ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಕಾನೂನು ಆಯೋಗಕ್ಕೆ ಪತ್ರ
ಜೂನ್ 14 ರಂದು ಪ್ರಸ್ತುತ ಕಾನೂನು ಆಯೋಗ ಯು.ಸಿ.ಸಿ. ಕುರಿತಂತೆ ಮತ್ತೊಮ್ಮೆ ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳುವ ಸೂಚನೆಯನ್ನು ಪ್ರಕಟಿಸಿತ್ತು. ಇದಕ್ಕೆ ಉತ್ತರವಾಗಿ ದೇಶಾದ್ಯಂತ ಒಂದು ಕೋಟಿಗೂ ಹೆಚ್ಚು ಸದಸ್ಯತ್ವವನ್ನು ಹೊಂದಿರುವ ಮಹಿಳಾ ಸಂಘಟನೆ ಎಐಡಿಡಬ್ಲ್ಯುಎ ಈ ಪತ್ರವನ್ನು ಬರೆದಿದೆ.
ಕಳೆದ 40 ವರ್ಷಗಳಿಂದ ಮಹಿಳೆಯರ ವೈಯಕ್ತಿಕ ಕಾನೂನು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ರಾಜ್ಯದಲ್ಲಿ ವಿವಿಧ ಕಾನೂನು ಕೋಶಗಳಲ್ಲಿ ಹಲವಾರು ಪ್ರಕರಣಗಳನ್ನುಎತ್ತಿಕೊಂಡು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಎಐಡಿಡಬ್ಲ್ಯುಎ ಎಲ್ಲಾ ಸಮುದಾಯಗಳ ವೈಯಕ್ತಿಕ ಕಾನೂನುಗಳಲ್ಲಿ ಮಹಿಳೆಯರ ವಿರುದ್ಧ ತಾರಮ್ಯಗಳನ್ನು ನಿವಾರಿಸುವ ಮತ್ತು ಸಮಾನತೆ ಒದಗಿಸುವ ಸುಧಾರಣೆಗಳು ನಡೆಯಬೇಕು ಎಂದು ಪ್ರಚಾರ ಮಾಡಿಕೊಂಡು ಬಂದಿದೆ. ನಮ್ಮ ದೇಶದ ಮಹಿಳೆಯರು ಎಲ್ಲಾ ಧಾರ್ಮಿಕ ಸಮುದಾಯಗಳಲ್ಲಿ ಪಿತೃಪ್ರಧಾನ ಮತ್ತು ತಾರತಮ್ಯದ ವೈಯಕ್ತಿಕ ಕಾನೂನುಗಳ ಹೊರೆಯಲ್ಲಿ ಶತಮಾನಗಳಿಂದ ಬಳಲುತ್ತಿದ್ದಾರೆ. ಆದರೆ ಏಕರೂಪದ ಕಾನೂನುಗಳಿಂದಷ್ಟೇ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಪಡೆಯಲು ಅಥವಾ ಈ ಕಾನೂನುಗಳಲ್ಲಿ ವಿವಿಧ ಹಂತಗಳಲ್ಲಿ ಅಂತರ್ಗತವಾಗಿರುವ ತಾರತಮ್ಯವನ್ನು ತೊಡೆದುಹಾಕಲು ಸಾಧ್ಯವಿಲ್ಲ.ಏಕೆಂದರೆ ಏಕರೂಪತೆ ಎಂದರೆ ಸಮಾನತೆ ಅಲ್ಲ. ಬಹುಶಃ ಇದು ಹಿಂದೂ ಕಾನೂನುಗಳಲ್ಲಿನ ಲಿಂಗ ಪಕ್ಷಪಾತವನ್ನು ಎಲ್ಲಾ ಸಮುದಾಯಗಳ ಮೇಲೆ ನಕಲು ಮಾಡಲು ಕಾರಣವಾಗಬಹುದಷ್ಟೇ ಎಂದು ಎಐಡಿಡಬ್ಲ್ಯುಎ ಸಂದೇಹ ವ್ಯಕ್ತಪಡಿಸಿದೆ.
ಮರು-ಪರಿಶೀಲನೆಯ ಅಗತ್ಯವಾದರೂ ಏನು?
ಈಗಾಗಲೇ ವ್ಯಾಪಕವಾದ ಪುರಾವೆಗಳನ್ನು ಪಡೆದು, ವ್ಯಾಪಕವಾದ ಸಂಶೋಧನೆಯನ್ನು ನಡೆಸಿ , ಈ ಪ್ರಶ್ನೆಯ ಆಳವಾದ ಪರೀಕ್ಷಣೆಯ ನಂತರ ಹಿಂದಿನ( 21ನೇ) ಕಾನೂನು ಆಯೋಗ ಏಕರೂಪ ಕಾನೂನು ಸಂಹಿತೆ ತರಲು ಕಾಲ ಪಕ್ವವಾಗಿಲ್ಲ ಎಂಬ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿತ್ತು ಎಂಬುದನ್ನು ನೆನಪಿಸಿರುವ ಪತ್ರ, ಎಐಡಿಡಬ್ಲ್ಯುಎ ಕೂಡ ಇಂದು ಭಾರತದಲ್ಲಿ ಏಕರೂಪತೆ ಅಗತ್ಯವೂ ಅಲ್ಲ ಅಥವಾ ಅಪೇಕ್ಷಣೀಯವೂ ಅಲ್ಲ ಎಂದು ಭಾವಿಸುವುದಾಗಿ ಹೇಳಿದೆ.
“ಈಗಿರುವ ವೈಯಕ್ತಿಕ ಕಾನೂನುಗಳ ವಿವಿಧ ಅಂಶಗಳು ಮಹಿಳೆಯರನ್ನು ಸವಲತ್ತುಗಳಿಂದ ವಂಚಿತಗೊಳಿಸುತ್ತವೆ. ಅಸಮಾನತೆಯ ಮೂಲದಲ್ಲಿ ಇರುವುದು ತಾರತಮ್ಯವೇ ಹೊರತು ವ್ಯತ್ಯಾಸವಲ್ಲ ಎಂದು ಈ ಆಯೋಗವು ಅಭಿಪ್ರಾಯಪಡುತ್ತದೆ. ಈ ಅಸಮಾನತೆಯನ್ನು ನಿವಾರಿಸುವ ಸಲುವಾಗಿ, ಆಯೋಗವು ಅಸ್ತಿತ್ವದಲ್ಲಿರುವ ಕೌಟುಂಬಿಕ ಕಾನೂನುಗಳಿಗೆ ಹಲವಾರು ತಿದ್ದುಪಡಿಗಳನ್ನು ಸೂಚಿಸಿದೆ. ಆದ್ದರಿಂದ ಈ ಆಯೋಗವು ಈ ಹಂತದಲ್ಲಿ ಅಗತ್ಯವಿಲ್ಲದ ಅಥವಾ ಅಪೇಕ್ಷಣೀಯವಲ್ಲದ ಏಕರೂಪ ನಾಗರಿಕ ಸಂಹಿತೆಯನ್ನು ಒದಗಿಸುವ ಬದಲು ತಾರತಮ್ಯದ ಕಾನೂನುಗಳೊಂದಿಗೆ ವ್ಯವಹರಿಸಿದೆ. ಹೆಚ್ಚಿನ ದೇಶಗಳು ಈಗ ವ್ಯತ್ಯಾಸವನ್ನು ಗುರುತಿಸುವತ್ತ ಸಾಗುತ್ತಿವೆ ಮತ್ತು ವ್ಯತ್ಯಾಸ ಇದೆಯೆಂದ ಮಾತ್ರಕ್ಕೆ ತಾರತಮ್ಯ ಇದೆ ಎಂದು ಹೇಳಲಾಗುವದಿಲ್ಲ, ಬದಲಾಗಿ ಇದು ಒಂದು ಪುಷ್ಟವಾದ ಪ್ರಜಾಪ್ರಭುತ್ವ ಇದೆ ಎಂಬುದನ್ನು ಸೂಚಿಸುತ್ತದೆ” ಎಂದು 21ನೇ ಕಾನೂನು ಹೇಳಿರುವಾಗ ಪ್ರಸ್ತುತ (22 ನೇ) ಕಾನೂನು ಆಯೋಗವು ಈ ಪ್ರಶ್ನೆಯನ್ನು ಮತ್ತೊಮ್ಮೆ ಪರಿಶೀಲಿಸುತ್ತಿರುವುದು ಆಶ್ಚರ್ಯ ತಂದಿದೆ ಎಂದು ಎಐಡಿಡಬ್ಲ್ಯುಎ ತನ್ನ ಪತ್ರದಲ್ಲಿ ಹೇಳಿದೆ.
ಈಗ 22ನೇ ಕಾನೂನು ಆಯೋಗವು ಈ ಬಗ್ಗೆ ಯಾವುದೇ ನೀಲನಕ್ಷೆಯನ್ನು ಒದಗಿಸದ ಅಸ್ಪಷ್ಟ ಪದಗಳ ಸೂಚನೆಯ ಮೂಲಕ ಮತ್ತೆ ಈ ಕಸರತ್ತಿನಲ್ಲಿ ತೊಡಗುವ ಅಗತ್ಯವಾದರೂ ಏನು? ಇದಲ್ಲದೆ, ಒಂದು ತಿಂಗಳ ಅತ್ಯಂತ ಸೀಮಿತ ಅವಧಿಯೊಳಗೆ ಅಭಿಪ್ರಾಯಗಳನ್ನು ಕೊಡಬೇಕು ಎಂದು ಕೇಳಿರುವುದನ್ನು ಗಮನಿಸಿದರೆ, ಇದು ಈ ವಿಷಯದ ಬಗ್ಗೆ ಕೆಲಸ ಮಾಡುತ್ತಿರುವ ವಿವಿಧ ಸಂಸ್ಥೆಗಳು ಮತ್ತು ಜನಗಳ ಅಭಿಪ್ರಾಯಗಳನ್ನು ಪಡೆಯುವ ಗಂಭೀರ ಪ್ರಯತ್ನ ಎಂದು ಅನಿಸುತ್ತಿಲ್ಲ. ಬದಲಾಗಿ, ಕೇವಲ ಔಪಚಾರಿಕತೆಯಾಗಿ ಕಾಣುತ್ತದೆ. ವಿವಿಧ ರಾಜ್ಯಗಳ ಬಿಜೆಪಿ ಸರ್ಕಾರಗಳು ಮತ್ತು ಪ್ರಧಾನ ಮಂತ್ರಿಗಳು ಇತ್ತೀಚೆಗೆ ಅದರ ಪರವಾಗಿ ಮಾತನಾಡಿದ್ದರಿಂದ ಕಾನೂನು ಆಯೋಗವು ಹೇಗಾದರೂ ಯು.ಸಿ.ಸಿ.ಯನ್ನು ಶಿಫಾರಸು ಮಾಡುವ ಅಜೆಂಡಾವನ್ನು ಹೊಂದಿರುವಂತೆ ಕಾಣುತ್ತದೆ ಎಂದು ಎಐಡಿಡಬ್ಲ್ಯುಎ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಏಕರೂಪ ನಾಗರೀಕ ಸಂಹಿತೆ : ಬಹುಪತ್ನಿತ್ವ ಕೇವಲ ಮುಸ್ಲಿಮರಲ್ಲಿನ ಸಮಸ್ಯೆಯೇ?
ವ್ಯಾಪಕ ಸಮಾಲೋಚನೆಗಳ ನಂತರವೇ ಸಾಧ್ಯ
ಕಾನೂನು ಆಯೋಗವು ನಿರ್ದಿಷ್ಟವಾಗಿ ವಿವಿಧ ಧಾರ್ಮಿಕ ಸಂಸ್ಥೆಗಳ ಅಭಿಪ್ರಾಯವನ್ನು ಕೇಳಿರುವುದು ಕೂಡ ಆಶ್ಚರ್ಯ ತಂದಿದೆ. ಯು.ಸಿ.ಸಿ.ಯು ಮಹಿಳಾ ಹಕ್ಕುಗಳು ಮತ್ತು ಸಮಾನತೆಗೆ ಸಂಬಂಧಿಸಿದ ವಿಷಯವಾಗಿದೆ. ಆದ್ದರಿಂದ ಕಾನೂನು ಆಯೋಗವು ವಿವಿಧ ಸಮುದಾಯಗಳ ಮಹಿಳೆಯರು ಸೇರಿದಂತೆ ಈ ಪ್ರಶ್ನೆಯನ್ನೆತ್ತಿಕೊಂಡು ಕೆಲಸ ಮಾಡುತ್ತಿರುವ ಎಲ್ಲರೊಂದಿಗೆ ಸಮಾಲೋಚನೆಗೆ ಆದ್ಯತೆ ನೀಡಬೇಕಾಗಿತ್ತು. ಆದರೆ ಈ ಕಸರತ್ತನ್ನು ಸರ್ಕಾರದ ಆದೇಶದ ಮೇರೆಗೆ ಇದನ್ನು ಮರುಪರಿಶೀಲಿಸಲಿಕ್ಕಾಗಿ, ಹೆಚ್ಚಿನ ಮಹಿಳಾ ಸಂಘಟನೆಗಳು ಮತ್ತು ಗುಂಪುಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಇಚ್ಛೆಗೆ ವಿರುದ್ಧವಾಗಿ ಏಕರೂಪ ನಾಗರಿಕ ಸಂಹಿತೆಯನ್ನು ತರುವುದಕ್ಕಾಗಿಯೇ ಎತ್ತಿಕೊಳ್ಳಲಾಗುತ್ತಿದೆ. ವಾಸ್ತವವಾಗಿ, ಯು.ಸಿ.ಸಿ.ಯು ಅಸ್ತಿತ್ವದಲ್ಲಿರುವ ಮುಸ್ಲಿಂ ಕಾನೂನು ಮತ್ತು ಬುಡಕಟ್ಟು ಪ್ರದೇಶಗಳಿಗೆ ಸಂಬಂಧಿಸಿದಂತೆ ಆರನೇ ಶೆಡ್ಯೂಲ್ ಅಡಿಯಲ್ಲಿ ಬರುವ ಕಾನೂನುಗಳನ್ನು ರದ್ದುಗೊಳಿಸುವ ಪ್ರಯತ್ನವಾಗಿದೆ ಎಂದಿರುವ ಎಐಡಿಡಬ್ಲ್ಯುಎ, ಪ್ರಜಾಪ್ರಭುತ್ವದ ವಿಧಿ-ವಿಧಾನಗಳ ಪ್ರಕಾರ, ಇದನ್ನು ಸಂಬಂಧಪಟ್ಟ ಸಮುದಾಯಗಳೊಂದಿಗೆ ವ್ಯಾಪಕ ಸಮಾಲೋಚನೆಗಳ ನಂತರವೇ ಮಾಡಲು ಸಾಧ್ಯ ಎಂದು ತನ್ನ ಪತ್ರದಲ್ಲಿ ಹೇಳಿದೆ.
ಮಹಿಳೆಯರ ಸಮಾನ ಹಕ್ಕುಗಳ ಸುಧಾರಣೆಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಸರ್ಕಾರ ಕೆಟ್ಟದಾಖಲೆಯನ್ನೇ ಹೊಂದಿದೆ. ಇದು ಎಂದಿಗೂ ಲಿಂಗ ನ್ಯಾಯಕ್ಕೆ ಆದ್ಯತೆ ನೀಡಿಲ್ಲ ಅಥವಾ ಮಹಿಳೆಯರಿಗಾಗಿ ಒಂದೇ ಒಂದು ಸುಧಾರಣೆಯನ್ನೂ ಕೈಗೊಂಡಿಲ್ಲ. ಮಹಿಳಾ ಚಳುವಳಿಯ ಹಲವಾರು ಆಗ್ರಹಗಳನ್ನು ಹಿಂದಿನ ಸರಕಾರಗಳಂತೆ ಇದೂ ನಿರ್ಲಕ್ಷಿಸಿದೆ. ಸರ್ಕಾರವು ಯುಸಿಸಿಯನ್ನು ತರಲು ತೀರ್ಮಾನಿಸಿದೆ ಎಂಬ ಕಾರಣಕ್ಕಾಗಿಯಷ್ಟೇ ಈ ಪ್ರಶ್ನೆಯನ್ನು ಮರುಪರಿಶೀಲಿಸಲು ಹೊರಡಬಾರದು ಎಂದು ಕಾನೂನು ಆಯೋಗವನ್ನು ವಿನಂತಿಸಿರುವ ಎಐಡಿಡಬ್ಲ್ಯುಎ “ಈ ಕ್ಷೇತ್ರದಲ್ಲಿನ ನಮ್ಮ ಅನುಭವವನ್ನು ಪರಿಗಣಿಸಿ, ಕಾನೂನು ಆಯೋಗವು ನಮ್ಮನ್ನು ಕರೆದಾಗ ನಾವು ಕೂಡ ಮೌಖಿಕ ಸಾಕ್ಷ್ಯವನ್ನು ನೀಡಲು ಬಯಸುತ್ತೇವೆ. ಯು.ಸಿ.ಸಿ.ಯನ್ನು ಶಿಫಾರಸು ಮಾಡಲು ನಿರ್ಧರಿಸುವ ಮೊದಲು ಮಹಿಳಾ ಸಂಘಟನೆಗಳು ಮತ್ತು ಗುಂಪುಗಳು ಮತ್ತು ಇದಕ್ಕೆ ಸಂಬಂಧಿಸಿದ ಇತರರು,ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರು ಮತ್ತು ಬುಡಕಟ್ಟು ಮಹಿಳೆಯರೊಂದಿಗೆ ಕಾನೂನು ಆಯೋಗವು ವ್ಯಾಪಕವಾಗಿ ಸಮಾಲೋಚಿಸಬೇಕು ಎಂದು ನಾವು ಭಾವಿಸುತ್ತೇವೆ” ಎಂದು ತನ್ನ ಪತ್ರದಲ್ಲಿ ಬರೆದಿದೆ.