ಮೂಲ : ಹಸೀನಾ ಖಾನ್
ಅನುವಾದ : ನಾ ದಿವಾಕರ
ಕಳೆದ ನಾಲ್ಕು ದಶಕಗಳಲ್ಲಿ ನಮ್ಮ ಪ್ರಸ್ತುತ ಕಾನೂನುಗಳಲ್ಲಿ ಪ್ರತಿಪಾದಿಸಲಾದ ಪಿತೃಪ್ರಧಾನ ಕುಟುಂಬ ರಚನೆಗಳ ಪರಿಣಾಮವಾಗಿ ಅಂಚಿಗೆ ತಳ್ಳಲ್ಪಟ್ಟಿರುವ ಮಹಿಳೆಯರಿಗೆ ಮತ್ತು ಇತರರಿಗೆ ಎಂದಿಗೂ ಸೂಕ್ತವಾದ ಪ್ರಾಶಸ್ತ್ಯ ದೊರೆತಿಲ್ಲ ಎನ್ನುವುದನ್ನು ನಾವು ಅರಿತಿದ್ದೇವೆ. ಎಂದಿಗೂ ಯಾವುದೇ ಸರ್ಕಾರಕ್ಕೂ ಸಹ ನಾವು ಮೊದಲ ಆದ್ಯತೆಯಾಗಿರಲಿಲ್ಲ ಎಂದು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತಿಕೆ ನಮಗಿದೆ. ಹಾಗೆಯೇ ನಮಗೆ ಸಹಾಯ ಮಾಡುವುದಾಗಿ ಹೇಳಿಕೊಳ್ಳುವ ಧಾರ್ಮಿಕ ಮೂಲಭೂತವಾದಿಗಳು ಮತ್ತು ಸಂಪ್ರದಾಯವಾದಿಗಳು ನಮಗಾಗಿ ಎಂದಿಗೂ ಸಹ ಸಮಯವನ್ನು ಹೊಂದಿಸಿಕೊಂಡಿಲ್ಲ ಎನ್ನುವ ಪರಿವೆಯೂ ನಮಗಿದೆ.
ಮುಸ್ಲಿಂ ಮಹಿಳೆಯರು ಧಾರ್ಮಿಕ ಗುಂಪುಗಳು ಮತ್ತು ಸಂಪ್ರದಾಯವಾದಿಗಳ ಅಣತಿಯಂತೆ ಇರಲು ಬಯಸುವುದಿಲ್ಲ.
ಇತ್ತೀಚೆಗೆ ಆಶ್ಚರ್ಯಕರವಾಗಿ ಏಕರೂಪ ನಾಗರಿಕ ಸಂಹಿತೆಯು (ಏನಾಸಂ) ಸಾರ್ವಜನಿಕ ಚರ್ಚೆ-ಸಂವಾದಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಏನಾಸಂ ದಶಕಗಳಿಂದ ಭಾರತೀಯ ಜನತಾ ಪಕ್ಷದ ಕಾರ್ಯಸೂಚಿಯಲ್ಲಿ ಪ್ರಧಾನ ಅಂಶವಾಗಿದ್ದು ಮತ್ತೊಂದೆಡೆ ದಶಕಗಳಿಂದ ಮುಸ್ಲಿಂ ಸಮುದಾಯಗಳ ಮಹಿಳೆಯರೊಂದಿಗೆ ಕೆಲಸ ಮಾಡುತ್ತಿರುವ ನಮ್ಮೆಲ್ಲರ ಗುಂಪುಗಳನ್ನು ನಿರಂತರ ಸಂದಿಗ್ಧತೆಗೆ ಸಿಲುಕಿಸಿದೆ. ಏನಾಸಂ ಎಂದರೇನು ಎಂದು ನಮಗೆ ಸ್ಪಷ್ಟ ಅರಿವು ಇಲ್ಲದಿರುವ ಸಂದರ್ಭದಲ್ಲಿ ನಾವು ಸಂಹಿತೆಯನ್ನು ಬೆಂಬಲಿಸುತ್ತೇವೆಯೋ ಇಲ್ಲವೋ ಎಂಬ ಪ್ರಶ್ನೆಗೆ ʼ ಬೇಕು ಅಥವಾ ಬೇಡ ʼ ಎಂದು ಉತ್ತರಿಸಲು ಆಗ್ರಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂದಿಗ್ಧ ಪ್ರಶ್ನೆಗಳಿಗೆ ಉತ್ತರ ಶೋಧಿಸುತ್ತಲೇ ಕುಟುಂಬಗಳು ಮತ್ತು ಅನ್ಯೋನ್ಯತೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ನಮ್ಮ ನಿಲುವನ್ನು ಪ್ರಸ್ತಾಪಿಸುವುದು ಸೂಕ್ತ ಎನಿಸುತ್ತದೆ.
ಕುಟುಂಬಕ್ಕೆ ಸಂಬಂಧಿಸಿದ ಲಿಂಗ ನ್ಯಾಯ ಕಾನೂನುಗಳಿಗಾಗಿ ನಾವು ದೀರ್ಘಕಾಲದಿಂದ ಹೋರಾಡಿದ್ದೇವೆ ಮತ್ತು ನಿರಂತರವಾಗಿ ಒತ್ತಾಯಿಸುತ್ತಿದ್ದೇವೆ. ಕುಟುಂಬಗಳು ನಾನಾ ರೀತಿಯದ್ದಾಗಿವೆ ಮತ್ತು ಅವೆಲ್ಲವನ್ನೂ ಕಾನೂನಿನ ವ್ಯಾಪ್ತಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ. ಕುಟುಂಬದ ಪಿತೃಪ್ರಧಾನ, ಪಿತೃವಂಶಕ್ರಮದ ಪರಿಕಲ್ಪನೆಯನ್ನು ಆಧರಿಸಿದ ಒಂದು ಕಾನೂನು ಎಲ್ಲರಿಗೂ ಅನ್ವಯಿಸುವುದಿಲ್ಲ. ಬದುಕಿನ ವಾಸ್ತವತೆಯ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದು ಅವಶ್ಯವಾಗುತ್ತದೆ. ಆದ್ದರಿಂದ ಏಕರೂಪತೆಯು ನ್ಯಾಯದ ಮಾನದಂಡವಾಗುವುದಿಲ್ಲ. ನಮ್ಮ ವರ್ತಮಾನದ ವಾಸ್ತವಗಳನ್ನು ಪ್ರತಿಬಿಂಬಿಸುವ ಮತ್ತು ಸಾಂವಿಧಾನಿಕ ಚೌಕಟ್ಟಿನೊಳಗೆ ಎಲ್ಲಾ ನಾಗರಿಕರ ಹಕ್ಕುಗಳು ಮತ್ತು ನ್ಯಾಯವನ್ನು ಒದಗಿಸುವ ಕಾನೂನುಗಳ ಜಾರಿಗಾಗಿ ಆಗ್ರಹಿಸುವುದು ನಮ್ಮ ಇಂದಿನ ನಿಲುವು ಆಗಬೇಕಿದೆ.
ಈಗ ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ಸಂದಿಗ್ಧತೆಯನ್ನು ಗಮನಿಸೋಣ. ಏನಾಸಂ ಬೇಕು ಎಂದರೆ ಈ ದೇಶದ ಜಾತ್ಯತೀತ ರಚನೆಯನ್ನು ನಿರಂತರವಾಗಿ ನಾಶಪಡಿಸುತ್ತಿರುವ ಮತ್ತು ಲಿಂಗತ್ಚ ನ್ಯಾಯ ಮತ್ತು ಎಲ್ಲಾ ಕುಟುಂಬ ಕಾನೂನುಗಳನ್ನು ಸುಧಾರಿಸುವಲ್ಲಿ ಕೆಟ್ಟ ದಾಖಲೆಯನ್ನು ಹೊಂದಿರುವ ಆಡಳಿತ ಪಕ್ಷವನ್ನು ನಂಬುವುದು ಎಂದರ್ಥ. ಆದರೆ ಏನಾಸಂ ಬೇಡ ಎಂದರೆ ಎಲ್ಲಾ ರೀತಿಯ ಧಾರ್ಮಿಕ ಸಮುದಾಯಗಳ ಮುಖ್ಯಸ್ಥರ ಅಭಿಪ್ರಾಯಗಳಿಗೆ, ವಿಶೇಷವಾಗಿ ಮುಸ್ಲಿಂ ಮಹಿಳೆಯರಿಗೆ ಅನ್ವಯಿಸುವಂತೆ, ಸಮ್ಮತಿಸುವುದು ಎಂದರ್ಥ. ಅಂದರೆ ವೈಯುಕ್ತಿಕ ಕಾನೂನುಗಳಲ್ಲಿ ಯಾವುದೇ ಸುಧಾರಣೆಯನ್ನು ತರಲು ಎಂದಿಗೂ ಬಯಸದ ಮುಸ್ಲಿಂ ಸಮುದಾಯದ ನಾಯಕರೊಂದಿಗೆ ಒಪ್ಪಿದಂತೆಯೇ ಆಗುತ್ತದೆ.
ಇವೆರಡೂ ಸಹ ನಮ್ಮ ಮುಂದಿನ ಆಯ್ಕೆಗಳಾಗಿ ಕಾಣುವುದಿಲ್ಲ ಎಂಬ ವಾಸ್ತವವನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದಕ್ಕೆ ಕಾರಣಗಳನ್ನು ಹೀಗೆ ವಿಶ್ಲೇಷಿಸಬಹುದು.
ಆಡಳಿತ ಪಕ್ಷ ಮತ್ತು ಅದು ಪ್ರಭುತ್ವದ ನಿಯಂತ್ರಣ
ವಿಶೇಷವಾಗಿ ಕಳೆದ ಒಂಬತ್ತು ವರ್ಷಗಳಲ್ಲಿ ಬಿಜೆಪಿ ಮತ್ತು ಅದರ ಸರ್ಕಾರಗಳ ಕಾರ್ಯವೈಖರಿಯನ್ನು, ಕಾರ್ಯಶೈಲಿಯನ್ನು ನಾವು ಗಮನಿಸುತ್ತಲೇ ಬಂದಿದ್ದೇವೆ. ಧ್ವಂಸ ಮಾಡಲಾದ ಬಾಬರಿ ಮಸೀದಿಯಿಂದ ಇಟ್ಟಿಗೆಗಳನ್ನು ಸಂಗ್ರಹಿಸಿ ಅದರ ಜಾಗದಲ್ಲಿ ದೇವಾಲಯವನ್ನು ನಿರ್ಮಿಸಲು ದಶಕಗಳಿಂದ ಹಣವನ್ನು ಸಂಗ್ರಹಿಸಿದ ಸರ್ಕಾರದಿಂದ ಮುಸ್ಲಿಂ ಮಹಿಳೆಯರು ನ್ಯಾಯವನ್ನು ನಿರೀಕ್ಷಿಸಬಹುದೇ ? ದ್ವೇಷ ಭಾಷಣವನ್ನು ಪ್ರೋತ್ಸಾಹಿಸಿದ ಮತ್ತು ಸರ್ಕಾರೇತರ ಕಾರ್ಯಪಡೆಗಳು ನಮ್ಮ ಮನೆಗಳನ್ನು, ಸಮುದಾಯಗಳನ್ನು ಹಾಗೂ ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದಾಗ ಕಣ್ಣುಮುಚ್ಚಿ ಕುಳಿತಿರುವ ಸರ್ಕಾರವನ್ನು ನಾವು ನಂಬಬಹುದೇ ? ನಮ್ಮ ಹೆಸರಿನಲ್ಲಿ ಮಾಡಿದ ಎಲ್ಲಾ ರೀತಿಯ ಧ್ರುವೀಕರಣದ ನಂತರವೂ ಮುಸ್ಲಿಂ ಮಹಿಳೆಯರು ಏನು ಗಳಿಸಿದ್ದಾರೆ ? ಅವರ ಬಳಿ ಹಣಕಾಸು ಸೌಲಭ್ಯವಿಲ್ಲ , ಶಿಕ್ಷಣ ಇಲ್ಲ ಮತ್ತು ಸಾಮಾಜಿಕ ಭದ್ರತೆಯೂ ಇಲ್ಲ. ನಾವು ಪ್ರಧಾನಿಯಿಂದ ನಮ್ಮ ಹೆಸರಿನಲ್ಲಿ ಭಾಷಣಗಳನ್ನು ಮಾತ್ರ ಕೇಳಿ ಕೃತಾರ್ಥರಾಗಿದ್ದೇವೆ !
ಇದನ್ನೂ ಓದಿ:ಏಕರೂಪ ನಾಗರೀಕ ಸಂಹಿತೆ : ಬಹುಪತ್ನಿತ್ವ ಕೇವಲ ಮುಸ್ಲಿಮರಲ್ಲಿನ ಸಮಸ್ಯೆಯೇ?
ಬಿಜೆಪಿ ಒಂಬತ್ತು ವರ್ಷಗಳಿಂದ ಮುಸ್ಲಿಂ ಮಹಿಳೆಯರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಲೇ ಬಂದಿದೆ. ಆದರೆ ನಾವು ಯಾವ ಹಕ್ಕುಗಳನ್ನು ಗೆದ್ದಿದ್ದೇವೆ ? ನಮಗೆ ಬಜೆಟ್ಗಳಲ್ಲಿ ಎಷ್ಟು ಹಣಕಾಸು ಹಂಚಿಕೆ ಮಾಡಲಾಗಿದೆ, ನಮ್ಮ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಯಾವ ನೀತಿಗಳನ್ನು ರೂಪಿಸಲಾಗಿದೆ ಮತ್ತು ಮುಸ್ಲಿಂ ಮಹಿಳೆಯರಿಗಾಗಿ ಯಾವ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ? ನಾನು ಇದನ್ನು ಏಕೆ ಕೇಳುತ್ತೇನೆ ಎಂದರೆ ಮುಸ್ಲಿಂ ಮಹಿಳೆಯರು ಹಲವಾರು ಸಾಮಾಜಿಕ-ಆರ್ಥಿಕ ರಂಗಗಳಲ್ಲಿ ಭಾರತದ ಜನಸಂಖ್ಯೆಯಲ್ಲಿ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ನಮ್ಮ ಪರವಾಗಿ ಯಾವುದೇ ಕ್ರಿಯಾಶೀಲ ಆಡಳಿತ ಕ್ರಮವನ್ನು ಕಾಣಲಾಗುತ್ತಿಲ್ಲ.
ಬದಲಾಗಿ ನಾವು ನೋಡುತ್ತಿರುವುದು ಮುಸ್ಲಿಂ ಮಹಿಳೆಯರಾಗಿ ನಮ್ಮ ಮೇಲೆ ನಡೆಯುತ್ತಿರುವ ನಿರ್ದಿಷ್ಟ ದಾಳಿಗಳನ್ನು. ವಾಸ್ತವವಾಗಿ ಸರ್ಕಾರವು ಮೌಲಾನಾ ಆಜಾದ್ ರಾಷ್ಟ್ರೀಯ ಫೆಲೋಶಿಪ್ ಯೋಜನೆಯನ್ನು ರದ್ದುಗೊಳಿಸಿತು ಮತ್ತು ಶಾಲಾ ಸಮವಸ್ತ್ರದ ಸುತ್ತಲೂ ಅನಗತ್ಯ ಹಾನಿಯನ್ನು ಸೃಷ್ಟಿಸಿತು, ಇದು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣದ ಪ್ರವೇಶವನ್ನು ಹೆಚ್ಚು ಕಷ್ಟಕರವಾಗಿಸಿದೆ. ಮುಸ್ಲಿಂ ಮಹಿಳೆಯರ ನೇತೃತ್ವದಲ್ಲಿ ಸಾಂವಿಧಾನಿಕ ಚೌಕಟ್ಟಿನೊಳಗೆ ಪೌರತ್ವ ಹಕ್ಕುಗಳನ್ನು ಆಗ್ರಹಿಸಿದ ಆಂದೋಲನ, ಶಾಹೀನ್ ಬಾಗ್ ಚಳುವಳಿಯ ಮೇಲೆ ಸರ್ಕಾರವು ದೇಶಾದ್ಯಂತ ದಾಳಿ ಮಾಡಿತು. ಅಂದರೆ ಏನಾಸಂ ಮುಸ್ಲಿಂ ಮಹಿಳೆಯರ ಹೆಸರಿನಲ್ಲಿ ನೀವು ನೀಡಬಹುದಾದ ಪ್ರಚಾರ ಮಾತ್ರವೇ ?
ಲಿಂಗತ್ವ ನ್ಯಾಯದ ಚರಿತ್ರೆ
ಸರ್ಕಾರ ಮತ್ತು ಪ್ರಧಾನ ಮಂತ್ರಿಗಳು ಮುಸ್ಲಿಂ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುವುದನ್ನು ಗಮನಿಸಿದ್ದೇವೆ. ಆದರೆ ಲಿಂಗತ್ವ ನ್ಯಾಯದ ಬಗ್ಗೆ ಸರ್ಕಾರದ ಹಿಂದಿನ ನಡವಳಿಕೆ ಏನನ್ನು ಸೂಚಿಸುತ್ತದೆ ?
ಸಾಮಾಜಿಕ ಮಾಧ್ಯಮಗಳಲ್ಲಿ ಮಾತನಾಡಿದ ಮುಸ್ಲಿಂ ಯುವತಿಯರನ್ನು ಸುಲ್ಲಿ-ಬುಲ್ಲಿ Appಗಳ ಮೂಲಕ ಹರಾಜು ಹಾಕಲಾಯಿತು. ಹತ್ರಾಸ್ ಅತ್ಯಾಚಾರ ಸಂತ್ರಸ್ತೆಗೆ ಸರಿಯಾದ ಅಂತ್ಯಕ್ರಿಯೆಯನ್ನು ಸಹ ನಿರಾಕರಿಸಲಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮಹಿಳಾ ಕುಸ್ತಿಪಟುಗಳು ತಮಗೆ ಲೈಂಗಿಕ ಕಿರುಕುಳ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನ್ಯಾಯಯುತ ಬೇಡಿಕೆಯನ್ನು ಮುಂದಿಟ್ಟು ಹೋರಾಡಿದಾಗ ಅವರ ವಿರುದ್ಧ ಅಪಪ್ರಚಾರ ಮಾಡಲಾಯಿತು. ಕುಕಿ ಮಹಿಳೆಯರು ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶವನ್ನು ನಿರೀಕ್ಷಿಸುತ್ತಲೇ ಇದ್ದಾರೆ, ತನ್ಮೂಲಕ ಜನರ ಜೀವ ಮತ್ತು ಆಸ್ತಿಗಳನ್ನು ಉಳಿಸಲು ಸುಮಾರು ಮೂರು ತಿಂಗಳಿನಿಂದ ಹೋರಾಡುತ್ತಿದ್ದಾರೆ. ಆದರೆ ಸರ್ಕಾರದ ಪ್ರತಿಕ್ರಿಯೆಯು ನಿಷ್ಕ್ರಿಯವಾಗಿರುವುದೇ ಅಲ್ಲದೆ ಕಾನೂನು ಉಲ್ಲಂಘಿಸುವವರ ಮತ್ತು ಕಿರುಕುಳ ನೀಡುವವರ ಪರವಾಗಿ ನಿಂತಿದೆ.
ಸುಳ್ಳು ನಿರೂಪಣೆಗಳನ್ನು ಹರಡುವ ಮೂಲಕ ಅಂತರ್-ಧರ್ಮೀಯ ವಿವಾಹಗಳ ಮೇಲೆ ದಾಳಿ ನಡೆಸುತ್ತಿರುವ ಸರ್ಕಾರಗಳಿಂದ, ಕುಟುಂಬಗಳನ್ನು ರಚಿಸುವ ಹಕ್ಕನ್ನು ಕೇಳುವ ಕ್ವೀರ್ಗಳನ್ನು, ಟ್ರಾನ್ಸ್ಜೆಂಡರ್ ಸಮುದಾಯಗಳನ್ನು ವಿರೋಧಿಸುವ ಸರ್ಕಾರದಿಂದ ನಾವು ಯಾವ ರೀತಿಯ ಲಿಂಗತ್ವ ನ್ಯಾಯವನ್ನು ನಿರೀಕ್ಷಿಸಬಹುದು? ನಮ್ಮಂತಹ ಮುಸ್ಲಿಂ ಮಹಿಳೆಯರು ಸುಪ್ರೀಂ ಕೋರ್ಟ್ನಲ್ಲಿ ಹೋರಾಟವನ್ನು ಗೆದ್ದ ನಂತರ ತ್ವರಿತ ತ್ರಿವಳಿ ತಲಾಖ್ನ ಅನ್ಯಾಯದಿಂದ ಮಹಿಳೆಯರನ್ನು ಮುಕ್ತಗೊಳಿಸಿದ್ದೇವೆ ಎಂದು ಸರ್ಕಾರ ಬೆನ್ನುತಟ್ಟಿಕೊಳ್ಳುತ್ತಿದೆ. ಏಕಪಕ್ಷೀಯ ವಿಚ್ಛೇದನಗಳನ್ನು ಈಗಾಗಲೇ ಕಾನೂನುಬಾಹಿರವೆಂದು ಪರಿಗಣಿಸಿದ ನಂತರ ಮಹಿಳೆಯರ ಗಂಡಂದಿರನ್ನು ಜೈಲಿಗೆ ಕಳುಹಿಸುವ ತ್ವರಿತ ತ್ರಿವಳಿ ತಲಾಖ್ ಅನ್ನು ಅಪರಾಧೀಕರಿಸುವ ಮೂಲಕ ನೀವು ನಮ್ಮನ್ನು ಬೆಂಬಲಿಸಿದ್ದೀರಿ. ಇಂತಹ ಕ್ರಮವು ತಪ್ಪು ವಿಚ್ಛೇದನಗಳ ವಿರುದ್ಧ ಹೋರಾಡುವ ಮಹಿಳೆಯರಿಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಕಂಡುಹಿಡಿಯಲು ನಾವು ಇನ್ನೂ ಪ್ರಯತ್ನಿಸುತ್ತಿದ್ದೇವೆ.
ಲಿಂಗತ್ವ ನ್ಯಾಯದ ಬಗ್ಗೆ ನಿಮ್ಮ ತಿಳುವಳಿಕೆಯು ಹೆಚ್ಚಿನ ಮುಸ್ಲಿಂ ಪುರುಷರನ್ನು ಬಂಧಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ ಎಂದು ತೋರುತ್ತದೆ. ಪಶ್ಚಿಮ ಏಷ್ಯಾದ ತೈಲದ ಹಿಂದೆ ಇದ್ದಾಗ ಪ್ರಜಾಪ್ರಭುತ್ವದ ಹೆಸರಿನಲ್ಲಿ ಇರಾಕ್ ಮೇಲೆ ದಾಳಿ ನಡೆಸಿದ ಜಾರ್ಜ್ ಬುಷ್ ಅವರಂತೆ ಬಿಜೆಪಿ ಮುಸ್ಲಿಂ ಮಹಿಳೆಯರ ವಹಿಸುತ್ತದೆ ಎಂದು ಹೇಳುತ್ತಲೇ ನಮ್ಮನ್ನು ಒಂದು ಸಮುದಾಯವಾಗಿ ಬಲಿಪಶು ಮಾಡಲು ಹೊರಟಿದೆ ಎಂದು ಕಾಣುತ್ತದೆ.
ಯಾವುದೇ ರೀತಿಯಲ್ಲಿ ನಾವು ಈ ಸರ್ಕಾರವನ್ನು ನಂಬಲು ಸಾಧ್ಯವಿಲ್ಲ ಅಥವಾ ಅದು ಯಾರ ಒಳಿತಿಗಾಗಿ ಏನಾಸಂ ಬಯಸುತ್ತದೆ ಎಂದು ನಂಬಲು ಸಾಧ್ಯವಿಲ್ಲ. ಇದು ಹಿಂದೂ ಮಹಿಳೆಯರ ವಿಚ್ಛೇದನ ಮತ್ತು ಆಸ್ತಿಯ ಹಕ್ಕಿನ ವಿರುದ್ಧ ಹೋರಾಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸಂಪ್ರದಾಯವಾದಿ ರಾಜಕೀಯದಿಂದ ಪ್ರೇರಿತವಾಗಿದೆ. ವಾಸ್ತವವಾಗಿ ಏಕರೂಪ ನಾಗರಿಕ ಸಂಹಿತೆಯ ಹೆಸರಿನಲ್ಲಿ ಈ ವ್ಯವಸ್ಥೆಯು ಏನನ್ನು ಜಾರಿಗೊಳಿಸಲೆತ್ನಿಸುತ್ತದೆ ಎಂಬುದರ ಬಗ್ಗೆ ನ್ಯಾಯವನ್ನು ಬಯಸುವ ಎಲ್ಲಾ ಜನರು ಚಿಂತಿಸಬೇಕಿದೆ. ಕಳೆದ ಒಂಬತ್ತು ವರ್ಷಗಳಿಂದ, ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ನಾಗರಿಕರ ಬಗ್ಗೆ ಭಾರತದ ಪ್ರಭುತ್ವವು ತನ್ನ ಕೆಟ್ಟ ದಾಖಲೆಯನ್ನು ಪ್ರದರ್ಶಿಸಿದೆ. ನಾಗರಿಕರ ಬಗ್ಗೆ ಬಹುಸಂಖ್ಯಾತರ ಸಾಂವಿಧಾನಿಕವಲ್ಲದ ವಿಧಾನವನ್ನು ನಂಬುವ ಸರ್ಕಾರ ಮಾತ್ರ ಈ ವಾತಾವರಣದಲ್ಲಿ ಏನಾಸಂ ಜಾರಿಗೆ ತರುವ ಬಗ್ಗೆ ಮಾತನಾಡಲು ಸಾಧ್ಯ. ಅಂತಹ ಸಂಹಿತೆ ಎಂದಾದರೂ ಜಾರಿಯಾದರೆ ಅದು ಅನೇಕ ಸಮುದಾಯಗಳ ಸಂರಕ್ಷಿತ ಆಚರಣೆಗಳಿಗೆ ವಿರುದ್ಧವಾಗಿರುತ್ತದೆ ಹಾಗೂ ನಮ್ಮ ದೇಶದ ವೈವಿಧ್ಯಮಯ ಮತ್ತು ಬಹುಸಾಂಸ್ಕೃತಿಕ ಜೀವನ ವಾಸ್ತವಗಳನ್ನು ನಾಶಪಡಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ಈ ಮನಸ್ಥಿತಿಯ ಸರ್ಕಾರವು ರೂಪಿಸಿದ ಏನಾಸಂಗೆ ನಾವು ಬೇಕು ಎಂದು ಹೇಳಲು ಯಾವುದೇ ಕಾರಣಗಳಿಲ್ಲ.
ನಿಜವಾದ ಆಯ್ಕೆಗಳೂ ಇವೆ
ಹಾಗಾದರೆ ಏನಾಸಂ ಬೇಡ ಎನ್ನಲಾಗುವುದೇ ? ಈ ಕಥೆ ಅಷ್ಟು ಸರಳವಲ್ಲ ಏಕೆಂದರೆ ಈ ನಿಲುವಿನ ಮೂಲಕ, ಎಲ್ಲಾ ರೀತಿಯ ಮುಸ್ಲಿಮರನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಳ್ಳುವ ಆದರೆ ಮುಸ್ಲಿಂ ಮಹಿಳೆಯರ ಬೇಡಿಕೆಗಳನ್ನು ಎಂದಿಗೂ ಪರಿಹರಿಸದ ನಮ್ಮ ಸಮುದಾಯಗಳ ಧಾರ್ಮಿಕ ಮುಖ್ಯಸ್ಥರು ಮತ್ತು ಇತರರೊಂದಿಗೆ ನಾವೂ ನಿಲ್ಲುವಂತೆ ಮಾಡುತ್ತದೆ.
ನಾವು ಮುಸ್ಲಿಂ ಧಾರ್ಮಿಕ ದೃಷ್ಟಿಕೋನವನ್ನು ನೋಡಿದ್ದೇವೆ ಮತ್ತು ದುರದೃಷ್ಟವಶಾತ್ ಅದು ನಮ್ಮ ಪಾಲಿಗೆ ಕಿವುಡಾಗಿದೆ ಎಂದೂ ಅರಿತಿದ್ದೇವೆ. 1985ರ ಶಾಹಬಾನು ಪ್ರಕರಣದ ನಂತರ, ಇಸ್ಲಾಂ ಅಪಾಯದಲ್ಲಿದೆ ಎಂದು ಉಲೇಮಾಗಳು ಬೊಬ್ಬೆ ಹೊಡೆದರು ಮತ್ತು ವಿಚ್ಛೇದಿತ ಮುಸ್ಲಿಂ ಮಹಿಳೆಗೆ ನ್ಯಾಯಾಲಯ ಆದೇಶಿಸಿದ ಕನಿಷ್ಠ ಜೀವನಾಂಶವನ್ನು ವಿರೋಧಿಸಿ ಲಕ್ಷಾಂತರ ಜನರು ಬೀದಿಗಳಲ್ಲಿ ಜಮಾಯಿಸಿದರು. ಆ ತೀರ್ಪನ್ನು ಬುಡಮೇಲು ಮಾಡುವುದು ಉಲೇಮಾಗಳ ಪ್ರಭಾವವನ್ನು ಹೆಚ್ಚಿಸಿತು. ಮಹಿಳೆಯರ ಹಕ್ಕುಗಳನ್ನು ವಿರೋಧಿಸಿದ ಮುಸ್ಲಿಂ ಸಂಪ್ರದಾಯವಾದಿಗಳು ಧಾರ್ಮಿಕ ಅಧಿಕಾರದಿಂದ ಬೆಂಬಲಿತರಾಗಿದ್ದರಿಂದ ಮಾತ್ರ ಜನರನ್ನು ತಮ್ಮ ಕಡೆಗೆ ಸೆಳೆಯಲು ಸಾಧ್ಯವಾಯಿತು.
ನಮ್ಮ ವೈಯುಕ್ತಿಕ ಕಾನೂನುಗಳ ಭಾರವನ್ನು ಹೊರಬೇಕಾದ ಮುಸ್ಲಿಂ ಮಹಿಳೆಯರ ಪ್ರತಿನಿಧಿಗಳಾಗಿ, ನಾವು ಮೊದಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಯಂತಹ ಧಾರ್ಮಿಕ ಸಂಸ್ಥೆಗಳ ಮಧ್ಯಪ್ರವೇಶವನ್ನು ಕೋರಿದ್ದೇವೆ. ಈ ಸಂಸ್ಥೆಯನ್ನು ಎಲ್ಲಾ ಸರ್ಕಾರಗಳು ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಮುಸ್ಲಿಂ ಸಮುದಾಯಗಳ ಪ್ರತಿನಿಧಿ ಎಂದು ಪರಿಗಣಿಸಿವೆ. ನಾವು ಈ ಸಂಸ್ಥೆಗೆ ನಿರಂತರವಾಗಿ ಪತ್ರ ಬರೆಯುತ್ತಿದ್ದೆವು. ಆದರೆ 2001ರಲ್ಲಿ ಎರಡು ದಿನಗಳ ಸಭೆಗೆ ಒಪ್ಪಿಕೊಳ್ಳುವ ಮೂಲಕ ಮಂಡಳಿಯು ನಮಗೆ ಒಮ್ಮೆ ಮಾತ್ರ ಪ್ರತಿಕ್ರಿಯಿಸಲು ಮುಂದಾಗಿತ್ತು. ಆ ಚರ್ಚೆಯು ನಮ್ಮ ಹೋರಾಟದಲ್ಲಿ ಒಂದು ತಿರುವು ಪಡೆಯಿತು, ಏಕೆಂದರೆ ನಾವು ಅದರ ಮಧ್ಯಪ್ರವೇಶವನ್ನು ಕೋರಿದಾಗ ಅದರ ಸದಸ್ಯರು ಮಂಡಳಿಯು ಶಾಸನಬದ್ಧ ಸಂಸ್ಥೆಯಲ್ಲ ಎಂದು ಹೇಳಿದರು. ಮಂಡಲಿಯೂ ಸಹ ನಮ್ಮಂತೆಯೇ ಕೇವಲ ಒಂದು ಸ್ವಯಂಸೇವಾ ಸಂಸ್ಥೆ ಎಂದು ಹೇಳಿದರು. ಇದರರ್ಥ ನಾವು ಅವರ ಬಗ್ಗೆ ಯಾವುದೇ ಭರವಸೆಯನ್ನು ಹೊಂದುವಂತಿರಲಿಲ್ಲ.
ಆದರೂ, ನಾವು ಅವರೊಂದಿಗೆ ಮತ್ತು ಮುಸ್ಲಿಂ ಸಮುದಾಯದ ಕಾಳಜಿಗಳನ್ನು ಪ್ರತಿನಿಧಿಸುವ ಪಾತ್ರವನ್ನು ವಹಿಸಿಕೊಂಡ ಇತರರೊಂದಿಗೆ ತೊಡಗುವುದನ್ನು ಮುಂದುವರಿಸಿದೆವು. ಆದಾಗ್ಯೂ ವಿಚ್ಛೇದನವನ್ನು ದೇವರು ಮೆಚ್ಚುವುದಿಲ್ಲ ಎಂದು ನಾವು ಅವರಿಗೆ ಮನವರಿಕೆ ಮಾಡಿದ ನಂತರದಲ್ಲಿ ತ್ವರಿತ ತ್ರಿವಳಿ ತಲಾಖ್ ವಿಷಯದ ಬಗ್ಗೆ ಅವರು ಎಂದಿಗೂ ನಮಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿಲ್ಲ. ಆದರೆ ಅದು ಸಮುದಾಯದೊಳಗೆ ಆಂತರಿಕವಾಗಿ ಅವರ ಶಕ್ತಿಯ ವಿರುದ್ಧ ನಮ್ಮ ಧ್ವನಿಯಾಗಿತ್ತು. ಈ ಅಧಿಕಾರವನ್ನು ಬಳಸಿಕೊಂಡು ಅವರು 2005 ರಲ್ಲಿ ಒಂದು ಮಾದರಿ ನಿಖಾಹ್ನಾಮಾ (ಮದುವೆಯ ಒಪ್ಪಂದ) ರೂಪಿಸಿದರು. ಈ ಒಪ್ಪಂದವು ಮಹಿಳೆಯರ ದೃಷ್ಟಿಯಿಂದ ಎಷ್ಟು ಅನ್ಯಾಯವಾಗಿತ್ತೆಂದರೆ ನಾವು ಅದನ್ನು ಪತ್ರಿಕಾಗೋಷ್ಠಿಯಲ್ಲಿ ಹರಿದು ಬಿಸಾಡಬೇಕಾಯಿತು. ಅವರ ಮಾದರಿ ನಿಖಾಹ್ನಾಮಾದಲ್ಲಿ ಹೆಂಡತಿಯ ತಪ್ಪು ಕೃತ್ಯಗಳೇ ವಿಚ್ಛೇದನಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ತಪ್ಪು ಕೃತ್ಯವನ್ನು ನಿಷ್ಕರ್ಷೆ ಮಾಡುವವರು ಯಾರು ? ವ್ಯಾಖ್ಯಾನಿಸುವವರು ಯಾರು ? ಈ ಪ್ರಶ್ನೆಗಳ ಬಗ್ಗೆ ಅವರ ಒಪ್ಪಂದವು ಮೌನ ವಹಿಸುತ್ತದೆ.
ಆದರೆ ನಮಗೆ ವಾಸ್ತವ ಪರಿಸ್ಥಿತಿಯ ತಿಳುವಳಿಕೆ ಇತ್ತು. ಏಕೆಂದರೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸುವುದು, ಆಹಾರ ಸಿದ್ಧಪಡಿಸಲು ನಿರಾಕರಿಸುವುದು ಅಥವಾ ಗಂಡನ ಆದೇಶವನ್ನು ಉಲ್ಲಂಘಿಸುವುದು ಮುಂತಾದ ತಪ್ಪುಗಳ ಮೇಲೆ ನೀಡಲಾದ ವಿಚ್ಛೇದನಗಳಿಗೆ ಸಹಾಯ ಕೋರಿ ಮಹಿಳೆಯರಿಂದ ಅರ್ಜಿಗಳು ಪ್ರವಾಹೋಪಾದಿಯಲ್ಲಿ ನಮ್ಮನ್ನು ತಲುಪುತ್ತಲೇ ಇತ್ತು. ಮಹಿಳೆಯರಿಗೆ ನೀಡಲಾಗುವ ವಿಚ್ಛೇದನ ಪ್ರಮಾಣಪತ್ರಗಳಲ್ಲಿ ಮೂಲಭೂತವಾಗಿ ವಿಚ್ಚೇದಿತ ಮಹಿಳೆಯನ್ನು ಚರಿತ್ರಹೀನರೆಂದು ಪ್ರಮಾಣೀಕರಿಸಲಾಗುತ್ತಿತ್ತು. ಆದರೆ ಅವರು ಏನೋ ತಪ್ಪು ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿತ್ತು.
ಬದಲಾವಣೆ ಅಥವಾ ಸುಧಾರಣೆಯ ಬಗ್ಗೆ ಸಮುದಾಯದೊಳಗಿನ ಅಪಾರದರ್ಶಕತೆಯನ್ನು ಗಮನಿಸಿ ನಾವು ನಮ್ಮ ಕಾರ್ಯತಂತ್ರವನ್ನು ಬದಲಾಯಿಸಿದೆವು. ಮಹಿಳೆಯರ ಸಮಸ್ಯೆಗಳನ್ನು ಕೇವಲ ಧಾರ್ಮಿಕ ಸಂಘಟನೆಗಳಿಗೆ ವರದಿ ಮಾಡುವ ಬದಲು ನಾವು ನ್ಯಾಯಾಲಯಗಳನ್ನು ಸಂಪರ್ಕಿಸಲು ನಿರ್ಧರಿಸಿದೆವು. ಆದರೆ ಅನೇಕ ಮುಸ್ಲಿಂ ಮಹಿಳೆಯರು ಸುದೀರ್ಘ ಕಾನೂನು ಹೋರಾಟಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಪುನಃ ಹೊಸ ಕಾರ್ಯತಂತ್ರ ರೂಪಿಸುವಂತೆ ಮಾಡಿತು. ಆದ್ದರಿಂದ 2001ರ ನಂತರ ಕೇವಲ ವ್ಯಕ್ತಿಗತವಾಗಿ ಮಾತ್ರವಲ್ಲದೆ ಸಮಸ್ತ ಮಹಿಳೆಯರಿಗೆ ಸಂಬಂಧಿಸಿದ ಕಾರಣಗಳಿಗಾಗಿ ನಾವು ನ್ಯಾಯಾಲಯಗಳನ್ನು ಸಂಪರ್ಕಿಸಲು ಪ್ರಾರಂಭಿಸಿದ್ದೇವೆ. ಉದಾಹರಣೆಗೆ, ಮುಸ್ಲಿಂ ವೈಯುಕ್ತಿಕ ಕಾನೂನಿನಲ್ಲಿನ ತಾರತಮ್ಯದ ಅಭ್ಯಾಸಗಳ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ನಾವು ಅಹಮದಾಬಾದ್ ಮೂಲದ ಆವಾಜ್ನೊಂದಿಗೆ ಕೆಲಸ ಮಾಡಿದ್ದೇವೆ. ನ್ಯಾಯಾಲಯವು ಮೊದಲ ವಿಚಾರಣೆಯಲ್ಲೇ ನಮ್ಮ ವಾದಗಳನ್ನು ತಿರಸ್ಕರಿಸಿತ್ತು.
ಆದರೂ, ನಾವು ಪಟ್ಟುಹಿಡಿದೆವು ಮತ್ತು ಏಕಪಕ್ಷೀಯ ತ್ರಿವಳಿ ತಲಾಖ್ ಪದ್ಧತಿಯ ಸಾಂವಿಧಾನಿಕ ಮರುಪರಿಶೀಲನೆಯನ್ನು ಕೋರಿ ನಾವು ನ್ಯಾಯಾಲಯಕ್ಕೆ ಹೋದೆವು. ಇದರಲ್ಲಿ ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ಸರಿಯಾಗಿ ತೀರ್ಪು ನೀಡಿತು ಮತ್ತು ಅದನ್ನು ಕಾನೂನುಬಾಹಿರವೆಂದು ಪರಿಗಣಿಸಿತು.
ಅಸ್ಮಿತೆ ಮತ್ತು ಆಕ್ರಮಣ
ಹಲವು ವರ್ಷಗಳಿಂದ ಹಿಂಸಾತ್ಮಕ ಮುಸ್ಲಿಂ ವಿರೋಧಿ ಪ್ರಕರಣಗಳ ಕಾರಣ ಮುಸ್ಲಿಂ ಅಸ್ಮಿತೆ ಮತ್ತು ಅಸ್ತಿತ್ವವು ಮುತ್ತಿಗೆಗೆ ಒಳಗಾಗಿರುವುದರಿಂದ ಸಮುದಾಯವು ಒಗ್ಗಟ್ಟಿನಿಂದ ಒಂದಾಗಿ ನಿಲ್ಲುವ ಅವಶ್ಯಕತೆ ಹೆಚ್ಚಾಗಿದೆ. 1990ರ ದಶಕದ ಗಲಭೆಗಳ ನಂತರ 2002 ರ ಹತ್ಯಾಕಾಂಡ ಸಂಭವಿಸಿತ್ತು. ಇದು ಮುಸ್ಲಿಂ ಮಹಿಳೆಯರನ್ನು ಇನ್ನಷ್ಟು ಹಿಂದಕ್ಕೆ ತಳ್ಳಿತ್ತು. . ಹಿಂಸಾತ್ಮಕ ದಾಳಿಗಳು ಮತ್ತು ತೀವ್ರ ನಷ್ಟಗಳ ಇಂತಹ ಸಮಯದಲ್ಲಿ ಈ ಧಾರ್ಮಿಕ ಸಂಸ್ಥೆಗಳು ಸಮುದಾಯದ ಪರವಾಗಿ ನಿಂತವು. ಪ್ರಭುತ್ವ ನಿಲ್ಲಲಿಲ್ಲ. ಮತ್ತು ಸಮುದಾಯದ ಈ ಸಂಸ್ಥೆಗಳ ವಕ್ತಾರರು ಸುಧಾರಣೆಗಳನ್ನು ಒತ್ತಾಯಿಸದಂತೆ ಜನರನ್ನು ನಿರುತ್ಸಾಹಗೊಳಿಸಿದ್ದಷ್ಟೇ ಅಲ್ಲದೆ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಎಂದಿಗೂ ಸಾರ್ವಜನಿಕವಾಗಿ ಬಹಿರಂಗಪಡಿಸಬಾರದು ಎಂದು ಅಪೇಕ್ಷಿಸಿದ್ದರು.
ತತ್ಪರಿಣಾಮವಾಗಿ ಈ ಸಂಸ್ಥೆಗಳು ಈಗ ಮುಸ್ಲಿಂ ಮಹಿಳೆಯರಾದ ನಮ್ಮ ಮೇಲೆ ಅವಳಿ ಅಧಿಕಾರಗಳನ್ನು ಪಡೆದುಕೊಂಡಿವೆ. ಅವು ನಮ್ಮ ಹಿತಾಸಕ್ತಿಗಳಿಗೆ ಧಕ್ಕೆ ತರಬಹುದಷ್ಟೇ ಅಲ್ಲದೆ ಇದರ ಹೊರತಾಗಿಯೂ ನಮ್ಮ ಮೇಲೆ ನೈತಿಕ ಒತ್ತಡವನ್ನು ಹೇರಬಹುದು. ಇಂದು ಪರಿಸ್ಥಿತಿ ಹೇಗಿದೆಯೆಂದರೆ ವೈಯುಕ್ತಿಕ ಕಾನೂನು ಸುಧಾರಣೆಯ ಬಗ್ಗೆ ಮಾತನಾಡುವುದು ಸಹ ಮುಸ್ಲಿಂ ಅಸ್ಮಿತೆಗೆ ಬೆದರಿಕೆಯಾಗಿ ಕಂಡುಬರುತ್ತದೆ. ಎಐಎಂಪಿಎಲ್ಬಿ ಯಂತಹ ಸಂಸ್ಥೆಗಳು ಏನಾಸಂ ಬೇಡ ಎಂದು ಹೇಳುತ್ತಿರುವುದನ್ನು ಗಮನಿಸಬೇಕಿದೆ. ಆದರೆ ನಾವು ಅವರ ಆಗ್ರಹಕ್ಕೆ ದನಿಗೂಡಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರು ಮುಸ್ಲಿಂ ಸಮುದಾಯಗಳ ಮೇಲೆ ಸರ್ಕಾರದ ಈ ದಾಳಿಯ ವಿರುದ್ಧವಾಗಿದ್ದಾರೆಯೇ ಅಥವಾ ಲಿಂಗತ್ವ ನ್ಯಾಯದ ಬೇಡಿಕೆಗಳ ವಿರುದ್ಧವಾಗಿದ್ದಾರೆಯೇ ಎಂದು ಖಚಿತವಾಗಿ ನಮಗೆ ತಿಳಿಯುವುದಿಲ್ಲ.
ಇದನ್ನೂ ಓದಿ:ಏಕರೂಪ ನಾಗರಿಕ ಸಂಹಿತೆ- ಸಾಮಾಜಿಕ ಸಾಂಸ್ಕೃತಿಕ ವಾಸ್ತವಗಳು
ಧಾರ್ಮಿಕ ಸಂಘಟನೆಗಳು, ಸರ್ಕಾರಗಳು ಮತ್ತು ಕಾನೂನು ನ್ಯಾಯಾಲಯಗಳ ಮೂಲಕ ಸಮುದಾಯದ ಆಂತರಿಕ ಸುಧಾರಣೆಗಾಗಿ ನಮ್ಮ ಪ್ರಯತ್ನ ಯಶಸ್ವಿಯಾಗಿದ್ದರೆ ಬಹುಶಃ ಬಿಜೆಪಿಯ ಏಕರೂಪ ನಾಗರಿಕ ಸಂಹಿತೆ ವಿಫಲವಾಗುತ್ತಿತ್ತು ಎಂದು ಇಂದು ನಾವು ದೃಢವಾಗಿ ನಂಬುತ್ತೇವೆ. ನಮ್ಮ ಸಮುದಾಯವು ತಮ್ಮದೇ ಸದಸ್ಯರ ಧ್ವನಿಯ ಬಗ್ಗೆ ಗಮನಹರಿಸಿದ್ದರೆ ಬಹುಶಃ ಬಿಜೆಪಿ ಮತ್ತು ಸಂಘ ಪರಿವಾರದ ರೂಪದಲ್ಲಿ ನಮ್ಮ ತಲೆಯ ಮೇಲೆ ನೇತಾಡುತ್ತಿರುವ ಈ ತೂಗುಗತ್ತಿಯು ಅರ್ಥಹೀನವಾಗಿಬಿಡಡುತ್ತಿತ್ತು. ಧಾರ್ಮಿಕ ಸಂಸ್ಥೆಗಳು ತಮ್ಮ ಮುಂದೆ ಆಗಿಂದ್ದಾಗ್ಗೆ, ಪದೇಪದೇ ಮಂಡಿಸಲಾಗುತ್ತಿದ್ದ ಮಹಿಳೆಯರ ಸಮಸ್ಯೆಗಳಿಗೆ ಕಾಳಜಿಗಳಿಗೆ ಆದ್ಯತೆ ನೀಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಈ ಮುಕ್ತವಾದ ಅವಕಾಶವನ್ನೇ ಹಿಂದುತ್ವ ಸರ್ಕಾರವು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಹಾಗಾಗಿಯೇ ಕಳೆದ ನಾಲ್ಕು ದಶಕಗಳಲ್ಲಿ ನಮ್ಮ ಪ್ರಸ್ತುತ ಕಾನೂನುಗಳಲ್ಲಿ ಪ್ರತಿಪಾದಿಸಲಾದ ಪಿತೃಪ್ರಧಾನ ಕುಟುಂಬ ರಚನೆಗಳ ಪರಿಣಾಮವಾಗಿ ಅಂಚಿಗೆ ತಳ್ಳಲ್ಪಟ್ಟಿರುವ ಮಹಿಳೆಯರಿಗೆ ಮತ್ತು ಇತರರಿಗೆ ಎಂದಿಗೂ ಸೂಕ್ತವಾದ ಪ್ರಾಶಸ್ತ್ಯ ದೊರೆತಿಲ್ಲ ಎನ್ನುವುದನ್ನು ನಾವು ಅರಿತಿದ್ದೇವೆ. ಎಂದಿಗೂ ಯಾವುದೇ ಸರ್ಕಾರಕ್ಕೂ ಸಹ ನಾವು ಮೊದಲ ಆದ್ಯತೆಯಾಗಿರಲಿಲ್ಲ ಎಂದು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತಿಕೆ ನಮಗಿದೆ. ಹಾಗೆಯೇ ನಮಗೆ ಸಹಾಯ ಮಾಡುವುದಾಗಿ ಹೇಳಿಕೊಳ್ಳುವ ಧಾರ್ಮಿಕ ಮೂಲಭೂತವಾದಿಗಳು ಮತ್ತು ಸಂಪ್ರದಾಯವಾದಿಗಳು ನಮಗಾಗಿ ಎಂದಿಗೂ ಸಹ ಸಮಯವನ್ನು ಹೊಂದಿಸಿಕೊಂಡಿಲ್ಲ ಎನ್ನುವ ಪರಿವೆಯೂ ನಮಗಿದೆ.
ಹಾಗಾಗಿಯೇ ನಾವು ನಮ್ಮ ಬೇಡಿಕೆಗಳನ್ನು ವಿಶಾಲ ನೆಲೆಯಲ್ಲಿ ಮಂಡಿಸಲು ಹಾಗೂ ನಮ್ಮಂತೆ ಯೋಚಿಸುವ ಇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಶ್ರಮಿಸಿದ್ದೇವೆ. ಎಲ್ಲಾ ಸಮುದಾಯಗಳು ಮತ್ತು ಎಲ್ಲಾ ಜನರಿಗೆ ಲಿಂಗತ್ವ-ನ್ಯಾಯಯುತ ಕಾನೂನುಗಳನ್ನು ಜಾರಿಗೊಳಿಸುವಂತೆ ನಾವು ಒತ್ತಾಯಿಸುತ್ತೇವೆ. ಮುಸ್ಲಿಂ ಮಹಿಳೆಯರ ಸಲುವಾಗಿ ನಾವು ಅದೇ ಹಕ್ಕುಗಳನ್ನು ಕೇಳುವ ಇತರ ಮಹಿಳೆಯರೊಂದಿಗೆ ನಾವು ದನಿಗೂಡಿಸುತ್ತೇವೆ. ನಾವು ನಮ್ಮ ನಡುವೆ ಅನೇಕ ಚರ್ಚೆಗಳನ್ನು ನಡೆಸುತ್ತಿದ್ದೇವೆ. ಇಂತಹ ಇನ್ನೂ ಅನೇಕ ಸಂವಾದಗಳು ಬೇಕಾಗುತ್ತವೆ ಏಕೆಂದರೆ ವ್ಯವಸ್ಥೆಯನ್ನು ಬದಲಾಯಿಸಲು ಕೇವಲ ಕಾನೂನುಗಳ ಬದಲಾವಣೆಗಳು ಮಾತ್ರವೇ ಎಂದಿಗೂ ಸಾಕಾಗುವುದಿಲ್ಲ. ಆದರೆ ನಮಗೆ ಈಗ ತುರ್ತಾಗಿ ಚರ್ಚೆ-ಸಂವಾದಗಳ ಅಗತ್ಯವಿದೆ.
ಈ ಸರ್ಕಾರ ಮತ್ತು ಸಂಘ ಪರಿವಾರದ ಅಪಾಯಕಾರಿ ವಾಕ್ಚಾತುರ್ಯವನ್ನು ಗಮನಿಸುತ್ತಲೇ ಇರುವ ನಮಗೆಲ್ಲರಿಗೂ, ವಿವಿಧ ಸಮುದಾಯಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಿಕೊಳ್ಳುತ್ತಾ ಈ ಚರ್ಚೆ-ಸಂವಾದಗಳನ್ನು ನಡೆಸಲು ಸ್ರಪ್ರೇರಣೆಯಿಂದ ಮುಂದೆ ಬರುವ ಪುರುಷರು ಮತ್ತು ಸಂಘಟನೆಗಳು ಹೇಗೆ ತಪ್ಪು ನಿರೂಪಣೆಗಳನ್ನು ಸೃಷ್ಟಿಸುತ್ತಿದ್ದಾರೆ ಎನ್ನುವುದೂ ತಿಳಿದಿದೆ. ನಮ್ಮ ಆಚರಣೆಗಳನ್ನು ಮರು ವ್ಯಾಖ್ಯಾನಿಸುವ ಸಂದರ್ಭದಲ್ಲಿ ಇತರರು ಅನುಸರಿಸುವ ಹಲವು ಆಚರಣೆಗಳತ್ತ ಗಮನ ನೀಡುತ್ತಲೇ ಅವುಗಳನ್ನು ನ್ಯಾಯಯುತವಾಗಿಸಲು ಮತ್ತು ನ್ಯಾಯಸಮ್ಮತವಾಗಿಸಲು ನಮ್ಮದೇ ಆದ ಆಚರಣೆಗಳಿಗೆ ನಾವು ಬದ್ಧರಾಗಬೇಕಿದೆ.
22ನೇ ಕಾನೂನು ಆಯೋಗವು ತಾನು ಪಡೆಯುತ್ತಿರುವ ಅನೇಕ ಪರಿಗಣನೆಯ ಸಲ್ಲಿಕೆಗಳ ಬಗ್ಗೆ ಪ್ರಾಮಾಣಿಕವಾಗಿ ಗಮನವನ್ನು ಹರಿಸುತ್ತಿದೆ ಮತ್ತು ನಮ್ಮನ್ನು ವಿಭಜಿಸಲು ಹೂಡಿಕೆ ಮಾಡಿದವರು ಉತ್ತೇಜಿಸಿದ ಅನಗತ್ಯ, ಅರ್ಥಹೀನ ಮತ್ತು ಮೋಸದ ಜನಾಭಿಪ್ರಾಯ ಸಂಗ್ರಹದಿಂದ ಪ್ರಭಾವಿತವಾಗುವುದಿಲ್ಲ ಎಂದು ಭಾವಿಸಲಾಗುತ್ತದೆ. ಹಾಗೆಯೇ ಸಂಪೂರ್ಣ ಅಜ್ಞಾನದಿಂದ ಮಂಡಿಸಲಾದ ಅಭಿಪ್ರಾಯಗಳನ್ನು ಸಹ ಸ್ವೀಕರಿಸುತ್ತದೆ ಎಂದೇ ಭಾವಿಸಬೇಕಾಗುತ್ತದೆ.
ವೈಯುಕ್ತಿಕ ಕಾನೂನುಗಳಲ್ಲಿ ಸುಧಾರಣೆಗಳು ಅಗತ್ಯವಿದೆ ಆದರೆ ಏಕರೂಪ ನಾಗರಿಕ ಸಂಹಿತೆ ಅಲ್ಲ ಎಂದು ಹೇಳುವ 21 ನೇ ಕಾನೂನು ಆಯೋಗದ 2018ರ ವರದಿಯನ್ನು ಆಧರಿಸಿ ಮರುಚಿಂತನೆ ನಡೆಸಲು ಕಾನೂನು ಆಯೋಗವು ಎಲ್ಲ ಭಾಗಿದಾರರೊಡನೆ ಸಾರ್ವಜನಿಕ ಸಂವಾದವನ್ನು ಪ್ರಾರಂಭಿಸಬೇಕಾಗಿದೆ. ವೈಯುಕ್ತಿಕ ಕಾನೂನುಗಳ ಅನ್ಯಾಯದಿಂದ ನಿಜವಾಗಿಯೂ ಬಾಧಿತರಾದ ಜನರು ಆ ಚರ್ಚೆಯಲ್ಲಿ, ಸಂವಾದದಲ್ಲಿ ಸೂಕ್ತ ಸ್ಥಾನ ಪಡೆಯುತ್ತಾರೆ ಎಂದು ನಾವು ಭಾವಿಸುತ್ತೇವೆ.
(ಲೇಖಕಿ ಹಸೀನಾ ಖಾನ್ ಮುಸ್ಲಿಂ ಮಹಿಳೆಯರ ವಿಮೋಚನೆಗಾಗಿ ಹೋರಾಡುತ್ತಿರುವ ಭಾರತದ ಮುಸ್ಲಿಂ ಮಹಿಳಾ ಸಂಘಟನೆಗಳ ವಿಶಾಲ ಒಕ್ಕೂಟ- ಬೀಬಾಕ್ ಕಲೆಕ್ಟೀವ್ ಸಂಸ್ಥೆಯ ಸಂಸ್ಥಾಪಕಿ-)