಷ ನಿರ್ದಿಷ್ಟ ಪ್ರದೇಶಗಳಿಗೆ/ಸ್ಥಳಗಳಿಗೆ ಸೀಮಿತಗೊಳ್ಳುತ್ತವೆ. ಆದರೆ, ನಿರ್ಬಂಧಗಳು ಒಟ್ಟಾರೆಯಾಗಿ ಇಡೀ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಆ ಕಾರಣದಿಂದಾಗಿ ಇಡೀ ದೇಶದ ಜನರ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ, ದೇಶದೊಳಗೆ ಬೇರೆಡೆ ಹೋಗುವ ಮೂಲಕ ಯಾರೊಬ್ಬರೂ ಆರ್ಥಿಕ ಪರಿಣಾಮಗಳಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ.

ಎರಡನೆಯದು, ಯುದ್ಧವು ಒಂದು ನಿರ್ದಿಷ್ಟ ಸೀಮಿತ ಅವಧಿಯಲ್ಲಿ ಮುಗಿಯುವುದರಿಂದ, ಅದರ ಭಾಗವಾಗಿ ಸಂಭವಿಸುವ ನಾಗರಿಕ ಬಾಂಬ್ ದಾಳಿಯೂ ಕೊನೆಗೊಳ್ಳುತ್ತದೆ. ಆದರೆ, ನಿರ್ಬಂಧಗಳು ಕೊನೆಯೇ ಇಲ್ಲದೆ ಮುಂದುವರಿಯುತ್ತಲೇ ಹೋಗಬಹುದು. ಒಂದು ಉದಾಹರಣೆಯಾಗಿ ಹೇಳುವುದಾದರೆ, ಕ್ಯೂಬಾದ ವಿರುದ್ಧದ ಹೇರಿದ ನಿರ್ಬಂಧಗಳು ದಶಕ ದಶಕಗಳಿಂದಲೂ ಜಾರಿಯಲ್ಲಿವೆ. ಅದೇ ರೀತಿಯಲ್ಲಿ, ಇರಾನ್ ವಿರುದ್ಧ ಹೇರಿದ ನಿರ್ಬಂಧಗಳೂ ಮುಂದುವರಿಯುತ್ತಲೇ ಇವೆ.

ಮೂರನೆಯದಾಗಿ, ನಿರ್ಬಂಧಗಳು ಉಂಟುಮಾಡುವ ಕಷ್ಟ ನಷ್ಟಗಳಿಗಿಂತಲೂ ಹೆಚ್ಚು ಮಾರಕವಾಗಿ ಪರಿಣಮಿಸುತ್ತವೆ. ಕಷ್ಟ ನಷ್ಟಗಳ ನಿಖರ ಅಂದಾಜುಗಳು ತುಂಬಾ ಕಷ್ಟಕರವಾಗಿರುತ್ತವೆ ಎಂಬುದು ನಿಜವಾದರೂ ಅವು ಬಹು ದೊಡ್ಡ ಬಲಿ ತೆಗೆದುಕೊಳ್ಳುತ್ತವೆ ಎಂಬುದು ಒಂದು ಉತ್ಪ್ರೇಕ್ಷೆಯೇ ಅಲ್ಲ. ಇಂತಹ ಕಷ್ಟ ನಷ್ಟಗಳಿಗೆ ಮತ್ತು ಸಾವು ನೋವುಗಳಿಗೆ, ಜನಸಾಮಾನ್ಯರಿಗೆ ಅತ್ಯವಶ್ಯವಾದ ಆಹಾರ ಮತ್ತು ಪ್ರಾಥಮಿಕ ಔಷಧಿಗಳ ನಿರಾಕರಣೆಗಳು ಕಾರಣವಾಗಿವೆ ಮತ್ತು ಈ ಹಿಂದೆ ನಿರ್ಬಂಧಗಳಿಗೆ ಒಳಗಾದ ಪ್ರತಿಯೊಂದು ದೇಶವೂ ಅನುಭವಿಸಿದ ವಿನಾಶಕಾರಿ ಪರಿಣಾಮದ ಜೊತೆಯಲ್ಲಿ ಆಹಾರ ಮತ್ತು ಔಷಧಗಳ ಕೊರತೆಯನ್ನೂ ಅನುಭವಿಸಿದೆ.

ನಾಲ್ಕನೆಯದು, ನಿಖರವಾಗಿ ಈ ಕಾರಣಕ್ಕಾಗಿ, ನಿರ್ಬಂಧಗಳು ಒಂದು ಬಹು ದೊಡ್ಡ ಸಂಖ್ಯೆಯ ವಯಸ್ಸಾದವರು, ಮಕ್ಕಳು ಮತ್ತು ಗರ್ಭಿಣಿಯರು, ಔಷಧಿಗಳ ಅಗತ್ಯವಿರುವವರು, ಇವರಿಗೆ ಆದಷ್ಟು ಮಟ್ಟಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಒಂದು ಸಾಮಾನ್ಯ ಒಪ್ಪಿಗೆ ಇದ್ದರೂ ಸಹ, ಇವರನ್ನು ಯುದ್ಧಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ಬಲಿ ತೆಗೆದುಕೊಳ್ಳುತ್ತವೆ.

ಮಿಲಿಟರಿ ಸಂಘರ್ಷಕ್ಕಿಂತಲೂ ಹೆಚ್ಚು ಅಪಾಯಕಾರಿ

ನಿರ್ಬಂಧಗಳಿಗೆ ಒಳಗಾದ ಒಂದು ದೇಶವು, ಈ ನಿರ್ಬಂಧಗಳಿಗೆ ಹೆದರದ ದೇಶಗಳಿಂದ ಆಹಾರ ಮತ್ತು ಔಷಧಿಗಳ ನಿರ್ದಿಷ್ಟ ಪ್ರಮಾಣದ ಸರಬರಾಜುಗಳನ್ನು ಏರ್ಪಡಿಸಿಕೊಳ್ಳಬಹುದಾದರೂ ಸಹ, ಈ ರೀತಿಯ ತೊಂದರೆಗಳನ್ನು ಜನರು ಅನುಭವಿಸುತ್ತಿರುವುದಕ್ಕೆ ಒಂದು ಅಧಿಕ ಕಾರಣವೂ ಇದೆ. ಅದು ಯಾವುದು ಎಂದರೆ, ನಿರ್ಬಂಧಗಳಿಗೆ ಒಳಗಾದ ಎಲ್ಲ ದೇಶಗಳೂ ಅತಿ ಹೆಚ್ಚಿನ ಮಟ್ಟದ ಹಣದುಬ್ಬರದಿಂದ ಬಳಲುತ್ತವೆ ಎಂಬುದು. ಹಣದುಬ್ಬರದಿಂದಾಗಿ ಜೀವನದ ಮೂಲಭೂತ ಅವಶ್ಯಕತೆಗಳನ್ನು, ಅವು ಲಭ್ಯವಿರುವಾಗಲೂ ಸಹ, ಒದಗಿಸಿಕೊಳ್ಳುವುದು ಹೆಚ್ಚಿನ ಜನರಿಗೆ ಸಾಧ್ಯವಾಗುವುದಿಲ್ಲ. ಎರಡು ಸ್ಪಷ್ಟ ಕಾರಣಗಳಿಂದಾಗಿ ಹಣದುಬ್ಬರವು ವೇಗ ಪಡೆಯುತ್ತದೆ.

ಮೊದಲನೆಯದು, ದೇಶವು ತನ್ನ ಕೆಲವು ಮೂಲಭೂತ ಸರಕುಗಳ ಸರಬರಾಜುಗಳನ್ನು ಮಿತ್ರ ದೇಶಗಳಿಂದ ಪಡೆಯಬಹುದಾದರೂ ಸಹ, ಒಂದಿಷ್ಟು ಕೊರತೆ ಸಾಮಾನ್ಯವಾಗಿ ದೇಶದೊಳಗೆ ಉಳಿದೇ ಬಿಡುತ್ತದೆ. ಈ ಅಂಶವೇ ಹಣದುಬ್ಬರವನ್ನು ತೀವ್ರಗೊಳಿಸುತ್ತದೆ. ಎರಡನೆಯದು, ನಿರ್ಬಂಧಗಳು ಉಂಟುಮಾಡುವ ಒಂದು ಅನಿವಾರ್ಯ ಪರಿಣಾಮವೆಂದರೆ, ಅದು ಉದ್ದೇಶಿತ ದೇಶದ ವಿನಿಮಯ ದರವನ್ನು ಅಪಮೌಲ್ಯಗೊಳಿಸುತ್ತದೆ. ದೇಶದ ಕರೆನ್ಸಿಯ ಅಪಮೌಲ್ಯವು ಹಲವಾರು ಕಾರಣಗಳಿಂದಾಗಿ ಸಂಭವಿಸುತ್ತದೆ: ರಫ್ತುಗಳು ತೀವ್ರವಾಗಿ ಇಳಿಯುತ್ತವೆ. ಸಾಮಾನ್ಯವಾಗಿ ದೇಶಕ್ಕೆ ಅನಿವಾಸಿಗಳಿಂದ ಒಳಹರಿಯುವ ಹಣ ರವಾನೆ ಮತ್ತು ದೇಶಕ್ಕೆ ಒಳಹರಿಯುವ ವಿದೇಶಿ ಹೂಡಿಕೆಯ ಹಣ, ಇವು ಬತ್ತಿ ಹೋಗುತ್ತವೆ. ಮತ್ತು, ನಿರ್ಬಂಧಗಳನ್ನು ಹೇರುವ ದೇಶಗಳ ಬ್ಯಾಂಕುಗಳಲ್ಲಿ ಇರಿಸಲಾದ ಆ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹದ ಹಣವು ಉದ್ದೇಶಪೂರ್ವಕವಾಗಿ ಸಿಗದಂತೆ ಮಾಡಲಾಗುತ್ತದೆ.

ಮೂಲಭೂತ ಸರಕುಗಳ ಸರಬರಾಜುಗಳನ್ನು ಹಾಗೂ ಹೀಗೂ ಹೊಂದಿಸಿಕೊಂಡರೂ ಸಹ, ಸರಕು ಸಾಮಗ್ರಗಳ ಅಂತಿಮ ಬೆಲೆಗಳನ್ನು ಅವುಗಳ ಅಂತಾರಾಷ್ಟ್ರೀಯ ಬೆಲೆಗಳೊಂದಿಗೆ ಹೊಂದಿಸಿ ನಿಗದಿಪಡಿಸುವ ಕಾರಣದಿಂದಾಗಿ ಮತ್ತು ವಿನಿಮಯ ದರದ ಅಪಮೌಲ್ಯದ ಕಾರಣದಿಂದಾಗಿ, ಅವುಗಳ ದೇಶೀಯ ಬೆಲೆಗಳು ಹೆಚ್ಚಾಗುತ್ತವೆ. ಹಾಗಾಗಿ, ಜನರು ಅವುಗಳನ್ನು ಕೊಳ್ಳುವುದು ಸಾಧ್ಯವಾಗುವುದಿಲ್ಲ. ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ನಿರ್ಬಂಧಗಳಿಗೆ ಹೆದರದ ಮಿತ್ರ ದೇಶಗಳಿಂದ ಸಹಾಯವನ್ನು ಪಡೆಯಬಹುದಾದಾಗಲೂ ಸಹ, ನಿರ್ಬಂಧಗಳು ಉದ್ದೇಶಿತ ದೇಶಕ್ಕೆ ಅಪಾರ ಹಾನಿಯನ್ನುಂಟುಮಾಡುತ್ತವೆ.

ನಿರ್ಬಂಧಗಳು, ಯುದ್ಧದ ಒಂದು ಸೂಚ್ಯ ರೂಪ ಮಾತ್ರವೇ ಅಲ್ಲ, ಮುಕ್ತ ಮಿಲಿಟರಿ ಸಂಘರ್ಷಕ್ಕಿಂತಲೂ ಹೆಚ್ಚು ಅಪಾಯಕಾರಿ ರೂಪವೂ ಹೌದು. ಈ ಅಂಶವನ್ನು, ಅವು ಸೌಮ್ಯವಾಗಿ ತೋರುವುದರಿಂದ ಮರೆಮಾಡಲಾಗಿದೆ. ಅಗತ್ಯ ಔಷಧಿಗಳ ಕೊರತೆಯಿಂದಾಗಿ ಎಲ್ಲ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವ ಜನರ ಸಾವುಗಳು ಆಸ್ಪತ್ರೆಗಳಲ್ಲಿ ಸಂಭವಿಸುತ್ತವೆ ಅಥವಾ ಆಹಾರದ ಕೊರತೆಯಿಂದಾಗಿ ರೋಗಗಳಿಗೆ ಗುರಿಯಾಗುವ ಜನರು ಮನೆಯಲ್ಲೇ ಸಾವಿಗೀಡಾಗುತ್ತಾರೆ. ಈ ಕಾರಣದಿಂದಾಗಿ, ಜನರು ಎದುರಿಸುತ್ತಿರುವ ಕಷ್ಟ ಕೋಟಲೆಗಳು ನಾಗರಿಕರ ಮೇಲೆ ನಡೆಸುವ ಬಾಂಬ್ ದಾಳಿಯ ಪರಿಣಾಮಗಳಿಗಿಂತ ಯಾವ ರೀತಿಯಲ್ಲೂ ಕಡಿಮೆ ಭಯಾನಕವಲ್ಲ. ಮಾತ್ರವಲ್ಲ, ಈ ಸಾವುಗಳು ನಿರ್ಬಂಧಗಳೊಂದಿಗೆ ಹೊಂದಿರುವ ಸಂಬಂಧವು ಯಾವುದೇ ರೀತಿಯಲ್ಲಿ ನೇರವಾಗಿ ಕಾಣಿಸಿಕೊಳ್ಳುವುದಿಲ್ಲ.
ಇದು ಜನರನ್ನು ಸುಲಭವಾಗಿ ಮೋಸಗೊಳಿಸುತ್ತದೆ.

ನಿರ್ಬಂಧಕ್ಕೊಳಗಾದ ಮೊದಲ ಅಭಿವೃದ್ಧ ದೇಶ

ಈ ಸಮಸ್ಯೆಗಳು ರಷ್ಯಾದ ಪ್ರಕರಣದಲ್ಲಿ ಕಾಣಿಸಿಕೊಳ್ಳಲಿಲ್ಲ. ಕಾರಣವೆಂದರೆ, ಸೋವಿಯತ್ ಒಕ್ಕೂಟದ ದಿನಗಳ ಬಳುವಳಿಯಾಗಿ ಅಭಿವೃದ್ಧಿ ಹೊಂದಿದ ರಷ್ಯಾ, ಒಂದು ವೈವಿಧ್ಯಮಯ ಅರ್ಥವ್ಯವಸ್ಥೆಯನ್ನು ಹೊಂದಿದೆ. ವಾಸ್ತವವಾಗಿ, ಅಭಿವೃದ್ಧಿ ಹೊಂದಿದ ಒಂದು ದೇಶದ ವಿರುದ್ಧ ಸಾಮ್ರಾಜ್ಯಶಾಹಿ ನಿರ್ಬಂಧಗಳನ್ನು ವಿಧಿಸಲಾದ ಮೊದಲ ಪ್ರಕರಣವು ರಷ್ಯಾ ಆಗಿದೆ. ಸಾಮಾನ್ಯವಾಗಿ ಗುರಿಯಾಗುವ ಮೂರನೇ ಜಗತ್ತಿನ ದೇಶಗಳಿಗಿಂತ ಉತ್ತಮವಾಗಿ ಇಂತಹ ನಿರ್ಬಂಧಗಳನ್ನು ರಷ್ಯಾ ತಡೆದುಕೊಂಡಿರುವುದು ಆಶ್ಚರ್ಯವಲ್ಲ. ಜೊತೆಗೆ, ಈಗ ಸಾಮ್ರಾಜ್ಯಶಾಹಿಯು ನಿರ್ಬಂಧಗಳನ್ನು ಹೇರುತ್ತಿರುವ ದೇಶಗಳ ಸಂಖ್ಯೆಯು ಬಹಳವೇ ಆಗಿರುವುದರಿಂದ, ನಿರ್ಬಂಧಗಳ ಕಾರ್ಯಕ್ಷಮತೆಯು ಕಡಿಮೆಯಾಗುತ್ತಿದೆ.

ಅವುಗಳ ವ್ಯಾಪಕತೆಯ ಕಾರಣದಿಂದ ಈ ದಿನಗಳಲ್ಲಿ ನಿರ್ಬಂಧಗಳು ಕಡಿಮೆ ಪರಿಣಾಮಕಾರಿಯಾಗಿವೆ ಎಂಬ ಅಂಶವು ಅಥವಾ ಬೇರೆ ದೇಶಗಳಿಗಿಂತ ರಷ್ಯಾದ ವಿರುದ್ಧ ಕಡಿಮೆ ಪರಿಣಾಮಕಾರಿಯಾಗಿವೆ ಎಂಬ ಅಂಶವು ಏಕಪಕ್ಷೀಯ ನಿರ್ಬಂಧಗಳ ಅಪರಾಧೀ ರೂಪವನ್ನು ಅಣು ಮಾತ್ರವೂ ಕಡಿಮೆ ಮಾಡುವುದಿಲ್ಲ. ಮೂರನೆಯ ಜಗತ್ತಿನ ಜನರ ವಿರುದ್ಧವಾಗಿ ಬಳಸುವ ಈ ನಿರ್ಬಂಧಗಳು, ಸಾಮ್ರಾಜ್ಯಶಾಹಿಯ ಕೈಯಲ್ಲಿರುವ ಒಂದು ಮಾರಕ ಅಸ್ತ್ರವಾಗಿವೆ. ಆದುದರಿಂದ ವಿಶ್ವಸಂಸ್ಥೆಯು ಈ ನಿರ್ಬಂಧಗಳನ್ನೇ ನಿಷೇಧಿಸಬೇಕು. ನಿಜ, ಅಂತಹ ಒಂದು ನಿಷೇಧವು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಅನುಮೋದನೆಯನ್ನು ಪಡೆಯದ ಹೊರತು, ಕಾರ್ಯಾಚರಣೆಯ ದೃಷ್ಟಿಯಲ್ಲಿ ವ್ಯತ್ಯಾಸವಾಗುವುದಿಲ್ಲ. ಸಾಮ್ರಾಜ್ಯಶಾಹಿ ದೇಶಗಳು ಭದ್ರತಾ ಮಂಡಳಿಯಲ್ಲಿ ಒಂದು ನಿರ್ಣಾಯಕ ಧ್ವನಿಯನ್ನು ಹೊಂದಿರುವುದರಿಂದ ಅನುಮೋದನೆ ಸಿಗುವುದಿಲ್ಲ. ಆದರೆ, ಏಕಪಕ್ಷೀಯ ನಿರ್ಬಂಧಗಳನ್ನು ನಿಷೇಧಿಸುವ ವಿಶ್ವ ಸಂಸ್ಥೆಯ ನಿರ್ಣಯವು ನೈತಿಕವಾಗಿ ಹೆಚ್ಚು ತೂಕ
ಹೊಂದಿರುತ್ತದೆ.

ಆದ್ದರಿಂದ, ಝೆಲೆನ್ಸ್ಕಿ ಭಾರತಕ್ಕೆ ನೀಡಿರುವ ಸಲಹೆಯು, ರಷ್ಯಾದ ವಿರುದ್ಧ ನಡೆಯುತ್ತಿರುವ ಆರ್ಥಿಕ ಯುದ್ಧದಲ್ಲಿ ಭಾರತವು ಭಾಗಿಯಾಗುವಂತೆ ಮಾಡುತ್ತದೆ ಮಾತ್ರವಲ್ಲ, ಯುದ್ಧ-ಅಪರಾಧಗಳಲ್ಲಿ ಭಾರತವು ಭಾಗಿಯಾಗುವಂತೆ ಮಾಡುತ್ತದೆ.

ಇದನ್ನೂ ನೋಡಿ: ಸಂವಿಧಾನದ ಸಂರಕ್ಷಣೆಗಾಗಿ ಹೋರಾಡಬೇಕಿದೆ – ಡಾ. ಜಿ. ರಾಮಕೃಷ್ಣJanashakthi Media

Donate Janashakthi Media

Leave a Reply

Your email address will not be published. Required fields are marked *