ಡಾ.ಕೆ.ಷರೀಫಾ
ಏಕರೂಪ ನಾಗರೀಕ ಸಂಹಿತೆಯ ಚರ್ಚೆಯಲ್ಲಿ ಮಾಧ್ಯಮಗಳು ಬರೀ ತ್ರಿಪಲ್ ತಲ್ಲಾಕ್, 4 ಮದುವೆ, ಹೆಚ್ಚು ಮಕ್ಕಳು, ಆಸ್ತಿ ಹಂಚಿಕೆ ಕುರಿತಂತೆ ಚರ್ಚಿಸುತ್ತಿವೆ. ಇವೆಲ್ಲ ಹೆಚ್ಚಾಗಿ ಬಹುಪತ್ನಿತ್ವದ ಪರಿಣಾಮಗಳು ಮತ್ತು ಅದು ಮುಸ್ಲಿಂ ವೈಯಕ್ತಿಕ ಕಾನೂನಿನ ಪರಿಣಾಮ. ಹಾಗಾಗಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡಿ ಬಹಪತಿತ್ವವನ್ನು ನಿವಾರಿಸಬೇಕು ಎಂದು ಬಿಂಬಿಸಲಾಗುತ್ತಿದೆ.ಬಹುಪತ್ನಿತ್ವ ಕೇವಲ ಮುಸ್ಲಿಮರಲ್ಲಿನ ಸಮಸ್ಯೆಯೇ?ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (2019-20) ರಲ್ಲಿನ ಬಹುಪತ್ನಿತ್ವದ ಅಂಕೆಸಂಖ್ಯೆಗಳನ್ನು ನೋಡಿದರೆ ಅದು ಧರ್ಮದ ಮೇಲೆ ಮಾತ್ರ ಅವಲಂಬಿಸಿ ಇಲ್ಲ. ಬುಡಕಟ್ಟು, ಜಾತಿ, ಪ್ರದೇಶ, ಶಿಕ್ಷಣ ಅಭಿವೃದ್ಧಿಯ ಮಟ್ಟ ಇತ್ಯಾದಿ ಹಲವು ಅಂಶಗಳನ್ನು ಅವಲಂಬಿಸಿದೆ. ಉದಾಹರಣೆಗೆ ಇಡೀ ಭಾರತದಲ್ಲಿ ಬಹುಪತ್ನಿತ್ವದ ಪ್ರಮಾಣ 1.4% ಇದ್ದರೆ, ಮುಸ್ಲೀಮರೇ ಬಹುಸಂಖ್ಯಾತರಿರುವ ಜಮ್ಮು-ಕಾಶ್ಮೀರದಲ್ಲಿ ಕೇವಲ 0.4% ರಷ್ಟಿದೆ.
ಏಕರೂಪ ನಾಗರೀಕ ಸಂಹಿತೆ, ಹಾಗಂದರೇನು? ಒಂದು ದೇಶ ಒಂದು ನಾಗರೀಕ ಸಂಹಿತೆ ಎನ್ನುವುದು ಇದರ ಅರ್ಥ. ಬಹುಭಾಷೆ, ಬಹುಸಂಸ್ಕೃತಿ, ಬಹು ಸಂಪ್ರದಾಯ, ವಿವಿಧ ಜಾತಿ, ಧರ್ಮಗಳನ್ನು ಹೊಂದಿರುವ ಭಾರತದಲ್ಲಿ ಇದು ಸಾಧ್ಯವೇ? ಎಂಬುದು ಪ್ರಶ್ನೆ. ಬಿಜೆಪಿಯ ಅಜೆಂಡಾದ ಮೂರು ಮಹತ್ವದ ಅಂಶಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತತೆ ಕೊಡುವ ಕಲಮು 370 ಕೊನೆಗಾಣಿಸುವ ಕುರಿತು, ಬಾಬ್ರಿ ಮಸಿದಿ ಜಾಗದಲ್ಲಿ ರಾಮ ಮಂದಿರ ಕಟ್ಟುವ ಕುರಿತು, ಮತ್ತು ಏಕರೂಪ ನಾಗರೀಕ ಸಂಹಿತೆಯನ್ನು ಜಾರಿ ಮಾಡುವ ಭರವಸೆ ನೀಡಿತ್ತು. ಇವೆಲ್ಲ ಭರವಸೆಗಳೂ ಅಸಂವಿಧಾನಿಕ ಭರವಸೆಗಳು. ಅದರಲ್ಲಿ ಎರಡು ಭರವಸೆಗಳನ್ನು ಈಗಾಗಲೇ ಅದು ಪೂರ್ಣಗೊಳಿಸಿದೆ. ಈಗ ಮೂರನೆಯ ಅಜೆಂಡಾವಾದ ಏಕರೂಪ ನಾಗರೀಕ ಸಂಹಿತೆಯನ್ನು ಜಾರಿಗೊಳಿಸುವುದಾಗಿದೆ.
ಅಮೇರಿಕದಿಂದ ವಿಮಾನ ಇಳಿದು ಬರುತ್ತಿದ್ದಂತೆಯೇ ಮೋದಿಯವರು ಏಕರೂಪ ನಾಗರಿಕ ಸಂಹಿತೆ ಜಾರಿಮಾಡುವುದಾಗಿ ಹೇಳಿದರು. ಮಾರಿಕೊಂಡ ಮಾಧ್ಯಮಗಳು ಹಗಲು ರಾತ್ರಿ ಪ್ಯಾನಲ್ ಚರ್ಚೆಯಲ್ಲಿ ತೊಡಗಿದವು. ಏಕರೂಪ ನಾಗರೀಕ ಸಂಹಿತೆಯೆಂದರೆ ಅದರಿಂದ ಮುಸಲ್ಮಾನರಿಗೆ ಧಕ್ಕೆಯಾಗುತ್ತದೆಯೇ? ಎಂಬ ಚರ್ಚೆ, ಬರೀ ತ್ರಿಪಲ್ ತಲ್ಲಾಕ್, 4 ಮದುವೆ, ಹೆಚ್ಚು ಮಕ್ಕಳು, ಆಸ್ತಿ ಹಂಚಿಕೆ ಕುರಿತಂತೆ ಚರ್ಚಿಸುತ್ತಿವೆ. ಇದರಲ್ಲಿ ಇವೆಲ್ಲ ಹೆಚ್ಚಾಗಿ ಬಹುಪತ್ನಿತ್ವದ ಪರಿಣಾಮಗಳು ಮತ್ತು ಅದು ಮುಸ್ಲಿಂ ವೈಯಕ್ತಿಕ ಕಾನೂನಿನ ಪರಿಣಾಮ. ಹಾಗಾಗಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡಿ ಬಹುಪತ್ನಿತ್ವವನ್ನು ನಿವಾರಿಸಬೇಕು ಎಂದು ಬಿಂಬಿಸಲಾಗುತ್ತಿದೆ.
ಬಹುಪತ್ನಿತ್ವದ ಕೇವಲ ಮುಸ್ಲೀಮರಲ್ಲಿನ ಸಮಸ್ಯೆಯೇ? ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (2019-20) ರಲ್ಲಿನ ಬಹುಪತ್ನಿತ್ವದ ಅಂಕೆಸಂಖ್ಯೆಗಳನ್ನು (ಅಂಕೆ ಸಂಖ್ಯೆಗಳು ಚಿತ್ರ-1 ಮತ್ತು 2 ರಲ್ಲಿವೆ) ನೋಡಿದರೆ ಬಹುಪತ್ನಿತ್ವ ಧರ್ಮದ ಮೇಲೆ ಮಾತ್ರ ಅವಲಂಬಿಸಿ ಇಲ್ಲ. ಬುಡಕಟ್ಟು, ಜಾತಿ, ಪ್ರದೇಶ, ಶಿಕ್ಷಣ ಅಭಿವೃದ್ಧಿಯ ಮಟ್ಟ ಇತ್ಯಾದಿ ಹಲವು ಅಂಶಗಳನ್ನು ಅವಲಂಬಿಸಿದೆ. ಉದಾಹರಣೆಗೆ ಇಡೀ ಭಾರತದಲ್ಲಿ ಬಹುಪತ್ನಿತ್ವದ ಪ್ರಮಾಣ 1.4% ಇದ್ದರೆ, ಮುಸ್ಲೀಮರೇ ಬಹುಸಂಖ್ಯಾತರಿರುವ ಜಮ್ಮು-ಕಾಶ್ಮೀರದಲ್ಲಿ ಕೇವಲ 0.4% ರಷ್ಟಿದೆ. ಬುಡಕಟ್ಟು ಜನರಲ್ಲಿ ಅವರು ವಾಸಿಸುವ ಪ್ರದೇಶಗಳಲ್ಲಿ ಅತಿ ಹೆಚ್ಚು ಇದೆ. ಕೆಲವು ರಾಜ್ಯಗಳಲ್ಲಿ ಮುಸ್ಲಿಮರಲ್ಲಿ ಬಹುಪತ್ನಿತ್ವ ಹಿಂದೂಗಳಲ್ಲಿದ್ದದ್ದಕ್ಕಿಂತ ಹೆಚ್ಚಿದ್ದರೆ, ಕೆಲವು ರಾಜ್ಯಗಳಲ್ಲಿ ತಿರುವು ಮುರುವಾಗಿದೆ. ಬಡವರಲ್ಲಿ, ಕಡಿಮೆ ವಯಸ್ಸಿನಲ್ಲಿ ಮದುವೆ ನಡೆಯುವ ಸಮುದಾಯಗಳಲ್ಲಿ ಅದು ಹೆಚ್ಚಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-3 ಕ್ಕೆ ಹೋಲಿಸಿ ನೋಡಿದರೆ ಎಲ್ಲ ಪ್ರದೇಶಗಳಲ್ಲಿ ವಿವಿಧ ಧರ್ಮಗಳ ನಡುವಿನ ವ್ಯತ್ಯಾಸ ಕಡಿಮೆಯಾಗುತ್ತಿದೆ.
ಚಿತ್ರ-1 ರಾಜ್ಯವಾರು ಬಹುಪತ್ನಿತ್ವ (ಎನ್.ಎಫ್.ಎಚ್.ಎಸ್-3 ಮತ್ತು 5 ಅಂಕೆಸಂಖ್ಯೆ)
ಬಹುಪತ್ನಿತ್ವ ಅತಿ ಹೆಚ್ಚು ಇರುವ 40 ಜಿಲ್ಲೆಗಳ ಅಂಕೆಸಂಖ್ಯೆ ಗಮನಿಸಿದರೆ ಇವುಗಳಲ್ಲಿ ಬುಡಕಟ್ಟು ಜನಾಂಗ ಬಹುಸಂಖ್ಯಾತರಿರುವ ಜಿಲ್ಲೆಗಳೇ ಪ್ರಧಾನವಾಗಿದೆ. ಆದರೆ ಅದೊಂದೇ ಅಂಶವಲ್ಲ. ಅದು ಧರ್ಮ, ಮಹಿಳಾ ಸಾಕ್ಷರತೆ ಗಳ ಮೇಲೂ ಅವಲಂಬಿಸಿದೆ ಅಂತ ತೋರುತ್ತದೆ.
ಚಿತ್ರ-೨ ಬಹುಪತ್ನಿತ್ವ ಅತಿ ಹೆಚ್ಚು ಇರುವ ೪೦ ಜಿಲ್ಲೆಗಳು
ಮೋದಿ ಸರ್ಕಾರಕೆ ತಾನು ಅಧಿಕಾರಕ್ಕೆ ಬಂದು 9 ವರ್ಷ ಕಳೆದರೂ ನೆನಪಾಗದಿರುವುದು ಈಗ ಮುಂದಿನ ಪಾರ್ಲಿಮೆಂಟ ಚುನಾವಣೆಗಳು ಹತ್ತಿರ ಬರುತ್ತಿರುವಾಗ ಯಾಕೆ ನೆನಪು ಮಾಡಿಕೊಳ್ಳುತ್ತಿದೆ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಬುಡಕಟ್ಟು ಜನಾಂಗದವರು ಈಗಾಗಲೇ ತಾವು ಮೋದಿ ಮಾಡುತ್ತಿರುವ ಏಕರೂಪ ನಾಗರೀಕ ಸಂಹಿತೆಗೆ ತಾವು ಒಳಪಡುವುದಿಲ್ಲವೆಂದು ಹೇಳಿದ್ದಾರೆ.
ಬಹುಧಾರ್ಮಿಕ ದೇಶವಾದ ಭಾರತದಲ್ಲಿ ಗುಡ್ಡಗಾಡು ಜನರಿದ್ದಾರೆ, ನಾಗಾಗಳಿದ್ದಾರೆ, ಲಂಬಾಣಿಗರಿದ್ದಾರೆ, ಆದಿವಾಸಿ ಜನಾಂಗಗಳಿವೆ, ಕ್ರಿಶ್ಚಿಯನ್ನರಿದ್ದಾರೆ, ಸಿಖ್ , ಜೈನ್, ಬೌದ್ಧ, ಹೊಲೆಯ ಮಾದಿಗ, ಬ್ರಾಹ್ಮಣ, ಮುಸಲ್ಮಾನ, ಲಿಂಗಾಯತ, ಒಕ್ಕಲಿಗ, ಕಬ್ಬಲಿಗ, ಕುರುಬ,ಬುಡಕಟ್ಟು ಜನರು ಇನ್ನೂ ಹಲವಾರು ಜಾತಿ ಧರ್ಮದ ಜನಗಳು ಇಲ್ಲಿ ವಾಸಿಸುತ್ತಿದ್ದಾರೆ. ಈ ದೇಶದಲ್ಲಿ ಎರಡು ಬಗೆಯ ಕಾನೂನುಗಳಿವೆ. 1. ಕ್ರಿಮಿನಲ್ ಪ್ರೋಸಿeರ್ ಕೋಡ್ 2. ಸಿವಿಲ್ ಪ್ರೋಸಿಜರ್ ಕೋಡ್. ಮೊದಲನೆಯರು ಎಲ್ಲರಿಗೂ ಸಮಾನವಾಗಿ ಧರ್ಮ ಜಾತಿಗಳನ್ನು ಮೀರಿ ಅನ್ವಯಿಸುತ್ತದೆ. ಆದರೆ ಸಮಾನ ನಾಗರೀಕ ಸಂಹಿತೆ ಮಾತ್ರ ಸಮಾನವಾಗಿ ಅನ್ವಯಿಸಲು ಸಾಧ್ಯವಾಗುವುದಿಲ್ಲ. ಬಿಜೆಪಿಯ ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾಡುವ ಕ್ರಿಯೆಯಲ್ಲಿ ಅದರ ಅಜೆಂಡಾದ ಉಳಿದ ಎರಡು ಅಂಶಗಳೊಂದಿಗೆ ಇದು ಕೂಡ ಒಂದಾಗಿದೆ.ಭಾರತೀಯರೆಲ್ಲರಿಗೂ ಸಾಮಾಜಿಕ ನ್ಯಾಯವನ್ನೇ ಒದಗಿಸಲಾಗದವರು ಸಮಾನತೆ ತರಲು ಹೇಗೆ ಸಾಧ್ಯ.?
ಇದನ್ನೂ ಓದಿ:ಮಣಿಪುರಕ್ಕೆ ಕೈ ಕೊಟ್ಟ ಮೋದಿ
ಕ್ರಿಮಿನಲ್ ಪ್ರೋಸಿಜರ್ ಕೋಡನ್ನೇ ಸರಿಯಾಗಿ ಜಾರಿ ಮಾಡದ ಇವರು ಇನ್ನು ಏಕರೂಪ ನಾಗರೀಕ ಸಂಹಿತೆಯನ್ನು ಜಾರಿಗೆ ತರುವುದು ಕನಸಿನ ಮಾತು. ಕ್ರಿಮಿನಲ್ ಕೋಡ್ ಬಿಲ್ಕಿಸ್ ಬಾನುಗೆ ಅಪರಾಧಿಗಳಿಗೆ ಒಂದು ತರಹವಾದರೆ, ಹಥರಸನ ಅಪರಾಧಿಗಳಿಗೆ ಕುಸ್ತಿಪಟುಗಳ ಹಿಂಸಕ ಬ್ರಿಜ್ ಭೂಷಣ ಸಿಂಗ್‌ನಿಗೆ ಮತ್ತೊಂದು ತರಹವಾಗಿದೆ. ಪ್ರಜಾಸತ್ತೆಯಲ್ಲಿ ಟೀಕೆ ಟಿಪ್ಪಣಿಗಳಿಗೆ ಅವಕಾಶವಿದೆ. ಆದರೆ ಮೋದಿ ಅಡಳಿತದಲ್ಲಿ ಟೀಕಿಸಿದರು ದೇಶದ್ರೋಹಿಗಳಾಗುತ್ತಾರೆ. ಇದು ಪರೋಕ್ಷವಾಗಿ ಸಂವಿಧಾನಕ್ಕೆ ಆಪತ್ತು ತರುವಂತಹ ವಿಷಯವಾಗಿದೆ. ಕೋಮುವಾದಿಗಳು ತಮ್ಮ ಗೆಲುವಿನ ಅಸ್ತ್ರವಾಗಿ ಬಳಸುತ್ತಿರುವ ಸಮಾನ ನಾಗರೀಕ ಸಂಹಿತೆ ಅವರ ಸೋಲಿಗೂ ಕಾರಣವಾಗಬಹುದಾಗಿದೆ. ಇವರ ನೋಟ್ ಬ್ಯಾನ್ ಹಳ್ಳ ಹಿಡೀತು, 2000 ನೋಟ್ ಹಳ್ಳ ಹಿಡಿತು, ಸೆಗಣಿ, ಗೋಮೂತ್ರ, ಕರೋನಾ ಕಾಲದ ತಟ್ಟೆ ಬಾರಿಸುವುದು, ಮೇಣದ ಬತ್ತಿ ಹಚ್ಚುವುದು ಎಲ್ಲವೂ ಫೇಲ್ ಆದ ನಂತರ ಈಗ ಏಕರೂಪ ನಾಗರೀಕ ಸಂಹಿತೆಯನ್ನು ಛೂ ಬಿಡಲಾಗಿದೆ. ಸಮಾನ ನಾಗರೀಕ ಸಂಹಿತೆ ಜಾರಿಗೆ ಬಂದರೆ, ಹಿಂದುಗಳ ಒಳಗೆಯೇ ಹಲವಾರು ವೈವಿಧ್ಯತೆಗಳಿವೆ. ಈ ವೈವಿಧ್ಯತೆಗಳು ನಾಶವಾಗಿ ಅವರವರ ಅಸ್ಮಿತೆ ಧಕ್ಕೆ ಬರುವ ಕಾರಣ ಬಹುದೊಡ್ಡ ಸಂಖ್ಯೆಯಲ್ಲಿ ಹಿಂದುಗಳೇ ಇದನ್ನು ವಿರೋಧಿಸುತ್ತಾರೆ.
ಆಗಿನ ಆರ್.ಎಸ್.ಎಸ್. ಮುಖ್ಯಸ್ಥರಾದ ಗೋಲ್ವಲ್ಕರ್, ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ಲನ್ನು ಜಾರಿಗಾಗಿ ಸದನದ ಮುಂದೆ ಇಟ್ಟಾಗ ಅವನ್ನು ವಿರೋಧಿಸಿ, “ನಮ್ಮದು ಬಹುತ್ವದ ದೇಶ” ಎಂದು ವಾದಿಸಿದ್ದರು. ಧರ್ಮ ಧರ್ಮದೊಳಗಿನ ಭಿನ್ನತೆಯನ್ನು ನಿವಾರಿಸುವುದಾದರೆ, ಧರ್ಮದೊಳಗಿನ ಭಿನ್ನತೆಯನ್ನು ಸಹ ನಿವಾರಿಸಬೇಕಾಗುತ್ತದೆ. ಈಗ ಹಿಂದೂ ಧರ್ಮದ ಒಳಗೆಯೇ ಎಷ್ಟೊಂದು ಜಾತಿ, ಉಪಜಾತಿ, ಆಚರಣೆ, ಸಂಪ್ರದಾಯಗಳು, ಮದುವೆ, ವಿಚ್ಚೇದನ,ದತ್ತು, ಉತ್ತರಾಧಿಕಾರ, ಪರಿಹಾರ ವ್ಯವಸ್ಥೆಗಳಿದ್ದು ಇಂತಹವು ಕೌಟುಂಬಿಕ ಹಾಗೂ ಸ್ಪಷ್ಟವಾಗಿ ಹೇಳುವುದಾದರೆ ವೈಯಕ್ತಿಕವಾದವುಗಳು. ಈ ವೈಯಕ್ತಿಕ ವಿಷಯಗಳು ಯಾರಿಗೂ ತೊಂದರೆಯಾಗಿಲ್ಲ. ಹಾಗೆಂದು ಯಾವ ಕೂಗೂ ಎದ್ದಿಲ್ಲ. ಅಂದ ಮೇಲೆ ಇವರದೇನು ತಕರಾರು? ಎಂಬುದು ಜನತೆಯ ಪ್ರಶ್ನೆ. ಮಣಿಪುರ ಹೊತ್ತಿ ಉರಿಯುತ್ತಿದ್ದು ತಿಂಗಳುಗಳೇ ಕಳೆದಿವೆ. ಅದರ ಬಗ್ಗೆ ಚಕಾರವೆತ್ತದ ಪ್ರಧಾನಿ, ತಿಂಗಳುಗಟ್ಟಲೆ ಧರಣಿ ಕುಳಿತ ಕುಸ್ತಿಪಟುಗಳಿಗಾದ ಅನ್ಯಾಯದ ಬಗ್ಗೆ ಮಾತನಾಡದ ಪ್ರಧಾನಿ, ಬಿಲ್ಕಿಸ್ ಬಾನುಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡದ ಪ್ರಧಾನಿಗೆ ನಾಗರೀಕ ಸಂಹಿತೆ ನೆನಪಾಯಿತೆ?
ಇಲ್ಲಿ ಏಕರೂಪ ನಾಗರೀಕ ಸಂಹಿತೆಯೆಂದರೆ, ಹಿಂದೂ ನಾಗರೀಕ ಸಂಹಿತೆಯೆಂಬುದನ್ನು ತಿಳಿಯಬೇಕಿದೆ. ಅದೂ ಕೂಡ ಚುನಾವಣೆಗಳನ್ನು ಮುಂದಿಟ್ಟುಕೊಂಡು ಪ್ರಧಾನಿಗೆ ಯಾಕೆ ನೆನಪಾಗುತ್ತದೆ. ಹಿಂದು ಮುಸ್ಲಿಂ ಕೋಮು-ಧ್ರುವೀಕರಣವಲ್ಲದೇ ಬೇರೆ ಉದ್ದೇಶವಿಲ್ಲ. ಇದು ಮನುವಾದ ಪ್ರೇರಿತ ನಾಗರೀಕ ಸಂಹಿತೆಯಾಗಿದೆ. ಮೊದಲು ಸರ್ಕಾರ ದೇಶದ ಸಂಪತ್ತನ್ನು ಸಮಾನವಾಗಿ ಹಂಚಿಕೆ ಮಾಡಲಿ. ಈ ದೇಶದ ಸಂಪತ್ತಿನ ಸುಮಾರು 70 ರಷ್ಟು ಭಾಗ ಕೇವಲ 5 ಜನರ ಕೈಯಲ್ಲಿದೆ. ಹಿಂದು ದೇಶ, ಒಂದು ಧರ್ಮ, ಒಂದು ಬಣ್ಣ, ಒಂದು ಪಕ್ಷ, ಒಂದು ಭಾಷೆ, ಮಾಡುವ ಮೂಲಕ ಬಹುತ್ವವನ್ನು ಅಳಿಸುವ ಮನುವಾದದ ಹುನ್ನಾರಗಳು ಇದರ ಹಿಂದಿವೆ. ಮಾಡುವುದಾದರೆ, ಎಲ್ಲರಿಗೂ ಸಮಾನ ಸ್ಥಾನ ಮಾನ ನೀಡಲು, ಲಿಂಗ ತಾರತಮ್ಯ ನಿವಾರಿಸಲಿ, ರಾಜಕೀಯ ಸಮಾನ ಪ್ರಾತಿನಿಧ್ಯ ನೀಡಲಿ, ಎಲ್ಲರಿಗೂ ಶಿಕ್ಷಣ ನೀಡಲು, ಆರ್ಥಿಕ ಸವಲತ್ತು ನೀಡಲಿ, ಸಾಮಾಜಿಕ, ಸಾಂಸ್ಕೃತಿಕ ಸಮಾನತೆ ನೀಡಲಿ. ಧರ್ಮದೊಳಗಿನ ವೈರುಧ್ಯಗಳನ್ನು ಮೊದಲು ಸಮ ಮಾಡಲಿ ನಂತರ ಬರುವುದು ಸಮಾನ ನಾಗರಿಕ ಸಂಹಿತೆಯ ಪ್ರಶ್ನೆ.
ಬಹುಶ: ಕೋಮುವಾದಿಗಳಿಗೆ ಮುಂದಿನ ಚುನಾವಣೆಯಲ್ಲಿ ತಮ್ಮ ಮೂಗಿಗೆ ಬಡಿದ ಸೋಲಿನ ವಾಸನೆ ಕಂಡು ಹೌಹಾರಿ ಈ ರೀತಿ ಹೇಳುತ್ತಿರಬಹುದೇನೋ. ಪಾರ್ಲಿಮೆಂಟಿನ ಈಗ ಅವರಿಗೆ ಬಹುಮತವಿದೆ. ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು. ಮಹಿಳಾ ಮೀಸಲಾತಿ ಬಿಲ್ಲು ಜಾರಿಗಾಗಿ ಹೊರಾಟಕ್ಕಿಳಿದಿತ್ತು. ಈಗ ಅವರದೇ ಬಹುಮತದ ಸರ್ಕಾರವಿದೆ. ಈಗ ಅವರಿಗೆ ಮಹಿಳಾ ಮೀಸಲಾತಿ ಬಿಲ್ಲು ಜಾರಿ ಮಾಡಲು ಏನು ಆಪತ್ತು? ಒಂದು ವೇಳೆ ಸ್ತ್ರೀಯರ ಬಗ್ಗೆ ನಿಜವಾದ ಕಾಳಜಿಯಿದ್ದರೆ, ಜಾರಿ ಮಾಡಲಿ. ಬಡವರ ಪರವಾದ ಯೋಜನೆಗಳಿಗೆ ಚಾಲನೆ ನೀಡಲಿ. ಕೇವಲ ಸೆಲ್ಪೀಗಾಗಿ ಮಾತ್ರವಲ್ಲ. ನಿಜವಾಗಿಯೂ ಯೋಜನೆಗಳು ಜಾರಿಯಾಗಲಿ. ಇಲ್ಲಿಯವರೆಗೆ ಮಾಡಿದ ಪಾಪಗಳ ಪ್ರಾಯಶ್ಚಿತ್ಯಕ್ಕಾಗಿಯಾದರೂ ಜನಪರ ಯೋಜನೆ, ಕಾನೂನುಗಳು ಜಾರಿ ಮಾಡಲಿ.ತಮ್ಮ ಗೆಲುವಿಗೆ ಅಸ್ತ್ರವಾಗಿ ಸಮಾನ ನಾಗರೀಕ ಸಂಹಿತೆ ಜಾರಿ ಮಾಡುವ ಮೂಲಕ ಗೆಲ್ಲಬಹುದೆಂದು ಅವರು ತಿಳಿದಿದ್ದರೆ ಅದು ಸುಳ್ಳು. ಏಕೆಂದರೆ ಜನರು ಜಾಗ್ರತರಾಗಿದ್ದರೆ. ಕಪ್ಪು ಬಿಳುಪು ಅವರಿಗೆ ಗೋಚರಿಸುತ್ತಿದೆ. ಅವರ ಈ ಆತುರದ ನಡೆಯೇ ಅವರಿಗೇ ಮುಳುವಾಗಲೂಬಹುದಾಗಿದೆ.