ನಿರುದ್ಯೋಗ ದರ ಮತ್ತೆ ಹೆಚ್ಚಳ – ಒಂದೇ ತಿಂಗಳಲ್ಲಿ 72 ಲಕ್ಷ ಉದ್ಯೋಗಗಳಿಗೆ ಕತ್ತರಿ

ಪ್ರತೀ 10%ನಿರುದ್ಯೋಗ ಹೆಚ್ಚಾದಂತೆ ಒಟ್ಟು ಸಾವಿನ ಸಂಖ್ಯೆಯಲ್ಲಿ 1.2% ಹೆಚ್ಚಾಗುವುದು, 1.7% ಹೃದಯ ರೋಗಕ್ಕೆ ತುತ್ತಾಗುವರು, 1.3% ಕುಡಿತದಿಂದಾಗಿ ಯಕೃತ್ತಿನ ತೊಂದರೆಗೆ ಒಳಪಡುವರು, 1.7% ಆತ್ಮ ಹತ್ಯೆ ಮಾಡಿಕೊಳ್ಳುವರು, 4.0% ಬಂಧನಕ್ಕೊಳಗಾಗುವರು, 0.8% ಆಕ್ರಮಣ ಮಾಡಿ ಪೋಲೀಸರ ದಾಳಿಗೆ ಒಳಪಡುತ್ತಾರೆ ಎಂದು ಸಮೀಕ್ಷೆಯಿಂದ ತಿಳಿದಿತ್ತು. ಈಗ ಈ ಪ್ರಮಾಣ ಹೆಚ್ಚಾಗಿದೆ.  ಇತ್ತಿಚೆಗೆ ಕರ್ನಾಟಕದಲ್ಲಿ ಕೋವಿಡ್‌ 19 ನಂತರದಲ್ಲಿ 22% ಜನ ಹೃದಯಾಘಾತದಿಂದ ಸಾಯುತ್ತಿದ್ದಾರೆ.

-ಗುರುರಾಜ ದೇಸಾಯಿ

ಕೋವಿಡ್ ಎರಡನೇ ಅಲೆಗೆ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ‌ಆಕ್ಸಿಜನ್‌, ಬೆಡ್‌, ಲಸಿಕೆಗೆ ಹಾಹಾಕಾರ ಶುರುವಾಗಿ ಅನೇಕ ಸಾವುನೋವುಗಳು ಸಂಭವಿಸಿವೆ. ಈಗ ಮತ್ತೊಂದು ಆಘಾತ ಎದುರಾಗಿದ್ದು,  ನಿರುದ್ಯೋಗ ದರ ಗರಿಷ್ಠ ಪ್ರಮಾಣ ತಲುಪಿದೆ.  ಏಪ್ರಿಲ್‌ ತಿಂಗಳೊಂದರಲ್ಲೆ 72 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ.

ಕಳೆದ 20 ದಿನದಿಂದ ದೇಶದಲ್ಲಿ ಅನೇಕ ರಾಜ್ಯಗಳು ಪೂರ್ವ ತಯಾರಿ ಇಲ್ಲದೆ ಲಾಕ್‌ಡೌನ್‌ ಹೇರಿವೆ. ಇದರಿಂದಾಗಿ ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಪರಿಣಾಮ ನಿರುದ್ಯೋಗ ಸಮಸ್ಯೆ ದುಪ್ಪಟ್ಟಾಗಿದ್ದು, ಯುವ ಜನತೆ ಪರಿತಪಿಸುವಂತಾಗಿದೆ. ಭಾರತೀಯ ಆರ್ಥಿಕತೆ ಮೇಲ್ವಿಚಾರಣಾ ಕೇಂದ್ರದ ಪ್ರಕಾರ ಮಾರ್ಚ್​ನಲ್ಲಿ ಶೇಕಡಾ 6.5 ರಷ್ಟಿದ್ದ ನಿರುದ್ಯೋಗ, ಏಪ್ರಿಲ್​ನಲ್ಲಿ ಶೇಕಡಾ 8 ಕ್ಕೆ ಏರಿದೆ.2021 ರ ಮಾರ್ಚ್​ನಲ್ಲಿ ಕೋವಿಡ್​ ಭೀತಿಯಿಂದಾಗಿ ಬಹುತೇಕ ಜನರು ಕೆಲಸಕ್ಕೆ ಹಾಜರಾಗಲಿಲ್ಲ. ಇದರಿಂದಾಗಿ ನಿರುದ್ಯೋಗ ಮತ್ತಷ್ಟು ಹೆಚ್ಚಾಯಿತು ಎಂದು ಸಿಎಂಐಇ ಯ ಸಿಇಒ ಮಹೇಶ್​​ ವ್ಯಾಸ್ ಹೇಳಿದ್ದಾರೆ.

ಕೋವಿಡ್ ನಿಯಂತ್ರಣಕ್ಕೋಸ್ಕರ ಜಾರಿಗೊಳಿಸಿದ ಲಾಕ್​ಡೌನ್​​ ನಿರುದ್ಯೋಗ ಸಮಸ್ಯೆಗೆ ಕಾರಣವಾಗಿದೆ ಎಂದು ಸಿಎಂಐಇ ಅಭಿಪ್ರಾಯಪಟ್ಟಿದೆ.  ಲಾಕ್​ಡೌನ್ ಸಮಯದಲ್ಲಿ ಜನರು ಉದ್ಯೋಗ ಹುಡುಕುವುದನ್ನು ನಿಲ್ಲಿಸಿರಬಹುದು. ಆದರೆ, ಉದ್ಯೋಗ ಅರಸುವವರಿಗೆ ಸಮರ್ಪಕ ಕೆಲಸ ಒದಗಿಸಲು ಸಾಧ್ಯವಾಗಿಲ್ಲ. ನಿರುದ್ಯೋಗಕ್ಕೆ ಕೇವಲ ಲಾಕ್​ಡೌನ್ ಒಂದೇ ಕಾರಣವಲ್ಲ. ಉದ್ಯೋಗ ಸೃಷ್ಟಿಸದಿದ್ದಕ್ಕೆ, ಆರ್ಥಿಕತೆಯೂ ಕಾರಣವಾಗಿರಬಹುದು ಎಂದು ವ್ಯಾಸ್ ತಿಳಿಸಿದ್ದಾರೆ. ಕಳೆದ ವರ್ಷ ಮಾರ್ಚ್​ನಲ್ಲಿ ವಿಧಿಸಿದ ಲಾಕ್​ಡೌನನಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದು ಕೊಂಡಿದ್ದರು. ಕೆಲಸಗಾರರ ಸಂಬಳದಲ್ಲಿ ಕಡಿತ ಮಾಡಲಾಗಿತ್ತು. ಉದ್ಯೋಗ ಕ್ಷೇತ್ರದ ಭವಿಷ್ಯ ಮಂಕಾಗಿರುವುದರಿಂದ ಭಾರತ ಈ ವರ್ಷ ಎರಡಂಕಿ ಆರ್ಥಿಕ ಬೆಳವಣಿಗೆ ಸಾಧಿಸುವ ಗುರಿ ತಲುಪುದು ಕಷ್ಟವಿದೆ ಎಂಬ ಭೀತಿ ಎದುರಾಗಿದೆ ಎಂದು ಸಿಎಂಐಇ ವರದಿಯಲ್ಲಿ ಹೇಳಲಾಗಿದೆ.

ಇದನ್ನು ಓದಿ: ಲಸಿಕೆಗಳೆ ಲಭ್ಯವಿಲ್ಲ 2ನೇ ಡೋಸ್ ಹೇಗೆ ನೀಡುತ್ತೀರಿ, ಏನಿದು ನಿಮ್ಮ ಲಸಿಕೆ ಅಭಿಯಾನ?’: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(CMIE) ವರದಿ ಪ್ರಕಾರ (ಮೇ 13, 2021 ರ ಅಂಕಿ ಅಂಶದ ಪ್ರಕಾರ) ಭಾರತದಲ್ಲಿ ನಿರುದ್ಯೋಗ ದರವು 8.7% ರಷ್ಟಿದ್ದು, ನಗರ ನಿರುದ್ಯೋಗವು 10.4% ಮತ್ತು ಗ್ರಾಮೀಣ ನಿರುದ್ಯೋಗ  7.8% ರಷ್ಟಿದೆ.  ಭಾರತದಲ್ಲಿ ಉದ್ಯೋಗ ಸಮಸ್ಯೆ ಇವತ್ತು ನಿನ್ನೆಯೆದಲ್ಲ ಹಲವು ದಶಕಗಳಿಂದ ಈ ಸಮಸ್ಯೆಯನ್ನು ಭಾರತ ಎದುರಿಸುತ್ತಿದೆ.  ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರಕಾರಗಳು ಇಲ್ಲಿಯವರೆಗೆ ಸರಿಯಾದ ಯೋಜನೆಗಳನ್ನು ರೂಪಿಸಿಲ್ಲ ಎಂಬುದು ಆಘಾತಕಾರಿ ವಿಚಾರ. ಇನ್ನೊಂದೆಡೆ ಸಿಕ್ಕ ಉದ್ಯೋಗವೂ ದಕ್ಕದಿದ್ದಾಗ ಆಗುವ ಅನಾಹುತಗಳ ವಾಸ್ತವ ಕಾರಣಗಳನ್ನು ಈ ಕೆಳಗಿನಂತೆ ನೋಡಬಹುದು.

ಉದ್ಯೋಗಕ್ಕೆ ಕತ್ತರಿ ಬಿದ್ದಾಗ ಆಗುವ ಸಮಸ್ಯೆಗಳು : ಇದ್ದ ಕೆಲಸ ಹೊರಟು ಹೋದಾಗ, ಇಲ್ಲವೆ ತೆಗೆದು ಹಾಕಿದಾಗ ಮನುಷ್ಯ ಸಹಜವಾಗಿ ಮಾನಸಿಕ ಆಘಾತಕ್ಕೆ ಒಳಗಾಗುತ್ತಾನೆ.  ಆಗ ಅವನು ನಿರುದ್ಯೋಗಿ ಯಾಗುತ್ತಾನೆ. ನಿರುದ್ಯೋಗ ವ್ಯಕ್ತಿಗಳು ಹಣ ಗಳಿಸಿ ತಮ್ಮ ಆರ್ಥಿಕ ಕರ್ತವ್ಯವನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಒತ್ತೆ ಇಟ್ಟ ವಸ್ತುಗಳಿಗೆ ಹಣ ಪಾವತಿಸಲು ಅಥವಾ ಮನೆಯ ಬಾಡಿಗೆ ನೀಡಲು ವಿಫಲರಾಗುತ್ತಾರೆ. ಕುಟುಂಬದ ಬೇಕು ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ.  ಆಗ ಸಹಜವಾಗಿ ಅನಾರೋಗ್ಯ, ಮಾನಸಿಕ ಒತ್ತಡಗಳನ್ನು ಹೆಚ್ಚಿಸುತ್ತದೆ ಮತ್ತು ಆತ್ಮ ಗೌರವ ಕಡಿಮೆಗೊಳಿಸಿ, ಖಿನ್ನತೆಯನ್ನು ವೃದ್ಧಿಸುತ್ತದೆ. ಸೋಶಿಯಲ್ ಇಂಡಿಕೇಟರ್ ರೀಸರ್ಚ್ ಅದರ ಅಧ್ಯಯನ ಪ್ರಕಾರ, ಯಾರು ಆಶಾವಾದಿಗಳಾಗಿರುತ್ತಾರೊ ಅಂಥವರೂ ಕೂಡ ನಿರುದ್ಯೋಗ ಸಮಯದಲ್ಲಿ ಉತ್ತಮವಾಗಿ ಯೋಚಿಸುವುದು ಕಷ್ಟವೆಂದೆಣಿಸುತ್ತಾರೆ.  1979 ರಲ್ಲಿ ಡಾ.ಎಮ್.ಬ್ರೆನ್ನರ್ ಅವರು”ಮನಸ್ಸಿನ ಮೇಲೆ ಸಾಮಾಜಿಕ ಪರಿಸರದ ಪ್ರಭಾವ” ಎಂಬ ವಿಷಯದ ಬಗ್ಗೆ ಅಧ್ಯಯನ ನಡೆಸಿದರು. ಇದರಿಂದ ಬ್ರೆನ್ನರ್ ಕಂಡುಕೊಂಡದ್ದೆಂದರೆ ಪ್ರತೀ 10%ನಿರುದ್ಯೋಗ ಹೆಚ್ಚಾದಂತೆ ಒಟ್ಟು ಸಾವಿನ ಸಂಖ್ಯೆಯಲ್ಲಿ 1.2% ಹೆಚ್ಚಾಗುವುದು, 1.7% ಹೃದಯ ರೋಗಕ್ಕೆ ತುತ್ತಾಗುವರು, 1.3% ಕುಡಿತದಿಂದಾಗಿ ಯಕೃತ್ತಿನ ತೊಂದರೆಗೆ ಒಳಪಡುವರು, 1.7% ಆತ್ಮ ಹತ್ಯೆ ಮಾಡಿಕೊಳ್ಳುವರು, 4.0% ಬಂಧನಕ್ಕೊಳಗಾಗುವರು, 0.8% ಆಕ್ರಮಣ ಮಾಡಿ ಪೋಲೀಸರ ದಾಳಿಗೆ ಒಳಪಡುತ್ತಾರೆ ಎಂದು ಸಮೀಕ್ಷೆಯಿಂದ ತಿಳಿದಿತ್ತು. ಈಗ ಈ ಪ್ರಮಾಣ ಹೆಚ್ಚಾಗಿದೆ.  ಇತ್ತಿಚೆಗೆ ಕರ್ನಾಟಕದಲ್ಲಿ ಕೋವಿಡ್‌ 19 ನಂತರದಲ್ಲಿ 22% ಜನ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಅದರಲ್ಲಿ ಯುವಕರೆ ಸಂಖ್ಯೆ ಜಾಸ್ತಿ ಇದೆ.  ಕೆಲಸ ಕಳೆದುಕೊಂಡ ಯುವಕರು ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗಿ ಹೃದಯಾಘಾತದಿಂದ ಮರಣ ಹೊಂದುತ್ತಿದ್ದಾರೆ. ಇದು ಆತಂಕದ ವಿಚಾರವಾಗಿದೆ.

ಇದನ್ನೂ ಓದಿ : ಪ್ರಧಾನಿ ಮೋದಿ ಹುಟ್ಟುಹಬ್ಬ: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆದ ನಿರುದ್ಯೋಗ ದಿನ

ನಿರುದ್ಯೋಗದ ಮತ್ತೊಂದು ಹಾನಿಯೆಂದರೆ, ಆರ್ಥಿಕ ಸಂಪನ್ಮೂಲದ ಕೊರತೆ ಮತ್ತು ಸಾಮಾಜಿಕ ಜವಾಬ್ದಾರಿ ಇವುಗಳ ಸಮ್ಮಿಶ್ರಣದಿಂದಾಗಿ ನಿರುದ್ಯೋಗಿ ಕೆಲಸಗಾರರು ತಮಗೆ ನೈಪುಣ್ಯತೆ ಇಲ್ಲದ ಕೆಲಸದಲ್ಲಿ ಅಥವಾ ಅವರ ಪ್ರತಿಭೆ ತೋರಿಸಲು ಅಸಮರ್ಥವಾದ ಕೆಲಸದಲ್ಲಿ ದುಡಿಯುವಂತೆ ಮಾಡುತ್ತದೆ. ನಿರುದ್ಯೋಗವು ಕಡಿಮೆ ಉದ್ಯೋಗಕ್ಕೆ ಕಾರಣವಾಗಬಹುದು ಮತ್ತು ಕೆಲಸ ಕಳೆದುಕೊಳ್ಳುವ ಭಯದ ಜೊತೆ ಮಾನಸಿಕ ಕಳವಳಕ್ಕೂ ನಾಂದಿಯಾಗಬಹುದು. ಹೆಚ್ಚು ಅವಧಿಯ ನಿರುದ್ಯೋಗದಿಂದಾಗಿ ಕೆಲಸಗಾರ ತನ್ನ ನಿಪುಣತೆಯನ್ನು ಕಳೆದುಕೊಳ್ಳಬಹುದು, ಕಾರಣ ಮಾನವ ಸಂಪನ್ಮೂಲದ ಹಾನಿಯಾಗುವುದು. ನಿರುದ್ಯೋಗಿಯಾಗಿರುವುದು ಕೆಲಸಗಾರನ ಜೀವನ ಮಟ್ಟವನ್ನು 7 ವರ್ಷಗಳಷ್ಟು ಕಡಿಮೆಮಾಡುತ್ತದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಅನೇಕ ದೇಶಗಳು ಸಾಮಾಜ ಕಲ್ಯಾಣದ ಭಾಗವಾಗಿ ನಿರುದ್ಯೋಗಿಗಳಿಗೆ ಸಹಾಯ ಮಾಡುತ್ತವೆ. ಈ ನಿರುದ್ಯೋಗ ಸವಲತ್ತುಗಳು ನಿರುದ್ಯೋಗ ವಿಮೆ, ಧನಸಹಾಯ, ನಿರುದ್ಯೋಗ ಪರಿಹಾರ ಕ್ರಮ ಮತ್ತು ಮರುತರಭೇತಿಗೆ ನೆರವಾಗುವ ಸಬ್ಸಿಡಿಗಳನ್ನು ಒಳಗೊಂಡಿವೆ. ಈ ಕಾರ್ಯಕ್ರಮಗಳ ಮುಖ್ಯಗುರಿಯು ಕಡಿಮೆ ಅವಧಿ ಹೆಚ್ಚಿನ ಕೆಲಸಗಳನ್ನು ಕಡಿತಗೊಳಿಸಿ, ಕೆಲಸಗಾರರು ಅಧಿಕ ಸಮಯದ ಕೆಲಸವನ್ನು ಹುಡುಕಿಕೊಳ್ಳುವಂತೆ ಮಾಡುವುದಾಗಿದೆ. ಆದರೆ ಭಾರತದಲ್ಲಿ ಇಂತಹ ನಿರ್ಧಿಷ್ಟ ಯೋಜನೆಗಳು ಇಲ್ಲ. ಕೆಲ ಯೋಜನೆಗಳು ಇದ್ದರೂ ಅವು ಉಳ್ಳವರ ಪಾಲಾಗಿರುತ್ತವೆ. ಇಲ್ಲವೆ ರಾಜಕೀಯ ಪಕ್ಷಗಳ ಹಿಂಬಾಲಕರ ತೆಕ್ಕೆಗೆ ಸೇರಿರುತ್ತವೆ.  ಸ್ವಯಂ ಉದ್ಯೋಗಕ್ಕೆ ಸಹಾಯ ಎಂಬ ಯೋಜನೆಯನ್ನು ಬಹಳಷ್ಟು ಜನ ಕೇಳಿದ್ದರಿ. ಇದಕ್ಕೆ ನೀವು ಮಾಡುವ ಸ್ವಯಂ ಉದ್ಯೋಗ ಮಾನದಂಡವಲ್ಲ. ನೀವು ಯಾರಿಂದಲಾದರೂ ಶೀಫಾರಸ್ಸು ಪತ್ರ ತೆಗೆದುಕೊಂಡಿದ್ದರೆ ಸಿಗುತ್ತದೆ. ಅಲೆದಾಟವೆ ಪ್ರಧಾನವಾಗಿ ಅರ್ಜಿ ತಿರಸ್ಕೃತಗೊಂಡಿದೆ. ಬೇರೆಯರಿಗೆ ಆಯ್ತು, ಮುಂದಿನ ಬಾರಿ ಎಂಎಲ್‌ಎ ಶಿಫಾರಸ್ಸು ತನ್ನಿ ಮಾಡಿಕೊಡ್ತೆನೆ ಅಂತಾ ಅಧಿಕಾರಿ ಮುಖ ನೋಡದೆ ಮಾತನಾಡಿ ಕಳುಹಿಸುತ್ತಾನೆ. ಅದೇ ರೀತಿ ಉದ್ಯೋಗಿನಿ, ಇತ್ಯಾದಿ ಯೋಜನೆಗಳು ಉಳ್ಳವರ ಪರವಾಗಿದ್ದರಿಂದ ನಿರುದ್ಯೋಗ ಹಾಗೆಯೇ ಉಳಿಯುತ್ತಿದೆ.

ಕೋವಿಡ್‌ ಕಾರಣದಿಂದ ಆಗಿರುವ ಉದ್ಯೋಗನಷ್ಟ‌ ಮತ್ತು ಪ್ರತಿವರ್ಷ ಸೃಷ್ಟಿಸುವ ಉದ್ಯೋಗದ ಸಂಖ್ಯೆಯನ್ನು ಹೆಚ್ಚಿಸಬೇಕಿದೆ.  ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿ  7 ವರ್ಷದಲ್ಲಿ 14 ಕೋಟಿಯಷ್ಟು ಉದ್ಯೋಗ ಸೃಷ್ಟಿಸಬೇಕಿತ್ತು. ಕೋಟಿ ಪ್ರಮಾಣದಲ್ಲಿ ಹೋಗಲಿ ಕನಿಷ್ಟ 50 ಲಕ್ಷ  ಉದ್ಯೋಗದ ನೇಮಕಾತಿ  ಪ್ರಕ್ರೀಯೆ ನಡೆದಿಲ್ಲ ಎಂಬುದು ಜಗಜ್ಜಾಹಿರ. ಇತ್ತ ಉದ್ಯೋಗ ಸೃಷ್ಟಿ ಇಲ್ಲ. ಅತ್ತ ಸಿಕ್ಕ ಉದ್ಯೋಗವೂ ಇಲ್ಲ. ಯುವಜನರಿಂದ ಕೂಡಿದ ಭಾರತ ಎತ್ತ ಸಾಗಬೇಕು? ಭಾರತ ಅಭಿವೃದ್ಧಿಯತ್ತ ಹೇಗೆ ಸಾಗಲು ಸಾಧ್ಯ?

Donate Janashakthi Media

Leave a Reply

Your email address will not be published. Required fields are marked *