ಏಕರೂಪ ನಾಗರಿಕ ಸಂಹಿತೆ- ಸಾಮಾಜಿಕ ಸಾಂಸ್ಕೃತಿಕ ವಾಸ್ತವಗಳು

ನಾ ದಿವಾಕರ

 “ಇಂದು ನಾಗರಿಕ ಸಂಹಿತೆಯ ಹೆಸರಿನಲ್ಲಿ ಜನರನ್ನು ಪ್ರಚೋದಿಸುವ ಪ್ರಯತ್ನಗಳು ಹೇಗೆ ನಡೆಯುತ್ತಿವೆ ಎಂಬುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಒಂದು ಮನೆಯಲ್ಲಿ, ಕುಟುಂಬದ ಒಬ್ಬ ಸದಸ್ಯನಿಗೆ ಒಂದು ಕಾನೂನು ಮತ್ತು ಇನ್ನೊಬ್ಬ ಸದಸ್ಯರಿಗೆ ಮತ್ತೊಂದು ಕಾನೂನು ಇದ್ದರೆ, ಆ ಮನೆ ಕಾರ್ಯನಿರ್ವಹಿಸಬಹುದೇ?… ಇಂತಹ ದ್ವಂದ್ವ ವ್ಯವಸ್ಥೆಯೊಂದಿಗೆ ದೇಶವು ಹೇಗೆ ಕಾರ್ಯನಿರ್ವಹಿಸಲು ಸಾಧ್ಯ? ” ಎಂದು ಕೇಳುವ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದರ ಬಗ್ಗೆ ಒಲವು ತೋರಿದ್ದಾರೆ.

ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಉಲ್ಲಂಘಿಸುವ ಯಾವುದೇ ಕಾಯ್ದೆ ಕಾರ್ಯಸಾಧುವಾಗುವುದಿಲ್ಲ

ಏಕರೂಪ ನಾಗರಿಕ ಸಂಹಿತೆ (ಏನಾಸಂ) 1998 ರಿಂದಲೂ ಬಿಜೆಪಿ ಪ್ರಣಾಳಿಕೆಯ ಭಾಗವಾಗಿದೆ. ಸುಮಾರು ಎರಡು ದಶಕಗಳ ನಂತರ ಪಕ್ಷವು ಈ ವಿವಾದಾತ್ಮಕ ಕಾರ್ಯಸೂಚಿಯನ್ನು ಜಾರಿಗೆ ತರಲು ಮುಂದಾಗಿದೆ. ಧರ್ಮವನ್ನು ಲೆಕ್ಕಿಸದೆ ಎಲ್ಲಾ ಭಾರತೀಯರಿಗೆ ಮದುವೆ, ವಿಚ್ಛೇದನ, ದತ್ತು ಮತ್ತು ಉತ್ತರಾಧಿಕಾರವನ್ನು ನಿಯಂತ್ರಿಸುವ ಸಾಮಾನ್ಯ ಕಾನೂನುಗಳನ್ನು ಹೊಂದಿರುವುದು, ಮೂಲಭೂತವಾಗಿ ಎಲ್ಲಾ ನಾಗರಿಕರಿಗೆ ಅನ್ವಯವಾಗುವ ಒಂದು ಸಮಾನ ನಾಗರಿಕ ಕಾನೂನು ಹೊಂದಿರುವುದು ನಿರ್ದೇಶಕ ತತ್ವಗಳಲ್ಲಿ ಉಲ್ಲೇಖಿಸಲಾಗಿರುವ ಆದರ್ಶವಾಗಿದ್ದು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಹ ಇದನ್ನು ಅಪೇಕ್ಷಣೀಯ ಮಾನದಂಡ ಎಂದು ಭಾವಿಸಿದ್ದರೂ ಆ ಸಂದರ್ಭದಲ್ಲಿ ಹೊಸ ಗಣರಾಜ್ಯವು ಅದಕ್ಕೆ ಸಿದ್ಧವಾಗಿಲ್ಲ ಎಂದು ಅವರು ಪ್ರತಿಪಾದಿಸಿದ್ದರು. ಏಕರೂಪ ನಾಗರಿಕ ಸಂಹಿತೆಯು ಅಪೇಕ್ಷಣೀಯ ಆದರೆ ಸಂಪೂರ್ಣವಾಗಿ ಸ್ವಯಂಪ್ರೇರಿತ ಎಂದು ಡಾ. ಬಿ.ಆರ್.ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದರು. 21 ನೇ ಕಾನೂನು ಆಯೋಗವು ಸಹ ತನ್ನ ಸಮಾಲೋಚನಾ ಪತ್ರದಲ್ಲಿ ಏನಾಸಂ ಜಾರಿಗೊಳಿಸುವುದಕ್ಕಿಂತಲೂ ಹೆಚ್ಚಾಗಿ ಕುಟುಂಬ ಕಾನೂನುಗಳಲ್ಲಿ ಸುಧಾರಣೆಯನ್ನು ತರುವುದರಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಕ್ಕುಗಳನ್ನು ಪಡೆಯಲು ಉತ್ತಮ ಅವಕಾಶ ಒದಗಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.

ಸಂವಿಧಾನ ರಚನಾ ಸಭೆಯಲ್ಲಿ (ಸಂವಿಧಾನ ರಚನಾ ಸಭೆಯ ಚರ್ಚೆಗಳು ಸಂಪುಟ VII) ಡಾ. ಬಿ.ಆರ್.‌ ಅಂಬೇಡ್ಕರ್ ಏನಾಸಂ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ” ಈ ಸಂಹಿತೆಗೆ ಬದ್ಧರಾಗಿರಲು ಸಿದ್ಧರಿದ್ದೇವೆ ಎಂದು ಘೋಷಿಸುವವರಿಗೆ ಮಾತ್ರ ಸಂಹಿತೆಯು ಅನ್ವಯವಾಗುತ್ತದೆ ಎಂಬ ನಿಯಮದಡಿ ನಿಬಂಧನೆಯನ್ನು ಮಾಡುವ ಮೂಲಕ ಭವಿಷ್ಯದ ಸಂಸತ್ತು ಆರಂಭಿಕ ಹಂತದಲ್ಲಿ ಸ್ವಯಂಪ್ರೇರಿತವಾಗಿರುವಂತೆ ಏನಾಸಂ ಜಾರಿಗೊಳಿಸುವ ಸಾಧ್ಯತೆಗಳು ಇರಬಹುದು…”  ಎಂದು ಹೇಳಿದ್ದರು. ವಿವಾಹ, ವಿಚ್ಛೇದನ, ದತ್ತು, ಉತ್ತರಾಧಿಕಾರ ಮತ್ತು ವಾರಸುದಾರಿಕೆ ಸೇರಿದಂತೆ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ಏನಾಸಂ ಕುರಿತು ಸಂವಿಧಾನ ರಚನಾ ಸಭೆಯಲ್ಲಿನ ಭಿನ್ನಾಭಿಪ್ರಾಯಗಳ ಪರಿಣಾಮವಾಗಿ ಸಂಹಿತೆಯನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕು ಎಂದು ಪರಿಗಣಿಸದೆ ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಭಾಗವಾಗಿ ಅಂಗೀಕರಿಸಲಾಯಿತು. ಹಾಗಾಗಿ ಇದು ಜಾರಿಗೊಳಿಸಬಹುದಾದ ನಿಬಂಧನೆಯಾಗಿರಲಿಲ್ಲ. ಅನುಚ್ಛೇದ 44ರಲ್ಲಿ ವ್ಯಾಖ್ಯಾನಿಸಿದಂತೆ ಏನಾಸಂ, ಕಾರ್ಮಿಕರಿಗೆ ಜೀವನ ವೇತನವನ್ನು ಪಡೆಯುವುದು, ಪೌಷ್ಠಿಕಾಂಶದ ಮಟ್ಟ ಮತ್ತು ಜೀವನ ಮಟ್ಟವನ್ನು ಹೆಚ್ಚಿಸುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ಮುಂತಾದ ನಿರ್ದೇಶಕ ತತ್ವಗಳ ಭಾಗವಾಗಿದೆ. ಅನುಚ್ಛೇದ 37 ರ ಪ್ರಕಾರ, ಇವು ಸರ್ಕಾರದ ನೀತಿಗಳಿಗೆ ಮಾರ್ಗದರ್ಶಿ ತತ್ವಗಳಾಗಿವೆಯೇ ಹೊರತು ನ್ಯಾಯಾಲಯಗಳಿಂದ ಜಾರಿಗೊಳಿಸಲಾಗುವುದಿಲ್ಲ.

ಸಾಂವಿಧಾನಿಕ ನಿಬಂಧನೆಗಳು

ಯಾವುದೇ ಒಂದು ರಾಜ್ಯವು ತನ್ನದೇ ಆದ ಏನಾಸಂ ರೂಪಿಸಬಹುದೇ ಎಂಬ ಚರ್ಚೆಯೂ ವ್ಯಾಪಕವಾಗಿ ನಡೆದಿದೆ. ವಿವಾಹ, ವಿಚ್ಛೇದನ, ದತ್ತು ಮತ್ತು ಉತ್ತರಾಧಿಕಾರದಂತಹ ವಿಷಯಗಳು ಸಮವರ್ತಿ ಪಟ್ಟಿಯಲ್ಲಿರುವುದರಿಂದ  ಕೇಂದ್ರ ಮತ್ತು ರಾಜ್ಯಗಳು ಅವುಗಳ ಮೇಲೆ ಶಾಸನ ಮಾಡಲು ಅವಕಾಶವಿದೆ.  ಆದರೆ ಈ ಅಧಿಕಾರವನ್ನು ನಾಗರಿಕ ಸಂಹಿತೆ ಜಾರಿಗೊಳಿಸಲು ಬಳಸಬಹುದೇ ?  ಸಂವಿಧಾನ ತಜ್ಞ ಮತ್ತು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ.ಆಚಾರ್ಯ ಅವರು ಇದನ್ನು ಅನುಮೋದಿಸಿದರೆ ಮಾಜಿ ಕೇಂದ್ರ ಕಾನೂನು ಕಾರ್ಯದರ್ಶಿ ಪಿ.ಕೆ.ಮಲ್ಹೋತ್ರಾ ಅವರು ಅಂತಹ ಕಾನೂನನ್ನು ಮಾಡಲು ಸಂಸತ್ತು ಮಾತ್ರ ಸಮರ್ಥವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಸಂಬಂಧಿತ ನಿರ್ದೇಶಕ ತತ್ವವಾದ ಅನುಚ್ಚೇದ 44 ಭಾರತದಾದ್ಯಂತದ ಎಲ್ಲಾ ನಾಗರಿಕರನ್ನು ಒಳಗೊಳ್ಳುತ್ತದೆ.  ಆದಾಗ್ಯೂ ಗೋವಾದಲ್ಲಿ ಈಗಾಗಲೇ ಸಾಮಾನ್ಯ ನಾಗರಿಕ ಸಂಹಿತೆ ಇದೆ- ಇದು 1867 ರ ಪೋರ್ಚುಗೀಸ್ ನಾಗರಿಕ ಸಂಹಿತೆಯ ಅವಶೇಷವಾಗಿದೆ. ನಿಜವಾದ ಅರ್ಥದಲ್ಲಿ ಏಕರೂಪದ ಕಾನೂನು ಅಲ್ಲ, ಇದು ನಿರ್ದಿಷ್ಟ ಸಂದರ್ಭಗಳಲ್ಲಿ ಹಿಂದೂಗಳಿಗೆ ಅವಕಾಶ ನೀಡುತ್ತದೆ. ಈ ಸಂಹಿತೆಯು ಚರ್ಚ್‌ಗಳಿಗೆ ವಿವಾಹಗಳನ್ನು ಅನುಮತಿಸಲು ಮತ್ತು ರದ್ದುಗೊಳಿಸಲು ಅಧಿಕಾರ ನೀಡುವುದೇ ಅಲ್ಲದೆ ಹಲವು ರೀತಿಯಲ್ಲಿ ಸಮಸ್ಯಾತ್ಮಕವೂ ಆಗಿದೆ.

ಏತನ್ಮಧ್ಯೆ, ಏಕರೂಪ ನಾಗರಿಕ ಸಂಹಿತೆಯು ಸಂವಿಧಾನದ ಅನುಚ್ಛೇದ 25 ಮತ್ತು 26 ರ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಹಲವರು ವಾದಿಸುತ್ತಾರೆ. “ಭಾರತವು ಬಹುಧರ್ಮೀಯ ದೇಶವಾಗಿದೆ, ಮತ್ತು ಪ್ರತಿಯೊಬ್ಬ ನಾಗರಿಕನು ತಮ್ಮ ನಂಬಿಕೆ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಚರಿಸಲು ಮತ್ತು ಘೋಷಿಸಲು ಮತ್ತು ಅದರ ಮೇಲೆ ಕಾರ್ಯನಿರ್ವಹಿಸಲು ಮತ್ತು ಬೋಧಿಸಲು ಹಕ್ಕು  ನೀಡಲಾಗಿದೆ” ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರತಿಪಾದಿಸುತ್ತದೆ.  ಸ್ವಾತಂತ್ರ್ಯಾದನಂತರದ ಆರಂಭದ ದಿನಗಳಲ್ಲಿ ಕುಟುಂಬ ಕಾನೂನನ್ನು ಸುಧಾರಿಸುವ ಪ್ರಯತ್ನಗಳು ನಡೆದವು, 1950 ರ ದಶಕದಲ್ಲಿ ಹಿಂದೂ ಸಂಹಿತೆ ಮಸೂದೆಗಳು ಹಿಂದೂ ವಿವಾಹ ಕಾಯ್ದೆ, ಹಿಂದೂ ಉತ್ತರಾಧಿಕಾರ ಕಾಯ್ದೆ, ಹಿಂದೂ ಅಲ್ಪಸಂಖ್ಯಾತ ಮತ್ತು ರಕ್ಷಕತ್ವ ಕಾಯ್ದೆ ಮತ್ತು ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆಗಳಾಗಿ ಅಂಗೀಕರಿಸಲ್ಪಟ್ಟವು.

ಇದನ್ನೂ  ಓದಿ:ಸರ್ವ ಧರ್ಮೀಯರು ಸೇರಿ ನಿರ್ಮಿಸಿದ ಮಸೀದಿ ಉದ್ಘಾಟಿಸಿದ ಗವಿಮಠ ಸ್ವಾಮೀಜಿ

ಮೊಹಮ್ಮದ್ ಅಹ್ಮದ್ ಖಾನ್ Vs ಷಾ ಬಾನು ಬೇಗಂ, ಜೋರ್ಡಾನ್ ಡಿಯೆಂಗ್ಡೆ Vs ಎಸ್ಎಸ್ ಚೋಪ್ರಾ, ಸರಳಾ ಮುದ್ಗಲ್ Vs ಯೂನಿಯನ್ ಆಫ್ ಇಂಡಿಯಾ ಪ್ರಕರಣಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪವೂ ನಡೆದಿದ್ದು, ನ್ಯಾಯಾಲಯಗಳು ವೈಯಕ್ತಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಮತ್ತು ಏಕರೂಪ ನಾಗರಿಕ ಸಂಹಿತೆಯ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದವು. ಷಾ ಬಾನು ಪ್ರಕರಣದಲ್ಲಿ‌ ವಿಚ್ಛೇದಿತ ಪತ್ನಿಗೆ ಇದ್ದತ್ ಅವಧಿಯನ್ನು ಮೀರಿ ಪತಿಯಿಂದ ಜೀವನಾಂಶವನ್ನು ನೀಡಲಾಯಿತು, ನ್ಯಾಯಾಲಯವು ಸಮಾನ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸಿತು. ಇದು ವಿರೋಧಾಭಾಸ ಸಿದ್ಧಾಂತಗಳನ್ನು ಹೊಂದಿರುವ ಕಾನೂನುಗಳಿಗೆ ಪ್ರತ್ಯೇಕ ನಿಷ್ಠೆ ಹೊಂದಿರುವುದನ್ನು ತೊಡೆದುಹಾಕುವ ಮೂಲಕ ರಾಷ್ಟ್ರೀಯ ಏಕೀಕರಣದ ಉದ್ದೇಶಕ್ಕೆ ಸಹಾಯ ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.  ಶಯಾರಾ ಬಾನೋ Vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನ್ಯಾಯಾಲಯವು ತ್ರಿವಳಿ ತಲಾಖ್ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಪರಿಗಣಿಸಿತ್ತು.

ಕಾನೂನು ಆಯೋಗ ಮತ್ತು ನ್ಯಾಯಾಂಗ

ನ್ಯಾಯಾಂಗ ಮಧ್ಯಪ್ರವೇಶಗಳು ನಡೆಯುತ್ತಲೇ ಇದ್ದರೂ , ಸ್ವಾಯತ್ತ ಜಿಲ್ಲೆಗಳು ಮತ್ತು ಪ್ರದೇಶಗಳಿಗೆ ಅವಕಾಶ ನೀಡುವ ಆರನೇ ಅನುಸೂಚಿಯನ್ನು ಅಂಗೀಕರಿಸುವುದರ ಪರಿಣಾಮ ಸ್ಪಷ್ಟವಾದ ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳ ವೈವಿಧ್ಯತೆಗಳ ಬಗ್ಗೆ ಶಾಸಕಾಂಗವು ಹಲವು ವರ್ಷಗಳಿಂದ ಸೂಕ್ಷ್ಮ ನಡೆಯನ್ನು ಅನುಸರಿಸುತ್ತಿದೆ.  ಜಿಲ್ಲಾ ಪರಿಷತ್ತುಗಳು ಉತ್ತರಾಧಿಕಾರ, ವಾರಸುದಾರಿಕೆ , ವಿವಾಹ ಮತ್ತು ವಿಚ್ಛೇದನವನ್ನು ವ್ಯವಹರಿಸಲು ಶಾಸನಾತ್ಮಕ ಹಕ್ಕುಗಳನ್ನು, ಅಧಿಕಾರವನ್ನು ಹೊಂದಿರುತ್ತವೆ. ಸಂವಿಧಾನ ಅನುಚ್ಚೇದ 371ಎ ಅನ್ನು ಸಂವಿಧಾನ (13 ನೇ ತಿದ್ದುಪಡಿ) ಕಾಯ್ದೆ, 1962 ರಲ್ಲಿ ಸೇರಿಸಲಾಗಿದ್ದು, ನಾಗಾಗಳ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು, ಸಾಂಪ್ರದಾಯಿಕ ಕಾನೂನು ಮತ್ತು ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ನಾಗಾಲ್ಯಾಂಡ್ ವಿಧಾನಸಭೆ ನಿರ್ಣಯದಿಂದ ನಿರ್ಧರಿಸದ ಹೊರತು ನಾಗಾಲ್ಯಾಂಡ್ ರಾಜ್ಯಕ್ಕೆ ಸಂಸತ್ತಿನ ಯಾವುದೇ ಕಾಯ್ದೆಗಳು ಅನ್ವಯಿಸುವುದಿಲ್ಲ. ಅನುಚ್ಛೇದ 371 ಎ ನಾಗಾಲ್ಯಾಂಡ್ ಅನ್ನು ವಿಭಿನ್ನವಾಗಿ ಪರಿಗಣಿಸುವ ಬಗ್ಗೆ ಯೋಚಿಸಿದರೆ, ಅನುಚ್ಛೇದ 371 ಬಿ – 371 ಈ ಭಾಗಗಳಲ್ಲಿ ಚಾಲ್ತಿಯಲ್ಲಿರುವ ವಿಭಿನ್ನ ಸಾಮಾಜಿಕ ಪರಿಸ್ಥಿತಿಗಳಿಂದಾಗಿ ಈಶಾನ್ಯದ ಇತರ ರಾಜ್ಯಗಳಿಗೆ ಇದೇ ರೀತಿಯ ವಿನಾಯಿತಿಗಳನ್ನು ನೀಡುತ್ತದೆ.

ಈ ವಿಷಯದ ಬಗ್ಗೆ 2018ರ 21 ನೇ ಕಾನೂನು ಆಯೋಗವು ಕುಟುಂಬ ಕಾನೂನಿನ ವಿಚಾರದಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಗಮನಿಸಿ ಕಾನೂನಿನ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಸಂಕೀರ್ಣ ವಿಷಯಗಳನ್ನು ಪರಾಮರ್ಶಿಸುವುದು ಫಲಪ್ರದವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಕಾನೂನು ಆಯೋಗವು 2016 ರಲ್ಲಿ ತನ್ನ ಪ್ರಶ್ನಾವಳಿಯನ್ನು ಸಾರ್ವಜನಿಕ ವಲಯದಲ್ಲಿ ಮಂಡಿಸಿತ್ತು. ಈ ಸಂದರ್ಭದಲ್ಲಿ  ವೈಯುಕ್ತಿಕ ಕಾನೂನುಗಳಲ್ಲಿ ಸುಧಾರಣೆಗಳನ್ನು ಕಾರ್ಯಗತಗೊಳಿಸುವ ವಿವಿಧ ಮಾರ್ಗಗಳನ್ನು ಸೂಚಿಸುವ 75 ಸಾವಿರಕ್ಕೂ  ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದಿತ್ತು.  ಆಯೋಗವು ತನ್ನ 185 ಪುಟಗಳ ಸುದೀರ್ಘ ಸಮಾಲೋಚನಾ ಪತ್ರದಲ್ಲಿ, ಸಂಸ್ಕೃತಿಯ ವೈವಿಧ್ಯತೆಯನ್ನು ಆಚರಿಸುತ್ತಲೇ ಏಕಕಾಲದಲ್ಲಿ ದುರ್ಬಲ ವರ್ಗಗಳಾದ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ಖಾತರಿಗೊಳಿಸಿ  ಸಮತೋಲನವನ್ನು ಕಾಪಾಡಿಕೊಳ್ಳುವ  ನಿಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆಯು ಅಪೇಕ್ಷಣೀಯ ಎನಿಸುವುದಿಲ್ಲ ಎಂದು ಹೇಳಿತ್ತು.  ಏಕರೂಪ ನಾಗರಿಕ ಸಂಹಿತೆಗಿಂತಲೂ ಆಯೋಗವು ವಿವಿಧ ಧರ್ಮಗಳ ಕುಟುಂಬ ಕಾನೂನುಗಳಲ್ಲಿ ಸುಧಾರಣೆಗಳಿಗೆ ಉತ್ತೇಜನ ನೀಡಲು ಸೂಚಿಸಿದ್ದು ಸಂಹಿತೆಯು ಅಪೇಕ್ಷಣೀಯವೂ ಅಲ್ಲ ಅಥವಾ  ಅದರ ಅಗತ್ಯವೂ ಅಲ್ಲ ಎಂದು ಅದು ಹೇಳಿತ್ತು.

” ಕಾನೂನು ಆಯೋಗವು ಈ ಹಂತದಲ್ಲಿ ಅಗತ್ಯವಿಲ್ಲದ ಅಥವಾ ಅಪೇಕ್ಷಣೀಯವಲ್ಲದ ಏಕರೂಪ ನಾಗರಿಕ ಸಂಹಿತೆಯನ್ನು  ಒದಗಿಸುವ ಬದಲು ತಾರತಮ್ಯದ ಕಾನೂನುಗಳೊಂದಿಗೆ ವ್ಯವಹರಿಸಲು ಇಚ್ಚಿಸುತ್ತದೆ,  ಬಹುಪಾಲು ದೇಶಗಳು ಈಗ ಭಿನ್ನತೆಯನ್ನು ಗುರುತಿಸುವತ್ತ ಸಾಗುತ್ತಿದ್ದು ವೈವಿಧ್ಯತೆಗಳು ಮತ್ತು ವ್ಯತ್ಯಾಸಗಳು ಇರುವುದು ತಾರತಮ್ಯವನ್ನು ಸೂಚಿಸುವುದಕ್ಕಿಂತಲೂ ಹೆಚ್ಚಾಗಿ ದೃಢವಾದ ಪ್ರಜಾಪ್ರಭುತ್ವದ ಸೂಚಕವಾಗಿರುತ್ತದೆ, ಹಾಗೆಯೇ ಏಕರೂಪತೆಗಾಗಿ ನಮ್ಮ ಹಂಬಲವು ದೇಶದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು 2018ರ ಕಾನೂನು ಆಯೋಗದ ಸಮಗ್ರ ವರದಿಯಲ್ಲಿ ಹೇಳಲಾಗಿದೆ.

ಆದಾಗ್ಯೂ, ಈ ವಿಷಯವನ್ನು ಮತ್ತೆ 22 ನೇ ಕಾನೂನು ಆಯೋಗದ ಮುಂದೆ ಪ್ರಸ್ತಾಪಿಸಲಾಗಿದೆ. ಆಯೋಗವು ಜೂನ್ 14 ರಂದು ತನ್ನ ಆದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಕುರಿತು ಧಾರ್ಮಿಕ ಸಂಸ್ಥೆಗಳು ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಕೋರಿದೆ. ಈ ಆದೇಶದ ಹಿನ್ನೆಲೆಯಲ್ಲೇ  ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆಗಾಗಿ  ಒತ್ತಾಯಿಸಿದ್ದಾರೆ.  “ಇಂದು ನಾಗರಿಕ ಸಂಹಿತೆಯ ಹೆಸರಿನಲ್ಲಿ ಜನರನ್ನು ಪ್ರಚೋದಿಸುವ ಪ್ರಯತ್ನಗಳು ಹೇಗೆ ನಡೆಯುತ್ತಿವೆ ಎಂಬುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಒಂದು ಮನೆಯಲ್ಲಿ, ಕುಟುಂಬದ ಒಬ್ಬ ಸದಸ್ಯನಿಗೆ ಒಂದು ಕಾನೂನು ಮತ್ತು ಇನ್ನೊಬ್ಬ ಸದಸ್ಯರಿಗೆ ಮತ್ತೊಂದು ಕಾನೂನು ಇದ್ದರೆ, ಆ ಮನೆ ಕಾರ್ಯನಿರ್ವಹಿಸಬಹುದೇ?… ಇಂತಹ ದ್ವಂದ್ವ ವ್ಯವಸ್ಥೆಯೊಂದಿಗೆ ದೇಶವು ಹೇಗೆ ಕಾರ್ಯನಿರ್ವಹಿಸಲು ಸಾಧ್ಯ? ” ಎಂದು ಕೇಳುವ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದರ ಬಗ್ಗೆ ಒಲವು ತೋರಿದ್ದಾರೆ.

ಸಾಮಾಜಿಕ-ಸಾಂಸ್ಕೃತಿಕ ವಾಸ್ತವಗಳು

ವಾಸ್ತವವೆಂದರೆ ಭಾರತವು ಬುಡಕಟ್ಟು ಪ್ರದೇಶಗಳು ಮತ್ತು ವಿವಿಧ ಸಮುದಾಯಗಳಲ್ಲಿ ವ್ಯಾಪಕವಾಗಿರುವ ದ್ವಂದ್ವ ವ್ಯವಸ್ಥೆಗಿಂತಲೂ ಹೆಚ್ಚಾಗಿ  ಹಲವು ಕುಟುಂಬ ಕಾನೂನುಗಳ ವ್ಯವಸ್ಥೆಗಳೊಂದಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಿದೆ. ಏಕರೂಪತೆಯನ್ನು ಒತ್ತಾಯಿಸುವುದರಿಂದ ಉಂಟಾಗಬಹುದಾದ ಅಪಾಯಗಳು ಮತ್ತು ವೈಯಕ್ತಿಕ ಕಾನೂನುಗಳ ವಿಷಯದಲ್ಲಿ ಸ್ವಯಂಪ್ರೇರಿತ ಸುಧಾರಣೆಗಳ ಅಗತ್ಯವನ್ನು ಕಾನೂನು ಆಯೋಗವು ಈಗಾಗಲೇ  ಗಮನಸೆಳೆದಿದೆ. ಏಕರೂಪ ನಾಗರಿಕ ಸಂಹಿತೆಯ ಮತ್ತೊಂದು ಸಮಸ್ಯೆಯೆಂದರೆ ಅದರ ಮೇಲೆ ಒಂದೇ ಒಂದು ಕರಡು ಈವರೆಗೂ ಸಿದ್ಧವಾಗಿಲ್ಲ.  ಇದು ಯಾವ ರೂಪವನ್ನು ತೆಗೆದುಕೊಳ್ಳುತ್ತದೆ, ಅದು ಯಾವ ನಿಬಂಧನೆಗಳನ್ನು ಒಳಗೊಳ್ಳುತ್ತದೆ ಮತ್ತು ಇದು ವಿವಿಧ ಸಮುದಾಯಗಳ ಅಸ್ತಿತ್ವದಲ್ಲಿರುವ ಕಾನೂನುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟಪಡಿಸುವಂತಹ ಸಮಗ್ರ ಕರಡು ಲಭ್ಯವಿಲ್ಲ. ಹಾಗಾಗಿ ಬಹುಸಂಖ್ಯಾತರ ಹಿಂದೂ ಕಾನೂನುಗಳ ಪರವಾಗಿ ಅಲ್ಪಸಂಖ್ಯಾತ ಸಮುದಾಯಗಳ ವೈಯಕ್ತಿಕ ಕಾನೂನುಗಳನ್ನು ಸಂಹಿತೆಯು ರದ್ದುಗೊಳಿಸುತ್ತದೆ ಎಂಬ ಶಂಕೆ ಗಾಢವಾಗಿದೆ .

ಮತ್ತೊಂದು ದೃಷ್ಟಿಯಿಂದ ನೋಡಿದಾಗ ಏಕರೂಪ ನಾಗರಿಕ ಸಂಹಿತೆಯು ಹಿಂದೂ ಕಾನೂನುಗಳ ಮೇಲೂ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 2 (2) ಅದರ ನಿಬಂಧನೆಗಳು ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳುತ್ತದೆ. ಇದೇ ಕಾಯ್ದೆಯ ಸೆಕ್ಷನ್ 5 (5) ಮತ್ತು 7  ಸಾಂಪ್ರದಾಯಿಕ ಆಚರಣೆಗಳು  ಹಿಂದೂ ವಿವಾಹ ಕಾಯ್ದೆಯ ನಿಬಂಧನೆಗಳನ್ನು ಮೀರುತ್ತವೆ ಎಂದು ಹೇಳುತ್ತದೆ. ಏನಾಸಂ ಅಂತಹ ವಿನಾಯಿತಿಗಳಿಗೆ ಅವಕಾಶ ನೀಡುವುದಿಲ್ಲ. ಹಲವಾರು ಕ್ರಿಮಿನಲ್ ಕಾನೂನುಗಳೊಂದಿಗೆ ವೈಯಕ್ತಿಕ ಕಾನೂನುಗಳು ಜೊತೆಗಿರುವುದರಿಂದಲೂ ಗೊಂದಲ ಹೆಚ್ಚಾಗುತ್ತದೆ. ಉದಾಹರಣೆಗೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 125 ಸಹ ಹೆಂಡತಿ, ಮಕ್ಕಳು ಮತ್ತು ಪೋಷಕರಿಗೆ ಜೀವನಾಂಶವನ್ನು ಒದಗಿಸುತ್ತದೆ. ವರದಕ್ಷಿಣೆ ಮತ್ತು ಕೌಟುಂಬಿಕ ಹಿಂಸಾಚಾರದ ವಿರುದ್ಧ ರಕ್ಷಣೆಗಾಗಿ ದಂಡನಾತ್ಮಕ ಕಾನೂನುಗಳು ವೈಯಕ್ತಿಕ ಕಾನೂನುಗಳ ವ್ಯಾಪ್ತಿಯನ್ನು ಅತಿಕ್ರಮಿಸುತ್ತವೆ. ಮುಸ್ಲಿಮರು ಸೇರಿದಂತೆ ಜನಸಂಖ್ಯೆಯ ದೊಡ್ಡ ಭಾಗವು ಈಗಾಗಲೇ ನಾಗರಿಕ ವಿವಾದಗಳನ್ನು ಪರಿಹರಿಸಲು ಕಾನೂನಿನ ವಿವಿಧ ವಿಭಾಗಗಳನ್ನು ಆಶ್ರಯಿಸಿದೆ. ಧಾರ್ಮಿಕ ವೈಯುಕ್ತಿಕ ಕಾನೂನುಗಳ ಮೇಲಿನ ಅವಲಂಬನೆ ಕ್ರಮೇಣ ಕ್ಷೀಣಿಸುತ್ತಿದೆ. ಏನಾಸಂ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಗಂಭೀರ  ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ  ಏನಾಸಂ ಭಾರತದಲ್ಲಿನ ವಿವಿಧ ವೈಯುಕ್ತಿಕ ಕಾನೂನುಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದೂ ಯೋಚಿಸಬೇಕಿದೆ.

ವಿವಾಹಗಳ  ಮೇಲೆ ಏನಾಸಂ ಪರಿಣಾಮ

ಒಂದು ಸಾಮಾನ್ಯ ಕಾನೂನು ಸಂಹಿತೆಯ ಮುಖಾಂತರ  ವಿವಾಹಕ್ಕೆ ಕನಿಷ್ಠ ಕಾನೂನುಬದ್ಧ ವಯಸ್ಸನ್ನು ನಿಗದಿಪಡಿಸಬಹುದು, ದ್ವಿಪತ್ನಿತ್ವ ಮತ್ತು ಬಹುಪತ್ನಿತ್ವವನ್ನು ರದ್ದುಗೊಳಿಸಬಹುದು ಮತ್ತು ಅಂತರ್ಧರ್ಮೀಯ ವಿವಾಹಗಳನ್ನು ಪ್ರೋತ್ಸಾಹಿಸಬಹುದು.  ಹಿಂದೂ,  ಬೌದ್ಧ, ಹಾಗೂ ಜೈನ ಧರ್ಮಗಳಲ್ಲಿ ವಿವಾಹಗಳನ್ನು ಹಿಂದೂ ವಿವಾಹ ಕಾಯ್ದೆ (ಎಚ್ಎಂಎ), 1955 ರ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಮುಸ್ಲಿಮರ ವಿವಾಹ ಕಾಯ್ದೆಗಳಲ್ಲಿ ಪ್ರಮುಖವಾಗಿ ಮುಸ್ಲಿಂ ವೈಯಕ್ತಿಕ (ಶರಿಯತ್) ಅನ್ವಯಿಸುವ ಕಾಯ್ದೆ, 1937 ಜಾರಿಯಲ್ಲಿದ್ದು ಇದರನ್ವಯ ಶರಿಯತ್ ಅಥವಾ ಇಸ್ಲಾಮಿಕ್ ಕಾನೂನುಗಳು ವಿವಾಹ, ವಿಚ್ಛೇದನ ಮತ್ತು ಜೀವನಾಂಶಕ್ಕೆ ಮಾರ್ಗದರ್ಶನ ನೀಡುತ್ತದೆ. ಕ್ರೈಸ್ತ ಧರ್ಮದವರ ವಿವಾಹಗಳನ್ನು ಭಾರತೀಯ ಕ್ರೈಸ್ತ ವಿವಾಹ ಕಾಯ್ದೆ 1872 ನಿಯಂತ್ರಿಸುತ್ತದೆ.  ಸಿಖ್‌ ಧರ್ಮದಲ್ಲಿ ಎಲ್ಲ ರೀತಿಯ ವಿವಾಹಗಳನ್ನೂ ಆನಂದ್‌ ಕರಜ್‌ ಎಂದು ಗುರುತಿಸಲ್ಪಡುವ ಸಿಖ್‌ ವಿವಾಹ ಪದ್ಧತಿಯ ಪ್ರಕಾರ ನಡೆಸಲಾಗುತ್ತದೆ. ಈ ವಿವಾಹಗಳು ಆನಂದ್‌ ವಿವಾಹ (ತಿದ್ದುಪಡಿ) ಕಾಯ್ದೆ 2012ರಿಂದ ನಿಯಂತ್ರಿಸಲ್ಪಡುತ್ತದೆ.  ಪಾರ್ಸಿಗಳಲ್ಲಿ ವಿವಾಹಗಳನ್ನು ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯ್ದೆ, 1936 ನಿಯಂತ್ರಿಸುತ್ತದೆ.

 

ಏನಾಸಂ ಜಾರಿಗೊಳಿಸುವ ಮೂಲಕ ವಿವಿಧ ಧರ್ಮಗಳಲ್ಲಿ ಅನುಸರಿಸಲಾಗುತ್ತಿರುವ ವಿವಾಹ ಕಾಯ್ದೆಯ ಕೆಲವು ನಿಬಂಧನೆಗಳನ್ನು ರದ್ದುಪಡಿಸಲು ಸಾಧ್ಯವಾಗಬಹುದು. ಇವುಗಳಲ್ಲಿ ಪ್ರಮುಖವಾಗಿ :

  • ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 2(2) ಪರಿಶಿಷ್ಟ ಪಂಗಡಗಳನ್ನು ಕಾನೂನಿನ ವ್ಯಾಪ್ತಿಯಿಂದ ಹೊರಗಿಡುವ ನಿಬಂಧನೆಗಳು.
  • ಇದೇ ಕಾಯ್ದೆಯ ಸೆಕ್ಷನ್‌ 5(5)7 ಅನ್ವಯ ಕೆಲವು ಸಾಂಪ್ರದಾಯಿಕ ಆಚರಣೆಗಳು ಕಾನೂನು ನಿಬಂಧನೆಗಳನ್ನು ಮೀರಲು ಅವಕಾಶ ನೀಡುವ ನಿಯಮಗಳು.
  • ಮುಸ್ಲಿಂ ಕಾಯ್ದೆಯಲ್ಲಿರುವ ಕನಿಷ್ಠ 15 ವರ್ಷ ಅಥವಾ ಪ್ರೌಢಾವಸ್ಥೆಯ ವಿವಾಹ ಯೋಗ್ಯ ವಯಸ್ಸಿನ ಮಿತಿ.
  • ಬಹುಪತ್ನಿಯನ್ನು ಹೊಂದಿರುವ ಮುಸ್ಲಿಂ ಪುರುಷ ಎಲ್ಲ ಪತ್ನಿಯರನ್ನೂ ಸಮಾನವಾಗಿ ಕಾಣುವುದಾದರೆ ನಾಲ್ವರು ಪತ್ನಿಯರನ್ನು ಹೊಂದಲು ಇರುವ ಹಕ್ಕು.
  • ಮುಸ್ಲಿಂ ಪುರುಷ ಮುಸ್ಲಿಮೇತರ ಮಹಿಳೆಯನ್ನು ವಿವಾಹವಾಗುವುದು ನಿಯಮಬಾಹಿರ ಪರಿಗಣಿಸಿದರೂ ವಿವಾಹಿತ ಮಹಿಳೆ ಇಸ್ಲಾಂಗೆ ಮತಾಂತರ ಹೊಂದಿದರೆ ವಿವಾಹವನ್ನು ಊರ್ಜಿತಗೊಳಿಸಬಹುದಾದ ನಿಯಮ.
  • ಕ್ರೈಸ್ತ ಸಮುದಾಯದ ವ್ಯಕ್ತಿ ಅನ್ಯ ಜಾತಿಯ ಅಥವಾ ಅನ್ಯ ಧರ್ಮದ ವ್ಯಕ್ತಿಯೊಡನೆ ವಿವಾಹವಾದರೆ, ಆ ವ್ಯಕ್ತಿಯನ್ನು ನಿಯಂತ್ರಿಸುವ ವೈಯುಕ್ತಿಕ ಕಾನೂನು ಕ್ರೈಸ್ತರೊಂದಿಗಿನ ವಿವಾಹವನ್ನು ನಿಷೇಧಿಸಿದ್ದರೆ ಅಂತಹ ವಿವಾಹಗಳು ನಿಷೇಧ ಎಂದು ಪರಿಗಣಿಸುವ ನಿಬಂಧನೆ.
  • ಸಿಖ್‌ ಧರ್ಮದ ಆನಂದ್‌ ವಿವಾಹ (ತಿದ್ದುಪಡಿ) ಕಾಯ್ದೆ 2012ರ ಅಡಿ ನೋಂದಣಿಯಾದ ವಿವಾಹಗಳನ್ನು ಅನ್ಯ ರೀತಿಯಲ್ಲಿ ನೋಂದಾಯಿಸಲು ಸಾಧ್ಯವಿಲ್ಲ ಎನ್ನುವ ನಿಬಂಧನೆ.
  • ಅನ್ಯ ಧಾರ್ಮಿಕ ನಂಬಿಕೆಯನ್ನು ಆಚರಿಸುವ ವ್ಯಕ್ತಿಯೊಡನೆ ವಿವಾಹವಾದರೆ ಪಾರ್ಸಿ ಮಹಿಳೆಯು ತಮ್ಮ ಧಾರ್ಮಿಕ ಆಚರಣೆಗಳು ಮತ್ತು ಪದ್ಧತಿಗಳ ಎಲ್ಲ ಹಕ್ಕುಗಳನ್ನೂ ಕಳೆದುಕೊಳ್ಳುವ ನಿಬಂಧನೆ.

ಭಾರತದಂತಹ ವೈವಿಧ್ಯಮಯ ಸಂಸ್ಕೃತಿ ಇರುವ ದೇಶದಲ್ಲಿ ಹಿಂದೂ ಧರ್ಮದ ಒಳಗೇ ಪ್ರತಿಯೊಂದು ಜಾತಿಯಲ್ಲೂ ಸಹ ನಾನಾ ರೀತಿಯ ವಿವಾಹ ಪದ್ಧತಿಗಳು, ಆಸ್ತಿ ಹಂಚಿಕೆಯ ನಿಯಮಗಳು, ಉತ್ತರಾಧಿಕಾರದ ಕಾಯ್ದೆಗಳು, ವಾರಸುದಾರಿಕೆಯ ನಿಬಂಧನೆಗಳು ಜಾರಿಯಲ್ಲಿವೆ. ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಪದ್ಧತಿ ಮತ್ತು ಆಚರಣೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿಯೇ ಕಾಣುತ್ತದೆ.  ಬಹುತೇಕ ಸಾಂಪ್ರದಾಯಿಕ ಕುಟುಂಬ ಕಾಯ್ದೆಗಳು ಹಾಗೂ ನಿಯಮಗಳು ಪಿತೃಪ್ರಧಾನತೆಯಿಂದಲೇ ಪ್ರಭಾವಿತವಾಗಿರುವುದೂ ಸಹ ವಾಸ್ತವ ಸಂಗತಿಯಾಗಿದೆ. ಹಾಗಾಗಿ ಎಲ್ಲ ಧರ್ಮಗಳ, ಜಾತಿಗಳ, ಬುಡಕಟ್ಟುಗಳ ಸಾಂಸ್ಕೃತಿಕ ಆಚರಣೆಗಳಲ್ಲೂ ಮಹಿಳೆ ನಿರ್ಲಕ್ಷಿತಳಾಗಿಯೇ ಕಾಣುತ್ತಾಳೆ. ಆದರೆ ಮಹಿಳಾ ಸಬಲೀಕರಣದ ಹೆಸರಿನಲ್ಲಿ ಈ ಸಾಂಪ್ರದಾಯಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಪ್ರಕ್ರಿಯೆ ಡಾ. ಅಂಬೇಡ್ಕರ್‌ ಹೇಳಿದಂತೆ ಸ್ವಪ್ರೇರಣೆಯ ಆಂತರಿಕ ಪ್ರಯತ್ನಗಳೇ ಆಗಿರಬೇಕು. ಶಾಸನಾತ್ಮಕವಾಗಿ ಹೇರಲ್ಪಡುವ ಯಾವುದೇ ಕಾಯ್ದೆಗಳು ಬಹುಸಾಂಸ್ಕೃತಿಕ ನೆಲೆಗಳನ್ನು ಪ್ರಕ್ಷುಬ್ಧಗೊಳಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಏನಾಸಂ ಕೇವಲ ಒಂದು ರಾಜಕೀಯ ಕಾರ್ಯಸೂಚಿಯಾಗದೆ ಲಿಂಗ ತಾರತಮ್ಯಗಳನ್ನು ಹೋಗಲಾಡಿಸುವ, ಸಾಂವಿಧಾನಿಕ ಧಾರ್ಮಿಕ ಹಕ್ಕುಗಳನ್ನು ಸಂರಕ್ಷಿಸುವ, ಬಹುಸಾಂಸ್ಕೃತಿಕ ಸಂಪ್ರದಾಯಗಳನ್ನು ಕಾಪಾಡುವ, ಸಮಸ್ತ ಜನತೆಯನ್ನೂ ಒಳಗೊಳ್ಳುವ ಪ್ರಜಾಸತ್ತಾತ್ಮಕ ಧೋರಣೆ ಇರುವ ಒಂದು ಸಾಮಾಜಿಕ ಪ್ರಯತ್ನವಾಗಿ ಜನಸಾಮಾನ್ಯರ ಮನ್ನಣೆ ಪಡೆಯಬೇಕಿದೆ. ಈಗಾಗಲೇ ದೇಶದ ವಿವಿಧ ಮೂಲೆಗಳಿಂದ ಏನಾಸಂ ವಿರುದ್ಧ ಕೇಳಿಬರುತ್ತಿರುವ ಧ್ವನಿಗಳಲ್ಲಿ ಈ ಸೂಕ್ಷ್ಮವನ್ನು ಗಮನಿಸಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಈ ಸೂಕ್ಷ್ಮ ಧ್ವನಿಗಳಿಗೆ ಕಿವಿಯಾಗಬೇಕಿದೆ.

( ಈ ಲೇಖನಕ್ಕೆ ಮೂಲ ಆಧಾರ : ಪೂರ್ಣಿಮಾ ಜೋಷಿ ಅವರ The case against UCC – Hindu  Business line 29 th June 2023 ಹಾಗೂ ಕೌಶಿಕ್‌ ದೇಕಾ ಅವರ How  a UCC could impact marriages – India Today 28th June 2023 –ಲೇಖನಗಳು.)

Donate Janashakthi Media

Leave a Reply

Your email address will not be published. Required fields are marked *